ವಿರೋಧದ ಎದುರಿನಲ್ಲಿ ಧೈರ್ಯ
ವಿರೋಧದ ಎದುರಿನಲ್ಲಿ ಧೈರ್ಯ
ಮತಾಂಧರ ಒಂದು ಗುಂಪು, ಅಪೊಸ್ತಲ ಪೌಲನ ಇಬ್ಬರು ಸಂಗಡಿಗರಾಗಿದ್ದ ಗಾಯ ಮತ್ತು ಅರಿಸ್ತಾರ್ಕರು ಎಫೆಸದ ನಾಟಕಶಾಲೆಯೊಳಗೆ ಪ್ರವೇಶಿಸುವಂತೆ ಒತ್ತಾಯಪಡಿಸಿತು. ಅಲ್ಲಿ, ಆ ಕೋಪೋದ್ರಿಕ್ತ ಗುಂಪು ಸುಮಾರು ಎರಡು ತಾಸುಗಳ ವರೆಗೆ “ಎಫೆಸದವರ ಅರ್ತೆಮೀದೇವಿ ಮಹಾದೇವಿ!” ಎಂದು ಆರ್ಭಟಿಸಿತು. (ಅ. ಕೃತ್ಯಗಳು 19:28, 29, 34) ಪೌಲನ ಸಂಗಡಿಗರು ಈ ವಿರೋಧದ ಎದುರಿನಲ್ಲಿ ದೃಢಚಿತ್ತರಾಗಿ ಉಳಿದರೋ? ಮೊದಲಾಗಿ ಯಾವುದು ಅವರನ್ನು ಈ ಸನ್ನಿವೇಶಕ್ಕೆ ನಡೆಸಿತ್ತು?
ಸುಮಾರು ಮೂರು ವರ್ಷಗಳ ವರೆಗೆ ಪೌಲನು ಎಫೆಸ ಪಟ್ಟಣದಲ್ಲಿ ಯಶಸ್ವಿಕರವಾಗಿ ಸುವಾರ್ತೆಯನ್ನು ಸಾರಿದ್ದನು. ಇದರ ಫಲಿತಾಂಶವಾಗಿ, ಎಫೆಸದವರಲ್ಲಿ ಅನೇಕರು ವಿಗ್ರಹಾರಾಧನೆಯನ್ನು ನಿಲ್ಲಿಸಿಬಿಟ್ಟಿದ್ದರು. (ಅ. ಕೃತ್ಯಗಳು 19:26; 20:31) ಎಫೆಸದ ವಿಶಿಷ್ಟ ಮೂರ್ತಿಯು, ಸಂತಾನೋತ್ಪತ್ತಿಗೆ ಸಹಾಯಕಳಾದ ದೇವಿಯಾಗಿದ್ದ ಅರ್ತೆಮೀಯ ಚಿಕ್ಕ ಬೆಳ್ಳಿಯ ಗುಡಿಯಾಗಿತ್ತು. ಈ ದೇವಿಯ ದೊಡ್ಡ ಭವ್ಯ ದೇವಾಲಯದಿಂದ ಇಡೀ ಪಟ್ಟಣವನ್ನೇ ನೋಡಸಾಧ್ಯವಿತ್ತು. ಈ ದೇವಾಲಯದ ಚಿಕ್ಕ ಚಿಕ್ಕ ಮೂರ್ತಿಗಳನ್ನು ತಾಯಿತಿಗಳಂತೆ ಧರಿಸಲಾಗುತ್ತಿತ್ತು ಅಥವಾ ಮನೆಗಳಲ್ಲಿ ಇಡಲಾಗುತ್ತಿತ್ತು. ಕ್ರೈಸ್ತರು ಈ ಮೂರ್ತಿಗಳನ್ನು ಖರೀದಿಸುತ್ತಿರಲಿಲ್ಲ ಎಂಬುದಂತೂ ನಿಶ್ಚಯ.—1 ಯೋಹಾನ 5:21.
ಬೆಳ್ಳಿಯ ಅಕ್ಕಸಾಲಿಗರಲ್ಲಿ ಒಬ್ಬನಾಗಿದ್ದ ದೇಮೇತ್ರಿಯನೆಂಬವನು, ಪೌಲನ ಶುಶ್ರೂಷೆಯಿಂದ ತಮ್ಮ ಲಾಭದಾಯಕ ವ್ಯಾಪಾರಕ್ಕೆ ಬೆದರಿಕೆ ಇದೆ ಎಂದು ನೆನಸಿದನು. ಅವನು ಅರ್ಧಸತ್ಯಗಳನ್ನು ಹಾಗೂ ಇಲ್ಲದುದನ್ನು ಸೇರಿಸಿ ಹೇಳುವ ಮೂಲಕ, ಏಷಿಯಾ ಮೈನರ್‌ನಾದ್ಯಂತ ಇರುವ ಜನರು ಒಂದು ದಿನ ಅರ್ತೆಮೀದೇವಿಯ ಆರಾಧನೆಯನ್ನೇ ನಿಲ್ಲಿಸಿಬಿಡಬಹುದು ಎಂದು ತನ್ನ ಜೊತೆ ಅಕ್ಕಸಾಲಿಗರನ್ನು ಒಡಂಬಡಿಸಿದನು. ಕುಪಿತರಾದ ಅಕ್ಕಸಾಲಿಗರು ಅರ್ತೆಮೀದೇವಿಯ ಸ್ತುತಿಮಾತುಗಳನ್ನು ಗಟ್ಟಿಯಾಗಿ ಕೂಗಿಹೇಳಲು ಆರಂಭಿಸಿದಾಗ, ದೊಂಬಿ ಗಲಭೆಯುಂಟಾಯಿತು ಮತ್ತು ಊರೆಲ್ಲ ಗಲಿಬಿಲಿಗೊಳಗಾಯಿತು.—ಅ. ಕೃತ್ಯಗಳು 19:24-29.
ಸುಮಾರು 25,000 ಪ್ರೇಕ್ಷಕರು ಕುಳಿತುಕೊಳ್ಳಸಾಧ್ಯವಿದ್ದ ಆ ನಾಟಕಶಾಲೆಯೊಳಗೆ ಸಾವಿರಾರು ಮಂದಿ ಕೂಡಿಬಂದರು. ಹತೋಟಿ ಮೀರಿದ್ದ ಜನರ ಗುಂಪಿಗೆ ಸಂಬೋಧಿಸಿ ಮಾತಾಡಲು ಪೌಲನು ಮುಂದೆಬಂದನಾದರೂ, ಸ್ನೇಹಪರ ಅಧಿಕಾರಿಗಳು ಹಾಗೆ ಮಾಡದಂತೆ ಅವನ ಮನವೊಪ್ಪಿಸಿದರು. ಕಡೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸುವುದರಲ್ಲಿ ಯಶಸ್ವಿಯಾದನು, ಮತ್ತು ಗಾಯ ಹಾಗೂ ಅರಿಸ್ತಾರ್ಕರು ಯಾವುದೇ ಹಾನಿಯಿಲ್ಲದೆ ಪಾರಾದರು.—ಅ. ಕೃತ್ಯಗಳು 19:35-41.
ಇಂದು ದೇವಜನರು ತಮ್ಮ ಶುಶ್ರೂಷೆಯನ್ನು ಮುಂದುವರಿಸುವಾಗ ವಿರೋಧಿಗಳನ್ನು ಮತ್ತು ದೊಂಬಿಗಲಭೆಗಳನ್ನು ಸಹ ಎದುರಿಸಬೇಕಾಗಬಹುದು. ಅನೇಕವೇಳೆ ಅವರು ವಿಗ್ರಹಾರಾಧನೆ, ಅನೈತಿಕತೆ ಮತ್ತು ಪಾತಕದ ವಾತಾವರಣವು ವ್ಯಾಪಕವಾಗಿ ರಾರಾಜಿಸುತ್ತಿರುವಂಥ ನಗರಗಳಲ್ಲಿ ಸುವಾರ್ತೆಯನ್ನು ಸಾರುತ್ತಾರೆ. ಆದರೂ, ಎಫೆಸ ಪಟ್ಟಣದಲ್ಲಿ ‘ಸಭೆಯಲ್ಲಿಯೂ ಮನೆಮನೆಯಲ್ಲಿಯೂ ಉಪದೇಶಿಸಲು ಹಿಂಜರಿಯದಿದ್ದಂಥ’ ಅಪೊಸ್ತಲ ಪೌಲನನ್ನು ಅವರು ಧೈರ್ಯದಿಂದ ಅನುಕರಿಸುತ್ತಾರೆ. (ಅ. ಕೃತ್ಯಗಳು 20:20, 21) ಅದೇ ಸಮಯದಲ್ಲಿ ಯೆಹೋವನ ‘ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಗುತ್ತಾ’ ಬರುವುದನ್ನು ನೋಡುವಾಗ ಅವರು ಸಂತೋಷಪಡುತ್ತಾರೆ ಸಹ.—ಅ. ಕೃತ್ಯಗಳು 19:20.
[ಪುಟ 30ರಲ್ಲಿರುವ ಚಿತ್ರ]
ಎಫೆಸದಲ್ಲಿರುವ ನಾಟಕಶಾಲೆಯ ಅವಶೇಷಗಳು