ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ದಾವೀದನು ಮತ್ತು ಬತ್ಷೆಬೆಯು ವ್ಯಭಿಚಾರವನ್ನು ಮಾಡಿದ್ದಕ್ಕಾಗಿ ಮರಣದಂಡನೆಗೆ ಗುರಿಯಾಗಲಿಲ್ಲವಾದರೂ, ಅವರಿಗೆ ಹುಟ್ಟಿದ ಮಗು ಏಕೆ ಸಾಯಬೇಕಾಯಿತು?
ಮೋಶೆಯ ಧರ್ಮಶಾಸ್ತ್ರವು ಈ ನಿಯಮವನ್ನು ವಿಧಿಸಿತ್ತು: “ಯಾವನಾದರೂ ಪರನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ಹೊರಬಿದ್ದರೆ ಆ ಸ್ತ್ರೀಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ಇಸ್ರಾಯೇಲ್ಯರ ಮಧ್ಯದಿಂದ ತೆಗೆದುಹಾಕಬೇಕು.” (ಧರ್ಮೋಪದೇಶಕಾಂಡ 22:22) ಒಂದುವೇಳೆ ದಾವೀದ ಮತ್ತು ಬತ್ಷೆಬೆಯರ ಪಾಪದ ನ್ಯಾಯನಿರ್ಣಾಯಕ ಮೊಕದ್ದಮೆಯನ್ನು ಮಾನವ ನ್ಯಾಯಾಧಿಪತಿಗಳು ಧರ್ಮಶಾಸ್ತ್ರಕ್ಕನುಸಾರ ನಿರ್ವಹಿಸುವಂತೆ ಯೆಹೋವ ದೇವರು ಅನುಮತಿಸುತ್ತಿದ್ದಲ್ಲಿ, ವ್ಯಭಿಚಾರ ಗೈದ ಈ ದಂಪತಿಯು ವಧಿಸಲ್ಪಡುವ ಸಾಧ್ಯತೆಯಿತ್ತು. ಮಾನವ ನ್ಯಾಯಾಧಿಪತಿಗಳು ಹೃದಯಗಳನ್ನು ಓದಲು ಅಸಮರ್ಥರಾಗಿರುವುದರಿಂದ, ನಿಜಾಂಶಗಳಿಂದ ರುಜುಪಡಿಸಲ್ಪಡುವ ವಿಷಯಕ್ಕನುಸಾರ ತಪ್ಪಿತಸ್ಥರ ನಡವಳಿಕೆಯ ಮೇಲಾಧಾರಿಸಿ ಅವರು ನ್ಯಾಯತೀರ್ಪನ್ನು ನೀಡಬೇಕಿತ್ತು. ವ್ಯಭಿಚಾರದ ಕೃತ್ಯಕ್ಕೆ ಮರಣದಂಡನೆಯು ನೀಡಲ್ಪಡುತ್ತಿತ್ತು. ಇಸ್ರಾಯೇಲ್ಯ ನ್ಯಾಯಾಧಿಪತಿಗಳಿಗೆ ಈ ಪಾಪವನ್ನು ಮನ್ನಿಸುವ ಅಧಿಕಾರವಿರಲಿಲ್ಲ.
ಸತ್ಯ ದೇವರಾದರೋ ಹೃದಯಗಳನ್ನು ಓದಬಲ್ಲನು ಮತ್ತು ಪಾಪಗಳನ್ನು ಕ್ಷಮಿಸಲು ಆತನು ಆಧಾರವನ್ನು ಕಂಡುಕೊಳ್ಳುವಲ್ಲಿ ಅವುಗಳನ್ನು ಕ್ಷಮಿಸಬಲ್ಲನು. ಈ ಮೊಕದ್ದಮೆಯು, ಯೆಹೋವನು ಯಾರೊಂದಿಗೆ ರಾಜ್ಯದೊಡಂಬಡಿಕೆಯನ್ನು ಮಾಡಿಕೊಂಡಿದ್ದನೋ ಆ ದಾವೀದನನ್ನು ಒಳಗೂಡಿದ್ದರಿಂದ, ಆತನು ಒಂದು ವಿನಾಯಿತಿಯೋಪಾದಿ ಈ ವಿಚಾರದೊಂದಿಗೆ ತಾನೇ ವ್ಯವಹರಿಸಲು ನಿರ್ಧರಿಸಿದನು. (2 ಸಮುವೇಲ 7:12-16) “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಇಂಥ ಒಂದು ಆಯ್ಕೆಯನ್ನು ಮಾಡುವ ಹಕ್ಕುಳ್ಳವನಾಗಿದ್ದಾನೆ.—ಆದಿಕಾಂಡ 18:25.
ಯೆಹೋವನು ದಾವೀದನ ಹೃದಯವನ್ನು ಪರೀಕ್ಷಿಸಿದಾಗ ಏನನ್ನು ಕಂಡುಕೊಂಡನು? ಕೀರ್ತನೆ 51ರ ಮೇಲ್ಬರಹವು, “ದಾವೀದನು ಬತ್ಸೇಬಳ ಬಳಿಗೆ ಹೋದ ಮೇಲೆ ಪ್ರವಾದಿಯಾದ ನಾತಾನನು ಅವನ ಹತ್ತಿರ ಬಂದಾಗ” ಅವನಿಗಾದ ಭಾವನೆಗಳನ್ನು ಈ ಕೀರ್ತನೆಯು ಬಯಲುಪಡಿಸುತ್ತದೆ ಎಂದು ತಿಳಿಸುತ್ತದೆ. ಕೀರ್ತನೆ 51:1-4ರಲ್ಲಿ ಹೀಗೆ ತಿಳಿಸಲ್ಪಟ್ಟಿದೆ: “ಪ್ರೀತಿಸ್ವರೂಪನಾದ ದೇವರೇ, ನನ್ನನ್ನು ಕರುಣಿಸು; ಕರುಣಾನಿಧಿಯೇ, ನನ್ನ ದ್ರೋಹವನ್ನೆಲ್ಲಾ ಅಳಿಸಿಬಿಡು. ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು. ನಾನು ದ್ರೋಹಿ ಎಂದು ನಾನೇ ಒಪ್ಪಿಕೊಂಡಿದ್ದೇನೆ; ನನ್ನ ಪಾಪವು ಯಾವಾಗಲೂ ನನ್ನ ಮುಂದೆ ಇದೆ. ನಿನಗೇ ಕೇವಲ ನಿನಗೇ ತಪ್ಪುಮಾಡಿದ್ದೇನೆ; ನಿನ್ನ ದೃಷ್ಟಿಗೆ ಕೆಟ್ಟದ್ದಾಗಿರುವದನ್ನೇ ಮಾಡಿದ್ದೇನೆ.” ಯೆಹೋವನು ದಾವೀದನ ಹೃದಯದಲ್ಲಿನ ಈ ತೀವ್ರವಾದ ಪರಿತಾಪವನ್ನು ನಿಜವಾದ ಪಶ್ಚಾತ್ತಾಪದ ಪುರಾವೆಯಾಗಿ ಪರಿಗಣಿಸಿದ್ದಿರಬೇಕು ಮತ್ತು ತಪ್ಪಿತಸ್ಥರಿಗೆ ಕರುಣೆ ತೋರಿಸಲು ಆಧಾರವಿದೆ ಎಂದು ನಿರ್ಧರಿಸಿದ್ದಿರಬೇಕು. ಅಷ್ಟುಮಾತ್ರವಲ್ಲ, ಸ್ವತಃ ದಾವೀದನು ಕರುಣಾಭಾವವುಳ್ಳ ವ್ಯಕ್ತಿಯಾಗಿದ್ದನು, ಮತ್ತು ಯೆಹೋವನು ಕರುಣೆಯುಳ್ಳವರಿಗೆ ಕರುಣೆಯನ್ನು ತೋರಿಸುತ್ತಾನೆ. (1 ಸಮುವೇಲ 24:4-7; ಮತ್ತಾಯ 5:7; ಯಾಕೋಬ 2:13) ಆದುದರಿಂದಲೇ, ದಾವೀದನು ತನ್ನ ಪಾಪವನ್ನು ಒಪ್ಪಿಕೊಂಡಾಗ ನಾತಾನನು ಅವನಿಗೆ “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ, ನೀನು ಸಾಯುವದಿಲ್ಲ” ಎಂದು ಹೇಳಿದನು.—2 ಸಮುವೇಲ 12:13.
ಆದರೆ ದಾವೀದನೂ ಬತ್ಷೆಬೆಯೂ ತಮ್ಮ ಪಾಪದ ಎಲ್ಲ ಪರಿಣಾಮಗಳಿಂದ ವಿಮುಕ್ತರಾಗಲಿಲ್ಲ. ನಾತಾನನು ದಾವೀದನಿಗೆ ಹೇಳಿದ್ದು: “ನೀನು ಈ ಕೃತ್ಯದಿಂದ ಯೆಹೋವನ ವೈರಿಗಳು ಆತನನ್ನು ಬಹಳವಾಗಿ ನಿಂದಿಸುವದಕ್ಕೆ ಆಸ್ಪದ ಕೊಟ್ಟದರಿಂದ ನಿನ್ನಿಂದ ಹುಟ್ಟಿರುವ ಮಗುವು ಸತ್ತೇಹೋಗುವದು.” ಅವರ ಮಗು ಅಸ್ವಸ್ಥಗೊಂಡಿತು ಮತ್ತು ದಾವೀದನು ಏಳು ದಿನಗಳ ವರೆಗೆ ಉಪವಾಸಮಾಡುತ್ತಾ ಅಳುತ್ತಾ ಇದ್ದನಾದರೂ ಅದು ಸತ್ತುಹೋಯಿತು.—2 ಸಮುವೇಲ 12:14-18.
‘ತಂದೆಯ ಪಾಪದ ದೆಸೆಯಿಂದ ಮಕ್ಕಳಿಗೆ ಮರಣಶಿಕ್ಷೆಯಾಗಬಾರದು’ ಎಂದು ಧರ್ಮೋಪದೇಶಕಾಂಡ 24:16 ಹೇಳುವುದರಿಂದ, ಅವರಿಗೆ ಹುಟ್ಟಿದ ಮಗು ಏಕೆ ಸಾಯಬೇಕಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕೆಲವರಿಗೆ ಕಷ್ಟಕರವಾದದ್ದಾಗಿ ಕಂಡುಬರುತ್ತದೆ. ಆದರೆ ಮಾನವ ನ್ಯಾಯಾಧಿಪತಿಗಳು ಈ ವಿಚಾರದಲ್ಲಿ ನ್ಯಾಯತೀರಿಸುತ್ತಿದ್ದಲ್ಲಿ, ಹೆತ್ತವರ ಸಮೇತ ಗರ್ಭದಲ್ಲಿದ್ದ ಮಗು ಸಹ ಜೀವವನ್ನು ಕಳೆದುಕೊಳ್ಳುತ್ತಿತ್ತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆ ಮಗುವಿನ ಮರಣವು ದಾವೀದನಿಗೆ, ಬತ್ಷೆಬೆಯೊಂದಿಗೆ ಅವನು ಮಾಡಿದ ಪಾಪದ ವಿಷಯದಲ್ಲಿ ಯೆಹೋವನು ಎಷ್ಟು ಅಪ್ರಸನ್ನನಾಗಿದ್ದಾನೆ ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿರಲೂಬಹುದು. ಆದರೆ ಯೆಹೋವನ “ಮಾರ್ಗವು ಯಾವ ದೋಷವೂ ಇಲ್ಲ”ದ್ದಾಗಿರುವುದರಿಂದ, ಆತನು ಈ ವಿಚಾರವನ್ನು ನ್ಯಾಯಬದ್ಧವಾಗಿ ನಿರ್ವಹಿಸಿದನು ಎಂಬ ದೃಢನಿಶ್ಚಯ ನಮಗಿರಬಲ್ಲದು.—2 ಸಮುವೇಲ 22:31.
[ಪುಟ 31ರಲ್ಲಿರುವ ಚಿತ್ರ]
ದಾವೀದನು ನಿಜವಾದ ಪಶ್ಚಾತ್ತಾಪವನ್ನು ತೋರಿಸಿದನು