ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಈಗಿನ ಜೀವನ” —ಅದನ್ನು ಸಂಪೂರ್ಣವಾಗಿ ಆನಂದಿಸುವುದು!

“ಈಗಿನ ಜೀವನ” —ಅದನ್ನು ಸಂಪೂರ್ಣವಾಗಿ ಆನಂದಿಸುವುದು!

ಜೀವನ ಕಥೆ

“ಈಗಿನ ಜೀವನ”—⁠ಅದನ್ನು ಸಂಪೂರ್ಣವಾಗಿ ಆನಂದಿಸುವುದು!

ಟೆಡ್‌ ಬಕ್ಕಿಂಗ್‌ಹಮ್‌ ಅವರು ಹೇಳಿದಂತೆ

ನಾನು ಪೋಲಿಯೊ ರೋಗಕ್ಕೆ ತುತ್ತಾದಾಗ, ಪೂರ್ಣ ಸಮಯದ ಶುಶ್ರೂಷೆಯಲ್ಲಿ ಆರು ವರುಷಗಳು ಮತ್ತು ವಿವಾಹವಾಗಿ ಆರು ತಿಂಗಳುಗಳು ಕಳೆದಿದ್ದವು. ಅದು 1950ನೇ ಇಸವಿಯಾಗಿತ್ತು ಮತ್ತು ನನಗಾಗ ಕೇವಲ 24 ವರುಷವಾಗಿತ್ತು. ಒಂಬತ್ತು ತಿಂಗಳುಗಳ ವರೆಗೆ ನಾನು ಆಸ್ಪತ್ರೆಯಲ್ಲಿದ್ದಾಗ ನನ್ನ ಜೀವನದ ಕುರಿತು ಆಲೋಚಿಸಲು ನನಗೆ ಸಾಕಷ್ಟು ಸಮಯವು ದೊರಕಿತು. ನನ್ನ ಹೊಸ ಅಂಗವಿಕಲತೆಯೊಂದಿಗೆ, ನನಗೂ ನನ್ನ ಪತ್ನಿ ಜಾಯ್ಸ್‌ಗೂ ಯಾವ ಭವಿಷ್ಯತ್ತು ಕಾದಿತ್ತು?

ಒಬ್ಬ ಧಾರ್ಮಿಕ ವ್ಯಕ್ತಿಯಾಗಿರದ ನನ್ನ ತಂದೆಯವರು 1938ರಲ್ಲಿ ಸರಕಾರ * (ಇಂಗ್ಲಿಷ್‌) ಎಂಬ ಪುಸ್ತಕದ ಒಂದು ಪ್ರತಿಯನ್ನು ಪಡೆದುಕೊಂಡರು. ರಾಜಕೀಯ ಗೊಂದಲ ಮತ್ತು ಯುದ್ಧದ ಸಾಧ್ಯತೆಗಳು ಪ್ರಾಯಶಃ ಅವರು ಈ ಪುಸ್ತಕವನ್ನು ತೆಗೆದುಕೊಳ್ಳುವಂತೆ ಪ್ರಚೋದಿಸಿರಬಹುದು. ನನಗೆ ತಿಳಿದಿರುವ ಮಟ್ಟಿಗೆ ಅವರು ಈ ಪುಸ್ತಕವನ್ನು ಎಂದಿಗೂ ಓದಲೇ ಇಲ್ಲ, ಆದರೆ ಬಹಳ ಧಾರ್ಮಿಕ ಶ್ರದ್ಧೆಯಿದ್ದ ನನ್ನ ತಾಯಿಯವರು ಅದನ್ನು ಓದಿದರು. ಅದರಲ್ಲಿದ್ದ ಸಂದೇಶಕ್ಕೆ ಅವರು ತ್ವರಿತವಾಗಿ ಪ್ರತಿಕ್ರಿಯಿಸಿದರು. ಅವರು ಚರ್ಚ್‌ ಆಫ್‌ ಇಂಗ್ಲೆಂಡ್‌ಗೆ ರಾಜಿನಾಮೆ ನೀಡಿ, ನನ್ನ ತಂದೆಯವರ ವಿರೋಧದ ಎದುರಿನಲ್ಲಿಯೂ ಯೆಹೋವನ ಒಬ್ಬ ನಂಬಿಗಸ್ತ ಸಾಕ್ಷಿಯಾದರು ಮತ್ತು 1990ರಲ್ಲಿ ಅವರು ಮರಣಹೊಂದುವ ತನಕವೂ ನಂಬಿಗಸ್ತರಾಗಿ ಉಳಿದರು.

ಲಂಡನಿನ ದಕ್ಷಿಣದಲ್ಲಿರುವ ಎಪ್‌ಸಮ್‌ನಲ್ಲಿರುವ ರಾಜ್ಯ ಸಭಾಗೃಹಕ್ಕೆ ತಾಯಿಯವರು ನನ್ನನ್ನು ನನ್ನ ಮೊದಲ ಕೂಟಕ್ಕೆ ಕರೆದೊಯ್ದರು. ಹಿಂದೆ ಉಗ್ರಾಣವಾಗಿದ್ದ ಒಂದು ಸ್ಥಳದಲ್ಲಿ ಸಭೆಯು ಒಟ್ಟುಸೇರುತ್ತಿತ್ತು ಮತ್ತು ಆಗ ಯೆಹೋವನ ಸಾಕ್ಷಿಗಳ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತಿದ್ದ ಜೆ. ಎಫ್‌. ರದರ್‌ಫರ್ಡ್‌ರವರ ರೆಕಾರ್ಡ್‌ ಮಾಡಲ್ಪಟ್ಟಿದ್ದ ಒಂದು ಭಾಷಣವನ್ನು ನಾವು ಆಲಿಸಿದೆವು. ಅದು ನನ್ನ ಮೇಲೆ ಗಾಢವಾದ ಪ್ರಭಾವವನ್ನು ಬೀರಿತು.

ಲಂಡನಿನ ಮೇಲೆ ನಡೆಸಲ್ಪಟ್ಟ ವಿಮಾನದಾಳಿಯು ಅಲ್ಲಿನ ಜೀವನವನ್ನು ಇನ್ನಷ್ಟು ಅಪಾಯಕಾರಿಯನ್ನಾಗಿಸಿತು. ಆದುದರಿಂದಲೇ 1940ರಲ್ಲಿ ನನ್ನ ತಂದೆಯವರು ನಮ್ಮ ಕುಟುಂಬವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ನಾವು ಲಂಡನ್‌ನ ಪೂರ್ವಕ್ಕೆ 45 ಕಿಲೋಮೀಟರ್‌ ದೂರದಲ್ಲಿರುವ ಮೇಡನ್‌ಹೆಡ್‌ ಎಂಬ ಒಂದು ಚಿಕ್ಕ ಪಟ್ಟಣಕ್ಕೆ ಹೋದೆವು. ಈ ಸ್ಥಳಾಂತರವು ಬಹಳ ಪ್ರಯೋಜನಕಾರಿಯಾಗಿ ಪರಿಣಮಿಸಿತು, ಏಕೆಂದರೆ 30 ಸದಸ್ಯರಿಂದ ಕೂಡಿದ ಅಲ್ಲಿನ ಸಭೆಯು ನಮಗೆ ಉತ್ತೇಜನದ ಅತ್ಯುತ್ತಮ ಮೂಲವಾಗಿತ್ತು. 1917ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಿದ್ದು, ಆಧ್ಯಾತ್ಮಿಕವಾಗಿ ಬಲಿಷ್ಠರಾಗಿದ್ದ ಫ್ರೆಡ್‌ ಸ್ಮಿಥ್‌ರವರು ನನ್ನ ಬಗ್ಗೆ ವೈಯಕ್ತಿಕ ಕಾಳಜಿಯನ್ನು ವಹಿಸಿದರು ಮತ್ತು ಸಾರುವ ಕೆಲಸದಲ್ಲಿ ಹೆಚ್ಚು ಪರಿಣಾಮಕಾರಿಯಾಗುವಂತೆ ನನಗೆ ತರಬೇತಿನೀಡಿದರು. ಅವರ ಮಾದರಿ ಮತ್ತು ಪ್ರೀತಿಪರ ಸಹಾಯಕ್ಕಾಗಿ ಈಗಲೂ ನಾನು ಆಭಾರಿಯಾಗಿದ್ದೇನೆ.

ಪೂರ್ಣ ಸಮಯದ ಸೇವೆಯನ್ನು ಆರಂಭಿಸುವುದು

ಇಸವಿ 1941ರಲ್ಲಿ, ನಾನು 15 ವರುಷದವನಾಗಿದ್ದಾಗ, ಚಳಿಗಾಲದ ಮಾರ್ಚ್‌ ತಿಂಗಳಿನ ಒಂದು ದಿನ ಥೇಮ್ಸ್‌ ನದಿಯಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡೆ. ಆ ಸಮಯದಷ್ಟಕ್ಕೆ ನನ್ನ ಅಣ್ಣನಾದ ಜಿಮ್‌ ಪೂರ್ಣ ಸಮಯದ ಸೌವಾರ್ತಿಕನಾಗಿದ್ದನು. ಅವನು ಮತ್ತು ಅವನ ಪತ್ನಿ ಮ್ಯಾಜ್‌, ತಮ್ಮ ಜೀವಿತದ ಹೆಚ್ಚಿನ ವರುಷಗಳನ್ನು ಯೆಹೋವನ ಸೇವೆಯಲ್ಲಿ, ಬ್ರಿಟನಿನಾದ್ಯಂತ ಸರ್ಕಿಟ್‌ ಮತ್ತು ಜಿಲ್ಲಾ ನೇಮಕಗಳಲ್ಲಿ ಕಳೆದರು. ಇಂದು ಅವರು ಬರ್ಮಿಂಗ್‌ಹಮ್‌ನಲ್ಲಿ ವಾಸಿಸುತ್ತಿದ್ದಾರೆ. ನನ್ನ ತಂಗಿ ರೋಬೀನ ಮತ್ತು ಅವಳ ಗಂಡ ಫ್ರ್ಯಾಂಕ್‌ ಸಹ ಇಂದಿಗೂ ಯೆಹೋವನ ನಂಬಿಗಸ್ತ ಸೇವಕರಾಗಿ ಉಳಿದಿದ್ದಾರೆ.

ವಸ್ತ್ರ ಉತ್ಪನ್ನಗಾರನಿಗೆ ನಾನು ಒಬ್ಬ ಅಕೌಂಟೆಂಟಾಗಿ ಕೆಲಸಮಾಡುತ್ತಿದ್ದೆ. ಒಂದು ದಿನ ಮ್ಯಾನೇಜಿಂಗ್‌ ಡೈರೆಕ್ಟರ್‌ ನನ್ನನ್ನು ಅವರ ಆಫೀಸಿಗೆ ಕರೆದು, ಕಾರ್ಖಾನೆಯ ಖರೀದಿದಾರ ಹುದ್ದೆಗೆ ನನ್ನನ್ನು ನೇಮಿಸಲು ಅವರು ಇಚ್ಛಿಸುವುದಾಗಿ ತಿಳಿಸಿದರು. ಆದರೆ ನಾನು ಬಹಳ ದಿವಸಗಳಿಂದ ನನ್ನ ಅಣ್ಣನ ಮಾದರಿಯನ್ನೇ ಅನುಕರಿಸಲು ಯೋಚಿಸುತ್ತಿದ್ದದರಿಂದ ನನ್ನ ಮಾಲೀಕರ ನೀಡಿಕೆಯನ್ನು ವಿನಯದಿಂದ ನಿರಾಕರಿಸಿದೆ ಮತ್ತು ಕಾರಣವನ್ನು ಸಹ ತಿಳಿಸಿದೆ. ಆಶ್ಚರ್ಯದ ಸಂಗತಿಯೇನೆಂದರೆ, ನಾನು ಇಂಥ ಯೋಗ್ಯವಾದ ಕ್ರೈಸ್ತ ಚಟುವಟಿಕೆಯನ್ನು ಬೆನ್ನಟ್ಟಲು ಬಯಸುವುದಕ್ಕಾಗಿ ಅವರು ನನ್ನನ್ನು ಶ್ಲಾಘಿಸಿದರು. 1944ರಲ್ಲಿ ನಾರ್ತ್‌ಆಮ್ಟನ್‌ನಲ್ಲಿ ನಡೆದ ಜಿಲ್ಲಾ ಅಧಿವೇಶನದ ನಂತರ ನಾನು ಒಬ್ಬ ಪೂರ್ಣ ಸಮಯದ ಸೌವಾರ್ತಿಕನಾದೆ.

ನನ್ನ ಮೊದಲ ನೇಮಕವು ಡೆವನ್‌ ಪ್ರಾಂತದ ಎಕ್‌ಸಟರ್‌ ನಗರವಾಗಿತ್ತು. ಯುದ್ಧ ಸಮಯದ ಬಾಂಬ್‌ ದಾಳಿಯಿಂದ ಆಗ ತಾನೇ ಆ ನಗರವು ನಿಧಾನವಾಗಿ ಚೇತರಿಸಿಕೊಳ್ಳುತ್ತಿತ್ತು. ಫ್ರ್ಯಾಂಕ್‌ ಮತ್ತು ರೂತ್‌ ಮಿಡಲ್ಟನ್‌ ಎಂಬ ಇಬ್ಬರು ಪಯನೀಯರರು ವಾಸಿಸುತ್ತಿದ್ದ ಅಪಾರ್ಟ್‌ಮಂಟ್‌ನಲ್ಲಿಯೇ ನಾನೂ ವಾಸಿಸತೊಡಗಿದೆ. ಆಗ ನಾನು ಕೇವಲ 18 ವರುಷದವನಾಗಿದ್ದೆ. ಬಟ್ಟೆ ಒಗೆಯಲು ಮತ್ತು ಅಡಿಗೆ ಮಾಡಲು ನನಗೆ ಸ್ವಲ್ಪಮಟ್ಟಿಗೆ ತಿಳಿದಿತ್ತು. ಆದರೆ, ನಾನು ನನ್ನ ಕುಶಲತೆಗಳನ್ನು ಬೆಳೆಸುತ್ತಾ ಹೋದಂತೆ ಪರಿಸ್ಥಿತಿಯು ಉತ್ತಮಗೊಂಡಿತು.

ಐವತ್ತು ವರುಷ ಪ್ರಾಯದ ವಿಕ್ಟರ್‌ ಗರ್ಡ್‌ ಸಾರುವ ಕೆಲಸದಲ್ಲಿ ನನ್ನ ಸಂಗಡಿಗರಾಗಿದ್ದರು. ಅವರು ಐರ್ಲೆಂಡ್‌ನವರು ಮತ್ತು 1920ನೇ ಇಸವಿಯಿಂದ ಸಾಕ್ಷಿಕಾರ್ಯದಲ್ಲಿ ಒಳಗೂಡಿದ್ದರು. ನನ್ನ ಸಮಯವನ್ನು ಉಪಯುಕ್ತ ರೀತಿಯಲ್ಲಿ ವಿನಿಯೋಗಿಸುವಂತೆ, ಬೈಬಲನ್ನು ಓದುವುದರಲ್ಲಿ ಆಳವಾದ ಆಸಕ್ತಿಯನ್ನು ಬೆಳೆಸಿಕೊಳ್ಳುವಂತೆ ಮತ್ತು ವಿಭಿನ್ನ ಬೈಬಲ್‌ ಭಾಷಾಂತರಗಳ ಮೌಲ್ಯವನ್ನು ಗ್ರಹಿಸುವಂತೆ ಅವರು ನನಗೆ ಕಲಿಸಿದರು. ನನ್ನ ಬೆಳವಣಿಗೆಯ ಆ ವರ್ಷಗಳಲ್ಲಿ, ವಿಕ್ಟರ್‌ರವರ ಸ್ಥಿರತೆಯ ಮಾದರಿಯೇ ನನಗೆ ಅಗತ್ಯವಾಗಿತ್ತು.

ತಾಟಸ್ಥ್ಯದ ಪಂಥಾಹ್ವಾನ

ಯುದ್ಧವು ಕೊನೆಗೊಳ್ಳಲಿತ್ತಾದರೂ ಅಧಿಕಾರಿಗಳು ಯುವ ಜನರನ್ನು ಮಿಲಿಟರಿ ಸೇವೆಗೆ ಒತ್ತಾಯಿಸುತ್ತಿದ್ದರು. 1943ರಲ್ಲಿ ನಾನು ಮೇಡನ್‌ಹೆಡ್‌ನ ನ್ಯಾಯಮಂಡಲಿಯ ಮುಂದೆ ಹಾಜರಾಗಿ, ನಾನೊಬ್ಬ ಸೌವಾರ್ತಿಕನಾಗಿರುವ ಕಾರಣ ಮಿಲಿಟರಿ ಸೇವೆಯಲ್ಲಿ ಭಾಗವಹಿಸುವುದಿಲ್ಲ ಎಂಬ ನನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದೆ. ನನ್ನ ಬೇಡಿಕೆಯು ತಳ್ಳಿಹಾಕಲ್ಪಟ್ಟಿತ್ತಾದರೂ, ನಾನು ನನ್ನ ಶುಶ್ರೂಷಾ ನೇಮಕಕ್ಕಾಗಿ ಎಕ್‌ಸಟರ್‌ ನಗರಕ್ಕೆ ಹೋಗಲು ನಿರ್ಣಯಿಸಿದೆ. ಆದುದರಿಂದ, ಸ್ಥಳಿಕ ಕೋರ್ಟಿನ ಮುಂದೆ ಹಾಜರಾಗುವಂತೆ ನನಗೆ ಕೊನೆಗೂ ಆಜ್ಞಾಪಿಸಲಾದದ್ದು ಎಕ್‌ಸಟರ್‌ ನಗರದಲ್ಲಿಯೇ. ಸೆರಮನೆಯಲ್ಲಿ ಆರು ತಿಂಗಳಿನ ಕಠಿನ ಕೆಲಸವನ್ನು ನನಗೆ ವಿಧಿಸಲಾಯಿತು. “ಇನ್ನಷ್ಟು ಹೆಚ್ಚು ತಿಂಗಳು ನಿನ್ನನ್ನು ಸೆರೆಮನೆಯಲ್ಲಿ ಇಡಲು ಸಾಧ್ಯವಾಗಲಿಲ್ಲ ಎಂಬುದಕ್ಕಾಗಿ ನಾನು ದುಃಖಿಸುತ್ತೇನೆ” ಎಂದು ಮ್ಯಾಜಿಸ್ಟ್ರೇಟ್‌ ನನಗೆ ಹೇಳಿದರು. ಆ ಆರು ತಿಂಗಳುಗಳನ್ನು ಸೆರೆಮನೆಯಲ್ಲಿ ಕಳೆದ ನಂತರ, ನನ್ನನ್ನು ಪುನಃ ಒಮ್ಮೆ ನಾಲ್ಕು ತಿಂಗಳಿಗಾಗಿ ಸೆರೆಮನೆಗೆ ಕಳುಹಿಸಲಾಯಿತು.

ಸೆರೆಮನೆಯಲ್ಲಿದ್ದವರಲ್ಲಿ ನಾನೊಬ್ಬನೇ ಯೆಹೋವನ ಸಾಕ್ಷಿಯಾಗಿದ್ದ ಕಾರಣ ಅಲ್ಲಿನ ಕಾವಲುಗಾರರು ನನ್ನನ್ನು ಯೆಹೋವ ಎಂಬುದಾಗಿ ಕರೆದರು. ಈ ಹೆಸರಿನಿಂದ ನನ್ನನ್ನು ಹಾಜರಿ ಕೂಗುವಾಗ ನನಗೆ ಪ್ರತಿಕ್ರಿಯಿಸಲು ಬೇಸರವಾಗುತ್ತಿತ್ತು, ಆದರೆ ಅದೇ ಸಮಯದಲ್ಲಿ ಪ್ರತಿ ದಿನ ದೇವರ ಹೆಸರು ಘೋಷಿಸಲ್ಪಡುವುದನ್ನು ಕೇಳುವುದು ಅದೆಂಥ ಸದವಕಾಶವಾಗಿತ್ತು! ಅಷ್ಟುಮಾತ್ರವಲ್ಲದೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿ ನಾನು ನನ್ನ ಶುದ್ಧಾಂತಃಕರಣದ ನಿಲುವಿನ ಕಾರಣ ಸೆರೆಮನೆಯಲ್ಲಿದ್ದೇನೆ ಎಂಬುದನ್ನು ಇತರ ಸೆರೆವಾಸಿಗಳು ತಿಳಿಯುವಂತೆಯೂ ಇದು ಮಾಡಿತು. ಅನಂತರ, ನಾರ್ಮನ್‌ ಕ್ಯಾಸ್ಟ್ರೋವನ್ನು ಸಹ ಇದೇ ಸೆರೆಮನೆಗೆ ಹಾಕಲಾಯಿತು ಮತ್ತು ಈ ಕಾರಣ ನನ್ನ ಹೆಸರು ಈಗ ಬದಲಾಯಿತು. ನಂತರ ನಮ್ಮಿಬ್ಬರನ್ನು ಮೋಶೆ ಮತ್ತು ಆರೋನ ಎಂದು ಕರೆಯುತ್ತಿದ್ದರು.

ನನ್ನನ್ನು ಎಕ್‌ಸಟರ್‌ನಿಂದ ಬ್ರಿಸ್ಟಲ್‌ಗೆ ಸ್ಥಳಾಂತರಿಸಲಾಯಿತು ಮತ್ತು ಕೊನೆಗೆ ವಿಂಚೆಸ್ಟರ್‌ ಸೆರೆಮನೆಗೆ ಹಾಕಲಾಯಿತು. ಅಲ್ಲಿ ಪರಿಸ್ಥಿತಿಗಳು ಯಾವಾಗಲೂ ಹಿತಕರವಾಗಿರದಿದ್ದರೂ, ಅವು ನಮಗೆ ನಗಲು ಅವಕಾಶಗಳನ್ನು ಒದಗಿಸಿದವು. ವಿಂಚೆಸ್ಟರ್‌ನಲ್ಲಿರುವಾಗ ನಾನು ಮತ್ತು ನಾರ್ಮನ್‌, ಜ್ಞಾಪಕಾಚರಣೆಯನ್ನು ಒಟ್ಟಿಗೆ ನಡೆಸಿದೆವು. ಸೆರೆಮನೆಯಲ್ಲಿ ನಮ್ಮನ್ನು ಭೇಟಿನೀಡಿದ ಸಹೋದರ ಫ್ರಾನ್ಸಿಸ್‌ ಕುಕ್‌ರವರು ನಮಗಾಗಿ ಒಂದು ಉತ್ತಮ ಭಾಷಣವನ್ನು ನೀಡಿದರು.

ಯುದ್ಧದ ನಂತರದ ವರುಷಗಳಲ್ಲಿನ ಬದಲಾವಣೆಗಳು

ಇಸವಿ 1946ರಲ್ಲಿ ಬ್ರಿಸ್ಟಲ್‌ನಲ್ಲಿ, “ದೇವರು ಸತ್ಯವಂತನೇ ಸರಿ” ಎಂಬ ಪುಸ್ತಕವು ಬಿಡುಗಡೆಯಾದ ಅಧಿವೇಶನವೊಂದರಲ್ಲಿ, ನಾನು ಬಹಳ ಸುಂದರಿಯಾದ ಒಬ್ಬ ಯುವತಿಯನ್ನು ಭೇಟಿಯಾದೆ. ಅವಳ ಹೆಸರು ಜಾಯ್ಸ್‌ ಮೋರ್‌. ಅವಳು ಡೆವನ್‌ ಪ್ರಾಂತದಲ್ಲಿ ಪಯನೀಯರ್‌ ಸೇವೆಯನ್ನು ಮಾಡುತ್ತಿದ್ದಳು. ನಮ್ಮ ಸ್ನೇಹವು ಅಂಕುರಿಸಿತು ಮತ್ತು ನಾಲ್ಕು ವರುಷಗಳ ನಂತರ ನಾವು ಟೈವರ್ಟನ್‌ನಲ್ಲಿ ವಿವಾಹವಾದೆವು. 1947ರಿಂದ ನಾನು ಅದೇ ಸ್ಥಳದಲ್ಲಿ ವಾಸಿಸುತ್ತಿದ್ದೆ. ನಾವು ಒಂದು ಬಾಡಿಗೆ ಮನೆಯನ್ನು ಪಡೆದುಕೊಂಡೆವು. ಆ ಮನೆಗೆ ನಾವು ವಾರಕ್ಕೆ 15 ಷಿಲಿಂಗ್ಸ್‌ (1.10 ಅಮೆರಿಕನ್‌ ಡಾಲರ್‌) ಬಾಡಿಗೆ ಕೊಡುತ್ತಿದ್ದೆವು. ನಮ್ಮ ಜೀವನವು ನಿಜವಾಗಿಯೂ ಬಹಳ ಸಂತೋಷಕರವಾಗಿತ್ತು!

ನಮ್ಮ ಮದುವೆಯ ಮೊದಲನೇ ವರುಷದಲ್ಲಿ, ನಾವು ದಕ್ಷಿಣ ಬ್ರಿಕ್ಸ್‌ಹಮ್‌ಗೆ ಸ್ಥಳಾಂತರಿಸಿದೆವು. ಅದೊಂದು ಸುಂದರವಾದ ರೇವುಪಟ್ಟಣವಾಗಿದೆ. ಅದೇ ಸ್ಥಳದಲ್ಲಿ, ಎಳೆಬಲೆ ಬೀಸಿ ಮೀನು ಹಿಡಿಯುವ ಕೌಶಲವು ಪ್ರಪ್ರಥಮವಾಗಿ ಆರಂಭಗೊಂಡಿತು. ಆದರೆ ನಾವು ಅಲ್ಲಿ ಬಹಳ ಕಾಲ ವಾಸಿಸಲಿಲ್ಲ. ಏಕೆಂದರೆ, ಲಂಡನಿನ ಅಧಿವೇಶನಕ್ಕೆ ಪ್ರಯಾಣಿಸುತ್ತಿದ್ದಾಗ ನಾನು ಪೋಲಿಯೊ ರೋಗಕ್ಕೆ ತುತ್ತಾದೆ ಮತ್ತು ಕೋಮಾವಸ್ಥೆಗೆ ತಲಪಿದೆ. ಆರಂಭದಲ್ಲಿ ತಿಳಿಸಿದಂತೆ ನಾನು ಒಂಬತ್ತು ತಿಂಗಳುಗಳ ನಂತರವೇ ಆಸ್ಪತ್ರೆಯಿಂದ ಹೋಗಗೊಡಿಸಲ್ಪಟ್ಟೆ. ನನ್ನ ಬಲಗೈ ಮತ್ತು ಎರಡೂ ಕಾಲುಗಳು ತೀವ್ರವಾಗಿ ಬಾಧಿತವಾಗಿದ್ದವು. ಈಗಲೂ ಅವು ಹೆಚ್ಚುಕಡಿಮೆ ಅದೇ ಸ್ಥಿತಿಯಲ್ಲಿವೆ. ಆಗ ನಾನು ಕೋಲು ಹಿಡಿದು ನಡೆಯಬೇಕಾಯಿತು. ನನ್ನ ಹೆಂಡತಿಯು ಯಾವಾಗಲೂ ಸಂತೋಷದಿಂದ ನನ್ನೊಂದಿಗಿದ್ದಳು ಮತ್ತು ಅವಳು ಆಗಲೂ ಪೂರ್ಣ ಸಮಯದ ಸೇವೆಯನ್ನು ಮುಂದುವರಿಸುತ್ತಿದ್ದ ಕಾರಣ ನನಗೆ ಉತ್ತೇಜನದ ಮೂಲವಾಗಿದ್ದಳು. ಆದರೆ ಈಗ ನಾವು ಏನು ಮಾಡುವುದು? ಯೆಹೋವನ ಕೈ ಮೋಟುಗೈಯಲ್ಲ ಎಂಬುದನ್ನು ನಾನು ಬೇಗನೆ ಮನಗಾಣಲಿದ್ದೆ.

ಮುಂದಿನ ವರ್ಷ ನಾವು ಲಂಡನಿನ ವಿಂಬಲ್ಡನ್‌ನಲ್ಲಿ ನಡೆದ ಸಮ್ಮೇಳನಕ್ಕೆ ಹಾಜರಾದೆವು. ಅಷ್ಟರೊಳಗಾಗಿ ನಾನು ಕೋಲಿನ ಸಹಾಯವಿಲ್ಲದೆ ನಡೆಯುತ್ತಿದ್ದೆ. ಅಲ್ಲಿ ನಾವು, ಬ್ರಿಟನ್‌ನ ಕೆಲಸವನ್ನು ನೋಡಿಕೊಳ್ಳುತ್ತಿದ್ದ ಪ್ರೈಸ್‌ ಹ್ಯೂಗ್ಸ್‌ರವರನ್ನು ಭೇಟಿಯಾದೆವು. ಅವರು ನನಗೆ ವಂದಿಸಿದರು ಮತ್ತು “ನೀವು ಸರ್ಕಿಟ್‌ ಕೆಲಸವನ್ನು ಆರಂಭಿಸಬೇಕೆಂದು ನಾವು ಬಯಸುತ್ತೇವೆ!” ಎಂದು ಹೇಳಿದರು. ಇದಕ್ಕಿಂತ ಹೆಚ್ಚಿನ ಸಂತೋಷ ನನಗೆ ಬೇರೆ ಯಾವುದರಿಂದಲೂ ಸಿಗುತ್ತಿರಲಿಲ್ಲ! ಆದರೆ ಆರೋಗ್ಯದ ದೃಷ್ಟಿಯಿಂದ ನಾನು ಈ ಕೆಲಸವನ್ನು ಮಾಡಲು ಸಮರ್ಥನಾಗಿದ್ದೇನೊ? ಇದರ ಕುರಿತು ನಾನು ಮತ್ತು ಜಾಯ್ಸ್‌ ಯೋಚಿಸಿದೆವು. ಆದರೆ ಒಂದು ವಾರದ ತರಬೇತಿ ಮತ್ತು ಯೆಹೋವನ ಮೇಲಣ ಪೂರ್ಣ ಭರವಸೆಯಿಂದ, ನನ್ನನ್ನು ಸರ್ಕಿಟ್‌ ಮೇಲ್ವಿಚಾರಕನಾಗಿ ಸೇವೆಸಲ್ಲಿಸುವಂತೆ ಎಲ್ಲಿ ನೇಮಿಸಲಾಗಿತ್ತೊ ಆ ನೈರುತ್ಯ ಇಂಗ್ಲೆಂಡಿಗೆ ನಾವು ಹಿಂದಿರುಗಿ ಹೋದೆವು. ಆಗ ನಾನು ಕೇವಲ 25 ವರುಷದವನಾಗಿದ್ದೆ, ಆದರೆ ಆಗ ನನಗೆ ಬಹಳ ಸಹಾಯಮಾಡಿದ ಸಾಕ್ಷಿಗಳ ದೀನತೆ ಮತ್ತು ತಾಳ್ಮೆಯನ್ನು ನಾನೀಗಲೂ ಆಳವಾದ ಗಣ್ಯತೆಯಿಂದ ನೆನಪಿಸಿಕೊಳ್ಳಬಲ್ಲೆ.

ವಿಭಿನ್ನವಾದ ಎಲ್ಲ ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ, ಸಭೆಗೆ ಭೇಟಿನೀಡುವುದು ತಾನೇ ನಮ್ಮನ್ನು ಕ್ರೈಸ್ತ ಸಹೋದರ ಸಹೋದರಿಯರ ಹತ್ತಿರಕ್ಕೆ ತಂದಿತು ಎಂಬುದನ್ನು ನಾನು ಮತ್ತು ಜಾಯ್ಸ್‌ ಕಂಡುಕೊಂಡೆವು. ನಮ್ಮ ಬಳಿ ಕಾರ್‌ ಇರಲಿಲ್ಲ. ನಾವು ರೈಲು ಇಲ್ಲವೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆವು. ನನ್ನ ಅಸ್ವಸ್ಥತೆಯ ಕಾರಣ ನನಗೆ ಕೆಲವು ಇತಿಮಿತಿಗಳಿದ್ದರೂ, 1957ರ ತನಕ ನಾವು ನಮ್ಮ ವಿಶೇಷ ಸುಯೋಗದಲ್ಲಿ ಆನಂದಿಸಿದೆವು. ಅದೊಂದು ಸಂತೃಪ್ತಿಕರ ಜೀವನವಾಗಿತ್ತು, ಆದರೆ ಆ ವರುಷದಲ್ಲಿ ಇನ್ನೊಂದು ಪಂಥಾಹ್ವಾನವು ಎದುರಾಯಿತು.

ಮಿಷನೆರಿ ಸೇವೆ

ಗಿಲ್ಯಡ್‌ನ 30ನೇ ತರಗತಿಯನ್ನು ಹಾಜರಾಗಲು ನಮಗೆ ಆಮಂತ್ರಣವು ದೊರೆತಾಗ ನಾವು ರೋಮಾಂಚನಗೊಂಡೆವು. ನನ್ನ ಶಾರೀರಿಕ ಇತಿಮಿತಿಗಳನ್ನು ನಾನು ಉತ್ತಮವಾಗಿ ನಿಭಾಯಿಸುತ್ತಿದ್ದೆ, ಆದುದರಿಂದ ನಾನು ಮತ್ತು ಜಾಯ್ಸ್‌ ಈ ಆಮಂತ್ರಣವನ್ನು ಸ್ವೀಕರಿಸಿದೆವು. ಯೆಹೋವನ ಚಿತ್ತವನ್ನು ಮಾಡಲು ನಾವು ಪ್ರಯತ್ನಿಸುವುದಾದರೆ ಆತನು ಯಾವಾಗಲೂ ನಮಗೆ ಬಲವನ್ನು ಒದಗಿಸುತ್ತಾನೆಂದು ನಾವು ಅನುಭವದಿಂದ ಸವಿದುನೋಡಿದೆವು. ಅಮೆರಿಕದ ನ್ಯೂ ಯಾರ್ಕ್‌ನ ಸುಂದರ ಸ್ಥಳವಾದ ಸೌತ್‌ ಲ್ಯಾನ್‌ಸಿಂಗ್‌ನಲ್ಲಿದ್ದ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಲ್ಲಿ ಐದು ತಿಂಗಳ ತೀವ್ರ ತರಬೇತಿಯು ಬೇಗನೆ ಮುಗಿದು ಹೋಯಿತು. ವಿದ್ಯಾರ್ಥಿಗಳು ಮುಖ್ಯವಾಗಿ ಸಂಚರಣ ಕೆಲಸದಲ್ಲಿದ್ದ ವಿವಾಹಿತ ದಂಪತಿಗಳಾಗಿದ್ದರು. ಯಾರಿಗಾದರೂ ವಿದೇಶಿ ಮಿಷನೆರಿ ಕ್ಷೇತ್ರದಲ್ಲಿ ಸ್ವಯಂ ಸೇವಕರಾಗಿ ಹೋಗಲು ಇಷ್ಟವಿದೆಯೊ ಎಂದು ಕೇಳಿದಾಗ, ಹೋಗಲು ಸಿದ್ಧರಿದ್ದವರ ಗುಂಪಿನಲ್ಲಿ ನಾವೂ ಇದ್ದೆವು. ನಮ್ಮನ್ನು ಎಲ್ಲಿಗೆ ಕಳುಹಿಸಲಾಯಿತು? ಪೂರ್ವ ಆಫ್ರಿಕದ ಯುಗಾಂಡಕ್ಕೆ!

ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಕಾರ್ಯವು ಯುಗಾಂಡದಲ್ಲಿ ನಿಷೇಧಿಸಲಾಗಿದ್ದ ಕಾರಣ, ನಾನು ಆ ಸ್ಥಳದಲ್ಲಿ ನೆಲೆಸಿ ಒಂದು ಐಹಿಕ ಉದ್ಯೋಗವನ್ನು ಕಂಡುಕೊಳ್ಳುವಂತೆ ಕೇಳಿಕೊಳ್ಳಲಾಯಿತು. ರೈಲು ಮತ್ತು ಹಡಗಿನ ಮೂಲಕ ಬಹಳಷ್ಟು ಪ್ರಯಾಣಿಸಿದ ನಂತರ ನಾವು ಯುಗಾಂಡದ ಕಂಪಾಲಕ್ಕೆ ತಲಪಿದೆವು. ವಲಸೆಗಾರಿಕೆಗೆ ಸಂಬಂಧಿಸಿದ ಅಲ್ಲಿನ ಅಧಿಕಾರಿಗಳಿಗೆ ನಮ್ಮನ್ನು ಕಂಡು ಸಂತೋಷವಾಗಲಿಲ್ಲ. ಕೇವಲ ಕೆಲವೇ ತಿಂಗಳುಗಳ ಕಾಲ ಅಲ್ಲಿ ವಾಸಿಸಲು ಅವರು ನಮಗೆ ಅನುಮತಿಸಿದರು. ಅನಂತರ ಆ ಸ್ಥಳವನ್ನು ಬಿಟ್ಟು ಹೋಗುವಂತೆ ಆದೇಶಿಸಲಾಯಿತು. ಮುಖ್ಯ ಕಾರ್ಯಾಲಯದಿಂದ ಬಂದ ಸಲಹೆಯ ಮೇರೆಗೆ ನಾವು ಉತ್ತರ ರೊಡೇಶ್ಯಕ್ಕೆ (ಈಗ ಸಾಂಬಿಯ) ಪ್ರಯಾಣಿಸಿದೆವು. ಅಲ್ಲಿ, ನಮ್ಮ ನಾಲ್ವರು ಗಿಲ್ಯಡ್‌ ಸಹಪಾಠಿಗಳಾದ ಫ್ರ್ಯಾಂಕ್‌ ಮತ್ತು ಕ್ಯಾರೀ ಲೂವಿಸ್‌ ಹಾಗೂ ಹೇಸ್‌ ಮತ್ತು ಹ್ಯಾರಿಯೆಟ್‌ ಹಾಸ್ಕನ್ಸ್‌ರನ್ನು ಭೇಟಿಯಾಗಿ ನಾವು ಬಹಳ ಸಂತೋಷಪಟ್ಟೆವು. ಅಲ್ಲಿಂದ ನಮ್ಮನ್ನು ದಕ್ಷಿಣ ರೊಡೇಶ್ಯಕ್ಕೆ (ಈಗ ಸಿಂಬಾಬ್ವೆ) ನೇಮಿಸಲಾಯಿತು.

ನಾವು ರೈಲಿನಲ್ಲಿ ಪ್ರಯಾಣಿಸಿದೆವು ಮತ್ತು ಬೂಲಾವಾಯೋ ಪಟ್ಟಣವನ್ನು ತಲಪುವ ಮುನ್ನ ನಮಗೆ ವಿಕ್ಟೋರಿಯಾ ಫಾಲ್ಸ್‌ ನೋಡುವ ಸಂದರ್ಭವು ದೊರಕಿತು. ಆ ಸ್ಥಳದಲ್ಲಿ ನೆಲೆಸಿದ ಯೆಹೋವನ ಸಾಕ್ಷಿಗಳಲ್ಲಿ ಮೊದಲಿಗರಾದ ಮಕ್ಲಕೀ ಕುಟುಂಬದೊಂದಿಗೆ ನಾವು ಸ್ವಲ್ಪ ಸಮಯ ಉಳುಕೊಂಡೆವು. ಮುಂದಿನ 16 ವರುಷಗಳಲ್ಲಿ ಅವರನ್ನು ಇನ್ನೂ ಉತ್ತಮವಾಗಿ ತಿಳಿದುಕೊಳ್ಳುವ ಸುಯೋಗ ನಮಗೆ ದೊರಕಿತು.

ಬದಲಾವಣೆಗಳಿಗೆ ಹೊಂದಿಕೊಳ್ಳುವುದು

ಆಫ್ರಿಕ ಕ್ಷೇತ್ರದ ಪರಿಚಯವನ್ನು ಮಾಡಿಕೊಳ್ಳಲು ಎರಡು ವಾರಗಳ ತರಬೇತಿ ಪಡೆದುಕೊಂಡ ನಂತರ, ನಾನು ಜಿಲ್ಲಾ ಮೇಲ್ವಿಚಾರಕನಾಗಿ ನೇಮಿಸಲ್ಪಟ್ಟೆ. ಆಫ್ರಿಕದ ಕಾಡು ಪ್ರದೇಶದಲ್ಲಿ ಸಾಕ್ಷಿನೀಡುವಾಗ ನಾವು ನೀರು, ಆಹಾರ, ಹಾಸಿಗೆ, ಬಟ್ಟೆ, ಒಂದು ಫಿಲ್ಮ್‌ ಪ್ರೊಜೆಕ್ಟರ್‌ ಮತ್ತು ಇಲೆಕ್ಟ್ರಿಕ್‌ ಜನರೇಟರ್‌, ಒಂದು ದೊಡ್ಡ ಸ್ಕ್ರೀನ್‌ ಮತ್ತು ಇತರ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕಿತ್ತು. ಇವೆಲ್ಲವುಗಳನ್ನು ಒಂದು ಟ್ರಕ್‌ನಲ್ಲಿ ಇಟ್ಟು, ನಾವು ಸಹ ಅದರಲ್ಲಿ ಕುಳಿತು, ಉಬ್ಬುತಗ್ಗುಗಳುಳ್ಳ ರಸ್ತೆಯಲ್ಲಿ ಪ್ರಯಾಣಿಸಬೇಕಿತ್ತು.

ನಾನು ಆಫ್ರಿಕದಲ್ಲಿದ್ದ ಸರ್ಕಿಟ್‌ ಮೇಲ್ವಿಚಾರಕರೊಂದಿಗೆ ಕೆಲಸಮಾಡಿದೆ, ಮತ್ತು ಜಾಯ್ಸ್‌, ನಮ್ಮನ್ನು ಜೊತೆಗೂಡಿದ ಅವರ ಹೆಂಡತಿ ಮಕ್ಕಳಿಗೆ ಸಂತೋಷದಿಂದ ಸಹಾಯಮಾಡಿದಳು. ಆಫ್ರಿಕದ ಪೊದೆಗಳ ಮಧ್ಯದಿಂದ, ಅದೂ ಮುಖ್ಯವಾಗಿ ನಡು ಬಿಸಿಲಿನ ಸಮಯದಲ್ಲಿ ನಡೆಯುವುದು ತೀರ ಕಷ್ಟಕರವಾಗಿತ್ತು. ಆದರೆ ಆ ವಾತಾವರಣದಲ್ಲಿ ನನ್ನ ಶಾರೀರಿಕ ಇತಿಮಿತಿಗಳನ್ನು ನಿಭಾಯಿಸುವುದು ಸುಲಭವಾಗಿದೆ ಎಂಬುದನ್ನು ನಾನು ಕಂಡುಕೊಂಡೆ. ಇದು ನನಗೆ ಸಂತೋಷವನ್ನು ತಂದಿತು.

ಜನರು ಸಾಮಾನ್ಯವಾಗಿ ಬಡವರಾಗಿದ್ದರು. ಹೆಚ್ಚಿನವರು ಸಂಪ್ರದಾಯ, ಮೂಡನಂಬಿಕೆ ಹಾಗೂ ಬಹುಪತ್ನೀತ್ವದಲ್ಲಿ ಮುಳುಗಿದ್ದರಾದರೂ ಬೈಬಲಿನ ಕಡೆಗೆ ಅವರಿಗೆ ಆಳವಾದ ಗೌರವವಿತ್ತು. ಕೆಲವು ಕ್ಷೇತ್ರಗಳಲ್ಲಿ ದೊಡ್ಡದಾದ ಎಲೆಗಳಿಂದ ತುಂಬಿದ ಮರಗಳ ನೆರಳಿನಡಿಯಲ್ಲಿ ಸಭಾ ಕೂಟಗಳನ್ನು ನಡೆಸಲಾಗುತ್ತಿತ್ತು. ರಾತ್ರಿಯಲ್ಲಿ, ಬೆಳಕಿಗಾಗಿ ಎಣ್ಣೆಯ ದೀಪಗಳನ್ನು ಉಪಯೋಗಿಸಲಾಗುತ್ತಿತ್ತು. ದೇವರ ಅದ್ಭುತಕರ ಸೃಷ್ಟಿಯ ಭಾಗವಾಗಿರುವ ನಕ್ಷತ್ರಗಳಿಂದ ತುಂಬಿದ ತೆರೆದ ಬಾನಿನ ಕೆಳಗೆ ದೇವರ ವಾಕ್ಯವನ್ನು ಅಧ್ಯಯನಮಾಡುವಾಗ ಅವು ನಮ್ಮಲ್ಲಿ ಭಯಭಕ್ತಿಯನ್ನು ಹುಟ್ಟಿಸುತ್ತಿದ್ದವು.

ವಾಚ್‌ ಟವರ್‌ ಸೊಸೈಟಿಯ ವಿಡಿಯೋಗಳನ್ನು ಆಫ್ರಿಕದ ಮೀಸಲು ಪ್ರದೇಶದಲ್ಲಿ ತೋರಿಸುವುದು ಒಂದು ಮರೆಯಲಾರದ ಅನುಭವವಾಗಿತ್ತು. ಅಲ್ಲಿನ ಸಭೆಯಲ್ಲಿ ಸುಮಾರು 30 ಮಂದಿ ಸಾಕ್ಷಿಗಳಿದ್ದರು, ಆದರೆ ಆ ಸಂದರ್ಭದಲ್ಲಿ 1,000 ಅಥವಾ ಅದಕ್ಕಿಂತಲೂ ಹೆಚ್ಚು ಜನರು ಹಾಜರಾಗುವರು ಎಂಬ ನಂಬಿಕೆ ನಮಗಿತ್ತು.

ಉಷ್ಣವಲಯದಲ್ಲಿ, ಅನಾರೋಗ್ಯವು ಒಂದು ದೊಡ್ಡ ಸಮಸ್ಯೆಯಾಗಿದೆ. ಹಾಗಿದ್ದರೂ, ಯಾವಾಗಲೂ ಒಂದು ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದು ಪ್ರಾಮುಖ್ಯ. ನಾನು ಮತ್ತು ಜಾಯ್ಸ್‌ ಜೀವನವನ್ನು ಯಶಸ್ವಿಯಾಗಿ ನಿಭಾಯಿಸಲು ಕಲಿತೆವು​—⁠ಆಗಿಂದಾಗ್ಗೆ ನಾನು ಮಲೇರಿಯಕ್ಕೆ ತುತ್ತಾದೆ ಮತ್ತು ಜಾಯ್ಸ್‌ ಆಮೀಬದಿಂದ ಉಂಟಾಗುವ ಅಸ್ವಸ್ಥತೆಯನ್ನು ಎದುರಿಸಿದಳು.

ನಂತರ ನಾವು ಸಾಲ್ಸ್‌ಬೆರಿ (ಈಗ ಹರಾರೆ)ಯಲ್ಲಿರುವ ಬ್ರಾಂಚ್‌ ಆಫೀಸಿಗೆ ನೇಮಿಸಲ್ಪಟ್ಟೆವು. ಅಲ್ಲಿ ನಮಗೆ, ಲೆಸ್ಟರ್‌ ಡೇವೀ ಮತ್ತು ಜಾರ್ಜ್‌ ಹಾಗೂ ರೂಬೀ ಬ್ರ್ಯಾಡ್ಲೀಯರಂಥ ಯೆಹೋವನ ಇತರ ನಂಬಿಗಸ್ತ ಸೇವಕರೊಂದಿಗೆ ಕೆಲಸಮಾಡುವ ಸದವಕಾಶವು ದೊರಕಿತು. ಸರಕಾರವು ನನ್ನನ್ನು ವಿವಾಹ ಅಧಿಕಾರಿಯನ್ನಾಗಿ ನೇಮಿಸಿತು. ಇದು ಆಫ್ರಿಕದಲ್ಲಿರುವ ಸಹೋದರರ ವಿವಾಹವನ್ನು ನಡಿಸಿಕೊಡಲು ಮತ್ತು ಈ ಮೂಲಕ ಸಭೆಗಳಲ್ಲಿ ಕ್ರೈಸ್ತ ವಿವಾಹದ ಬಂಧವನ್ನು ಬಲಗೊಳಿಸಲು ನನ್ನನ್ನು ಶಕ್ತಗೊಳಿಸಿತು. ಕೆಲವು ವರುಷಗಳ ನಂತರ ನನಗೆ ಇನ್ನೊಂದು ಸದವಕಾಶವು ದೊರಕಿತು. ಅದು, ಆ ದೇಶದಲ್ಲಿರುವ ಬಂಟು ಭಾಷೆಯ ಸಭೆಗಳನ್ನು ಬಿಟ್ಟು ಇತರ ಸಭೆಗಳನ್ನು ಸಂದರ್ಶಿಸುವುದೇ. ಒಂದು ದಶಕಕ್ಕಿಂತ ಹೆಚ್ಚಿನ ಸಮಯದ ವರೆಗೆ, ನಾನು ಮತ್ತು ಜಾಯ್ಸ್‌ ನಮ್ಮ ಸಂಚರಣಾ ಕೆಲಸದಲ್ಲಿ ಅಲ್ಲಿನ ಸಹೋದರರ ಪರಿಚಯಮಾಡಿಕೊಳ್ಳುವ ಆನಂದವನ್ನು ಅನುಭವಿಸಿದೆವು ಮತ್ತು ಅವರ ಆಧ್ಯಾತ್ಮಿಕ ಪ್ರಗತಿಯಲ್ಲಿ ನಾವು ಹರ್ಷಿಸಿದೆವು. ಆ ಸಮಯದಲ್ಲಿ ನಾವು ಬೋಟ್ಸ್‌ವಾನ ಮತ್ತು ಮೊಸಾಂಬೀಕ್‌ನಲ್ಲಿರುವ ನಮ್ಮ ಸಹೋದರರನ್ನು ಸಹ ಸಂದರ್ಶಿಸಿದೆವು.

ಪುನಃ ಇನ್ನೊಂದು ಸ್ಥಳಕ್ಕೆ ಸ್ಥಳಾಂತರ

ದಕ್ಷಿಣ ಆಫ್ರಿಕದಲ್ಲಿ ಸಂತಸದ ಅನೇಕ ವರುಷಗಳನ್ನು ಕಳೆದ ನಂತರ, 1975ರಲ್ಲಿ ನಮ್ಮನ್ನು ಪಶ್ಚಿಮ ಆಫ್ರಿಕದ ಸೀಎರ ಲಿಯೋನ್‌ ಎಂಬ ಸ್ಥಳಕ್ಕೆ ನೇಮಿಸಲಾಯಿತು. ಸ್ವಲ್ಪ ಸಮಯದ ಬಳಿಕ, ನಮ್ಮ ಹೊಸ ಚಟುವಟಿಕೆಯನ್ನು ಆನಂದಿಸಲು ನಾವು ಬ್ರಾಂಚ್‌ ಆಫೀಸಿನಲ್ಲಿ ಉಳುಕೊಂಡೆವು, ಆದರೆ ಇದು ಹೆಚ್ಚು ಸಮಯದ ವರೆಗೆ ಮುಂದುವರಿಯಲಿಲ್ಲ. ನಾನು ಮಲೇರಿಯ ರೋಗಕ್ಕೆ ತುತ್ತಾದ ಕಾರಣ ಬಹಳ ಬಲಹೀನನಾದೆ ಮತ್ತು ನನಗೆ ಲಂಡನಿನ ಆಸ್ಪತ್ರೆಯಲ್ಲಿ ಉಪಚರಿಸಲಾಯಿತು. ಅಲ್ಲಿ ನನಗೆ, ಪುನಃ ಆಫ್ರಿಕಕ್ಕೆ ಹಿಂದಿರುಗಬಾರದು ಎಂದು ಸಲಹೆನೀಡಲಾಯಿತು. ಇದರಿಂದಾಗಿ ನಾವು ಬಹಳ ದುಃಖಿತರಾದೆವು, ಆದರೆ ಲಂಡನಿನ ಬೆತೆಲ್‌ ಕುಟುಂಬದ ಸದಸ್ಯರಿಂದ ನಾವು ಆದರದಿಂದ ಸ್ವಾಗತಿಸಲ್ಪಟ್ಟೆವು. ನನ್ನ ಆರೋಗ್ಯವು ಉತ್ತಮಗೊಂಡದ್ದರಿಂದ, ನಾವು ಇನ್ನೊಂದು ದಿನಚರಿಯನ್ನು ನಮ್ಮದಾಗಿಸಶಕ್ತರಾದೆವು. ಬೆತೆಲಿನ ಪರ್ಚೆಸಿಂಗ್‌ ಡಿಪಾರ್ಟ್‌ಮೆಂಟ್‌ ಅನ್ನು ನೋಡಿಕೊಳ್ಳುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ನಂತರದ ವರುಷಗಳಲ್ಲಿ ಸಂಭವಿಸಿದ ಎಲ್ಲ ವಿಸ್ತರಣೆಯನ್ನು ನೋಡುವಾಗ ನಿಜವಾಗಿಯೂ ಅದೊಂದು ಆಸಕ್ತಿಕರ ಕೆಲಸವಾಗಿತ್ತು.

ಇಸವಿ 1990ರ ಆರಂಭದಲ್ಲಿ ನನ್ನ ಪ್ರಿಯ ಪತ್ನಿ ಜಾಯ್ಸ್‌, ಪ್ರಚೋದಕ ನರ (ಮೋಟರ್‌ ನ್ಯೂರಾನ್‌) ರೋಗಕ್ಕೆ ತುತ್ತಾದಳು ಮತ್ತು 1994ರಲ್ಲಿ ಮೃತಪಟ್ಟಳು. ಅವಳು ನನಗೆ ಒಲುಮೆಯ, ನಿಷ್ಠಾವಂತ ಮತ್ತು ನಂಬಿಗಸ್ತ ಪತ್ನಿಯಾಗಿದ್ದಳು. ನಾವು ಒಟ್ಟಾಗಿ ಎದುರಿಸಿದ ಎಲ್ಲ ರೀತಿಯ ವಿವಿಧ ಸನ್ನಿವೇಶಗಳಿಗೆ ಅವಳು ಯಾವಾಗಲೂ ಮನಃಪೂರ್ವಕವಾಗಿ ಹೊಂದಿಸಿಕೊಂಡಳು. ಅವಳನ್ನು ಕಳೆದುಕೊಂಡ ಆ ದುಃಖಕರ ಸಮಯದಲ್ಲಿ, ಸ್ಪಷ್ಟವಾದ ಆಧ್ಯಾತ್ಮಿಕ ಹೊರನೋಟವನ್ನು ಕಾಪಾಡಿಕೊಳ್ಳುವುದು ಮತ್ತು ಭವಿಷ್ಯತ್ತಿಗಾಗಿ ಎದುರುನೋಡುತ್ತಾ ಇರುವುದು ಬಹಳ ಪ್ರಾಮುಖ್ಯ ಎಂಬುದನ್ನು ನಾನು ಕಂಡುಕೊಂಡೆ. ಸಾರುವಿಕೆಯನ್ನು ಒಳಗೊಂಡ ಒಂದು ಉತ್ತಮ ದೇವಪ್ರಭುತ್ವಾತ್ಮಕ ಕಾಲತಖ್ತೆಗೆ ಪ್ರಾರ್ಥನಾಪೂರ್ವಕವಾಗಿ ಅಂಟಿಕೊಳ್ಳುವುದು, ನನ್ನ ಮನಸ್ಸನ್ನು ಸಂಪೂರ್ಣವಾಗಿ ಕಾರ್ಯಮಗ್ನವಾಗಿ ಇಟ್ಟುಕೊಳ್ಳಲು ನನಗೆ ಸಹಾಯಮಾಡುತ್ತದೆ.​—⁠ಜ್ಞಾನೋಕ್ತಿ 3:​5, 6.

ಬೆತೆಲಿನಲ್ಲಿ ಸೇವೆಮಾಡುವುದು ಒಂದು ಸುಯೋಗವಾಗಿದೆ ಮತ್ತು ಉತ್ತಮ ಜೀವನ ರೀತಿಯಾಗಿದೆ. ಅನೇಕ ಯುವ ಜನರೊಂದಿಗೆ ಕೆಲಸಮಾಡಲು ಮತ್ತು ಅನೇಕ ಆನಂದಗಳನ್ನು ಅನುಭವಿಸಲು ಸಂದರ್ಭವಿದೆ. ಇಲ್ಲಿ ಲಂಡನ್‌ ಬೆತೆಲಿಗೆ ಅನೇಕ ಸಂದರ್ಶಕರು ಬರುತ್ತಾರಾದ ಕಾರಣ ಅವರನ್ನು ಭೇಟಿಯಾಗುವ ಒಂದು ಸುಯೋಗವನ್ನು ನಾನು ಆನಂದಿಸುತ್ತಿದ್ದೇನೆ. ಕೆಲವೊಮ್ಮೆ ನಾನು, ಆಫ್ರಿಕದ ನನ್ನ ನೇಮಕದಲ್ಲಿದ್ದಾಗಿನ ಕೆಲವು ಆಪ್ತ ಸ್ನೇಹಿತರನ್ನು ಸಹ ಭೇಟಿಯಾಗುತ್ತೇನೆ. ಆಗ ಅನೇಕ ಸಂತೋಷಕರ ನೆನಪುಗಳ ಅಲೆಗಳು ಮರುಕಳಿಸುತ್ತವೆ. ಇವೆಲ್ಲವು ನನಗೆ, ‘ಈಗಿನ ಜೀವನವನ್ನು’ ಸಂಪೂರ್ಣವಾಗಿ ಆನಂದಿಸುತ್ತಾ ಮುಂದುವರಿಯಲು ಮತ್ತು “ಮುಂದಕ್ಕೆ ಬರಲಿರುವ” ಜೀವನವನ್ನು ಭರವಸೆ ಹಾಗೂ ನಿರೀಕ್ಷೆಯಿಂದ ಎದುರುನೋಡಲು ಸಹಾಯಮಾಡುತ್ತವೆ.​—⁠1 ತಿಮೊಥೆಯ 4:⁠8, NW.

[ಪಾದಟಿಪ್ಪಣಿ]

^ ಪ್ಯಾರ. 5 ಯೆಹೋವನ ಸಾಕ್ಷಿಗಳಿಂದ 1928ರಲ್ಲಿ ಪ್ರಕಟಿಸಲ್ಪಟ್ಟಿದ್ದು, ಈಗ ಮುದ್ರಣದಲ್ಲಿಲ್ಲ.

[ಪುಟ 25ರಲ್ಲಿರುವ ಚಿತ್ರ]

1946ರಲ್ಲಿ ನನ್ನ ತಾಯಿಯೊಂದಿಗೆ

[ಪುಟ 26ರಲ್ಲಿರುವ ಚಿತ್ರ]

1950ರಲ್ಲಿ ನಮ್ಮ ಮದುವೆಯ ದಿನದಂದು ಜಾಯ್ಸ್‌ಳೊಂದಿಗೆ

[ಪುಟ 26ರಲ್ಲಿರುವ ಚಿತ್ರ]

1953ರಲ್ಲಿ ಬ್ರಿಸ್ಟಲ್‌ನಲ್ಲಿ ನಡೆದ ಅಧಿವೇಶನದಲ್ಲಿ

[ಪುಟ 27ರಲ್ಲಿರುವ ಚಿತ್ರಗಳು]

ಈಗ ಸಿಂಬಾಬ್ವೆ ಎಂದು ಕರೆಯಲ್ಪಡುವ ದಕ್ಷಿಣ ರೊಡೇಶ್ಯದಲ್ಲಿ ಒಂದು ಪ್ರತ್ಯೇಕ ಗುಂಪಿನೊಂದಿಗೆ (ಮೇಲೆ) ಮತ್ತು ಒಂದು ಸಭೆಯೊಂದಿಗೆ (ಎಡಬದಿ) ಸೇವೆಸಲ್ಲಿಸುತ್ತಿರುವುದು