ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನರುತ್ಥಾನ ಒಂದು ಮಹಿಮಾಭರಿತ ಪ್ರತೀಕ್ಷೆ

ಪುನರುತ್ಥಾನ ಒಂದು ಮಹಿಮಾಭರಿತ ಪ್ರತೀಕ್ಷೆ

ಪುನರುತ್ಥಾನ ಒಂದು ಮಹಿಮಾಭರಿತ ಪ್ರತೀಕ್ಷೆ

ಪುನರುತ್ಥಾನದಲ್ಲಿನ ನಂಬಿಕೆಯು ವ್ಯಾಪಕವಾಗಿದೆ. ಇಸ್ಲಾಮ್‌ಮತದ ಪವಿತ್ರ ಗ್ರಂಥವಾದ ಕುರಾನ್‌ನ ಒಂದು ಇಡೀ ಅಧ್ಯಾಯವು ಪುನರುತ್ಥಾನದ ಕುರಿತಾದ ವಿಷಯವನ್ನೇ ತಿಳಿಸುತ್ತದೆ. ಸುರಾ 75 ಭಾಗಶಃ ಹೀಗೆ ತಿಳಿಸುತ್ತದೆ: “ನಾನೀಗ ಪುನರುತ್ಥಾನದ ದಿವಸದ ಆಣೆ ಇಡುತ್ತೇನೆ . . . ಮನುಷ್ಯ ಭಾವಿಸುತ್ತಿರುವನೇ, ಅವನ ಎಲುಬುಗಳನ್ನು ನಾವೆಂದೂ ಒಂದುಗೂಡಿಸುವುದಿಲ್ಲವೆಂದು? . . . [ಅವನು] ಕೇಳುತ್ತಾನೆ: ‘ಪುನರುತ್ಥಾನ ದಿವಸ ಎಂದು ಬರುವುದು?’ (ಹೀಗಿರುವಾಗ) ಮೃತರನ್ನು ಜೀವಂತಗೊಳಿಸಲು ಆತನು ಸಮರ್ಥನಲ್ಲವೇ?”​—⁠ಸುರಾ 75:​1-6, 40.

ದ ನ್ಯೂ ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ ಹೀಗೆಂದು ತಿಳಿಸುತ್ತದೆ: “ಜರತುಷ್ಟ್ರ ಧರ್ಮವು ಕೊನೆಯಲ್ಲಿ ಆಗುವ ದುಷ್ಟತನದ ಅಳಿವು, ಸಾಮೂಹಿಕ ಪುನರುತ್ಥಾನ, ಕೊನೆಯ ನ್ಯಾಯತೀರ್ಪು ಮತ್ತು ನೀತಿವಂತರಿಗಾಗಿ ಒಂದು ಶುದ್ಧ ಲೋಕದ ಪುನಸ್ಸ್ಥಾಪನೆಯಲ್ಲಿ ನಂಬಿಕೆಯಿಡುವಂತೆ ಕಲಿಸುತ್ತದೆ.”

ಎನ್‌ಸೈಕ್ಲಪೀಡೀಯ ಜುಡೈಕವು ಪುನರುತ್ಥಾನವನ್ನು “ಅಂತಿಮವಾಗಿ ಮೃತರು ತಮ್ಮ ದೇಹಗಳಲ್ಲಿ ಪುನರುಜ್ಜೀವಿಸಲ್ಪಟ್ಟು, ಅವರು ಪುನಃ ಭೂಮಿಯ ಮೇಲೆ ಜೀವಿಸುವಂಥ ನಂಬಿಕೆ” ಎಂದು ಅರ್ಥನಿರೂಪಿಸುತ್ತದೆ. ಮನುಷ್ಯನಲ್ಲಿ ಅಮರವಾದ ಆತ್ಮವಿದೆ ಎಂದು ಯೆಹೂದಿಮತವು ಅಳವಡಿಸಿಕೊಂಡಿರುವ ನಂಬಿಕೆಯು ಸಂದಿಗ್ಧತೆಯನ್ನು ಉಂಟುಮಾಡುತ್ತದೆ ಎಂದು ಅದೇ ಪುಸ್ತಕವು ಹೇಳಿಕೆ ನೀಡುತ್ತದೆ. ಅದು ಒಪ್ಪಿಕೊಳ್ಳುವುದು: “ಮೂಲಭೂತವಾಗಿ, ಪುನರುತ್ಥಾನ ಹಾಗೂ ಆತ್ಮದ ಅಮರತ್ವ ಎಂಬ ಎರಡು ನಂಬಿಕೆಗಳು ತದ್ವಿರುದ್ಧವಾದವುಗಳಾಗಿವೆ.”

ಹಿಂದೂಮತವು, ಮನುಷ್ಯನು ಅನೇಕ ಪುನರ್ಜನ್ಮಗಳನ್ನು ಪಡೆಯುತ್ತಾನೆ ಎಂದು ಬೋಧಿಸುತ್ತದೆ. ಇದು ಸತ್ಯವಾಗಬೇಕಾದರೆ, ಮರಣಾನಂತರವೂ ಬದುಕುತ್ತಾ ಮುಂದುವರಿಯುವ ಒಂದು ಆತ್ಮವು ಮನುಷ್ಯನಿಗಿರಬೇಕಾಗಿದೆ. ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಹೇಳುವುದು: “ಇಡೀ ದೇಹವನ್ನು ಆವರಿಸುವಂಥ ಆತ್ಮವು ನಾಶಪಡಿಸಲಾಗದಂಥದ್ದಾಗಿದೆ. ಅವಿನಾಶಿ ಆತ್ಮವನ್ನು ಯಾರೂ ನಾಶಪಡಿಸಲು ಶಕ್ತರಿಲ್ಲ.”

ಬೌದ್ಧಮತವು ಹಿಂದೂಮತಕ್ಕಿಂತ ಯಾವ ರೀತಿಯಲ್ಲಿ ಭಿನ್ನವಾಗಿದೆಯೆಂದರೆ, ಇದು ಒಂದು ಅಮರ ಆತ್ಮದ ಅಸ್ತಿತ್ವವನ್ನು ಅಲ್ಲಗಳೆಯುತ್ತದೆ. ಆದರೂ, ಇಂದು ದೂರ ಪ್ರಾಚ್ಯದಲ್ಲಿರುವ ಅನೇಕ ಬೌದ್ಧರು ಒಂದು ಅಮರ ಆತ್ಮದ ದೇಹಾಂತರದಲ್ಲಿ ನಂಬಿಕೆಯಿಡುತ್ತಾರೆ. *

ಪುನರುತ್ಥಾನದ ಬೋಧನೆಯ ಕುರಿತಾದ ಗೊಂದಲ

ಕ್ರೈಸ್ತಪ್ರಪಂಚದಲ್ಲಿ ನಡೆಸಲ್ಪಡುವ ಶವಸಂಸ್ಕಾರಗಳಲ್ಲಿ ಅನೇಕವೇಳೆ, ಆತ್ಮವು ಮರಣಾನಂತರ ಬದುಕುತ್ತಾ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ ಮತ್ತು ಅದೇ ಸಮಯದಲ್ಲಿ ಪುನರುತ್ಥಾನದ ಕುರಿತೂ ಮಾತಾಡಲಾಗುತ್ತದೆ. ಉದಾಹರಣೆಗೆ, ಆ್ಯಂಗ್ಲಿಕನ್‌ ಪಾದ್ರಿಗಳು ಸಾಮಾನ್ಯವಾಗಿ ಈ ಮಾತುಗಳನ್ನು ಪಠಿಸುತ್ತಾರೆ: “ನಮ್ಮನ್ನು ಅಗಲಿರುವ ನಮ್ಮ ಪ್ರಿಯ ಸಹೋದರನ ಆತ್ಮವನ್ನು ತನಗೋಸ್ಕರ ತೆಗೆದುಕೊಳ್ಳುವುದು ಸಂಪೂರ್ಣವಾಗಿ ಸರ್ವಶಕ್ತನಾದ ದೇವರ ಕೈಯಲ್ಲಿದ್ದು ಅದು ಆತನ ಚಿತ್ತವಾಗಿರುವುದರಿಂದ, ನಾವು ಅವನ ದೇಹವನ್ನು ನೆಲಕ್ಕೆ ಒಪ್ಪಿಸಿಕೊಡುತ್ತೇವೆ​—⁠ಮಣ್ಣಿಗೆ ಮಣ್ಣು, ಬೂದಿಗೆ ಬೂದಿ, ಧೂಳಿಗೆ ಧೂಳು; ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಖಚಿತವಾದ ಹಾಗೂ ನಿಶ್ಚಿತವಾದ ಪುನರುತ್ಥಾನದ ನಿರೀಕ್ಷೆಯಲ್ಲಿ.”​—⁠ಸಾಮಾನ್ಯ ಪ್ರಾರ್ಥನೆಯ ಪುಸ್ತಕ (ಇಂಗ್ಲಿಷ್‌).

ಈ ಹೇಳಿಕೆಯು, ಬೈಬಲು ಪುನರುತ್ಥಾನದ ಕುರಿತು ಕಲಿಸುತ್ತದೊ ಅಥವಾ ಅಮರ ಆತ್ಮದ ಸಿದ್ಧಾಂತವನ್ನು ಕಲಿಸುತ್ತದೊ ಎಂದು ಒಬ್ಬ ವ್ಯಕ್ತಿಯು ಕೌತುಕಪಡುವಂತೆ ಮಾಡಬಹುದು. ಆದರೆ ಫ್ರೆಂಚ್‌ ಪ್ರಾಟೆಸ್ಟೆಂಟ್‌ ಪ್ರೊಫೆಸರ್‌ ಓಸ್ಕಾರ್‌ ಕುಲ್ಮಾನ್‌ರಿಂದ ಮಾಡಲ್ಪಟ್ಟ ಹೇಳಿಕೆಯನ್ನು ಗಮನಿಸಿರಿ. ಆತ್ಮದ ಅಮರತ್ವವೊ ಅಥವಾ ಮೃತರ ಪುನರುತ್ಥಾನವೊ? (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಅವರು ಬರೆದದ್ದು: “ಮೃತರ ಪುನರುತ್ಥಾನದ ಕುರಿತಾದ ಕ್ರೈಸ್ತ ನಿರೀಕ್ಷೆ ಹಾಗೂ ಅಮರ ಆತ್ಮದಲ್ಲಿನ ಗ್ರೀಕ್‌ ನಂಬಿಕೆಯ ಮಧ್ಯೆ ಬಹು ಮುಖ್ಯವಾದ ಒಂದು ವ್ಯತ್ಯಾಸವಿದೆ. . . . ಸಮಯಾನಂತರ ಕ್ರೈಸ್ತಧರ್ಮವು ಈ ಎರಡು ನಂಬಿಕೆಗಳ ನಡುವೆ ಒಂದು ಕೊಂಡಿಯನ್ನು ಸ್ಥಾಪಿಸಿತಾದರೂ, ಮತ್ತು ಇಂದು ಒಬ್ಬ ಸಾಮಾನ್ಯ ಕ್ರೈಸ್ತನು ಅವುಗಳ ನಡುವಣ ವ್ಯತ್ಯಾಸವೇನೆಂದು ಗ್ರಹಿಸಲು ಪೂರ್ಣವಾಗಿ ತಪ್ಪಿಹೋಗಿದ್ದರೂ, ನಾನು ಮತ್ತು ವಿದ್ವಾಂಸರಲ್ಲಿ ಅಧಿಕಾಂಶ ಮಂದಿ ಯಾವುದನ್ನು ಸತ್ಯವೆಂದು ಪರಿಗಣಿಸುತ್ತೇವೋ ಅದನ್ನು ಮರೆಮಾಚುವುದಕ್ಕೆ ನನಗೆ ಯಾವ ಕಾರಣವೂ ತೋರುವುದಿಲ್ಲ. . . . ಹೊಸ ಒಡಂಬಡಿಕೆಯ ತಾತ್ಪರ್ಯದಲ್ಲಿ, ಪುನರುತ್ಥಾನದಲ್ಲಿನ ನಂಬಿಕೆಯೇ ಸಂಪೂರ್ಣ ಮೇಲುಗೈಹೊಂದಿದೆ. . . . ನಿಜವಾಗಿಯೂ ಸಂಪೂರ್ಣವಾಗಿ ಮೃತಪಟ್ಟಿರುವ ಒಬ್ಬ ವ್ಯಕ್ತಿಯನ್ನು, ದೇವರ ಒಂದು ಹೊಸ ಸೃಷ್ಟಿಕಾರಕ ಕ್ರಿಯೆಯಿಂದ ಪುನಃ ಉಜ್ಜೀವಿಸಲಾಗುತ್ತದೆ.”

ಈ ಕಾರಣದಿಂದ ಒಟ್ಟಿನಲ್ಲಿ ಜನರು ಮರಣ ಮತ್ತು ಪುನರುತ್ಥಾನದ ವಿಚಾರದಲ್ಲಿ ತುಂಬ ಗೊಂದಲದಲ್ಲಿರುವುದು ಆಶ್ಚರ್ಯವೇನೂ ಅಲ್ಲ. ಈ ಗೊಂದಲವನ್ನು ಬಗೆಹರಿಸಲಿಕ್ಕಾಗಿ ನಾವು ಬೈಬಲನ್ನು ಪರಿಶೀಲಿಸುವ ಅಗತ್ಯವಿದೆ. ಇದು ಮನುಷ್ಯನ ಸೃಷ್ಟಿಕರ್ತನಾಗಿರುವ ಯೆಹೋವ ದೇವರಿಂದ ಪ್ರಕಟಪಡಿಸಲ್ಪಟ್ಟಿರುವ ಸತ್ಯತೆಗಳನ್ನು ಪ್ರಸ್ತುತಪಡಿಸುತ್ತದೆ. ಬೈಬಲು ಅನೇಕ ಪುನರುತ್ಥಾನಗಳನ್ನು ದಾಖಲಿಸಿದೆ. ಈ ವೃತ್ತಾಂತಗಳಲ್ಲಿ ನಾಲ್ಕನ್ನು ನಾವು ಪರಿಶೀಲಿಸೋಣ ಮತ್ತು ಪುನರುತ್ಥಾನದ ಕುರಿತು ಅವು ಏನನ್ನು ಬಯಲುಪಡಿಸುತ್ತವೆ ಎಂಬುದನ್ನು ಪರಿಗಣಿಸೋಣ.

“ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ ಹೊಂದಿದರು”

ಕ್ರೈಸ್ತರಾಗಿ ಪರಿಣಮಿಸಿದ್ದ ಯೆಹೂದ್ಯರಿಗೆ ಬರೆದ ತನ್ನ ಪತ್ರದಲ್ಲಿ ಅಪೊಸ್ತಲ ಪೌಲನು, ನಂಬಿಗಸ್ತ ಸ್ತ್ರೀಯರು “ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ” ಪಡೆದರೆಂದು ಹೇಳಿದನು. (ಇಬ್ರಿಯ 11:35) ಈ ಸ್ತ್ರೀಯರಲ್ಲಿ ಒಬ್ಬಳು, ಮೆಡಿಟರೇನಿಯನ್‌ ತೀರದಲ್ಲಿದ್ದ ಸೀದೋನಿನ ಬಳಿ ಚಾರೆಪ್ತ ಎಂಬ ಫಿನೀಷಿಯ ಪಟ್ಟಣದಲ್ಲಿ ವಾಸಿಸುತ್ತಿದ್ದಳು. ಅವಳು ದೇವರ ಪ್ರವಾದಿಯಾದ ಎಲೀಯನನ್ನು ಸತ್ಕರಿಸಿ, ವಿಪರೀತ ಕ್ಷಾಮದ ಸಮಯದಲ್ಲಿಯೂ ಅವನಿಗೆ ಆಹಾರವನ್ನು ಒದಗಿಸಿದಂಥ ಒಬ್ಬ ವಿಧವೆಯಾಗಿದ್ದಳು. ದುಃಖಕರವಾಗಿಯೇ, ಈ ಸ್ತ್ರೀಯ ಮಗನು ಅಸ್ವಸ್ಥನಾದನು ಮತ್ತು ತೀರಿಕೊಂಡನು. ಆ ಕೂಡಲೆ ಎಲೀಯನು ಆ ಹುಡುಗನನ್ನು ತಾನು ಉಳಿದುಕೊಳ್ಳುತ್ತಿದ್ದ ಮೇಲಿನ ಕೋಣೆಗೆ ಎತ್ತಿಕೊಂಡು ಹೋಗಿ, ಅವನನ್ನು ಬದುಕಿಸುವಂತೆ ಯೆಹೋವನಿಗೆ ಮೊರೆಯಿಟ್ಟನು. ಒಂದು ಅದ್ಭುತವು ನಡೆಯಿತು ಮತ್ತು ಆ ಹುಡುಗನು “ಉಜ್ಜೀವಿಸಿದನು.” ಎಲೀಯನು ಆ ಹುಡುಗನನ್ನು ಅವನ ತಾಯಿಯ ಬಳಿಗೆ ತೆಗೆದುಕೊಂಡು ಹೋಗಿ, “ಇಗೋ, ನೋಡು; ನಿನ್ನ ಮಗನು ಜೀವಿಸುತ್ತಾನೆ” ಎಂದು ಹೇಳಿದನು. ಅವಳು ಹೇಗೆ ಪ್ರತಿಕ್ರಿಯಿಸಿದಳು? ಅವಳು ಸಂತೋಷದಿಂದ ಹೇಳಿದ್ದು: “ನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಂದ ಬಂದ ಯೆಹೋವನ ಮಾತು ಸತ್ಯವೆಂದೂ ಈಗ ನನಗೆ ಗೊತ್ತಾಯಿತು.”​—⁠1 ಅರಸುಗಳು 17:22-24.

ಚಾರೆಪ್ತದಿಂದ ದಕ್ಷಿಣಕ್ಕೆ ಸುಮಾರು 100 ಕಿಲೊಮೀಟರುಗಳಷ್ಟು ದೂರದಲ್ಲಿ, ತುಂಬ ಉದಾರ ಮನೋಭಾವದ ಒಬ್ಬ ಗಂಡಹೆಂಡತಿಯು ವಾಸಿಸುತ್ತಿದ್ದರು. ಇವರು ಎಲೀಯನ ಉತ್ತರಾಧಿಕಾರಿಯಾದ ಎಲೀಷನನ್ನು ಚೆನ್ನಾಗಿ ನೋಡಿಕೊಂಡಿದ್ದರು. ಆ ಹೆಂಡತಿಯು ಅವಳ ಸ್ವಂತ ಊರಾಗಿದ್ದ ಶೂನೇಮಿನಲ್ಲಿ ಒಬ್ಬ ಪ್ರಖ್ಯಾತ ಸ್ತ್ರೀಯಾಗಿದ್ದಳು. ಆಕೆಯೂ ಆಕೆಯ ಗಂಡನೂ, ತಮ್ಮ ಮನೆಯ ಮಾಳಿಗೆಯ ಸಣ್ಣ ಕೋಣೆಯನ್ನು ಎಲೀಷನಿಗೆ ಉಳಿದುಕೊಳ್ಳಲಿಕ್ಕಾಗಿ ನೀಡಲು ಒಪ್ಪಿಕೊಂಡಿದ್ದರು. ಮಕ್ಕಳಿಲ್ಲ ಎಂದು ಕೊರಗುತ್ತಿದ್ದ ಅವರಿಗೆ ಒಂದು ಗುಂಡುಮಗು ಹುಟ್ಟಿದಾಗ ತುಂಬ ಸಂತೋಷವಾಯಿತು. ಹುಡುಗನು ಬೆಳೆಯುತ್ತಿದ್ದಾಗ, ಅನೇಕವೇಳೆ ಹೊಲದಲ್ಲಿದ್ದ ಕೊಯ್ಯುವವರನ್ನು ಮತ್ತು ತಂದೆಯನ್ನು ಜೊತೆಗೂಡುತ್ತಿದ್ದನು. ಒಂದು ದಿನ ಇದ್ದಕ್ಕಿದ್ದಂತೆ ಅನಾಹುತವು ಸಂಭವಿಸಿತು. ಆ ಹುಡುಗನು ತಲೆನೋವೆಂದು ಜೋರಾಗಿ ಕೂಗಿದನು. ಒಬ್ಬ ಸೇವಕನು ತರಾತುರಿಯಿಂದ ಹುಡುಗನನ್ನು ಮನೆಗೆ ಕರೆದೊಯ್ದನು. ಅವನು ತನ್ನ ತಾಯಿಯ ತೊಡೆಯ ಮೇಲೆ ಸ್ವಲ್ಪ ಸಮಯದ ಬಳಿಕ ತೀರಿಕೊಂಡನು. ತುಂಬ ಕ್ಷೋಭೆಗೊಂಡಿದ್ದ ತಾಯಿಯು ಸಹಾಯಕ್ಕಾಗಿ ಎಲೀಷನನ್ನು ಕರೆಯಲು ನಿರ್ಧರಿಸಿದಳು. ಒಬ್ಬ ಸೇವಕನೊಂದಿಗೆ ಆಕೆ ಎಲೀಷನು ಉಳಿದುಕೊಂಡಿದ್ದ ಕರ್ಮೆಲ್‌ಬೆಟ್ಟದ ಕಡೆಗೆ ನೈರುತ್ಯಕ್ಕೆ ಪ್ರಯಾಣಿಸಿದಳು.

ಇದಕ್ಕೆ ಪ್ರತಿಕ್ರಿಯಿಸುತ್ತಾ, ಪ್ರವಾದಿಯು ತನ್ನ ಸೇವಕನಾದ ಗೇಹಜಿಯನ್ನು ಮುಂದೆ ಕಳುಹಿಸಿದಾಗ, ಹುಡುಗನು ನಿಜವಾಗಿಯೂ ಸತ್ತಿದ್ದಾನೆ ಎಂಬುದು ಗೇಹಜಿಗೆ ತಿಳಿದುಬಂತು. ತದನಂತರ ಎಲೀಷನೂ ಆ ಸ್ತ್ರೀಯೂ ಹಿಂಬಾಲಿಸಿ ಬಂದರು. ಆದರೆ ಕೊನೆಗೆ ಅವರು ಶೂನೇಮ್‌ಗೆ ಬಂದು ತಲಪಿದಾಗ ಏನು ಸಂಭವಿಸಿತು? 2 ಅರಸುಗಳು 4:32-37ರಲ್ಲಿರುವ ವೃತ್ತಾಂತವು ಹೀಗೆ ತಿಳಿಸುತ್ತದೆ: “ಎಲೀಷನು ಆ ಮನೆಯನ್ನು ಮುಟ್ಟಿದಾಗ ಸತ್ತ ಹುಡುಗನು ತನ್ನ ಮಂಚದ ಮೇಲೆ ಇಡಲ್ಪಟ್ಟಿರುವದನ್ನು ಕಂಡು ಯಾರೂ ಒಳಗೆ ಬಾರದಂತೆ ಆ ಕೋಣೆಯ ಬಾಗಲನ್ನು ಮುಚ್ಚಿಕೊಂಡು ಯೆಹೋವನನ್ನು ಪ್ರಾರ್ಥಿಸಿದನು. ಅನಂತರ ಹುಡುಗನ ಮೇಲೆ ಬೋರ್ಲ ಬಿದ್ದು ತನ್ನ ಬಾಯಿ ಕಣ್ಣು ಕೈಗಳನ್ನು ಅವನ ಬಾಯಿ ಕಣ್ಣು ಕೈಗಳಿಗೆ ಮುಟ್ಟಿಸಿದ್ದರಿಂದ ಹುಡುಗನ ದೇಹವು ಬೆಚ್ಚಗಾಯಿತು. ಆ ಮೇಲೆ ಹುಡುಗನನ್ನು ಬಿಟ್ಟು ಎದ್ದು ಮನೆಯಲ್ಲಿ ತುಸುಹೊತ್ತು ಅತ್ತಿತ್ತ ಅಡ್ಡಾಡಿ ತಿರಿಗಿ ಅವನ ಮೇಲೆ ಬೋರ್ಲ ಬೀಳಲು ಹುಡುಗನು ಏಳು ಸಾರಿ ಸೀತು ಕಣ್ದೆರೆದನು. ಆಗ ಎಲೀಷನು ಗೇಹಜಿಗೆ​—⁠ಶೂನೇಮ್ಯಳನ್ನು ಕರೆ ಎಂದು ಆಜ್ಞಾಪಿಸಲು ಅವನು ಆಕೆಯನ್ನು ಕರೆದನು. ಆಕೆಯು ಬಂದಾಗ ಎಲೀಷನು ಆಕೆಗೆ​—⁠ನಿನ್ನ ಮಗನನ್ನು ತೆಗೆದುಕೋ ಎಂದು ಹೇಳಿದನು. ಆಕೆಯು ಹತ್ತಿರ ಬಂದು ಅವನ ಪಾದಗಳಿಗೆ ಬಿದ್ದು ಸಾಷ್ಟಾಂಗನಮಸ್ಕಾರಮಾಡಿ ಮಗನನ್ನು ತೆಗೆದುಕೊಂಡು ಹೋದಳು.”

ಚಾರೆಪ್ತದ ವಿಧವೆಯಂತೆಯೇ, ಈಗ ಏನು ಸಂಭವಿಸಿತೋ ಅದು ದೇವರ ಶಕ್ತಿಯ ಫಲಿತಾಂಶವಾಗಿತ್ತು ಎಂಬುದು ಶೂನೇಮಿನ ಸ್ತ್ರೀಗೂ ಗೊತ್ತಿತ್ತು. ಈ ಇಬ್ಬರೂ ಸ್ತ್ರೀಯರ ಪ್ರೀತಿಯ ಸಂತಾನವನ್ನು ದೇವರು ಪುನರುಜ್ಜೀವಿಸಿದಾಗ, ಇವರಿಗೆ ಅಪಾರ ಆನಂದವಾಯಿತು.

ಯೇಸುವಿನ ಶುಶ್ರೂಷೆಯ ಸಮಯದಲ್ಲಿ ಪುನರುತ್ಥಾನಗಳು

ಸುಮಾರು 900 ವರ್ಷಗಳ ಬಳಿಕ, ಶೂನೇಮ್‌ನ ಉತ್ತರಕ್ಕೆ ಸ್ವಲ್ಪ ದೂರದಲ್ಲಿರುವ ನಾಯಿನೆಂಬ ಊರಿನ ಹೊರಗೆ ಒಂದು ಪುನರುತ್ಥಾನವು ನಡೆಸಲ್ಪಟ್ಟಿತು. ಯೇಸು ಕ್ರಿಸ್ತನು ಮತ್ತು ಅವನ ಶಿಷ್ಯರು ಕಪೆರ್ನೌಮಿನಿಂದ ಹೊರಟು ನಾಯಿನೆಂಬ ಊರಿನ ಬಾಗಲಿನ ಹತ್ತಿರಕ್ಕೆ ಬಂದಾಗ, ಸತ್ತುಹೋಗಿದ್ದ ಒಬ್ಬನನ್ನು ಹೊತ್ತುಕೊಂಡು ಬರುತ್ತಿದ್ದ ಜನರನ್ನು ಅವರು ಎದುರಾದರು. ತನ್ನ ಒಬ್ಬನೇ ಮಗನನ್ನು ಕಳೆದುಕೊಂಡಿದ್ದ ಆ ವಿಧವೆಯು ಯೇಸುವಿನ ಕಣ್ಣಿಗೆ ಬಿದ್ದಳು. ಅಳುವುದನ್ನು ನಿಲ್ಲಿಸುವಂತೆ ಯೇಸು ಅವಳಿಗೆ ಹೇಳಿದನು. ತದನಂತರ ಏನು ಸಂಭವಿಸಿತು ಎಂಬುದನ್ನು ವೈದ್ಯನಾದ ಲೂಕನು ವರ್ಣಿಸಿದನು: “[ಯೇಸು] ಚಟ್ಟದ ಹತ್ತಿರಕ್ಕೆ ಹೋಗಿ ಅದನ್ನು ಮುಟ್ಟಲು ಹೊತ್ತುಕೊಂಡವರು ನಿಂತರು. ಆಗ ಆತನು​—⁠ಯೌವನಸ್ಥನೇ, ಏಳು ಎಂದು ನಿನಗೆ ಹೇಳುತ್ತೇನೆ ಅಂದನು. ಅನ್ನುತ್ತಲೇ ಸತ್ತಿದ್ದವನು ಎದ್ದು ಕೂತುಕೊಂಡು ಮಾತಾಡುವದಕ್ಕೆ ತೊಡಗಿದನು. ಯೇಸು ಅವನನ್ನು ಅವನ ತಾಯಿಗೆ ಕೊಟ್ಟನು.” (ಲೂಕ 7:14, 15) ಈ ಅದ್ಭುತಕೃತ್ಯವನ್ನು ಕಣ್ಣಾರೆ ಕಂಡವರು ದೇವರನ್ನು ಕೊಂಡಾಡಿದರು. ಈ ಪುನರುತ್ಥಾನದ ಕುರಿತಾದ ವಾರ್ತೆಯು ಯೂದಾಯದಲ್ಲಿಯೂ ಸುತ್ತಲಿರುವ ಎಲ್ಲ ಪ್ರಾಂತ್ಯದಲ್ಲಿಯೂ ಹಬ್ಬಿತು. ಆಸಕ್ತಿಕರವಾಗಿಯೇ, ಇದು ಸ್ನಾನಿಕನಾದ ಯೋಹಾನನ ಶಿಷ್ಯರ ಕಿವಿಗೂ ಬಿತ್ತು ಮತ್ತು ಅವರು ಈ ಅದ್ಭುತವನ್ನು ಯೋಹಾನನಿಗೆ ವರದಿಸಿದರು. ಆಗ ಯೋಹಾನನು, ಯೇಸುವಿನ ಬಳಿ ಹೋಗಿ, ನಿರೀಕ್ಷಿತ ಮೆಸ್ಸೀಯನು ಅವನಾಗಿದ್ದಾನೋ ಎಂದು ಅವನನ್ನು ಕೇಳಲಿಕ್ಕಾಗಿ ತನ್ನ ಶಿಷ್ಯರನ್ನು ಕಳುಹಿಸಿದನು. ಯೇಸು ಅವರಿಗಂದದ್ದು: “ನೀವು ಹೋಗಿ ಕಂಡು ಕೇಳಿದವುಗಳನ್ನು ಯೋಹಾನನಿಗೆ ತಿಳಿಸಿರಿ; ಕುರುಡರಿಗೆ ಕಣ್ಣುಬರುತ್ತವೆ, ಕುಂಟರಿಗೆ ಕಾಲುಬರುತ್ತವೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿಬರುತ್ತವೆ, ಸತ್ತವರು ಜೀವವನ್ನು ಹೊಂದುತ್ತಾರೆ, ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ.”​—⁠ಲೂಕ 7:⁠22.

ಯೇಸು ಮಾಡಿದಂಥ ಪುನರುತ್ಥಾನದ ಅದ್ಭುತಗಳಲ್ಲಿ ಹೆಚ್ಚು ವ್ಯಾಪಕವಾಗಿ ಪ್ರಸಿದ್ಧವಾಗಿರುವುದು, ಅವನ ಆಪ್ತ ಸ್ನೇಹಿತನಾದ ಲಾಜರನ ಪುನರುತ್ಥಾನವೇ. ಈ ಘಟನೆಯಲ್ಲಿ, ಲಾಜರನು ಮೃತಪಡುವುದಕ್ಕೂ ಯೇಸು ಅವರ ಕುಟುಂಬವು ವಾಸಿಸುತ್ತಿದ್ದ ಮನೆಗೆ ಆಗಮಿಸುವುದಕ್ಕೂ ಮಧ್ಯೆ ಕೆಲವು ದಿವಸಗಳ ಅಂತರವಿತ್ತು. ಯೇಸು ಬೇಥಾನ್ಯಕ್ಕೆ ಬಂದುಮುಟ್ಟಿದಾಗ ಲಾಜರನು ಸತ್ತು ನಾಲ್ಕು ದಿನಗಳಾಗಿದ್ದವು. ಸಮಾಧಿಯ ಗವಿಯ ಬಾಯಿಗೆ ಮುಚ್ಚಿದ್ದ ಕಲ್ಲನ್ನು ತೆಗೆದುಹಾಕುವಂತೆ ಯೇಸು ಹೇಳಿದಾಗ, ಮಾರ್ಥಳು ಆಕ್ಷೇಪಿಸುತ್ತಾ ಹೇಳಿದ್ದು: “ಸ್ವಾಮೀ, ಅವನು ಸತ್ತು ನಾಲ್ಕು ದಿವಸವಾಯಿತು; ಈಗ ನಾತ ಹುಟ್ಟಿದೆ.” (ಯೋಹಾನ 11:39) ಲಾಜರನ ದೇಹವು ಎಷ್ಟೇ ಕೆಟ್ಟುಹೋಗಿದ್ದರೂ ಇದು ಪುನರುತ್ಥಾನಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗಿರಲಿಲ್ಲ. ಯೇಸುವಿನ ಅಪ್ಪಣೆಯ ಮೇರೆಗೆ, “ಸತ್ತಿದ್ದವನು ಹೊರಗೆ ಬಂದನು; ಅವನ ಕೈಕಾಲುಗಳು ಬಟ್ಟೆಗಳಿಂದ ಕಟ್ಟಿದ್ದವು, ಅವನ ಮುಖವು ಕೈಪಾವಡದಿಂದ ಸುತ್ತಿತ್ತು.” ಯೇಸುವಿನ ವೈರಿಗಳಿಂದ ನಂತರ ನಡೆಸಲ್ಪಟ್ಟ ಕೃತ್ಯಗಳು, ಉಜ್ಜೀವಿಸಲ್ಪಟ್ಟವನು ನಿಜವಾಗಿಯೂ ಲಾಜರನೇ ಆಗಿದ್ದನು ಎಂಬುದನ್ನು ರುಜುಪಡಿಸುತ್ತವೆ.​—⁠ಯೋಹಾನ 11:43, 44; 12:1, 9-11.

ಪುನರುತ್ಥಾನಗಳ ಈ ನಾಲ್ಕು ವೃತ್ತಾಂತಗಳಿಂದ ನಮಗೇನು ಅರ್ಥವಾಗುತ್ತದೆ? ಪುನರುತ್ಥಾನಗೊಳಿಸಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯು ಅದೇ ವ್ಯಕ್ತಿಯಾಗಿ ಉಜ್ಜೀವಿಸಲ್ಪಟ್ಟನು. ಇವರೆಲ್ಲರೂ ಅವರ ಆಪ್ತ ಸಂಬಂಧಿಕರಿಂದ ಗುರುತಿಸಲ್ಪಟ್ಟರು. ಪುನರುತ್ಥಾನಗೊಳಿಸಲ್ಪಟ್ಟವರಲ್ಲಿ ಯಾರೊಬ್ಬರೂ ತಾವು ಮೃತಪಟ್ಟಿದ್ದ ಅಲ್ಪಾವಧಿಯಲ್ಲಿ ಏನು ಸಂಭವಿಸಿತು ಎಂಬುದರ ಕುರಿತು ಮಾತಾಡಲಿಲ್ಲ. ಇನ್ನೊಂದು ಲೋಕಕ್ಕೆ ಪ್ರಯಾಣಿಸಿದೆವು ಎಂದು ಅವರಲ್ಲಿ ಯಾರೊಬ್ಬರೂ ಹೇಳಲಿಲ್ಲ. ಅವರೆಲ್ಲರೂ ಸಾಕಷ್ಟು ಒಳ್ಳೇ ಆರೋಗ್ಯದೊಂದಿಗೆ ಉಜ್ಜೀವಿಸಿದ್ದರು. ಯೇಸು ಸೂಚಿಸಿದಂತೆ, ಅವರಿಗೆ ಈ ಅನುಭವವು ಸ್ವಲ್ಪ ಹೊತ್ತು ನಿದ್ರಿಸಿ ತದನಂತರ ಎಚ್ಚೆತ್ತಂತೆ ಇತ್ತು. (ಯೋಹಾನ 11:11) ಆದರೂ, ಕಾಲಾನಂತರ ಇವರಲ್ಲಿ ಪ್ರತಿಯೊಬ್ಬರೂ ಪುನಃ ಮೃತಪಟ್ಟರು.

ಪ್ರಿಯ ವ್ಯಕ್ತಿಗಳೊಂದಿಗೆ ಪುನರ್ಮಿಲನ—⁠ಒಂದು ಮಹಿಮಾಭರಿತ ಪ್ರತೀಕ್ಷೆ

ಹಿಂದಿನ ಲೇಖನದಲ್ಲಿ ಯಾರ ಕುರಿತು ಪ್ರಸ್ತಾಪಿಸಲಾಗಿತ್ತೋ ಆ ಓಅನ್‌ನ ದುರಂತಮಯ ಮರಣವು ಸಂಭವಿಸಿ ಸ್ವಲ್ಪ ಕಾಲದ ಬಳಿಕ, ಅವನ ತಂದೆ ಒಬ್ಬ ನೆರೆಯವನ ಮನೆಗೆ ಭೇಟಿಯಿತ್ತನು. ಅಲ್ಲಿ ಮೇಜಿನ ಮೇಲೆ ಇದ್ದ, ಯೆಹೋವನ ಸಾಕ್ಷಿಗಳಿಂದ ಏರ್ಪಡಿಸಲ್ಪಟ್ಟಿದ್ದ ಒಂದು ಬಹಿರಂಗ ಭಾಷಣದ ಜಾಹೀರಾತು ನೀಡುವಂಥ ಒಂದು ಕರಪತ್ರವು ಅವನ ಕಣ್ಣಿಗೆ ಬಿತ್ತು. “ಮೃತರು ಎಲ್ಲಿದ್ದಾರೆ?” ಎಂಬ ಅದರ ಶೀರ್ಷಿಕೆಯು ಅವನ ಗಮನವನ್ನು ಸೆಳೆಯಿತು. ಇದೇ ಪ್ರಶ್ನೆ ಅವನ ಮನಸ್ಸಿನಲ್ಲೂ ಇತ್ತು. ಅವನು ಈ ಭಾಷಣಕ್ಕೆ ಹಾಜರಾದನು ಮತ್ತು ಬೈಬಲಿನಿಂದ ನಿಜವಾದ ಸಾಂತ್ವನವನ್ನು ಕಂಡುಕೊಂಡನು. ಮೃತರು ಕಷ್ಟಾನುಭವಿಸುವುದಿಲ್ಲ ಎಂಬುದು ಅವನಿಗೆ ಗೊತ್ತಾಯಿತು. ನರಕಾಗ್ನಿಯಲ್ಲಿ ಯಾತನೆ ಅನುಭವಿಸುತ್ತಿರುವ ಬದಲಾಗಿ ಅಥವಾ ಸ್ವರ್ಗದಲ್ಲಿ ದೇವದೂತರಾಗಲಿಕ್ಕಾಗಿ ದೇವರಿಂದ ಕರೆಸಿಕೊಳ್ಳಲ್ಪಡುವುದಕ್ಕೆ ಬದಲಾಗಿ, ಒಂದು ಪುನರುತ್ಥಾನದಲ್ಲಿ ಎಬ್ಬಿಸಲ್ಪಡುವ ಕಾಲವು ಬರುವ ತನಕ, ಓಅನ್‌ನನ್ನೂ ಸೇರಿಸಿ ಎಲ್ಲ ಮೃತರು ಸಮಾಧಿಯಲ್ಲಿ ಕಾಯುತ್ತಿದ್ದಾರೆ.​—⁠ಪ್ರಸಂಗಿ 9:5, 10.

ನಿಮ್ಮ ಕುಟುಂಬಕ್ಕೆ ಅನಾಹುತವು ಸಂಭವಿಸಿದೆಯೊ? ನಿಮ್ಮ ಮೃತ ಪ್ರಿಯ ಜನರು ಈಗ ಎಲ್ಲಿದ್ದಾರೆ ಮತ್ತು ಅವರನ್ನು ಪುನಃ ನೋಡುವ ಯಾವುದೇ ಸಾಧ್ಯತೆಯು ಇದೆಯೋ ಎಂದು ಓಅನ್‌ನ ತಂದೆಯಂತೆಯೇ ನೀವೂ ಚಿಂತಿಸುತ್ತಿದ್ದೀರೊ? ಹಾಗಿರುವಲ್ಲಿ, ಪುನರುತ್ಥಾನದ ಕುರಿತು ಬೈಬಲ್‌ ಇನ್ನೂ ಏನನ್ನು ಕಲಿಸುತ್ತದೆ ಎಂಬದನ್ನು ಪರಿಶೀಲಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ನೀವು ಹೀಗೆ ಆಲೋಚಿಸುತ್ತಿರಬಹುದು: ‘ಪುನರುತ್ಥಾನವು ಯಾವಾಗ ಸಂಭವಿಸುವುದು? ಇದರಿಂದ ನಿರ್ದಿಷ್ಟವಾಗಿ ಯಾರು ಪ್ರಯೋಜನ ಹೊಂದುವರು?’ ಈ ಪ್ರಶ್ನೆಗಳು ಮತ್ತು ಇತರ ಪ್ರಶ್ನೆಗಳ ಚರ್ಚೆಗಾಗಿ ದಯವಿಟ್ಟು ಮುಂದಿನ ಲೇಖನಗಳನ್ನು ಓದಿರಿ.

[ಪಾದಟಿಪ್ಪಣಿ]

^ ಪ್ಯಾರ. 6 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ದೇವರಿಗಾಗಿ ಮಾನವಕುಲದ ಅನ್ವೇಷಣೆ (ಇಂಗ್ಲಿಷ್‌) ಎಂಬ ಪುಸ್ತಕದ 150-4ನೇ ಪುಟಗಳನ್ನು ನೋಡಿರಿ.

[ಪುಟ 5ರಲ್ಲಿರುವ ಚಿತ್ರ]

ಶೂನೇಮ್ಯಳ ಮಗನನ್ನು ಪುನರುತ್ಥಾನಗೊಳಿಸಲಿಕ್ಕಾಗಿ ಯೆಹೋವನು ಎಲೀಷನನ್ನು ಉಪಯೋಗಿಸಿದನು

[ಪುಟ 5ರಲ್ಲಿರುವ ಚಿತ್ರ]

ಎಲೀಯನು ಒಬ್ಬ ಹುಡುಗನನ್ನು ಬದುಕಿಸುವಂತೆ ಯೆಹೋವನಿಗೆ ಮೊರೆಯಿಟ್ಟನು

[ಪುಟ 6ರಲ್ಲಿರುವ ಚಿತ್ರ]

ಯೇಸು ನಾಯಿನೆಂಬ ಊರಿನ ವಿಧವೆಯ ಮಗನನ್ನು ಪುನರುತ್ಥಾನಗೊಳಿಸಿದನು

[ಪುಟ 7ರಲ್ಲಿರುವ ಚಿತ್ರ]

ಪುನರುತ್ಥಾನವು ಸಂಬಂಧಿಕರನ್ನು ತಮ್ಮ ಪ್ರಿಯ ವ್ಯಕ್ತಿಗಳೊಂದಿಗೆ ಪುನಃ ಜೊತೆಗೂಡಿಸುವುದು