ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶೇಷವಾದ ವಿಧದಲ್ಲಿ ವಿಜಯಿ

ವಿಶೇಷವಾದ ವಿಧದಲ್ಲಿ ವಿಜಯಿ

ವಿಶೇಷವಾದ ವಿಧದಲ್ಲಿ ವಿಜಯಿ

ಕೆಲಸದ ಸ್ಥಳದಲ್ಲಿ, ಶಾಲೆಯಲ್ಲಿ, ಕುಟುಂಬದಲ್ಲಿ, ಅಥವಾ ಸರಕಾರದಿಂದ ಒಡ್ಡಲ್ಪಟ್ಟಿರುವ ನಿರ್ಬಂಧಗಳ ಕಾರಣದಿಂದ ನೀವು ನಿಮ್ಮ ನಂಬಿಕೆಯ ವಿಷಯದಲ್ಲಿ ವಿರೋಧವನ್ನು ಎದುರಿಸುತ್ತೀರೊ? ಹಾಗಿರುವಲ್ಲಿ ಎದೆಗುಂದಬೇಡಿ. ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಇದೇ ರೀತಿಯ ಪರೀಕ್ಷೆಗಳನ್ನು ಎದುರಿಸಿದ್ದಾರೆ, ಆದರೆ ಅವುಗಳಲ್ಲಿ ಜಯಶಾಲಿಗಳಾಗಿ ಪರಿಣಮಿಸಿದ್ದಾರೆ. ಎರ್ನಾ ಲೂಡೊಲ್ಫ್‌ ಅವರ ಉದಾಹರಣೆಯನ್ನು ಪರಿಗಣಿಸಿರಿ.

ಇಸವಿ 1908ರಲ್ಲಿ, ಜರ್ಮನಿಯ ಲೂಬೆಕ್‌ನಲ್ಲಿ ಎರ್ನಾ ಜನಿಸಿದರು. ಅವರ ಕುಟುಂಬದಲ್ಲಿ ಯೆಹೋವನ ಸೇವೆಮಾಡುತ್ತಿದ್ದ ಏಕಮಾತ್ರ ಸದಸ್ಯರು ಅವರಾಗಿದ್ದರು. 1933ರಲ್ಲಿ ಹಿಟ್ಲರನು ಅಧಿಕಾರಕ್ಕೆ ಬಂದಾಗ, ಯೆಹೋವನ ಸಾಕ್ಷಿಗಳು ಅನೇಕ ಪರೀಕ್ಷೆಗಳನ್ನು ಎದುರಿಸಲಾರಂಭಿಸಿದರು. ಎರ್ನಾರು ಹಿಟ್ಲರ್‌ಗೆ ಪ್ರಣಾಮ ಸಲ್ಲಿಸಲು ನಿರಾಕರಿಸಿದ್ದಕ್ಕಾಗಿ, ಕೆಲಸದ ಸ್ಥಳದಲ್ಲಿ ಅವರ ಸಹಕರ್ಮಿಗಳು ಅವರನ್ನು ಎಲ್ಲರ ಮುಂದೆ ಮೂದಲಿಸುತ್ತಿದ್ದರು, ಮತ್ತು ಇದೇ ಕಾರಣಕ್ಕಾಗಿ ನಾಝಿಗಳು ಎರ್ನಾರನ್ನು ಬಂಧಿಸಿದರು. ಅವರು ಬೇರೆ ಬೇರೆ ಸೆರೆಮನೆಗಳಲ್ಲಿ ಮತ್ತು ಹ್ಯಾಂಬರ್ಗ್‌-ಫೂಲ್ಸ್‌ಬೂಟಲ್‌, ಮೋರಿಂಗನ್‌, ಲೈಕ್‌ಟನ್‌ಬರ್ಗ್‌, ಹಾಗೂ ರಾವೆನ್ಸ್‌ಬ್ರೂಕ್‌ನಲ್ಲಿರುವ ಸೆರೆಶಿಬಿರಗಳಲ್ಲಿ ಎಂಟು ವರ್ಷಗಳನ್ನು ಕಳೆದರು. ಎರ್ನಾರು ರಾವೆನ್ಸ್‌ಬ್ರೂಕ್‌ನಲ್ಲಿದ್ದಾಗ ಒಂದು ಘಟನೆಯು ನಡೆಯಿತು, ಮತ್ತು ಇದು ಅವರು ವಿಜಯಿಯಾಗುವಂತೆ ನಡೆಸಿತು.

ಭಿನ್ನ ವ್ಯಕ್ತಿತ್ವದ ಹೌಸ್‌ಕೀಪರ್‌

ಪ್ರೊಫೆಸರ್‌ ಫ್ರೆಡ್ರಿಕ್‌ ಹೋಲ್ಟ್ಸ್‌ ಮತ್ತು ಅವರ ಪತ್ನಿಯಾದ ಆಲೇಸರು ಬರ್ಲಿನ್‌ನಲ್ಲಿ ವಾಸಿಸುತ್ತಿದ್ದರು. ಅವರು ನಾಝಿ ಪಕ್ಷದ ಸದಸ್ಯರಾಗಿರಲಿಲ್ಲ ಮತ್ತು ಅದರ ಸಿದ್ಧಾಂತಗಳನ್ನು ಬೆಂಬಲಿಸುವವರೂ ಆಗಿರಲಿಲ್ಲ. ಆದರೆ ಅವರು ಕೆಲವೊಂದು ಸೆರೆಶಿಬಿರಗಳ ನಿವಾಸಿಗಳ ಜವಾಬ್ದಾರಿ ಹೊತ್ತಿದ್ದ ಸೀನಿಯರ್‌ ಎಸ್‌.ಎಸ್‌. ಅಧಿಕಾರಿಯೊಬ್ಬರ ಸಂಬಂಧಿಕರಾಗಿದ್ದರು. ಆದುದರಿಂದ ಆ ಪ್ರೊಫೆಸರ್‌ ಮತ್ತು ಅವರ ಪತ್ನಿಯು ಒಬ್ಬ ಹೌಸ್‌ಕೀಪರ್‌ಗಾಗಿ (ಗೃಹಕೃತ್ಯ ನಡೆಸುವವಳು) ಹುಡುಕುತ್ತಿದ್ದಾಗ, ಒಬ್ಬ ಹೆಣ್ಣು ಸೆರೆವಾಸಿಯನ್ನು ಆಯ್ಕೆಮಾಡುವಂತೆ ಈ ಎಸ್‌.ಎಸ್‌. ಅಧಿಕಾರಿಯು ಅವರಿಗೆ ಅನುಮತಿ ನೀಡಿದನು. ಹೀಗೆ, 1943ರ ಮಾರ್ಚ್‌ ತಿಂಗಳಿನಲ್ಲಿ ಆಲೇಸ್‌ ಒಬ್ಬ ಹೌಸ್‌ಕೀಪರನ್ನು ಆಯ್ಕೆಮಾಡಲಿಕ್ಕಾಗಿ ರಾವೆನ್ಸ್‌ಬ್ರೂಕ್‌ಗೆ ಭೇಟಿ ನೀಡಿದಳು. ಅವಳು ಆಯ್ಕೆಮಾಡಿದ್ದು ಯಾರನ್ನು? ಎರ್ನಾ ಲೂಡೊಲ್ಫ್‌ರನ್ನೇ. ಎರ್ನಾ, ಹೋಲ್ಟ್ಸ್‌ ಕುಟುಂಬದೊಂದಿಗೆ ವಾಸಿಸಲು ಆರಂಭಿಸಿದರು ಮತ್ತು ಈ ಜನರು ಅವರನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಯುದ್ಧವು ಕೊನೆಗೊಂಡ ಬಳಿಕ ಎರ್ನಾರು ಅದೇ ಕುಟುಂಬದೊಂದಿಗೆ ಝಾಲ ನದಿಯ ಮೇಲಿದ್ದ ಹಾಲ ನಗರಕ್ಕೆ ಸ್ಥಳಾಂತರಿಸಿದರು. ಅಲ್ಲಿಯೂ ಎರ್ನಾ ವಿರೋಧವನ್ನು ಎದುರಿಸಿದರು; ಆದರೆ ಈ ಸಲ ಪೂರ್ವ ಜರ್ಮನಿಯಲ್ಲಿದ್ದ ಸಮಾಜವಾದಿ ಅಧಿಕಾರಿಗಳಿಂದ. 1957ರಲ್ಲಿ ಹೋಲ್ಟ್ಸ್‌ ಕುಟುಂಬವು ಪಶ್ಚಿಮ ಜರ್ಮನಿಗೆ ಸ್ಥಳಾಂತರಿಸುವ ಒತ್ತಡಕ್ಕೆ ಒಳಗಾಯಿತು ಮತ್ತು ಎರ್ನಾ ಸಹ ಅವರೊಂದಿಗೆ ಹೋದರು. ಕಟ್ಟಕಡೆಗೆ ಎರ್ನಾ ತಮ್ಮ ಧರ್ಮವನ್ನು ಪಾಲಿಸಲು ಸ್ವತಂತ್ರರಾಗಿದ್ದರು.

ವಿಶೇಷವಾದ ವಿಧದಲ್ಲಿ ಎರ್ನಾರು ವಿಜಯಿಯಾದದ್ದು ಹೇಗೆ? ಎರ್ನಾರ ಅತ್ಯುತ್ತಮ ನಡತೆಯಿಂದಾಗಿ ಮತ್ತು ಅವರು ಬೈಬಲ್‌ ಸಂದೇಶವನ್ನು ಜಾಣ್ಮೆಯಿಂದ ಸಾರಿದ್ದರ ಫಲಿತಾಂಶವಾಗಿ, ಆಲೇಸ್‌ ಹೋಲ್ಟ್ಸ್‌ ಮತ್ತು ಅವರ ಐವರು ಮಕ್ಕಳು ಯೆಹೋವನ ಸ್ನಾತ ಸಾಕ್ಷಿಗಳಾದರು. ಅಷ್ಟುಮಾತ್ರವಲ್ಲ, ಆಲೇಸರ ಮೊಮ್ಮಕ್ಕಳಲ್ಲಿ 11 ಮಂದಿ ಸಹ ಸಾಕ್ಷಿಗಳಾಗಿದ್ದಾರೆ. ಅವರಲ್ಲಿ ಇಬ್ಬರು ಈಗ ಜರ್ಮನಿಯ ಸೆಲ್ಟರ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡುತ್ತಿದ್ದಾರೆ. “ನಮ್ಮ ಕುಟುಂಬವು ಸತ್ಯದಲ್ಲಿರಲು ಬಹುತೇಕ ಕಾರಣ ಎರ್ನಾರ ಮಾದರಿಯೇ” ಎಂದು ಆಲೇಸರ ಹೆಣ್ಣುಮಕ್ಕಳಲ್ಲಿ ಒಬ್ಬಳಾದ ಸೂಸಾನ ಹೇಳುತ್ತಾಳೆ. ಎರ್ನಾರ ತಾಳ್ಮೆಯು ಹೇರಳವಾದ ಪ್ರತಿಫಲವನ್ನು ಪಡೆಯಿತು. ನಿಮ್ಮ ಸನ್ನಿವೇಶದ ಕುರಿತೇನು? ಕಷ್ಟಕರ ಪರಿಸ್ಥಿತಿಗಳ ಕೆಳಗೂ ನೀವು ತೋರಿಸುವ ನಂಬಿಗಸ್ತ ತಾಳ್ಮೆಯು ತದ್ರೀತಿಯ ಪ್ರತಿಫಲದಾಯಕ ಫಲಿತಾಂಶಗಳನ್ನು ತರಬಹುದು. ಹೌದು, ಒಳ್ಳೇ ನಡತೆ ಮತ್ತು ಕೌಶಲಭರಿತ ಸಾರುವಿಕೆಯು, ವಿಶೇಷವಾದ ವಿಧದಲ್ಲಿ ವಿಜಯಿಗಳಾಗಲು ನಿಮಗೆ ಸಹಾಯಮಾಡಬಹುದು. *

[ಪಾದಟಿಪ್ಪಣಿ]

^ ಪ್ಯಾರ. 6 ಈ ಲೇಖನವು ಪ್ರಕಟಿಸಲ್ಪಡಲು ಸಿದ್ಧಪಡಿಸಲ್ಪಡುತ್ತಿರುವಾಗ, ಎರ್ನಾ ಲೂಡೊಲ್ಫ್‌ ಅವರು ತೀರಿಕೊಂಡರು. ಅವರಿಗೆ 96 ವರ್ಷ ಪ್ರಾಯವಾಗಿತ್ತು ಮತ್ತು ಅವರು ಕೊನೆಯ ವರೆಗೂ ನಂಬಿಗಸ್ತರಾಗಿದ್ದರು.

[ಪುಟ 31ರಲ್ಲಿರುವ ಚಿತ್ರ]

ಹೋಲ್ಟ್ಸ್‌ ಕುಟುಂಬದ ಕೆಲವು ಸದಸ್ಯರೊಂದಿಗೆ ಎರ್ನಾ ಲೂಡೊಲ್ಫ್‌ (ಕುಳಿತಿರುವವರು)