ನೀವು ಯಾವ ಅಸ್ತಿವಾರದ ಮೇಲೆ ಕಟ್ಟುತ್ತಿದ್ದೀರಿ?
ನೀವು ಯಾವ ಅಸ್ತಿವಾರದ ಮೇಲೆ ಕಟ್ಟುತ್ತಿದ್ದೀರಿ?
ಒಂದು ಕಟ್ಟಡವು ಬಹುಕಾಲ ಬಾಳಿಕೆ ಬರುವುದು ಬಹುಮಟ್ಟಿಗೆ ಅದರ ಕೆಳಕಟ್ಟಡದ ರಚನೆ ಅಥವಾ ಅಸ್ತಿವಾರದ ಮೇಲೆ ಅವಲಂಬಿಸಿರುತ್ತದೆ. ಬೈಬಲ್ ಕೆಲವೊಮ್ಮೆ ಈ ಮೂಲತತ್ತ್ವವನ್ನು ಸಾಂಕೇತಿಕ ಅರ್ಥದಲ್ಲಿ ಉಪಯೋಗಿಸುತ್ತದೆ.
ಉದಾಹರಣೆಗೆ, ಪ್ರವಾದಿಯಾದ ಯೆಶಾಯನು ಯೆಹೋವ ದೇವರನ್ನು ‘ಭೂಮಿಯ ಅಸ್ತಿವಾರವನ್ನು ಹಾಕಿದಾತನು’ ಎಂದು ಸೂಚಿಸುತ್ತಾನೆ. (ಯೆಶಾಯ 51:13, NIBV) ಈ ಸಾಂಕೇತಿಕ ಅಸ್ತಿವಾರವು, ಭೂಮಿಯ ಚಲನೆಯನ್ನು ನಿಯಂತ್ರಿಸುವ ಮತ್ತು ಅದು ತನ್ನ ಪಥದಲ್ಲೇ ಇರುವಂತೆ ಮಾಡುವ ದೇವರ ಅಚಲ ನಿಯಮಗಳನ್ನು ಪ್ರತಿನಿಧಿಸುತ್ತದೆ. (ಕೀರ್ತನೆ 104:5) ದೇವರ ವಾಕ್ಯವಾದ ಬೈಬಲು, ಮಾನವ ಸಮಾಜವು ಯಾವದರ ಮೇಲೆ ಅವಲಂಬಿಸಿದೆಯೋ ಆ ‘ಅಸ್ತಿವಾರಗಳ’ ಕುರಿತೂ ಮಾತಾಡುತ್ತದೆ. ಇವು ನ್ಯಾಯ, ನಿಯಮ ಮತ್ತು ಶಾಂತಿವ್ಯವಸ್ಥೆಯೇ ಆಗಿವೆ. ಇವುಗಳೇ “ಕೆಡವಲ್ಪಟ್ಟ ಮೇಲೆ” ಅಥವಾ ಅನ್ಯಾಯ, ಭ್ರಷ್ಟಾಚಾರ ಮತ್ತು ಹಿಂಸಾಚಾರಗಳಿಂದ ಇವೇ ಶಿಥಿಲಗೊಳ್ಳುವಲ್ಲಿ ಸಾಮಾಜಿಕ ಸುವ್ಯವಸ್ಥೆಯಲ್ಲಿಯೂ ಕುಸಿತ ಉಂಟಾಗುವುದು ಸಹಜ.—ಕೀರ್ತನೆ 11:2-6; ಜ್ಞಾನೋಕ್ತಿ 29:4.
ಈ ಮೂಲತತ್ತ್ವವು ಜನರಿಗೆ ವೈಯಕ್ತಿಕವಾಗಿಯೂ ಅನ್ವಯವಾಗುತ್ತದೆ. ತನ್ನ ಪ್ರಸಿದ್ಧ ಪರ್ವತ ಪ್ರಸಂಗವನ್ನು ಮುಕ್ತಾಯಗೊಳಿಸುತ್ತಾ ಯೇಸು ಕ್ರಿಸ್ತನು ಹೇಳಿದ್ದು: “ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ನಡೆಯುವವನು ಬಂಡೆಯ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಯುಳ್ಳ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಬಡಿಯಿತು. ಆದಾಗ್ಯೂ ಅದರ ಅಸ್ತಿವಾರವು ಬಂಡೆಯ ಮೇಲಿದ್ದದರಿಂದ ಅದು ಬೀಳಲಿಲ್ಲ. ಆದರೆ ಈ ನನ್ನ ಮಾತುಗಳನ್ನು ಕೇಳಿಯೂ ಅವುಗಳಂತೆ ನಡೆಯದ ಪ್ರತಿಯೊಬ್ಬನು ಉಸುಬಿನ ಮೇಲೆ ಮನೆಯನ್ನು ಕಟ್ಟಿಕೊಂಡ ಬುದ್ಧಿಹೀನ ಮನುಷ್ಯನನ್ನು ಹೋಲುವನು. ಕಟ್ಟಿದ ಮೇಲೆ ಮಳೆ ಸುರಿಯಿತು; ಹಳ್ಳಗಳು ಬಂದವು; ನಾಲ್ಕು ಕಡೆಯಿಂದ ಗಾಳಿ ಬೀಸಿ ಆ ಮನೆಗೆ ಹೊಡೆಯಿತು. ಆಗ ಅದು ಧಡಮ್ಮನೆ ಕಡುಕೊಂಡು ಬಿತ್ತು.”—ಮತ್ತಾಯ 7:24-27.
ನೀವು ಯಾವ ಅಸ್ತಿವಾರದ ಮೇಲೆ ನಿಮ್ಮ ಜೀವಿತವನ್ನು ಕಟ್ಟುತ್ತಿದ್ದೀರಿ? ಯಾವುದರ ಅಂತಿಮ ಫಲಿತಾಂಶವು ಕೆಳಕಟ್ಟಡದ ರಚನೆಯ ಕುಸಿದುಬೀಳುವಿಕೆಯಾಗಿದೆಯೋ ಆ ದೇವಭಕ್ತಿರಹಿತ ಮಾನವ ತತ್ತ್ವಜ್ಞಾನದ ಅಸ್ತಿರ ಉಸುಬು ಅಥವಾ ಮರಳಿನ ಮೇಲೊ? ಇಲ್ಲವೆ ಜೀವನದಲ್ಲಿ ಬರಬಹುದಾದ ಸಾಂಕೇತಿಕ ಬಿರುಗಾಳಿಯನ್ನು ಎದುರಿಸಿ ನಿಲ್ಲಲು ನಿಮಗೆ ಸಹಾಯಮಾಡುವಂಥ, ಯೇಸು ಕ್ರಿಸ್ತನ ಮಾತುಗಳಿಗೆ ವಿಧೇಯತೆ ತೋರಿಸುವ ಘನವಾದ ಬಂಡೆಯ ಮೇಲೊ?