ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ವಾಕ್ಯವು ನಿಮ್ಮ ದಾರಿಯನ್ನು ಬೆಳಗಿಸಲಿ

ದೇವರ ವಾಕ್ಯವು ನಿಮ್ಮ ದಾರಿಯನ್ನು ಬೆಳಗಿಸಲಿ

ದೇವರ ವಾಕ್ಯವು ನಿಮ್ಮ ದಾರಿಯನ್ನು ಬೆಳಗಿಸಲಿ

‘ನಿನ್ನ ವಾಕ್ಯವು ನನ್ನ ದಾರಿಗೆ ಬೆಳಕಾಗಿದೆ.’​—⁠ಕೀರ್ತನೆ 119:105.

ನಾವು ಅನುಮತಿಸುವುದಾದರೆ ಯೆಹೋವನ ವಾಕ್ಯವು ನಮ್ಮ ದಾರಿಯನ್ನು ಬೆಳಗಿಸುವುದು. ಇಂತಹ ಆಧ್ಯಾತ್ಮಿಕ ಬೆಳಕಿನಲ್ಲಿ ಆನಂದಿಸಬೇಕಾದರೆ, ನಾವು ದೇವರ ಲಿಖಿತ ವಾಕ್ಯದ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿರಬೇಕು ಮತ್ತು ಅದರ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಬೇಕು. ಆಗ ಮಾತ್ರವೇ, “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ” ಎಂಬ ಕೀರ್ತನೆಗಾರನ ಭಾವನೆಯನ್ನು ನಮ್ಮಿಂದಲೂ ವ್ಯಕ್ತಪಡಿಸಲು ಸಾಧ್ಯವಿರುವುದು.​—⁠ಕೀರ್ತನೆ 119:105.

2 ನಾವು ಈಗ ಕೀರ್ತನೆ 119:​89-176ನ್ನು ಪರಿಗಣಿಸೋಣ. 11 ಪದ್ಯಗಳಲ್ಲಿ ರಚಿಸಲ್ಪಟ್ಟಿರುವ ಈ ವಚನಗಳಲ್ಲಿ ಮಾಹಿತಿಯ ಮಹಾಪೂರವೇ ಅಡಕವಾಗಿದೆ ಎಂದು ಹೇಳಬಹುದು! ಅವು ನಿತ್ಯಜೀವಕ್ಕೆ ನಡೆಸುವ ದಾರಿಯಲ್ಲಿ ಉಳಿಯುವಂತೆ ನಮಗೆ ಸಹಾಯಮಾಡಬಲ್ಲವು.​—⁠ಮತ್ತಾಯ 7:13, 14.

ದೇವರ ವಾಕ್ಯದಲ್ಲಿ ಆನಂದಿಸಬೇಕು ಏಕೆ?

3 ಯೆಹೋವನ ವಾಕ್ಯದಲ್ಲಿನ ಆನಂದವು ನಮಗೆ ಆಧ್ಯಾತ್ಮಿಕ ಸ್ಥಿರತೆಯನ್ನು ತರುತ್ತದೆ. (ಕೀರ್ತನೆ 119:89-96) ಕೀರ್ತನೆಗಾರನು ಹಾಡಿದ್ದು: “ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟದೆ. . . . ನೀನು ಭೂಮಿಯನ್ನು ಸ್ಥಾಪಿಸಿರುತ್ತೀ; ಅದು ಕದಲುವದಿಲ್ಲ.” (ಕೀರ್ತನೆ 119:89, 90) ದೇವರ ವಾಕ್ಯದಿಂದಾಗಿ​—⁠ಆತನ ‘ಖಗೋಲದ ಕಟ್ಟಳೆಗಳಿಂದಾಗಿ’​—⁠ಆಕಾಶಸ್ಥ ಕಾಯಗಳು ತಮ್ಮ ಕಕ್ಷೆಯಲ್ಲೇ ಸಾಗುತ್ತವೆ ಮತ್ತು ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಸ್ಥಿರವಾಗಿ ಸ್ಥಾಪಿಸಲ್ಪಟ್ಟಿದೆ. (ಯೋಬ 38:31-33; ಕೀರ್ತನೆ 104:5) ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನ ಮೇಲೆ ನಾವು ಭರವಸವಿಡಬಲ್ಲೆವು; ಏಕೆಂದರೆ ದೇವರು ಹೇಳುವ ಮಾತು ಆತನು “ಉದ್ದೇಶಿಸಿದ್ದನ್ನು ಕೈಗೂಡಿಸಿ” ಆತನ ಚಿತ್ತವನ್ನು ಪೂರೈಸುವುದು.​—⁠ಯೆಶಾಯ 55:8-11.

4 ಕೀರ್ತನೆಗಾರನು ‘ದೇವರ ಧರ್ಮಶಾಸ್ತ್ರದಲ್ಲಿ ಆನಂದವನ್ನು ಕಂಡುಕೊಳ್ಳದಿದ್ದರೆ ಅವನಿಗೊದಗಿದ ಆಪತ್ತಿನಲ್ಲಿ ಹಾಳಾಗಿ ಹೋಗುತ್ತಿದ್ದನು.’ (ಕೀರ್ತನೆ 119:92) ಅವನು ಆಪತ್ತಿಗೊಳಗಾದದ್ದು ಅನ್ಯಜನರಿಂದಲ್ಲ; ಧರ್ಮಶಾಸ್ತ್ರವನ್ನು ಮೀರಿ ನಡೆಯುತ್ತಿದ್ದ ಇಸ್ರಾಯೇಲ್ಯರ ದ್ವೇಷಕ್ಕೆ ಅವನು ಗುರಿಯಾಗಿದ್ದನು. (ಯಾಜಕಕಾಂಡ 19:17) ಆದರೆ ಇದರಿಂದಾಗಿ ಅವನು ದಿಕ್ಕುತೋಚದವನಂತೆ ಆಗಲಿಲ್ಲ. ಏಕೆಂದರೆ ತನ್ನನ್ನು ಪೋಷಿಸಿ ಬಲಪಡಿಸುತ್ತಿದ್ದ ದೇವರ ಧರ್ಮಶಾಸ್ತ್ರವನ್ನು ಅವನು ಪ್ರೀತಿಸಿದನು. ಅಪೊಸ್ತಲ ಪೌಲನು ಕೊರಿಂಥದಲ್ಲಿದ್ದಾಗ ‘ಸುಳ್ಳುಸಹೋದರಿಂದ ಅಪಾಯಗಳನ್ನು’ ಎದುರಿಸಿದನು. ಪ್ರಾಯಶಃ ಇವರಲ್ಲಿ ಅವನ ಮೇಲೆ ಅಪವಾದ ಹೊರಿಸಲು ಕಾರಣ ಹುಡುಕುತ್ತಿದ್ದ ‘ಅತಿಶ್ರೇಷ್ಠರಾದ ಅಪೊಸ್ತಲರೂ’ ಒಳಗೂಡಿರಬಹುದು. (2 ಕೊರಿಂಥ 11:5, 12-14, 26) ಆದರೂ, ಪೌಲನು ದೇವರ ವಾಕ್ಯದಲ್ಲಿ ಆನಂದವನ್ನು ಕಂಡುಕೊಂಡದ್ದರಿಂದ ಆಧ್ಯಾತ್ಮಿಕವಾಗಿ ಬದುಕಿ ಉಳಿದನು. ನಾವು ಯೆಹೋವನ ಲಿಖಿತ ವಾಕ್ಯದಲ್ಲಿ ಆನಂದವನ್ನು ಕಂಡುಕೊಳ್ಳುವುದರಿಂದ ಮತ್ತು ಅದು ಹೇಳುವುದನ್ನು ಅನ್ವಯಿಸಿಕೊಳ್ಳುವುದರಿಂದ, ನಮ್ಮ ಸಹೋದರರನ್ನು ಪ್ರೀತಿಸುತ್ತೇವೆ. (1 ಯೋಹಾನ 3:15) ಲೋಕವು ನಮ್ಮ ಮೇಲೆ ಕೆಂಡಕಾರಿದರೂ ನಾವು ದೇವರ ಯಾವ ಸಲಹೆಯನ್ನೂ ಮರೆತುಬಿಡುವುದಿಲ್ಲ. ನಾವು ಯೆಹೋವನನ್ನು ಯುಗಯುಗಾಂತರಕ್ಕೂ ಸಂತೋಷದಿಂದ ಸೇವಿಸುವ ಆ ಸಮಯಕ್ಕಾಗಿ ಎದುರುನೋಡುತ್ತಿರುವಾಗ ನಮ್ಮ ಸಹೋದರರೊಂದಿಗೆ ಪ್ರೀತಿಭರಿತ ಐಕ್ಯದಲ್ಲಿ ಆತನ ಚಿತ್ತವನ್ನು ಮಾಡುವುದನ್ನು ಮುಂದುವರಿಸುತ್ತೇವೆ.​—⁠ಕೀರ್ತನೆ 119:⁠93.

5 ಯೆಹೋವನಿಗಾಗಿರುವ ನಮ್ಮ ಸಮರ್ಪಿತ ಭಾವವನ್ನು ತೋರಿಸುತ್ತಾ, “ನಾನು ನಿನ್ನವನು, ರಕ್ಷಿಸು; ನಿನ್ನ ನೇಮಗಳಲ್ಲಿ ಆಸಕ್ತನಾಗಿದ್ದೇನಲ್ಲಾ,” ಅಥವಾ ನಿನ್ನ ನೇಮಗಳಿಗಾಗಿ ಹುಡುಕಿದ್ದೇನಲ್ಲಾ ಎಂದು ನಾವು ಪ್ರಾರ್ಥಿಸಬಹುದು. (ಕೀರ್ತನೆ 119:94) ರಾಜ ಆಸನು ಯೆಹೋವನನ್ನು ಹುಡುಕಿದನು ಮತ್ತು ಯೆಹೂದದಿಂದ ಧರ್ಮಭ್ರಷ್ಟತೆಯನ್ನು ಬುಡಸಮೇತ ಕಿತ್ತುಹಾಕಿದನು. ಅವನ ಆಳ್ವಿಕೆಯ 15ನೆಯ ವರ್ಷದಲ್ಲಿ (ಸಾ.ಶ.ಪೂ. 963) ನಡೆದ ಒಂದು ಮಹಾ ಸಭೆಯಲ್ಲಿ, ಯೆಹೂದದ ನಿವಾಸಿಗಳು ‘ಯೆಹೋವನನ್ನು ಹುಡುಕುತ್ತೇವೆಂದು ಪ್ರಮಾಣಮಾಡಿದರು.’ ಮತ್ತು ಅವರು ತನ್ನನ್ನು ‘ಕಂಡುಕೊಳ್ಳುವಂತೆ ದೇವರು ಅನುಮತಿಸಿದನು’ (NW) ಹಾಗೂ ಅವರಿಗೆ “ಎಲ್ಲಾ ಕಡೆಗಳಲ್ಲಿಯೂ ಸಮಾಧಾನವನ್ನನುಗ್ರಹಿಸಿದನು.” (2 ಪೂರ್ವಕಾಲವೃತ್ತಾಂತ 15:10-15) ಈ ಮಾದರಿಯು, ಕ್ರೈಸ್ತ ಸಭೆಯಿಂದ ದೂರ ತೇಲಿಹೋಗಿರುವವರು ದೇವರನ್ನು ಹುಡುಕಲು ಪುನಃ ಪ್ರಯತ್ನವನ್ನು ಮಾಡುವಂತೆ ಅವರನ್ನು ಪ್ರೋತ್ಸಾಹಿಸಬೇಕು. ತನ್ನ ಜನರೊಂದಿಗೆ ತಮ್ಮ ಸಹವಾಸವನ್ನು ಪುನರಾರಂಭಿಸುವವರನ್ನು ಯೆಹೋವನು ಆಶೀರ್ವದಿಸಿ ಸಂರಕ್ಷಿಸುವನು.

6 ಯೆಹೋವನ ವಾಕ್ಯವು ನಮ್ಮನ್ನು ಆಧ್ಯಾತ್ಮಿಕ ಹಾನಿಯಿಂದ ಸಂರಕ್ಷಿಸಬಲ್ಲ ವಿವೇಕವನ್ನು ದಯಪಾಲಿಸುತ್ತದೆ. (ಕೀರ್ತನೆ 119:97-104) ದೇವರ ಆಜ್ಞೆಗಳು ನಮ್ಮನ್ನು ನಮ್ಮ ವೈರಿಗಳಿಗಿಂತ ಬುದ್ಧಿವಂತರನ್ನಾಗಿ ಮಾಡುತ್ತದೆ. ಆತನ ಮರುಜ್ಞಾಪನಗಳಿಗೆ ಕಿವಿಗೊಡುವುದು ನಮಗೆ ಒಳನೋಟವನ್ನು ಕೊಡುತ್ತದೆ, ಮತ್ತು ‘ಆತನ ನೇಮಗಳನ್ನು ಕೈಕೊಳ್ಳುವುದು ನಮ್ಮನ್ನು ಹಿರಿಯರಿಗಿಂತ ವಿವೇಕಿಗಳಾಗಿ’ ಮಾಡುತ್ತದೆ. (ಕೀರ್ತನೆ 119:98-100) ಯೆಹೋವನ ನುಡಿಗಳು ‘ನಮ್ಮ ನಾಲಿಗೆಗೆ ರುಚಿಕರವಾಗಿಯೂ ಬಾಯಿಗೆ ಜೇನುತುಪ್ಪಕ್ಕಿಂತಲೂ ಸಿಹಿಯಾಗಿಯೂ’ ಇರುವುದಾದರೆ, ನಾವು ಪ್ರತಿಯೊಂದು ‘ಮಿಥ್ಯಾಮಾರ್ಗವನ್ನು’ ಹಗೆಮಾಡಿ ಅದರಿಂದ ದೂರವಿರುವೆವು. (ಕೀರ್ತನೆ 119:103, 104) ಇದು ನಮ್ಮನ್ನು, ಈ ಕಡೇ ದಿವಸಗಳಲ್ಲಿ ಅಹಂಕಾರಿಗಳನ್ನೂ, ಉಗ್ರತೆಯುಳ್ಳವರನ್ನೂ, ದೇವಭಯವಿಲ್ಲದ ಜನರನ್ನೂ ಎದುರುಗೊಳ್ಳುವಾಗ ಆಧ್ಯಾತ್ಮಿಕ ಹಾನಿಗೊಳಗಾಗುವುದರಿಂದ ಸಂರಕ್ಷಿಸುವುದು.​—⁠2 ತಿಮೊಥೆಯ 3:1-5.

ನಮ್ಮ ಕಾಲಿಗೆ ದೀಪ

7 ಯೆಹೋವನ ವಾಕ್ಯದಿಂದ ಬರುವ ಆಧ್ಯಾತ್ಮಿಕ ಬೆಳಕು ನಂದಿಹೋಗಲು ಸಾಧ್ಯವಿಲ್ಲ. (ಕೀರ್ತನೆ 119:105-112) ನಾವು ಅಭಿಷಿಕ್ತ ಕ್ರೈಸ್ತರಾಗಿರಲಿ ಅಥವಾ ಅವರ ಸಂಗಡಿಗರಾದ “ಬೇರೆ ಕುರಿ” ವರ್ಗಕ್ಕೆ ಸೇರಿದವರಾಗಿರಲಿ, ನಾವೆಲ್ಲರೂ ಘೋಷಿಸುವುದು: “ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ ನನ್ನ ದಾರಿಗೆ ಬೆಳಕೂ ಆಗಿದೆ.” (ಯೋಹಾನ 10:16; ಕೀರ್ತನೆ 119:105) ದೇವರ ವಾಕ್ಯವು ನಮ್ಮ ದಾರಿಯನ್ನು ಬೆಳಗಿಸುತ್ತಿರುವ ದೀಪದಂತಿದ್ದು, ನಾವು ಆಧ್ಯಾತ್ಮಿಕವಾಗಿ ಮುಗ್ಗರಿಸಿ ಬೀಳದಂತೆ ನಮಗೆ ಸಹಾಯಮಾಡುತ್ತದೆ. (ಜ್ಞಾನೋಕ್ತಿ 6:23) ಆದರೂ, ಯೆಹೋವನ ವಾಕ್ಯವು ನಮ್ಮ ಕಾಲಿಗೆ ದೀಪವಾಗಿರುವಂತೆ ನಾವು ವೈಯಕ್ತಿಕವಾಗಿ ಬಿಟ್ಟುಕೊಡಬೇಕು.

8 ನಾವು ಕೀರ್ತನೆ 119ರ ರಚನಕಾರನಂತೆ ದೃಢಚಿತ್ತರಾಗಿರುವುದು ಅವಶ್ಯ. ದೇವರ ನೇಮಗಳನ್ನು ತಪ್ಪಿಹೋಗುವದಿಲ್ಲ ಎಂಬ ದೃಢತೀರ್ಮಾನವನ್ನು ಅವನು ಮಾಡಿದ್ದನು. ಅವನು ಹೇಳಿದ್ದು: “ನಿನ್ನ [ಯೆಹೋವನ] ನೀತಿವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣಮಾಡಿದ್ದೇನೆ; ಅದನ್ನು ನೆರವೇರಿಸುವೆನು.” (ಕೀರ್ತನೆ 119:106) ಕ್ರಮವಾದ ಬೈಬಲ್‌ ಅಧ್ಯಯನ ಮತ್ತು ಕೂಟಗಳಲ್ಲಿ ಪಾಲ್ಗೋಳ್ಳುವುದರ ಮೌಲ್ಯವನ್ನು ನಾವೆಂದಿಗೂ ಕಡಿಮೆ ಅಂದಾಜು ಮಾಡದಿರೋಣ.

9 ಕೀರ್ತನೆಗಾರನು ‘ದೇವರ ನೇಮಗಳಿಂದ ತಪ್ಪಿಹೋಗಲಿಲ್ಲ.’ ಆದರೆ ಯೆಹೋವನಿಗೆ ಸಮರ್ಪಿತನಾಗಿರುವ ಒಬ್ಬ ವ್ಯಕ್ತಿಯ ವಿಷಯದಲ್ಲಿ ಇದು ಸಂಭವಿಸಸಾಧ್ಯವಿದೆ. (ಕೀರ್ತನೆ 119:110) ರಾಜ ಸೊಲೊಮೋನನು ಯೆಹೋವನಿಗೆ ಸಮರ್ಪಿತವಾಗಿದ್ದ ಒಂದು ಜನಾಂಗದ ಸದಸ್ಯನಾಗಿದ್ದರೂ ಆದಿಯಲ್ಲಿ ದೇವದತ್ತ ವಿವೇಕದಿಂದ ವರ್ತಿಸಿದನಾದರೂ ತದನಂತರ ತಪ್ಪಿಹೋದನು. ಸುಳ್ಳು ದೇವರುಗಳನ್ನು ಆರಾಧಿಸುವಂತೆ ಅವನ ಮನವೊಲಿಸುವ ಮೂಲಕ “ಅನ್ಯದೇಶಸ್ತ್ರೀಯರು ಅವನನ್ನು ಪಾಪದಲ್ಲಿ ಬೀಳಿಸಿದರು.”​—⁠ನೆಹೆಮೀಯ 13:26; 1 ಅರಸುಗಳು 11:1-6.

10 ‘ಬೇಟೆಗಾರನಾಗಿರುವ’ ಸೈತಾನನು ಅನೇಕ ಬಲೆಗಳನ್ನು ಹರಡಿ ಇಡುತ್ತಾನೆ. (ಕೀರ್ತನೆ 91:3) ದೃಷ್ಟಾಂತಕ್ಕೆ, ಹಿಂದೆ ನಮ್ಮ ಜೊತೆ ಆರಾಧಕನಾಗಿದ್ದ ಒಬ್ಬ ವ್ಯಕ್ತಿ ಆಧಾತ್ಮಿಕ ಬೆಳಕಿನ ಮಾರ್ಗದಿಂದ ಧರ್ಮಭ್ರಷ್ಟತೆಯ ಕಗ್ಗತ್ತಲೆಗೆ ದಾರಿತಪ್ಪಿಹೋಗುವಂತೆ ನಮ್ಮನ್ನು ಮನವೊಲಿಸಲು ಪ್ರಯತ್ನಿಸಬಹುದು. ಥುವತೈರದ ಕ್ರೈಸ್ತರ ಮಧ್ಯೆ “ಯೆಜೆಬೇಲೆಂಬ ಆ ಹೆಂಗಸು” ಇದ್ದಳು. ಇದು ವಿಗ್ರಹಾರಾಧನೆಯನ್ನು ಆಚರಿಸುವಂತೆ ಮತ್ತು ವ್ಯಭಿಚಾರವನ್ನು ಮಾಡುವಂತೆ ಇತರರಿಗೆ ಬೋಧಿಸುತ್ತಿದ್ದ ಸ್ತ್ರೀಯರ ಒಂದು ಗುಂಪಾಗಿದ್ದಿರಬಹುದು. ಇಂತಹ ದುಷ್ಕೃತ್ಯಗಳನ್ನು ಯೇಸು ತಾಳಿಕೊಳ್ಳಲಿಲ್ಲ, ಮತ್ತು ನಮ್ಮ ವಿಷಯದಲ್ಲೂ ಇದೇ ಸತ್ಯವಾಗಿರಬೇಕು. (ಪ್ರಕಟನೆ 2:18-22; ಯೂದ 3, 4) ಆದುದರಿಂದ, ನಾವು ಯೆಹೋವನ ನೇಮಗಳಿಂದ ತಪ್ಪಿಹೋಗದೆ ದೈವಿಕ ಬೆಳಕಿನಲ್ಲಿ ಉಳಿಯಲು ನಮಗೆ ಸಹಾಯಮಾಡುವಂತೆ ಆತನಲ್ಲಿ ಬೇಡಿಕೊಳ್ಳೋಣ.​—⁠ಕೀರ್ತನೆ 119:111, 112.

ದೇವರ ವಾಕ್ಯದಿಂದ ಪೋಷಿಸಿ ಬಲಪಡಿಸಲ್ಪಡುವುದು

11 ನಾವು ದೇವರ ನಿಬಂಧನೆಗಳನ್ನು ತಪ್ಪಿ ನಡೆಯದೇ ಇರುವುದಾದರೆ, ಆತನು ನಮ್ಮನ್ನು ಪೋಷಿಸಿ ಬಲಪಡಿಸುವನು. (ಕೀರ್ತನೆ 119:113-120) ಇಂದು ಕ್ರೈಸ್ತರೆಂದು ಹೇಳಿಕೊಳ್ಳುವವರ ಉಗುರುಬೆಚ್ಚಗಿನ ಸ್ಥಿತಿಯನ್ನು ಯೇಸು ಹೇಗೆ ಅಸಮ್ಮತಿಸುತ್ತಾನೋ ಹಾಗೆಯೇ ನಾವು ಕೂಡ “ಚಪಲಚಿತ್ತರನ್ನು” ಅಥವಾ ಅರ್ಧಮನಸ್ಸಿನವರನ್ನು ಸಮ್ಮತಿಸುವುದಿಲ್ಲ. (ಕೀರ್ತನೆ 119:113; ಪ್ರಕಟನೆ 3:16) ನಾವು ಯೆಹೋವನನ್ನು ಪೂರ್ಣಮನಸ್ಸಿನಿಂದ ಸೇವಿಸುವುದರಿಂದ, ಆತನು ನಮ್ಮ ‘ಆಶ್ರಯವಾಗಿರುವನು’ ಮತ್ತು ನಮ್ಮನ್ನು ಪೋಷಿಸಿ ಬಲಪಡಿಸುವನು ಕೂಡ. ಕುಯುಕ್ತಿಯ ಮರೆಹೋಗುವ ಮೂಲಕ ಯಾರು ‘ಆತನ ನಿಬಂಧನೆಗಳನ್ನು ತಪ್ಪಿದ್ದಾರೋ’ ಅಂಥವರನ್ನು ಯೆಹೋವನು ‘ತಳ್ಳಿಬಿಡುತ್ತಾನೆ.’ (ಕೀರ್ತನೆ 119:114, 117, 118; ಜ್ಞಾನೋಕ್ತಿ 3:32) ಯೆಹೋವನು ಇಂತಹ ದುಷ್ಟರನ್ನು ಚಿನ್ನ ಮತ್ತು ಬೆಳ್ಳಿಯಂತಹ ಬೆಲೆಬಾಳುವ ಲೋಹಗಳಿಂದ ತೆಗೆಯಲ್ಪಡುವ ಕಶ್ಮಲಗಳಂತೆ, ಅಥವಾ “ಕಿಟ್ಟದಂತೆ” ವೀಕ್ಷಿಸುತ್ತಾನೆ. (ಕೀರ್ತನೆ 119:119; ಜ್ಞಾನೋಕ್ತಿ 17:3) ನಾವು ದೇವರ ಮರುಜ್ಞಾಪನಗಳಿಗಾಗಿ ಯಾವಾಗಲೂ ಪ್ರೀತಿಯನ್ನು ತೋರಿಸೋಣ, ಏಕೆಂದರೆ ನಾಶನಕ್ಕೆ ಒಳಪಡಿಸಲ್ಪಡಲಿರುವ ಕಶ್ಮಲದ ರಾಶಿಯಲ್ಲಿ ದುಷ್ಟರೊಂದಿಗೆ ಸೇರಿಕೊಳ್ಳಲು ನಾವು ಖಂಡಿತವಾಗಿಯೂ ಬಯಸುವುದಿಲ್ಲ!

12 “ನಿನ್ನ [ಯೆಹೋವನ] ಭಯದಿಂದ ನನ್ನ ಮಾಂಸವು ಕಂಪಿಸುತ್ತದೆ” ಎಂದು ಕೀರ್ತನೆಗಾರನು ಬರೆದನು. (ಕೀರ್ತನೆ 119:120) ದೇವರು ನಮ್ಮನ್ನು ಆತನ ಸೇವಕರಾಗಿ ಪೋಷಿಸಿ ಬಲಪಡಿಸಬೇಕಾದರೆ, ನಾವು ಆತನ ಕಡೆಗೆ ಹಿತಕರವಾದ ಭಯವನ್ನು ಹೊಂದಿರುವುದು ಪ್ರಾಮುಖ್ಯ. ಆತನು ಅಸಮ್ಮತಿಸುವುದನ್ನು ಮಾಡದೇ ಇರುವ ಮೂಲಕ ಇದನ್ನು ನಾವು ತೋರಿಸಬಲ್ಲೆವು. ಯೆಹೋವನ ಕಡೆಗಿದ್ದ ಪೂಜ್ಯಭಾವನೆಯ ಭಯವು ನೀತಿವಂತಿಕೆಯ ಜೀವನವನ್ನು ನಡೆಸುವಂತೆ ಯೋಬನಿಗೆ ಸಾಧ್ಯಮಾಡಿತು. (ಯೋಬ 1:1; 23:15) ನಾವು ಏನನ್ನೇ ತಾಳಿಕೊಳ್ಳಬೇಕಾಗಿ ಬರುವುದಾದರೂ, ದೈವಾನುಗ್ರಹಿತ ಮಾರ್ಗದಲ್ಲಿ ಮುಂದುವರಿಯುವಂತೆ ದೇವಭಯವು ನಮಗೆ ಸಾಧ್ಯಗೊಳಿಸಬಲ್ಲದು. ತಾಳ್ಮೆಗಾದರೋ ನಂಬಿಕೆಯಿಂದ ಮಾಡಲ್ಪಡುವ ಪ್ರಾರ್ಥನೆಗಳು ಅಗತ್ಯ.​—⁠ಯಾಕೋಬ 5:⁠15.

ನಂಬಿಕೆಯಿಂದ ಪ್ರಾರ್ಥಿಸಿರಿ

13 ದೇವರು ನಮ್ಮ ಪರವಾಗಿ ಕ್ರಿಯೆಗೈಯುವನು ಎಂಬ ಖಾತ್ರಿಯಿಂದ ನಾವು ಪ್ರಾರ್ಥಿಸಸಾಧ್ಯವಿದೆ. (ಕೀರ್ತನೆ 119:121-128) ಕೀರ್ತನೆಗಾರನಂತೆ, ನಮ್ಮ ಪ್ರಾರ್ಥನೆಗಳು ಉತ್ತರಿಸಲ್ಪಡುವವು ಎಂಬ ಭರವಸೆ ನಮಗಿದೆ. ಏಕೆ? ಏಕೆಂದರೆ, ನಾವು ದೇವರ ಆಜ್ಞೆಗಳನ್ನು “ಬಂಗಾರಕ್ಕಿಂತಲೂ,” ಅಷ್ಟೇಕೆ “ಅಪರಂಜಿಗಿಂತಲೂ” ಹೆಚ್ಚಾಗಿ ಪ್ರೀತಿಸುತ್ತೇವೆ. ಮಾತ್ರವಲ್ಲದೆ, ‘ದೇವರ ಎಲ್ಲಾ ನೇಮಗಳು ನ್ಯಾಯವಾಗಿವೆ ಎಂದು ನಾವು ಒಪ್ಪಿಕೊಳ್ಳುತ್ತೇವೆ.’​—⁠ಕೀರ್ತನೆ 119:127, 128.

14 ನಾವು ನಂಬಿಕೆಯಿಂದ ಪ್ರಾರ್ಥಿಸುವುದರಿಂದ ಮತ್ತು ಆತನ ನೇಮಗಳಿಗೆ ಅನುಸಾರವಾಗಿ ನಡೆಯುವುದರಿಂದ ಯೆಹೋವನು ನಮ್ಮ ಬಿನ್ನಹಗಳಿಗೆ ಕಿವಿಗೊಡುತ್ತಾನೆ. (ಕೀರ್ತನೆ 65:2) ಆದರೆ ಕೆಲವೊಮ್ಮೆ ನಮ್ಮನ್ನು ತಬ್ಬಿಬ್ಬುಗೊಳಿಸುವಂಥ ಸಮಸ್ಯೆಗಳಲ್ಲಿ ನಾವು ಸಿಲುಕಿಕೊಂಡು ಪ್ರಾರ್ಥನೆಯಲ್ಲಿ ಏನು ಹೇಳಬೇಕೆಂಬುದೇ ತೋಚದಿರುವಲ್ಲಿ ಆಗೇನು? ಆಗ, “ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ.” (ರೋಮಾಪುರ 8:26, 27) ಇಂಥ ಸಂದರ್ಭಗಳಲ್ಲಿ, ಆತನ ವಾಕ್ಯದಲ್ಲಿ ನಮ್ಮ ಅಗತ್ಯಗಳನ್ನು ಪ್ರತಿನಿಧಿಸುವಂಥ ಪ್ರಾರ್ಥನಾ ಅಭಿವ್ಯಕ್ತಿಗಳನ್ನು ದೇವರು ಸ್ವೀಕರಿಸುತ್ತಾನೆ.

15 ನಮ್ಮ ‘ಮಾತಿಲ್ಲದಂಥ ನರಳಾಟಗಳಿಗೆ’ ಹೊಂದಿಕೆಯಲ್ಲಿರುವ ಅನೇಕ ಪ್ರಾರ್ಥನೆಗಳು ಮತ್ತು ಆಲೋಚನೆಗಳು ಶಾಸ್ತ್ರವಚನಗಳಲ್ಲಿವೆ. ಉದಾಹರಣೆಗೆ, ಕೀರ್ತನೆ 119:​121-128ನ್ನು ಪರಿಗಣಿಸಿರಿ. ಇಲ್ಲಿ ವಿಷಯಗಳು ವ್ಯಕ್ತಪಡಿಸಲ್ಪಟ್ಟಿರುವ ರೀತಿಯು ನಮ್ಮ ಪರಿಸ್ಥಿತಿಗಳೊಂದಿಗೆ ಸರಿಹೋಲಬಹುದು. ಒಂದುವೇಳೆ ನಾವು ಗರ್ವಿಷ್ಠರಿಂದ ಮೋಸಕ್ಕೊಳಗಾಗಿರುವುದಾದರೆ, ಕೀರ್ತನೆಗಾರನಂತೆ ನಾವು ದೇವರ ಸಹಾಯಕ್ಕಾಗಿ ಬೇಡಿಕೊಳ್ಳಬಹುದು. (ವಚನಗಳು 121-123) ಇಲ್ಲವೆ, ನಾವು ತುಂಬ ಕಷ್ಟಕರವಾದ ಒಂದು ನಿರ್ಣಯವನ್ನು ಮಾಡಲಿಕ್ಕಿದೆ ಎಂದಿಟ್ಟುಕೊಳ್ಳಿ. ಆಗ ನಾವು ಯೆಹೋವನ ಆತ್ಮಕ್ಕಾಗಿ ಕೇಳಿಕೊಳ್ಳುತ್ತಾ, ಅದು ನಮಗೆ ಆತನ ಮರುಜ್ಞಾಪನಗಳನ್ನು ಜ್ಞಾಪಕಕ್ಕೆ ತರುವಂತೆ ಮತ್ತು ಅವನ್ನು ಅನ್ವಯಿಸಿಕೊಳ್ಳಲು ಸಹಾಯಮಾಡುವಂತೆ ಪ್ರಾರ್ಥಿಸಬಲ್ಲೆವು. (ವಚನಗಳು 124, 125) ನಾವು ‘ಎಲ್ಲಾ ಮಿಥ್ಯಾಮಾರ್ಗಗಳನ್ನು ಹಗೆಮಾಡುವುದಾದರೂ,’ ಆತನ ಧರ್ಮಶಾಸ್ತ್ರವನ್ನು ಅಥವಾ ನಿಯಮವನ್ನು ಉಲ್ಲಂಘಿಸುವ ಪ್ರಲೋಭನೆಗೆ ಒಳಗಾಗದಂತೆ ನಮಗೆ ಸಹಾಯಮಾಡಬೇಕೆಂದು ನಾವು ದೇವರಲ್ಲಿ ಕೇಳಿಕೊಳ್ಳುವುದು ಅಗತ್ಯವಾಗಿರಬಹುದು. (ವಚನಗಳು 126-128) ನಾವು ಬೈಬಲನ್ನು ದಿನಾಲೂ ಓದುವುದಾದರೆ, ನಾವು ಯೆಹೋವನಿಗೆ ಪ್ರಾರ್ಥಿಸುವಾಗ ಇಂತಹ ಸಹಾಯಕರ ವಚನಭಾಗಗಳು ನಮ್ಮ ಮನಸ್ಸಿಗೆ ಬರಬಹುದು.

ಯೆಹೋವನ ಮರುಜ್ಞಾಪನಗಳಿಂದ ಸಹಾಯ

16 ನಮ್ಮ ಪ್ರಾರ್ಥನೆಗಳು ಲಾಲಿಸಲ್ಪಡಬೇಕಾದರೆ ಮತ್ತು ನಮಗೆ ದೈವಾನುಗ್ರಹ ಬೇಕಾಗಿರುವುದಾದರೆ, ನಾವು ದೇವರ ಮರುಜ್ಞಾಪನಗಳಿಗೆ ಕಿವಿಗೊಡಬೇಕು. (ಕೀರ್ತನೆ 119:129-136) ನಮ್ಮಲ್ಲಿ ಮರೆಗುಳಿತನ ಇರುವುದರಿಂದ, ನಮಗೆ ಯೆಹೋವನ ಅದ್ಭುತಕರ ಮರುಜ್ಞಾಪನಗಳು ಬೇಕಾಗಿವೆ. ಈ ಮರುಜ್ಞಾಪನಗಳು ಆತನ ಉಪದೇಶ ಮತ್ತು ಆಜ್ಞೆಗಳನ್ನು ನೆನಪಿಗೆ ತರುತ್ತವೆ. ವಾಸ್ತವದಲ್ಲಿ, ಆಧ್ಯಾತ್ಮಿಕ ಬೆಳಕು ದೇವರ ವಾಕ್ಯಗಳ ಕುರಿತು ಹೊಸ ವಿಷಯಗಳನ್ನು ಅನಾವರಣಗೊಳಿಸುವಾಗ ನಾವು ಸಂತೋಷಿಸುತ್ತೇವೆ. (ಕೀರ್ತನೆ 119:129, 130) ಇತರರು ಯೆಹೋವನ ನಿಯಮವನ್ನು ಉಲ್ಲಂಘಿಸುವುದರಿಂದ ‘ನಮಗೆ ಕಣ್ಣೀರು ಪ್ರವಾಹವಾಗಿ ಹರಿಯುವುದಾದರೂ,’ ಯೆಹೋವನು ನಮ್ಮನ್ನು ‘ಪ್ರಸನ್ನಮುಖದಿಂದ ನೋಡುತ್ತಾನೆ’ ಎಂಬ ವಿಚಾರದಿಂದಲೂ ನಾವು ಉಪಕಾರ ಸ್ಮರಿಸುತ್ತೇವೆ.​—⁠ಕೀರ್ತನೆ 119:135, 136; ಅರಣ್ಯಕಾಂಡ 6:25.

17 ನಾವು ದೇವರ ನೀತಿಯ ಮರುಜ್ಞಾಪನಗಳಿಗೆ ಹೊಂದಿಕೆಯಲ್ಲಿ ನಡೆಯುವುದಾದರೆ ನಮ್ಮ ಮೇಲೆ ದೈವಾನುಗ್ರಹ ಸದಾ ಇರುವುದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. (ಕೀರ್ತನೆ 119:137-144) ತನ್ನ ಮರುಜ್ಞಾಪನಗಳನ್ನು ನಮ್ಮ ಗಮನಕ್ಕೆ ತಂದು, ಅವನ್ನು ಆಜ್ಞೆಗಳಂತೆ ವಿಧಿಸಿ ಅವುಗಳಿಗೆ ವಿಧೇಯರಾಗಬೇಕೆಂದು ಅಪೇಕ್ಷಿಸುವ ಹಕ್ಕು ಆತನಿಗಿದೆ ಎಂಬುದನ್ನು ಯೆಹೋವನ ಸೇವಕರಾಗಿರುವ ನಾವು ಅಂಗೀಕರಿಸುತ್ತೇವೆ. (ಕೀರ್ತನೆ 119:138) ಕೀರ್ತನೆಗಾರನು ದೇವರ ಆಜ್ಞೆಗಳಿಗೆ ವಿಧೇಯನಾಗಿದ್ದನಾದರೂ, “ನಾನು ಅಲ್ಪನೂ ತಿರಸ್ಕಾರಹೊಂದಿದವನೂ ಆಗಿದ್ದೇನೆ” ಎಂದು ಹೇಳಿದ್ದೇಕೆ? (ಕೀರ್ತನೆ 119:141) ಅವನು ತನ್ನ ವಿರೋಧಿಗಳು ವೀಕ್ಷಿಸುತ್ತಿದ್ದ ರೀತಿಗೆ ಸೂಚಿಸುತ್ತಿದ್ದಿರಬಹುದು ಎಂದು ತೋರುತ್ತದೆ. ನಾವು ರಾಜಿಮಾಡಿಕೊಳ್ಳದೆ ನೀತಿಯ ಪಕ್ಷದಲ್ಲಿ ನಿಲ್ಲುವುದಾದರೆ, ಇತರರು ನಮ್ಮನ್ನು ತುಚ್ಛೀಕಾರದಿಂದ ನೋಡಬಹುದು. ಆದರೂ, ನಾವು ಯೆಹೋವನ ನೀತಿಯ ಮರುಜ್ಞಾಪನಗಳಿಗೆ ತಕ್ಕ ಹಾಗೆ ಜೀವಿಸುವ ಕಾರಣದಿಂದ ಆತನು ನಮ್ಮನ್ನು ಅನುಗ್ರಹದೃಷ್ಟಿಯಿಂದ ನೋಡುವುದೇ ನಮಗೆ ಪ್ರಾಮುಖ್ಯ.

ಸುಭದ್ರರು ಮತ್ತು ಸಮಾಧಾನದಿಂದಿರುವವರು

18 ನಾವು ದೇವರ ಮರುಜ್ಞಾಪನಗಳಿಗೆ ತಕ್ಕ ಹಾಗೆ ನಡೆದುಕೊಳ್ಳುವಾಗ ಆತನ ಸಮೀಪ ಉಳಿಯುತ್ತೇವೆ. (ಕೀರ್ತನೆ 119:145-152) ನಾವು ಯೆಹೋವನ ಮರುಜ್ಞಾಪನಗಳಿಗೆ ಗಮನಕೊಡುವುದರಿಂದ, ಆತನನ್ನು ಪೂರ್ಣಮನಸ್ಸಿನಿಂದ ಪ್ರಾರ್ಥನೆಯಲ್ಲಿ ಸಮೀಪಿಸಬಲ್ಲೆವು ಮತ್ತು ನಮ್ಮ ಪ್ರಾರ್ಥನೆಗೆ ಆತನು ಕಿವಿಗೊಡುವನೆಂದೂ ನಾವು ನಿರೀಕ್ಷಿಸಸಾಧ್ಯವಿದೆ. ನಾವು ‘ಅರುಣೋದಯದಲ್ಲೇ’ ಎದ್ದು ಆತನಿಗೆ ಮೊರೆಯಿಡಬಲ್ಲೆವು. ಪ್ರಾರ್ಥಿಸಲು ಇದೆಂಥ ಉತ್ತಮ ಸಮಯ! (ಕೀರ್ತನೆ 119:145-147) ನಾವು ಕೆಟ್ಟದ್ದನ್ನು ತ್ಯಜಿಸುವುದರಿಂದ ಮತ್ತು ಯೇಸುವಿನಂತೆ ದೇವರ ವಾಕ್ಯವನ್ನು ಸತ್ಯವೆಂದು ವೀಕ್ಷಿಸುವುದರಿಂದ ದೇವರು ಸಹ ನಮ್ಮ ಸಮೀಪದಲ್ಲಿದ್ದಾನೆ. (ಕೀರ್ತನೆ 119:150, 151; ಯೋಹಾನ 17:17) ಯೆಹೋವನೊಂದಿಗೆ ನಾವು ಹೊಂದಿರುವ ಸಂಬಂಧವು ನಮ್ಮನ್ನು ಈ ಗೊಂದಲಭರಿತ ಲೋಕದಲ್ಲಿ ಪೋಷಿಸಿ ಬಲಪಡಿಸುತ್ತದೆ ಮತ್ತು ಅರ್ಮಗೆದೋನೆಂಬ ಆತನ ಮಹಾ ಯುದ್ಧದ ಸಮಯದಲ್ಲಿಯೂ ಅದು ನಮ್ಮನ್ನು ಪೋಷಿಸುವುದು.​—⁠ಪ್ರಕಟನೆ 7:9, 14; 16:13-16.

19 ದೇವರ ವಾಕ್ಯಕ್ಕಾಗಿ ನಾವು ಹೊಂದಿರುವ ಆಳವಾದ ಗೌರವದಿಂದಾಗಿ ನಾವು ನಿಜವಾದ ಭದ್ರತೆಯನ್ನು ಅನುಭವಿಸುತ್ತೇವೆ. (ಕೀರ್ತನೆ 119:153-160) ದುಷ್ಟರಂತೆ, ನಾವು ‘ಯೆಹೋವನ [ಮರುಜ್ಞಾಪನಗಳನ್ನು] ಬಿಟ್ಟು ನಡೆದಿರುವುದಿಲ್ಲ.’ ದೇವರ ನೇಮಗಳು ನಮಗೆ ಎಷ್ಟೋ ಪ್ರಿಯವಾಗಿವೆ, ಮತ್ತು ಈ ಕಾರಣದಿಂದ ನಾವು ಆತನ ಕೃಪೆಯಲ್ಲಿ ಅಥವಾ ಪ್ರೀತಿಪೂರ್ವಕ ದಯೆಯಲ್ಲಿ ಸುಭದ್ರವಾಗಿದ್ದೇವೆ. (ಕೀರ್ತನೆ 119:157-159) ನಿರ್ದಿಷ್ಟ ಪರಿಸ್ಥಿತಿಗಳನ್ನು ಎದುರಿಸುವಾಗ ನಾವೇನನ್ನು ಮಾಡುವಂತೆ ಯೆಹೋವನು ನಿರೀಕ್ಷಿಸುತ್ತಾನೆ ಎಂಬುದನ್ನು ನೆನಪಿಗೆ ತಂದುಕೊಳ್ಳುವಂತೆ ಆತನ ಮರುಜ್ಞಾಪನಗಳು ನಮ್ಮ ಜ್ಞಾಪಕಶಕ್ತಿಯನ್ನು ಉದ್ರೇಕಿಸುತ್ತವೆ. ದೇವರ ನೇಮಗಳಾದರೋ ಮಾರ್ಗದರ್ಶಕಗಳಾಗಿರುತ್ತವೆ, ಮತ್ತು ನಮ್ಮ ಸೃಷ್ಟಿಕರ್ತನಿಗೆ ನಮ್ಮನ್ನು ಮಾರ್ಗದರ್ಶಿಸುವ ಹಕ್ಕಿದೆ ಎಂಬುದನ್ನು ನಾವು ಸಿದ್ಧಮನಸ್ಸಿನಿಂದ ಅಂಗೀಕರಿಸುತ್ತೇವೆ. ‘ದೇವರ ವಾಕ್ಯದ ಸಾರಾಂಶವು ಸತ್ಯ’ವಾಗಿದೆ ಎಂಬುದನ್ನು ಮತ್ತು ನಾವು ಸ್ವತಃ ಸರಿಯಾದ ಕಡೆ ನಮ್ಮ ಹೆಜ್ಜೆಯನ್ನಿಡಲಾರೆವು ಎಂಬುದನ್ನು ಮನಗಂಡವರಾಗಿ, ನಾವು ದೈವಿಕ ಮಾರ್ಗದರ್ಶನವನ್ನು ಸಂತೋಷದಿಂದ ಸ್ವೀಕರಿಸುತ್ತೇವೆ.​—⁠ಕೀರ್ತನೆ 119:160; ಯೆರೆಮೀಯ 10:23.

20 ಯೆಹೋವನ ಧರ್ಮಶಾಸ್ತ್ರಕ್ಕಾಗಿರುವ ಅಥವಾ ನಿಯಮಕ್ಕಾಗಿರುವ ನಮ್ಮ ಪ್ರೀತಿಯು ನಮಗೆ ಸಂಪೂರ್ಣಸಮಾಧಾನವನ್ನು ತರುತ್ತದೆ. (ಕೀರ್ತನೆ 119:161-168) ಹೋಲಿಸಲಸಾಧ್ಯವಾದ ‘ದೇವಶಾಂತಿಯನ್ನು’ ಹಿಂಸೆಯು ನಮ್ಮಿಂದ ಕಸಿದುಕೊಳ್ಳುವುದಿಲ್ಲ. (ಫಿಲಿಪ್ಪಿ 4:6, 7) ನಾವು ಯೆಹೋವನ ನೀತಿವಿಧಿಗಳನ್ನು ಎಷ್ಟು ಮಾನ್ಯಮಾಡುತ್ತೇವೆಂದರೆ, ಅವನ್ನು ಕೊಟ್ಟದ್ದಕ್ಕಾಗಿ ನಾವು ಆತನನ್ನು “ದಿನಕ್ಕೆ ಏಳು ಸಾರಿ” ಅಂದರೆ ಅನೇಕಬಾರಿ ಕೊಂಡಾಡುತ್ತೇವೆ. (ಕೀರ್ತನೆ 119:161-164) “ನಿನ್ನ ಧರ್ಮಶಾಸ್ತ್ರವನ್ನು ಪ್ರೀತಿಸುವವರಿಗೆ ಸಂಪೂರ್ಣಸಮಾಧಾನವಿರುತ್ತದೆ; ಅಂಥವರಿಗೆ ವಿಘ್ನಕರವಾದದ್ದೇನೂ ಇರುವದಿಲ್ಲ” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 119:165) ನಾವು ವೈಯಕ್ತಿಕವಾಗಿ ಯೆಹೋವನ ಧರ್ಮಶಾಸ್ತ್ರವನ್ನು ಅಥವಾ ನಿಮಯವನ್ನು ಪ್ರೀತಿಸಿ ಅದನ್ನು ಕೈಕೊಳ್ಳುವುದಾದರೆ, ಇತರರು ಏನು ಮಾಡುತ್ತಾರೋ ಅದರಿಂದಲೂ ಅಥವಾ ಬೇರಾವುದೇ ವಿಷಯದಿಂದಲೂ ನಾವು ಆಧ್ಯಾತ್ಮಿಕವಾಗಿ ಮುಗ್ಗರಿಸಿ ಬೀಳುವುದಿಲ್ಲ.

21 ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವ ಅನೇಕ ವ್ಯಕ್ತಿಗಳು ಯಾವುದೇ ಒಂದು ವಿಷಯವು ತಮಗೆ ನಿರಂತರವಾದ ವಿಘ್ನವಾಗಿ ಇರುವಂತೆ ಬಿಡಲಿಲ್ಲ. ಉದಾಹರಣೆಗೆ, ದಿಯೋತ್ರೇಫನ ಅದೈವಿಕ ನಡತೆಯಿಂದಾಗಿ ಕ್ರೈಸ್ತನಾಗಿದ್ದ ಗಾಯನು ಎಡವಿ ಬೀಳಲಿಲ್ಲ, ಬದಲಿಗೆ ‘ಸತ್ಯದಲ್ಲಿ ನಡೆಯುತ್ತಾ’ ಮುಂದುವರಿದನು. (3 ಯೋಹಾನ 1-3, 9, 10) ಕ್ರೈಸ್ತ ಸ್ತ್ರೀಯರಾದ ಯುವೊದ್ಯ ಮತ್ತು ಸಂತುಕೆಗೆ, “ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರ್ರಿ” ಎಂದು ಪೌಲನು ಹೇಳಿದನು. ಅವರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾದುದರಿಂದ ಅವನು ಹೀಗೆ ಹೇಳಿರಬಹುದು. ಕಾಲಕ್ರಮೇಣ, ಅವರು ತಮ್ಮ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವಂತೆ ಅವರಿಗೆ ಸಹಾಯವು ಕೊಡಲ್ಪಟ್ಟಿತು ಎಂದು ತೋರುತ್ತದೆ ಮತ್ತು ಅವರು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಮುಂದುವರಿದರು. (ಫಿಲಿಪ್ಪಿ 4:2, 3) ಆದುದರಿಂದ, ಯಾವುದೇ ರೀತಿಯ ಸಮಸ್ಯೆಗಳು ಸಭೆಯಲ್ಲಿ ತೋರಿಕೊಳ್ಳುವುದಾದರೂ ಅದರಿಂದ ನಾವು ಎಡವಲು ಕಾರಣವಿರುವುದಿಲ್ಲ. ಹೀಗಾಗಿ, ‘ನಮ್ಮ ನಡತೆಯೆಲ್ಲಾ ಆತನಿಗೆ ಗೊತ್ತದೆ’ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು, ಯೆಹೋವನ ನೇಮಗಳನ್ನು ಕೈಕೊಳ್ಳುವುದರ ಮೇಲೆ ಗಮನವನ್ನು ಕೇಂದ್ರೀಕರಿಸೋಣ. (ಕೀರ್ತನೆ 119:168; ಜ್ಞಾನೋಕ್ತಿ 15:3) ಆಗ ಈ ‘ಸಂಪೂರ್ಣಸಮಾಧಾನವನ್ನು’ ನಮ್ಮಿಂದ ಯಾವುದೂ ನಿರಂತರವಾಗಿ ಕಸಿದುಕೊಳ್ಳಲಾರದು.

22 ನಾವು ಯೆಹೋವನಿಗೆ ಸದಾ ವಿಧೇಯರಾಗಿರುವುದಾದರೆ, ಆತನನ್ನು ಕೊಂಡಾಡುವ ಸುಯೋಗವನ್ನು ಸದಾ ಹೊಂದಿರುವೆವು. (ಕೀರ್ತನೆ 119:169-176) ಯೆಹೋವನ ನಿಬಂಧನೆಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ನಾವು ಆಧ್ಯಾತ್ಮಿಕ ಭದ್ರತೆಯನ್ನು ಪಡೆದುಕೊಳ್ಳುತ್ತೇವೆ ಮಾತ್ರವಲ್ಲ ‘ನಮ್ಮ ತುಟಿಗಳಿಂದ ಸ್ತುತಿ ಹೊರಡುತ್ತಿರುತ್ತದೆ’ ಕೂಡ. (ಕೀರ್ತನೆ 119:169-171, 174) ನಾವು ಈ ಕಡೇ ದಿವಸಗಳಲ್ಲಿ ಹೊಂದಿರಬಹುದಾದ ಅತಿ ದೊಡ್ಡ ಸುಯೋಗವು ಇದೇ ಆಗಿದೆ. ಕೀರ್ತನೆಗಾರನು ತನ್ನ ಪ್ರಾಣವನ್ನು ಉಳಿಸಿಕೊಂಡು ಯೆಹೋವನನ್ನು ಕೊಂಡಾಡುತ್ತಾ ಮುಂದುವರಿಯಲು ಬಯಸಿದನು, ಆದರೆ ಯಾವುದೋ ಅವ್ಯಕ್ತ ವಿಧದಲ್ಲಿ ಅವನು ‘ತಪ್ಪಿಹೋದ ಕುರಿಯಂತೆ ಅಲೆದಿದ್ದನು.’ (ಕೀರ್ತನೆ 119:175, 176) ಕ್ರೈಸ್ತ ಸಭೆಯಿಂದ ತಪ್ಪಿಹೋಗಿರುವವರು ಇನ್ನೂ ದೇವರನ್ನು ಪ್ರೀತಿಸುತ್ತಿರಬಹುದು ಮತ್ತು ಆತನನ್ನು ಸ್ತುತಿಸಲು ಬಯಸಬಹುದು. ಅಂಥವರು ಪುನಃ ಆಧ್ಯಾತ್ಮಿಕ ಭದ್ರತೆಯನ್ನು ಪಡೆದುಕೊಳ್ಳುವಂತೆ ಮತ್ತು ಯೆಹೋವನ ಜನರೊಂದಿಗೆ ಆತನನ್ನು ಸ್ತುತಿಸುವ ಸಂತೋಷವನ್ನು ಅನುಭವಿಸುವಂತೆ ಅವರಿಗೆ ಸಹಾಯಮಾಡಲು ನಾವು ನಮ್ಮಿಂದಾದ ಎಲ್ಲಾ ಪ್ರಯತ್ನವನ್ನು ಮಾಡೋಣ.​—⁠ಇಬ್ರಿಯ 13:15; 1 ಪೇತ್ರ 5:6, 7.

ನಮ್ಮ ದಾರಿಗೆ ನಂದಿಹೋಗದ ಬೆಳಕು

23ಕೀರ್ತನೆ 119 ನಮಗೆ ಹಲವಾರು ರೀತಿಗಳಲ್ಲಿ ಪ್ರಯೋಜನವನ್ನು ತರಬಲ್ಲದು. ಉದಾಹರಣೆಗೆ, ಅದು ನಮ್ಮನ್ನು ದೇವರ ಮೇಲೆ ಹೆಚ್ಚು ಅವಲಂಬಿಸುವಂತೆ ಮಾಡಬಲ್ಲದು. ಏಕೆಂದರೆ ‘ಯೆಹೋವನ ಧರ್ಮಶಾಸ್ತ್ರವನ್ನು’ ಅಥವಾ ನಿಮಯವನ್ನು ‘ಅನುಸರಿಸಿ ನಡೆಯುವದರಿಂದ’ ನಿಜವಾದ ಸಂತೋಷವು ಸಿಗುತ್ತದೆ ಎಂದು ಅದು ತೋರಿಸುತ್ತದೆ. (ಕೀರ್ತನೆ 119:1) ಮತ್ತು ‘ದೇವರ ವಾಕ್ಯದ ಸಾರಾಂಶವು ಸತ್ಯ’ವಾಗಿದೆ ಎಂದು ಕೀರ್ತನೆಗಾರನು ನಮಗೆ ಜ್ಞಾಪಕ ಹುಟ್ಟಿಸುತ್ತಾನೆ. (ಕೀರ್ತನೆ 119:160) ಇದು ದೇವರ ಒಟ್ಟು ಲಿಖಿತ ವಾಕ್ಯಕ್ಕಾಗಿರುವ ನಮ್ಮ ಗಣ್ಯತೆಯನ್ನು ಖಂಡಿತ ಹೆಚ್ಚಿಸಬೇಕು. ಕೀರ್ತನೆ 119ರ ಕುರಿತು ಧ್ಯಾನಿಸುವುದು, ಶಾಸ್ತ್ರವಚನಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವಂತೆ ನಮ್ಮನ್ನು ಪ್ರೇರಿಸಬೇಕು. ಕೀರ್ತನೆಗಾರನು, “ನಿನ್ನ ನಿಬಂಧನೆಗಳನ್ನು ನನಗೆ ಬೋಧಿಸು” ಎಂದು ದೇವರನ್ನು ಪದೇ ಪದೇ ಕೇಳಿಕೊಂಡನು. (ಕೀರ್ತನೆ 119:12, 68, 135) ಅವನು, “ಉತ್ಕೃಷ್ಟವಾದ ಜ್ಞಾನವಿವೇಕಗಳನ್ನು ನನಗೆ ಹೇಳಿಕೊಡು; ನಿನ್ನ ಆಜ್ಞೆಗಳನ್ನು ನಂಬಿಕೊಂಡಿದ್ದೇನಲ್ಲಾ” ಎಂದು ಸಹ ಪ್ರಾರ್ಥಿಸಿದನು. (ಕೀರ್ತನೆ 119:66) ನಾವು ಸಹ ಇದೇ ರೀತಿಯಲ್ಲಿ ಪ್ರಾರ್ಥಿಸಬೇಕು.

24 ದೈವಿಕ ಬೋಧನೆಯು ಯೆಹೋವನೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿರುವಂತೆ ಸಾಧ್ಯಮಾಡುತ್ತದೆ. ಕೀರ್ತನೆಗಾರನು ತನ್ನನ್ನು ದೇವರ ಸೇವಕನೆಂದು ಪದೇ ಪದೇ ಕರೆದನು. ವಾಸ್ತವದಲ್ಲಿ, ಅವನು ಯೆಹೋವನನ್ನು, “ನಾನು ನಿನ್ನವನು” ಎಂಬ ಮನಸ್ಪರ್ಶಿಸುವ ಮಾತುಗಳಲ್ಲಿ ಸಂಬೋಧಿಸಿದನು. (ಕೀರ್ತನೆ 119:17, 65, 94, 122, 125; ರೋಮಾಪುರ 14:8) ಆತನ ಸಾಕ್ಷಿಗಳಲ್ಲಿ ಒಬ್ಬರಾಗಿ ಯೆಹೋವನನ್ನು ಸೇವಿಸುವುದು ಮತ್ತು ಸ್ತುತಿಸುವುದು ಎಂಥ ಒಂದು ಸುಯೋಗವಾಗಿದೆ! (ಕೀರ್ತನೆ 119:7) ನೀವು ಒಬ್ಬ ರಾಜ್ಯ ಘೋಷಕರಾಗಿ ದೇವರನ್ನು ಸಂತೋಷದಿಂದ ಸೇವಿಸುತ್ತಿದ್ದೀರೋ? ಹೌದಾದರೆ, ನೀವು ಆತನ ವಾಕ್ಯದಲ್ಲಿ ಸದಾ ಭರವಸವುಳ್ಳವರಾಗಿದ್ದು ಅದು ನಿಮ್ಮ ದಾರಿಯನ್ನು ಬೆಳಗಿಸುವಂತೆ ಬಿಡುವುದಾದರೆ ಯೆಹೋವನು ನಿಮ್ಮ ಈ ಸುಯೋಗಭರಿತ ಚಟುವಟಿಕೆಗೆ ಬೆಂಬಲ ಮತ್ತು ಆಶೀರ್ವಾದವನ್ನು ನೀಡುವುದನ್ನು ಮುಂದುವರಿಸುವನು ಎಂಬ ವಿಷಯದಲ್ಲಿ ದೃಢನಿಶ್ಚಯವುಳ್ಳವರಾಗಿರಿ.

ನೀವು ಹೇಗೆ ಉತ್ತರಿಸುವಿರಿ?

• ನಾವು ದೇವರ ವಾಕ್ಯದಲ್ಲಿ ಆನಂದವನ್ನು ಕಂಡುಕೊಳ್ಳಬೇಕು ಏಕೆ?

• ನಾವು ದೇವರ ವಾಕ್ಯದಿಂದ ಪೋಷಿಸಿ ಬಲಪಡಿಸಲ್ಪಡುವುದು ಹೇಗೆ?

• ಯೆಹೋವನ ಮರುಜ್ಞಾಪನಗಳಿಂದ ನಮಗೆ ಯಾವ ವಿಧಗಳಲ್ಲಿ ಸಹಾಯವು ಸಿಗುತ್ತದೆ?

• ಯೆಹೋವನ ಜನರು ಏಕೆ ಸುಭದ್ರವಾಗಿಯೂ ಸಮಾಧಾನದಿಂದಲೂ ಇದ್ದಾರೆ?

[ಅಧ್ಯಯನ ಪ್ರಶ್ನೆಗಳು]

1, 2. ಯಾವ ಪರಿಸ್ಥಿತಿಗಳ ಕೆಳಗೆ ಯೆಹೋವನ ವಾಕ್ಯವು ನಮ್ಮ ದಾರಿಯನ್ನು ಬೆಳಗಿಸುವುದು?

3. ನಾವು ದೇವರ ವಾಕ್ಯದ ಮೇಲೆ ಭರವಸವಿಡಬಲ್ಲೆವು ಎಂಬುದನ್ನು ಕೀರ್ತನೆ 119:​89, 90 ಹೇಗೆ ತೋರಿಸುತ್ತದೆ?

4. ದೇವರ ಸೇವಕರು ಆಪತ್ತನ್ನು ಎದುರಿಸುವಾಗ ಆತನ ವಾಕ್ಯದಲ್ಲಿ ಅವರು ಕಂಡುಕೊಳ್ಳುವ ಆನಂದವು ಅವರಿಗೆ ಹೇಗೆ ಸಹಾಯಮಾಡುತ್ತದೆ?

5. ರಾಜ ಆಸನು ಯೆಹೋವನನ್ನು ಹುಡುಕಿದ್ದು ಹೇಗೆ?

6. ಯಾವ ಕ್ರಿಯಾಕ್ರಮವು ನಮ್ಮನ್ನು ಆಧ್ಯಾತ್ಮಿಕ ಹಾನಿಯಿಂದ ಸಂರಕ್ಷಿಸುವುದು?

7, 8. ಕೀರ್ತನೆ 119:105 ನಮ್ಮ ವಿಷಯದಲ್ಲಿ ಸತ್ಯವಾಗಿರಬೇಕಾದರೆ, ನಾವೇನು ಮಾಡುವುದು ಅವಶ್ಯ?

9, 10. ಯೆಹೋವನಿಗೆ ಸಮರ್ಪಿತರಾಗಿರುವ ವ್ಯಕ್ತಿಗಳು ‘ದೇವರ ನೇಮಗಳಿಂದ ತಪ್ಪಿಹೋಗಲು’ ಸಾಧ್ಯವಿದೆ ಎಂಬುದು ನಮಗೆ ಹೇಗೆ ತಿಳಿದಿದೆ, ಮತ್ತು ಇದರಿಂದ ಹೇಗೆ ದೂರವಿರಸಾಧ್ಯವಿದೆ?

11. ಕೀರ್ತನೆ 119:119ಕ್ಕನುಸಾರ, ದೇವರು ದುಷ್ಟರನ್ನು ಹೇಗೆ ವೀಕ್ಷಿಸುತ್ತಾನೆ?

12. ಯೆಹೋವನ ಭಯವು ಏಕೆ ಪ್ರಾಮುಖ್ಯ?

13-15 (ಎ) ನಮ್ಮ ಪ್ರಾರ್ಥನೆಗಳಿಗೆ ಉತ್ತರ ಸಿಗುವುದು ಎಂಬ ನಂಬಿಕೆ ನಮಗಿರಬಲ್ಲದೇಕೆ? (ಬಿ) ಪ್ರಾರ್ಥನೆಯಲ್ಲಿ ಏನನ್ನು ತಿಳಿಸಬೇಕೆಂಬುದೇ ನಮಗೆ ತೋಚದಿರುವಲ್ಲಿ ಏನು ಸಂಭವಿಸಬಹುದು? (ಸಿ) ಪ್ರಾರ್ಥನೆಯಲ್ಲಿ ನಮ್ಮ ‘ಮಾತಿಲ್ಲದಂಥ ನರಳಾಟಗಳೊಂದಿಗೆ’ ಕೀರ್ತನೆ 119:​121-128 ಹೇಗೆ ಸರಿಹೋಲಬಹುದು ಎಂಬುದನ್ನು ದೃಷ್ಟಾಂತಿಸಿರಿ.

16, 17. (ಎ) ನಮಗೆ ದೇವರ ಮರುಜ್ಞಾಪನಗಳು ಏಕೆ ಬೇಕಾಗಿವೆ, ಮತ್ತು ಅವನ್ನು ನಾವು ಹೇಗೆ ವೀಕ್ಷಿಸಬೇಕು? (ಬಿ) ಇತರರು ನಮ್ಮನ್ನು ಹೇಗೆ ನೋಡಬಹುದು, ಆದರೆ ನಮಗೆ ನಿಜವಾಗಿಯೂ ಯಾವುದು ಪ್ರಾಮುಖ್ಯ?

18, 19. ದೇವರ ಮರುಜ್ಞಾಪನಗಳಿಗೆ ತಕ್ಕ ಹಾಗೆ ನಡೆದುಕೊಳ್ಳುವುದರಿಂದ ಯಾವ ಫಲಿತಾಂಶ ಸಿಗುತ್ತದೆ?

20. ನಮಗೆ ಏಕೆ ‘ಸಂಪೂರ್ಣಸಮಾಧಾನವಿದೆ’?

21. ಸಭೆಯಲ್ಲಿ ಸಮಸ್ಯೆಗಳು ತೋರಿಕೊಳ್ಳುವುದಾದರೆ ನಾವು ಮುಗ್ಗರಿಸಿ ಬೀಳುವ ಅಗತ್ಯವಿಲ್ಲ ಎಂಬುದನ್ನು ಯಾವ ಶಾಸ್ತ್ರೀಯ ಉದಾಹರಣೆಗಳು ತೋರಿಸುತ್ತವೆ?

22. (ಎ) ನಾವು ದೇವರಿಗೆ ವಿಧೇಯರಾಗುವುದಾದರೆ ಯಾವ ಸುಯೋಗವು ಸಿಗುವುದು? (ಬಿ) ಕ್ರೈಸ್ತ ಸಭೆಯಿಂದ ತಪ್ಪಿಹೋಗಿರುವ ಕೆಲವರನ್ನು ನಾವು ಹೇಗೆ ವೀಕ್ಷಿಸಬೇಕು?

23, 24. ಕೀರ್ತನೆ 119ರಿಂದ ನೀವು ಯಾವ ಪ್ರಯೋಜನಗಳನ್ನು ಪಡೆದುಕೊಂಡಿದ್ದೀರಿ?

[ಪುಟ 16ರಲ್ಲಿರುವ ಚಿತ್ರ]

ದೇವರ ವಾಕ್ಯವು ಆಧ್ಯಾತ್ಮಿಕ ಬೆಳಕಿನ ಮೂಲವಾಗಿದೆ

[ಪುಟ 17ರಲ್ಲಿರುವ ಚಿತ್ರ]

ನಾವು ಯೆಹೋವನ ಮರುಜ್ಞಾಪನಗಳನ್ನು ಪ್ರೀತಿಸುವುದಾದರೆ, ಆತನು ನಮ್ಮನ್ನು ಎಂದಿಗೂ “ಕಿಟ್ಟದಂತೆ” ಪರಿಗಣಿಸನು

[ಪುಟ 18ರಲ್ಲಿರುವ ಚಿತ್ರಗಳು]

ನಾವು ಬೈಬಲನ್ನು ದಿನಾಲೂ ಓದುವುದಾದರೆ, ನಾವು ಪ್ರಾರ್ಥಿಸುವಾಗ ಸಹಾಯಕರ ವಚನಭಾಗಗಳು ಸುಲಭವಾಗಿ ನಮ್ಮ ಮನಸ್ಸಿಗೆ ಬರಬಹುದು