ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಯೇಸುವಿನ ಜನನವನ್ನು ಆಚರಿಸಲಿಕ್ಕಾಗಿ ಡಿಸೆಂಬರ್‌ 25ನ್ನು ಆರಿಸಿಕೊಂಡದ್ದರ ಹಿಂದೆ ಯಾವ ಕಾರಣವಿತ್ತು?

ದೇವರ ವಾಕ್ಯವು ಯೇಸುವಿನ ಜನನದ ಯಾವುದೇ ತಾರೀಖನ್ನು ನೀಡುವುದಿಲ್ಲ. ಎನ್‌ಸೀಕ್ಲೋಪೇಡ್ಯಾ ಈಸ್ಪಾನೀಕಾ ತಿಳಿಸುವುದು: “ಕ್ರಿಸ್ಮಸ್‌ ಆಚರಣೆಗಾಗಿ ಡಿಸೆಂಬರ್‌ 25ನೇ ತಾರೀಖನ್ನು ಆಯ್ಕೆಮಾಡಿದ್ದು ಯೇಸುವಿನ ಜನ್ಮದಿನದ ಕುರಿತಾದ ಸರಿಯಾದ ಲೆಕ್ಕಾಚಾರದ ಮೇಲಾಧಾರಿತವಾಗಿ ಅಲ್ಲ, ಬದಲಾಗಿ . . . ಮಕರ ಸಂಕ್ರಾಂತಿಯ ಹಬ್ಬಗಳ ಕ್ರೈಸ್ತೀಕರಣದ ಮೇಲಾಧಾರಿತವಾಗಿದೆ.” ಪ್ರಾಚೀನ ರೋಮನರು ಉಣ್ಣುವ, ಮೋಜುಮಾಡುವ ಮತ್ತು ಉಡುಗೊರೆಗಳನ್ನು ನೀಡುವ ಮೂಲಕ ಚಳಿಗಾಲದ ಬಾನಿನಲ್ಲಿ ಸೂರ್ಯನ ಉದಯಿಸುವಿಕೆಯನ್ನು ಆಚರಿಸುತ್ತಿದ್ದರು.​—⁠12/15, ಪುಟ 4-5.

• ಅಪೊಸ್ತಲರ ಕೃತ್ಯಗಳು 7:59ರಲ್ಲಿರುವ ಮಾತುಗಳು ಸ್ತೆಫನನು ಯೇಸುವಿಗೆ ಪ್ರಾರ್ಥಿಸಿದನು ಎಂದು ಅರ್ಥೈಸುತ್ತವೋ?

ಇಲ್ಲ. ಪ್ರಾರ್ಥನೆಯು ಯಾವಾಗಲೂ ಯೆಹೋವ ದೇವರಿಗೆ ಮಾತ್ರ ನಿರ್ದೇಶಿಸಲ್ಪಡಬೇಕು ಎಂದು ಬೈಬಲ್‌ ತೋರಿಸುತ್ತದೆ. ಆದರೆ ದರ್ಶನದಲ್ಲಿ ಯೇಸುವನ್ನು ನೋಡಿದಾಗ, ತಾನು ನೇರವಾಗಿ ಯೇಸುವಿಗೇ ಮೊರೆಯಿಡಬಹುದು ಎಂದು ಸ್ತೆಫನನಿಗೆ ಅನಿಸಿದ್ದಿರಬಹುದು, ಮತ್ತು ಈ ಕಾರಣದಿಂದ ಅವನು, “ಯೇಸುಸ್ವಾಮಿಯೇ, ನನ್ನಾತ್ಮವನ್ನು ಸೇರಿಸಿಕೋ” ಎಂದು ಹೇಳಿದನು. ಮೃತರನ್ನು ಉಜ್ಜೀವಿಸುವ ಅಧಿಕಾರವು ಯೇಸುವಿಗೆ ಕೊಡಲ್ಪಟ್ಟಿದೆ ಎಂಬುದನ್ನು ಸ್ತೆಫನನು ತಿಳಿದವನಾಗಿದ್ದನು. (ಯೋಹಾನ 5:​27-29) ಆದುದರಿಂದ, ಯೇಸು ತನ್ನನ್ನು ಪುನರುತ್ಥಾನಗೊಳಿಸುವ ದಿನದ ವರೆಗೆ ತನ್ನ ಆತ್ಮವನ್ನು ಅಥವಾ ಜೀವಶಕ್ತಿಯನ್ನು ಸಂರಕ್ಷಿಸಬೇಕೆಂದು ಸ್ತೆಫನನು ಅವನನ್ನು ಕೇಳಿಕೊಂಡನು ಅಥವಾ ಅವನಿಗೆ ಮೊರೆಯಿಟ್ಟನು.​—⁠1/1, ಪುಟ 31.

• ಒಬ್ಬ ವ್ಯಕ್ತಿಯ ಭವಿಷ್ಯವು ಮುಂಚಿತವಾಗಿಯೇ ನಿರ್ಧರಿಸಲ್ಪಟ್ಟಿಲ್ಲ ಎಂಬುದು ನಮಗೆ ಹೇಗೆ ಗೊತ್ತು?

ದೇವರು ಮನುಷ್ಯನಿಗೆ ಇಚ್ಛಾಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ, ಮತ್ತು ಇದರಲ್ಲಿ ಯಾವುದೇ ಪೂರ್ವಾದೃಷ್ಟವು ಒಳಗೂಡಿಲ್ಲ. ನಾವು ಯಾವ ಮಾರ್ಗಕ್ರಮವನ್ನು ಹಿಡಿಯುವೆವು ಎಂಬುದನ್ನು ಯೆಹೋವನೇ ನಿರ್ಧರಿಸಿಟ್ಟು, ತದನಂತರ ನಮ್ಮ ಕ್ರಿಯೆಗಳಿಗೆ ನಮ್ಮನ್ನು ಜವಾಬ್ದಾರರನ್ನಾಗಿ ಮಾಡುವುದಾದರೆ ಅದೆಷ್ಟು ಪ್ರೀತಿರಹಿತವೂ ಅನ್ಯಾಯವೂ ಆಗಿರುವುದು. (ಧರ್ಮೋಪದೇಶಕಾಂಡ 32:4; 1 ಯೋಹಾನ 4:8)​—⁠1/15, ಪುಟ 4-5.

• ಅದ್ಭುತಗಳು ಸಂಭವಿಸಲು ಸಾಧ್ಯವೇ ಇಲ್ಲ ಎಂದು ಹೇಳುವುದು ಏಕೆ ನ್ಯಾಯಸಮ್ಮತವಾಗಿರುವುದಿಲ್ಲ?

ದೇವರ ಸೃಷ್ಟಿಯಲ್ಲಿ ಕಂಡುಬರುವ ವೈಜ್ಞಾನಿಕ ಅದ್ಭುತಗಳ ಕುರಿತು ತಮಗೆ ಭಾಗಶಃ ಮಾತ್ರ ತಿಳಿದಿದೆ ಎಂಬುದನ್ನು ಅಂಗೀಕರಿಸುವ ಕೆಲವು ವಿಜ್ಞಾನಿಗಳು, ಯಾವುದೇ ವಿಷಯವು ಮುಂದೆ ಸಂಭವಿಸದೆಂದು ಖಚಿತವಾಗಿ ಹೇಳಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ. ಹೆಚ್ಚೆಂದರೆ ಅದು ಸಂಭವಿಸದಿರಬಹುದು ಎಂದು ಮಾತ್ರ ಹೇಳಲು ಅವರು ಸಿದ್ಧರಿದ್ದಾರೆ.​—⁠2/15, ಪುಟ 5-6.

• ಸಂಸೋನನು ಒಬ್ಬ ಫಿಲಿಷ್ಟಿಯ ಹೆಣ್ಣನ್ನು ತನಗೆ ಮದುವೆ ಮಾಡಿಕೊಡುವಂತೆ ತನ್ನ ಹೆತ್ತವರನ್ನು ಕೇಳಿದ್ದೇಕೆ? (ನ್ಯಾಯಸ್ಥಾಪಕರು 14:2)

ಒಬ್ಬ ಸುಳ್ಳು ಆರಾಧಕಳನ್ನು ವಿವಾಹವಾಗುವುದು ದೇವರ ನಿಯಮಕ್ಕೆ ವಿರುದ್ಧವಾಗಿತ್ತು. (ವಿಮೋಚನಕಾಂಡ 34:11-16) ಆದರೂ, ಆ ಫಿಲಿಷ್ಟಿಯ ಹೆಣ್ಣೇ ‘ತನಗೆ ಸೂಕ್ತವಾದವಳು’ ಎಂದು ಸಂಸೋನನಿಗನಿಸಿತು. ಏಕೆಂದರೆ ಅವನು ‘ಫಿಲಿಷ್ಟಿಯರ ಕೇಡಿಗೆ ಕಾರಣ ಹುಡುಕುತ್ತಿದ್ದನು’ ಮತ್ತು ಆ ಹೆಣ್ಣು ಅದಕ್ಕೆ ಸೂಕ್ತವಾಗಿದ್ದಳು. ದೇವರು ತನ್ನ ಆತ್ಮದ ಮೂಲಕ ಸಂಸೋನನಿಗೆ ಬೆಂಬಲವನ್ನಿತ್ತನು. (ನ್ಯಾಯಸ್ಥಾಪಕರು 13:25; 14:3, 4, 6)​—⁠3/15, ಪುಟ 26.

• ಕ್ರೈಸ್ತನೊಬ್ಬನು ಸರಕಾರಿ ನೌಕರನಿಗೆ ಹಣವನ್ನು (ಟಿಪ್ಸ್‌) ಇಲ್ಲವೆ ಯಾವುದೇ ರೀತಿಯ ಉಡುಗೊರೆಯನ್ನು ನೀಡಬಹುದೋ?

ಒಬ್ಬ ಅಧಿಕಾರಿಗೆ ಬೆಲೆಬಾಳುವ ಏನನ್ನಾದರೂ ಕೊಟ್ಟು ಕಾನೂನುಬಾಹಿರವಾದ, ನ್ಯಾಯವನ್ನು ತಿರುಚುವ, ಅಥವಾ ವಿಶೇಷ ಉಪಚಾರವನ್ನು ನೀಡುವ ಒಂದು ಕೆಲಸವನ್ನು ಅವನಿಂದ ಮಾಡಿಸುವುದು ಲಂಚಗಾರಿಕೆಯಾಗಿದೆ ಮತ್ತು ಇದು ತಪ್ಪಾಗಿದೆ. ಆದರೆ ಸಾರ್ವಜನಿಕ ಸೇವಕನು ತನ್ನ ಕರ್ತವ್ಯವನ್ನು ಮಾಡಿದಾಗ ಅಥವಾ ನ್ಯಾಯಸಮ್ಮತವಾದ ಸೇವೆಯನ್ನು ಪಡೆದುಕೊಳ್ಳಲು ಇಲ್ಲವೆ ಅನ್ಯಾಯವಾದ ಉಪಚಾರವನ್ನು ತಪ್ಪಿಸಲು ಉಡುಗೊರೆಯನ್ನು ನೀಡುವುದು ಲಂಚಗಾರಿಕೆಯಾಗಿರುವುದಿಲ್ಲ.​—⁠4/1, ಪುಟ 29.