ಮ್ಯಾಸಡೋನ್ಯದಲ್ಲಿ ಒಂದು ಅಗತ್ಯವನ್ನು ಪೂರೈಸುವುದು
ಮ್ಯಾಸಡೋನ್ಯದಲ್ಲಿ ಒಂದು ಅಗತ್ಯವನ್ನು ಪೂರೈಸುವುದು
‘ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು.’ (ಅ. ಕೃತ್ಯಗಳು 16:9) ಒಂದು ದರ್ಶನದಲ್ಲಿ ಅಪೊಸ್ತಲ ಪೌಲನಿಗೆ ಕಾಣಿಸಿಕೊಂಡ ಒಬ್ಬ ವ್ಯಕ್ತಿಯ ಈ ಮಾತುಗಳು, ಒಂದು ಹೊಸ ಟೆರಿಟೊರಿಯಲ್ಲಿ ದೇವರ ರಾಜ್ಯದ ಸಂದೇಶವನ್ನು ಸಾರುವ ಅಗತ್ಯವನ್ನು ವ್ಯಕ್ತಪಡಿಸಿದವು. ಆ ಹೊಸ ಟೆರಿಟೊರಿಯು ಇಂದು ಗ್ರೀಸ್‌ನಲ್ಲಿದೆ.
ಇಂದಿನ ಮಕೆದೋನ್ಯ ಅಥವಾ ಮ್ಯಾಸಡೋನ್ಯದಲ್ಲಿ, 1,840 ನಿವಾಸಿಗಳಲ್ಲಿ ಕೇವಲ ಒಬ್ಬನು ಯೆಹೋವನ ಸಾಕ್ಷಿಯಾಗಿದ್ದಾನೆ. ಅನೇಕ ಜನರು ಯೆಹೋವ ದೇವರ ಕುರಿತು ಕೇಳಿಸಿಕೊಂಡಿರುವುದಿಲ್ಲ. ಹೌದು, ಈ ದೇಶದ ಜನರು ಶಾಂತಿಯ ಸಂದೇಶವನ್ನು ಕೇಳಿಸಿಕೊಳ್ಳುವ ಅಗತ್ಯವು ತುರ್ತಿನದ್ದಾಗಿದೆ.—ಮತ್ತಾಯ 24:14.
ಈ ಅಗತ್ಯವನ್ನು ಪೂರೈಸುವ ಮಾರ್ಗವನ್ನು ದೇವರು ತೆರೆದಿದ್ದಾನೆ. 2003ರ ನವೆಂಬರ್ ತಿಂಗಳಿನಲ್ಲಿ ಒಂದು ದಿನ, ಮ್ಯಾಸಡೋನ್ಯದಲ್ಲಿರುವ ಯೆಹೋವನ ಸಾಕ್ಷಿಗಳ ಆಫೀಸು ಅನಿರೀಕ್ಷಿತವಾಗಿ ಒಂದು ಟೆಲಿಫೋನ್ ಕರೆಯನ್ನು ಪಡೆದುಕೊಂಡಿತು. ಅದು ‘ಅಂತಾರಾಷ್ಟ್ರೀಯ ಸಹಕಾರದ ಮ್ಯಾಸಡೋನ್ಯನ್ ಕೇಂದ್ರ’ದಿಂದ ಬಂದಿತು. ನವೆಂಬರ್ 20ರಂದು ಆರಂಭವಾಗಲಿದ್ದ ಮೂರು ದಿನದ ಸಾರ್ವಜನಿಕ ಪ್ರದರ್ಶನದಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಗಳ ಕುರಿತು ವಿವರಿಸಲು ಸಾಧ್ಯವಾಗುವಂತೆ ಒಂದು ವಿಭಾಗವನ್ನು ರಚಿಸಲು ಆಮಂತ್ರಿಣವು ಕೊಡಲಾಯಿತು. ರಾಜ್ಯ ಸುವಾರ್ತೆಯನ್ನು ಕೇಳಿಸಿಕೊಂಡಿರದ ಸಾವಿರಾರು ಮಂದಿಯನ್ನು ಸಂಪರ್ಕಿಸಲು ಇದೆಂಥ ಉತ್ತಮ ಸಂದರ್ಭವಾಗಿತ್ತು!
ಸ್ವಯಂ-ಸೇವಕರು ಮ್ಯಾಸಡೋನ್ಯನ್ ಭಾಷೆಯಲ್ಲಿ ಯೆಹೋವನ ಸಾಕ್ಷಿಗಳ ವಿಭಿನ್ನ ಪ್ರಕಾಶನಗಳ ಪ್ರದರ್ಶನಕ್ಕಾಗಿ ಏರ್ಪಾಡನ್ನು ಮಾಡಿ ಅದನ್ನು ಸಂಘಟಿಸುವುದರಲ್ಲಿ ತುಂಬ ಪ್ರಯಾಸಪಟ್ಟರು. ಸಂದರ್ಶಕರು ಬಯಸುವುದಾದರೆ ಪ್ರದರ್ಶನಕ್ಕಿಡಲ್ಪಟ್ಟಿದ್ದ ಪ್ರಕಾಶನಗಳನ್ನು ಕೊಂಡೊಯ್ಯಲು ಸಾಧ್ಯವಾಗುವಂತೆ ಅವುಗಳ ಪ್ರತಿಗಳನ್ನೂ ಇಡಲಾಗಿತ್ತು. ಈ ಪ್ರದರ್ಶನವು ಚೈತನ್ಯದಾಯಕ ಆಧ್ಯಾತ್ಮಿಕ ಜಲವನ್ನು ಕ್ರಯವಿಲ್ಲದೆ ಪಡೆದುಕೊಳ್ಳುವಂತೆ ಅನೇಕರಿಗೆ ಅವಕಾಶಮಾಡಿಕೊಟ್ಟಿತು.—ಪ್ರಕಟನೆ 22:17.
ಸಂದರ್ಶಕರು ವಿಶೇಷವಾಗಿ ತಮ್ಮ ಜೀವನಕ್ಕೆ ಅನ್ವಯವಾಗುವಂಥ ಪ್ರಕಾಶನಗಳನ್ನು ತೆಗೆದುಕೊಳ್ಳಲು ಬಯಸಿದರು. ಉದಾಹರಣೆಗೆ, ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಮತ್ತು ಕುಟುಂಬ ಸಂತೋಷದ ರಹಸ್ಯ * ಇತ್ಯಾದಿ ಪ್ರಕಾಶನಗಳನ್ನು ಅವರು ಬಯಸಿದರು. ಯೆಹೋವನ ಸಾಕ್ಷಿಗಳು ತಮ್ಮನ್ನು ಸಂಪರ್ಕಿಸುವಂತೆ 98 ಮಂದಿ ತಮ್ಮ ವಿಳಾಸಗಳನ್ನು ಬಿಟ್ಟುಹೋದರು. ಅನೇಕರು ಯೆಹೋವನ ಸಾಕ್ಷಿಗಳು ಮಾಡುವ ಉತ್ತಮ ಕೆಲಸ ಹಾಗೂ ಸಾಹಿತ್ಯದ ಉತ್ತಮ ಗುಣಮಟ್ಟದ ಬಗ್ಗೆ ಸಕಾರಾತ್ಮಕ ಹೇಳಿಕೆಗಳನ್ನು ಮಾಡಿದರು.
ಒಬ್ಬ ವ್ಯಕ್ತಿ ತನ್ನ ಪುಟ್ಟ ಮಗನನ್ನು ಕೈಯಲ್ಲಿ ಹಿಡಿದುಕೊಂಡು ಬೂತ್‌ನ ಕಡೆಗೆ ಹೆಜ್ಜೆಹಾಕಿದನು. ಮಕ್ಕಳಿಗಾಗಿ ಯಾವುದಾದರೂ ಸಾಹಿತ್ಯವಿದೆಯೋ ಎಂದು ಅವನು ಕೇಳಿದನು. ಸಾಕ್ಷಿಗಳು ಬೈಬಲ್ ಕಥೆಗಳ ನನ್ನ ಪುಸ್ತಕ * ಎಂಬ ಪ್ರಕಾಶನವನ್ನು ತೋರಿಸಿದರು. ಅದರಲ್ಲಿ ಸ್ವಲ್ಪ ಕಣ್ಣಾಡಿಸಿದ ಬಳಿಕ, ಪುಳಕಿತಗೊಂಡ ಅವನು ಇದರ ಬೆಲೆಯೆಷ್ಟು ಎಂದು ಕೇಳಿದನು. ಯೆಹೋವನ ಸಾಕ್ಷಿಗಳ ಶೈಕ್ಷಣಿಕ ಕೆಲಸವು ಸಂಪೂರ್ಣವಾಗಿ ಮನಃಪೂರ್ವಕ ದಾನಗಳಿಂದ ಬೆಂಬಲಿಸಲ್ಪಡುತ್ತದೆ ಎಂಬುದನ್ನು ಕೇಳಿಸಿಕೊಂಡಾಗ ಅವನು ಇನ್ನಷ್ಟು ಪುಳಕಿತಗೊಂಡನು. (ಮತ್ತಾಯ 10:8) ಅವನು ಪುಸ್ತಕವನ್ನು ತನ್ನ ಮಗನಿಗೆ ತೋರಿಸುತ್ತಾ, “ಎಂಥ ಒಳ್ಳೇ ಪುಸ್ತಕ! ನಾನು ನಿನಗೆ ಪ್ರತಿದಿನ ಒಂದೊಂದು ಕಥೆಯನ್ನು ಓದಿ ಹೇಳ್ತೇನೆ!” ಎಂದು ಹೇಳಿದನು.
ತತ್ತ್ವಜ್ಞಾನದ ಪ್ರೊಫೆಸರರೊಬ್ಬರು ಬೂತ್‌ನತ್ತ ಬಂದರು. ಅವರಿಗೆ ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲಿ ತುಂಬ ಆಸಕ್ತಿಯಿತ್ತಾದರೂ ಯೆಹೋವನ ಸಾಕ್ಷಿಗಳ ನಂಬಿಕೆಗಳ ವಿಷಯದಲ್ಲಿ ವಿಶೇಷ ಆಸಕ್ತಿಯಿತ್ತು. ದೇವರಿಗಾಗಿ ಮಾನವಕುಲದ ಅನ್ವೇಷಣೆ * (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಕಣ್ಣಾಡಿಸಿದ ಬಳಿಕ, ಅವರು ಹೇಳಿದ್ದು: “ಮಾಹಿತಿಯು ನ್ಯಾಯಬದ್ಧವಾದ ರೀತಿಯಲ್ಲಿ ಪ್ರಸ್ತುತಪಡಿಸಲ್ಪಟ್ಟಿದೆ! ವಿಚಾರಗಳು ಯಾವ ರೀತಿಯಲ್ಲಿ ಪ್ರಸ್ತುತಪಡಿಸಲ್ಪಡಬೇಕು ಎಂದು ನಾನು ನೆನಸಿದ್ದೆನೋ ಅದೇ ರೀತಿಯಲ್ಲಿ ಇದನ್ನು ಬರೆಯಲಾಗಿದೆ!” ಅನಂತರ ಅವರ ಶಾಲೆಯ ಕೆಲವು ವಿದ್ಯಾರ್ಥಿಗಳು ಬಂದು, ಆ ಪ್ರೊಫೆಸರರು ಪಡೆದುಕೊಂಡ ಅದೇ ಪುಸ್ತಕದ ಕೆಲವು ಪ್ರತಿಗಳು ತಮಗೂ ಬೇಕೆಂದು ಕೇಳಿ ಪಡೆದರು. ಅವರು ಕೂಡ ಅದೇ ಪುಸ್ತಕವನ್ನು ಪರಿಶೀಲಿಸಲು ಬಯಸಿದರು. ಶಿಕ್ಷಕರು ತಮ್ಮ ಪಾಠಗಳಲ್ಲಿ ಇದನ್ನು ಉಪಯೋಗಿಸಬಹುದು ಎಂದು ವಿದ್ಯಾರ್ಥಿಗಳು ನೆನಸಿದರು.
ಈ ಪ್ರದರ್ಶನವು ಕೆಲವು ಜನರಿಗೆ ಶಾಸ್ತ್ರೀಯ ಸತ್ಯಗಳ ಪ್ರಥಮ ಪರಿಚಯವನ್ನು ಮಾಡಿಕೊಟ್ಟಿತು. ಕಿವುಡರಾಗಿದ್ದ ಹದಿಹರೆಯದವರ ಒಂದು ಗುಂಪು ಅಲ್ಲಿ ಸುತ್ತಿನೋಡಲು ಬಂದಿತು. ಒಬ್ಬ ಸಾಕ್ಷಿಯು ಅವರಿಗೆ ಒಂದು ಚಿಕ್ಕ ಭಾಷಣವನ್ನು ನೀಡಿದನು ಮತ್ತು ಇದನ್ನು ಒಬ್ಬ ಹುಡುಗಿಯು ಸಂಜ್ಞಾ ಭಾಷೆಗೆ ಅನುವಾದಮಾಡಿದಳು. ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ * ಪುಸ್ತಕದಲ್ಲಿರುವ ಕೆಲವು ಚಿತ್ರಗಳನ್ನು ಉಪಯೋಗಿಸುತ್ತಾ, ಯೇಸು ಕಿವುಡರನ್ನು ಸೇರಿಸಿ ಎಲ್ಲಾ ಅಸ್ವಸ್ಥರನ್ನು ವಾಸಿಮಾಡಿದನು ಎಂದು ಆ ಸಹೋದರನು ವಿವರಿಸಿದನು. ನಮ್ಮ ದಿನಗಳಲ್ಲಿ ಜೀವಿಸುತ್ತಿರುವವರ ಅಸ್ವಸ್ಥತೆಗಳನ್ನು ಯೇಸು ಶೀಘ್ರವೇ ವಾಸಿಮಾಡಲಿದ್ದಾನೆ ಎಂಬ ಬೈಬಲಿನ ವಾಗ್ದಾನದ ಕುರಿತು “ಕೇಳಿಸಿಕೊಂಡಾಗ” ಅವರು ಪ್ರಸನ್ನರಾದರು. ಅವರಲ್ಲಿ ಅನೇಕರು ಸಂತೋಷದಿಂದ ಬೈಬಲಾಧಾರಿತ ಸಾಹಿತ್ಯವನ್ನು ಸ್ವೀಕರಿಸಿದರು, ಮತ್ತು ಸಂಜ್ಞಾ ಭಾಷೆ ತಿಳಿದಿರುವ ಒಬ್ಬ ಸಾಕ್ಷಿ ಅವರನ್ನು ಭೇಟಿಮಾಡುವಂತೆ ಏರ್ಪಾಡುಗಳು ಮಾಡಲ್ಪಟ್ಟವು.
ಸಾಹಿತ್ಯವು ಮ್ಯಾಸಡೋನ್ಯನ್ ಭಾಷೆಯಲ್ಲಿ ಮಾತ್ರವಲ್ಲದೆ ಅಲ್ಬೇನ್ಯನ್, ಇಂಗ್ಲಿಷ್ ಮತ್ತು ಟರ್ಕಿಷ್ ಭಾಷೆಗಳಲ್ಲೂ ಲಭ್ಯವಿತ್ತು. ಮ್ಯಾಸಡೋನ್ಯನ್ ಭಾಷೆ ತಿಳಿದಿರದ ಒಬ್ಬ ವ್ಯಕ್ತಿ ಇಂಗ್ಲಿಷ್‌ನಲ್ಲಿ ಕೆಲವು ಪ್ರಕಾಶನಗಳಿಗಾಗಿ ಕೇಳಿಕೊಂಡನು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಸಂಚಿಕೆಗಳನ್ನು ಪಡೆದುಕೊಂಡಾಗ, ತಾನು ಟರ್ಕಿಷ್ ಭಾಷೆ ಮಾತಾಡುತ್ತೇನೆ ಎಂದು ಅವನು ಹೇಳಿದನು. ಅವನ ಸ್ವಂತ ಭಾಷೆಯಲ್ಲಿ ಸಾಹಿತ್ಯವು ತೋರಿಸಲ್ಪಟ್ಟಾಗ ಅವನಿಗೆ ತನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ! ಯೆಹೋವನ ಸಾಕ್ಷಿಗಳು ಎಲ್ಲರಿಗೂ ಸಹಾಯಮಾಡಲು ಬಯಸುತ್ತಾರೆ ಎಂಬುದನ್ನು ಅವನು ಮನಗಂಡನು.
ಆ ಸಂದರ್ಭದಲ್ಲಿ ಎಂತಹ ಉತ್ತಮ ಸಾಕ್ಷಿ ಕೊಡಲ್ಪಟ್ಟಿತು, ಮತ್ತು ಅನೇಕರು ಬೈಬಲ್ ಸತ್ಯದಲ್ಲಿ ಆಸಕ್ತಿಯನ್ನು ತೋರಿಸುತ್ತಿರುವುದನ್ನು ನೋಡುವುದು ಎಷ್ಟು ಉತ್ತೇಜನದಾಯಕವಾಗಿತ್ತು! ಹೌದು, ಮ್ಯಾಸಡೋನ್ಯದಲ್ಲಿ ರಾಜ್ಯ ಸುವಾರ್ತೆಯನ್ನು ಹಂಚಿಕೊಳ್ಳಲು ಸಾಧ್ಯವಾಗುವಂತೆ ಯೆಹೋವನೇ ಮಾರ್ಗವನ್ನು ತೆರೆದನು.
[ಪಾದಟಿಪ್ಪಣಿಗಳು]
^ ಪ್ಯಾರ. 6 ಎಲ್ಲವೂ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.
^ ಪ್ಯಾರ. 7 ಎಲ್ಲವೂ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.
^ ಪ್ಯಾರ. 8 ಎಲ್ಲವೂ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.
^ ಪ್ಯಾರ. 9 ಎಲ್ಲವೂ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿವೆ.
[ಪುಟ 9ರಲ್ಲಿರುವ ಚೌಕ/ಚಿತ್ರಗಳು]
ಒಂದು ಮೈಲಿಗಲ್ಲು
ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿನ ಪ್ರಯತ್ನಗಳು 2003ರ ಮೇ 17ರಂದು ಒಂದು ದಾಪುಗಾಲನ್ನು ಇಟ್ಟಿತು. ಸ್ಕಾಪ್ಯೆಯಲ್ಲಿ ಯೆಹೋವನ ಸಾಕ್ಷಿಗಳ ಒಂದು ಆಫೀಸು ಅರ್ಪಣೆ ಮಾಡಲ್ಪಟ್ಟಿತು. ನಿರ್ಮಾಣಕಾರ್ಯವು ಎರಡು ವರ್ಷಗಳಿಂದ ನಡೆದಿತ್ತು, ಮತ್ತು ಮುಂಚೆ ಇದ್ದ ಸೌಕರ್ಯಗಳನ್ನು ನಾಲ್ಕುಪಟ್ಟು ಹೆಚ್ಚಿಸಲಾಯಿತು.
ಮೂರು ಪ್ರತ್ಯೇಕವಾದ ಕಟ್ಟಡಗಳಲ್ಲಿ ಕಾರ್ಯನಿರ್ವಾಹಣಾ ಕಛೇರಿ ಮತ್ತು ಭಾಷಾಂತರದ ಆಫೀಸುಗಳು ಹಾಗೂ ವಾಸದ ಕೋಣೆಗಳು, ಅಡಿಗೆಮನೆ ಮತ್ತು ಒಂದು ಲಾಂಡ್ರಿ ಇದೆ. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಸದಸ್ಯರಾಗಿರುವ ಗೈ ಪಿಯರ್ಸ್ ಅರ್ಪಣೆಯ ಭಾಷಣವನ್ನು ನೀಡಲು ಬಂದಿದ್ದರು. ಹತ್ತು ದೇಶಗಳಿಂದ ಬಂದಿದ್ದ ಸಂದರ್ಶಕರು ಅರ್ಪಣೆಯ ಕಾರ್ಯಕ್ರಮಕ್ಕೆ ಹಾಜರಿದ್ದರು. ಸುಂದರವಾದ ಈ ಹೊಸ ಕಟ್ಟಡಗಳನ್ನು ನೋಡಿ ಎಲ್ಲರೂ ರೋಮಾಂಚನಗೊಂಡರು.
[ಪುಟ 8, 9ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಬಲ್ಗೇರಿಯ
ಮ್ಯಾಸಡೋನ್ಯ
ಸ್ಕಾಪ್ಯೆ
ಅಲ್ಬೇನಿಯ
ಗ್ರೀಸ್
[ಪುಟ 8ರಲ್ಲಿರುವ ಚಿತ್ರ]
ಸ್ಕಾಪ್ಯೆ, ಮ್ಯಾಸಡೋನ್ಯ