ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಇತಿಹಾಸ ಎಷ್ಟು ನಿಷ್ಕೃಷ್ಟವಾಗಿದೆ?

ಬೈಬಲ್‌ ಇತಿಹಾಸ ಎಷ್ಟು ನಿಷ್ಕೃಷ್ಟವಾಗಿದೆ?

ಬೈಬಲ್‌ ಇತಿಹಾಸ ಎಷ್ಟು ನಿಷ್ಕೃಷ್ಟವಾಗಿದೆ?

ಬೈಬಲಿನ ಕದನಗಳು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ, ಇಸ್ರೇಲ್‌ ರಾಷ್ಟ್ರದ ಮಾಜಿ ಪ್ರಧಾನಿ ಚೈಮ್‌ ಹರ್ಟ್‌ಸಾಗ್‌ ಮತ್ತು ಟೆಲ್‌ ಅವಿವ್‌ ವಿಶ್ವವಿದ್ಯಾನಿಲಯದ ಪ್ರಾಕ್ತನಶಾಸ್ತ್ರದ ನಿವೃತ್ತ ಪ್ರೊಫೆಸರ್‌ ಮಾಡಿಕಾಯ್‌ ಗೈಚಾನ್‌ ಈ ಕೆಳಗಿನ ಅಂಶವನ್ನು ಸ್ಪಷ್ಟಪಡಿಸುತ್ತಾರೆ:

“ಬೈಬಲ್‌ ಕದನಗಳಲ್ಲಿ ಉಪಯೋಗಿಸಲ್ಪಟ್ಟ ಯುದ್ಧತಂತ್ರದ ವರ್ಣನೆಯನ್ನು . . . ಕೇವಲ ಕಟ್ಟುಕಥೆ ಎಂದು ತಳ್ಳಿಬಿಡಲು ಸಾಧ್ಯವಿಲ್ಲ. ಉದಾಹರಣೆಗೆ, ನ್ಯಾಯಸ್ಥಾಪಕರು 6-8ನೇ ಅಧ್ಯಾಯಗಳಲ್ಲಿ ಕೊಡಲ್ಪಟ್ಟಿರುವ ಮಿದ್ಯಾನ್ಯರ ಮತ್ತು ಅವರ ಮೈತ್ರಿಪಡೆಗಳ ವಿರುದ್ಧ ಗಿದ್ಯೋನನು ಕೈಗೊಂಡ ಕಾರ್ಯಾಚರಣೆಯನ್ನು, ಹೋಮರನು ತನ್ನ ಇಲಿಯಡ್‌ ಕವನದಲ್ಲಿ ವರ್ಣಿಸಿರುವ ಟ್ರೋಜನ್‌ ಯುದ್ಧಕ್ಕೆ ಸಂಬಂಧಿಸಿದ ಕದನಗಳೊಂದಿಗೆ ಹೋಲಿಸುವುದು ತಾನೇ ನಮಗೆ ಸಾಕಷ್ಟು ಪುರಾವೆಯನ್ನು ಒದಗಿಸುತ್ತದೆ. ಈ [ಟ್ರೋಜನ್‌ ಯುದ್ಧದ] ವಿಷಯದಲ್ಲಿ, ಸುಲಭಭೇದ್ಯವಾದ ಯಾವುದೇ ಸಮುದ್ರತೀರವನ್ನು ಅಥವಾ ಹೆಚ್ಚು ದೂರದಲ್ಲಿಲ್ಲದ ಕೋಟೆಕೊತ್ತಳಗಳುಳ್ಳ ಪಟ್ಟಣವನ್ನು ಭೂದೃಶ್ಯವಾಗಿಟ್ಟು ಒಂದು ಕದನವನ್ನು ವರ್ಣಿಸುವುದು ಸಾಕಾಗಿರುತ್ತಿತ್ತು . . . ಆದರೆ ಗಿದ್ಯೋನನ ಕಾರ್ಯಾಚರಣೆಯ ಕುರಿತಾದ ಬೈಬಲ್‌ ದಾಖಲೆಯ ವಿಷಯದಲ್ಲಿ ಹೀಗಿರಲಿಲ್ಲ. ಅರುವತ್ತು ಕಿಲೊಮೀಟರ್‌ ಉದ್ದದ ಪ್ರದೇಶದಲ್ಲಿ ಸಂಭವಿಸಿದಂಥ ಯುದ್ಧದ ನಿರ್ದಿಷ್ಟವಾದ ಸ್ಥಳದ ವೈಶಿಷ್ಟ್ಯಗಳು ಮತ್ತು ವಿರುದ್ಧಪಕ್ಷದ ಸೈನ್ಯಗಳ ಚಲನವಲನಗಳ ಮೇಲೆ ಆಧರಿಸಿದ್ದ ಸವಿವರವಾದ ಯುದ್ಧತಂತ್ರದ ಮುನ್ನಡೆಗಳು ಹಾಗೂ ಆಕ್ರಮಣಗಳನ್ನು ಎಲ್ಲಿಯೂ ನಕಲುಮಾಡಲು ಸಾಧ್ಯವಿಲ್ಲ . . . ಆದುದರಿಂದ, ಬೈಬಲಿನಲ್ಲಿ ವರ್ಣಿಸಲ್ಪಟ್ಟಿರುವ ಕದನಗಳಲ್ಲಿ ಉಪಯೋಗಿಸಲ್ಪಟ್ಟ ಯುದ್ಧತಂತ್ರದ ನಿರೂಪಣೆಯನ್ನು ಸತ್ಯವೆಂದೇ ನಾವು ಒಪ್ಪಿಕೊಳ್ಳಬೇಕಾಗುತ್ತದೆ.”

‘ಒಳ್ಳೆಯ ದೇಶವನ್ನು ನೋಡಿ’ * ಎಂಬ ಬೈಬಲ್‌ ಅಟ್ಲಾಸ್‌ನ 18 ಮತ್ತು 19ನೇ ಪುಟಗಳಲ್ಲಿರುವ ಭೂಪಟವನ್ನು ಉಪಯೋಗಿಸುವ ಮೂಲಕ ನೀವು ಗಿದ್ಯೋನನ ಕಾರ್ಯಾಚರಣೆಯ ಬಗ್ಗೆ ಅಧ್ಯಯನ ಮಾಡಬಲ್ಲಿರಿ. “ಮಿದ್ಯಾನ್ಯರೂ ಅಮಾಲೇಕ್ಯರೂ ಮೂಡಣದೇಶದವರೂ ಕೂಡಿ ಹೊಳೆದಾಟಿ ಬಂದು ಇಜ್ರೇಲಿನ ತಗ್ಗಿನಲ್ಲಿ ಪಾಳೆಯಮಾಡಿ”ಕೊಂಡಿದ್ದಾಗ ಈ ಕಾರ್ಯಾಚರಣೆಯು ಆರಂಭವಾಯಿತು. ಹತ್ತಿರದಲ್ಲಿರುವ ಕುಲಗಳು ಬಂದು ಸಹಾಯಮಾಡುವಂತೆ ಗಿದ್ಯೋನನು ಕೇಳಿಕೊಂಡನು. ಈ ಘಟನೆಗಳು ಹರೋದಿನ ಬುಗ್ಗೆಯ ಬಳಿಯಿಂದ ಪ್ರಾರಂಭಿಸಿ ಮೋರೆಗುಡ್ಡದ ವರೆಗೆ, ಹಾಗೂ ಮುಂದಕ್ಕೆ ಯೊರ್ದನ್‌ ಕಣಿವೆಯ ವರೆಗೆ ಮುಂದುವರಿದವು. ಯೊರ್ದನ್‌ ಹೊಳೆಯ ಆಚೆಯ ವರೆಗೆ ವೈರಿಗಳನ್ನು ಹಿಂದಟ್ಟಿದ ಬಳಿಕ, ಗಿದ್ಯೋನನು ಅವರ ಮೇಲೆ ಜಯಸಾಧಿಸಿದನು.​—⁠ನ್ಯಾಯಸ್ಥಾಪಕರು 6:33–8:⁠12.

ಇಲ್ಲಿ ತಿಳಿಸಲ್ಪಟ್ಟಿರುವ ಮುಖ್ಯ ಸ್ಥಳಗಳು ಮತ್ತು ಈ ಕಾರ್ಯಾಚರಣೆಯಲ್ಲಿ ಒಳಗೂಡಿದ್ದ ಭೂವೈಶಿಷ್ಟ್ಯಗಳನ್ನು ‘ಒಳ್ಳೆಯ ದೇಶವನ್ನು ನೋಡಿ’ ಅಟ್ಲಾಸ್‌ನಲ್ಲಿ ಕಂಡುಕೊಳ್ಳಸಾಧ್ಯವಿದೆ. ಪುಟ 15ರಲ್ಲಿರುವ ಮತ್ತೊಂದು ಭೂಪಟದಲ್ಲಿ ಇಸ್ರಾಯೇಲ್‌ ಕುಲಗಳಿಗೆ ಕೊಡಲ್ಪಟ್ಟ ಕ್ಷೇತ್ರಗಳನ್ನು ಕಾಣಸಾಧ್ಯವಿದೆ. ಈ ಎರಡೂ ಭೂಪಟಗಳು, ಬೈಬಲ್‌ ವೃತ್ತಾಂತದ ನಿಷ್ಕೃಷ್ಟತೆಯನ್ನು ಗಣ್ಯಮಾಡುವಂತೆ ನಿಮಗೆ ಸಹಾಯಮಾಡಬಲ್ಲವು.

ಇದು, ಪ್ರೊಫೆಸರ್‌ ಯೊಹಾನಾನ್‌ ಆಹಾರೋನೀ ಅವರ ಈ ಅಭಿಪ್ರಾಯವನ್ನು ದೃಷ್ಟಾಂತಿಸುತ್ತದೆ: “ಬೈಬಲಿನ ದೇಶದಲ್ಲಿ, ಭೂವಿವರಣೆಗಳು ಮತ್ತು ಚರಿತ್ರೆಯು ಒಂದಕ್ಕೊಂದು ಎಷ್ಟು ಹೆಣೆದುಕೊಂಡಿವೆಯೆಂದರೆ, ಒಂದನ್ನು ಬಿಟ್ಟರೆ ಮತ್ತೊಂದನ್ನು ಅರ್ಥಮಾಡಿಕೊಳ್ಳುವುದು ತುಂಬ ಕಷ್ಟ.”

[ಪಾದಟಿಪ್ಪಣಿ]

^ ಪ್ಯಾರ. 4 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು.

[ಪುಟ 32ರಲ್ಲಿರುವ ಚಿತ್ರ ಕೃಪೆ]

ಹಿನ್ನೆಲೆ ಭೂಪಟ: Based on maps copyrighted by Pictorial Archive (Near Eastern History) Est. and Survey of Israel