ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪುನರುತ್ಥಾನ—ನಿಮ್ಮ ಮೇಲೆ ಪ್ರಭಾವ ಬೀರುವಂಥ ಒಂದು ಬೋಧನೆ

ಪುನರುತ್ಥಾನ—ನಿಮ್ಮ ಮೇಲೆ ಪ್ರಭಾವ ಬೀರುವಂಥ ಒಂದು ಬೋಧನೆ

ಪುನರುತ್ಥಾನ​—⁠ನಿಮ್ಮ ಮೇಲೆ ಪ್ರಭಾವ ಬೀರುವಂಥ ಒಂದು ಬೋಧನೆ

‘ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು ನಾನು ದೇವರಲ್ಲಿ ನಿರೀಕ್ಷೆಯುಳ್ಳವನಾಗಿದ್ದೇನೆ.’​—⁠ಅ. ಕೃತ್ಯಗಳು 24:⁠15.

ಸಾಮಾನ್ಯ ಶಕ 56ರಲ್ಲಿ ತನ್ನ ಮೂರನೆಯ ಮಿಷನೆರಿ ಪ್ರಯಾಣದ ಕೊನೆಯಲ್ಲಿ ಅಪೊಸ್ತಲ ಪೌಲನು ಯೆರೂಸಲೇಮಿನಲ್ಲಿದ್ದನು. ರೋಮನರಿಂದ ಬಂಧಿಸಲ್ಪಟ್ಟ ಬಳಿಕ, ಯೆಹೂದಿ ಹಿರೀಸಭೆಯಾಗಿದ್ದ ಸನ್ಹೆದ್ರಿನ್‌ನ ಮುಂದೆ ಹಾಜರಾಗಲು ಅವನಿಗೆ ಅನುಮತಿಯು ಕೊಡಲ್ಪಟ್ಟಿತ್ತು. (ಅ. ಕೃತ್ಯಗಳು 22:29, 30) ಪೌಲನು ಹಿರೀಸಭೆಯ ಸದಸ್ಯರನ್ನು ಗಮನಿಸಿದಾಗ, ಅವರಲ್ಲಿ ಕೆಲವರು ಸದ್ದುಕಾಯರು ಮತ್ತು ಇನ್ನು ಕೆಲವರು ಫರಿಸಾಯರು ಇರುವುದು ಅವನ ದೃಷ್ಟಿಗೆ ಬಿತ್ತು. ಈ ಎರಡು ಗುಂಪಿನವರು ಒಂದು ಪ್ರಮುಖ ವಿಷಯದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರು. ಸದ್ದುಕಾಯರು ಪುನರುತ್ಥಾನದಲ್ಲಿ ನಂಬಿಕೆಯಿಡುತ್ತಿರಲಿಲ್ಲ, ಆದರೆ ಫರಿಸಾಯರು ಪುನರುತ್ಥಾನದಲ್ಲಿ ನಂಬಿಕೆಯಿಟ್ಟಿದ್ದರು. ಪುನರುತ್ಥಾನದ ಬಗ್ಗೆ ತನ್ನ ನಂಬಿಕೆಯೇನು ಎಂಬುದನ್ನು ತಿಳಿಯಪಡಿಸಲಿಕ್ಕಾಗಿ ಪೌಲನು ಹೀಗೆ ಹೇಳಿದನು: “ಸಹೋದರರೇ, ನಾನು ಫರಿಸಾಯನು, ಫರಿಸಾಯರ ಮಗನು; ಸತ್ತವರೆದ್ದುಬರುವರು ಎಂಬ ನಿರೀಕ್ಷೆಯ ವಿಷಯವಾಗಿ ನನ್ನನ್ನು ವಿಚಾರಣೆಮಾಡುತ್ತಾರೆ.” ಹೀಗೆ ಹೇಳುವ ಮೂಲಕ ಅವನು ಕೂಡಿಬಂದಿದ್ದ ಜನರ ನಡುವೆ ಗೊಂದಲವನ್ನು ಉಂಟುಮಾಡಿದನು!​—⁠ಅ. ಕೃತ್ಯಗಳು 23:6-9.

2 ಕೆಲವು ವರ್ಷಗಳಿಗೆ ಮುಂಚೆ ಪೌಲನು ದಮಸ್ಕಕ್ಕೆ ಪ್ರಯಾಣಿಸುತ್ತಿದ್ದಾಗ ದಾರಿಯಲ್ಲಿ ಕಂಡ ಒಂದು ದರ್ಶನದಲ್ಲಿ ಯೇಸುವಿನ ಧ್ವನಿಯನ್ನು ಕೇಳಿಸಿಕೊಂಡನು. ಆಗ ಪೌಲನು ಯೇಸುವನ್ನು “ಕರ್ತನೇ ನಾನೇನು ಮಾಡಬೇಕು?” ಎಂದು ಕೇಳಿದನು. ಯೇಸು ಉತ್ತರಿಸಿದ್ದು: “ನೀನೆದ್ದು ದಮಸ್ಕದೊಳಕ್ಕೆ ಹೋಗು, ಮಾಡುವದಕ್ಕೆ ನಿನಗೆ ನೇಮಿಸಿರುವದೆಲ್ಲಾ ಅಲ್ಲಿ ತಿಳಿಸಲ್ಪಡುವದು.” ಪೌಲನು ದಮಸ್ಕಕ್ಕೆ ಆಗಮಿಸಿದಾಗ, ಸಹಾಯಮಾಡುವ ಮನೋಭಾವವಿದ್ದ ಅನನೀಯನೆಂಬ ಒಬ್ಬ ಕ್ರೈಸ್ತ ಶಿಷ್ಯನು ಅವನನ್ನು ಹುಡುಕಿಕೊಂಡು ಬಂದು ಹೀಗೆ ವಿವರಿಸಿದನು: “ನಮ್ಮ ಪಿತೃಗಳ ದೇವರು ತನ್ನ ಚಿತ್ತವನ್ನು ನೀನು ತಿಳುಕೊಳ್ಳುವದಕ್ಕೂ ಆ ನೀತಿವಂತನನ್ನು [ಪುನರುತ್ಥಿತ ಯೇಸುವನ್ನು] ನೋಡುವದಕ್ಕೂ ಆತನ ಬಾಯಿಂದ ಒಂದು ಮಾತನ್ನು ಕೇಳುವದಕ್ಕೂ ನಿನ್ನನ್ನು ನೇಮಿಸಿದ್ದಾನೆ.” (ಅ. ಕೃತ್ಯಗಳು 22:6-16) ಆದುದರಿಂದ, ಪುನರುತ್ಥಾನದಲ್ಲಿನ ತನ್ನ ನಂಬಿಕೆಯನ್ನು ಸಮರ್ಥಿಸಲು ಪೌಲನು ಸಿದ್ಧನಾಗಿದ್ದುದರಲ್ಲಿ ಯಾವುದೇ ಆಶ್ಚರ್ಯವಿಲ್ಲ.​—⁠1 ಪೇತ್ರ 3:⁠15.

ಪುನರುತ್ಥಾನದ ನಿರೀಕ್ಷೆಯನ್ನು ಬಹಿರಂಗವಾಗಿ ಸಾರಿಹೇಳುವುದು

3 ತದನಂತರ ಪೌಲನು ದೇಶಾಧಿಪತಿಯಾದ ಫೇಲಿಕ್ಸನ ಮುಂದೆ ಹಾಜರಾದನು. ಆ ಸಂದರ್ಭದಲ್ಲಿ, ಪೌಲನ ವಿರುದ್ಧ ಯೆಹೂದ್ಯರ ಮೊಕದ್ದಮೆಯನ್ನು ಸಾದರಪಡಿಸಿದ ತೆರ್ತುಲ್ಲನೆಂಬ ‘ಒಬ್ಬ ವಕೀಲನು,’ ಪೌಲನು ಒಂದು ಪಾಷಂಡಮತದ ಮುಖಂಡನು ಹಾಗೂ ಒಬ್ಬ ರಾಜದ್ರೋಹಿಯೆಂದೂ ಅವನ ಮೇಲೆ ದೋಷಾರೋಪ ಹೊರಿಸಿದನು. ಇದಕ್ಕೆ ಉತ್ತರವಾಗಿ ಪೌಲನು, “ಒಂದನ್ನು ಮಾತ್ರ ನಿನ್ನ ಮುಂದೆ ಒಪ್ಪಿಕೊಳ್ಳುತ್ತೇನೆ, ಅದೇನಂದರೆ​—⁠ಇವರು ಪಾಷಂಡಮತವೆಂದು ಹೇಳುವ ಮಾರ್ಗಕ್ಕನುಸಾರವಾಗಿ ನಾನು ನಮ್ಮ ಪಿತೃಗಳ ದೇವರನ್ನು ಸೇವಿಸುವವನಾಗಿದ್ದೇನೆ” ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿದನು. ತದನಂತರ ಮುಖ್ಯ ವಿವಾದಾಂಶವನ್ನು ಸಂಬೋಧಿಸುತ್ತಾ ತನ್ನ ಮಾತುಗಳನ್ನು ಹೀಗೆ ಮುಂದುವರಿಸಿದನು: “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ.”​—⁠ಅ. ಕೃತ್ಯಗಳು 23:23, 24; 24:1-8, 14, 15.

4 ಸುಮಾರು ಎರಡು ವರ್ಷಗಳ ಬಳಿಕ, ಫೇಲಿಕ್ಸನ ಸ್ಥಾನಕ್ಕೆ ಬಂದ ಪೋರ್ಕಿಯ ಫೆಸ್ತನು, ಸೆರೆವಾಸಿಯಾದ ಪೌಲನ ವಿಚಾರಣೆ ನಡೆಸುವುದರಲ್ಲಿ ತನ್ನೊಂದಿಗೆ ಜೊತೆಗೂಡುವಂತೆ ರಾಜ ಹೆರೋದ ಅಗ್ರಿಪ್ಪನನ್ನು ಆಮಂತ್ರಿಸಿದನು. ಫೆಸ್ತನು ಅವನಿಗೆ, ‘ಯೇಸುವೆಂಬ ಒಬ್ಬನು ಸತ್ತುಹೋಗಿದ್ದನು ಮತ್ತು ಜೀವಿತನಾದನು’ ಎಂಬ ಪೌಲನ ಹೇಳಿಕೆಯನ್ನು ಆಪಾದಕರು ಅಂಗೀಕರಿಸುತ್ತಿಲ್ಲ ಎಂದು ವಿವರಿಸಿದನು. ತನ್ನ ಪರವಾಗಿ ವಾದಿಸುತ್ತಾ ಪೌಲನು ಹೀಗೆ ಕೇಳಿದನು: “ದೇವರು ಸತ್ತವರನ್ನು ಎಬ್ಬಿಸಿದ್ದು ನಂಬತಕ್ಕದ್ದಲ್ಲವೆಂದು ನೀವು ಯಾಕೆ ತೀರ್ಮಾನಿಸುತ್ತೀರಿ?” ತದನಂತರ ಅವನು ಹೇಳಿದ್ದು: “ಆದರೆ ನಾನು ದೇವರಿಂದ ಸಹಾಯವನ್ನು ಪಡೆದು ಈ ದಿನದ ವರೆಗೂ ಸುರಕ್ಷಿತವಾಗಿದ್ದು ಚಿಕ್ಕವರಿಗೂ ದೊಡ್ಡವರಿಗೂ ಸಾಕ್ಷಿಹೇಳುವವನಾಗಿದ್ದೇನೆ. ಪ್ರವಾದಿಗಳೂ ಮೋಶೆಯೂ ಮುಂದೆ ಆಗುವವೆಂದು ತಿಳಿಸಿದ ಸಂಗತಿಗಳನ್ನೇ ಹೊರತು ಇನ್ನೇನೂ ಹೇಳುವವನಲ್ಲ. ಆ ಸಂಗತಿಗಳು ಏನಂದರೆ​—⁠ಕ್ರಿಸ್ತನು ಬಾಧೆಪಟ್ಟು ಸಾಯಬೇಕಾದವನು ಮತ್ತು ಆತನು ಸತ್ತವರೊಳಗಿಂದ ಮೊದಲನೆಯವನಾಗಿ ಎದ್ದು ಯೆಹೂದ್ಯರಿಗೂ ಅನ್ಯಜನರಿಗೂ ಬೆಳಕನ್ನು ಪ್ರಸಿದ್ಧಿಪಡಿಸುವವನಾಗಿರುವನು ಎಂಬದೇ.” (ಅ. ಕೃತ್ಯಗಳು 24:27; 25:13-22; 26:8, 22, 23) ಪೌಲನು ಪುನರುತ್ಥಾನದ ಎಂಥ ನಿಷ್ಠಾವಂತ ಬೆಂಬಲಿಗನಾಗಿದ್ದನು! ಪೌಲನಂತೆ, ಪುನರುತ್ಥಾನವು ಇರುವುದು ಎಂದು ನಾವು ಸಹ ದೃಢಭರವಸೆಯಿಂದ ಸಾರಿಹೇಳಸಾಧ್ಯವಿದೆ. ಆದರೆ ನಾವು ಯಾವ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಲ್ಲೆವು? ಪೌಲನಿಗೆ ತೋರಿಸಲ್ಪಟ್ಟ ಪ್ರತಿಕ್ರಿಯೆಯೇ ನಮಗೂ ತೋರಿಸಲ್ಪಡಬಹುದು.

5 ಈ ಮುಂಚೆ ಪೌಲನ ಎರಡನೇ ಮಿಷನೆರಿ ಸಂಚಾರದ ಸಮಯದಲ್ಲಿ (ಸಾ.ಶ. 49-52ರ ಸುಮಾರಿಗೆ), ಅವನು ಅಥೇನೆ ಪಟ್ಟಣವನ್ನು ಸಂದರ್ಶಿಸಿದಾಗ ಏನು ಸಂಭವಿಸಿತು ಎಂಬುದನ್ನು ಪರಿಗಣಿಸಿರಿ. ಅನೇಕ ದೇವದೇವತೆಗಳಲ್ಲಿ ನಂಬಿಕೆಯಿಟ್ಟಿದ್ದ ಜನರೊಂದಿಗೆ ಅವನು ತರ್ಕಿಸಿದನು ಮತ್ತು ದೇವರು ನಿಷ್ಕರ್ಷೆಮಾಡಿರುವ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆಮಾಡುವ ದೇವರ ಉದ್ದೇಶವನ್ನು ಅರಿತುಕೊಳ್ಳುವಂತೆ ಅವರನ್ನು ಉತ್ತೇಜಿಸಿದನು. ದೇವರು ನಿಷ್ಕರ್ಷೆಮಾಡಿರುವ ಆ ಪುರುಷನು ಯೇಸು ಕ್ರಿಸ್ತನೇ ಆಗಿದ್ದನು. ಯೇಸುವನ್ನು ಪುನರುತ್ಥಾನಗೊಳಿಸುವ ಮೂಲಕ ದೇವರು ಇದನ್ನು ಖಾತ್ರಿಪಡಿಸಿದ್ದಾನೆ ಎಂದು ಪೌಲನು ವಿವರಿಸಿದನು. ಇದಕ್ಕೆ ಜನರು ಹೇಗೆ ಪ್ರತಿಕ್ರಿಯಿಸಿದರು? ನಾವು ಓದುವುದು: “ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯಮಾಡಿದರು; ಬೇರೆ ಕೆಲವರು​—⁠ನೀನು ಈ ವಿಷಯದಲ್ಲಿ ಹೇಳುವದನ್ನು ನಾವು ಇನ್ನೊಂದು ಸಾರಿ ಕೇಳುತ್ತೇವೆ ಅಂದರು.”​—⁠ಅ. ಕೃತ್ಯಗಳು 17:29-32.

6 ಈ ಪ್ರತಿಕ್ರಿಯೆಯು, ಸಾ.ಶ. 33ರ ಪಂಚಾಶತ್ತಮದ ಸ್ವಲ್ಪ ಸಮಯದ ಬಳಿಕ ಪೇತ್ರಯೋಹಾನರಿಗೆ ಆಗಿದ್ದ ಅನುಭವಕ್ಕೆ ಹೋಲಿಕೆಯಲ್ಲಿತ್ತು. ಆ ಸಮಯದಲ್ಲಿಯೂ ಸದ್ದುಕಾಯರು ವಾಗ್ವಾದದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು. ಆಗ ಏನು ಸಂಭವಿಸಿತೆಂಬುದನ್ನು ಅಪೊಸ್ತಲರ ಕೃತ್ಯಗಳು 4:​1-4 ಹೀಗೆ ತಿಳಿಸುತ್ತದೆ: ‘ಅಪೊಸ್ತಲರು ಜನರಿಗೆ ಉಪದೇಶಮಾಡುತ್ತಾ ಸತ್ತವರು ಜೀವಿತರಾಗಿ ಏಳುವರು ಎಂಬದನ್ನು ಯೇಸುವಿನ ದೃಷ್ಟಾಂತದಿಂದ ಸಾರುತ್ತಾ ಇದ್ದದ್ದಕ್ಕೆ ಯಾಜಕರೂ ದೇವಾಲಯದ ಅಧಿಪತಿಯೂ ಸದ್ದುಕಾಯರೂ ಅಸಮಾಧಾನಪಟ್ಟರು.’ ಆದರೂ, ಇನ್ನಿತರರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. “ವಾಕ್ಯವನ್ನು ಕೇಳಿದವರಲ್ಲಿ ಅನೇಕರು ನಂಬಿದರು; ಗಂಡಸರ ಸಂಖ್ಯೆ ಸುಮಾರು ಐದು ಸಾವಿರ ತನಕ ಬೆಳೆಯಿತು.” ಆದುದರಿಂದ, ಪುನರುತ್ಥಾನದ ನಿರೀಕ್ಷೆಯ ಕುರಿತು ನಾವು ಮಾತಾಡುವಾಗ ಬೇರೆ ಬೇರೆ ರೀತಿಯ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಸಾಧ್ಯವಿದೆ ಎಂಬುದು ಸುವ್ಯಕ್ತ. ಹೀಗಿರುವಾಗ, ಈ ಬೋಧನೆಯಲ್ಲಿ ನಮ್ಮ ನಂಬಿಕೆಯನ್ನು ಬಲಪಡಿಸುವುದು ಅತ್ಯಾವಶ್ಯಕವಾಗಿದೆ.

ನಂಬಿಕೆ ಮತ್ತು ಪುನರುತ್ಥಾನ

7 ಸಾ.ಶ. ಒಂದನೇ ಶತಮಾನದಲ್ಲಿ ಕ್ರೈಸ್ತರಾಗಿ ಪರಿಣಮಿಸಿದವರಲ್ಲಿ ಎಲ್ಲರಿಗೆ ಪುನರುತ್ಥಾನದ ನಿರೀಕ್ಷೆಯನ್ನು ಅಂಗೀಕರಿಸುವುದು ಸುಲಭವಾಗಿರಲಿಲ್ಲ. ಈ ನಿರೀಕ್ಷೆಯನ್ನು ಅಂಗೀಕರಿಸುವುದನ್ನು ಕಷ್ಟಕರವಾಗಿ ಕಂಡುಕೊಂಡಂಥ ಕೆಲವರು ಕೊರಿಂಥ ಸಭೆಯೊಂದಿಗೆ ಸಹವಾಸಿಸುತ್ತಿದ್ದರು. ಅವರಿಗೆ ಪೌಲನು ಬರೆದುದು: “ನಾನು ನಿಮಗೆ ತಿಳಿಸಿದ ಮೊದಲನೆಯ ಸಂಗತಿಗಳೊಳಗೆ ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. ಅದು ನಾನು ಸಹ ಕಲಿತುಕೊಂಡದ್ದೇ. ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.” ತದನಂತರ ಪೌಲನು, ಪುನರುತ್ಥಿತ ಕ್ರಿಸ್ತನು “ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು” ಮತ್ತು ಇವರಲ್ಲಿ ಹೆಚ್ಚಿನವರು ಈಗಲೂ ಬದುಕಿದ್ದಾರೆ ಎಂದು ಹೇಳುವ ಮೂಲಕ ಈ ಸತ್ಯವನ್ನು ದೃಢೀಕರಿಸಿದನು. (1 ಕೊರಿಂಥ 15:3-8) ಅವನು ತರ್ಕವನ್ನು ಮುಂದುವರಿಸುತ್ತಾ ಹೇಳಿದ್ದು: “ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರೋಣವಾಗುತ್ತಿರುವಲ್ಲಿ ನಿಮ್ಮೊಳಗೆ ಕೆಲವರು​—⁠ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವದು ಹೇಗೆ? ಸತ್ತವರಿಗೆ ಪುನರುತ್ಥಾನವಿಲ್ಲವೆಂಬದು ನಿಜವಾಗಿದ್ದರೆ ಕ್ರಿಸ್ತನಾದರೂ ಎದ್ದುಬರಲಿಲ್ಲ; ಕ್ರಿಸ್ತನು ಎದ್ದುಬರಲಿಲ್ಲವಾದರೆ ನಮ್ಮ ಪ್ರಸಂಗವು ಹುರುಳಿಲ್ಲದ್ದು ಮತ್ತು ನಿಮ್ಮ ನಂಬಿಕೆಯೂ ಹುರುಳಿಲ್ಲದ್ದು.”​—⁠1 ಕೊರಿಂಥ 15:12-14.

8 ಹೌದು, ಪುನರುತ್ಥಾನದ ಬೋಧನೆಯು ಎಷ್ಟು ಮೂಲಭೂತವಾದ ಬೋಧನೆಯೆಂದರೆ, ಪುನರುತ್ಥಾನವನ್ನು ಒಂದು ವಾಸ್ತವಿಕ ಸಂಗತಿಯಾಗಿ ಅಂಗೀಕರಿಸದಿರುವಲ್ಲಿ ಕ್ರಿಸ್ತ ನಂಬಿಕೆಯೇ ಹುರುಳಿಲ್ಲದ್ದಾಗಿದೆ. ಪುನರುತ್ಥಾನದ ಕುರಿತಾದ ಸರಿಯಾದ ತಿಳಿವಳಿಕೆಯು, ಸತ್ಯ ಕ್ರೈಸ್ತರನ್ನು ಸುಳ್ಳು ಕ್ರೈಸ್ತರಿಂದ ಭಿನ್ನವಾಗಿರಿಸುತ್ತದೆ. (ಆದಿಕಾಂಡ 3:4) ಈ ಕಾರಣದಿಂದಲೇ ಪೌಲನು ಪುನರುತ್ಥಾನದ ಬೋಧನೆಯನ್ನು ಕ್ರೈಸ್ತಧರ್ಮದ “ಪ್ರಥಮಬೋಧನೆ”ಯಲ್ಲಿ ಒಳಗೂಡಿಸುತ್ತಾನೆ. ‘ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗುವುದೇ’ ನಮ್ಮ ದೃಢನಿರ್ಧಾರವಾಗಿರಲಿ. “ಮತ್ತು ದೇವರ ಚಿತ್ತವಾದರೆ ಹೀಗೆ ಸಾಗುತ್ತಾ ಹೋಗುವೆವು” ಎಂದು ಪೌಲನು ಹುರಿದುಂಬಿಸಿದನು.​—⁠ಇಬ್ರಿಯ 6:​1-3.

ಪುನರುತ್ಥಾನದ ನಿರೀಕ್ಷೆ

9 ಪುನರುತ್ಥಾನದಲ್ಲಿನ ನಮ್ಮ ನಂಬಿಕೆಯನ್ನು ಇನ್ನಷ್ಟು ಬಲಪಡಿಸಲಿಕ್ಕಾಗಿ ಈ ಮುಂದಿನ ಪ್ರಶ್ನೆಗಳನ್ನು ನಾವು ಪುನರ್ವಿಮರ್ಶಿಸೋಣ: ಬೈಬಲಿಗನುಸಾರ ಪುನರುತ್ಥಾನ ಎಂಬ ಪದದ ಅರ್ಥವೇನು? ಪುನರುತ್ಥಾನದ ಬೋಧನೆಯು ಯಾವ ರೀತಿಯಲ್ಲಿ ಯೆಹೋವನ ಪ್ರೀತಿಯನ್ನು ಎತ್ತಿತೋರಿಸುತ್ತದೆ? ಈ ಪ್ರಶ್ನೆಗಳಿಗಾಗಿರುವ ಉತ್ತರಗಳು ನಾವು ದೇವರಿಗೆ ಹೆಚ್ಚು ಸಮೀಪವಾಗುವಂತೆ ಮಾಡುವವು ಮತ್ತು ಅದೇ ಸಮಯದಲ್ಲಿ ಪುನರುತ್ಥಾನದ ಕುರಿತು ಇತರರಿಗೆ ಕಲಿಸುವಂತೆ ನಮಗೆ ಸಹಾಯಮಾಡುವವು.​—⁠2 ತಿಮೊಥೆಯ 2:2; ಯಾಕೋಬ 4:⁠8.

10 “ಪುನರುತ್ಥಾನ” ಎಂಬುದು ಒಂದು ಗ್ರೀಕ್‌ ಶಬ್ದದ ಭಾಷಾಂತರವಾಗಿದ್ದು, ಅದರ ಅಕ್ಷರಾರ್ಥವು “ಪುನಃ ಎದ್ದುನಿಲ್ಲುವುದು” ಎಂದಾಗಿದೆ. ಈ ಅಭಿವ್ಯಕ್ತಿಯಲ್ಲಿ ಏನೆಲ್ಲಾ ಒಳಗೂಡಿದೆ? ಬೈಬಲಿಗನುಸಾರ ಪುನರುತ್ಥಾನದ ನಿರೀಕ್ಷೆಯು, ಒಬ್ಬ ಮೃತ ವ್ಯಕ್ತಿಯು ಪುನಃ ಬದುಕಬಲ್ಲನೆಂಬ ನಿಶ್ಚಿತಾಭಿಪ್ರಾಯವೇ ಆಗಿದೆ. ಬೈಬಲ್‌ ಇನ್ನೂ ತೋರಿಸುವುದೇನೆಂದರೆ, ಒಬ್ಬ ವ್ಯಕ್ತಿಯು ಭೂನಿರೀಕ್ಷೆಯನ್ನು ಹೊಂದಿದ್ದಾನೋ ಅಥವಾ ಸ್ವರ್ಗೀಯ ನಿರೀಕ್ಷೆಯನ್ನು ಹೊಂದಿದ್ದಾನೋ ಎಂಬುದರ ಮೇಲೆ ಅವಲಂಬಿಸಿ, ಅವನು ಒಬ್ಬ ಮಾನವನಾಗಿ ಅಥವಾ ಒಬ್ಬ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಲ್ಪಡುತ್ತಾನೆ. ಅದ್ಭುತಕರವಾದ ಈ ಪುನರುತ್ಥಾನದ ಪ್ರತೀಕ್ಷೆಯಲ್ಲಿ ತೋರಿಸಲ್ಪಡುವ ಯೆಹೋವನ ಪ್ರೀತಿ, ವಿವೇಕ ಮತ್ತು ಶಕ್ತಿಯನ್ನು ನೋಡಿ ನಾವು ಬೆರಗುಗೊಳ್ಳುತ್ತೇವೆ.

11 ಯೇಸುವಿನ ಮತ್ತು ಅವನ ಅಭಿಷಿಕ್ತ ಸಹೋದರರ ಪುನರುತ್ಥಾನವು ಅವರಿಗೆ ಆತ್ಮ ದೇಹವನ್ನು ಒದಗಿಸುತ್ತದೆ ಮತ್ತು ಇದು ಅವರು ಸ್ವರ್ಗದಲ್ಲಿ ಸೇವೆಮಾಡುವುದನ್ನು ಸಾಧ್ಯಗೊಳಿಸುತ್ತದೆ. (1 ಕೊರಿಂಥ 15:35-38, 42-53) ಅವರು ಜೊತೆಯಾಗಿ, ಭೂಮಿಯ ಮೇಲೆ ಪರದೈಸದಂಥ ಪರಿಸ್ಥಿತಿಗಳನ್ನು ತರಲಿರುವ ಮೆಸ್ಸೀಯ ರಾಜ್ಯದ ಅರಸರಾಗಿ ಸೇವೆಮಾಡುವರು. ಯೇಸುವು ಮಹಾಯಾಜಕನಾಗಿರುವನು ಮತ್ತು ಅವನ ಕೈಕೆಳಗಿರುವ ಅಭಿಷಿಕ್ತರು ರಾಜವಂಶಸ್ಥರಾದ ಯಾಜಕರಾಗಿರುವರು. ಅವರು, ನೀತಿಯ ನೂತನ ಲೋಕದಲ್ಲಿ ಕ್ರಿಸ್ತನ ವಿಮೋಚನಾ ಮೌಲ್ಯವುಳ್ಳ ಯಜ್ಞದ ಪ್ರಯೋಜನಗಳನ್ನು ಮಾನವಕುಲಕ್ಕೆ ಲಭ್ಯಗೊಳಿಸುವರು. (ಇಬ್ರಿಯ 7:25, 26; 9:24; 1 ಪೇತ್ರ 2:9; ಪ್ರಕಟನೆ 22:1, 2) ಈ ಮಧ್ಯೆ, ಭೂಮಿಯ ಮೇಲೆ ಈಗಲೂ ಬದುಕಿರುವ ಅಭಿಷಿಕ್ತರು ದೇವರಿಗೆ ಅಂಗೀಕಾರಾರ್ಹರಾಗಿ ಉಳಿಯಲು ಬಯಸುವರು. ಅವರು ಮೃತಪಟ್ಟಾಗ, ಸ್ವರ್ಗದಲ್ಲಿ ಅಮರವಾದ ಆತ್ಮಜೀವನಕ್ಕೆ ಪುನರುತ್ಥಾನಗೊಳಿಸಲ್ಪಡುವ ಮೂಲಕ ತಮ್ಮ “ಪ್ರತಿಫಲ”ವನ್ನು ಪಡೆದುಕೊಳ್ಳುವರು. (2 ಕೊರಿಂಥ 5:1-3, 6-8, 10; 1 ಕೊರಿಂಥ 15:51, 52; ಪ್ರಕಟನೆ 14:13) ಪೌಲನು ಬರೆದುದು: “ನಾವು ಆತನ ಮರಣಕ್ಕೆ ಸದೃಶವಾದ ಮರಣವನ್ನು ಹೊಂದಿ ಆತನಲ್ಲಿ ಐಕ್ಯವಾಗಿದ್ದರೆ ಆತನ ಪುನರುತ್ಥಾನಕ್ಕೆ ಸದೃಶವಾದ ಪುನರುತ್ಥಾನವನ್ನೂ ಹೊಂದಿ ಆತನಲ್ಲಿ ಐಕ್ಯವಾಗುವೆವು.” (ರೋಮಾಪುರ 6:5) ಆದರೆ ಭೂಮಿಯ ಮೇಲೆ ಮಾನವ ಜೀವಿತಕ್ಕೆ ಪುನರುತ್ಥಾನಗೊಳಿಸಲ್ಪಡುವವರ ಕುರಿತಾಗಿ ಏನು? ಪುನರುತ್ಥಾನದ ನಿರೀಕ್ಷೆಯು ಅವರನ್ನು ಹೇಗೆ ದೇವರಿಗೆ ಹೆಚ್ಚು ಸಮೀಪ ತರಬಲ್ಲದು? ನಾವು ಅಬ್ರಹಾಮನ ಉದಾಹರಣೆಯಿಂದ ಬಹಳಷ್ಟನ್ನು ಕಲಿಯಸಾಧ್ಯವಿದೆ.

ಪುನರುತ್ಥಾನ ಮತ್ತು ಯೆಹೋವನೊಂದಿಗಿನ ಸ್ನೇಹ

12 “ದೇವರ ಸ್ನೇಹಿತ” ಎಂದು ವರ್ಣಿಸಲ್ಪಟ್ಟಿದ್ದ ಅಬ್ರಹಾಮನು ಎದ್ದುಕಾಣುವಂಥ ನಂಬಿಕೆಯುಳ್ಳ ವ್ಯಕ್ತಿಯಾಗಿದ್ದನು. (ಯಾಕೋಬ 2:23) ಪೌಲನು ಇಬ್ರಿಯ ಪುಸ್ತಕದ 11ನೆಯ ಅಧ್ಯಾಯದಲ್ಲಿ ಮಾಡಿರುವ ನಂಬಿಗಸ್ತ ಸ್ತ್ರೀಪುರುಷರ ಪಟ್ಟಿಯಲ್ಲಿ ಮೂರು ಬಾರಿ ಅಬ್ರಹಾಮನ ನಂಬಿಕೆಯ ಕುರಿತು ಸೂಚಿಸಿ ಮಾತಾಡಿದನು. (ಇಬ್ರಿಯ 11:8, 9, 17) ಅವನು ಮೂರನೆಯ ಬಾರಿ ಸೂಚಿಸಿ ಮಾತಾಡಿದ ಸಂಗತಿಯು, ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವಾಗಿ ಅರ್ಪಿಸಲು ವಿಧೇಯಭಾವದಿಂದ ಸಿದ್ಧನಾದಾಗ ಅವನು ತೋರಿಸಿದ ನಂಬಿಕೆಯ ಕಡೆಗೆ ಗಮನವನ್ನು ಸೆಳೆಯುತ್ತದೆ. ಇಸಾಕನ ಮೂಲಕ ಬರುವ ಒಂದು ಸಂತತಿಯ ಕುರಿತಾದ ವಾಗ್ದಾನವು ಯೆಹೋವನಿಂದ ಖಚಿತಪಡಿಸಲ್ಪಟ್ಟಿದೆ ಎಂಬುದನ್ನು ಅಬ್ರಹಾಮನು ಚೆನ್ನಾಗಿ ಬಲ್ಲವನಾಗಿದ್ದನು. ಒಂದುವೇಳೆ ಇಸಾಕನು ಯಜ್ಞವಾಗಿ ಮರಣಪಡುವುದಾದರೂ, ‘ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು’ ಅಬ್ರಹಾಮನು ಮನಗಂಡಿದ್ದನು.

13 ಘಟನೆಗಳು ವಿಕಾಸಗೊಳ್ಳುತ್ತಾ ಹೋದಂತೆ, ಯೆಹೋವನು ಅಬ್ರಹಾಮನ ನಂಬಿಕೆಯ ಬಲ ಎಷ್ಟಿದೆಯೆಂಬುದನ್ನು ಗ್ರಹಿಸಿದಾಗ, ಅವನ ಮಗನ ಬದಲಿಗೆ ಯಜ್ಞವನ್ನರ್ಪಿಸಲಿಕ್ಕಾಗಿ ಇನ್ನೊಂದು ಪ್ರಾಣಿಯನ್ನು ಏರ್ಪಡಿಸಿದನು. ಆದರೂ, ಇಸಾಕನ ಅನುಭವವು ಪುನರುತ್ಥಾನದ ಸಾಮ್ಯರೂಪವಾಗಿ ಇಲ್ಲವೆ ದೃಷ್ಟಾಂತರೂಪವಾಗಿ ಕಾರ್ಯನಡಿಸಿತು. ಇದನ್ನೇ ಪೌಲನು ವಿವರಿಸಿ ಹೇಳಿದ್ದು: “ಸತ್ತವರೊಳಗಿಂದ [ಅಬ್ರಹಾಮನು] ಸಾಮ್ಯರೂಪವಾಗಿ ಅವನನ್ನು [ಇಸಾಕನನ್ನು] ಹೊಂದಿದನು.” (ಇಬ್ರಿಯ 11:​19, BSI Reference Edition ಪಾದಟಿಪ್ಪಣಿ) ಅಷ್ಟುಮಾತ್ರವಲ್ಲ, ಅಬ್ರಹಾಮನು ಪುನರುತ್ಥಾನದಲ್ಲಿ ನಂಬಿಕೆಯಿಡಲು ಅವನಿಗೆ ಈ ಮುಂಚೆಯೇ ಬಲವಾದ ಆಧಾರವಿತ್ತು. ವೃದ್ಧಪ್ರಾಯದಲ್ಲಿ ಅಬ್ರಹಾಮನು ತನ್ನ ಪತ್ನಿಯಾದ ಸಾರಳನ್ನು ಕೂಡಿ, ತಮ್ಮ ಮಗನಾದ ಇಸಾಕನನ್ನು ಹೆತ್ತದ್ದು, ಯೆಹೋವನು ಅಬ್ರಹಾಮನ ಪ್ರಜನನ ಶಕ್ತಿಯನ್ನು ಪುನರುಜ್ಜೀವಿಸಿದ್ದರಿಂದಲೇ ಅಲ್ಲವೊ?​—⁠ಆದಿಕಾಂಡ 18:10-14; 21:1-3; ರೋಮಾಪುರ 4:19-21.

14 ಪೌಲನು ಅಬ್ರಹಾಮನನ್ನು, ಅನ್ಯದೇಶದಲ್ಲಿ ಇದ್ದವನಂತೆ ಮತ್ತು ಡೇರೆಗಳಲ್ಲಿ ಇದ್ದುಕೊಂಡು, “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದ”ವನಾಗಿ ವರ್ಣಿಸಿದನು. (ಇಬ್ರಿಯ 11:9, 10) ಇದು ದೇವರ ಆಲಯವು ಎಲ್ಲಿತ್ತೋ ಆ ಯೆರೂಸಲೇಮಿನಂತೆ ಒಂದು ಅಕ್ಷರಾರ್ಥಕ ಪಟ್ಟಣವಾಗಿರಲಿಲ್ಲ. ಬದಲಾಗಿ ಇದೊಂದು ಸಾಂಕೇತಿಕ ಪಟ್ಟಣವಾಗಿತ್ತು. ಇದು ದೇವರ ಸ್ವರ್ಗೀಯ ರಾಜ್ಯವಾಗಿದ್ದು, ಕ್ರಿಸ್ತ ಯೇಸು ಮತ್ತು ಅವನ 1,44,000 ಜೊತೆರಾಜರಿಂದ ರಚಿತವಾಗಿತ್ತು. ತಮ್ಮ ಸ್ವರ್ಗೀಯ ಮಹಿಮೆಯಲ್ಲಿರುವ 1,44,000 ಮಂದಿಯನ್ನು “ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು,” ಕ್ರಿಸ್ತನ “ಮದಲಗಿತ್ತಿ” ಎಂದು ಸಹ ಸಂಬೋಧಿಸಲಾಗಿದೆ. (ಪ್ರಕಟನೆ 21:2) 1914ರಲ್ಲಿ ಯೆಹೋವನು ಯೇಸುವನ್ನು ಸ್ವರ್ಗೀಯ ರಾಜ್ಯದ ಮೆಸ್ಸೀಯ ರಾಜನಾಗಿ ಸಿಂಹಾಸನಕ್ಕೇರಿಸಿದನು ಮತ್ತು ತನ್ನ ವೈರಿಗಳ ಮಧ್ಯದಲ್ಲಿ ದೊರತೆನಮಾಡುವಂತೆ ಅವನಿಗೆ ಅಪ್ಪಣೆ ನೀಡಿದನು. (ಕೀರ್ತನೆ 110:1, 2; ಪ್ರಕಟನೆ 11:15) “ದೇವರ ಸ್ನೇಹಿತ”ನಾದ ಅಬ್ರಹಾಮನು ಈ ರಾಜ್ಯದಾಳಿಕೆಯ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕಾದರೆ, ಅವನು ಪುನಃ ಜೀವಿಸಬೇಕಾಗಿದೆ. ತದ್ರೀತಿಯಲ್ಲಿ, ನಾವು ರಾಜ್ಯದ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕಾದರೆ, ಅರ್ಮಗೆದೋನ್‌ನಿಂದ ಪಾರಾಗಿ ಉಳಿದಿರುವ ಮಹಾಸಮೂಹದ ಸದಸ್ಯರಾಗಿ ಅಥವಾ ಮೃತಸ್ಥಿತಿಯಿಂದ ಪುನರುತ್ಥಾನವಾದವರಾಗಿ ದೇವರ ನೂತನ ಲೋಕದಲ್ಲಿ ಜೀವಂತವಾಗಿರಬೇಕು. (ಪ್ರಕಟನೆ 7:9, 14) ಆದರೂ, ಪುನರುತ್ಥಾನದ ನಿರೀಕ್ಷೆಗೆ ಯಾವುದು ಆಧಾರವಾಗಿದೆ?

ದೇವರ ಪ್ರೀತಿ​—⁠ಪುನರುತ್ಥಾನದ ನಿರೀಕ್ಷೆಗೆ ಆಧಾರ

15 ನಮ್ಮ ಪ್ರೀತಿಯ ಸ್ವರ್ಗೀಯ ತಂದೆಯೊಂದಿಗೆ ನಮಗಿರುವ ಆಪ್ತ ಸಂಬಂಧ, ಅಬ್ರಹಾಮನಂತೆಯೇ ನಮ್ಮಲ್ಲಿರುವ ಬಲವಾದ ನಂಬಿಕೆ ಮತ್ತು ದೇವರ ಆಜ್ಞೆಗಳಿಗೆ ನಮ್ಮ ವಿಧೇಯತೆಯು, ನಾವು ನೀತಿವಂತರೆಂದು ನಿರ್ಣಯಿಸಲ್ಪಡುವಂತೆ ಹಾಗೂ ಯೆಹೋವನಿಂದ ಆತನ ಸ್ನೇಹಿತರಾಗಿ ಪರಿಗಣಿಸಲ್ಪಡುವಂತೆ ಮಾಡುತ್ತದೆ. ಇದು ನಮಗೆ ರಾಜ್ಯದಾಳಿಕೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುವ ಅವಕಾಶವನ್ನು ಕೊಡುತ್ತದೆ. ವಾಸ್ತವದಲ್ಲಿ, ಬೈಬಲಿನಲ್ಲಿ ಆದಿಕಾಂಡ 3:15ರಲ್ಲಿ ದಾಖಲಿಸಲ್ಪಟ್ಟಿರುವ ಪ್ರಪ್ರಥಮ ಪ್ರವಾದನೆಯು, ಪುನರುತ್ಥಾನದ ನಿರೀಕ್ಷೆಗೆ ಮತ್ತು ದೇವರೊಂದಿಗಿನ ಸ್ನೇಹಕ್ಕೆ ಆಧಾರವನ್ನು ಒದಗಿಸುತ್ತದೆ. ಅದು ಸೈತಾನನ ತಲೆಯು ಜಜ್ಜಲ್ಪಡುವುದನ್ನು ಮುಂತಿಳಿಸುತ್ತದೆ ಮಾತ್ರವಲ್ಲ, ದೇವರ ಸ್ತ್ರೀಯ ಸಂತಾನದ ಹಿಮ್ಮಡಿಯು ಕಚ್ಚಲ್ಪಡುವುದಕ್ಕೂ ಸೂಚಿಸುತ್ತದೆ. ಕಂಬದ ಮೇಲಿನ ಯೇಸುವಿನ ಮರಣವೇ, ಹಿಮ್ಮಡಿಯ ಸಾಂಕೇತಿಕ ಕಚ್ಚುವಿಕೆಯಾಗಿತ್ತು. ಮೂರನೆಯ ದಿನದಂದು ನಡೆದ ಅವನ ಪುನರುತ್ಥಾನವು ಆ ಗಾಯವನ್ನು ಗುಣಪಡಿಸಿತು ಮತ್ತು ‘ಮರಣಾಧಿಕಾರಿಯ ಅಂದರೆ ಸೈತಾನನ’ ವಿರುದ್ಧ ನಿರ್ಣಾಯಕ ಕ್ರಿಯೆಯನ್ನು ಕೈಗೊಳ್ಳುವುದನ್ನು ಸಾಧ್ಯಗೊಳಿಸಿತು.​—⁠ಇಬ್ರಿಯ 2:⁠14.

16 ಪೌಲನು ನಮಗೆ ಹೀಗೆ ನೆನಪುಹುಟ್ಟಿಸುತ್ತಾನೆ: “ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ಸಿದ್ಧಾಂತಪಡಿಸಿದ್ದಾನೆ.” (ರೋಮಾಪುರ 5:8) ಈ ಅಪಾತ್ರ ಕೃಪೆಗಾಗಿರುವ ಗಣ್ಯತೆಯು ನಮ್ಮನ್ನು ಯೇಸುವಿಗೆ ಮತ್ತು ನಮ್ಮ ಪ್ರೀತಿಯ ಸ್ವರ್ಗೀಯ ಪಿತನಿಗೆ ನಿಜವಾಗಿಯೂ ಹೆಚ್ಚು ಸಮೀಪವಾಗುವಂತೆ ಮಾಡುತ್ತದೆ.​—⁠2 ಕೊರಿಂಥ 5:14, 15.

17 ಕ್ರೈಸ್ತಪೂರ್ವ ಸಮಯಗಳಲ್ಲಿ ಜೀವಿಸುತ್ತಿದ್ದ ನಂಬಿಗಸ್ತ ಮನುಷ್ಯನಾದ ಯೋಬನು ಸಹ ಪುನರುತ್ಥಾನಕ್ಕಾಗಿ ಎದುರುನೋಡಿದನು. ಅವನು ಸೈತಾನನಿಂದ ತುಂಬ ಕಷ್ಟವನ್ನು ಅನುಭವಿಸಿದನು. ಪುನರುತ್ಥಾನದ ಕುರಿತು ಪ್ರಸ್ತಾಪವನ್ನೇ ಮಾಡದಿದ್ದ ತನ್ನ ಸುಳ್ಳು ಸಂಗಡಿಗರಿಗೆ ವ್ಯತಿರಿಕ್ತವಾಗಿ ಯೋಬನು ಪುನರುತ್ಥಾನದ ನಿರೀಕ್ಷೆಯಿಂದ ಸಾಂತ್ವನವನ್ನು ಪಡೆದುಕೊಂಡನು ಮತ್ತು “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಎಂದು ಕೇಳಿದನು. ಇದಕ್ಕೆ ಉತ್ತರಿಸುತ್ತಾ ಸ್ವತಃ ಯೋಬನೇ ಹೇಳಿದ್ದು: “ನನಗೆ ಬಿಡುಗಡೆಯಾಗುವವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು.” ತನ್ನ ದೇವರಾದ ಯೆಹೋವನನ್ನು ಸಂಬೋಧಿಸುತ್ತಾ ಅವನಂದದ್ದು: “ನೀನು ಕರೆದರೆ ಉತ್ತರಕೊಡುವೆನು.” ನಮ್ಮ ಪ್ರೀತಿಯ ಸೃಷ್ಟಿಕರ್ತನ ಭಾವನೆಗಳ ಕುರಿತು ಯೋಬನು ಹೀಗೆ ಹೇಳಿದನು: “ನೀನು ಸೃಷ್ಟಿಸಿರುವವರಿಗಾಗಿ ನಿನಗೆ ಹಂಬಲಿಕೆ ಇರುವುದು.” (ಯೋಬ 14:14, 15, NW) ಹೌದು, ನಂಬಿಗಸ್ತರು ಪುನರುತ್ಥಾನದಲ್ಲಿ ಪುನಃ ಜೀವಿತರಾಗುವ ಸಮಯಕ್ಕಾಗಿ ಯೆಹೋವನು ತವಕದಿಂದ ಎದುರುನೋಡುತ್ತಾನೆ. ನಾವು ಅಪರಿಪೂರ್ಣರಾಗಿರುವುದಾದರೂ ಆತನು ನಮಗೆ ತೋರಿಸುವ ಪ್ರೀತಿ ಮತ್ತು ಅಪಾತ್ರ ಕೃಪೆಯ ಕುರಿತು ಧ್ಯಾನಿಸುವಾಗ, ಇದು ಖಂಡಿತವಾಗಿಯೂ ನಮ್ಮನ್ನು ಆತನ ಹೆಚ್ಚು ಸಮೀಪಕ್ಕೆ ತರುತ್ತದೆ!​—⁠ರೋಮಾಪುರ 5:21; ಯಾಕೋಬ 4:⁠8.

18 ದೇವದೂತನಿಂದ ‘ಅತಿಪ್ರಿಯನು’ ಎಂದು ವರ್ಣಿಸಲ್ಪಟ್ಟಿರುವ ಪ್ರವಾದಿಯಾದ ದಾನಿಯೇಲನು ದೀರ್ಘಕಾಲ ನಂಬಿಗಸ್ತ ಸೇವಕನಾಗಿ ಬಾಳಿದನು. (ದಾನಿಯೇಲ 10:11, 19) ಯೆಹೋವನ ಕಡೆಗೆ ದಾನಿಯೇಲನಿಗಿದ್ದ ಸಮಗ್ರತೆಯು, ಸಾ.ಶ.ಪೂ. 617ರಲ್ಲಿ ಅವನು ಗಡೀಪಾರು ಮಾಡಲ್ಪಟ್ಟ ಸಮಯದಿಂದ, ಪಾರಸಿಯ ರಾಜನಾದ ಕೋರೆಷನ ಆಳಿಕೆಯ ಮೂರನೆಯ ವರುಷದಲ್ಲಿ, ಅಂದರೆ ಸಾ.ಶ.ಪೂ. 536ರಲ್ಲಿ ಅವನು ಒಂದು ದರ್ಶನವನ್ನು ಪಡೆದುಕೊಂಡ ಸ್ವಲ್ಪ ಕಾಲಾನಂತರ ಅವನ ಮರಣದ ತನಕವೂ ಅಚಲವಾಗಿಯೇ ಉಳಿಯಿತು. (ದಾನಿಯೇಲ 1:1; 10:1) ಕೋರೆಷನ ಆಳಿಕೆಯ ಆ ಮೂರನೆಯ ವರ್ಷದ ಯಾವುದೋ ಒಂದು ಸಮಯದಲ್ಲಿ ದಾನಿಯೇಲನು, ಲೋಕ ಶಕ್ತಿಗಳ ಮುನ್ನಡೆ ಮತ್ತು ಬರಲಿರುವ ಮಹಾ ಸಂಕಟದಲ್ಲಿ ಅವುಗಳು ಕೊನೆಗೊಳ್ಳುವುದರ ಕುರಿತಾದ ಒಂದು ದರ್ಶನವನ್ನು ಪಡೆದುಕೊಂಡನು. (ದಾನಿಯೇಲ 11:1-12:13) ಆಗ ದಾನಿಯೇಲನು ಆ ದರ್ಶನವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಸಮರ್ಥನಾಗಿದ್ದರಿಂದ, ಅದನ್ನು ಕೊಟ್ಟಂಥ ದೇವದೂತ ಸಂದೇಶವಾಹಕನಿಗೆ “ಎನ್ನೊಡೆಯನೇ, ಈ ಕಾರ್ಯಗಳ ಪರಿಣಾಮವೇನು”? ಎಂದು ಕೇಳಿದನು. ಇದಕ್ಕೆ ಉತ್ತರವಾಗಿ ಆ ದೇವದೂತನು, ಯಾವಾಗ “ಒಳನೋಟವಿರುವವರು ಇದನ್ನು ಅರ್ಥಮಾಡಿಕೊಳ್ಳುವರೋ” (NW) ಆ “ಅಂತ್ಯಕಾಲದ” ಕಡೆಗೆ ಗಮನವನ್ನು ಸೆಳೆದನು. ಹಾಗಾದರೆ ದಾನಿಯೇಲನಿಗೆ ಯಾವ ಪ್ರತೀಕ್ಷೆಯಿತ್ತು? ಆ ದೇವದೂತನು ಹೇಳಿದ್ದು: “ನೀನು ವಿಶ್ರಮಿಸಿಕೊಳ್ಳುವೆ ಮತ್ತು ದಿನಗಳ ಅಂತ್ಯದಲ್ಲಿ ನಿನಗೆ ಪಾಲಾಗಿ ಇಟ್ಟಿರುವ ಬಾಧ್ಯತೆಯನ್ನು ಸ್ವೀಕರಿಸಲು ಎದ್ದುಬರುವೆ.” (ದಾನಿಯೇಲ 12:8-10, 13, NIBV) ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ ‘ನೀತಿವಂತರು ಜೀವಿತರಾಗಿ ಎದ್ದುಬರುವಾಗ’ ದಾನಿಯೇಲನು ಹಿಂದಿರುಗುವನು.​—⁠ಲೂಕ 14:⁠14.

19 ನಾವು ಅಂತ್ಯಕಾಲದ ಅಂತಿಮ ಭಾಗದಲ್ಲಿ ಮತ್ತು ನಾವು ಮೊದಲು ವಿಶ್ವಾಸಿಗಳಾದಾಗ ಇದ್ದುದಕ್ಕಿಂತಲೂ ಈಗ ಕ್ರಿಸ್ತನ ಸಾವಿರ ವರ್ಷದಾಳಿಕೆಯ ಆರಂಭವು ಇನ್ನಷ್ಟು ಸನ್ನಿಹಿತವಾಗಿರುವ ಕಾಲದಲ್ಲಿ ಜೀವಿಸುತ್ತಿದ್ದೇವೆ. ಆದುದರಿಂದ, ‘ಅಬ್ರಹಾಮ, ಯೋಬ, ದಾನಿಯೇಲ ಮತ್ತು ಇತರ ನಂಬಿಗಸ್ತ ಸ್ತ್ರೀಪುರುಷರೊಂದಿಗೆ ಸಹವಾಸಮಾಡಲಿಕ್ಕಾಗಿ ನಾನು ನೂತನ ಲೋಕದಲ್ಲಿ ಇರುವೆನೊ?’ ಎಂದು ಸ್ವತಃ ಕೇಳಿಕೊಳ್ಳಬೇಕಾಗಿದೆ. ನಾವು ಅಲ್ಲಿರಸಾಧ್ಯವಿದೆ, ಆದರೆ ನಾವು ಯೆಹೋವನಿಗೆ ಸಮೀಪವಾಗಿ ಉಳಿಯಬೇಕು ಮತ್ತು ಆತನ ಆಜ್ಞೆಗಳಿಗೆ ವಿಧೇಯರಾಗಬೇಕು. ನಮ್ಮ ಮುಂದಿನ ಲೇಖನದಲ್ಲಿ, ಯಾರು ಪುನರುತ್ಥಾನಗೊಳಿಸಲ್ಪಡುವರು ಎಂಬುದನ್ನು ನಾವು ಗುರುತಿಸಸಾಧ್ಯವಾಗುವಂತೆ ಪುನರುತ್ಥಾನದ ನಿರೀಕ್ಷೆಯನ್ನು ಇನ್ನೂ ಹೆಚ್ಚು ಸವಿವರವಾಗಿ ಪುನರ್ವಿಮರ್ಶಿಸುವೆವು.

ನಿಮಗೆ ನೆನಪಿದೆಯೊ?

• ಪೌಲನು ಪುನರುತ್ಥಾನದಲ್ಲಿನ ತನ್ನ ನಿರೀಕ್ಷೆಯನ್ನು ತಿಳಿಸಿದಾಗ ಅವನಿಗೆ ಯಾವ ಪ್ರತಿಕ್ರಿಯೆ ಸಿಕ್ಕಿತು?

• ಪುನರುತ್ಥಾನದ ನಿರೀಕ್ಷೆಯು ಏಕೆ ಸತ್ಯ ಕ್ರೈಸ್ತರನ್ನು ಸುಳ್ಳು ಕ್ರೈಸ್ತರಿಂದ ಭಿನ್ನವಾಗಿರಿಸುತ್ತದೆ?

• ಅಬ್ರಹಾಮ, ಯೋಬ ಮತ್ತು ದಾನಿಯೇಲರಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತು ಎಂಬುದು ನಮಗೆ ಹೇಗೆ ಗೊತ್ತು?

[ಅಧ್ಯಯನ ಪ್ರಶ್ನೆಗಳು]

1. ಸನ್ಹೆದ್ರಿನ್‌ನ ಮುಂದೆ ಪುನರುತ್ಥಾನದ ವಿಷಯವು ಹೇಗೆ ಒಂದು ವಿವಾದಾಂಶವಾಗಿ ಪರಿಣಮಿಸಿತು?

2. ಪುನರುತ್ಥಾನದಲ್ಲಿನ ತನ್ನ ನಂಬಿಕೆಯನ್ನು ಸಮರ್ಥಿಸಲು ಪೌಲನು ಏಕೆ ಸಿದ್ಧನಾಗಿದ್ದನು?

3, 4. ಯಾವ ರೀತಿಯಲ್ಲಿ ಪೌಲನು ಪುನರುತ್ಥಾನದ ವಿಷಯದಲ್ಲಿ ಒಬ್ಬ ನಿಷ್ಠಾವಂತ ಬೆಂಬಲಿಗನಾಗಿ ಕಂಡುಬಂದನು, ಮತ್ತು ಅವನ ಮಾದರಿಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು?

5, 6. (ಎ) ಅಪೊಸ್ತಲರು ಪುನರುತ್ಥಾನದ ಕುರಿತು ಬಹಿರಂಗವಾಗಿ ಮಾತಾಡಿದಾಗ ಅದು ಯಾವ ಪ್ರತಿಕ್ರಿಯೆಯನ್ನು ಬರಮಾಡಿತು? (ಬಿ) ಪುನರುತ್ಥಾನದಲ್ಲಿನ ನಮ್ಮ ನಿರೀಕ್ಷೆಯನ್ನು ವ್ಯಕ್ತಪಡಿಸುವಾಗ ನಮಗೆ ಯಾವುದು ಅತ್ಯಾವಶ್ಯಕವಾಗಿದೆ?

7, 8. (ಎ) ಪ್ರಥಮ ಶತಮಾನದ ಕೊರಿಂಥ ಸಭೆಗೆ ಬರೆಯಲ್ಪಟ್ಟ ಪತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ನಂಬಿಕೆಯು ಹೇಗೆ ಹುರುಳಿಲ್ಲದ್ದಾಗಸಾಧ್ಯವಿದೆ? (ಬಿ) ಪುನರುತ್ಥಾನದ ಕುರಿತಾದ ಸರಿಯಾದ ತಿಳಿವಳಿಕೆಯು ಹೇಗೆ ಸತ್ಯ ಕ್ರೈಸ್ತರನ್ನು ಭಿನ್ನವಾಗಿರಿಸುತ್ತದೆ?

9, 10. ಬೈಬಲಿಗನುಸಾರ ಪುನರುತ್ಥಾನ ಎಂಬ ಪದದ ಅರ್ಥವೇನು?

11. ದೇವರ ಅಭಿಷಿಕ್ತ ಸೇವಕರಿಗೆ ಪುನರುತ್ಥಾನದ ಯಾವ ಪ್ರತೀಕ್ಷೆಗಳು ನೀಡಲ್ಪಟ್ಟಿವೆ?

12, 13. ಪುನರುತ್ಥಾನದಲ್ಲಿ ನಂಬಿಕೆಯಿಡಲು ಅಬ್ರಹಾಮನಿಗೆ ಯಾವ ಬಲವಾದ ಆಧಾರವಿತ್ತು?

14. (ಎ) ಇಬ್ರಿಯ 11:​9, 10ಕ್ಕನುಸಾರ, ಅಬ್ರಹಾಮನು ಯಾವುದಕ್ಕಾಗಿ ಎದುರುನೋಡುತ್ತಿದ್ದನು? (ಬಿ) ನೂತನ ಲೋಕದಲ್ಲಿ ರಾಜ್ಯದ ಆಶೀರ್ವಾದಗಳನ್ನು ಪಡೆದುಕೊಳ್ಳಬೇಕಾದರೆ ಅಬ್ರಹಾಮನಿಗೆ ಏನು ಸಂಭವಿಸಬೇಕಾಗಿದೆ? (ಸಿ) ನಾವು ಹೇಗೆ ರಾಜ್ಯದ ಆಶೀರ್ವಾದಗಳನ್ನು ಪಡೆದುಕೊಳ್ಳಸಾಧ್ಯವಿದೆ?

15, 16. (ಎ) ಬೈಬಲಿನಲ್ಲಿರುವ ಪ್ರಥಮ ಪ್ರವಾದನೆಯು ಪುನರುತ್ಥಾನದಲ್ಲಿನ ನಮ್ಮ ನಿರೀಕ್ಷೆಗೆ ಹೇಗೆ ಆಧಾರವನ್ನು ಒದಗಿಸುತ್ತದೆ? (ಬಿ) ಪುನರುತ್ಥಾನದಲ್ಲಿನ ನಿರೀಕ್ಷೆಯು ನಮ್ಮನ್ನು ಯೆಹೋವನಿಗೆ ಹೆಚ್ಚು ಸಮೀಪವಾಗುವಂತೆ ಹೇಗೆ ಮಾಡಸಾಧ್ಯವಿದೆ?

17. (ಎ) ಯೋಬನು ಯಾವ ನಿರೀಕ್ಷೆಯನ್ನು ವ್ಯಕ್ತಪಡಿಸಿದನು? (ಬಿ) ಯೋಬ 14:15 ಯೆಹೋವನ ಕುರಿತು ಏನನ್ನು ಪ್ರಕಟಪಡಿಸುತ್ತದೆ, ಮತ್ತು ಇದು ನಿಮ್ಮಲ್ಲಿ ಯಾವ ಭಾವನೆಯನ್ನು ಹುಟ್ಟಿಸುತ್ತದೆ?

18, 19. (ಎ) ಪುನಃ ಜೀವಿಸುವ ವಿಷಯದಲ್ಲಿ ದಾನಿಯೇಲನಿಗೆ ಯಾವ ಪ್ರತೀಕ್ಷೆಯಿದೆ? (ಬಿ) ಮುಂದಿನ ಲೇಖನದಲ್ಲಿ ನಾವು ಏನನ್ನು ಪುನರ್ವಿಮರ್ಶಿಸುವೆವು?

[ಪುಟ 8ರಲ್ಲಿರುವ ಚಿತ್ರ]

ದೇಶಾಧಿಪತಿಯಾದ ಫೇಲಿಕ್ಸನ ಮುಂದೆ ಹಾಜರಾದ ಪೌಲನು ಪುನರುತ್ಥಾನದ ನಿರೀಕ್ಷೆಯನ್ನು ನಿಶ್ಚಿತಾಭಿಪ್ರಾಯದಿಂದ ವ್ಯಕ್ತಪಡಿಸಿದನು

[ಪುಟ 10ರಲ್ಲಿರುವ ಚಿತ್ರ]

ಅಬ್ರಹಾಮನಿಗೆ ಪುನರುತ್ಥಾನದಲ್ಲಿ ಏಕೆ ನಂಬಿಕೆಯಿತ್ತು?

[ಪುಟ 12ರಲ್ಲಿರುವ ಚಿತ್ರ]

ಯೋಬನು ಪುನರುತ್ಥಾನದ ನಿರೀಕ್ಷೆಯಿಂದ ಸಾಂತ್ವನವನ್ನು ಪಡೆದುಕೊಂಡನು

[ಪುಟ 12ರಲ್ಲಿರುವ ಚಿತ್ರ]

ನೀತಿವಂತರ ಪುನರುತ್ಥಾನವಾಗುವಾಗ ದಾನಿಯೇಲನು ಹಿಂದಿರುಗುವನು