ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನುಷ್ಯನು ಬಡತನಕ್ಕೆ ಅಂತ್ಯವನ್ನು ತರಬಲ್ಲನೊ?

ಮನುಷ್ಯನು ಬಡತನಕ್ಕೆ ಅಂತ್ಯವನ್ನು ತರಬಲ್ಲನೊ?

ಮನುಷ್ಯನು ಬಡತನಕ್ಕೆ ಅಂತ್ಯವನ್ನು ತರಬಲ್ಲನೊ?

ಕೋಟ್ಯಂತರ ಜನರು ಬಡತನದ ರುಚಿಯನ್ನೇ ನೋಡದೆ ಬೆಳೆದುಬಂದಿದ್ದಾರೆ. ಅವರೆಂದೂ ಹಸಿದ ಹೊಟ್ಟೆಯಲ್ಲಿ ಹಾಸಿಗೆಗೆ ಹೋಗಬೇಕಾಗಿರಲಿಲ್ಲ ಅಥವಾ ಚಳಿಯಲ್ಲಿ ನಡುಗುತ್ತಾ ನಿದ್ರಿಸಬೇಕಾಗಿರಲಿಲ್ಲ. ಆದರೂ, ಇಂಥ ಅನೇಕ ವ್ಯಕ್ತಿಗಳು ಬಡವರಿಗಾಗಿ ಕನಿಕರಪಡುತ್ತಾರೆ ಮತ್ತು ತಮ್ಮಿಂದಾದ ಸಹಾಯವನ್ನು ಮಾಡಲು ಮುಂದೆ ಬರುತ್ತಾರೆ.

ಆದರೆ ಆಂತರಿಕ ಯುದ್ಧ, ನೆರೆಹಾವಳಿ, ಬರಗಾಲ ಮತ್ತು ಇತರ ಸಮಸ್ಯೆಗಳಿಂದ ಬಾಧಿತರಾದ ಜನರ ಜೀವಿತದಲ್ಲಿ ಬಡತನ ಎಂಬುದು ಒಂದು ಕ್ರೂರ ನಿಜತ್ವವಾಗಿಯೇ ಉಳಿದಿದೆ. ಈ ಎಲ್ಲ ವಿಷಯಗಳು, ಕಷ್ಟದಿಂದ ದಿನತಳ್ಳುವ ಆಫ್ರಿಕದ ರೈತರಿಗೆ ದುಃಸ್ವಪ್ನದಂತಿವೆ. ಕೆಲವರು ತಮ್ಮ ಮನೆಗಳನ್ನು ಬಿಟ್ಟು ದೊಡ್ಡ ಪಟ್ಟಣಗಳಿಗೆ ಸ್ಥಳಾಂತರಿಸುವಂತೆ ಅಥವಾ ಇನ್ನೊಂದು ದೇಶದಲ್ಲಿ ನಿರಾಶ್ರಿತರಾಗಿ ಜೀವಿಸುವಂತೆ ಒತ್ತಾಯಿಸಲ್ಪಟ್ಟಿದ್ದಾರೆ. ಹಳ್ಳಿಗಳಲ್ಲಿ ವಾಸಿಸುವ ಜನರು ಉತ್ತಮ ಜೀವನದ ನಿರೀಕ್ಷೆಯಿಂದ ನಗರಗಳಿಗೆ ಸ್ಥಳಾಂತರಿಸುತ್ತಾರೆ.

ವಿಪರೀತ ಜನಸಂಖ್ಯೆಯಿರುವ ನಗರಗಳು ಅನೇಕವೇಳೆ ಬಡತನದ ಆಗರವಾಗಿವೆ. ಇಂಥ ನಗರಗಳಲ್ಲಿ ಬೆಳೆಗಳನ್ನು ಬೆಳೆಸಲು ಸ್ಥಳವಿರುವುದಿಲ್ಲ, ಒಂದುವೇಳೆ ಇದ್ದರೂ ತೀರ ಕಡಿಮೆಯಾಗಿರುತ್ತದೆ. ಉದ್ಯೋಗವನ್ನು ಕಂಡುಕೊಳ್ಳುವುದು ಬಹಳ ಕಷ್ಟಕರ. ವಿಪರೀತ ಹತಾಶೆಯಿಂದಾಗಿ ಅನೇಕರು ಪಾತಕದ ಜೀವನ ರೀತಿಯನ್ನು ತಮ್ಮದಾಗಿಸಿಕೊಳ್ಳುತ್ತಾರೆ. ನಗರದಲ್ಲಿ ವಾಸಿಸುವವರು ಸಹಾಯಕ್ಕಾಗಿ ಅಂಗಲಾಚುತ್ತಾರೆ, ಆದರೆ ಹೆಚ್ಚಾಗುತ್ತಿರುವ ಬಡತನದ ಸಮಸ್ಯೆಯನ್ನು ಪರಿಹರಿಸಲು ಮಾನವ ಸರಕಾರಗಳು ಅಶಕ್ತವಾಗಿವೆ. 2003ರ ನವೆಂಬರ್‌ ತಿಂಗಳಿನಲ್ಲಿ ಬಿಡುಗಡೆಯಾದ ವಿಶ್ವ ಸಂಸ್ಥೆಯ ವರದಿಯನ್ನು ಸೂಚಿಸುತ್ತಾ ಲಂಡನಿನ ದಿ ಇಂಡಿಪೆನ್ಡೆಂಟ್‌ ಎಂಬ ವಾರ್ತಾಪತ್ರಿಕೆಯು ಹೇಳುವುದು: “ಲೋಕದಲ್ಲಿ ಬಡತನವು ದಿನೇ ದಿನೇ ಹೆಚ್ಚುತ್ತಾ ಇದೆ. ಲೋಕದ ಸುತ್ತಲೂ ಸುಮಾರು 84.2 ಕೋಟಿ ಜನರು ನ್ಯೂನಪೋಷಿತರಾಗಿದ್ದಾರೆ ಮತ್ತು ಪ್ರತಿ ವರುಷವೂ 50 ಲಕ್ಷ ಬಡಜನರು ಈ ಗುಂಪಿಗೆ ಸೇರ್ಪಡೆಯಾಗುತ್ತಾ ಇರುವುದರಿಂದ ಈ ಸಂಖ್ಯೆಯು ಏರುತ್ತಾ ಇದೆ.”

ದಕ್ಷಿಣ ಆಫ್ರಿಕದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸ್‌, ಬಡತನದಿಂದ ಬಾಧಿತರಾದ ಜನರಿಂದ ಆಗಾಗ ಪತ್ರಗಳನ್ನು ಪಡೆಯುತ್ತದೆ. ಉದಾಹರಣೆಗೆ, ಬ್ಲೂಮ್ಫನ್‌ಟೇನ್‌ನ ಒಬ್ಬ ವ್ಯಕ್ತಿಯು ಬರೆದದ್ದು: “ನಾನು ನಿರುದ್ಯೋಗಿಯಾಗಿದ್ದೇನೆ ಮತ್ತು ಸಂದರ್ಭ ದೊರೆತಾಗೆಲ್ಲ ನಾನು ನಗರದಲ್ಲಿ ಕಳ್ಳತನಮಾಡುತ್ತೇನೆ. ಹಾಗೆ ಮಾಡದಿದ್ದರೆ ಹಲವು ದಿನಗಳ ವರೆಗೆ ನಾವು ಊಟವಿಲ್ಲದೆ ಇರಬೇಕು. ಅಷ್ಟುಮಾತ್ರವಲ್ಲದೆ ತೀವ್ರವಾದ ಚಳಿಯನ್ನು ಸಹ ನಾವು ಸಹಿಸಬೇಕಾಗಿದೆ. ಇಲ್ಲಿ ಉದ್ಯೋಗಾವಕಾಶವೇ ಇಲ್ಲ. ಅನೇಕರು ಕೆಲಸವನ್ನು ಹುಡುಕುತ್ತಾ, ತಿನ್ನಲು ಏನಾದರೂ ಆಹಾರವನ್ನು ಹುಡುಕುತ್ತಾ ಅಲೆದಾಡುತ್ತಿದ್ದಾರೆ. ತಿಪ್ಪೆಯಲ್ಲಿ ಆಹಾರವನ್ನು ಹುಡುಕಿ ತಿನ್ನುವವರನ್ನೂ ನಾನು ನೋಡಿದ್ದೇನೆ. ಕೆಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನನ್ನಂತೆ ಅನೇಕರು ಖಿನ್ನರಾಗಿಯೂ ನಿರೀಕ್ಷಾಹೀನರಾಗಿಯೂ ಇದ್ದಾರೆ. ಭವಿಷ್ಯತ್ತಿನಲ್ಲಿ ಯಾವ ನಿರೀಕ್ಷೆಯೂ ಇಲ್ಲವೆಂಬಂತೆ ತೋರುತ್ತದೆ. ಊಟಮಾಡಬೇಕಾದ ಮತ್ತು ಬಟ್ಟೆಯನ್ನು ಧರಿಸಬೇಕಾದ ಅಗತ್ಯದೊಂದಿಗೆ ನಮ್ಮನ್ನು ಸೃಷ್ಟಿಸಿದ ದೇವರ ಕಣ್ಣಿಗೆ ಇದು ಬೀಳುವುದಿಲ್ಲವೊ?”

ಈ ವ್ಯಕ್ತಿಯ ಚಿಂತೆಗಳಿಗೆ ಸಾಂತ್ವನದಾಯಕ ಉತ್ತರಗಳಿವೆ. ಮುಂದಿನ ಲೇಖನವು ತೋರಿಸುವಂತೆ, ಈ ಉತ್ತರಗಳು ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುತ್ತವೆ.