ಪ್ರತಿ ದಿನವೂ ಯೋಗ್ಯವಾಗಿ ಲೆಕ್ಕಿಸಲ್ಪಡುವಂತೆ ಮಾಡುವುದು ಹೇಗೆ?
ಪ್ರತಿ ದಿನವೂ ಯೋಗ್ಯವಾಗಿ ಲೆಕ್ಕಿಸಲ್ಪಡುವಂತೆ ಮಾಡುವುದು ಹೇಗೆ?
“ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿವಸಗಳನ್ನು ಲೆಕ್ಕಿಸುವುದಕ್ಕೆ ನಮಗೆ ಕಲಿಸು.” (ಕೀರ್ತನೆ 90:12, NIBV) ಇದು ಬೈಬಲ್ ಲೇಖಕನಾದ ಮೋಶೆಯ ಕಳಕಳಿಯ ಪ್ರಾರ್ಥನೆಯಾಗಿತ್ತು. ನಿರ್ದಿಷ್ಟವಾಗಿ ಅವನು ಏನನ್ನು ಬೇಡಿಕೊಳ್ಳುತ್ತಿದ್ದನು? ನಾವು ಸಹ ತದ್ರೀತಿಯ ಭಯಭಕ್ತಿಯಿಂದ ಕೂಡಿದ ಬೇಡಿಕೆಯನ್ನು ಮಾಡಬೇಕೊ?
ಹತ್ತನೆಯ ವಚನದಲ್ಲಿ ಮೋಶೆಯು ಮಾನವ ಆಯುಷ್ಯದ ಅಲ್ಪಾವಧಿಯ ಕುರಿತು ಪ್ರಲಾಪಿಸಿದನು. ಇನ್ನೊಂದು ಸಂದರ್ಭದಲ್ಲಿ, “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು” ಎಂದು ಹೇಳಿದಂಥ ಯೋಬನ ಹೇಳಿಕೆಯನ್ನು ಅವನು ದಾಖಲಿಸಿದನು. (ಯೋಬ 14:1) ಅಪರಿಪೂರ್ಣ ಮಾನವ ಜೀವಿತದ ನಶ್ವರ ಸ್ಥಿತಿಯನ್ನು ಮೋಶೆಯು ತೀಕ್ಷ್ಣವಾಗಿ ಅರಿತಿದ್ದನು ಎಂಬುದು ಸ್ಪಷ್ಟವಾಗುತ್ತದೆ. ಆದುದರಿಂದ, ಜೀವನದ ಪ್ರತಿಯೊಂದು ದಿನವನ್ನು ಅವನು ಒಂದು ಅಮೂಲ್ಯ ಉಡುಗೊರೆಯಾಗಿ ಪರಿಗಣಿಸಿದನು. ಮೋಶೆಯು ದೇವರಿಗೆ ಈ ವಿನಂತಿಯನ್ನು ಮಾಡಿಕೊಳ್ಳುವ ಮೂಲಕ, ತನ್ನ ಉಳಿದ ದಿನಗಳನ್ನು ವಿವೇಕಯುತವಾಗಿ, ಅಂದರೆ ತನ್ನ ಸೃಷ್ಟಿಕರ್ತನನ್ನು ಸಂತೋಷಪಡಿಸುವಂಥ ರೀತಿಯಲ್ಲಿ ಕಳೆಯುವ ತನ್ನ ಬಯಕೆಯನ್ನು ವ್ಯಕ್ತಪಡಿಸಿದನು. ನಾವು ಸಹ ನಮ್ಮ ದಿನಗಳನ್ನು ಅರ್ಥಭರಿತವಾಗಿ ಕಳೆಯಲು ಪ್ರಯತ್ನಿಸಬಾರದೊ? ಈಗ ನಾವು ದೇವರ ಅನುಗ್ರಹವನ್ನು ಬಯಸುವುದಾದರೆ, ಇದೇ ನಮ್ಮ ದೃಢನಿರ್ಧಾರವಾಗಿರುವುದು.
ಇನ್ನೊಂದು ಅಂಶವು ಸಹ ಮೋಶೆ ಮತ್ತು ಯೋಬರನ್ನು ಪ್ರಚೋದಿಸಿತು, ಮತ್ತು ಅದೇ ಅಂಶವು ನಮ್ಮನ್ನೂ ಪ್ರಚೋದಿಸಬೇಕು. ಅದೇನೆಂದರೆ, ದೇವಭಕ್ತಿಯಿದ್ದ ಈ ಇಬ್ಬರೂ ಪುರುಷರು ಒಂದು ಭಾವೀ ಪ್ರತಿಫಲಕ್ಕಾಗಿ ಎದುರುನೋಡಿದರು. ಅದು ಭೂಮಿಯ ಮೇಲೆ ಹೆಚ್ಚು ಉತ್ತಮ ಪರಿಸ್ಥಿತಿಗಳಲ್ಲಿ ಜೀವಿಸುವುದೇ ಆಗಿತ್ತು. (ಯೋಬ 14:14, 15; ಇಬ್ರಿಯ 11:26) ಆ ಸಮಯದಲ್ಲಿ, ಯಾರ ಸತ್ಕಾರ್ಯಗಳೂ ಮರಣದ ಕಾರಣದಿಂದ ಕೊನೆಗೊಳಿಸಲ್ಪಡುವುದಿಲ್ಲ. ನಂಬಿಗಸ್ತ ಜನರು ಭೂಪರದೈಸಿನಲ್ಲಿ ಸದಾಕಾಲ ಜೀವಿಸಬೇಕೆಂಬುದೇ ನಮ್ಮ ಸೃಷ್ಟಿಕರ್ತನ ಉದ್ದೇಶವಾಗಿದೆ. (ಯೆಶಾಯ 65:21-24; ಪ್ರಕಟನೆ 21:3, 4) ನೀವು ‘ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಿಮ್ಮ ದಿವಸಗಳನ್ನು ಲೆಕ್ಕಿಸುವಲ್ಲಿ’ ನಿಮಗೂ ಇದೇ ಪ್ರತೀಕ್ಷೆಯಿರಸಾಧ್ಯವಿದೆ.