ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಜ್ಞಾನದಿಂದ ಬಲಹೊಂದಿದ ಕುಟುಂಬಗಳು

ದೈವಜ್ಞಾನದಿಂದ ಬಲಹೊಂದಿದ ಕುಟುಂಬಗಳು

“ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ”

ದೈವಜ್ಞಾನದಿಂದ ಬಲಹೊಂದಿದ ಕುಟುಂಬಗಳು

“ಬರ್ಲಿನ್‌ ಗೋಡೆ.” ಆರ್ಜೆಂಟೀನದಲ್ಲಿರುವ ಒಂದು ವಿವಾಹಿತ ಜೋಡಿ, ತಮ್ಮ ಮನೆಯನ್ನು ಎರಡಾಗಿ ವಿಭಾಗಿಸುವ ಸಲುವಾಗಿ ತಾವೇ ಕಟ್ಟಿದ ಗೋಡೆಯನ್ನು ಹೀಗೆಂದು ಕರೆದರು! ಅವರ ಮಧ್ಯೆ ಹೊಂದಾಣಿಕೆ ಮಾಡಲು ಸಾಧ್ಯವಿಲ್ಲದ ಭಿನ್ನಾಭಿಪ್ರಾಯಗಳಿದ್ದವು; ಅವರು ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು.

ದುಃಖಕರವಾಗಿ, ಈ ಜೋಡಿಯ ಸನ್ನಿವೇಶವು ಅಸಾಮಾನ್ಯವೇನಲ್ಲ. ಅನೇಕ ಕುಟುಂಬಗಳು ಕಚ್ಚಾಟ, ದಾಂಪತ್ಯ ದ್ರೋಹ ಮತ್ತು ಕಡು ದ್ವೇಷಗಳಿಂದ ಪೀಡಿತವಾಗಿವೆ. ಇದು ವಿಷಾದನೀಯ ಸಂಗತಿ, ಏಕೆಂದರೆ ಕುಟುಂಬದ ಏರ್ಪಾಡನ್ನು ಸ್ವತಃ ದೇವರೇ ಸ್ಥಾಪಿಸಿದನು. (ಆದಿಕಾಂಡ 1:27, 28; 2:23, 24) ಈ ದೇವದತ್ತ ಉಡುಗೊರೆಯು ಅಥವಾ ಅನುಗ್ರಹವು, ಆಳವಾದ ಪ್ರೀತಿಯನ್ನು ತೋರಿಸಲು ಒಂದು ಸೂಕ್ತ ಪರಿಸರವಾಗಿದೆ. (ರೂತಳು 1:9) ಕುಟುಂಬದ ಸದಸ್ಯರು ಯೆಹೋವನು ತಮಗೆ ಕೊಟ್ಟಿರುವ ಜವಾಬ್ದಾರಿಗಳನ್ನು ನೆರವೇರಿಸುವ ಮೂಲಕ ಆತನಿಗೆ ಗೌರವವನ್ನು ತೋರಿಸಸಾಧ್ಯವಿದೆ ಮತ್ತು ಒಬ್ಬರು ಇನ್ನೊಬ್ಬರಿಗೆ ಆಶೀರ್ವಾದದ ಮೂಲವಾಗಿರಬಲ್ಲರು. *

ಕುಟುಂಬ ಏರ್ಪಾಡನ್ನು ಸ್ಥಾಪಿಸಿದವನು ದೇವರೇ ಆದ ಕಾರಣ, ಕುಟುಂಬಗಳು ಹೇಗೆ ಕಾರ್ಯವೆಸಗಬೇಕು ಎಂಬುದರ ಕುರಿತಾದ ನಮ್ಮ ತಿಳಿವಳಿಕೆಯನ್ನು ಆತನ ದೃಷ್ಟಿಕೋನವು ರೂಪಿಸುವಂತೆ ನಾವು ಬಿಡಬೇಕು. ಕುಟುಂಬಗಳು, ಮುಖ್ಯವಾಗಿ ಪಂಥಾಹ್ವಾನಗಳನ್ನು ಎದುರಿಸುವಾಗ, ಯಶಸ್ಸನ್ನು ಪಡೆಯಲು ಸಹಾಯಮಾಡುವ ಸಲುವಾಗಿ ವಿನ್ಯಾಸಿಸಲಾದ ಬಹಳಷ್ಟು ಪ್ರಾಯೋಗಿಕ ಸಲಹೆಗಳು ಬೈಬಲಿನಲ್ಲಿವೆ. ಗಂಡಂದಿರ ಪಾತ್ರದ ಬಗ್ಗೆ ಬೈಬಲ್‌ ಹೀಗೆ ಹೇಳುತ್ತದೆ: “ಪುರುಷರು . . . ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ.” ಗಂಡನು ಈ ಜವಾಬ್ದಾರಿಯನ್ನು ನೆರವೇರಿಸುವಾಗ, ಹೆಂಡತಿಯು “ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದು”ಕೊಳ್ಳುವುದನ್ನು ಆನಂದದಾಯಕವಾಗಿ ಕಾಣುತ್ತಾಳೆ.​—⁠ಎಫೆಸ 5:​25-29, 33.

ಹೆತ್ತವರ ಮತ್ತು ಅವರ ಮಕ್ಕಳ ನಡುವಣ ಸಂಬಂಧದ ಕುರಿತು ಅಪೊಸ್ತಲ ಪೌಲನು ಬರೆದದ್ದು: “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ, NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ.” (ಎಫೆಸ 6:4) ಹೀಗೆ ಮಾಡುವುದಾದರೆ, ಕುಟುಂಬದಲ್ಲಿ ಒಂದು ಪ್ರೀತಿಯ ವಾತಾವರಣವು ಉಂಟಾಗುತ್ತದೆ. ಇಂಥ ವಾತಾವರಣವು, ಮಕ್ಕಳು ತಮ್ಮ ಹೆತ್ತವರಿಗೆ ವಿಧೇಯರಾಗುವುದನ್ನು ಸುಲಭವನ್ನಾಗಿ ಮಾಡುತ್ತದೆ.​—⁠ಎಫೆಸ 6:⁠1.

ಈಗ ನಾವು ನೋಡಿದ ಅಂಶಗಳು, ಕುಟುಂಬ ಜೀವನಕ್ಕೆ ಬೈಬಲ್‌ ಉತ್ತಮ ಸಲಹೆಯನ್ನು ನೀಡುತ್ತದೆ ಎಂಬುದಕ್ಕೆ ರುಜುವಾತಾಗಿದೆ. ದೈವಿಕ ಮೂಲತತ್ತ್ವಗಳನ್ನು ಅನ್ವಯಿಸುವ ಮೂಲಕ ಅನೇಕರು ತಮ್ಮ ಮನೆಯಲ್ಲಿ ಆನಂದವನ್ನು ಅನುಭವಿಸುತ್ತಿದ್ದಾರೆ. ಉದಾಹರಣೆಗೆ, ಆರಂಭದಲ್ಲಿ ತಿಳಿಸಲ್ಪಟ್ಟಿರುವ ಆರ್ಜೆಂಟೀನದ ಜೋಡಿಯನ್ನು ಪರಿಗಣಿಸಿ. ಮೂರು ತಿಂಗಳುಗಳ ಕಾಲ ಅವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡಿದ ಅನಂತರ, ಅವರಿಬ್ಬರೂ ತಮ್ಮ ವೈವಾಹಿಕ ಜೀವನದಲ್ಲಿ ಬೈಬಲಿನ ವಿವೇಕಯುತ ಸಲಹೆಯನ್ನು ಅನ್ವಯಿಸಲಾರಂಭಿಸಿದರು. ಅವರು ತಮ್ಮ ಸಂವಾದವನ್ನು ಉತ್ತಮಗೊಳಿಸಲು, ಒಬ್ಬರು ಇನ್ನೊಬ್ಬರ ಅಗತ್ಯಗಳ ಕಡೆಗೆ ಅನುಕಂಪ ತೋರಿಸಲು ಮತ್ತು ಕ್ಷಮಿಸುವವರಾಗಿರಲು ಬಹಳಷ್ಟು ಪ್ರಯತ್ನಿಸಿದರು. (ಜ್ಞಾನೋಕ್ತಿ 15:22; 1 ಪೇತ್ರ 3:7; 4:8) ಅವರು ತಮ್ಮ ಕೋಪವನ್ನು ಹತೋಟಿಯಲ್ಲಿಡಲು ಮತ್ತು ವಿಷಯವು ತಮ್ಮ ಹತೋಟಿಯನ್ನು ಮೀರಿಹೋಗುವಾಗ ಸಹಾಯಕ್ಕಾಗಿ ದೇವರ ಕಡೆಗೆ ತಿರುಗಲು ಕಲಿತರು. (ಕೊಲೊಸ್ಸೆ 3:19) ಬೇಗನೆ, “ಬರ್ಲಿನ್‌ ಗೋಡೆ”ಯು ಕೆಡವಲ್ಪಟ್ಟಿತು!

ದೇವರು ಕುಟುಂಬವನ್ನು ಬಲಗೊಳಿಸಬಲ್ಲನು

ದೇವರ ವಿಷಯವಾದ ಜ್ಞಾನ ಮತ್ತು ಆತನ ಮಟ್ಟಗಳ ಅನ್ವಯವು ಒತ್ತಡಗಳನ್ನು ಎದುರಿಸಿ ನಿಲ್ಲಲು ಕುಟುಂಬವನ್ನು ಬಲಗೊಳಿಸುತ್ತದೆ. ಇದು ಪ್ರಾಮುಖ್ಯವಾಗಿದೆ, ಏಕೆಂದರೆ ನಮ್ಮ ದಿನಗಳಲ್ಲಿ ಕುಟುಂಬ ಏರ್ಪಾಡು ಉಗ್ರವಾದ ದಾಳಿಯನ್ನು ಅನುಭವಿಸಲಿದೆ ಎಂದು ಪ್ರವಾದಿಸಲಾಗಿತ್ತು. ಇಂದು ನಾವು ನೋಡುತ್ತಿರುವ ನೈತಿಕ ವಿಷಯಗಳ ಮತ್ತು ಮಾನವ ಸಮಾಜದ ಕುಸಿತವನ್ನು ಪೌಲನು ಮುಂಚಿತವಾಗಿಯೇ ತಿಳಿಸಿದ್ದನು. ‘ಕಡೇ ದಿವಸಗಳು’ ಅಪ್ರಾಮಾಣಿಕತೆ, ಸಹಜ “ಮಮತೆಯಿಲ್ಲ”ದಿರುವಿಕೆ ಮತ್ತು ಹೆತ್ತವರಿಗೆ ಅವಿಧೇಯತೆ ಈ ಮುಂತಾದ ಗುಣಲಕ್ಷಣಗಳಿಂದ ಗುರುತಿಸಲ್ಪಡುವವು ಎಂದು ಅವನು ಹೇಳಿದನು. ಮಾತ್ರವಲ್ಲ, ‘ಭಕ್ತಿಯ ವೇಷವಿರುವ’ ಜನರ ಮಧ್ಯೆಯೂ ಇಂಥ ಗುಣಲಕ್ಷಣಗಳಿರುವವು ಎಂದು ಅವನು ಹೇಳಿದನು.​—⁠2 ತಿಮೊಥೆಯ 3:​1-5.

ದೇವರನ್ನು ಮೆಚ್ಚಿಸಲು ಪ್ರಯತ್ನಿಸುವುದು, ಕುಟುಂಬದ ಮೇಲೆ ಬರುವ ಇಂಥ ಹಾನಿಕಾರಕ ಪ್ರಭಾವಗಳನ್ನು ಪ್ರತಿರೋಧಿಸಲು ಸಹಾಯಮಾಡುತ್ತದೆ. ತಾವು ಎದುರಿಸುವಂಥ ಅನೇಕ ಪಂಥಾಹ್ವಾನಗಳನ್ನು ಜಯಿಸಲು ತಮಗೆ ದೇವರ ಸಹಾಯದ ಅಗತ್ಯವಿದೆ ಎಂಬುದನ್ನು ಅನೇಕ ಕುಟುಂಬಗಳು ಕಂಡುಕೊಂಡಿವೆ. ಕುಟುಂಬದ ಸದಸ್ಯರು ದೇವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುವುದಾದರೆ, ಎಲ್ಲದಕ್ಕಿಂತ ಮಿಗಿಲಾಗಿ ಅವರು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸುವ ಮತ್ತು “ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ” ಎಂಬುದನ್ನು ಗ್ರಹಿಸುವ ಅಗತ್ಯವಿದೆ. (ಕೀರ್ತನೆ 127:⁠1) ಕುಟುಂಬ ಜೀವನದಲ್ಲಿ ದೇವರಿಗೆ ಪ್ರಥಮ ಸ್ಥಾನವನ್ನು ನೀಡುವ ಮೂಲಕ ಕೌಟುಂಬಿಕ ಸಂತೋಷವನ್ನು ಹೆಚ್ಚಿಸುವುದರಲ್ಲಿ ಬಹಳಷ್ಟು ಯಶಸ್ಸನ್ನು ಕಂಡುಕೊಳ್ಳಬಹುದು.​—⁠ಎಫೆಸ 3:​14, 15.

ಇದು ಎಷ್ಟು ಸತ್ಯವಾಗಿದೆ ಎಂಬುದನ್ನು ಹವಾಯಿಯ ಡೆನ್ನಸ್‌ ಎಂಬ ವ್ಯಕ್ತಿಯು ಕಂಡುಕೊಂಡನು. ಅವನು ಕ್ರೈಸ್ತನೆನಿಸಿಕೊಂಡವನಾಗಿದ್ದರೂ ದುರ್ಭಾಷೆ ಮತ್ತು ಜಗಳಗಳು ಅವನ ಜೀವನರೀತಿಯಾಗಿದ್ದವು. ಸೇನೆಯಲ್ಲಿ ಸೇವೆಸಲ್ಲಿಸಿದ ನಂತರವಂತೂ ಅವನು ಮತ್ತಷ್ಟು ಕೋಪಿಷ್ಠನೂ ಹಗೆಸಾಧಿಸುವವನೂ ಆದನು. ಅವನು ನೆನಪಿಸಿಕೊಳ್ಳುವುದು: “ನಾನು ಯಾವಾಗಲೂ ಜಗಳವಾಡುತ್ತಿದ್ದೆ. ನನಗೆ ಏನು ಸಂಭವಿಸಬಹುದು ಎಂಬುದರ ಕುರಿತು ನಾನು ಚಿಂತಿಸುತ್ತಿರಲಿಲ್ಲ ಮತ್ತು ಸಾಯಲು ಸಹ ನಾನು ಅಂಜುತ್ತಿರಲಿಲ್ಲ. ದುರ್ಭಾಷೆ ಮತ್ತು ಜಗಳವಾಡುವುದು ಮುಂದುವರಿಯಿತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ ನನ್ನ ಪತ್ನಿ, ಬೈಬಲನ್ನು ಕಲಿಯುವಂತೆ ನನ್ನನ್ನು ಉತ್ತೇಜಿಸಿದಳು.”

ಆದರೆ ಡೆನ್ನಸ್‌ ಅವನ ಪತ್ನಿಯ ಪ್ರಯತ್ನಗಳನ್ನು ತಳ್ಳಿಹಾಕಿದನು. ಹಾಗಿದ್ದರೂ, ಅವಳ ಕ್ರೈಸ್ತ ನಡತೆಯು ಅವನ ನಕಾರಾತ್ಮಕ ಮನೋಭಾವವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿತು. ಕಾಲಾನಂತರ, ಡೆನ್ನಸ್‌ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕ್ರೈಸ್ತ ಕೂಟಕ್ಕೆ ಹೋದನು. ತದನಂತರ ಅವನೊಂದಿಗೆ ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು. ಅವನು ಉತ್ತಮ ಪ್ರಗತಿಯನ್ನು ಮಾಡಿದನು. 28 ವರುಷಗಳಿಂದ ಇದ್ದ ಧೂಮಪಾನದ ದುಶ್ಚಟವನ್ನು ಡೆನ್ನಸ್‌ ನಿಲ್ಲಿಸಿಬಿಟ್ಟನು ಮತ್ತು ತಾನು ಯಾವೆಲ್ಲ ವಿಚಾರಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದನೊ ಅಂಥ ವಿಚಾರಗಳಲ್ಲಿ ಭಾಗವಹಿಸುತ್ತಿದ್ದ ಸ್ನೇಹಿತರೊಂದಿಗೆ ಸಹವಾಸಿಸುವುದನ್ನು ಸಹ ನಿಲ್ಲಿಸಿದನು. ಯೆಹೋವನ ಕಡೆಗಿನ ಗಣ್ಯತೆಯಿಂದ ಡೆನ್ನಸ್‌ ಹೇಳುವುದು: “ನನ್ನ ಕುಟುಂಬ ಜೀವನವು ಉತ್ತಮಗೊಂಡಿತು. ನಾವು ಕುಟುಂಬವಾಗಿ ಕೂಟಗಳಿಗೆ ಹೋದೆವು ಮತ್ತು ಶುಶ್ರೂಷೆಯಲ್ಲಿ ಭಾಗವಹಿಸಿದೆವು. ನನ್ನ ಇಬ್ಬರು ಮಕ್ಕಳು ಈಗ ನನ್ನನ್ನು ನೋಡಿ ಹೆದರುವುದಿಲ್ಲ. ನಾನು ನನ್ನ ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಂಡಿದ್ದೇನೆ ಮತ್ತು ದುರ್ಭಾಷೆಯನ್ನು ನಿಲ್ಲಿಸಿದ್ದೇನೆ. ನಾವು ಒಟ್ಟುಗೂಡಿ ಮಾತಾಡುತ್ತೇವೆ ಮತ್ತು ಬೈಬಲ್‌ ಚರ್ಚೆಗಳಲ್ಲಿ ಆನಂದಿಸುತ್ತೇವೆ. ಬೈಬಲ್‌ ಸತ್ಯವಲ್ಲದಿದ್ದರೆ, ನಾನು ಇಂದು ಇರುತ್ತಿರಲಿಲ್ಲ; ನಾನು ಅಷ್ಟೊಂದು ಕೋಪಿಷ್ಠನಾಗಿದ್ದೆ.”

ಕುಟುಂಬಗಳು ಯೆಹೋವನ ಚಿತ್ತವನ್ನು ಮಾಡಲು ಕಠಿನ ಪರಿಶ್ರಮಪಡುವಾಗ ಸಂತೋಷವನ್ನು ಗಳಿಸಬಲ್ಲವು. ಕುಟುಂಬದಲ್ಲಿ ಯಾರೂ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸದಿರುವಾಗ ಇರುವ ಪರಿಸ್ಥಿತಿಗಿಂತ ಕಡಿಮೆಪಕ್ಷ ಒಬ್ಬ ಸದಸ್ಯನು ಅನ್ವಯಿಸುವುದಾದರೆ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಎಂದು ಅನುಭವವು ತೋರಿಸಿದೆ. ಕ್ರೈಸ್ತ ಕುಟುಂಬವನ್ನು ಕಟ್ಟುವುದು ಕಠಿನ ಪರಿಶ್ರಮದ ಕೆಲಸವಾಗಿದೆ. ಇದಕ್ಕೆ ಕೌಶಲ ಮತ್ತು ಸಮಯದ ಅಗತ್ಯವಿದೆ. ಆದರೆ ಅವರ ಕಟ್ಟುವ ಪ್ರಯತ್ನಗಳನ್ನು ಯೆಹೋವನು ಯಶಸ್ವಿಗೊಳಿಸುತ್ತಾನೆ ಎಂಬ ಆಶ್ವಾಸನೆ ಅಂಥ ಕುಟುಂಬಗಳ ಸದಸ್ಯರಿಗಿದೆ. ಅವರು ಕೀರ್ತನೆಗಾರನ ಮಾತುಗಳನ್ನು ಪ್ರತಿಧ್ವನಿಸಬಲ್ಲರು: “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ.”​—⁠ಕೀರ್ತನೆ 121:⁠2.

[ಪಾದಟಿಪ್ಪಣಿ]

^ ಪ್ಯಾರ. 4 ಯೆಹೋವನ ಸಾಕ್ಷಿಗಳ 2005ರ ಕ್ಯಾಲೆಂಡರ್‌ನ (ಇಂಗ್ಲಿಷ್‌) ಮೇ/ಜೂನ್‌ ತಿಂಗಳುಗಳನ್ನು ನೋಡಿ.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರಿಂದ “ಪರಲೋಕ ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿದೆ.”​—⁠ಎಫೆಸ 3:​14, 15, NIBV

[ಪುಟ 8ರಲ್ಲಿರುವ ಚೌಕ]

ಕುಟುಂಬ ಏರ್ಪಾಡನ್ನು ಯೆಹೋವನು ಬೆಲೆಯುಳ್ಳದ್ದಾಗಿ ಎಣಿಸುತ್ತಾನೆ

‘ದೇವರು ಅವರನ್ನು ಆಶೀರ್ವದಿಸಿ​—⁠ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಳ್ಳಿರಿ ಅಂದನು.’​—⁠ಆದಿಕಾಂಡ 1:28.

‘ಯೆಹೋವನಲ್ಲಿ ಭಯಭಕ್ತಿಯುಳ್ಳವನು . . . ಧನ್ಯನು. ಅಂತಃಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು.’​—⁠ಕೀರ್ತನೆ 128:​1, 3.