ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇಗುದಿಯ ಮಧ್ಯದಲ್ಲಿ ನಿರೀಕ್ಷೆ ನಿರಾಶ್ರಿತರ ಶಿಬಿರದಲ್ಲಿ ಒಂದು ಸಮ್ಮೇಳನ

ಬೇಗುದಿಯ ಮಧ್ಯದಲ್ಲಿ ನಿರೀಕ್ಷೆ ನಿರಾಶ್ರಿತರ ಶಿಬಿರದಲ್ಲಿ ಒಂದು ಸಮ್ಮೇಳನ

ಬೇಗುದಿಯ ಮಧ್ಯದಲ್ಲಿ ನಿರೀಕ್ಷೆ ನಿರಾಶ್ರಿತರ ಶಿಬಿರದಲ್ಲಿ ಒಂದು ಸಮ್ಮೇಳನ

ಸೂಡಾನ್‌ ಗಡಿಯ ಹತ್ತಿರ, ಕೆನ್ಯದ ಉತ್ತರ ಭಾಗದಲ್ಲಿ ಕಾಕೂಮಾ ಎಂಬ ನಿರಾಶ್ರಿತರ ಶಿಬಿರವಿದೆ. ಅಲ್ಲಿ 86,000 ಮಂದಿ ವಾಸವಾಗಿದ್ದಾರೆ. ಅಲ್ಲಿ ಶುಷ್ಕ ಹವಾಮಾನವಿದ್ದು, ದಿನದಲ್ಲಿ ಕೆಲವೊಮ್ಮೆ ತಾಪಮಾನವು 50° ಸೆಲ್ಸಿಯಸನ್ನು ತಲಪುವದುಂಟು. ತಮ್ಮ ಸ್ವಂತ ಸ್ಥಳವನ್ನು ಬಿಟ್ಟುಬಂದಿರುವ ಈ ನಿರಾಶ್ರಿತ ಸಮುದಾಯಗಳ ಮಧ್ಯೆ ಹಿಂಸಾಚಾರವು ಸರ್ವವ್ಯಾಪಿಯಾಗಿದೆ. ಅನೇಕರಿಗೆ ಈ ಶಿಬಿರವು ಬೇಗುದಿಯ ತಾಣವಾಗಿದೆ. ಹಾಗಿದ್ದರೂ, ಇತರರು ನಿರೀಕ್ಷೆಯನ್ನು ಹೊಂದಿದ್ದಾರೆ.

ಈ ನಿರಾಶ್ರಿತರಲ್ಲಿ ಅನೇಕ ಮಂದಿ ಯೆಹೋವನ ಸಾಕ್ಷಿಗಳಿದ್ದಾರೆ. ಅವರು ರಾಜ್ಯದ ಸುವಾರ್ತೆಯನ್ನು ಹುರುಪಿನಿಂದ ಪ್ರಕಟಪಡಿಸುತ್ತಿದ್ದಾರೆ. ಇವರು ದಕ್ಷಿಣಕ್ಕೆ 120 ಕಿಲೋಮೀಟರ್‌ ದೂರದಲ್ಲಿರುವ ಲಾಡ್ವಾರ್‌ನ ಚಿಕ್ಕ ಸಭೆಯ ಭಾಗವಾಗಿದ್ದಾರೆ. ಲಾಡ್ವಾರ್‌ಗೆ ಹತ್ತಿರದಲ್ಲಿರುವ ಮುಂದಿನ ಸಭೆ ಎಂಟು ತಾಸುಗಳ ಪ್ರಯಾಣದಷ್ಟು ದೂರದಲ್ಲಿದೆ.

ನಿರಾಶ್ರಿತರಿಗೆ ಶಿಬಿರದಿಂದ ಹೊರಗೆ ಹೋಗಲು ಸಾಧ್ಯವಿಲ್ಲದಿರುವುದರಿಂದ, ಯೆಹೋವನ ಸಾಕ್ಷಿಗಳಿಂದ ಏರ್ಪಡಿಸಲ್ಪಡುವ ಸಮ್ಮೇಳನಗಳು ಮತ್ತು ಅಧಿವೇಶನಗಳಿಗೆ ಹಾಜರಾಗಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಶಿಬಿರದ ಒಳಗೆಯೇ ಒಂದು ವಿಶೇಷ ಸಮ್ಮೇಳನ ದಿನವನ್ನು ನಡೆಸಲು ಏರ್ಪಾಡುಗಳು ಮಾಡಲ್ಪಟ್ಟವು.

ಉತ್ತರ ದಿಕ್ಕಿನತ್ತ ಪ್ರಯಾಣಿಸುವುದು

ಶಿಬಿರದಿಂದ ದಕ್ಷಿಣಕ್ಕೆ 480 ಕಿಲೋಮೀಟರ್‌ ದೂರದಲ್ಲಿ ಎಲ್ಡರೆಟ್‌ ಪಟ್ಟಣದಲ್ಲಿರುವ 15 ಮಂದಿ ಸಾಕ್ಷಿಗಳು ಸಮ್ಮೇಳನವನ್ನು ನಡೆಸುವುದರಲ್ಲಿ ನೆರವನ್ನು ನೀಡಲು ತೀರ್ಮಾನಿಸಿದರು. ಅವರು ಉತ್ತರ ದಿಕ್ಕಿನತ್ತ ಶುಷ್ಕ ಹವಾಮಾನವಿದ್ದ ಲಾಡ್ವಾರ್‌ಗೆ ಹೋಗಲಿಕ್ಕಾಗಿ ಪ್ರಯಾಸಕರ ಪ್ರಯಾಣವನ್ನು ಕೈಗೊಳ್ಳಲು ಮುಂದೆಬಂದರು. ಇವರೊಂದಿಗೆ ಒಬ್ಬ ಬೈಬಲ್‌ ವಿದ್ಯಾರ್ಥಿ ಸಹ ಬಂದನು, ಮತ್ತು ಅವನು ಈ ಪ್ರಯಾಣಕ್ಕಾಗಿ ತನ್ನ ಮಿನಿ-ಬಸ್‌ ಹಾಗೂ ಡ್ರೈವರನ್ನು ಒದಗಿಸಿದನು. ತಮ್ಮ ಸಹೋದರರನ್ನು ಉತ್ತೇಜಿಸಿ ಬಲಪಡಿಸಬೇಕೆಂಬದೇ ಅವರ ಹೃತ್ಪೂರ್ವಕ ಇಚ್ಛೆಯಾಗಿತ್ತು.

ಈ ಪ್ರಯಾಣವು ಒಂದು ತಣ್ಣನೆಯ ಬೆಳಗ್ಗೆಯಂದು ಪಶ್ಚಿಮ ಕೆನ್ಯದ ಎತ್ತರ ಪ್ರದೇಶದಿಂದ ಪ್ರಾರಂಭಿಸಿತು. ಉಬ್ಬುತಗ್ಗುಗಳ ರಸ್ತೆಯನ್ನು ಹತ್ತುತ್ತಾ ಹೊಲಗದ್ದೆಗಳು ಮತ್ತು ಕಾಡುಗಳ ಮಧ್ಯೆ ಹಾದುಹೋದಂತೆ ಅವರ ವಾಹನವು ಶುಷ್ಕವಾದ ಮರುಭೂಮಿ ಪ್ರದೇಶಕ್ಕೆ ಬಂದುಮುಟ್ಟಿತು. ಆ ಬಂಜರು ಭೂಮಿಯ ಮೇಲೆ ಆಡುಗಳು ಮತ್ತು ಒಂಟೆಗಳ ಹಿಂಡುಗಳು ಮೇಯುತ್ತಿದ್ದವು. ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದ ಆದಿವಾಸಿಗಳು ನಡೆದುಹೋಗುತ್ತಿದ್ದರು ಮತ್ತು ಅವರಲ್ಲಿ ಹೆಚ್ಚಿನವರ ಕೈಯಲ್ಲಿ ದೊಣ್ಣೆಗಳು ಹಾಗೂ ಬಿಲ್ಲುಬಾಣಗಳು ಇದ್ದವು. 11 ತಾಸುಗಳು ಪ್ರಯಾಣಿಸಿದ ತರುವಾಯ ಸಾಕ್ಷಿಗಳು ಲಾಡ್ವಾರನ್ನು ತಲಪಿದರು. ಅದೊಂದು ಶುಷ್ಕ ಹವೆಯ ಧೂಳು ತುಂಬಿದ ಕ್ಷೇತ್ರವಾಗಿದ್ದು, ಅಲ್ಲಿ ಸುಮಾರು 20,000 ಮಂದಿ ಜೀವಿಸುತ್ತಾರೆ. ಪ್ರಯಾಣಿಸಿ ಬಂದವರು ಸಾಕ್ಷಿ-ಆತಿಥೇಯರಿಂದ ಹಾರ್ದಿಕವಾಗಿ ಬರಮಾಡಿಕೊಳ್ಳಲ್ಪಟ್ಟ ಬಳಿಕ, ಚಟುವಟಿಕೆಭರಿತ ವಾರಾಂತ್ಯವನ್ನು ಪ್ರಾರಂಭಿಸುವುದಕ್ಕೆ ಸಿದ್ಧರಾಗಿರಲಿಕ್ಕಾಗಿ ತುಸು ವಿಶ್ರಾಂತಿಯನ್ನು ತೆಗೆದುಕೊಂಡರು.

ಮುಂದಿನ ದಿನ ಬೆಳಗ್ಗೆ, ಸಂದರ್ಶಕರು ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಟ್ಟರು. ಇವುಗಳಲ್ಲಿ ಟರ್‌ಕೇನ ಸರೋವರವಂತೂ ನೋಡಲೇಬೇಕಾದ ಸ್ಥಳವಾಗಿತ್ತು. ಅನೇಕ ಕಿಲೋಮೀಟರ್‌ಗಳುದ್ದಕ್ಕೂ ಹರಡಿಕೊಂಡಿರುವ ಮರುಭೂಮಿಯ ಪೊದೆಗಳಿಂದ ಸುತ್ತುವರಿಯಲ್ಪಟ್ಟಿರುವ ಈ ಸರೋವರವು, ಲೋಕದಲ್ಲಿಯೇ ಅತಿ ಹೆಚ್ಚು ಮೊಸಳೆಗಳು ಜೀವಿಸುವ ಸ್ಥಳವಾಗಿದೆ. ಅದರ ತೀರದಲ್ಲಿ ಜೀವಿಸುವ ಕೆಲವೇ ಜನರು ಸರೋವರದ ಕ್ಷಾರೀಯ ನೀರಿನ ಸಹಾಯದಿಂದ ಬದುಕುತ್ತಾರೆ. ಸ್ಥಳಿಕ ಸಭೆಯೊಂದಿಗೆ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ ಮತ್ತು ಸೇವಾ ಕೂಟಕ್ಕೆ ಹಾಜರಾಗುವುದರಲ್ಲಿ ಸಾಯಂಕಾಲವು ಆನಂದದಾಯಕವಾಗಿ ಕಳೆದುಹೋಯಿತು. ಅವರಿಗೆ ಒಂದು ಸುಂದರವಾದ ರಾಜ್ಯ ಸಭಾಗೃಹವಿದೆ. ಇದನ್ನು, ಸೀಮಿತ ಸರಂಜಾಮುಗಳಿರುವ ದೇಶಗಳಲ್ಲಿನ ಸಾಕ್ಷಿಗಳ ನಿರ್ಮಾಣಕಾರ್ಯ ಯೋಜನೆಯ ಭಾಗವಾಗಿ 2003ರಲ್ಲಿ ಕಟ್ಟಲಾಗಿತ್ತು.

ವಿಶೇಷ ಸಮ್ಮೇಳನ ದಿನ

ಭಾನುವಾರವನ್ನು ವಿಶೇಷ ಸಮ್ಮೇಳನ ದಿನಕ್ಕಾಗಿ ಬದಿಗಿರಿಸಲಾಯಿತು. ಲಾಡ್ವಾರ್‌ ಸಭೆಯವರು ಮತ್ತು ಸಂದರ್ಶಿಸುತ್ತಿದ್ದ ಆ 15 ಮಂದಿ ಸಹೋದರರಿಗೆ ಬೆಳಗ್ಗೆ 8 ಗಂಟೆಯಷ್ಟಕ್ಕೆ ಶಿಬಿರವನ್ನು ಪ್ರವೇಶಿಸುವ ಅನುಮತಿಯು ನೀಡಲ್ಪಟ್ಟಿತ್ತು. ಆದುದರಿಂದ, ಸಾಕ್ಷಿಗಳು ತಮ್ಮ ಪ್ರಯಾಣವನ್ನು ಮುಂಜಾನೆ ಬೇಗನೆ ಆರಂಭಿಸಲು ಉತ್ಸುಕರಾಗಿದ್ದರು. ಬಂಜರು ಪ್ರದೇಶದಲ್ಲಿದ್ದ ಅಂಕುಡೊಂಕಾದ ರಸ್ತೆಯು ಅವರನ್ನು ಸೂಡಾನ್‌ನ ಗಡಿಯತ್ತ ನಡೆಸಿತು. ರಸ್ತೆಯ ಅಕ್ಕಪಕ್ಕದಲ್ಲಿ ಗರಗಸದ ಅಂಚಿನಂತೆ ಕಾಣುವ ಪರ್ವತಗಳು ಬೃಹದಾಕಾರದಲ್ಲಿ ನಿಂತಿದ್ದವು. ಈ ದೃಶ್ಯವು ಕಾಕೂಮಾ ಗ್ರಾಮದಲ್ಲಿ ವಿಸ್ತಾರಗೊಂಡಿತು. ಅಲ್ಲಿ ಮಳೆ ಬಿದ್ದಿತ್ತು ಮತ್ತು ಶಿಬಿರದ ಒಳಕ್ಕೆ ನಡೆಸಿದ ಮಣ್ಣಿನ ರಸ್ತೆಯು ಅಲ್ಲಲ್ಲಿ ನೀರಿನಿಂದ ಆವೃತವಾಗಿತ್ತು. ಹೆಚ್ಚಿನ ಮನೆಗಳು ಮಣ್ಣಿನ ಇಟ್ಟಿಗೆಯಿಂದ ಮಾಡಲ್ಪಟ್ಟಿದ್ದು ಅವುಗಳಿಗೆ ತಗಡು ಅಥವಾ ತಾರ್ಪಾಲಿನ್‌ನ ಛಾವಣಿಯಿತ್ತು. ಇಥಿಯೋಪಿಯದ, ಸೊಮಾಲೀಯದ, ಸೂಡಾನ್‌ನ ಮತ್ತು ಇತರ ಗುಂಪಿನವರು ಅವರವರ ಕ್ಷೇತ್ರಗಳಲ್ಲಿ ಜೀವಿಸುತ್ತಾರೆ. ನಿರಾಶ್ರಿತರು ಪ್ರಯಾಣಿಕರನ್ನು ಉತ್ಸಾಹದಿಂದ ಬರಮಾಡಿಕೊಂಡರು.

ಸಮ್ಮೇಳನವನ್ನು ಒಂದು ತರಬೇತಿ ಕೇಂದ್ರದಲ್ಲಿ ನಡೆಸಲಾಯಿತು. ಅದರ ಗೋಡೆಗಳ ಮೇಲೆ ಬಿಡಿಸಲ್ಪಟ್ಟಿದ್ದ ಚಿತ್ರಗಳು ನಿರಾಶ್ರಿತರ ಜೀವಿತದ ಭೀಕರತೆಯನ್ನು ಚಿತ್ರಿಸಿದವು, ಆದರೆ ಆ ದಿನ ಆ ಸಭಾಂಗಣದಲ್ಲಿ ನಿರೀಕ್ಷೆಯನ್ನು ವ್ಯಕ್ತಪಡಿಸುವ ಮನೋಭಾವವು ತುಂಬಿಕೊಂಡಿತ್ತು. ಪ್ರತಿಯೊಂದು ಭಾಷಣವನ್ನು ಇಂಗ್ಲಿಷ್‌ ಮತ್ತು ಸ್ವಾಹೀಲಿಯಲ್ಲಿ ನೀಡಲಾಯಿತು. ಎರಡೂ ಭಾಷೆಗಳನ್ನು ಚೆನ್ನಾಗಿ ಅರಿತಿದ್ದ ಕೆಲವು ಭಾಷಣಕರ್ತರು ತಮ್ಮ ಭಾಷಣವನ್ನು ಒಂದೇ ಸಮಯದಲ್ಲಿ ಎರಡೂ ಭಾಷೆಗಳಲ್ಲಿ ನೀಡಿದರು. ಸೂಡಾನ್‌ನಿಂದ ಬಂದಿದ್ದ ಒಬ್ಬ ನಿರಾಶ್ರಿತ ಸಹೋದರನು, “ನಮ್ಮ ಸಾಂಕೇತಿಕ ಹೃದಯವನ್ನು ಪರಿಶೋಧಿಸುವುದು” ಎಂಬ ಆರಂಭದ ಭಾಷಣವನ್ನು ನೀಡಿದನು. ಇತರ ಭಾಷಣಗಳನ್ನು ಸಂದರ್ಶಿಸುತ್ತಿದ್ದ ಹಿರಿಯರು ನೀಡಿದರು.

ಪ್ರತಿ ಸಮ್ಮೇಳನದ ವೈಶಿಷ್ಟ್ಯವು ದೀಕ್ಷಾಸ್ನಾನವಾಗಿರುತ್ತದೆ. ದೀಕ್ಷಾಸ್ನಾನದ ಭಾಷಣದ ಅಂತ್ಯದಲ್ಲಿ, ಎಲ್ಲರ ಕಣ್ಣು ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾಗಿ ಎದ್ದುನಿಂತ ಆ ಒಬ್ಬ ಅಭ್ಯರ್ಥಿಯ ಮೇಲಿದ್ದವು. ಝೀಲ್‌ಬರ್‌ 1994ರ ಹತ್ಯಾಕಾಂಡದ ಸಮಯದಲ್ಲಿ ತನ್ನ ತಂದೆಯೊಂದಿಗೆ ತಮ್ಮ ಸ್ವದೇಶದಿಂದ ಪಲಾಯನಗೈದವನಾಗಿದ್ದನು. ಮೊದಲು ಅವರು ಬುರುಂಡಿಯಲ್ಲಿ ಆಶ್ರಯವನ್ನು ಪಡೆದುಕೊಳ್ಳಲು ಬಯಸಿದ್ದರು, ಆದರೆ ಅಲ್ಲಿಯೂ ಅಪಾಯವು ತಪ್ಪಿದ್ದಲ್ಲ ಎಂಬುದನ್ನು ಅವರು ಶೀಘ್ರವೇ ಗ್ರಹಿಸಿಕೊಂಡರು. ಝೀಲ್‌ಬರ್‌ ಅಲ್ಲಿಂದ ಸಾಯಿರ್‌ಗೆ, ಅನಂತರ ಟಾನ್ಸೇನಿಯಕ್ಕೆ ಕೊನೆಗೆ ಕೆನ್ಯಕ್ಕೆ ಬಂದು ತಲಪಿದನು. ಹೀಗೆ ಪಲಾಯನಗೈಯುವಾಗ ಕೆಲವೊಮ್ಮೆ ಕಾಡುಗಳಲ್ಲಿಯೂ ಅವಿತುಕೊಳ್ಳಬೇಕಾಗಿತ್ತು. ಭಾಷಣಕರ್ತನು ಝೀಲ್‌ಬರ್‌ನನ್ನು ಸಭೆಯಲ್ಲಿ ಒಬ್ಬ ಸಹೋದರನಾಗಿ ಸ್ವಾಗತಿಸಿದಾಗ ಅನೇಕರ ಕಂಗಳಲ್ಲಿ ಕಂಬನಿಯು ಸುರಿಯಿತು. 95 ಮಂದಿ ಹಾಜರಿದ್ದ ಸಭೆಯ ಮುಂದೆ ನಿಂತಿದ್ದ ಝೀಲ್‌ಬರ್‌ ಭಾಷಣಕರ್ತನಿಂದ ಕೇಳಲ್ಪಟ್ಟ ಎರಡು ಪ್ರಶ್ನೆಗಳಿಗೆ ಸ್ವಾಹೀಲಿ ಭಾಷೆಯಲ್ಲಿ ಸ್ಪಷ್ಟವಾದ ಧ್ವನಿಯಲ್ಲಿ ದೃಢವಿಶ್ವಾಸದೊಂದಿಗೆ “ನ್‌ಡೈಯೋ!”​—⁠ಅಥವಾ “ಹೌದು!” ಎಂದು ಉತ್ತರಕೊಟ್ಟನು. ಅವನು ಮತ್ತು ಕೆಲವು ಸಹೋದರರು ಒಂದು ಚಿಕ್ಕ ಕೊಳವನ್ನು ತಮ್ಮ ಕೈಯಿಂದಲೇ ತೋಡಿದ್ದರು ಮತ್ತು ಒಮ್ಮೆ ಶಿಬಿರದಲ್ಲಿ ಝೀಲ್‌ಬರ್‌ನ ಮನೆಯ ಮೇಲೆ ಛಾವಣಿಯಾಗಿ ಉಪಯೋಗಿಸಲ್ಪಟ್ಟಿದ್ದ ತಾರ್ಪಾಲಿನನ್ನೇ ಅದರ ಒಳಗೆ ಅಣಿಗೊಳಿಸಿದ್ದರು. ದೀಕ್ಷಾಸ್ನಾನವನ್ನು ಹೊಂದುವ ಹಂಬಲವನ್ನು ವ್ಯಕ್ತಪಡಿಸುತ್ತಾ ಝೀಲ್‌ಬರ್‌ ತಾನೇ ಅಂದಿನ ಬೆಳಗ್ಗೆ ಬಕೆಟುಗಳಲ್ಲಿ ನೀರನ್ನು ತಂದು ಆ ಕೊಳವನ್ನು ತುಂಬಿಸಿದ್ದನು!

ಮಧ್ಯಾಹ್ನದ ಸೆಷನ್‌ನ ಒಂದು ಮುಖ್ಯಾಂಶವು, ನಿರಾಶ್ರಿತ ಸಾಕ್ಷಿಗಳ ಅಸಾಧಾರಣ ಪರಿಸ್ಥಿತಿಯ ಕುರಿತ ಅನುಭವಗಳನ್ನು ಹೇಳುವುದಾಗಿತ್ತು. ಒಂದು ಮರದ ಅಡಿಯಲ್ಲಿ ವಿಶ್ರಮಿಸುತ್ತಿದ್ದ ಒಬ್ಬ ವ್ಯಕ್ತಿಯನ್ನು ತಾನು ಹೇಗೆ ಸಮೀಪಿಸಿದೆನು ಎಂಬುದರ ಕುರಿತು ಒಬ್ಬ ಸಹೋದರನು ತಿಳಿಸಿದನು.

“ಒಂದು ಮರದ ಅಡಿಯಲ್ಲಿ ಕುಳಿತುಕೊಳ್ಳುವುದು ಯಾವಾಗಲೂ ಸುರಕ್ಷಿತವಾಗಿರುವುದೋ, ಹೇಳಿ?”

“ಹೌದು,” ಎಂದು ಆ ವ್ಯಕ್ತಿ ಉತ್ತರಕೊಟ್ಟನು. ಆದರೆ ಅವನು ಕೂಡಿಸಿದ್ದು, “ರಾತ್ರಿಯಲ್ಲಿ ಮಾತ್ರ ಅಲ್ಲ.”

ನಮ್ಮ ಸಹೋದರನು ಆ ವ್ಯಕ್ತಿಗೆ ಮೀಕ 4:3, 4ನ್ನು ಓದಿದನು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.” ಅನಂತರ, “ದೇವರ ಹೊಸ ಲೋಕದಲ್ಲಿ ಸುರಕ್ಷತೆಯು ಯಾವಾಗಲೂ ಇರುವುದು” ಎಂದು ವಿವರಿಸಿದನು. ಆ ವ್ಯಕ್ತಿಯು ಒಂದು ಬೈಬಲ್‌ ಅಧ್ಯಯನ ಪ್ರಕಾಶನವನ್ನು ಸ್ವೀಕರಿಸಿದನು.

ಕಾಕೂಮಾಕ್ಕೆ ಪ್ರಯಾಣಿಸಿದ್ದ ಒಬ್ಬ ಸಹೋದರಿಯು ಇತ್ತೀಚೆಗೆ ತನ್ನ ಹತ್ತಿರದ ಸಂಬಂಧಿಕರಲ್ಲಿ ಮೂವರನ್ನು ಮರಣದಲ್ಲಿ ಕಳೆದುಕೊಂಡಿದ್ದಳು. ಶಿಬಿರದಲ್ಲಿದ್ದ ಸಹೋದರರ ಕುರಿತು ಹೇಳಿಕೆ ನೀಡುತ್ತಾ ಅವಳು ಅಂದದ್ದು: “ಇಲ್ಲಿ ಜೀವನವು ಬಹಳಷ್ಟು ಕಷ್ಟಗಳಿಂದ ತುಂಬಿದೆ; ಆದರೂ, ಅವರು ತಮ್ಮ ನಂಬಿಕೆಯನ್ನು ಬಲವಾಗಿ ಕಾಪಾಡಿಕೊಂಡಿದ್ದಾರೆ. ಅವರು ಒಂದು ಅಸಂತುಷ್ಟ ಸ್ಥಳದಲ್ಲಿ ಜೀವಿಸುತ್ತಿರುವುದಾದರೂ ಯೆಹೋವನನ್ನು ಸಂತೋಷದಿಂದ ಸೇವಿಸುತ್ತಿದ್ದಾರೆ. ಅವರು ದೇವರೊಂದಿಗೆ ಶಾಂತಿದಾಯಕ ಸಂಬಂಧವನ್ನು ಹೊಂದಿದ್ದಾರೆ. ಸಮಾಧಾನವನ್ನು ಕೈಬಿಡದೆ ಯೆಹೋವನನ್ನು ಸೇವಿಸುತ್ತಾ ಮುಂದುವರಿಯುವಂತೆ ನಾನು ಪ್ರಚೋದಿಸಲ್ಪಟ್ಟೆ. ನನಗೆ ಯಾವುದೇ ವಿಷಯದ ಕುರಿತು ದೂರಲಿಕ್ಕಿಲ್ಲ!”

ಸಮಯ ಹೋದದ್ದೆ ಗೊತ್ತಾಗಲಿಲ್ಲ, ಮತ್ತು ಸಮ್ಮೇಳನವು ಸಹ ಮುಕ್ತಾಯದ ಹಂತಕ್ಕೆ ಬಂದಿತ್ತು. ಅಂತಿಮ ಭಾಷಣದಲ್ಲಿ, ಎಂಟು ರಾಷ್ಟ್ರಗಳ ಪ್ರತಿನಿಧಿಗಳು ಅಲ್ಲಿ ಹಾಜರಿದ್ದಾರೆಂದು ಭಾಷಣಕರ್ತನು ತಿಳಿಸಿದನು. ಛಿದ್ರಗೊಂಡಿರುವ ಒಂದು ಲೋಕದಲ್ಲಿ ಯೆಹೋವನ ಸಾಕ್ಷಿಗಳು ಹೊಂದಿರುವ ಐಕ್ಯ ಮತ್ತು ಪ್ರೀತಿಗೆ ಈ ಸಮ್ಮೇಳನವು ಒಂದು ರುಜುವಾತಾಗಿದೆ ಎಂದು ಒಬ್ಬ ನಿರಾಶ್ರಿತ ಸಾಕ್ಷಿಯು ಹೇಳಿದನು. ಅವರ ಸಹೋದರತ್ವವು ನಿಜ ಕ್ರೈಸ್ತ ಸಹೋದರತ್ವವಾಗಿದೆ.​—⁠ಯೋಹಾನ 13:⁠35.

[ಪುಟ 25ರಲ್ಲಿರುವ ಚೌಕ/ಚಿತ್ರ]

ಸೂಡಾನ್‌ನ ಕಾಣೆಯಾದ ಗಂಡುಮಕ್ಕಳು

ಸೂಡಾನ್‌ನಲ್ಲಿ 1983ರಲ್ಲಿ ಆಂತರಿಕ ಗಲಭೆಯು ಪ್ರಾರಂಭವಾದಂದಿನಿಂದ, 50 ಲಕ್ಷ ಜನರು ತಮ್ಮ ಮನೆಗಳನ್ನು ಕಳೆದುಕೊಂಡು ಯಾವುದೇ ಆಶ್ರಯವಿಲ್ಲದವರಾದರು. ಅವರಲ್ಲಿ ತಮ್ಮ ಕುಟುಂಬಗಳಿಂದ ಪ್ರತ್ಯೇಕಿಸಲ್ಪಟ್ಟ 26,000 ಮಂದಿ ಮಕ್ಕಳಿದ್ದರು. ಇವರಲ್ಲಿ ಸಾವಿರಾರು ಮಂದಿ ಮಕ್ಕಳು ಇಥಿಯೋಪಿಯದಲ್ಲಿದ್ದ ನಿರಾಶ್ರಿತರ ಶಿಬಿರಗಳಿಗೆ ಓಡಿಹೋದರು, ಮತ್ತು ಅಲ್ಲಿ ಮೂರು ವರ್ಷಗಳ ತನಕ ವಾಸವಾಗಿದ್ದರು. ಅಲ್ಲಿಂದ ಹೊರಡುವಂತೆ ಒತ್ತಾಯಿಸಲ್ಪಟ್ಟಾಗ, ಪುನಃ ಸೂಡಾನ್‌ ಅನ್ನು ದಾಟುತ್ತಾ ಉತ್ತರ ಕೆನ್ಯದತ್ತ ಹೆಜ್ಜೆಹಾಕಿದ ಇವರು, ಸೈನಿಕರು, ಡಕಾಯಿತರು, ವ್ಯಾಧಿಗಳು ಮತ್ತು ಕಾಡುಮೃಗಗಳ ಹಾವಳಿಗೆ ಒಳಗಾದರು. ಈ ಶ್ರಮದಾಯಕ ಪ್ರಯಾಣಗಳಲ್ಲಿ ಅಳಿದುಉಳಿದವರು ಅವರಲ್ಲಿ ಕೇವಲ ಅರ್ಧ ಮಂದಿ ಮಕ್ಕಳು ಮಾತ್ರ. ಬದುಕುಳಿದ ಈ ಮಕ್ಕಳು ತದನಂತರ ಕಾಕೂಮಾ ಶಿಬಿರದ ಮುಖ್ಯ ಭಾಗವಾದರು. ಪರಿಹಾರಕ ಏಜೆನ್ಸಿಗಳು ಈ ಮಕ್ಕಳನ್ನು, ಸೂಡಾನ್‌ನ ಕಾಣೆಯಾದ ಗಂಡುಮಕ್ಕಳು ಎಂದು ಕರೆಯುತ್ತವೆ.

ಕಾಕೂಮಾ ನಿರಾಶ್ರಿತರ ಶಿಬಿರವು ಈಗ ನಿರಾಶ್ರಿತರ ಒಂದು ಬಹುರಾಷ್ಟ್ರೀಯ ಬೀಡಾಗಿದ್ದು, ಅಲ್ಲಿ ಸೂಡಾನ್‌, ಸೊಮಾಲಿಯ, ಇಥಿಯೋಪಿಯ ಮತ್ತಿತರ ದೇಶಗಳಿಂದ ಬಂದವರು ಆಶ್ರಯ ಹೂಡಿದ್ದಾರೆ. ಅಲ್ಲಿಗೆ ಆಗಮಿಸಿದಾಗ, ಒಬ್ಬ ನಿರಾಶ್ರಿತನಿಗೆ ಒಂದು ಮನೆಯನ್ನು ಕಟ್ಟಿಕೊಳ್ಳಲು ಬೇಕಾದ ಮೂಲಭೂತ ವಸ್ತುಗಳು ಮತ್ತು ಅದರ ಛಾವಣಿಗಾಗಿ ಒಂದು ತಾರ್ಪಾಲಿನ್‌ ಕೊಡಲ್ಪಡುತ್ತದೆ. ತಿಂಗಳಿಗೆ ಎರಡಾವರ್ತಿ, ಪ್ರತಿಯೊಬ್ಬ ನಿರಾಶ್ರಿತನಿಗೆ ಆರು ಕಿಲೊ ಹಿಟ್ಟು, ಒಂದು ಕಿಲೊ ದ್ವಿದಳ ಧಾನ್ಯ ಮತ್ತು ಸ್ವಲ್ಪ ಅಡಿಗೆ ಎಣ್ಣೆ ಹಾಗೂ ಉಪ್ಪು ಕೊಡಲ್ಪಡುತ್ತದೆ. ಅನೇಕ ನಿರಾಶ್ರಿತರು ತಮಗೆ ಸಿಗುವ ಈ ಒದಗಿಸುವಿಕೆಗಳನ್ನು ಇತರ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಲಿಕ್ಕಾಗಿ ವಿನಿಮಯ ಮಾಡಿಕೊಳ್ಳುತ್ತಾರೆ.

ಈ ಕಾಣೆಯಾದ ಮಕ್ಕಳಲ್ಲಿ ಕೆಲವರು ತಮ್ಮ ಕುಟುಂಬಗಳೊಂದಿಗೆ ಪುನಃ ಸೇರಿಕೊಂಡಿದ್ದಾರೆ ಅಥವಾ ಇತರ ದೇಶಗಳಿಗೆ ಸ್ಥಳಾಂತರಿಸಿದ್ದಾರೆ. ಆದರೆ, ‘ನಿರಾಶ್ರಿತರ ಸ್ಥಳಾಂತರ ಕಛೇರಿ’ಗನುಸಾರ, “ಇನ್ನುಳಿದ ಸಾವಿರಾರು ಮಂದಿ ಮಕ್ಕಳು ಧೂಳು ಮತ್ತು ನೊಣಗಳು ತುಂಬಿರುವ ಕಾಕೂಮಾದ ಶಿಬಿರದಲ್ಲೇ ಉಳಿದಿದ್ದಾರೆ. ಅಲ್ಲಿ ಅವರು ಊಟಕ್ಕಾಗಿ ಹೋರಾಡಬೇಕಿರುತ್ತದೆ ಮತ್ತು ಶಿಕ್ಷಣಕ್ಕಾಗಿ ಹೆಣಗಾಡಬೇಕಿರುತ್ತದೆ.”

[ಕೃಪೆ]

Courtesy Refugees International

[ಪುಟ 23ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕೆನ್ಯ

ಕಾಕೂಮಾ ಶಿಬಿರ

ಟರ್‌ಕೇನ ಸರೋವರ

ಲಾಡ್ವಾರ್‌

ಎಲ್ಡರೆಟ್‌

ನೈರೋಬಿ

[ಪುಟ 23ರಲ್ಲಿರುವ ಚಿತ್ರ]

ಶಿಬಿರದಲ್ಲಿನ ಜೀವನವು ಪಂಥಾಹ್ವಾನದಾಯಕವಾಗಿದೆ

[ಪುಟ 23ರಲ್ಲಿರುವ ಚಿತ್ರ]

ಕಾಕೂಮಾದ ಶಿಬಿರದಲ್ಲಿ ನೀರನ್ನು ಮಿತಪ್ರಮಾಣದಲ್ಲಿ ಕೊಡಲಾಗುತ್ತದೆ

[ಪುಟ 23ರಲ್ಲಿರುವ ಚಿತ್ರ]

ತಮ್ಮ ಸಹೋದರರನ್ನು ಪ್ರೋತ್ಸಾಹಿಸಲಿಕ್ಕಾಗಿ ಕೆನ್ಯದ ಸಾಕ್ಷಿಗಳು ಉತ್ತರ ದಿಕ್ಕಿನತ್ತ ಪ್ರಯಾಸಕರವಾದ ಪ್ರಯಾಣವನ್ನು ಕೈಗೊಂಡರು

[ಪುಟ 24ರಲ್ಲಿರುವ ಚಿತ್ರ]

ಸ್ಥಳಿಕ ಸ್ಪೆಶಲ್‌ ಪಯನೀಯರನಿಂದ ಕೊಡಲ್ಪಡುತ್ತಿರುವ ಭಾಷಣವನ್ನು ಒಬ್ಬ ಮಿಷನೆರಿಯು ಅನುವಾದ ಮಾಡುತ್ತಿರುವುದು

[ಪುಟ 24ರಲ್ಲಿರುವ ಚಿತ್ರ]

ದೀಕ್ಷಾಸ್ನಾನದ ಕೊಳ

[ಪುಟ 23ರಲ್ಲಿರುವ ಚಿತ್ರ ಕೃಪೆ]

ನೀರು ಮಿತಪ್ರಮಾಣದಲ್ಲಿ ಕೊಡಲ್ಪಡುತ್ತಿರುವುದು ಮತ್ತು ಕಾಕೂಮಾ ನಿರಾಶ್ರಿತರ ಶಿಬಿರ: Courtesy Refugees International