ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ನಿರ್ಬಲನಾಗಿದ್ದರೂ ಬಲವುಳ್ಳವನಾಗಿದ್ದೇನೆ

ನಾನು ನಿರ್ಬಲನಾಗಿದ್ದರೂ ಬಲವುಳ್ಳವನಾಗಿದ್ದೇನೆ

ಜೀವನ ಕಥೆ

ನಾನು ನಿರ್ಬಲನಾಗಿದ್ದರೂ ಬಲವುಳ್ಳವನಾಗಿದ್ದೇನೆ

ಲೇಓಪೊಲ್ಟ್‌ ಇಂಗ್ಲೈಟ್ನ ಅವರು ಹೇಳಿದಂತೆ

ಎಸ್‌.ಎಸ್‌. ಅಧಿಕಾರಿಯು ತನ್ನ ಪಿಸ್ತೂಲನ್ನು ಹೊರಗೆಳೆದು, ನನ್ನ ತಲೆಗೆ ಗುರಿಯಿಟ್ಟು ಕೇಳಿದ್ದು: “ಸಾಯಲು ಸಿದ್ಧನಾಗಿದ್ದೀಯಾ? ನಾನು ನಿನಗೆ ಗುಂಡುಹಾರಿಸಲಿದ್ದೇನೆ, ಏಕೆಂದರೆ ನಿನ್ನನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ.” ನನ್ನ ಸ್ವರವನ್ನು ಸ್ತಿಮಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಾ, “ನಾನು ಸಿದ್ಧನಿದ್ದೇನೆ” ಎಂದು ಹೇಳಿದೆ. ನಾನು ಧೈರ್ಯವನ್ನು ಒಟ್ಟುಗೂಡಿಸಿಕೊಂಡೆ, ಕಣ್ಣುಗಳನ್ನು ಮುಚ್ಚಿಕೊಂಡೆ ಮತ್ತು ಅವನು ಪಿಸ್ತೂಲಿನ ಟ್ರಿಗರ್‌ ಎಳೆಯುವುದನ್ನೇ ಕಾಯುತ್ತಾ ನಿಂತೆ, ಆದರೆ ಏನೂ ಸಂಭವಿಸಲಿಲ್ಲ. “ನೀನು ಸಾಯಲೂ ಯೋಗ್ಯನಿಲ್ಲದಿರುವಷ್ಟು ಮೂರ್ಖನು!” ಎಂದು ಕಿರುಚುತ್ತಾ, ನನ್ನ ತಲೆಗೆ ಗುರಿಹಿಡಿದಿದ್ದ ಬಂದೂಕನ್ನು ಸರಿಸಿದನು. ನಾನು ಹೇಗೆ ಇಂಥ ಅಪಾಯಕರ ಸನ್ನಿವೇಶಕ್ಕೆ ಬಂದು ಮುಟ್ಟಿದೆ?

ಆಸ್ಟ್ರಿಯದ ಆ್ಯಲ್ಪ್ಸ್‌ ಪರ್ವತಗಳಲ್ಲಿ ನೆಲೆಸಿರುವ ಐಂಜನ್‌-ಫೋಗ್ಲ್‌ಹೂಬ್‌ ಎಂಬ ಪಟ್ಟಣದಲ್ಲಿ, 1905ರ ಜುಲೈ 23ರಂದು ನಾನು ಕುಟುಂಬದ ಹಿರೀ ಮಗನಾಗಿ ಜನಿಸಿದೆ. ನನ್ನ ತಂದೆ ಸಾಮಿಲ್‌ನಲ್ಲಿ ಕೆಲಸಮಾಡುತ್ತಿದ್ದರು ಮತ್ತು ತಾಯಿಯವರು ಒಬ್ಬ ರೈತನ ಮಗಳಾಗಿದ್ದರು. ನನ್ನ ಹೆತ್ತವರು ಬಡವರಾಗಿದ್ದರೂ ಶ್ರಮಜೀವಿಗಳಾಗಿದ್ದರು. ಸಾಲ್ಸ್‌ಬರ್ಗ್‌ನ ಸಮೀಪದಲ್ಲಿದ್ದ ಬ್ಯಾಟ್‌ ಇಶ್ಲ್‌ ಪಟ್ಟಣದಲ್ಲಿ, ಕಣ್ಮನತಣಿಸುವ ಸರೋವರಗಳು ಹಾಗೂ ಉಸಿರುಕಟ್ಟಿಸುವಂಥ ಸೊಬಗುಳ್ಳ ಪರ್ವತಗಳ ಮಧ್ಯೆ ನನ್ನ ಬಾಲ್ಯವನ್ನು ಕಳೆದೆ.

ಚಿಕ್ಕವನಿದ್ದಾಗ, ನನ್ನ ಕುಟುಂಬವು ಬಡತನದಲ್ಲಿದ್ದರಿಂದ ಮಾತ್ರವಲ್ಲದೆ, ಹುಟ್ಟಿನಿಂದಲೇ ನಾನು ಬೆನ್ನುಹುರಿಯ ವಕ್ರತೆಯಿಂದ ನರಳುತ್ತಿದ್ದೆನಾದ್ದರಿಂದಲೂ ಜೀವನದಲ್ಲಿ ನಡೆಯುತ್ತಿದ್ದ ಅನ್ಯಾಯಗಳ ಕುರಿತು ಅನೇಕವೇಳೆ ಚಿಂತಿಸುತ್ತಿದ್ದೆ. ನನ್ನ ಬೆನ್ನುಹುರಿಯ ತೊಂದರೆಯಿಂದ ಉಂಟಾದ ಬೆನ್ನುನೋವು, ನಾನು ನೇರವಾಗಿ ನಿಲ್ಲುವುದನ್ನೇ ಬಹುಮಟ್ಟಿಗೆ ಅಸಾಧ್ಯಗೊಳಿಸಿಬಿಟ್ಟಿತ್ತು. ಶಾಲೆಯಲ್ಲಿ ನನಗೆ ಅಂಗಸಾಧನೆಯಲ್ಲಿ ಭಾಗವಹಿಸಲು ಅನುಮತಿ ಇರಲಿಲ್ಲ ಮತ್ತು ಇದರಿಂದಾಗಿ ನಾನು ಸಹಪಾಠಿಗಳ ಅಪಹಾಸ್ಯಕ್ಕೆ ಗುರಿಯಾದೆ.

ಒಂದನೆಯ ಲೋಕ ಯುದ್ಧವು ಅಂತ್ಯವಾದಾಗ, ನಾನು 14 ವರ್ಷದವನಾಗುವುದಕ್ಕೆ ಸ್ವಲ್ಪ ಮುಂಚೆ, ಬಡತನದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾನೊಂದು ಕೆಲಸವನ್ನು ಹುಡುಕಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದೆ. ಹೊಟ್ಟೆಯಲ್ಲಿ ಸಂಕಟವನ್ನು ಉಂಟುಮಾಡುವಂಥ ರೀತಿಯ ಹಸಿವೆಯು ಯಾವಾಗಲೂ ನನ್ನ ಸಂಗಾತಿಯಾಗಿರುತ್ತಿತ್ತು, ಮತ್ತು ಲಕ್ಷಾಂತರ ಮಂದಿಯನ್ನು ಕೊಂದಿದ್ದ ಸ್ಪ್ಯಾನಿಷ್‌ ಫ್ಲೂನಿಂದ ಬಂದ ವಿಪರೀತ ಜ್ವರದಿಂದಾಗಿ ನಾನು ತುಂಬ ದುರ್ಬಲನಾಗಿದ್ದೆ. ನಾನು ಕೆಲಸವನ್ನು ಕೊಡುವಂತೆ ಕೇಳಿಕೊಂಡಾಗೆಲ್ಲ, “ನಿನ್ನಷ್ಟು ಬಲಹೀನ ವ್ಯಕ್ತಿಗೆ ನಾವು ಯಾವ ಕೆಲಸವನ್ನು ಕೊಡಸಾಧ್ಯವಿದೆ?” ಎಂದೇ ಬಹುತೇಕ ರೈತರು ಪ್ರತಿಕ್ರಿಯಿಸುತ್ತಿದ್ದರು. ಆದರೂ, ಒಬ್ಬ ದಯಾಪರ ರೈತನು ನನ್ನನ್ನು ಕೆಲಸಕ್ಕಿಟ್ಟುಕೊಂಡನು.

ದೇವರ ಪ್ರೀತಿಯ ಕುರಿತು ತಿಳಿದು ಪುಳಕಗೊಂಡದ್ದು

ನನ್ನ ತಾಯಿ ತುಂಬ ಭಕ್ತಿಶ್ರದ್ಧೆಯಿದ್ದ ಕ್ಯಾಥೊಲಿಕರಾಗಿದ್ದರೂ, ನಾನು ಚರ್ಚಿಗೆ ಹೋಗುತ್ತಿದ್ದುದೇ ಅಪರೂಪ. ಇದಕ್ಕೆ ಮುಖ್ಯ ಕಾರಣ, ಧರ್ಮದ ವಿಷಯದಲ್ಲಿ ನನ್ನ ತಂದೆಗೆ ಉದಾರ ಮನೋಭಾವವಿತ್ತು. ನನ್ನ ಬಗ್ಗೆ ಹೇಳುವುದಾದರೆ, ರೋಮನ್‌ ಕ್ಯಾಥೊಲಿಕ್‌ ಚರ್ಚಿನಲ್ಲಿ ವ್ಯಾಪಕವಾಗಿ ರೂಢಿಯಲ್ಲಿದ್ದ ಮೂರ್ತಿಗಳ ಆರಾಧನೆ ನನಗೆ ಹಿಡಿಸುತ್ತಿರಲಿಲ್ಲ.

ಇಸವಿ 1931ರ ಅಕ್ಟೋಬರ್‌ ತಿಂಗಳಿನಲ್ಲಿ ಒಂದು ದಿನ, ಬೈಬಲ್‌ ವಿದ್ಯಾರ್ಥಿಗಳಿಂದ​—⁠ಆಗ ಯೆಹೋವನ ಸಾಕ್ಷಿಗಳು ಈ ಹೆಸರಿನಿಂದ ಪ್ರಸಿದ್ಧರಾಗಿದ್ದರು​—⁠ನಡೆಸಲ್ಪಡುವ ಒಂದು ಧಾರ್ಮಿಕ ಕೂಟಕ್ಕೆ ತನ್ನೊಂದಿಗೆ ಬರುವಂತೆ ಸ್ನೇಹಿತನೊಬ್ಬನು ನನ್ನನ್ನು ಕೇಳಿಕೊಂಡನು. ಆ ಕೂಟದಲ್ಲಿ, ಈ ಮುಂದಿನ ಪ್ರಮುಖ ಪ್ರಶ್ನೆಗಳಿಗೆ ನನಗೆ ಬೈಬಲ್‌ ಉತ್ತರಗಳು ಕೊಡಲ್ಪಟ್ಟವು: ವಿಗ್ರಹಾರಾಧನೆಯು ದೇವರಿಗೆ ಮೆಚ್ಚಿಗೆಯಾಗಿದೆಯೊ? (ವಿಮೋಚನಕಾಂಡ 20:​4, 5) ಬೆಂಕಿಯಿರುವ ನರಕವು ನಿಜವಾಗಿಯೂ ಇದೆಯೊ? (ಪ್ರಸಂಗಿ 9:5) ಮೃತರು ಪುನರುತ್ಥಾನಗೊಳಿಸಲ್ಪಡುವರೊ?​—⁠ಯೋಹಾನ 5:28, 29.

ದೇವರ ಹೆಸರಿನಲ್ಲಿ ಯುದ್ಧಮಾಡುತ್ತೇವೆ ಎಂದು ಮನುಷ್ಯರು ಹೇಳುವುದಾದರೂ, ಮನುಷ್ಯನ ರಕ್ತದಾಹಿ ಯುದ್ಧಗಳನ್ನು ಆತನು ಸಮ್ಮತಿಸುವುದಿಲ್ಲ ಎಂಬ ವಾಸ್ತವಾಂಶವು ನನ್ನ ಮೇಲೆ ಬಲವಾದ ಪ್ರಭಾವವನ್ನು ಬೀರಿತು. “ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ ಮತ್ತು ಆತನಿಗೆ ಯೆಹೋವ ಎಂಬ ಮಹೋನ್ನತವಾದ ಹೆಸರೊಂದಿದೆ ಎಂಬುದು ನನಗೆ ಗೊತ್ತಾಯಿತು. (1 ಯೋಹಾನ 4:8; ಕೀರ್ತನೆ 83:18) ಯೆಹೋವನ ರಾಜ್ಯದ ಮೂಲಕ ಮಾನವರು ಒಂದು ಭೂವ್ಯಾಪಕ ಪರದೈಸಿನಲ್ಲಿ ಸದಾಕಾಲ ಜೀವಿಸಲು ಶಕ್ತರಾಗುವರು ಎಂಬುದನ್ನು ತಿಳಿದು ನಾನು ತುಂಬ ಪುಳಕಗೊಂಡೆ. ದೇವರ ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನೊಂದಿಗೆ ಸೇವೆಮಾಡಲಿಕ್ಕಾಗಿ ದೇವರಿಂದ ಆಯ್ಕೆಮಾಡಲ್ಪಟ್ಟಿರುವ ಕೆಲವು ಅಪರಿಪೂರ್ಣ ಮಾನವರಿಗೆ ಲಭ್ಯವಿರುವ ಒಂದು ಅದ್ಭುತಕರ ಪ್ರತೀಕ್ಷೆಯ ಕುರಿತಾಗಿಯೂ ನಾನು ತಿಳಿದುಕೊಂಡೆ. ಆ ರಾಜ್ಯಕ್ಕಾಗಿ ನನ್ನಿಂದಾದುದೆಲ್ಲವನ್ನೂ ಮಾಡಲು ನಾನು ಸಿದ್ಧನಾದೆ. ಆದುದರಿಂದ, 1932ರ ಮೇ ತಿಂಗಳಿನಲ್ಲಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದೆ. ಈ ಹೆಜ್ಜೆಯನ್ನು ತೆಗೆದುಕೊಳ್ಳುವುದು ಧೈರ್ಯವನ್ನು ಅಗತ್ಯಪಡಿಸಿತು, ಏಕೆಂದರೆ ಆ ಕಾಲದಲ್ಲಿ ಕಟ್ಟಾ ರೋಮನ್‌ ಕ್ಯಾಥೊಲಿಕ್‌ ದೇಶವಾಗಿದ್ದ ಆಸ್ಟ್ರಿಯದಲ್ಲಿ ಧಾರ್ಮಿಕ ಅಸಹಿಷ್ಣುತೆಯು ಮೈಲುಗೈ ಹೊಂದಿತ್ತು.

ತಾತ್ಸಾರ ಮತ್ತು ವಿರೋಧವನ್ನು ಎದುರಿಸುವುದು

ನಾನು ಚರ್ಚನ್ನು ತೊರೆದಾಗ ನನ್ನ ಹೆತ್ತವರಿಗೆ ಬರಸಿಡಿಲು ಬಡಿದಂತಾಯಿತು, ಮತ್ತು ಆ ಕೂಡಲೆ ಪಾದ್ರಿಯು ಈ ಸುದ್ದಿಯನ್ನು ತನ್ನ ವೇದಿಕೆಯಿಂದ ಬಹಿರಂಗವಾಗಿ ಪ್ರಕಟಪಡಿಸಿದನು. ನೆರೆಯವರು ತಮ್ಮ ತಿರಸ್ಕಾರವನ್ನು ತೋರಿಸಲಿಕ್ಕಾಗಿ ನನ್ನ ಮುಂದೆ ನೆಲದ ಮೇಲೆ ಉಗಿಯುತ್ತಿದ್ದರು. ಆದರೂ, ನಾನು ಒಬ್ಬ ಪೂರ್ಣ ಸಮಯದ ಶುಶ್ರೂಷಕನಾಗಲು ದೃಢವಾಗಿ ನಿರ್ಧರಿಸಿದೆ ಮತ್ತು 1934ರ ಜನವರಿ ತಿಂಗಳಿನಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದೆ.

ನಮ್ಮ ಪ್ರಾಂತದಲ್ಲಿ ನಾಝಿ ಪಕ್ಷವು ಹೆಚ್ಚೆಚ್ಚು ಬಲವಾದ ಹಿಡಿತವನ್ನು ಹೊಂದುತ್ತಾ ಹೋದ ಹಾಗೆ, ರಾಜಕೀಯ ಸ್ಥಿತಿಯು ಹೆಚ್ಚೆಚ್ಚು ಚಿಂತಾಜನಕವಾಗುತ್ತಾ ಹೋಯಿತು. ಇನ್ಸ್‌ನ ಸ್ಟಿರಿಯನ್‌ ವ್ಯಾಲಿ ಎಂಬ ಸ್ಥಳದಲ್ಲಿ ನಾನು ಪಯನೀಯರ್‌ ಸೇವೆಯನ್ನು ಮಾಡುತ್ತಿದ್ದಾಗ, ಪೊಲೀಸರು ಯಾವಾಗಲೂ ನನ್ನನ್ನು ಹಿಂಬಾಲಿಸುತ್ತಲೇ ಇದ್ದರು, ಮತ್ತು ನಾನು ‘ಸರ್ಪದಂತೆ ಜಾಣನಾಗಿ’ ಕಾರ್ಯನಡಿಸಬೇಕಿತ್ತು. (ಮತ್ತಾಯ 10:16) ಇಸವಿ 1934ರಿಂದ 1938ರ ತನಕ ಹಿಂಸೆಯು ನನ್ನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿತ್ತು. ನಾನು ನಿರುದ್ಯೋಗಿಯಾಗಿದ್ದೆನಾದರೂ ನನಗೆ ನಿರುದ್ಯೋಗದ ಪರಿಹಾರ ಧನವು ಕೊಡಲ್ಪಡುತ್ತಿರಲಿಲ್ಲ, ಮತ್ತು ನನ್ನ ಸಾರುವ ಚಟುವಟಿಕೆಯ ಕಾರಣದಿಂದ ನಾನು ಅನೇಕ ಅಲ್ಪಾವಧಿಯ ಮತ್ತು ನಾಲ್ಕು ದೀರ್ಘಾವಧಿಯ ಸೆರೆಮನೆ ಶಿಕ್ಷೆಗಳಿಗೆ ಗುರಿಪಡಿಸಲ್ಪಟ್ಟೆ.

ಹಿಟ್ಲರನ ಸೇನೆಗಳು ಆಸ್ಟ್ರಿಯವನ್ನು ಆಕ್ರಮಿಸುತ್ತವೆ

ಇಸವಿ 1938ರ ಮಾರ್ಚ್‌ ತಿಂಗಳಿನಲ್ಲಿ, ಹಿಟ್ಲರನ ಸೇನೆಗಳು ಆಸ್ಟ್ರಿಯದ ಮೇಲೆ ದಾಳಿಮಾಡಿದವು. ನಾಝಿ ಆಳ್ವಿಕೆಯನ್ನು ವಿರೋಧಿಸಿದರೆಂಬ ದೋಷಾರೋಪದಿಂದ, ಕೆಲವೇ ದಿನಗಳೊಳಗೆ 90,000ಕ್ಕಿಂತಲೂ ಹೆಚ್ಚು ಜನರು, ಅಂದರೆ ವಯಸ್ಕ ಜನಸಂಖ್ಯೆಯ ಸುಮಾರು 2 ಪ್ರತಿಶತದಷ್ಟು ಮಂದಿ ಬಂಧಿಸಲ್ಪಟ್ಟರು ಮತ್ತು ಸೆರೆಮನೆಗಳಿಗೆ ಹಾಗೂ ಸೆರೆಶಿಬಿರಗಳಿಗೆ ಕಳುಹಿಸಲ್ಪಟ್ಟರು. ಮುಂದೆ ಏನು ಸಂಭವಿಸಲಿತ್ತೋ ಅದಕ್ಕೆ ಯೆಹೋವನ ಸಾಕ್ಷಿಗಳು ಹೆಚ್ಚುಕಡಿಮೆ ಸಿದ್ಧರಾಗಿದ್ದರು. 1937ರ ಬೇಸಗೆ ಕಾಲದಲ್ಲಿ, ಒಂದು ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ನನ್ನ ಸ್ವಂತ ಸಭೆಯ ಅನೇಕ ಸದಸ್ಯರು ಸೈಕಲ್‌ನಲ್ಲಿ ಪ್ರಾಗ್‌ಗೆ 350 ಕಿಲೊಮೀಟರ್‌ ದೂರ ಪ್ರಯಾಣಿಸಿದ್ದರು. ಅಲ್ಲಿ ಅವರು, ಜರ್ಮನಿಯಲ್ಲಿರುವ ನಮ್ಮ ಜೊತೆ ವಿಶ್ವಾಸಿಗಳ ವಿರುದ್ಧ ನಡೆಸಲ್ಪಟ್ಟ ಘೋರ ಅತ್ಯಾಚಾರದ ಕೃತ್ಯಗಳ ಕುರಿತು ಕೇಳಿಸಿಕೊಂಡರು. ಸ್ಪಷ್ಟವಾಗಿಯೇ, ಈಗ ಹಿಂಸೆಯನ್ನು ಅನುಭವಿಸುವ ಸರದಿಯು ನಮ್ಮದಾಗಿತ್ತು.

ಹಿಟ್ಲರನ ಸೇನೆಗಳು ಆಸ್ಟ್ರಿಯಕ್ಕೆ ಕಾಲಿಟ್ಟ ದಿನದಿಂದ, ಯೆಹೋವನ ಸಾಕ್ಷಿಗಳ ಕೂಟಗಳು ಮತ್ತು ಸಾರುವ ಚಟುವಟಿಕೆಯು ಗುಪ್ತವಾಗಿ ನಡೆಸಲ್ಪಡುವ ಒತ್ತಡಕ್ಕೆ ಒಳಗಾಯಿತು. ಸ್ವಿಸ್‌ ಗಡಿಯಿಂದ ಬೈಬಲ್‌ ಸಾಹಿತ್ಯವನ್ನು ರಹಸ್ಯವಾಗಿ ಇಲ್ಲಿಗೆ ತರಲಾಗುತ್ತಿತ್ತಾದರೂ, ಇದು ಎಲ್ಲರಿಗೂ ಸಾಕಾಗುತ್ತಿರಲಿಲ್ಲ. ಆದುದರಿಂದ ವಿಯೆನ್ನದಲ್ಲಿರುವ ಜೊತೆ ಕ್ರೈಸ್ತರು ಗುಪ್ತವಾದ ರೀತಿಯಲ್ಲಿ ಸಾಹಿತ್ಯವನ್ನು ಉತ್ಪಾದಿಸುತ್ತಿದ್ದರು. ನಾನು ಅನೇಕವೇಳೆ ಒಬ್ಬ ಅಂಚೆಯವನಂತೆ ಸಾಕ್ಷಿಗಳಿಗೆ ಸಾಹಿತ್ಯವನ್ನು ತಲಪಿಸುವ ಕೆಲಸವನ್ನು ಮಾಡುತ್ತಿದ್ದೆ.

ಒಂದು ಸೆರೆಶಿಬಿರಕ್ಕೆ

ಇಸವಿ 1939ರ ಏಪ್ರಿಲ್‌ 4ರಂದು ಬ್ಯಾಟ್‌ ಇಶ್ಲ್‌ನಲ್ಲಿ ಕ್ರಿಸ್ತನ ಮರಣದ ಸ್ಮಾರಕ ದಿನವನ್ನು ಆಚರಿಸುತ್ತಿದ್ದಾಗ, ನನ್ನನ್ನು ಮತ್ತು ಮೂವರು ಜೊತೆ ಕ್ರೈಸ್ತರನ್ನು ಗೆಸ್ಟಪೊಗಳು ಬಂಧಿಸಿದರು. ನಮ್ಮೆಲ್ಲರನ್ನೂ ಲಿನ್ಸ್‌ನಲ್ಲಿರುವ ರಾಜ್ಯ ಪೊಲೀಸ್‌ ಮುಖ್ಯ ಕಾರ್ಯಾಲಯಕ್ಕೆ ಕಾರಿನಲ್ಲಿ ಕರೆದೊಯ್ಯಲಾಯಿತು. ನಾನು ಕಾರ್‌ನಲ್ಲಿ ಪ್ರಯಾಣಿಸಿದ್ದು ಇದೇ ಮೊದಲ ಬಾರಿಯಾಗಿತ್ತು, ಆದರೆ ಈ ಪ್ರಯಾಣವನ್ನು ಆನಂದಿಸುವಷ್ಟು ವ್ಯವಧಾನ ನನಗಾಗ ಇರಲಿಲ್ಲ. ಲಿನ್ಸ್‌ನಲ್ಲಿ ನನ್ನನ್ನು ಪ್ರಾಣಸಂಕಟಕರವಾದ ಅನೇಕ ವಿಚಾರಣೆಗಳಿಗೆ ಒಳಪಡಿಸಲಾಯಿತು, ಆದರೆ ನಾನು ಮಾತ್ರ ನನ್ನ ನಂಬಿಕೆಯನ್ನು ತೊರೆಯಲಿಲ್ಲ. ಐದು ತಿಂಗಳುಗಳ ಬಳಿಕ ಉತ್ತರ ಆಸ್ಟ್ರಿಯದಲ್ಲಿದ್ದ ಪರೀಕ್ಷಕ ನ್ಯಾಯಾಧೀಶರ ಮುಂದೆ ನಾನು ಹಾಜರುಪಡಿಸಲ್ಪಟ್ಟೆ. ಅನಿರೀಕ್ಷಿತವಾಗಿ, ನನ್ನ ವಿರುದ್ಧವಾದ ಅಪರಾಧಿ ಕಾನೂನುಕ್ರಮಗಳು ಅಷ್ಟಕ್ಕೇ ನಿಲ್ಲಿಸಲ್ಪಟ್ಟವು; ಆದರೆ ಇದು ನನ್ನ ವಿಷಮ ಪರೀಕ್ಷೆಯ ಕೊನೆಯಾಗಿರಲಿಲ್ಲ. ಈ ಮಧ್ಯೆ, ನನ್ನೊಂದಿಗಿದ್ದ ಆ ಇತರ ಮೂರು ಮಂದಿ ಕ್ರೈಸ್ತರನ್ನು ಸೆರೆಶಿಬಿರಗಳಿಗೆ ಕಳುಹಿಸಲಾಯಿತು ಮತ್ತು ಅವರು ಕೊನೆಯ ತನಕ ನಂಬಿಗಸ್ತರಾಗಿದ್ದು ಅಲ್ಲೇ ಮೃತಪಟ್ಟರು.

ನಾನು ಬಂಧನದಲ್ಲಿದ್ದೆ, ಮತ್ತು 1939ರ ಅಕ್ಟೋಬರ್‌ 5ರಂದು, ಜರ್ಮನಿಯಲ್ಲಿರುವ ಬುಚೆನ್‌ವಾಲ್ಡ್‌ ಸೆರೆಶಿಬಿರಕ್ಕೆ ನನ್ನನ್ನು ಕರೆದೊಯ್ಯಲಾಗುವುದು ಎಂದು ನನಗೆ ತಿಳಿಸಲಾಯಿತು. ಸೆರೆಯಾಳುಗಳಾಗಿದ್ದ ನಮಗೆ ಲಿನ್ಸ್‌ ರೈಲು ನಿಲ್ದಾಣದಲ್ಲಿ ಒಂದು ವಿಶೇಷ ರೈಲು ಕಾದಿತ್ತು. ಸಾಮಾನು ಸಾಗಿಸುವ ಆ ರೈಲುಗಳಲ್ಲಿ ಇಬ್ಬರು ವ್ಯಕ್ತಿಗಳು ಉಳಿಯುವ ಕಂಪಾರ್ಟ್‌ಮೆಂಟ್‌ಗಳಿದ್ದವು. ಕಂಪಾರ್ಟ್‌ಮೆಂಟ್‌ನಲ್ಲಿ ನನ್ನೊಂದಿಗಿದ್ದ ವ್ಯಕ್ತಿ ಯಾರೆಂಬುದನ್ನು ಊಹಿಸಿಕೊಳ್ಳಿರಿ; ಉತ್ತರ ಆಸ್ಟ್ರಿಯದ ಮಾಜಿ ರಾಜ್ಯಪಾಲರಾಗಿದ್ದ ಡಾ. ಹೈನ್‌ರಿಕ್‌ ಗ್ಲೈಸ್ನರೇ.

ನಾನು ಮತ್ತು ಡಾ. ಗ್ಲೈಸ್ನರ್‌ ಒಂದು ಆಸಕ್ತಿಕರವಾದ ಸಂಭಾಷಣೆಯಲ್ಲಿ ತೊಡಗಿದೆವು. ನನ್ನ ಪರಿಸ್ಥಿತಿಯನ್ನು ನೋಡಿ ಅವರು ನಿಜವಾಗಿಯೂ ಮರುಗಿದರು ಮತ್ತು ಅವರು ರಾಜ್ಯಪಾಲರಾಗಿದ್ದ ಸಮಯದಲ್ಲೂ ಅವರ ಪ್ರಾಂತದಲ್ಲಿ ಯೆಹೋವನ ಸಾಕ್ಷಿಗಳು ಕಾನೂನಿಗೆ ಸಂಬಂಧಪಟ್ಟ ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸಿದರು ಎಂಬುದನ್ನು ಕೇಳಿ ಆಘಾತಗೊಂಡರು. ವಿಷಾದಭಾವದಿಂದ ಅವರು ನನಗೆ ಹೇಳಿದ್ದು: “ಇಂಗ್ಲೈಟ್ನರವರೇ, ಈಗಾಗಲೇ ಆಗಿರುವ ತಪ್ಪನ್ನು ನಾನು ಸರಿಪಡಿಸಲಾರೆ ನಿಜ, ಆದರೆ ಕ್ಷಮೆಯಾಚಿಸಲು ಬಯಸುತ್ತೇನೆ. ನಮ್ಮ ಸರಕಾರವು ನ್ಯಾಯವೈಫಲ್ಯದ ದೋಷಾಪರಾಧವನ್ನು ಹೊತ್ತಿರುವಂತೆ ತೋರುತ್ತದೆ. ಮುಂದೆ ಎಂದಾದರೂ ನಿಮಗೆ ಯಾವುದೇ ಸಹಾಯವು ಬೇಕಿರುವಲ್ಲಿ, ನನ್ನಿಂದ ಸಾಧ್ಯವಿರುವುದೆಲ್ಲವನ್ನು ಮಾಡಲು ನಾನು ಸಿದ್ಧನಿದ್ದೇನೆ.” ಯುದ್ಧಾನಂತರ ನಾವು ಒಬ್ಬರನ್ನೊಬ್ಬರು ಪುನಃ ಸಂಧಿಸಿದೆವು. ನಾಝಿ ಆಳ್ವಿಕೆಯ ದುರಾಚಾರಕ್ಕೆ ಬಲಿಯಾದವರಿಗೆ ಸರಕಾರವು ಕೊಡುವ ನಿವೃತ್ತಿ ವೇತನವನ್ನು ನಾನು ಪಡೆದುಕೊಳ್ಳುವಂತೆ ಅವರು ನನಗೆ ಸಹಾಯಮಾಡಿದರು.

“ನಾನು ನಿನಗೆ ಗುಂಡುಹಾರಿಸುತ್ತೇನೆ”

ಇಸವಿ 1939ರ ಅಕ್ಟೋಬರ್‌ 9ರಂದು ನಾನು ಬುಚೆನ್‌ವಾಲ್ಡ್‌ ಸೆರೆಶಿಬಿರಕ್ಕೆ ಆಗಮಿಸಿದೆ. ಸ್ವಲ್ಪ ಸಮಯದಲ್ಲೇ, ಹೊಸದಾಗಿ ಆಗಮಿಸಿದವರಲ್ಲಿ ಒಬ್ಬ ಸಾಕ್ಷಿಯೂ ಇದ್ದಾನೆ ಎಂಬ ಸುದ್ದಿಯು ಆ ಕಾಪುದಾಣದ ಸೇವಕನಿಗೆ ತಲಪಿತು; ಮತ್ತು ನಾನು ಅವನ ಗಮನದ ಕೇಂದ್ರಬಿಂದುವಾದೆ. ಅವನು ನನ್ನನ್ನು ನಿರ್ದಯವಾಗಿ ಹೊಡೆದನು. ಆಮೇಲೆ, ನನ್ನ ನಂಬಿಕೆಯನ್ನು ತೊರೆಯುವಂತೆ ಮಾಡುವುದರಲ್ಲಿ ಅವನು ಸಫಲನಾಗಲಿಲ್ಲ ಎಂಬುದು ಅವನಿಗೆ ಮನವರಿಕೆಯಾದಾಗ ಅವನಂದದ್ದು: “ಇಂಗ್ಲೈಟ್ನ ನಾನು ನಿನಗೆ ಗುಂಡುಹಾರಿಸುತ್ತೇನೆ. ಆದರೆ ಇದಕ್ಕೆ ಮುಂಚೆ, ನಿನ್ನ ಹೆತ್ತವರಿಗೆ ವಿದಾಯ ಹೇಳಲಿಕ್ಕಾಗಿ ಒಂದು ಕಾರ್ಡನ್ನು ಬರೆಯಲು ನಿನಗೆ ಅನುಮತಿ ನೀಡುತ್ತೇನೆ.” ನನ್ನ ಹೆತ್ತವರಿಗೆ ನಾನು ಬರೆಯಸಾಧ್ಯವಿರುವ ಸಾಂತ್ವನದಾಯಕ ಮಾತುಗಳ ಬಗ್ಗೆ ಆಲೋಚಿಸಿದ ಬಳಿಕ, ಪ್ರತಿ ಬಾರಿ ನಾನು ಬರೆಯಲು ಆರಂಭಿಸಿದಾಗೆಲ್ಲ ಅವನು ನನ್ನ ಬಲಮೊಣಕೈಯ ಮೇಲೆ ಹೊಡೆಯುತ್ತಿದ್ದನು, ಮತ್ತು ಇದರಿಂದಾಗಿ ನಾನು ಕಾಗದದ ಮೇಲೆ ಗೀಚಿಬಿಡುತ್ತಿದ್ದೆ. ಆಗ ಅವನು ನನ್ನನ್ನು ಹೀಗೆ ಮೂದಲಿಸಿದನು: “ಎಂಥ ಮೂರ್ಖ! ಅವನಿಗೆ ಎರಡು ಸಾಲುಗಳನ್ನು ನೆಟ್ಟಗೆ ಬರೆಯಲೂ ಸಾಧ್ಯವಿಲ್ಲ. ಆದರೂ ಬೈಬಲನ್ನು ಓದುವುದರಿಂದ ಇದು ಅವನನ್ನು ತಡೆಯೋದಿಲ್ಲ ಅಲ್ವಾ?”

ಈ ವೃತ್ತಾಂತದ ಆರಂಭದಲ್ಲೇ ನಾನು ತಿಳಿಸಿದಂತೆ, ತದನಂತರ ಆ ಸೇವಕನು ತನ್ನ ಪಿಸ್ತೂಲನ್ನು ತೆಗೆದು, ನನ್ನ ತಲೆಗೆ ಗುರಿಯಿಟ್ಟು, ಇನ್ನೇನು ಗುಂಡುಹಾರಿಸಲು ಸಿದ್ಧನಾಗಿದ್ದಾನೆ ಎಂದು ನಾನು ನಂಬುವಂತೆ ಮಾಡಿದನು. ಆ ಬಳಿಕ ಅವನು ನನ್ನನ್ನು, ತುಂಬ ಕಿರಿದಾದ ಮತ್ತು ಜನರಿಂದ ಕಿಕ್ಕಿರಿದಿದ್ದ ಒಂದು ಸೆರೆಕೋಣೆಯೊಳಗೆ ತುರುಕಿಸಿದನು. ನಾನು ಅಲ್ಲಿ ನಿಂತುಕೊಂಡೇ ರಾತ್ರಿಯನ್ನು ಕಳೆಯಬೇಕಾಗಿತ್ತು. ಹೇಗೂ ಆ ರಾತ್ರಿ ನನ್ನಿಂದ ನಿದ್ರಿಸಲೂ ಸಾಧ್ಯವಾಗುತ್ತಿರಲಿಲ್ಲ, ಏಕೆಂದರೆ ನನ್ನ ಇಡೀ ದೇಹವು ತುಂಬ ನೋಯುತ್ತಾ ಇತ್ತು. “ಕೆಲಸಕ್ಕೆ ಬಾರದ ಒಂದು ಧರ್ಮಕ್ಕಾಗಿ ಜೀವವನ್ನೇ ತ್ಯಾಗಮಾಡುವುದು ನಿಜವಾಗಿಯೂ ನಿಷ್ಪ್ರಯೋಜಕವಾಗಿದೆ!” ಎಂಬುದೇ ಸೆರೆಕೋಣೆಯಲ್ಲಿ ನನ್ನೊಂದಿಗಿದ್ದವರು ನೀಡಸಾಧ್ಯವಿದ್ದ “ಸಾಂತ್ವನದ” ಮಾತಾಗಿತ್ತು. ಡಾ. ಗ್ಲೈಸ್ನರ್‌ ಅವರು ನನ್ನ ಪಕ್ಕದ ಸೆರೆಕೋಣೆಯಲ್ಲಿದ್ದರು. ಏನು ಸಂಭವಿಸಿತೋ ಅದು ಅವರ ಕಿವಿಗೂ ಬಿತ್ತು ಮತ್ತು ಅವರು ಆಲೋಚನಾಪರರಾಗಿ ನುಡಿದದ್ದು: “ಕ್ರೈಸ್ತರ ಹಿಂಸೆಯು ಪುನಃ ಒಮ್ಮೆ ತನ್ನ ಕುರೂಪ ಮುಖವನ್ನು ತೋರಿಸಿದೆ!”

ಸಾಮಾನ್ಯವಾಗಿ ನಮಗೆ ಭಾನುವಾರಗಳಂದು ಕೆಲಸಮಾಡುವ ಅಗತ್ಯವಿರಲಿಲ್ಲವಾದರೂ, 1940ರ ಬೇಸಗೆಯಲ್ಲಿ ಭಾನುವಾರದಂದು ಕಲ್ಲುಗಣಿಯಲ್ಲಿ ಕೆಲಸಮಾಡಲಿಕ್ಕಾಗಿ ಅಲ್ಲಿಗೆ ಹಾಜರಾಗುವಂತೆ ಎಲ್ಲ ಸೆರೆವಾಸಿಗಳಿಗೆ ಅಪ್ಪಣೆ ನೀಡಲಾಗಿತ್ತು. ಸೆರೆವಾಸಿಗಳಲ್ಲಿ ಕೆಲವರ “ದುರ್ವರ್ತನೆಗಳಿಗೆ” ಪ್ರತೀಕಾರ ತೋರಿಸಲಿಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು. ಕಲ್ಲುಗಣಿಯಿಂದ ಶಿಬಿರಕ್ಕೆ ದೊಡ್ಡ ದೊಡ್ಡ ಕಲ್ಲುಗಳನ್ನು ಹೊತ್ತು ತರುವಂತೆ ನಮಗೆ ಆಜ್ಞಾಪಿಸಲಾಯಿತು. ಇಬ್ಬರು ಸೆರೆವಾಸಿಗಳು ನನ್ನ ಬೆನ್ನ ಮೇಲೆ ಒಂದು ದೊಡ್ಡ ಕಲ್ಲನ್ನು ಹೊರಿಸಲು ಪ್ರಯತ್ನಿಸುತ್ತಿದ್ದರು, ಮತ್ತು ಅದರ ಭಾರಕ್ಕೆ ನಾನು ಇನ್ನೇನು ಕುಸಿದುಬೀಳಲಿದ್ದೆ. ಆದರೆ, ಆಗ ಸೆರೆವಾಸಿಗಳು ಯಾರಿಗೆ ಹೆದರುತ್ತಿದ್ದರೋ ಆ ಆರ್ಟೂರ್‌ ರೋಡ್ಲ್‌ ಎಂಬ ಲಾಗಪ್ಯೂರ ಅಂದರೆ ಶಿಬಿರದ ಸೂಪರ್‌ವೈಸರನು ಅನಿರೀಕ್ಷಿತವಾಗಿ ನನ್ನ ಸಹಾಯಕ್ಕೆ ಬಂದನು. ಆ ದೊಡ್ಡ ಕಲ್ಲನ್ನು ಕೊಂಡೊಯ್ಯಲಿಕ್ಕಾಗಿ ನಾನು ಎಷ್ಟು ಕಷ್ಟಪಡುತ್ತಿದ್ದೇನೆಂಬುದನ್ನು ನೋಡಿದಾಗ ಅವನು ನನಗಂದದ್ದು: “ನಿನ್ನ ಬೆನ್ನಿನ ಮೇಲೆ ಅಷ್ಟು ದೊಡ್ಡ ಕಲ್ಲನ್ನಿಟ್ಟುಕೊಂಡು ನೀನು ಎಂದೂ ಶಿಬಿರವನ್ನು ತಲಪಲಾರೆ! ಈಗಲೇ ಅದನ್ನು ಕೆಳಗೆ ಹಾಕು!” ಈ ಆಜ್ಞೆಗೆ ವಿಧೇಯನಾಗುವುದು ನನಗೆ ನಿರಾಳವೆನಿಸಿತು. ತದನಂತರ ರೋಡ್ಲ್‌ ನನಗೆ ಹೆಚ್ಚು ಚಿಕ್ಕದಾದ ಒಂದು ಕಲ್ಲನ್ನು ತೋರಿಸಿ, “ಅದನ್ನು ಎತ್ತಿಕೊಂಡು ಶಿಬಿರಕ್ಕೆ ತೆಗೆದುಕೊಂಡು ಬಾ. ಅದನ್ನು ಹೊರುವುದು ಸುಲಭ!” ಎಂದು ಹೇಳಿದನು. ಅನಂತರ ನಮ್ಮ ಸೂಪರ್‌ವೈಸರ್‌ನ ಕಡೆಗೆ ತಿರುಗಿ ಅವನು ಆಜ್ಞಾಪಿಸಿದ್ದು: “ಬೈಬಲ್‌ ವಿದ್ಯಾರ್ಥಿಗಳು ತಮ್ಮ ಕೋಣೆಗಳಿಗೆ ಹಿಂದಿರುಗಲಿ. ಅವರು ಇಡೀ ದಿನಕ್ಕೆ ಸಾಕಾಗುವಷ್ಟು ಕೆಲಸಮಾಡಿದ್ದಾರೆ!”

ಪ್ರತಿ ದಿನ ಕೆಲಸ ಮುಗಿಸಿದ ಬಳಿಕ, ನನ್ನ ಆಧ್ಯಾತ್ಮಿಕ ಕುಟುಂಬದೊಂದಿಗೆ ಸಹವಾಸಿಸುವುದು ನನಗೆ ಯಾವಾಗಲೂ ಸಂತೋಷ ನೀಡುತ್ತಿತ್ತು. ಆಧ್ಯಾತ್ಮಿಕ ಆಹಾರವನ್ನು ವಿತರಿಸುವ ಏರ್ಪಾಡುಗಳೂ ನಮಗಿದ್ದವು. ಸಹೋದರನೊಬ್ಬನು ಒಂದು ಚಿಕ್ಕ ಚೀಟಿಯ ಮೇಲೆ ಒಂದು ಬೈಬಲ್‌ ವಚನವನ್ನು ಬರೆದು, ಅದನ್ನು ಇತರರಿಗೆ ದಾಟಿಸುತ್ತಿದ್ದನು. ಒಂದು ಬೈಬಲನ್ನು ಸಹ ಗುಪ್ತವಾಗಿ ಶಿಬಿರದೊಳಗೆ ತರಲಾಗಿತ್ತು. ಅದನ್ನು ಹರಿದು, ಪ್ರತ್ಯೇಕ ಪುಸ್ತಕಗಳಾಗಿ ವಿಭಾಗಿಸಲಾಗಿತ್ತು. ಸುಮಾರು ಮೂರು ತಿಂಗಳುಗಳ ವರೆಗೆ ಯೋಬನ ಪುಸ್ತಕವು ನನ್ನ ಬಳಿಯಿತ್ತು. ನಾನು ಅದನ್ನು ನನ್ನ ಕಾಲುಚೀಲದಲ್ಲಿ ಅಡಗಿಸಿಟ್ಟಿದ್ದೆ. ಯೋಬನ ವೃತ್ತಾಂತವು ನನಗೆ ದೃಢಚಿತ್ತನಾಗಿ ಉಳಿಯಲು ಸಹಾಯಮಾಡಿತು.

ಅಂತಿಮವಾಗಿ, 1941ರ ಮಾರ್ಚ್‌ 7ರಂದು, ನೇಡಹಾಗನ್‌ ಸೆರೆಶಿಬಿರಕ್ಕೆ ವರ್ಗಾಯಿಸಲ್ಪಟ್ಟ ಒಂದು ದೊಡ್ಡ ಬೆಂಗಾವಲು ದಳದೊಂದಿಗೆ ನಾನು ಜೊತೆಗೂಡಿದೆ. ದಿನದಿಂದ ದಿನಕ್ಕೆ ನನ್ನ ಪರಿಸ್ಥಿತಿಯು ಹದಗೆಡುತ್ತಾ ಹೋಗುತ್ತಿತ್ತು. ಒಂದು ದಿನ, ಉಪಕರಣಗಳನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್‌ಮಾಡುವಂತೆ ನನಗೆ ಮತ್ತು ಇಬ್ಬರು ಸಹೋದರರಿಗೆ ಅಪ್ಪಣೆ ನೀಡಲಾಯಿತು. ಈ ಕೆಲಸವನ್ನು ಮುಗಿಸಿದ ಬಳಿಕ ನಾವು ಸೆರೆವಾಸಿಗಳ ಇನ್ನೊಂದು ಗುಂಪಿನೊಂದಿಗೆ ಸಿಪಾಯಿಕೋಣೆಗಳಿಗೆ ಹೊರಟೆವು. ದಾರಿಯಲ್ಲಿ ನಾನು ಇತರರಷ್ಟು ವೇಗವಾಗಿ ನಡೆಯದಿರುವುದನ್ನು ಒಬ್ಬ ಎಸ್‌.ಎಸ್‌. ಸೈನಿಕನು ಗಮನಿಸಿದನು. ಅವನಿಗೆಷ್ಟು ರೋಷ ಬಂತೆಂದರೆ, ಯಾವುದೇ ಮುನ್ನೆಚ್ಚರಿಕೆಯನ್ನು ನೀಡದೆ ಅವನು ಹಿಂದಿನಿಂದ ನನಗೆ ಕ್ರೂರವಾದ ರೀತಿಯಲ್ಲಿ ಒದ್ದನು. ಇದು ನನಗೆ ಗಂಭೀರವಾದ ಗಾಯವನ್ನು ಉಂಟುಮಾಡಿತು. ಆ ನೋವು ತುಂಬ ಯಾತನಾಮಯವಾಗಿತ್ತು, ಆದರೂ ಮರುದಿನ ನಾನು ಅದೇ ನೋವಿನೊಂದಿಗೆ ಕೆಲಸಕ್ಕೆ ಹೋದೆ.

ಅನಿರೀಕ್ಷಿತ ಬಿಡುಗಡೆ

ಇಸವಿ 1943ರ ಏಪ್ರಿಲ್‌ ತಿಂಗಳಿನಲ್ಲಿ, ಕೊನೆಗೂ ನೇಡಹಾಗನ್‌ ಸೆರೆಶಿಬಿರವು ಖಾಲಿಮಾಡಲ್ಪಟ್ಟಿತು. ಇದಾದ ಬಳಿಕ ನನ್ನನ್ನು ರಾವೆನ್ಸ್‌ಬ್ರೂಕ್‌ನಲ್ಲಿದ್ದ ಮರಣ ಶಿಬಿರಕ್ಕೆ ಸ್ಥಳಾಂತರಿಸಲಾಯಿತು. ತದನಂತರ 1943ರ ಜೂನ್‌ ತಿಂಗಳಿನಲ್ಲಿ, ಅನಿರೀಕ್ಷಿತವಾಗಿ ನನಗೆ ಸೆರೆಶಿಬಿರದಿಂದ ಬಿಡುಗಡೆಯಾಗುವ ಅವಕಾಶವನ್ನು ನೀಡಲಾಯಿತು. ಈ ಸಲ ನನ್ನ ಬಿಡುಗಡೆಯು ನನ್ನ ನಂಬಿಕೆಯನ್ನು ತೊರೆಯುವ ಷರತ್ತಿನ ಮೇಲೆ ಹೊಂದಿಕೊಂಡಿರಲಿಲ್ಲ. ನನ್ನ ಜೀವಮಾನದ ಉಳಿದ ಕಾಲಾವಧಿಯಲ್ಲೆಲ್ಲ ಒಂದು ಫಾರ್ಮಿನಲ್ಲಿ ಕಡ್ಡಾಯದ ದುಡಿಮೆಯನ್ನು ಮಾಡುವುದಕ್ಕೆ ನಾನು ಒಪ್ಪಿಕೊಳ್ಳಬೇಕಿತ್ತಷ್ಟೆ. ಶಿಬಿರದ ಕರಾಳ ಜೀವನದಿಂದ ತಪ್ಪಿಸಿಕೊಳ್ಳಲಿಕ್ಕಾಗಿ ನಾನು ಇದನ್ನು ಮಾಡಲು ಸಿದ್ಧನಾಗಿದ್ದೆ. ಕೊನೆಯ ತಪಾಸಣೆಗಾಗಿ ನಾನು ಶಿಬಿರದ ಡಾಕ್ಟರ್‌ ಬಳಿಗೆ ಹೋದೆ. ನನ್ನನ್ನು ನೋಡಿದ ಡಾಕ್ಟರ್‌ ಆಶ್ಚರ್ಯಗೊಂಡು ಉದ್ಗರಿಸಿದ್ದು: “ಓ ನೀನು ಇನ್ನೂ ಒಬ್ಬ ಯೆಹೋವನ ಸಾಕ್ಷಿಯಾಗಿಯೇ ಉಳಿದಿದ್ದೀಯ!” ಅದಕ್ಕೆ ನಾನು “ಹೌದು ಡಾಕ್ಟರ್‌” ಎಂದು ಉತ್ತರಿಸಿದೆ. “ಹಾಗಾದರೆ, ನಾವು ನಿನ್ನನ್ನು ಏಕೆ ಬಿಡುಗಡೆಮಾಡಬೇಕು ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಆದರೆ ಇನ್ನೊಂದು ಕಡೆಯಲ್ಲಿ, ನಿನ್ನಂಥ ದರಿದ್ರ ಜೀವಿಯನ್ನು ಇಲ್ಲಿಂದ ತೊಲಗಿಸಿದರೆ ನಮಗೆಷ್ಟು ನೆಮ್ಮದಿ ಸಿಗುವುದು.”

ಅವನ ವರ್ಣನೆಯು ಅತಿಶಯೋಕ್ತಿಯಾಗಿರಲಿಲ್ಲ. ನನ್ನ ಆರೋಗ್ಯವು ನಿಜವಾಗಿಯೂ ವಿಷಮ ಸ್ಥಿತಿಯಲ್ಲಿತ್ತು. ನನ್ನ ಚರ್ಮವು ಸ್ವಲ್ಪಮಟ್ಟಿಗೆ ಹೇನುಗಳಿಗೆ ಆಹಾರವಾಗಿತ್ತು, ಹೊಡೆತಗಳಿಂದ ನನ್ನ ಒಂದು ಕಿವಿ ಕಿವುಡಾಗಿತ್ತು ಮತ್ತು ನನ್ನ ಇಡೀ ದೇಹವು ಕೀವುಭರಿತ ಹುಣ್ಣುಗಳಿಂದ ತುಂಬಿತ್ತು. 46 ತಿಂಗಳುಗಳ ಕಷ್ಟತೊಂದರೆ, ಸತತ ಹಸಿವು ಮತ್ತು ಕಡ್ಡಾಯದ ದುಡಿತದ ಬಳಿಕ ನನ್ನ ತೂಕವು ಕೇವಲ 28 ಕಿಲೊಗ್ರ್ಯಾಮ್‌ ಆಗಿತ್ತು. ಈ ಸ್ಥಿತಿಯಲ್ಲಿ ನಾನು 1943ರ ಜುಲೈ 15ರಂದು ರಾವೆನ್ಸ್‌ಬ್ರೂಕ್‌ನಿಂದ ಬಿಡುಗಡೆಮಾಡಲ್ಪಟ್ಟೆ.

ಒಬ್ಬ ಸೈನಿಕನ ಬೆಂಗಾವಲಿಲ್ಲದೆ ನನ್ನೊಬ್ಬನನ್ನೇ ರೈಲಿನಲ್ಲಿ ನನ್ನ ಸ್ವಂತ ಪಟ್ಟಣಕ್ಕೆ ಕಳುಹಿಸಲಾಯಿತು, ಮತ್ತು ನಾನು ಲಿನ್ಸ್‌ನಲ್ಲಿದ್ದ ಗೆಸ್ಟಪೊ ಮುಖ್ಯ ಕಾರ್ಯಾಲಯಕ್ಕೆ ಹಾಜರಾದೆ. ಗೆಸ್ಟಪೊ ಅಧಿಕಾರಿಯು ನನ್ನ ಬಿಡುಗಡೆಯ ಕಾಗದಪತ್ರಗಳನ್ನು ನನಗೆ ಕೊಟ್ಟು, ಹೀಗೆ ಎಚ್ಚರಿಕೆ ನೀಡಿದನು: “ನಿನ್ನ ಗುಪ್ತ ಚಟುವಟಿಕೆಯನ್ನು ಮುಂದುವರಿಸಲಿಕ್ಕಾಗಿ ನಿನ್ನನ್ನು ಬಿಡುಗಡೆ ಮಾಡುತ್ತಿದ್ದೇವೆಂದು ನೀನು ನೆನಸುತ್ತಿರುವಲ್ಲಿ, ನಿನ್ನ ಎಣಿಕೆ ತಪ್ಪು! ಮುಂದೆಂದಾದರೂ ನೀನು ಸಾರುತ್ತಿರುವಾಗ ನಮ್ಮ ಕೈಗೆ ಸಿಕ್ಕಿಬಿದ್ದರೆ ದೇವರೇ ನಿನ್ನನ್ನು ಕಾಪಾಡಬೇಕಷ್ಟೆ.”

ಕೊನೆಗೂ ನಾನು ಮನೆಗೆ ಹಿಂದಿರುಗಿದ್ದೆ! 1939ರ ಏಪ್ರಿಲ್‌ 4ರಂದು ಪ್ರಥಮ ಬಾರಿಗೆ ನಾನು ಬಂಧಿಸಲ್ಪಟ್ಟ ಸಮಯದಿಂದಲೂ ನನ್ನ ತಾಯಿಯವರು ನನ್ನ ಕೋಣೆಯಲ್ಲಿದ್ದ ಒಂದು ವಸ್ತುವನ್ನೂ ಬದಲಾಯಿಸಿರಲಿಲ್ಲ. ನನ್ನ ಹಾಸಿಗೆಯ ಪಕ್ಕದಲ್ಲಿದ್ದ ಮೇಜಿನ ಮೇಲೆ ನಾನು ತೆರೆದಿಟ್ಟಿದ್ದ ಬೈಬಲ್‌ ಈಗಲೂ ಹಾಗೆಯೇ ಇತ್ತು! ನಾನು ಮೊಣಕಾಲೂರಿ, ಪ್ರಾರ್ಥನೆಯಲ್ಲಿ ದೇವರಿಗೆ ಹೃದಯದಾಳದಿಂದ ಉಪಕಾರ ಹೇಳಿದೆ.

ಸ್ವಲ್ಪದರಲ್ಲೇ ನನಗೆ ಒಂದು ಬೆಟ್ಟದ ಫಾರ್ಮಿನಲ್ಲಿ ಕೆಲಸಮಾಡುವ ನೇಮಕವು ಸಿಕ್ಕಿತು. ನನ್ನ ಬಾಲ್ಯ ಸ್ನೇಹಿತನಾಗಿದ್ದ ಆ ರೈತನು ನನಗೆ ಚಿಕ್ಕ ಮೊತ್ತದ ಸಂಬಳವನ್ನೂ ಕೊಡುತ್ತಿದ್ದನು; ಅವನು ಸಂಬಳವನ್ನು ಕೊಡುವ ಹಂಗೇನೂ ಇರಲಿಲ್ಲ. ಯುದ್ಧಕ್ಕೆ ಮೊದಲು, ಈ ಸ್ನೇಹಿತನು ತನ್ನ ಕಟ್ಟಡದಲ್ಲಿ ಕೆಲವೊಂದು ಬೈಬಲ್‌ ಸಾಹಿತ್ಯವನ್ನು ಬಚ್ಚಿಡಲು ನನಗೆ ಅನುಮತಿಯನ್ನು ನೀಡಿದ್ದನು. ಆಧ್ಯಾತ್ಮಿಕವಾಗಿ ಬಲವನ್ನು ಪಡೆಯಲಿಕ್ಕಾಗಿ ಈ ಚಿಕ್ಕ ಸಾಹಿತ್ಯ ಉಗ್ರಾಣವನ್ನು ಸದುಪಯೋಗಿಸಲು ನನಗೆ ತುಂಬ ಸಂತೋಷವಾಗುತ್ತಿತ್ತು. ನನ್ನೆಲ್ಲ ಆವಶ್ಯಕತೆಗಳು ಪೂರೈಸಲ್ಪಟ್ಟಿದ್ದವು ಮತ್ತು ಯುದ್ಧವು ಮುಗಿಯುವ ವರೆಗೆ ನಾನು ಫಾರ್ಮಿನಲ್ಲೇ ಉಳಿಯಬೇಕೆಂದು ನಿರ್ಧರಿಸಿದೆ.

ಬೆಟ್ಟಗಳಲ್ಲಿ ಅಡಗಿಕೊಳ್ಳುವುದು

ಆದರೂ, ಆ ಸ್ವಾತಂತ್ರ್ಯಭರಿತ ಪ್ರಶಾಂತ ಸ್ಥಿತಿಯು ಹೆಚ್ಚು ಕಾಲ ಉಳಿಯಲಿಲ್ಲ. 1943ರ ಆಗಸ್ಟ್‌ ತಿಂಗಳ ಮಧ್ಯಭಾಗದಲ್ಲಿ, ಒಂದು ವೈದ್ಯಕೀಯ ತಪಾಸಣೆಗಾಗಿ ಒಬ್ಬ ಮಿಲಿಟರಿ ಡಾಕ್ಟರ್‌ನ ಬಳಿಗೆ ಹೋಗುವಂತೆ ನನಗೆ ಅಪ್ಪಣೆ ನೀಡಲಾಯಿತು. ನನ್ನ ಬೆನ್ನಿನ ಸ್ಥಿತಿಯಿಂದಾಗಿ ನಾನು ಮಿಲಿಟರಿ ಸೇವೆಗೆ ಅನರ್ಹನಾಗಿದ್ದೇನೆ ಎಂದು ಅವನು ಮೊದಲು ಹೇಳಿದ. ಆದರೆ, ಒಂದು ವಾರದ ಬಳಿಕ ಅದೇ ಡಾಕ್ಟರನು ತನ್ನ ನಿರ್ಣಯದಲ್ಲಿ ತಿದ್ದುಪಡಿಯನ್ನು ಮಾಡಿದನು, ಅದು ಹೀಗಿತ್ತು: “ಕದನರಂಗದಲ್ಲಿ ಮಿಲಿಟರಿ ಸೇವೆಯನ್ನು ಸಲ್ಲಿಸಲು ಸಮರ್ಥನು.” ಸ್ವಲ್ಪ ಸಮಯದ ವರೆಗೆ ಸೈನ್ಯವು ನನ್ನನ್ನು ಕಂಡುಕೊಳ್ಳಲು ಶಕ್ತವಾಗಲಿಲ್ಲ, ಆದರೆ 1945ರ ಏಪ್ರಿಲ್‌ 17ರಂದು ಯುದ್ಧವು ಕೊನೆಗೊಳ್ಳುವುದಕ್ಕೆ ಸ್ವಲ್ಪ ಮುಂಚೆ, ಕೊನೆಗೂ ನಾನು ಅವರ ಕಣ್ಣಿಗೆ ಬಿದ್ದೆ. ಕದನರಂಗದಲ್ಲಿನ ಮಿಲಿಟರಿ ಸೇವೆಗಾಗಿ ನನ್ನನ್ನು ಕಡ್ಡಾಯವಾಗಿ ಸೇರಿಸಲಾಯಿತು.

ಆಗ, ಸ್ವಲ್ಪ ಬಟ್ಟೆಗಳು, ಆಹಾರ ಮತ್ತು ಒಂದು ಬೈಬಲನ್ನು ತೆಗೆದುಕೊಂಡು ನಾನು ಸಮೀಪದ ಬೆಟ್ಟಗಳಲ್ಲಿ ಆಶ್ರಯವನ್ನು ಪಡೆದುಕೊಳ್ಳತೊಡಗಿದೆ. ಆರಂಭದಲ್ಲಿ ನಾನು ಬಯಲಿನಲ್ಲಿ ಮಲಗಲು ಶಕ್ತನಾಗಿದ್ದೆನಾದರೂ, ಹವಾಮಾನವು ಒಮ್ಮೆಲೆ ತುಂಬ ಕೆಟ್ಟುಹೋಗಿ, ಎರಡು ಅಡಿಗಳಷ್ಟು ಎತ್ತರದ ತನಕ ಮಂಜು ಬಿತ್ತು. ನಾನು ಮಂಜಿನಲ್ಲಿ ತೋಯ್ದುಹೋದೆ. ನಾನು ಸಮುದ್ರ ಮಟ್ಟಕ್ಕಿಂತ ಸುಮಾರು 4,000 ಅಡಿಗಳಷ್ಟು ಎತ್ತರದಲ್ಲಿದ್ದ ಒಂದು ಬೆಟ್ಟದ ಕ್ಯಾಬಿನ್‌ಗೆ ತಲಪಲು ಶಕ್ತನಾದೆ. ಚಳಿಯಿಂದ ನಡುಗುತ್ತಿದ್ದ ನಾನು ಬೆಂಕಿಗೂಡಿನಲ್ಲಿ ಬೆಂಕಿಯನ್ನು ಹೊತ್ತಿಸಿದೆ ಮತ್ತು ಇದರಿಂದ ನನ್ನನ್ನು ಬೆಚ್ಚಗಿಟ್ಟುಕೊಳ್ಳಲು ಹಾಗೂ ನನ್ನ ಬಟ್ಟೆಗಳನ್ನು ಒಣಗಿಸಲು ಸಾಧ್ಯವಾಯಿತು. ತೀರ ಬಳಲಿದ್ದರಿಂದ ನಾನು ಬೆಂಕಿಗೂಡಿನ ಮುಂದಿದ್ದ ಒಂದು ಬೆಂಚಿನ ಮೇಲೆ ನಿದ್ರಿಸಿದೆ. ಸ್ವಲ್ಪ ಹೊತ್ತಾದ ಬಳಿಕ ತೀವ್ರವಾದ ನೋವಿನಿಂದ ನಾನು ಇದ್ದಕ್ಕಿದ್ದಂತೆ ಎಚ್ಚರಗೊಂಡೆ. ನನ್ನ ಬಟ್ಟೆಗೆ ಬೆಂಕಿ ಹೊತ್ತಿಕೊಂಡಿತ್ತು! ಬೆಂಕಿಯನ್ನು ನಂದಿಸಲಿಕ್ಕಾಗಿ ನಾನು ನೆಲದ ಮೇಲೆ ಹೊರಳಾಡಿದೆ. ನನ್ನ ಹಿಂಭಾಗವೆಲ್ಲಾ ಬೊಕ್ಕೆಗಳಿಂದ ತುಂಬಿತ್ತು.

ತುಂಬ ಅಪಾಯಕ್ಕೊಡ್ಡಿಕೊಂಡು, ಬೆಳಕು ಹರಿಯುವುದಕ್ಕೆ ಮುಂಚೆ ಗುಟ್ಟಾಗಿ ಬೆಟ್ಟದ ಫಾರ್ಮಿಗೆ ಬಂದು ಮುಟ್ಟಿದೆನಾದರೂ, ಆ ರೈತನ ಹೆಂಡತಿಯು ಎಷ್ಟು ಹೆದರಿದ್ದಳೆಂದರೆ, ನನ್ನನ್ನು ಹುಡುಕಲಿಕ್ಕಾಗಿ ವ್ಯವಸ್ಥಿತ ಶೋಧನೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿ ನನ್ನನ್ನು ಅಲ್ಲಿಂದ ಓಡಿಸಿಬಿಟ್ಟಳು. ಆದುದರಿಂದ ನಾನು ನನ್ನ ಹೆತ್ತವರ ಬಳಿಗೆ ಹೋದೆ. ಮೊದಲು ನನ್ನ ಹೆತ್ತವರು ಸಹ ನನ್ನನ್ನು ಒಳಗೆ ಕರೆಯಲು ಹಿಂಜರಿದರಾದರೂ, ಕೊನೆಗೆ ಅವರು ನನಗೆ ಹುಲ್ಲಿನ ಕೋಣೆಯಲ್ಲಿ ಮಲಗಲು ಅನುಮತಿ ನೀಡಿದರು. ತಾಯಿಯವರು ನನ್ನ ಗಾಯಗಳಿಗೆ ಔಷಧೋಪಚಾರ ಮಾಡಿದರು. ಆದರೂ, ಎರಡು ದಿನಗಳ ಬಳಿಕ ನಾನು ಅಲ್ಲಿರುವುದು ನನ್ನ ಹೆತ್ತವರನ್ನು ಎಷ್ಟು ಭಯಕ್ಕೀಡುಮಾಡಿತ್ತೆಂದರೆ, ಪುನಃ ಬೆಟ್ಟಗಳಿಗೆ ಹೋಗಿ ಅಡಗಿಕೊಳ್ಳುವುದೇ ಒಳ್ಳೇದೆಂಬ ನಿರ್ಧಾರಕ್ಕೆ ನಾನು ಬರುವಂತಾಯಿತು.

ಇಸವಿ 1945ರ ಮೇ 5ರಂದು, ಒಂದು ದೊಡ್ಡ ಶಬ್ದವು ನನ್ನನ್ನು ನಿದ್ರೆಯಿಂದ ಎಬ್ಬಿಸಿತು. ಮಿತ್ರಪಡೆಗಳ ವಿಮಾನಗಳು ಕೆಳಮಟ್ಟದಲ್ಲಿ ಹಾರಾಡುತ್ತಿರುವುದು ನನ್ನ ದೃಷ್ಟಿಗೆ ಬಿತ್ತು. ಹಿಟ್ಲರನ ಆಳ್ವಿಕೆಯು ಉರುಳಿಸಲ್ಪಟ್ಟಿದೆ ಎಂಬುದು ನನಗೆ ಆ ಕ್ಷಣವೇ ಗೊತ್ತಾಯಿತು! ನಂಬಲಸಾಧ್ಯವಾದ ಒಂದು ವಿಷಮ ಪರೀಕ್ಷೆಯನ್ನು ತಾಳಿಕೊಳ್ಳುವಂತೆ ಯೆಹೋವನ ಆತ್ಮವು ನನ್ನನ್ನು ಬಲಪಡಿಸಿತ್ತು. ಕೀರ್ತನೆ 55:22ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳು ಸತ್ಯವೆಂಬುದನ್ನು ಸ್ವತಃ ಅನುಭವದಿಂದಲೇ ನಾನು ಕಂಡುಕೊಂಡೆ. ಈ ಮಾತುಗಳು ನನ್ನ ಪರೀಕ್ಷೆಗಳ ಆರಂಭದಲ್ಲೇ ನನಗೆ ತುಂಬ ಸಾಂತ್ವನವನ್ನು ನೀಡಿದ್ದವು. ‘ನನ್ನ ಚಿಂತಾಭಾರವನ್ನು ನಾನು ಯೆಹೋವನ ಮೇಲೆ ಹಾಕಿದ್ದೆ’ ಮತ್ತು ನಾನು ಶಾರೀರಿಕವಾಗಿ ದುರ್ಬಲನಾಗಿದ್ದೆನಾದರೂ, “ಕಾರ್ಗತ್ತಲಿನ ಕಣಿವೆಯಲ್ಲಿ” ನಡೆಯುವಾಗ ನನ್ನನ್ನು ಆತನು ಪೋಷಿಸಿದ್ದನು.​—⁠ಕೀರ್ತನೆ 23:⁠4.

ಯೆಹೋವನ ಶಕ್ತಿಯು ‘ಬಲಹೀನತೆಯಲ್ಲಿಯೇ ಪೂರ್ಣಸಾಧಕವಾದದ್ದು’

ಯುದ್ಧಾನಂತರ, ಜೀವನವು ಪುನಃ ಸಹಜಸ್ಥಿತಿಗೆ ಮರಳತೊಡಗಿತು. ಆರಂಭದಲ್ಲಿ ನಾನು ನನ್ನ ಹಿಂದಿನ ಸ್ನೇಹಿತನ ಬೆಟ್ಟದ ಫಾರ್ಮಿನಲ್ಲೇ ಕೂಲಿಗಾರನಾಗಿ ಕೆಲಸಮಾಡುತ್ತಿದ್ದೆ. ಆದರೆ 1946ರ ಏಪ್ರಿಲ್‌ ತಿಂಗಳಿನಲ್ಲಿ ಯು.ಎಸ್‌.ನ ಆಕ್ರಮಣ ಸೈನ್ಯವು ಮಧ್ಯೆ ಪ್ರವೇಶಿಸಿದ ನಂತರ, ನನ್ನ ಜೀವಮಾನದ ಉಳಿದ ಕಾಲವೆಲ್ಲ ಕಡ್ಡಾಯದ ಕೃಷಿ ದುಡಿಮೆಯನ್ನು ಮಾಡುವ ಹಂಗಿನಿಂದ ನಾನು ಮುಕ್ತನಾದೆ.

ಯುದ್ಧದ ಕೊನೆಯಲ್ಲಿ, ಬ್ಯಾಟ್‌ ಇಶ್ಲ್‌ ಪಟ್ಟಣ ಹಾಗೂ ಸುತ್ತುಮುತ್ತಲ ಜಿಲ್ಲೆಯಲ್ಲಿದ್ದ ಸಹೋದರರು ಕ್ರಮವಾಗಿ ಕೂಟಗಳನ್ನು ನಡೆಸಲು ಆರಂಭಿಸಿದರು. ಅವರು ನವೀಕೃತ ಹುರುಪಿನಿಂದ ಸಾರಲು ಆರಂಭಿಸಿದರು. ನನಗೆ ಒಂದು ಕಾರ್ಖಾನೆಯಲ್ಲಿ ಪಹರೆಯವನಾಗಿ ಉದ್ಯೋಗ ಸಿಕ್ಕಿತು ಮತ್ತು ನಾನು ಪಯನೀಯರ್‌ ಸೇವೆಯನ್ನು ಮುಂದುವರಿಸಲು ಶಕ್ತನಾದೆ. ಕಟ್ಟಕಡೆಗೆ ನಾನು ಸಾಂಕ್ಟ್‌ ವೂಲ್ಫ್‌ಗ್ಯಾಂಗ್‌ ಕ್ಷೇತ್ರದಲ್ಲಿ ನೆಲೆಸಿದೆ. ಮತ್ತು 1949ರಲ್ಲಿ ನಾನು ಟೇರೇಸೀಆ ಕೂರ್ಟ್ಸ್‌ಳನ್ನು ಮದುವೆಯಾದೆ. ಅವಳಿಗೆ ಮುಂಚಿನ ಮದುವೆಯಿಂದ ಒಬ್ಬ ಮಗಳೂ ಇದ್ದಳು. ನನ್ನ ಪ್ರೀತಿಯ ಪತ್ನಿಯು 1981ರಲ್ಲಿ ತೀರಿಕೊಳ್ಳುವ ವರೆಗೆ ನಾವು 32 ವರ್ಷ ಸಹಬಾಳ್ವೆ ನಡೆಸಿದೆವು. ಸುಮಾರು ಏಳು ವರ್ಷಗಳಿಗಿಂತಲೂ ಹೆಚ್ಚು ಸಮಯದ ವರೆಗೆ ನಾನು ಅವಳ ಶುಶ್ರೂಷೆ ಮಾಡಿದ್ದೆ.

ಟೇರೇಸೀಆಳ ಸಾವಿನ ಬಳಿಕ ನಾನು ಪುನಃ ಪಯನೀಯರ್‌ ಸೇವೆಯನ್ನು ಆರಂಭಿಸಿದೆ; ಇದು ಅವಳಿಲ್ಲ ಎಂಬ ಕೊರತೆಯಭಾವದಿಂದ ಚೇತರಿಸಿಕೊಳ್ಳುವಂತೆ ನನಗೆ ಸಹಾಯಮಾಡಿತು. ಸದ್ಯಕ್ಕೆ ನಾನು ಬ್ಯಾಟ್‌ ಇಶ್ಲ್‌ ಸಭೆಯಲ್ಲಿ ಒಬ್ಬ ಪಯನೀಯರನಾಗಿಯೂ ಹಿರಿಯನಾಗಿಯೂ ಸೇವೆಮಾಡುತ್ತಿದ್ದೇನೆ. ನಾನು ಈಗ ಗಾಲಿಕುರ್ಚಿಯಲ್ಲೇ ಇರಬೇಕಾಗಿರುವುದರಿಂದ, ಬ್ಯಾಟ್‌ ಇಶ್ಲ್‌ ಉದ್ಯಾನವನದಲ್ಲಿ ಅಥವಾ ನನ್ನ ಮನೆಯ ಮುಂದೆ ಜನರೊಂದಿಗೆ ನಾನು ರಾಜ್ಯದ ನಿರೀಕ್ಷೆಯ ಕುರಿತು ಮಾತಾಡುತ್ತೇನೆ ಮತ್ತು ಬೈಬಲ್‌ ಸಾಹಿತ್ಯವನ್ನು ನೀಡುತ್ತೇನೆ. ಇದರಿಂದಾಗಿ ಹುಟ್ಟುವ ಆಸಕ್ತಿಕರ ಬೈಬಲ್‌ ಚರ್ಚೆಗಳು ನನಗೆ ಮಹಾನ್‌ ಸಂತೋಷದ ಮೂಲವಾಗಿವೆ.

ಗತ ವಿಷಯಗಳನ್ನು ಮೆಲುಕುಹಾಕುವಾಗ, ನಾನು ತಾಳಿಕೊಳ್ಳಲು ಒತ್ತಾಯಿಸಲ್ಪಟ್ಟ ಭೀಕರ ಅನುಭವಗಳು ನನ್ನಲ್ಲಿ ಸ್ವಲ್ಪವೂ ಕಹಿಮನೋಭಾವವನ್ನು ಉಂಟುಮಾಡಲಿಲ್ಲ ಎಂಬುದನ್ನು ನಾನು ದೃಢೀಕರಿಸಬಲ್ಲೆ. ಪರೀಕ್ಷೆಗಳ ಕಾರಣ ನಾನು ಖಿನ್ನತೆಗೊಳಗಾದ ಸಮಯಗಳಿದ್ದವು ಎಂಬುದು ಒಪ್ಪಿಕೊಳ್ಳತಕ್ಕ ವಿಷಯವೇ. ಆದರೂ, ಯೆಹೋವ ದೇವರೊಂದಿಗಿನ ನನ್ನ ಆತ್ಮೀಯ ಸಂಬಂಧವು, ಇಂಥ ದುಃಖಕರ ಕಾಲಾವಧಿಗಳಿಂದ ಚೇತರಿಸಿಕೊಳ್ಳುವಂತೆ ನನಗೆ ಸಹಾಯಮಾಡಿತು. “ಬಲಹೀನತೆಯಲ್ಲಿಯೇ [ನನ್ನ] ಬಲವು ಪೂರ್ಣಸಾಧಕವಾಗುತ್ತದೆ” ಎಂದು ಕರ್ತನು ಪೌಲನಿಗೆ ಹೇಳಿದ ಬುದ್ಧಿಮಾತು ನನ್ನ ಜೀವನದಲ್ಲಿಯೂ ನಿಜವಾಗಿ ಪರಿಣಮಿಸಿದೆ. ಈಗ ಹತ್ತಿರಹತ್ತಿರ ನನ್ನ 100ರ ಪ್ರಾಯದಲ್ಲಿ ನಾನು ಈ ಮುಂದಿನ ಮಾತುಗಳನ್ನು ಹೇಳುವುದರಲ್ಲಿ ಅಪೊಸ್ತಲ ಪೌಲನೊಂದಿಗೆ ಜೊತೆಗೂಡಬಲ್ಲೆ: “ಕ್ರಿಸ್ತನ ನಿಮಿತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.”​—⁠2 ಕೊರಿಂಥ 12:9, 10.

[ಪುಟ 25ರಲ್ಲಿರುವ ಚಿತ್ರಗಳು]

1939ರ ಏಪ್ರಿಲ್‌ ತಿಂಗಳಿನಲ್ಲಿ ಗೆಸ್ಟಪೊಗಳಿಂದ ಸೆರೆಹಿಡಿಯಲ್ಪಟ್ಟದ್ದು

ಆರೋಪಗಳಿರುವ ಗೆಸ್ಟಪೊ ಕಾಗದಪತ್ರ, ಮೇ 1939

[ಕೃಪೆ]

ಎರಡೂ ಚಿತ್ರಗಳು: Privatarchiv; B. Rammerstorfer

[ಪುಟ 26ರಲ್ಲಿರುವ ಚಿತ್ರ]

ಸಮೀಪದ ಬೆಟ್ಟಗಳು ಆಶ್ರಯತಾಣಗಳಾಗಿದ್ದವು

[ಪುಟ 23ರಲ್ಲಿರುವ ಚಿತ್ರ ಕೃಪೆ]

Foto Hofer, Bad Ischl, Austria