ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಡತನವಿಲ್ಲದ ಲೋಕವು ಸಮೀಪವಿದೆ

ಬಡತನವಿಲ್ಲದ ಲೋಕವು ಸಮೀಪವಿದೆ

ಬಡತನವಿಲ್ಲದ ಲೋಕವು ಸಮೀಪವಿದೆ

ಈಪತ್ರಿಕೆಯ ಮುಖಪುಟದಲ್ಲಿರುವಂಥ ಪರದೈಸಿನ ಚಿತ್ರವು ಬಡತನದಲ್ಲಿ ಜೀವಿಸುತ್ತಿರುವಂಥ ಜನರಿಗೆ ಬಹಳ ಆಕರ್ಷಣೀಯವಾಗಿರುತ್ತದೆ. ಒಂದು ಪರದೈಸ್‌ ಪ್ರಥಮ ಮಾನವ ದಂಪತಿಗಳಾದ ಆದಾಮಹವ್ವರಿಗೆ ನೈಜ ಸಂಗತಿಯಾಗಿತ್ತು. ಏದೆನ್‌ ಉದ್ಯಾನವನವು ಅವರ ಬೀಡಾಗಿತ್ತು. (ಆದಿಕಾಂಡ 2:​7-23) ಆ ಪರದೈಸ್‌ ಕಳೆದುಕೊಳ್ಳಲ್ಪಟ್ಟರೂ, ಭಾವೀ ಪರದೈಸಿನ​—⁠ಬಡತನವಿಲ್ಲದ ನೂತನ ಲೋಕದಲ್ಲಿನ ಪರದೈಸ್‌​—⁠ನಂಬಿಕೆಯು ಕೇವಲ ಒಂದು ಸ್ವಪ್ನವಲ್ಲ. ಅದು ಬೈಬಲಿನಲ್ಲಿರುವ ವಾಗ್ದಾನಗಳ ಮೇಲೆ ದೃಢವಾಗಿ ಆಧಾರಿತವಾಗಿದೆ.

ಭೂಮಿಯ ಮೇಲಿನ ತನ್ನ ಕೊನೆಯ ದಿನದಂದು ಯೇಸು ಕ್ರಿಸ್ತನು ಮಾಡಿದ ವಾಗ್ದಾನವನ್ನು ಪರಿಗಣಿಸಿರಿ. ಯೇಸುವಿನ ಪಕ್ಕದಲ್ಲಿ ತೂಗುಹಾಕಲ್ಪಟ್ಟಿದ್ದ ಒಬ್ಬ ದುಷ್ಕರ್ಮಿಯು, ಮಾನವನ ಸಮಸ್ಯೆಗಳನ್ನು ಪರಿಹರಿಸಲು ದೇವರಿಗಿರುವ ಸಾಮರ್ಥ್ಯದಲ್ಲಿ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದನು. ಅವನು ಹೇಳಿದ್ದು: “ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.” ಈ ಮಾತುಗಳು, ಯೇಸು ಮುಂದಕ್ಕೆ ರಾಜನಾಗಿ ಆಳಲಿದ್ದಾನೆ ಮತ್ತು ಸತ್ತವರು ಪುನಃ ಎಬ್ಬಿಸಲ್ಪಡಲಿದ್ದಾರೆ ಎಂಬುದನ್ನು ಆ ದುಷ್ಕರ್ಮಿಯು ನಂಬಿದ್ದನೆಂದು ತೋರಿಸುತ್ತವೆ. ಯೇಸು ಉತ್ತರಿಸಿದ್ದು: “ಇಂದೇ ನಿನಗೆ ಸತ್ಯವಾಗಿ ಹೇಳುತ್ತೇನೆ, ನೀನು ನನ್ನ ಸಂಗಡ ಪರದೈಸಿನಲ್ಲಿರುವಿ.”​—⁠ಲೂಕ 23:​42, 43, NW.

ಪರದೈಸಿನಲ್ಲಿರುವವರ ಕುರಿತು ಮಾತಾಡುತ್ತಾ ಬೈಬಲ್‌ ತಿಳಿಸುವುದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು.” (ಯೆಶಾಯ 65:⁠21) ಹೌದು, “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.”​—⁠ಮೀಕ 4:⁠4.

ಹಾಗಾದರೆ, ಬಡತನವು ಈಗ ಅಸ್ತಿತ್ವದಲ್ಲಿರುವಂತೆ ಏಕೆ ಅನುಮತಿಸಲ್ಪಟ್ಟಿದೆ? ಬಡತನದಿಂದ ಬಾಧಿತರಾದ ಜನರಿಗೆ ದೇವರು ಯಾವ ಸಹಾಯವನ್ನು ನೀಡುತ್ತಾನೆ? ಬಡತನವು ಯಾವಾಗ ಅಂತಿಮವಾಗಿ ಕೊನೆಗೊಳ್ಳಲಿದೆ?

ಬಡತನವನ್ನು ಏಕೆ ಅನುಮತಿಸಲಾಗಿದೆ?

ದುಷ್ಟ ದೇವದೂತನಾದ ಪಿಶಾಚನಾದ ಸೈತಾನನಿಂದ ಎಬ್ಬಿಸಲ್ಪಟ್ಟ ದಂಗೆಯ ಪರಿಣಾಮವಾಗಿ ಆದಾಮಹವ್ವರು ವಾಸಿಸುತ್ತಿದ್ದ ಪರದೈಸ್‌ ಕಳೆದುಕೊಳ್ಳಲ್ಪಟ್ಟಿತು. ಸೈತಾನನು ಸರ್ಪವನ್ನು ತನ್ನ ವದನಕವಾಗಿ ಉಪಯೋಗಿಸಿ, ನಿರ್ದಿಷ್ಟ ಮರದ ಹಣ್ಣನ್ನು ತಿನ್ನಬಾರದು ಎಂಬ ದೇವರ ನಿಯಮವನ್ನು ಮುರಿಯುವಂತೆ ಹವ್ವಳನ್ನು ಪ್ರಚೋದಿಸಿದನು. ದೇವರಿಂದ ಸ್ವತಂತ್ರವಾಗಿರುವ ಮೂಲಕ ತಾನು ಒಂದು ಉತ್ತಮ ಜೀವನವನ್ನು ಹೊಂದಬಲ್ಲೆ ಎಂದು ಅವಳು ನಂಬುವಂತೆ ಸೈತಾನನು ವಂಚಿಸಿದನು. ನಿಷೇಧಿಸಲ್ಪಟ್ಟ ಹಣ್ಣನ್ನು ಹವ್ವಳು ಆದಾಮನಿಗೆ ನೀಡಿದಾಗ ಅವನೂ ಅದನ್ನು ತಿಂದನು. ಹೀಗೆ, ತನ್ನ ಹೆಂಡತಿಯನ್ನು ಮೆಚ್ಚಿಸುವ ಉದ್ದೇಶದಿಂದ ಅವನು ದೇವರಿಗೆ ಬೆನ್ನುಹಾಕಿದನು.​—⁠ಆದಿಕಾಂಡ 3:1-6; 1 ತಿಮೊಥೆಯ 2:14.

ದಂಗೆಕೋರ ದಂಪತಿಯನ್ನು ಪರದೈಸಿನಿಂದ ಹೊರಗಟ್ಟಲಾಯಿತು ಮತ್ತು ಅಂದಿನಿಂದ ಅವರು ಜೀವಿಸಲು ಹೆಣಗಾಡಬೇಕಾಯಿತು. ಮತ್ತು ಇಂದಿನ ತನಕ, ಪಾಪಿಗಳಾದ ಮಾನವರ ಮೇಲೆ ಸೈತಾನನು ಆಳ್ವಿಕೆ ನಡೆಸುವಂತೆ ಯೆಹೋವನು ಅನುಮತಿಸಿದ್ದಾನೆ. ಇದರಿಂದ, ದೇವರಿಗೆ ಅವಿಧೇಯರಾಗುವುದರ ಫಲಿತಾಂಶವು ಸ್ಪಷ್ಟವಾಗಿದೆ. ಭೂಮಿಯ ಮೇಲೆ ಪರದೈಸನ್ನು ತರುವ ಸಾಧ್ಯತೆ ಮಾನವಕುಲಕ್ಕಿಲ್ಲ ಎಂಬುದನ್ನು ಇತಿಹಾಸವು ರುಜುಪಡಿಸಿದೆ. (ಯೆರೆಮೀಯ 10:23) ಅದಕ್ಕೆ ಬದಲಾಗಿ, ದೇವರಿಂದ ಸ್ವತಂತ್ರರಾಗಿರುವುದು ಬಡತನವನ್ನೂ ಸೇರಿಸಿ ಅನೇಕ ವಿಪತ್ಕಾರಕ ಸಮಸ್ಯೆಗಳನ್ನು ತಂದೊಡ್ಡಿದೆ.​—⁠ಪ್ರಸಂಗಿ 8:9.

ಹಾಗಿದ್ದರೂ, ಈ ಸಮಸ್ಯೆಭರಿತ ಲೋಕದಲ್ಲಿ ಬಡವರು ಯಾವುದೇ ಸಹಾಯವಿಲ್ಲದವರಾಗಿ ಕೈಬಿಡಲ್ಪಟ್ಟಿಲ್ಲ. ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿ ಅವರಿಗೆ ಬೇಕಾದ ಉತ್ತಮ ಮಾರ್ಗದರ್ಶನವು ಅಡಕವಾಗಿದೆ.

“ಚಿಂತೆಮಾಡಬೇಡಿರಿ”

ಅನೇಕ ಬಡವರನ್ನು ಒಳಗೊಂಡಿದ್ದ ಒಂದು ದೊಡ್ಡ ಜನಸಮೂಹದೊಂದಿಗೆ ಮಾತಾಡುವಾಗ ಯೇಸು ಹೀಗೆ ಹೇಳಿದನು: “ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಕಣಜಗಳಲ್ಲಿ ತುಂಬಿಟ್ಟುಕೊಳ್ಳುವದಿಲ್ಲ; ಆದಾಗ್ಯೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಸಾಕಿ ಸಲಹುತ್ತಾನೆ; ಅವುಗಳಿಗಿಂತ ನೀವು ಹೆಚ್ಚಿನವರಲ್ಲವೋ? . . . ಹೀಗಿರುವದರಿಂದ—ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.”​—⁠ಮತ್ತಾಯ 6:26-33.

ಬಡ ವ್ಯಕ್ತಿಯು ಕದಿಯಬೇಕಾಗಿಲ್ಲ. (ಜ್ಞಾನೋಕ್ತಿ 6:​30, 31) ಅವನು ತನ್ನ ಜೀವಿತದಲ್ಲಿ ದೇವರಿಗೆ ಪ್ರಥಮಸ್ಥಾನವನ್ನು ಕೊಟ್ಟರೆ ಅವನಿಗೆ ಬೇಕಾಗಿರುವಂಥದ್ದು ಒದಗಿಸಲ್ಪಡುವುದು. ದಕ್ಷಿಣ ಆಫ್ರಿಕದ ಲಸೋಟೋ ಎಂಬ ಪಟ್ಟಣದಲ್ಲಿ ವಾಸಿಸುತ್ತಿರುವ ಟೂಕೀಸೊ ಎಂಬವನ ಉದಾಹರಣೆಯನ್ನು ಪರಿಗಣಿಸಿರಿ. 1998ರಲ್ಲಿ, ಸರಕಾರದ ವಿರುದ್ಧ ಎದ್ದ ದಂಗೆಯನ್ನು ನಿಲ್ಲಿಸುವ ಸಲುವಾಗಿ ವಿದೇಶಿ ಪಡೆಗಳು ಲಸೋಟೋ ಪಟ್ಟಣದ ಮೇಲೆ ದಾಳಿಮಾಡಿದವು. ಆ ಯುದ್ಧದ ಕಾರಣ ಅಂಗಡಿಗಳು ಲೂಟಿಮಾಡಲ್ಪಟ್ಟವು, ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡರು ಮತ್ತು ತೀವ್ರವಾದ ಆಹಾರ ಕೊರತೆಯು ಉಂಟಾಯಿತು.

ಟೂಕೀಸೊ ಆ ಪಟ್ಟಣದಲ್ಲಿನ ಕಡುಬಡ ಪ್ರದೇಶದಲ್ಲಿ ವಾಸಿಸುತ್ತಿದ್ದನು. ಬದುಕಿ ಉಳಿಯಲಿಕ್ಕಾಗಿ ಅವನ ನೆರೆಯವರಲ್ಲಿ ಅನೇಕರು ಅಂಗಡಿಗಳನ್ನು ಲೂಟಿಮಾಡಿದರು. ಟೂಕೀಸೊ ಕೇವಲ ಒಂದು ಕೋಣೆಯಿರುವ ತನ್ನ ಮನೆಗೆ ಹಿಂದಿರುಗಿದಾಗ, ಅವನೊಂದಿಗೆ ವಾಸಿಸುತ್ತಿದ್ದ ಮಾಸೇಸೊ ಎಂಬ ಸ್ತ್ರೀಯು ಬಹಳಷ್ಟು ಆಹಾರವನ್ನು ಲೂಟಿಮಾಡಿ ತಂದಿರುವುದನ್ನು ನೋಡಿದನು. ಅವನು ಅವಳಿಗೆ ಕದಿಯುವಂಥದ್ದು ದೇವರ ನಿಯಮಕ್ಕೆ ವಿರುದ್ಧವಾಗಿದೆ ಎಂದು ವಿವರಿಸಿ, “ಈ ಎಲ್ಲ ಆಹಾರವನ್ನು ಹೊರಗೆ ಎಸಿ” ಎಂದು ಹೇಳಿದನು. ಮಾಸೇಸೊ ವಿಧೇಯಳಾದಳು. ನೆರೆಯವರು ಅವರನ್ನು ಗೇಲಿಮಾಡಿ, ಹೊರಗೆಸೆಯಲ್ಪಟ್ಟ ಆ ಕದ್ದ ಆಹಾರವನ್ನು ತೆಗೆದುಕೊಂಡು ಹೋದರು.

ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನಮಾಡಿದಾಗ ಟೂಕೀಸೊ ಏನನ್ನು ಕಲಿತನೊ ಅದರ ಆಧಾರದ ಮೇಲೆ ಅವನು ಈ ನಿರ್ಣಯವನ್ನು ಮಾಡಿದನು. ದೇವರ ನಿಯಮಕ್ಕೆ ಅವನು ವಿಧೇಯನಾದ ಕಾರಣ ಉಪವಾಸವಿರಬೇಕಾಯಿತೊ? ಇಲ್ಲ. ಸ್ವಲ್ಪ ಸಮಯದ ಅನಂತರ ಟೂಕೀಸೊ ಹಾಜರಾಗುತ್ತಿದ್ದ ಸಭೆಯ ಹಿರಿಯರು ಅವನನ್ನು ಸಂಪರ್ಕಿಸಿದರು ಮತ್ತು ಅವನಿಗೆ ಆಹಾರವನ್ನು ಒದಗಿಸಿದರು. ವಾಸ್ತವದಲ್ಲಿ, ಲಸೋಟೋ ಪಟ್ಟಣದಲ್ಲಿರುವ ಸಹೋದರ ಸಹೋದರಿಯರಿಗಾಗಿ ದಕ್ಷಿಣ ಆಫ್ರಿಕದ ನೆರೆಹೊರೆಯ ಸ್ಥಳಗಳಲ್ಲಿನ ಯೆಹೋವನ ಸಾಕ್ಷಿಗಳು ಎರಡು ಟನ್‌ ಪರಿಹಾರ ಸಹಾಯಕಗಳನ್ನು ಕಳುಹಿಸಿದ್ದರು. ಟೂಕೀಸೊ ದೇವರಿಗೆ ತೋರಿಸಿದ ವಿಧೇಯತೆ ಮತ್ತು ಸಭೆಯ ಪ್ರೀತಿಪೂರ್ವಕ ಸಹಾಯದಿಂದ ಮಾಸೇಸೊ ಬಹಳ ಪ್ರಭಾವಿತಳಾದಳು. ಅವಳು ಸಹ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದಳು. ಕ್ರಮೇಣ, ಅವರಿಬ್ಬರೂ ಕಾನೂನುಬದ್ಧವಾಗಿ ವಿವಾಹವಾದರು ಮತ್ತು ಹೀಗೆ ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನವನ್ನು ಪಡೆದುಕೊಳ್ಳಲು ಅರ್ಹರಾದರು. ಅವರು ಈಗಲೂ ನಂಬಿಗಸ್ತಿಕೆಯಿಂದ ದೇವರನ್ನು ಸೇವಿಸುತ್ತಿದ್ದಾರೆ.

ಯೆಹೋವನಿಗೆ ಬಡವರ ಬಗ್ಗೆ ಚಿಂತೆಯಿದೆ. (“ದೇವರು ಬಡವರನ್ನು ಹೇಗೆ ವೀಕ್ಷಿಸುತ್ತಾನೆ?” ಎಂಬ ಶೀರ್ಷಿಕೆಯುಳ್ಳ ಚೌಕವನ್ನು ನೋಡಿ.) ಟೂಕೀಸೊ ಮತ್ತು ಮಾಸೇಸೊರಂತೆ ಇತರರು ಸಹ ತನ್ನ ಕುರಿತು ಕಲಿಯುವಂತೆ ಆತನು ಪ್ರೀತಿಪೂರ್ವಕವಾಗಿ ಏರ್ಪಾಡುಗಳನ್ನು ಮಾಡಿದ್ದಾನೆ. ಮತ್ತು ತನ್ನ ವಾಕ್ಯದಲ್ಲಿ ಪ್ರತಿದಿನದ ಜೀವಿತಕ್ಕೆ ಅಗತ್ಯವಿರುವ ಪ್ರಾಯೋಗಿಕ ಸಲಹೆಯನ್ನೂ ಒದಗಿಸಿದ್ದಾನೆ.

ಒಂದು ಅತ್ಯುತ್ತಮ ಒದಗಿಸುವಿಕೆ

ದೇವರಿಗೆ ಬಡವರ ಕಡೆಗಿರುವ ಚಿಂತೆಯನ್ನು ಪ್ರತಿಬಿಂಬಿಸಲು ಯೆಹೋವನ ಸಾಕ್ಷಿಗಳು ಯಾವಾಗಲೂ ಪ್ರಯತ್ನಿಸಿದ್ದಾರೆ. (ಗಲಾತ್ಯ 2:10) ಅನೇಕ ಬಾರಿ ಯಾವುದೇ ದೇಶದಲ್ಲಿ ವಿಪತ್ತು ಬಂದೆರಗಿ ಸತ್ಯ ಕ್ರೈಸ್ತರು ಬಾಧಿಸಲ್ಪಟ್ಟಾಗ ಅಗತ್ಯವಿರುವ ಸಹಾಯವನ್ನು ಒದಗಿಸಲು ಏರ್ಪಾಡುಗಳು ಮಾಡಲ್ಪಡುತ್ತವೆ. ಮುಖ್ಯವಾಗಿ, ಬಡವರನ್ನು ಸೇರಿಸಿ ಪ್ರತಿಯೊಬ್ಬರ ಆಧ್ಯಾತ್ಮಿಕ ಅಗತ್ಯದ ಕಡೆಗೆ ಯೆಹೋವನ ಸಾಕ್ಷಿಗಳು ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. (ಮತ್ತಾಯ 9:​36-38) ಕಳೆದ 60 ವರುಷಗಳಲ್ಲಿ, ತರಬೇತಿಹೊಂದಿದ ಸಾವಿರಾರು ಶುಶ್ರೂಷಕರು ವಿದೇಶಗಳಲ್ಲಿ ಮಿಷನೆರಿಗಳಾಗಿ ಸೇವೆಸಲ್ಲಿಸಲು ತಮ್ಮನ್ನು ನೀಡಿಕೊಂಡಿದ್ದಾರೆ. ಉದಾಹರಣೆಗೆ, ಫಿನ್ಲೆಂಡ್‌ನ ಮಿಷನೆರಿ ದಂಪತಿಯು ಸೆಸೊತೊ ಭಾಷೆಯನ್ನು ಕಲಿಯುವ ಮೂಲಕ ಟೂಕೀಸೊ ಮತ್ತು ಮಾಸೇಸೊರಿಗೆ ಯೇಸುವಿನ ಶಿಷ್ಯರಾಗುವಂತೆ ಬೋಧಿಸಶಕ್ತರಾದರು. (ಮತ್ತಾಯ 28:​19, 20) ಇಂಥ ಮಿಷನೆರಿ ಕೆಲಸದಲ್ಲಿ, ಅನೇಕವೇಳೆ ಶ್ರೀಮಂತ ದೇಶದಲ್ಲಿನ ಆರಾಮದ ಜೀವನವನ್ನು ತ್ಯಜಿಸಿ ಬಡ ದೇಶಕ್ಕೆ ಸ್ಥಳಾಂತರಿಸುವುದು ಒಳಗೂಡಿರುತ್ತದೆ.

ಸತ್ಕ್ರೈಸ್ತರಿಗೆ ಬದುಕುವ ಸಲುವಾಗಿ ಕದಿಯುವುದು ಒಂದು ಆಯ್ಕೆಯಾಗಿರುವುದಿಲ್ಲ. ಬದಲಿಗೆ, ಯೆಹೋವನ ಒದಗಿಸುವ ಸಾಮರ್ಥ್ಯದಲ್ಲಿ ಅವರಿಗೆ ನಂಬಿಕೆಯಿದೆ. (ಇಬ್ರಿಯ 13:​5, 6) ಯೆಹೋವನು ತನ್ನ ಜನರಿಗೆ ಒದಗಿಸುವ ಒಂದು ವಿಧಾನವು, ಪರಸ್ಪರ ಪರಾಮರಿಸುವ ಆರಾಧಕರಿಂದ ಕೂಡಿರುವ ಲೋಕವ್ಯಾಪಕ ಸಂಘಟನೆಯ ಮೂಲಕವಾಗಿಯೇ ಆಗಿದೆ.

ಯೆಹೋವನು ಬಡವರಿಗೆ ಸಹಾಯಮಾಡುವ ಇನ್ನೊಂದು ವಿಧವು, ದೈನಂದಿನ ಜೀವಿತಕ್ಕೆ ಅಗತ್ಯವಿರುವ ಪ್ರಾಯೋಗಿಕ ಸಲಹೆಯನ್ನು ಒದಗಿಸುವ ಮೂಲಕವೇ ಆಗಿದೆ. ಉದಾಹರಣೆಗೆ, ಬೈಬಲ್‌ ಆಜ್ಞಾಪಿಸುವುದು: “ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.” (ಎಫೆಸ 4:28) ತರಕಾರಿ ತೋಟವನ್ನು ಬೆಳೆಸಿ ಅವುಗಳನ್ನು ನೋಡಿಕೊಳ್ಳುವುದು ಈ ಮುಂತಾದ ಕಠಿನ ಪರಿಶ್ರಮದ ಕೆಲಸವನ್ನು ಮಾಡುವ ಮೂಲಕ ಅನೇಕ ನಿರುದ್ಯೋಗಿಗಳು ತಮಗೆ ತಾವೇ ಉದ್ಯೋಗವನ್ನು ಸೃಷ್ಟಿಸಿಕೊಳ್ಳಶಕ್ತರಾಗಿದ್ದಾರೆ. ಮದ್ಯದ ದುರುಪಯೋಗ ಇತ್ಯಾದಿ ಕೆಟ್ಟ ಹವ್ಯಾಸಗಳನ್ನು ತೊರೆಯುವಂತೆ ಕಲಿಸುವ ಮೂಲಕ ಹಣವನ್ನು ಉಳಿತಾಯಮಾಡಲು ಬೈಬಲ್‌ ಬಡಜನರಿಗೆ ಸಹಾಯಮಾಡುತ್ತದೆ.​—⁠ಎಫೆಸ 5:18.

ಬಡತನವಿಲ್ಲದ ಲೋಕ​—⁠ಯಾವಾಗ?

ಸೈತಾನನ ಆಳ್ವಿಕೆಯ “ಕಡೇ ದಿವಸಗಳಲ್ಲಿ” ನಾವು ಜೀವಿಸುತ್ತಿದ್ದೇವೆ ಎಂದು ಬೈಬಲ್‌ ಸೂಚಿಸುತ್ತದೆ. (2 ತಿಮೊಥೆಯ 3:⁠1) ಬೇಗನೆ, ಮಾನವಕುಲಕ್ಕೆ ತೀರ್ಪುಮಾಡುವಂತೆ ಯೆಹೋವನು ಯೇಸು ಕ್ರಿಸ್ತನನ್ನು ಕಳುಹಿಸಲಿದ್ದಾನೆ. ಆ ಸಮಯದಲ್ಲಿ ಏನು ಸಂಭವಿಸಲಿದೆ? ಯೇಸು ಒಂದು ಸಾಮ್ಯದಲ್ಲಿ ಇದಕ್ಕೆ ಉತ್ತರವನ್ನು ಒದಗಿಸಿದ್ದಾನೆ. ಅವನು ಹೇಳಿದ್ದು: “ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.”​—⁠ಮತ್ತಾಯ 25:31-33.

ಈ ಸಾಮ್ಯದಲ್ಲಿರುವ ಕುರಿಗಳು ಯೇಸುವಿನ ರಾಜತ್ವಕ್ಕೆ ಆಧೀನತೆ ತೋರಿಸುವ ಜನರಾಗಿದ್ದಾರೆ. ಯೇಸು ಅವರನ್ನು ಕುರಿಗಳಿಗೆ ಹೋಲಿಸಿದನು, ಏಕೆಂದರೆ ತಮ್ಮ ಕುರುಬನನ್ನು ಅವರು ಹಿಂಬಾಲಿಸುತ್ತಾರೆ. (ಯೋಹಾನ 10:16) ಯೇಸುವಿನ ಪರಿಪೂರ್ಣ ಆಳ್ವಿಕೆಯ ಕೆಳಗೆ ಈ ಕುರಿಸದೃಶ್ಯ ಜನರು ಜೀವವನ್ನು ಪಡೆದುಕೊಳ್ಳುವರು. ಬಡತನವಿಲ್ಲದ ನೂತನ ಲೋಕದಲ್ಲಿನ ಸಂತೋಷಕರ ಜೀವನವು ಅದಾಗಿದೆ. ಆಡುಸದೃಶ್ಯ ಜನರು, ಅಂದರೆ ಯಾರು ಯೇಸುವಿನ ಆಳ್ವಿಕೆಯನ್ನು ನಿರಾಕರಿಸುತ್ತಾರೋ ಅಂಥವರು ನಿತ್ಯ ನಾಶನವನ್ನು ಅನುಭವಿಸುವರು.​—⁠ಮತ್ತಾಯ 25:46.

ದೇವರ ರಾಜ್ಯವು ದುಷ್ಟತನಕ್ಕೆ ಅಂತ್ಯವನ್ನು ತರುವುದು. ಅಲ್ಲಿ ಬಡತನವು ಗತಕಾಲದ ಸಂಗತಿಯಾಗಿರುವುದು. ಒಬ್ಬರನ್ನೊಬ್ಬರು ಪ್ರೀತಿಸುವ ಮತ್ತು ಪರಾಮರಿಸುವ ಜನರಿಂದ ಭೂಮಿಯು ತುಂಬಿಕೊಂಡಿರುವುದು. ಅಂಥ ಒಂದು ನೂತನ ಲೋಕವು ಖಂಡಿತ ಬರುವುದು ಎಂಬುದಕ್ಕೆ, ಯೆಹೋವನ ಸಾಕ್ಷಿಗಳ ಪ್ರೀತಿಪರ ಅಂತಾರಾಷ್ಟ್ರೀಯ ಸಹೋದರತ್ವವೇ ಪುರಾವೆಯಾಗಿದೆ. ಯೇಸು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.”​—⁠ಯೋಹಾನ 13:35.

[ಪುಟ 6, 7ರಲ್ಲಿರುವ ಚೌಕ/ಚಿತ್ರಗಳು]

ದೇವರು ಬಡವರನ್ನು ಹೇಗೆ ವೀಕ್ಷಿಸುತ್ತಾನೆ?

ಬೈಬಲ್‌ ಮಾನವಕುಲದ ಸೃಷ್ಟಿಕರ್ತನನ್ನು ‘ಹಸಿದವರಿಗೆ ಆಹಾರಕೊಡುವವನು’ ಎಂದು ವರ್ಣಿಸುತ್ತದೆ. (ಕೀರ್ತನೆ 146:⁠7) ದೇವರಿಗೆ ಬಡವರ ಕಡೆಗೆ ಕಾಳಜಿ ಇದೆ ಎಂಬುದನ್ನು ಎತ್ತಿತೋರಿಸುವಂಥ ನೂರಕ್ಕಿಂತಲೂ ಹೆಚ್ಚಿನ ವಚನಗಳು ಬೈಬಲಿನಲ್ಲಿವೆ.

ಉದಾಹರಣೆಗೆ, ಪುರಾತನ ಇಸ್ರಾಯೇಲ್‌ ಜನಾಂಗಕ್ಕೆ ಯೆಹೋವನು ಧರ್ಮಶಾಸ್ತ್ರವನ್ನು ಒದಗಿಸಿದಾಗ, ಇಸ್ರಾಯೇಲ್‌ ವ್ಯವಸಾಯಗಾರರು ತಮ್ಮ ಹೊಲಗಳ ಮೂಲೆಗಳಲ್ಲಿರುವ ಪೈರನ್ನು ಸಂಪೂರ್ಣವಾಗಿ ಕೊಯ್ಯಬಾರದು ಎಂದು ಆಜ್ಞಾಪಿಸಿದನು. ಅವರು, ಉಳಿದ ಹಣ್ಣುಗಳನ್ನು ಹೆಕ್ಕುವುದಕ್ಕಾಗಿ ಎಣ್ಣೆಯಮರಗಳ ಅಥವಾ ದ್ರಾಕ್ಷೆಯ ತೋಟಗಳ ಬಳಿಗೆ ಎರಡನೇ ಬಾರಿ ಹೋಗಬಾರದಿತ್ತು. ಈ ನಿಯಮಗಳು ಪರದೇಶಿಯರು, ಅನಾಥರು, ವಿಧವೆಯರು ಮತ್ತು ಇತರ ಬಾಧಿತ ಜನರಿಗಾಗಿ ಮಾಡಲ್ಪಟ್ಟ ಪ್ರೀತಿಪರ ಒದಗಿಸುವಿಕೆಯಾಗಿದ್ದವು.​—⁠ಯಾಜಕಕಾಂಡ 19:9, 10; ಧರ್ಮೋಪದೇಶಕಾಂಡ 24:19-21.

ಅಷ್ಟುಮಾತ್ರವಲ್ಲದೆ, ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದು: “ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು. ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು; ಆ ಮೊರೆಗೆ ನಾನು ಕಿವಿಗೊಡುವೆನೆಂದು ತಿಳಿದುಕೊಳ್ಳಿರಿ. ನಾನು ಕೋಪಿಸಿಕೊಂಡು ನಿಮ್ಮನ್ನು ಶತ್ರುಗಳ ಕತ್ತಿಯಿಂದ ಸಂಹಾರಮಾಡಿಸುವೆನು; ನಿಮ್ಮ ಹೆಂಡತಿಯರು ವಿಧವೆಗಳಾಗುವರು, ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು.” (ವಿಮೋಚನಕಾಂಡ 22:22-24) ದುಃಖಕರವಾಗಿ, ಅನೇಕ ಶ್ರೀಮಂತ ಇಸ್ರಾಯೇಲ್ಯರು ಈ ಮಾತುಗಳನ್ನು ಅಲಕ್ಷ್ಯಮಾಡಿದರು. ಈ ತಪ್ಪಿಗಾಗಿ ಮತ್ತು ಇನ್ನಿತರ ತಪ್ಪುಗಳಿಗಾಗಿ ಯೆಹೋವ ದೇವರು ತನ್ನ ಪ್ರವಾದಿಗಳ ಮೂಲಕ ಇಸ್ರಾಯೇಲ್ಯರನ್ನು ಅನೇಕಬಾರಿ ಎಚ್ಚರಿಸಿದನು. (ಯೆಶಾಯ 10:1, 2; ಯೆರೆಮೀಯ 5:28; ಆಮೋಸ 4:1-3) ಕ್ರಮೇಣ, ಅಶ್ಶೂರ್ಯರು ಮತ್ತು ತದನಂತರ ಬಾಬೆಲಿನವರು ಇಸ್ರಾಯೇಲ್‌ ಕ್ಷೇತ್ರವನ್ನು ವಶಪಡಿಸಿಕೊಳ್ಳುವಂತೆ ದೇವರು ಬಿಟ್ಟುಕೊಟ್ಟನು. ಅನೇಕ ಇಸ್ರಾಯೇಲ್ಯರು ಕೊಲ್ಲಲ್ಪಟ್ಟರು ಮತ್ತು ಬದುಕಿ ಉಳಿದವರನ್ನು ಬಂಧಿವಾಸಿಗಳಾಗಿ ವಿದೇಶಕ್ಕೆ ಕೊಂಡೊಯ್ಯಲಾಯಿತು.

ಬಡವರ ಕಡೆಗೆ ತನ್ನ ತಂದೆಗಿರುವ ಪ್ರೀತಿಪರ ಕಾಳಜಿಯನ್ನು ದೇವರ ಪ್ರಿಯ ಕುಮಾರನಾದ ಯೇಸು ಕ್ರಿಸ್ತನು ಸಹ ಪ್ರತಿಬಿಂಬಿಸಿದನು. ತನ್ನ ಶುಶ್ರೂಷೆಯ ಉದ್ದೇಶವನ್ನು ವಿವರಿಸುತ್ತಾ ಯೇಸು ಹೇಳಿದ್ದು: “[ಯೆಹೋವನ] ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು.” (ಲೂಕ 4:18) ಇದರ ಅರ್ಥ, ಯೇಸು ತನ್ನ ಶುಶ್ರೂಷೆಯನ್ನು ಕೇವಲ ಬಡವರಿಗೆ ಮಾತ್ರ ಸೀಮಿತವಾಗಿಟ್ಟನು ಎಂದಲ್ಲ. ಐಶ್ವರ್ಯವಂತರಿಗೂ ಅವನು ಪ್ರೀತಿಯಿಂದ ಸಹಾಯಮಾಡಿದನು. ಆದರೂ ಹಾಗೆ ಮಾಡುವಾಗ ಅವನು ಬಡವರ ಕಡೆಗೆ ತನಗಿರುವ ಕಾಳಜಿಯನ್ನು ವ್ಯಕ್ತಪಡಿಸಿದನು. ಉದಾಹರಣೆಗೆ, ಒಬ್ಬ ಅಧಿಕಾರಿಗೆ ಅವನು ಈ ಸಲಹೆಯನ್ನು ನೀಡಿದನು: “ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.”​—⁠ಲೂಕ 14:1, 12-14; 18:18, 22; 19:1-10.

ಯೆಹೋವ ದೇವರೂ ಆತನ ಮಗನೂ ಬಡವರ ಕುರಿತು ಆಳವಾದ ಚಿಂತೆಯುಳ್ಳವರಾಗಿದ್ದಾರೆ. (ಮಾರ್ಕ 12:41-44; ಯಾಕೋಬ 2:1-6) ಬಡವರ ಕಡೆಗಿನ ತನ್ನ ಕಾಳಜಿಯನ್ನು ಪ್ರತಿಬಿಂಬಿಸುತ್ತಾ ಯೆಹೋವನು, ಮೃತಪಟ್ಟಿರುವ ಕೋಟ್ಯಂತರ ಬಡಜನರನ್ನು ತನ್ನ ಜ್ಞಾಪಕದಲ್ಲಿ ಇಟ್ಟುಕೊಂಡಿದ್ದಾನೆ. ಅಂಥ ಎಲ್ಲ ಜನರು, ಬಡತನವಿಲ್ಲದ ನೂತನ ಲೋಕದಲ್ಲಿ ಪುನರುತ್ಥಾನ ಹೊಂದುವರು.​—⁠ಅ. ಕೃತ್ಯಗಳು 24:15.

[ಚಿತ್ರಗಳು]

ನೂತನ ಲೋಕವು ಖಂಡಿತ ಬರುವುದು ಎಂಬುದಕ್ಕೆ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಸಹೋದರತ್ವವೇ ಪುರಾವೆಯಾಗಿದೆ

[ಪುಟ 5ರಲ್ಲಿರುವ ಚಿತ್ರ]

ಟೂಕೀಸೊನೊಂದಿಗೆ ಬೈಬಲ್‌ ಅಧ್ಯಯನಮಾಡಿದ ಮಿಷನೆರಿಯೊಂದಿಗೆ ಟೂಕೀಸೊ ಮತ್ತು ಮಾಸೇಸೊ

[ಪುಟ 5ರಲ್ಲಿರುವ ಚಿತ್ರ]

ಮಾಸೇಸೊ ತನ್ನೊಂದಿಗೆ ಬೈಬಲ್‌ ಅಧ್ಯಯನಮಾಡಿದ ಮಿಷನೆರಿಯೊಂದಿಗೆ ತನ್ನ ಮನೆಯ ಬಾಗಿಲಿನ ಬಳಿ ನಿಂತಿರುವುದು