ಸಾಮಾನ್ಯ ಪರಿಜ್ಞಾನ ಏಕೆ ಇಷ್ಟೊಂದು ಅಸಾಮಾನ್ಯವಾಗುತ್ತಿದೆ?
ಸಾಮಾನ್ಯ ಪರಿಜ್ಞಾನ ಏಕೆ ಇಷ್ಟೊಂದು ಅಸಾಮಾನ್ಯವಾಗುತ್ತಿದೆ?
“ಅವನಿಗೆ ಏನಾಯಿತು? ಹಾಗೆ ಮಾಡಬಾರದೆಂದು ಅವನಿಗೆ ಚೆನ್ನಾಗಿ ತಿಳಿದಿರಬೇಕಿತ್ತು” ಎಂಬುದಾಗಿ ಒಬ್ಬ ವೀಕ್ಷಕನು ಹೇಳುತ್ತಾನೆ. ಇನ್ನೊಬ್ಬ ವ್ಯಕ್ತಿಯು, ನಂಬಲಸಾಧ್ಯ ಸಂಗತಿಯೋ ಎಂಬಂತೆ ತನ್ನ ತಲೆಯನ್ನು ಆಡಿಸುತ್ತಾ ಹೀಗೆ ಗುಣುಗುಟ್ಟುತ್ತಾನೆ: “ಸ್ವಲ್ಪವಾದರೂ ಸಾಮಾನ್ಯ ಪರಿಜ್ಞಾನ (ಕಾಮನ್‌ಸೆನ್ಸ್) ಇದ್ದಿದ್ದರೆ ಅವನೆಂದೂ ಹೀಗೆ ಮಾಡುತ್ತಿರಲಿಲ್ಲ.” ಈ ರೀತಿಯ ಹೇಳಿಕೆಗಳನ್ನು ಪ್ರಾಯಶಃ ನೀವು ಕೇಳಿದ್ದೀರೊ? ಹಾಗಾದರೆ ಸಾಮಾನ್ಯ ಪರಿಜ್ಞಾನ ಎಂದರೇನು?
“ಪರಿಜ್ಞಾನ” ಎಂಬ ಪದವನ್ನು “ಸರಿಯಾದ ಪ್ರಜ್ಞೆ,” “ತಿಳಿಯುವ ಶಕ್ತಿ” ಮತ್ತು “ವ್ಯಾವಹಾರಿಕ ವಿವೇಕ ಅಥವಾ ವಿವೇಚನೆ” ಎಂದು ಅರ್ಥನಿರೂಪಿಸಲಾಗಿದೆ. ಇದು, ಒಬ್ಬ ವ್ಯಕ್ತಿಗೆ ಚುರುಕುಬುದ್ಧಿಯಿಂದ ವಿವೇಚಿಸಿ ತೀರ್ಮಾನಿಸುವ ಸಾಮರ್ಥ್ಯವಿದೆ ಎಂಬುದನ್ನು ಸೂಚಿಸುತ್ತದೆ. ಸಾಮಾನ್ಯ ಪರಿಜ್ಞಾನವು ನಾವು ನಮ್ಮ ಆಲೋಚನಾ ಸಾಮರ್ಥ್ಯವನ್ನು ಉಪಯೋಗಿಸುವುದನ್ನು ಕೇಳಿಕೊಳ್ಳುತ್ತದೆ. ಹೆಚ್ಚಿನ ಜನರು ಇತರರು ತಮಗಾಗಿ ಆಲೋಚಿಸುವಂತೆ ಬಿಟ್ಟುಕೊಡುತ್ತಾರೆ. ಮಾಧ್ಯಮಗಳು, ತಮ್ಮ ಸಮವಯಸ್ಕರು ಅಥವಾ ಜನಪ್ರಿಯ ಅಭಿಪ್ರಾಯಗಳು ತಮಗಾಗಿ ನಿರ್ಣಯಗಳನ್ನು ಮಾಡುವಂತೆ ಅವರು ಅನುಮತಿಸುತ್ತಾರೆ.
ಇಂದಿನ ಲೋಕದಲ್ಲಿ ಸಾಮಾನ್ಯ ಪರಿಜ್ಞಾನವು ತೀರ ಕಡಿಮೆಯಾಗುತ್ತಾ ಇದೆ. ಇದನ್ನು ಗಮನಿಸಿದ ಒಬ್ಬ ವ್ಯಕ್ತಿಯು ಒಮ್ಮೆ ಹೀಗೆ ಹೇಳಿದನು, ‘ವಾಸ್ತವದಲ್ಲಿ, ಸಾಮಾನ್ಯ ಪರಿಜ್ಞಾನವು ಇಂದು ತೀರ ಅಸಾಮಾನ್ಯವಾಗುತ್ತಿದೆ.’ ನಾವು ಸಾಮಾನ್ಯ ಪರಿಜ್ಞಾನವನ್ನು ಹೇಗೆ ಗಳಿಸಸಾಧ್ಯವಿದೆ? ಅದರ ಪ್ರಯೋಜನಗಳೇನು?
ಸಾಮಾನ್ಯ ಪರಿಜ್ಞಾನವನ್ನು ಗಳಿಸುವುದು ಹೇಗೆ?
ಯಾವುದೇ ವಿಷಯವನ್ನು ಜಾಗ್ರತೆಯಿಂದ ಪರಿಗಣಿಸಲು ಬಹಳ ಸಮಯವನ್ನು ವ್ಯಯಿಸಬೇಕಾದರೂ ಮತ್ತು ಒಳ್ಳೇ ತೀರ್ಮಾನವನ್ನು ಮಾಡಲು ಹಾಗೂ ಉತ್ತಮ ವಿವೇಚನೆಯನ್ನು ಬೆಳೆಸಿಕೊಳ್ಳಲು ಸತತ ಪ್ರಯತ್ನವು ಅಗತ್ಯವಾದರೂ, ಸಾಮಾನ್ಯ ಪರಿಜ್ಞಾನವನ್ನು ಖಂಡಿತವಾಗಿಯೂ ಗಳಿಸಸಾಧ್ಯವಿದೆ. ಅದನ್ನು ಗಳಿಸಲು ನಮಗೆ ಸಹಾಯಮಾಡುವ ಮೂರು ಅಂಶಗಳನ್ನು ಪರಿಗಣಿಸಿರಿ.
ಬೈಬಲನ್ನು ಅಧ್ಯಯನಮಾಡಿ, ಅದರ ಸಲಹೆಯನ್ನು ಅನುಸರಿಸಿರಿ. ಸರಳ ಭಾಷೆಯಲ್ಲಿ ಮತ್ತು ಸ್ಪಷ್ಟವಾದ ತರ್ಕಸರಣಿಯಲ್ಲಿ ಬರೆಯಲ್ಪಟ್ಟ ಬೈಬಲ್, ವಿವೇಕ ಮತ್ತು ಒಳ್ಳೇ ಪರಿಜ್ಞಾನವನ್ನು ಗಳಿಸಲು ಅತ್ಯುತ್ತಮ ಸಹಾಯಕವಾಗಿದೆ. (ಎಫೆಸ 1:8) ಉದಾಹರಣೆಗೆ, ಅಪೊಸ್ತಲ ಪೌಲನು ತನ್ನ ಜೊತೆ ಕ್ರೈಸ್ತರಿಗೆ ಸಲಹೆ ನೀಡಿದ್ದು: “ಕಡೇ ಮಾತೇನಂದರೆ, ಸಹೋದರರೇ, ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.” (ಫಿಲಿಪ್ಪಿ 4:8) ಈ ಸಲಹೆಯನ್ನು ನಾವು ಸತತವಾಗಿ ಅನುಸರಿಸಿದರೆ, ಸರಿಯಾದ ವಿವೇಚನೆ ಮತ್ತು ಜಾಗರೂಕ ವರ್ತನೆಯನ್ನು ಇದು ಫಲಿಸುತ್ತದೆ.
ಅನುಭವದಿಂದ ಕಲಿಯಿರಿ. ಸಾಮಾನ್ಯ ಪರಿಜ್ಞಾನವನ್ನು ಜೀವನದಲ್ಲಿನ ಅನುಭವದೊಂದಿಗೆ ಹೊಂದಿಸಿ ಮಾತಾಡುತ್ತಾ ಒಬ್ಬ ಸ್ವಿಸ್ ಕವಿಯು ಹೇಳಿದ್ದು: “ಸಾಮಾನ್ಯ ಪರಿಜ್ಞಾನವು . . . ಅನುಭವ ಮತ್ತು ಮುನ್ನರಿವು [ಮುನ್ನೋಟ] ಇವೆರಡನ್ನೂ ಒಳಗೊಂಡ ವಿಷಯವಾಗಿದೆ.” “ಮೂಢನು ತಾನು ಕೇಳಿದ್ದನ್ನೆಲ್ಲ ನಂಬುವನು; ಆದರೆ ಜಾಣನು ಪ್ರತಿಯೊಂದರ ಬಗ್ಗೆ ಎಚ್ಚರಿಕೆಯಿಂದ ಯೋಚಿಸುವನು” ಎಂಬುದು ನಿಜ. (ಜ್ಞಾನೋಕ್ತಿ 14:15, ಪರಿಶುದ್ಧ ಬೈಬಲ್ *) ಗಮನಿಸುವುದು, ತರಬೇತಿ ಪಡೆದುಕೊಳ್ಳುವುದು ಮತ್ತು ಅನುಭವದ ಮೂಲಕ ಸಾಮಾನ್ಯ ಪರಿಜ್ಞಾನವನ್ನು ಬೆಳೆಸಿಕೊಳ್ಳಬಹುದು. ಸಮಯವು ದಾಟಿದಂತೆ ಒಂದು ವಿಷಯವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ನಾವು ಕಲಿಯಬಲ್ಲೆವು. ನಮ್ಮ ತಪ್ಪುಗಳಿಂದ ಪಾಠವನ್ನು ಕಲಿಯಬೇಕಾದರೆ, ದೀನತೆ ಮತ್ತು ವಿನಯಶೀಲತೆಯು ಅತ್ಯಾವಶ್ಯಕ. ಈ ಕಡೇ ದಿವಸಗಳ ಜನರಲ್ಲಿರುವ ಬಡಾಯಿ ಕೊಚ್ಚುವ, ಅಹಂಕಾರದ ಮತ್ತು ದುಡುಕಿನ ಮನೋಭಾವವು ಸಾಮಾನ್ಯ ಪರಿಜ್ಞಾನಕ್ಕೆ ರುಜುವಾತಾಗಿರುವುದಿಲ್ಲ.—2 ತಿಮೊಥೆಯ 3:1-5.
ಒಡನಾಡಿಗಳನ್ನು ವಿವೇಕದಿಂದ ಆರಿಸಿಕೊಳ್ಳಿರಿ. ವಿವೇಕ ಮತ್ತು ಸಾಮಾನ್ಯ ಪರಿಜ್ಞಾನವನ್ನು ನಾವು ಉಪಯೋಗಿಸುವಾಗ, ನಮ್ಮ ಒಡನಾಡಿಗಳಿಂದ ಸಹಾಯ ದೊರಕುತ್ತದೆ ಇಲ್ಲವೆ ತಡೆಯುಂಟಾಗುತ್ತದೆ. ಜ್ಞಾನೋಕ್ತಿ 13:20 ತಿಳಿಸುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” ದೇವರಿಗೆ ಅವಿಧೇಯರಾಗಿರುವ ಮತ್ತು ಆತನ ವಾಕ್ಯವನ್ನು ತ್ಯಜಿಸುವ ಜನರ ಆಲೋಚನಾಧಾಟಿ ಅಥವಾ ವಿಚಾರಧಾರೆಯನ್ನು ನಾವು ಸ್ವೀಕರಿಸಬಾರದು. ಜ್ಞಾನೋಕ್ತಿ 17:12 ವಿಷಯವನ್ನು ಈ ರೀತಿಯಾಗಿ ತಿಳಿಸುತ್ತದೆ: “ಮೂರ್ಖತನದಲ್ಲಿ ಮುಣುಗಿರುವ ಮೂಢನಿಗೆ ಎದುರಾಗುವದಕ್ಕಿಂತಲೂ ಮರಿಗಳನ್ನು ಕಳೆದುಕೊಂಡ ಕರಡಿಗೆ ಎದುರಾಗುವದು ಲೇಸು.”
ಪ್ರಯೋಜನಗಳೇನು?
ಸಾಮಾನ್ಯ ಪರಿಜ್ಞಾನವನ್ನು ಬೆಳೆಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಅದು ನಮ್ಮ ಜೀವಿತವನ್ನು ಹೆಚ್ಚು ಆಸಕ್ತಿಕರವಾಗಿ ಮಾಡುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ. ಆಲೋಚಿಸದೆ ಮಾಡುವ ಕೆಲಸದಿಂದ ಅನೇಕವೇಳೆ ಉಂಟಾಗುವ ಆಶಾಭಂಗವನ್ನು ಸಾಮಾನ್ಯ ಪರಿಜ್ಞಾನವು ಕಡಿಮೆಗೊಳಿಸಬಹುದು. ಉತ್ತಮ ವಿವೇಚನೆಯ ಕೊರತೆಯುಳ್ಳವರು ತಮ್ಮ ಜೀವಿತವನ್ನು ಕಠಿನಗೊಳಿಸುತ್ತಾರೆ. “ಮೂಢರು . . . ಪಡುವ ಪ್ರಯಾಸದಿಂದ ಆಯಾಸವೇ” ಎನ್ನುತ್ತದೆ ಬೈಬಲ್. (ಪ್ರಸಂಗಿ 10:15) ಅಂಥ ವ್ಯಕ್ತಿಗಳು ಬಹಳವಾಗಿ ಶ್ರಮಪಟ್ಟರೂ ಆಯಾಸಗೊಂಡರೂ ಅವರು ಪ್ರಯೋಜನಾರ್ಹವಾದ ಏನನ್ನೂ ಸಾಧಿಸುವುದಿಲ್ಲ.
ಶುದ್ಧತೆ, ಸಂವಾದ, ಶ್ರಮಶೀಲತೆ, ಬಡತನವನ್ನು ನಿಭಾಯಿಸುವುದು ಮತ್ತು ಜೀವನದ ಇತರ ಅನೇಕ ವಿಷಯಗಳ ಕುರಿತು ಬೈಬಲ್ ಬಹಳಷ್ಟು ಪ್ರಾಯೋಗಿಕ ಸಲಹೆಯನ್ನು ನೀಡುತ್ತದೆ. ಜೀವನದಲ್ಲಿನ ಸೋಲುಗೆಲುವುಗಳು, ವಿವೇಕವನ್ನು ವ್ಯಕ್ತಪಡಿಸಲು ಸಹಾಯಮಾಡುವ ಬೈಬಲ್ ಮೂಲತತ್ತ್ವಗಳನ್ನು ಎಷ್ಟು ಉತ್ತಮವಾಗಿ ಅನ್ವಯಿಸಿಕೊಳ್ಳುತ್ತೇವೊ ಅದರ ಮೇಲೆ ಹೊಂದಿಕೊಂಡಿವೆ ಎಂಬುದನ್ನು ಲಕ್ಷಾಂತರ ಜನರು ಒಪ್ಪಿಕೊಳ್ಳುತ್ತಾರೆ.
ಸಾಮಾನ್ಯ ಪರಿಜ್ಞಾನವು, ವಿಸ್ತಾರವಾದ ಸಲಹೆಗಳ ಅಥವಾ ನಿಯಮಗಳ ಒಂದು ಕಟ್ಟನ್ನು ಕಣ್ಣುಮುಚ್ಚಿ ಅನ್ವಯಿಸುವುದಕ್ಕಿಂತ ಹೆಚ್ಚಿನದ್ದನ್ನು ಮಾಡಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಅದು ನಮಗೆ ನಮ್ಮ ಜವಾಬ್ದಾರಿಗಳನ್ನು ನೆರವೇರಿಸಲು ಸಹಾಯನೀಡುತ್ತದೆ. ಹಾಗಿದ್ದರೂ, ಸಾಮಾನ್ಯ ಪರಿಜ್ಞಾನವು ಜ್ಞಾನವನ್ನು ಪಡೆದುಕೊಳ್ಳುವುದಕ್ಕೆ ಒಂದು ಬದಲಿಯಾಗಿರುವುದಿಲ್ಲ. “ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು” ಎಂದು ಜ್ಞಾನೋಕ್ತಿ 1:5 ತಿಳಿಸುತ್ತದೆ. ನಾವು ಸಂಗ್ರಹಿಸುವ ಮಾಹಿತಿಯನ್ನು ವಿಶ್ಲೇಷಿಸಿ ನೋಡಿ, ಅದರಿಂದ ಸರಿಯಾದ ತೀರ್ಮಾನಕ್ಕೆ ಬರಲು ಸಹ ಕಲಿಯಬೇಕು. ಇದು ‘ವಿವೇಕದಿಂದ ನಡೆಯಲು’ ನಮಗೆ ಸಹಾಯಮಾಡುತ್ತದೆ.—ಜ್ಞಾನೋಕ್ತಿ 28:26, NW.
ಸಾಮಾನ್ಯ ಪರಿಜ್ಞಾನ ಮತ್ತು ವಿನಯಶೀಲತೆಯು ಒಂದಕ್ಕೊಂದು ಹೆಣೆದುಕೊಂಡಿದೆ. ನಾವು ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಲು ಬಯಸುವುದಾದರೂ, ಸರಿಯಾದ ವಿವೇಚನೆಯನ್ನು ಉಪಯೋಗಿಸಿ ನಮ್ಮ ಶಾರೀರಿಕ ಶಕ್ತಿಯ ಇತಿಮಿತಿಯೊಳಗೆಯೇ ನಾವಿರಬೇಕು. “ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ [“ಬಹಳವಾಗಿ,” NW] ಮಾಡುವವರಾಗಿರಿ” ಎಂದು ಅಪೊಸ್ತಲ ಪೌಲನು ಹೇಳುತ್ತಾನೆಂಬುದು ನಿಜ. (1 ಕೊರಿಂಥ 15:58) ಆದರೂ, ಈ ಬುದ್ಧಿವಾದವನ್ನು ಪ್ರಸಂಗಿ 9:4ರಲ್ಲಿ ದಾಖಲಿಸಲ್ಪಟ್ಟಿರುವ ಮೂಲತತ್ತ್ವದೊಂದಿಗೆ ಸಮತೂಕದಲ್ಲಿಡಬೇಕು. ಅಲ್ಲಿ ತಿಳಿಸುವುದು: “ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಲೇಸು.” ಯೆಹೋವನ ಸೇವೆಯನ್ನು ಮಾಡುತ್ತಿರುವಾಗ, ನಮ್ಮ ಆರೋಗ್ಯದ ಕಡೆಗೆ ಸರಿಯಾದ ಜಾಗ್ರತೆ ವಹಿಸುವುದು ನಾವು ಹೆಚ್ಚು ಸಮಯ ಜೀವಿಸುವಂತೆಯೂ ಕ್ರಿಯಾಶೀಲರಾಗಿ ಮುಂದುವರಿಯುವಂತೆಯೂ ಅನುಮತಿಸಬಹುದು. ಸಾಮಾನ್ಯ ಪರಿಜ್ಞಾನವು, ನ್ಯಾಯಸಮ್ಮತವಾದ ಸಮತೂಕವನ್ನು ಕಂಡುಕೊಳ್ಳುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಆ ಸಮತೂಕವು, ನಾವು ನಮ್ಮ ಆನಂದವನ್ನು ಕಳೆದುಕೊಳ್ಳದೆ ಅಗತ್ಯವಿರುವ ವಿಷಯಗಳನ್ನು ನಿರ್ವಹಿಸಲು ಸಹಾಯಮಾಡುತ್ತದೆ. ಹೌದು, ಸಾಮಾನ್ಯ ಪರಿಜ್ಞಾನವು ಅನೇಕ ಪ್ರಯೋಜನಗಳನ್ನು ತರುತ್ತದೆ.
[ಪಾದಟಿಪ್ಪಣಿ]
^ ಪ್ಯಾರ. 8 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 14ರಲ್ಲಿರುವ ಚಿತ್ರ]
ಬೈಬಲಿನಲ್ಲಿ ಉಪಯುಕ್ತಕರವಾದ ಸಲಹೆಯ ಭಂಡಾರವೇ ಇದೆ
[ಪುಟ 15ರಲ್ಲಿರುವ ಚಿತ್ರ]
ಗಮನಿಸುವುದು, ತರಬೇತಿ ಪಡೆದುಕೊಳ್ಳುವುದು ಮತ್ತು ಅನುಭವದ ಮೂಲಕ ಸಾಮಾನ್ಯ ಪರಿಜ್ಞಾನವನ್ನು ಗಳಿಸಬಹುದು