ಇಂದು ಮತ್ತು ಎಂದೆಂದಿಗೂ ಜ್ಞಾನವನ್ನು ಪಡೆದುಕೊಳ್ಳುವುದು
ಇಂದು ಮತ್ತು ಎಂದೆಂದಿಗೂ ಜ್ಞಾನವನ್ನು ಪಡೆದುಕೊಳ್ಳುವುದು
ಜರ್ಮನ್ ವೈದ್ಯರಾದ ಉಲ್ರಿಕ್ ಸ್ಟ್ರೂನ್ಸ್ ಎಂಬವರು ಯುಗಯುಗಾಂತರಕ್ಕೂ ಯೌವನಾವಸ್ಥೆ ಎಂಬ ಶಿರೋನಾಮವುಳ್ಳ ಅನೇಕ ಪುಸ್ತಕಗಳನ್ನು ಅನುಕ್ರಮವಾಗಿ ಬರೆದರು. ವ್ಯಾಯಾಮ, ಪೋಷಣೆ ಮತ್ತು ಹಿತಕರವಾದ ಜೀವನಶೈಲಿಯಿಂದ ಆರೋಗ್ಯವು ಉತ್ತಮಗೊಳ್ಳಸಾಧ್ಯವಿದೆ ಮತ್ತು ದೀರ್ಘಕಾಲದ ಜೀವನವೂ ಪ್ರಾಯಶಃ ಲಭಿಸಬಹುದು ಎಂದವರು ತಮ್ಮ ಪುಸ್ತಕಗಳಲ್ಲಿ ಪ್ರತಿಪಾದಿಸಿದರು. ಆದರೂ, ತಾನು ನೀಡಿದ ಸಲಹೆಯನ್ನು ಅನುಸರಿಸುವುದರಿಂದ ತನ್ನ ಓದುಗರು ವಾಸ್ತವದಲ್ಲಿ ಸದಾಕಾಲ ಜೀವಿಸಬಲ್ಲರು ಎಂದು ಅವರು ವಾಗ್ದಾನಿಸುವುದಿಲ್ಲ.
ಆದರೆ, ನಿತ್ಯಜೀವದ ವಾಗ್ದಾನವನ್ನು ಕೊಡುವ ಒಂದು ಜ್ಞಾನವಿದೆ. ಇನ್ನೊಂದು ದೃಷ್ಟಿಕೋನದಿಂದ ಹೇಳುವುದಾದರೆ, ನೀವು ಶಾಶ್ವತವಾಗಿ ಜೀವಿಸಲು ಸಾಧ್ಯವಿರುವಲ್ಲಿ ಉಪಯುಕ್ತಕರ ಜ್ಞಾನವನ್ನು ಸದಾಕಾಲಕ್ಕೂ ಪಡೆದುಕೊಳ್ಳಲು ನಿಮ್ಮಿಂದ ಸಾಧ್ಯವಿರುವುದು. ದೇವರಿಗೆ ಪ್ರಾರ್ಥಿಸುತ್ತಾ ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನ ಮತ್ತು ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನ ಜ್ಞಾನವನ್ನು ಪಡೆದುಕೊಳ್ಳುವುದೇ ನಿತ್ಯಜೀವ.” (ಯೋಹಾನ 17:3, NW) ಈಗ ನಾವು “ನಿತ್ಯಜೀವ” ಎಂಬ ಶಬ್ದದ ಅರ್ಥವೇನೆಂದು ನೋಡೋಣ. ಅನಂತರ ಈ ಜ್ಞಾನದಲ್ಲಿ ಏನೆಲ್ಲಾ ಒಳಗೂಡಿದೆ ಮತ್ತು ನೀವಿದನ್ನು ಹೇಗೆ ಪಡೆದುಕೊಳ್ಳಸಾಧ್ಯವಿದೆ ಎಂಬುದರ ಕಡೆಗೆ ಗಮನಹರಿಸೋಣ.
ಬೈಬಲಿಗನುಸಾರವಾಗಿ, ಸೃಷ್ಟಿಕರ್ತನು ಶೀಘ್ರವೇ ಈ ಭೂಮಿಯನ್ನು ವಾಸ್ತವದಲ್ಲಿ ಒಂದು ಪರದೈಸಾಗಿ ಮಾರ್ಪಡಿಸುವನು ಮತ್ತು ಈ ಪರದೈಸ್ ದೀರ್ಘಕಾಲ ಜೀವಿಸಲಿಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಹೊಂದಿರುವುದು. ಈ ಭೂಮಿಯು ವಾಸ್ತವದಲ್ಲಿ ಒಂದು ಪರದೈಸಾಗಿ ಮಾರ್ಪಡಬೇಕಾದರೆ, ನೋಹನ ದಿನದ ಜಲಪ್ರಳಯದಂತೆಯೇ ತೀರ ನಿರ್ಣಾಯಕ ಕ್ರಿಯೆಯು ಅವಶ್ಯ. ಯೇಸು ನಮ್ಮ ಸಮಯವನ್ನು ‘ನೋಹನ ದಿವಸಗಳಿಗೆ’ ಹೋಲಿಸಿದನು ಎಂಬುದನ್ನು ಮತ್ತಾಯ 24ನೇ ಅಧ್ಯಾಯ, 37-39ನೇ ವಚನಗಳು ತೋರಿಸುತ್ತವೆ. ಆಗ ಜನರು ತಮ್ಮ ವಿಷಮ ಪರಿಸ್ಥಿತಿಯನ್ನು “ಗಣನೆಗೆ ತೆಗೆದುಕೊಳ್ಳಲಿಲ್ಲ” (NW) ಮತ್ತು ನೋಹನು ಸಾರಿದ ಸಂದೇಶವನ್ನೂ ಅವರು ತಳ್ಳಿಹಾಕಿದರು. ಅನಂತರ, “ನೋಹನು ನಾವೆಯಲ್ಲಿ ಸೇರಿದ ದಿನ” ಬಂತು ಮತ್ತು ಜಲಪ್ರಳಯವು ಈ ಜ್ಞಾನವನ್ನು
ಅಂದರೆ ನೋಹನು ಸಾರಿದ ಸಂದೇಶವನ್ನು ತಿರಸ್ಕರಿಸಿದ್ದ ಎಲ್ಲರನ್ನೂ ಬಡುಕೊಂಡು ಹೋಯಿತು. ನೋಹ ಮತ್ತು ಅವನೊಂದಿಗೆ ನಾವೆಯಲ್ಲಿದ್ದ ಎಲ್ಲರೂ ಜೀವಂತವಾಗಿ ಉಳಿದರು.ತದ್ರೀತಿಯ “ದಿನ”ವೊಂದು ನಮ್ಮ ಸಮಯದಲ್ಲಿ ಬರಲಿದೆ ಎಂದು ಯೇಸು ಸೂಚಿಸಿದನು. ಈ ಘಟನೆಯೊಂದಿಗೆ ಸಂಬಂಧಿಸಿರುವ ಜ್ಞಾನವನ್ನು ಪಡೆದುಕೊಂಡು ಅದಕ್ಕನುಸಾರ ಕ್ರಿಯೆಗೈಯುವವರು, ಆ ದಿನವನ್ನು ಪಾರಾಗುವ ಮತ್ತು ಸದಾಕಾಲ ಜೀವಿಸುವ ಪ್ರತೀಕ್ಷೆಯನ್ನು ಹೊಂದಿರುವರು. ಅಷ್ಟುಮಾತ್ರವಲ್ಲ, ದೇವರ ಜ್ಞಾಪಕದಲ್ಲಿರುವ ಸತ್ತವರು ಉಜ್ಜೀವಿಸಲ್ಪಡುವರು ಮತ್ತು ಮುಂದೆಂದೂ ಸಾಯದಿರುವ ಪ್ರತೀಕ್ಷೆಯು ಅವರಿಗೆ ನೀಡಲ್ಪಡುವುದು. (ಯೋಹಾನ 5:28, 29) ಈ ಎರಡೂ ವಿಚಾರಗಳನ್ನು ಯೇಸು ಹೇಗೆ ವ್ಯಕ್ತಪಡಿಸಿದನು ಎಂಬುದನ್ನು ಗಮನಿಸಿರಿ. ಮೃತರ ಪುನರುತ್ಥಾನದ ಕುರಿತು ಮಾರ್ಥಳೊಂದಿಗೆ ಮಾತಾಡುತ್ತಿದ್ದಾಗ ಅವನಂದದ್ದು: “ನನ್ನನ್ನು ನಂಬುವವನು ಸತ್ತರೂ ಬದುಕುವನು; ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.” ಈ “ದಿನ”ವು ತೀರ ಸಮೀಪದಲ್ಲಿದೆ ಎಂಬುದಕ್ಕೆ ಎಲ್ಲಾ ಆಧಾರಗಳು ಕೈತೋರಿಸುತ್ತವೆ, ಮತ್ತು ಇದರರ್ಥ ನೀವು ‘ಎಂದಿಗೂ ಸಾಯದೇ’ ಇರಬಹುದು.—ಯೋಹಾನ 11:25-27.
ಯೇಸು ಅನಂತರ ಮಾರ್ಥಳಿಗೆ, “ಇದನ್ನು ನಂಬುತ್ತೀಯಾ?” ಎಂದು ಕೇಳಿದನು. ಅವಳು “ಹೌದು, ಸ್ವಾಮೀ” ಎಂದು ಉತ್ತರಕೊಟ್ಟಳು. ಒಂದುವೇಳೆ ಯೇಸು ಅದೇ ಪ್ರಶ್ನೆಯನ್ನು ನಿಮಗೆ ಕೇಳುವುದಾದರೆ, ನಿಮ್ಮ ಉತ್ತರ ಏನಾಗಿರಬಹುದು? ಎಂದಿಗೂ ಸಾಯದೇ ಇರುವುದು ಪ್ರಾಯಶಃ ನಿಮಗೆ ಜೀರ್ಣಿಸಿಕೊಳ್ಳಲು ಕಷ್ಟಕರವಾದ ವಿಷಯವಾಗಿರಬಹುದು. ಒಂದುವೇಳೆ ನೀವು ಹೀಗೆ ಪ್ರತಿಕ್ರಿಯಿಸುವುದಾದರೂ, ಸದಾಕಾಲ ಜೀವಿಸುವ ವಿಚಾರವು ನಿಮಗೆ ಇಷ್ಟವಾದೀತು ನಿಶ್ಚಯ. ನೀವು ‘ಎಂದಿಗೂ ಸಾಯದಿರುವುದಾದರೆ’ ನಿಮ್ಮಿಂದ ಎಷ್ಟೊಂದು ವಿಷಯಗಳನ್ನು ಕಲಿಯಲು ಸಾಧ್ಯವಿರಬಹುದು ಎಂಬುದರ ಕುರಿತು ತುಸು ಯೋಚಿಸಿರಿ! ನೀವು ಈಗ ಬಯಸುವುದಾದರೂ ಸಮಯವಿಲ್ಲದ ಕಾರಣ ಕಲಿಯಲು ಮತ್ತು ಮಾಡಲು ಸಾಧ್ಯವಿಲ್ಲದ ವಿಷಯಗಳಲ್ಲಿ ಆನಂದಿಸುತ್ತಿರುವುದರ ಕುರಿತು ತುಸು ಚಿತ್ರಿಸಿಕೊಳ್ಳಿರಿ. ಮತ್ತು ಮರಣದಲ್ಲಿ ನೀವು ಕಳೆದುಕೊಂಡಿರುವ ಪ್ರಿಯ ವ್ಯಕ್ತಿಗಳೊಂದಿಗಿನ ಪುನರ್ಮಿಲನವು ಎಂತಹ ಅನುಭವವಾಗಿರಬಹುದು! ಇಂತಹ ವಿಷಯಗಳನ್ನು ಸಾಧ್ಯಗೊಳಿಸುವ ಆ ಜ್ಞಾನವು ಯಾವುದಾಗಿದೆ, ಮತ್ತು ಇದನ್ನು ನೀವು ಹೇಗೆ ಪಡೆದುಕೊಳ್ಳಸಾಧ್ಯವಿದೆ?
ಜೀವದಾಯಕ ಜ್ಞಾನವನ್ನು ಪಡೆದುಕೊಳ್ಳುವ ಸಾಮರ್ಥ್ಯ ನಮ್ಮಲ್ಲಿದೆ
ದೇವರ ಮತ್ತು ಕ್ರಿಸ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವುದು ನಮ್ಮ ಶಕ್ತಿಗೆ ಮೀರಿದ ವಿಷಯವಾಗಿದೆಯೋ? ಇಲ್ಲ. ಸೃಷ್ಟಿಕರ್ತನ ಕೈಕೆಲಸಗಳ ಜ್ಞಾನವು ಅಂತ್ಯವಿಲ್ಲದ್ದು ಎಂಬುದು ನಿಜವೇ. ಆದರೆ, ಯೇಸು ‘ಜ್ಞಾನ’ ಮತ್ತು ‘ನಿತ್ಯಜೀವವನ್ನು’ ಜೋಡಿಸಿದಾಗ, ಅವನು ಖಗೋಳಶಾಸ್ತ್ರ ಅಥವಾ ಬೇರಾವುದೇ ವೈಜ್ಞಾನಿಕ ಜ್ಞಾನಕ್ಕೆ ಸೂಚಿಸುತ್ತಿರಲಿಲ್ಲ. ಬೈಬಲಿನಲ್ಲಿ ಕಂಡುಬರುವ ‘ಮಾತುಗಳು’ ಮತ್ತು ‘ವಿಧಿಗಳು’ ‘ದೈವಜ್ಞಾನಕ್ಕೆ’ ಮೂಲಾಧಾರವಾಗಿವೆ ಎಂದು ಜ್ಞಾನೋಕ್ತಿ 2ನೇ ಅಧ್ಯಾಯದ 1 ಮತ್ತು 5ನೇ ವಚನಗಳು ಸೂಚಿಸುತ್ತವೆ. ಮತ್ತು ಯೇಸುವಿನ ಕುರಿತು ಯೋಹಾನ 20:30, 31ರಲ್ಲಿ ತಿಳಿಸಲ್ಪಟ್ಟಿರುವ ವಿಷಯವು, ಬೈಬಲಿನಲ್ಲಿ ಬರೆಯಲ್ಪಟ್ಟಿರುವ ಸಂಗತಿಗಳು ನಾವು ‘ಜೀವವನ್ನು ಪಡಕೊಳ್ಳಲು’ ಬೇಕಾಗಿರುವಷ್ಟಾಗಿದೆ ಎಂಬುದನ್ನು ಸೂಚಿಸುತ್ತದೆ.
ಆದುದರಿಂದ, ನೀವು ನಿತ್ಯಜೀವವನ್ನು ಹೇಗೆ ಪಡೆದುಕೊಳ್ಳುವುದು ಎಂಬುದನ್ನು ತೋರಿಸಲಿಕ್ಕಾಗಿ ಬೈಬಲಿನಲ್ಲಿ ಯೆಹೋವ ಮತ್ತು ಯೇಸು ಕ್ರಿಸ್ತನ ಕುರಿತು ಕೊಡಲ್ಪಟ್ಟಿರುವ ಜ್ಞಾನವೇ ಸಾಕಾಗಿದೆ. ಬೈಬಲ್ ಒಂದು ಅದ್ವಿತೀಯ ಪುಸ್ತಕವಾಗಿದೆ. ಸೃಷ್ಟಿಕರ್ತನು ಮನುಷ್ಯರನ್ನು ಪ್ರೇರಿಸಿ ಅದನ್ನು ಯಾವ ರೀತಿಯಲ್ಲಿ ಬರೆಯಿಸಿದ್ದಾನೆಂದರೆ, ಹೆಚ್ಚು ವಿದ್ಯಾಭ್ಯಾಸವಿಲ್ಲದ ಮತ್ತು ವಿಷಯಗಳನ್ನು ಕಲಿಯಲು ಸಾಕಷ್ಟು ಅವಕಾಶಗಳಿಲ್ಲದ ಸಾಧಾರಣ ಜನರು ಸಹ ನಿತ್ಯಜೀವವನ್ನು ಗಳಿಸಲು ಸಾಧ್ಯವಾಗುವಷ್ಟು ಜ್ಞಾನವನ್ನು ಪಡೆದುಕೊಳ್ಳಬಲ್ಲರು. ತದ್ರೀತಿಯಲ್ಲಿ, ಚುರುಕು ಬುದ್ಧಿಯುಳ್ಳ ಹಾಗೂ ಹೆಚ್ಚು ಸಮಯ ಮತ್ತು ಸೌಲಭ್ಯಗಳನ್ನು ಹೊಂದಿರುವ ವ್ಯಕ್ತಿಯು ಸಹ ಪ್ರೇರಿತ ಶಾಸ್ತ್ರಗಳಿಂದ ಪ್ರತಿ ಸಲ ಯಾವುದಾದರೊಂದು ಹೊಸ ವಿಚಾರವನ್ನು ಕಲಿಯಬಲ್ಲನು. ನಿಮ್ಮಿಂದ ಈ ಲೇಖನವನ್ನು ಓದಲು ಸಾಧ್ಯವಾಗುತ್ತಿದೆ ಎಂಬುದೇ ನಿಮಗೆ ಕಲಿಕೆಯ ಸಾಮರ್ಥ್ಯವಿದೆ ಎಂಬುದಕ್ಕೆ ಸಾಕ್ಷ್ಯವಾಗಿದೆ; ಆದರೆ ನೀವು ಈ ಸಾಮರ್ಥ್ಯವನ್ನು ಹೇಗೆ ಉಪಯೋಗಿಸುವಿರಿ?
ಲೋಕವ್ಯಾಪಕವಾಗಿ, ಈ ಜ್ಞಾನವನ್ನು ಪಡೆದುಕೊಳ್ಳಲು ಅತಿ ಪರಿಣಾಮಕಾರಿಯಾದ ಮಾರ್ಗವು ಈಗಾಗಲೇ ಈ ಜ್ಞಾನವನ್ನು ಪಡೆದುಕೊಂಡಿರುವ ಒಬ್ಬ ವ್ಯಕ್ತಿಯ ನೆರವಿನೊಂದಿಗೆ ನಡೆಸಲ್ಪಡುವ ವೈಯಕ್ತಿಕ ಬೈಬಲ್ ಅಧ್ಯಯನದ ಮೂಲಕವಾಗಿಯೇ ಎಂಬುದು ಅನುಭವದಿಂದ ತಿಳಿದುಬಂದಿದೆ. ಹೇಗೆ ನೋಹನು ತನ್ನ ಸಂದೇಶದ ಮೂಲಕ ತನ್ನ ಸಮಕಾಲೀನರಿಗೆ ಜ್ಞಾನವನ್ನು ಕೊಡಲು ಪ್ರಯತ್ನಿಸಿದನೋ ಹಾಗೆಯೇ ಯೆಹೋವನ ಸಾಕ್ಷಿಗಳು ನಿಮ್ಮ ಮನೆಗೆ ಬಂದು ನಿಮ್ಮೊಂದಿಗೆ ಬೈಬಲನ್ನು ಅಧ್ಯಯನ ಮಾಡಲು ಬಯಸುತ್ತಾರೆ. ಅವರು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ ಅಥವಾ ನಿತ್ಯಜೀವಕ್ಕೆ ನಡೆಸುವ * ಎಂದು ಸೂಕ್ತವಾಗಿಯೇ ಹೆಸರಿಸಲ್ಪಟ್ಟಿರುವ ಕೈಪಿಡಿಯನ್ನು ಉಪಯೋಗಿಸಬಹುದು. ಭೂಪರದೈಸಿನಲ್ಲಿ ನಂಬಿಗಸ್ತ ವ್ಯಕ್ತಿಗಳು “ಎಂದಿಗೂ ಸಾಯುವದಿಲ್ಲ” ಎಂಬ ವಿಚಾರವನ್ನು ಜೀರ್ಣಿಸಿಕೊಳ್ಳಲು ನಿಮಗೆ ಕಷ್ಟಕರವಾಗಿ ತೋರುವುದಾದರೂ, ನೀವು ಈ ಬೈಬಲ್ ಚರ್ಚೆಗಳ ಮೂಲಕ ಆ ವಾಗ್ದಾನದಲ್ಲಿ ಭರವಸೆಯನ್ನು ಬೆಳೆಸಿಕೊಳ್ಳಬಲ್ಲಿರಿ. ನಿಮಗೆ ಒಂದುವೇಳೆ ಸದಾಕಾಲ ಜೀವಿಸಲು ಮನಸ್ಸಿರುವುದಾದರೆ ಅಥವಾ ಇದನ್ನು ನಂಬುವುದು ನ್ಯಾಯಸಮ್ಮತವಾಗಿದೆಯೋ ಎಂದು ನೋಡಲು ಬಯಸುವುದಾದರೆ ನೀವೇನು ಮಾಡಬೇಕು? ಬೈಬಲನ್ನು ಅಧ್ಯಯನ ಮಾಡಲಿಕ್ಕಾಗಿರುವ ಈ ಸದವಕಾಶವನ್ನು ಸ್ವೀಕರಿಸಬೇಕು.
ಜ್ಞಾನಇದಕ್ಕೆ ಎಷ್ಟು ಸಮಯ ಹಿಡಿಯುವುದು? ಮೇಲೆ ತಿಳಿಸಲ್ಪಟ್ಟ 32 ಪುಟದ ಆ ಬ್ರೋಷರ್ ನೂರಾರು ಭಾಷೆಗಳಲ್ಲಿ ಲಭ್ಯವಿದ್ದು, ಅದರಲ್ಲಿ 16 ಚಿಕ್ಕ ಪಾಠಗಳು ಮಾತ್ರ ಇವೆ. ಅಥವಾ ವಾರದಲ್ಲಿ ಒಂದು ತಾಸನ್ನು ನೀವು ಬದಿಗಿಡುವುದಾದರೆ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವನ್ನು ಉಪಯೋಗಿಸುತ್ತಾ ಮುಖ್ಯ ಬೈಬಲ್ ವಿಷಯವಸ್ತುಗಳ ಕುರಿತು ಅಧ್ಯಯನ ಮಾಡಲು ನಿಮಗೆ ಕೆಲವೇ ತಿಂಗಳುಗಳು ಹಿಡಿಯುವವು. ಹೆಚ್ಚು ಜ್ಞಾನವನ್ನು ಪಡೆದುಕೊಳ್ಳಲು ಮತ್ತು ದೇವರಿಗಾಗಿ ಗಾಢವಾದ ಪ್ರೀತಿಯನ್ನು ಬೆಳೆಸಿಕೊಳ್ಳಲು ಈ ಪ್ರಕಾಶನಗಳು ಅನೇಕರಿಗೆ ಸಹಾಯಮಾಡಿವೆ. ಸೃಷ್ಟಿಕರ್ತನು ತನ್ನನ್ನು ನಿಜವಾಗಿಯೂ ಪ್ರೀತಿಸುವವರನ್ನು ಆಶೀರ್ವದಿಸಿ, ಅವರಿಗೆ ನಿತ್ಯಜೀವವನ್ನು ದಯಪಾಲಿಸುವನು.
ಜೀವದಾಯಕ ಜ್ಞಾನವು ನಮ್ಮ ಕೈಗೆ ನಿಲುಕುವಂತಿದೆ ಮತ್ತು ಅದು ಸುಲಭದಲ್ಲಿ ಸಿಗುತ್ತದೆ ಕೂಡ. ಬೈಬಲು—ಕಡಿಮೆಪಕ್ಷ ಭಾಗಶಃ—ಸುಮಾರು 2,000ಕ್ಕಿಂತಲೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿದೆ. 235 ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು, ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ನಿಮಗೆ ವೈಯಕ್ತಿಕ ನೆರವನ್ನು ನೀಡಲು ಮತ್ತು ಬೈಬಲ್ ಆಧಾರಿತ ಪ್ರಕಾಶನಗಳನ್ನು ಒದಗಿಸಲು ಸಿದ್ಧರಿದ್ದಾರೆ.
ಅಧ್ಯಯನ ಮಾಡುವುದರಲ್ಲಿ ನಿಮ್ಮ ವೈಯಕ್ತಿಕ ಪ್ರಯತ್ನಗಳು
ದೇವರೊಂದಿಗಿನ ನಿಮ್ಮ ಸಂಬಂಧವು, ನಿಮ್ಮ ಮತ್ತು ಸೃಷ್ಟಿಕರ್ತನ ಮಧ್ಯೆ ಇರುವ ವೈಯಕ್ತಿಕ ವಿಚಾರವಾಗಿದೆ. ಅದನ್ನು ಕಾಪಾಡಿಕೊಳ್ಳುವುದೂ ಬಲಪಡಿಸುವುದೂ ನಿಮ್ಮಿಂದ ಮಾತ್ರ ಸಾಧ್ಯ, ಮತ್ತು ನಿಮಗೆ ನಿತ್ಯಜೀವವನ್ನು ದಯಪಾಲಿಸುವುದು ಆತನಿಂದ ಮಾತ್ರ ಸಾಧ್ಯ. ಆದುದರಿಂದ, ನೀವು ಆತನ ಲಿಖಿತ ವಾಕ್ಯದ ವೈಯಕ್ತಿಕ ಅಧ್ಯಯನವನ್ನು ಮುಂದುವರಿಸಬೇಕು. ಕ್ರಮವಾಗಿ ಯಾರಾದರೂ ನಿಮ್ಮ ಮನೆಗೆ ಬರಲು ನೀವು ಏರ್ಪಡಿಸುವುದಾದರೆ, ಅಧ್ಯಯನಕ್ಕಾಗಿ ನಿರ್ದಿಷ್ಟ ಸಮಯವನ್ನು ಬದಿಗಿಡುವುದು ಸುಲಭವೆಂಬುದನ್ನು ನೀವು ಕಂಡುಕೊಳ್ಳುವಿರಿ.
ಬೈಬಲ್ ಮತ್ತು ಬೈಬಲ್ ಅಧ್ಯಯನ ಸಹಾಯಕಗಳಲ್ಲಿ “ದೈವಜ್ಞಾನ” ತುಂಬಿರುವುದರಿಂದ, ಅವನ್ನು ತುಂಬ ಜೋಪಾನವಾಗಿಡುವುದು ಯೋಗ್ಯವಾಗಿದೆ. (ಜ್ಞಾನೋಕ್ತಿ 2:5) ಹೀಗೆ ಅವನ್ನು ನೀವು ತುಂಬ ವರ್ಷಗಳ ವರೆಗೆ ಉಪಯೋಗಿಸಲು ಸಾಧ್ಯವಿರುವುದು. ನೀವು ಪ್ರಗತಿಶೀಲ ದೇಶವೊಂದರಲ್ಲಿ ಜೀವಿಸುತ್ತಿರುವುದಾದರೆ ಶಾಲೆಯಲ್ಲಿ ಹೆಚ್ಚು ಪಠ್ಯಪುಸ್ತಕಗಳನ್ನು ಉಪಯೋಗಿಸದೆಯೇ, ಹೆಚ್ಚಾಗಿ ಕೇಳಿಸಿಕೊಳ್ಳುವ ಹಾಗೂ ಅವಲೋಕಿಸುವ ಮೂಲಕವಾಗಿ ನೀವು ವಿಷಯಗಳನ್ನು ಕಲಿತಿರಬಹುದು. ಉದಾಹರಣೆಗೆ, ಬೆನಿನ್‌ನಲ್ಲಿ 50ಕ್ಕಿಂತಲೂ ಹೆಚ್ಚು ಭಾಷೆಗಳಿವೆ. ಅಲ್ಲಿ ಕೆಲವರು ನಾಲ್ಕು ಅಥವಾ ಐದು ಭಾಷೆಗಳನ್ನು ಸರಾಗವಾಗಿ ಮಾತಾಡುವುದನ್ನು ನೋಡುವುದು ಅಸಾಮಾನ್ಯವೇನಲ್ಲ. ಆದರೆ ಇವರು ಈ ಭಾಷೆಗಳನ್ನು ಕಲಿಯಲಿಕ್ಕಾಗಿ ಒಂದು ಪಠ್ಯಪುಸ್ತಕವನ್ನು ಉಪಯೋಗಿಸಿರಲಿಕ್ಕಿಲ್ಲ. ಕೇಳಿಸಿಕೊಳ್ಳುವ, ಅವಲೋಕಿಸುವ ಮತ್ತು ಗಮನವನ್ನು ಕೇಂದ್ರೀಕರಿಸುವ ಮೂಲಕ ಕಲಿಯಸಾಧ್ಯವಿರುವ ಸಾಮರ್ಥ್ಯವು ಒಂದು ವರದಾನವಾಗಿದೆ. ಆದರೂ, ಪುಸ್ತಕಗಳು ನಿಮ್ಮ ಅಧ್ಯಯನದಲ್ಲಿ ನಿಮಗೆ ಹೆಚ್ಚಿನ ನೆರವನ್ನು ನೀಡಬಲ್ಲವು ಎಂಬುದನ್ನು ನೀವು ಕಂಡುಕೊಳ್ಳುವಿರಿ.
ನಿಮ್ಮ ಮನೆಯಲ್ಲಿ ಕಡಿಮೆ ಸ್ಥಳವಿರುವುದಾದರೂ, ನಿಮ್ಮ ಬೈಬಲ್ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕಾಶನಗಳಿಗಾಗಿ ಒಂದು ಸೂಕ್ತವಾದ ಸ್ಥಳವನ್ನು ಹುಡುಕಿರಿ. ಅಗತ್ಯವಿರುವಾಗ ಸುಲಭವಾಗಿ ತೆಗೆದುಕೊಳ್ಳಲು ಸಾಧ್ಯವಾಗುವ ಮತ್ತು ಸುರಕ್ಷಿತವಾಗಿರುವ ಸ್ಥಳದಲ್ಲಿ ಅವನ್ನು ಇಡಿರಿ.
ನಿಮ್ಮ ಕುಟುಂಬದೊಂದಿಗೆ ಅಧ್ಯಯನ ಮಾಡುವುದು
ನೀವೊಬ್ಬ ಹೆತ್ತವರಾಗಿರುವುದಾದರೆ, ನೀವು ಪಡೆದುಕೊಳ್ಳುತ್ತಿರುವ ಅದೇ ಜ್ಞಾನವನ್ನು ನಿಮ್ಮ ಮಕ್ಕಳು ಸಹ ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡುವ ಆಸಕ್ತಿ ನಿಮಗಿರಬೇಕು. ಪ್ರಗತಿಶೀಲ ದೇಶಗಳಲ್ಲಿ, ಜೀವನಕ್ಕೆ ಅಗತ್ಯವಿರುವ ಅನೇಕ ಕೌಶಲಗಳನ್ನು ಹೆತ್ತವರು ಮಕ್ಕಳಿಗೆ ಕಲಿಸುವ ರೂಢಿ ಇರುತ್ತದೆ. ಇದರಲ್ಲಿ ಅಡಿಗೆಕೆಲಸ, ಕಟ್ಟಿಗೆಯನ್ನು ತರುವುದು, ನೀರನ್ನು ತರುವುದು, ಗದ್ದೆಕೆಲಸ, ಮೀನು ಹಿಡಿಯುವುದು, ಮತ್ತು ಮಾರುಕಟ್ಟೆಯಲ್ಲಿ ಸರಕುಗಳನ್ನು ವಿನಿಮಯ ಮಾಡಿ ತರುವ ಕೆಲಸವೆಲ್ಲಾ ಸೇರಿರಬಹುದು. ಇದು ಜೀವನೋಪಾಯಕ್ಕಾಗಿರುವ ಶಿಕ್ಷಣವಾಗಿದೆ. ಆದರೂ, ಅನೇಕ ಹೆತ್ತವರು ಈ ಎಲ್ಲಾ ಶಿಕ್ಷಣದೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನವನ್ನು ಸೇರಿಸಿಕೊಳ್ಳುವುದಿಲ್ಲ.
ನಿಮ್ಮ ಸನ್ನಿವೇಶ ಏನೇ ಆಗಿರಲಿ, ಹೆಚ್ಚು ಪುರುಸತ್ತಿಲ್ಲ ಎಂದು ನಿಮಗೆ ಪ್ರಾಯಶಃ ಅನಿಸಬಹುದು. ಸೃಷ್ಟಿಕರ್ತನು ಸಹ ಇದನ್ನು ಅರ್ಥಮಾಡಿಕೊಳ್ಳುತ್ತಾನೆ. ಮಕ್ಕಳಿಗೆ ತನ್ನ ಬೋಧನೆಗಳನ್ನು ಹೇಗೆ ಬೋಧಿಸಬೇಕು ಎಂಬ ವಿಷಯದಲ್ಲಿ ದೀರ್ಘಕಾಲದ ಹಿಂದೆ ಆತನು ಏನು ಹೇಳಿದನು ಎಂಬುದನ್ನು ಗಮನಿಸಿರಿ: “ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:7) ಈ ವಿಚಾರಧಾರೆಯ ಮೇಲಾಧಾರಿಸಿ, ನೀವು ಯಾಕೆ ನಿಮ್ಮ ಸ್ವಂತ ಬೋಧನಾ ಕಾರ್ಯಕ್ರಮವನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬಾರದು. ಕೆಳಗೆ ಕೊಡಲ್ಪಟ್ಟಿರುವ ಸಲಹೆಗಳನ್ನು ಗಮನಿಸಿರಿ:
1. “ಮನೆಯಲ್ಲಿ ಕೂತಿರುವಾಗ”: ಸಾಪ್ತಾಹಿಕವಾಗಿ ಹೇಗೆ ಒಬ್ಬರು ನಿಮ್ಮೊಂದಿಗೆ ಅಧ್ಯಯನವನ್ನು ನಡೆಸಿರಬಹುದೋ ಅದೇ
ರೀತಿಯಲ್ಲಿ ನೀವು ನಿಮ್ಮ ಮಕ್ಕಳೊಂದಿಗೆ ಮನೆಯಲ್ಲಿ ಕ್ರಮವಾಗಿ ಚರ್ಚೆಗಳನ್ನು ನಡೆಸಲು ಏರ್ಪಾಡುಮಾಡಿರಿ. ಎಲ್ಲಾ ಪ್ರಾಯದ ಮಕ್ಕಳಿಗೆ ಬೋಧಿಸಲು ಸೂಕ್ತವಾಗಿರುವ ಬೈಬಲ್ ಆಧಾರಿತ ಪ್ರಕಾಶನಗಳನ್ನು ಯೆಹೋವನ ಸಾಕ್ಷಿಗಳು ಒದಗಿಸುತ್ತಾರೆ.2. ‘ದಾರಿಯಲ್ಲಿ ನಡೆಯುವಾಗ’: ನೀವು ಜೀವನದ ಆವಶ್ಯಕತೆಗಳ ಕುರಿತು ಅಥವಾ ಮಾರ್ಗದರ್ಶಕ ಸೂಚಕಗಳ ಕುರಿತು ನಿಮ್ಮ ಮಕ್ಕಳಿಗೆ ಅನೌಪಚಾರಿಕವಾಗಿ ಕಲಿಸುವಂತೆಯೇ, ಅವರೊಂದಿಗೆ ಯೆಹೋವನ ಕುರಿತು ಅನೌಪಚಾರಿಕವಾಗಿ ಮಾತಾಡಿರಿ.
3. “ಮಲಗುವಾಗ”: ಪ್ರತಿದಿನ ರಾತ್ರಿಯಲ್ಲಿ ನಿಮ್ಮ ಮಕ್ಕಳೊಂದಿಗೆ ಪ್ರಾರ್ಥಿಸಿರಿ.
4. “ಏಳುವಾಗ”: ಪ್ರತಿದಿನ ಬೆಳಗ್ಗೆ ಒಂದು ಬೈಬಲ್ ವಚನವನ್ನು ಪರಿಗಣಿಸುವ ಮೂಲಕ ಅನೇಕ ಕುಟುಂಬಗಳು ಸಂತೃಪ್ತಿದಾಯಕ ಪ್ರತಿಫಲಗಳನ್ನು ಅನುಭವಿಸಿವೆ. ಯೆಹೋವನ ಸಾಕ್ಷಿಗಳು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು * ಎಂಬ ಪುಸ್ತಿಕೆಯನ್ನು ಇದಕ್ಕೆ ಆಧಾರವಾಗಿ ಉಪಯೋಗಿಸುತ್ತಾರೆ.
ಪ್ರಗತಿಶೀಲ ದೇಶಗಳಲ್ಲಿ, ತಮ್ಮ ಮಕ್ಕಳಲ್ಲಿ ಒಬ್ಬರಾದರೂ ಒಳ್ಳೇ ಐಹಿಕ ಶಿಕ್ಷಣವನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ಕೆಲವು ಹೆತ್ತವರು ಏನೆಲ್ಲಾ ಮಾಡುತ್ತಾರೆ. ಹೀಗೆ ಮಾಡುವುದರಿಂದ, ಹೆತ್ತವರಿಗೆ ವಯಸ್ಸಾದಾಗ ಆ ಮಗುವಿಗೆ ಅವರ ಆರೈಕೆಮಾಡಲು ಸಾಧ್ಯವಿರುವುದು. ಆದರೆ, ನೀವು ಬೈಬಲನ್ನು ಅಧ್ಯಯನ ಮಾಡುವುದಾದರೆ ಮತ್ತು ಇದನ್ನೇ ಮಾಡುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡುವುದಾದರೆ, ನಿಮ್ಮನ್ನೂ ನಿಮ್ಮ ಇಡೀ ಕುಟುಂಬವನ್ನೂ ಸದಾಕಾಲ ಜೀವಿಸುವಂತೆ ಮಾಡಬಲ್ಲ ಜ್ಞಾನವನ್ನು ಪಡೆದುಕೊಳ್ಳುವಿರಿ.
ನಾವು ಸಕಲವನ್ನೂ ತಿಳಿದುಕೊಂಡಿರುವ ಸಮಯವು ಎಂದಾದರೂ ಬರುವುದೋ? ಇಲ್ಲ. ಅಂತ್ಯವಿಲ್ಲದ ಅಂತರಿಕ್ಷದಲ್ಲಿ ನಮ್ಮ ಭೂಮಿಯು ತನ್ನ ಸಂಚಾರವನ್ನು ಮುಂದುವರಿಸುವಾಗ, ನಾವು ಜ್ಞಾನವನ್ನು ಪಡೆದುಕೊಳ್ಳುತ್ತಾ ಇರುವೆವು. ವಾಸ್ತವದಲ್ಲಿ, ಪ್ರಸಂಗಿ 3:11 ತಿಳಿಸುವುದು: “ಒಂದೊಂದು ವಸ್ತುವನ್ನು ಸಮಯಕ್ಕೆ ತಕ್ಕ ಹಾಗೆ [ದೇವರು] ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.” ಜ್ಞಾನವನ್ನು ಪಡೆದುಕೊಳ್ಳುವುದು ಮನಸ್ಸಿಗೆ ಮುದ ನೀಡುವ ವಿಷಯವಾಗಿದೆ ಮತ್ತು ಇದು ಎಂದಿಗೂ ಕೊನೆಗೊಳ್ಳದು.
[ಪಾದಟಿಪ್ಪಣಿಗಳು]
^ ಪ್ಯಾರ. 10 ಎರಡೂ ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.
^ ಪ್ಯಾರ. 23 ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
“. . . ಜ್ಞಾನವನ್ನು ಪಡೆದುಕೊಳ್ಳುವುದೇ ನಿತ್ಯಜೀವ”
[ಪುಟ 7ರಲ್ಲಿರುವ ಚಿತ್ರಗಳು]
ಇಂದು ಮತ್ತು ಎಂದೆಂದಿಗೂ ಜ್ಞಾನವನ್ನು ಪಡೆದುಕೊಳ್ಳುವಂತೆ ನಿಮ್ಮ ಕುಟುಂಬಕ್ಕೆ ಸಹಾಯಮಾಡಿರಿ