ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಪ್ರಾಮಾಣಿಕ ಜನಸಮುದಾಯವು ಯೆಹೋವನಿಗೆ ಸ್ತುತಿಯನ್ನು ತರುತ್ತದೆ

ಒಂದು ಪ್ರಾಮಾಣಿಕ ಜನಸಮುದಾಯವು ಯೆಹೋವನಿಗೆ ಸ್ತುತಿಯನ್ನು ತರುತ್ತದೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಒಂದು ಪ್ರಾಮಾಣಿಕ ಜನಸಮುದಾಯವು ಯೆಹೋವನಿಗೆ ಸ್ತುತಿಯನ್ನು ತರುತ್ತದೆ

ಯುವಕರಾಗಿರಲಿ ವೃದ್ಧರಾಗಿರಲಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು ತಮ್ಮ ಪ್ರಾಮಾಣಿಕತೆಗೆ ಪ್ರಖ್ಯಾತರಾಗಿದ್ದಾರೆ. ಮೂರು ಭೂಖಂಡಗಳಿಂದ ಬಂದ ಅನುಭವಗಳನ್ನು ಪರಿಗಣಿಸಿರಿ.

ನೈಜಿರೀಯದಲ್ಲಿ ವಾಸಿಸುವ ಓಲೂಸೋಲಾ ಎಂಬ ಹದಿನೇಳು ವರುಷ ಪ್ರಾಯದ ಹುಡುಗಿಯು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಅವಳಿಗೆ ನೆಲದ ಮೇಲೆ ಒಂದು ಪರ್ಸ್‌ ಸಿಕ್ಕಿತು. ಅವಳು ಅದನ್ನು ತನ್ನ ಪ್ರಾಂಶುಪಾಲರ ಬಳಿ ಕೊಂಡೊಯ್ದಳು. ಅವರು ಅದರಲ್ಲಿದ್ದ ಹಣವನ್ನು ಲೆಕ್ಕಿಸಿದಾಗ, ₦6,200 (ಸುಮಾರು 2,000 ರೂಪಾಯಿ) ಅದರಲ್ಲಿತ್ತು. ಪ್ರಾಂಶುಪಾಲರು ಆ ಪರ್ಸನ್ನು ಕಳೆದುಕೊಂಡಿದ್ದ ಅಧ್ಯಾಪಕರಿಗೆ ಅದನ್ನು ಹಿಂದಿರುಗಿಸಿದರು. ಆ ಅಧ್ಯಾಪಕರು ಓಲೂಸೋಲಾಳಿಗೆ ಬಹುಮಾನವಾಗಿ ₦1,000 (ಸುಮಾರು 300 ರೂಪಾಯಿ) ನೀಡಿ, ಅವಳದನ್ನು ಶಾಲಾ ಫೀಸ್‌ ಕಟ್ಟಲು ಉಪಯೋಗಿಸುವಂತೆ ಹೇಳಿದರು. ಏನು ನಡೆಯಿತೆಂದು ಇತರ ವಿದ್ಯಾರ್ಥಿಗಳು ಕೇಳಿಸಿಕೊಂಡಾಗ ಅವರು ಓಲೂಸೋಲಾಳಿಗೆ ಗೇಲಿಮಾಡಿದರು. ಕೆಲವು ವಾರಗಳ ನಂತರ ಒಬ್ಬ ವಿದ್ಯಾರ್ಥಿಯು ತಾನು ತನ್ನ ಹಣವನ್ನು ಕಳೆದುಕೊಂಡಿರುವುದಾಗಿ ವರದಿಮಾಡಿದನು. ಕದ್ದವರಾರು ಎಂಬುದನ್ನು ತಿಳಿದುಕೊಳ್ಳಲು ಎಲ್ಲ ವಿದ್ಯಾರ್ಥಿಗಳನ್ನು ಪರೀಕ್ಷಿಸುವಂತೆ ಅಧ್ಯಾಪಕರಿಗೆ ಹೇಳಲಾಯಿತು. ಆಗ ಓಲೂಸೋಲಾಳನ್ನು ನೋಡಿ ಅಧ್ಯಾಪಕರು ಹೀಗೆ ಹೇಳಿದನು: “ನೀನು ಈ ಬದಿಯಲ್ಲಿ ನಿಲ್ಲು. ನೀನು ಯೆಹೋವನ ಸಾಕ್ಷಿಯಾಗಿರುವುದರಿಂದ ಕದಿಯುವುದಿಲ್ಲ ಎಂದು ನನಗೆ ಗೊತ್ತು.” ಯಾರು ಓಲೂಸೋಲಾಳಿಗೆ ಗೇಲಿಮಾಡಿದ್ದರೋ ಆ ಇಬ್ಬರು ಹುಡುಗರ ಬಳಿ ಹಣವನ್ನು ಕಂಡುಕೊಳ್ಳಲಾಯಿತು ಮತ್ತು ಅವರಿಗೆ ಕಠಿನ ಶಿಕ್ಷೆಯನ್ನು ವಿಧಿಸಲಾಯಿತು. ಓಲೂಸೋಲಾಳು ಬರೆದದ್ದು: “ನಾನೊಬ್ಬ ಯೆಹೋವನ ಸಾಕ್ಷಿ ಮತ್ತು ನಾನು ಎಂದಿಗೂ ಕದಿಯುವುದಿಲ್ಲ ಎಂದು ಇತರರು ತಿಳಿದುಕೊಂಡದ್ದಕ್ಕಾಗಿ ನಾನು ಬಹಳ ಸಂತೋಷಿಸುತ್ತೇನೆ. ಇದರಿಂದಾಗಿ ಯೆಹೋವನಿಗೆ ಘನತೆಯುಂಟಾಗುತ್ತದೆ.”

ಆರ್ಜೆಂಟೀನದ ನಿವಾಸಿ ಮಾರ್ಸೀಲೊ ಒಂದು ದಿನ ಮನೆಯಿಂದ ಹೊರಗೆ ಹೋಗುವಾಗ ತನ್ನ ಮನೆಯ ಹಿಂದಿನ ಬಾಗಿಲಿಂದ ಸ್ವಲ್ಪ ದೂರದಲ್ಲಿ ಒಂದು ಬ್ರೀಫ್‌ಕೇಸ್‌ ಬಿದ್ದಿರುವುದನ್ನು ಕಂಡನು. ಆ ಬ್ರೀಫ್‌ಕೇಸನ್ನು ಮನೆಯೊಳಗೆ ತೆಗೆದುಕೊಂಡು ಹೋಗಿ, ಅವನು ಮತ್ತು ಅವನ ಪತ್ನಿಯು ಅದನ್ನು ಜಾಗ್ರತೆಯಿಂದ ತೆರೆದು ನೋಡಿದರು. ಆಶ್ಚರ್ಯಕರವಾಗಿ, ಅದರೊಳಗೆ ಬಹಳ ದೊಡ್ಡ ಮೊತ್ತದ ಹಣ, ಕ್ರೆಡಿಟ್‌ ಕಾರ್ಡ್‌ ಮತ್ತು ಸಹಿಮಾಡಿರುವ ಅನೇಕ ಚೆಕ್‌ಗಳಿದ್ದವು. ಅಂಥ ಸಹಿಮಾಡಿದ ಚೆಕ್‌ಗಳಲ್ಲಿ ಒಂದು, 10 ಲಕ್ಷ ಪೇಸೊ (ಸುಮಾರು 1,35,00,000 ರೂಪಾಯಿ) ಮೊತ್ತದ್ದಾಗಿತ್ತು. ಬ್ರೀಫ್‌ಕೇಸ್‌ನಲ್ಲಿ ಅವರು ಒಂದು ಟೆಲಿಫೋನ್‌ ನಂಬರನ್ನು ಕಂಡುಕೊಂಡರು. ಅವರು ಅದರ ಮಾಲೀಕನಿಗೆ ಕರೆಮಾಡಿ, ಮಾರ್ಸೀಲೊ ಕೆಲಸಮಾಡುವ ಸ್ಥಳಕ್ಕೆ ಬಂದು ಅದನ್ನು ತೆಗೆದುಕೊಂಡು ಹೋಗುವಂತೆ ಹೇಳಿದರು. ಆ ಬ್ರೀಫ್‌ಕೇಸ್‌ನ ಮಾಲೀಕನು ಅಲ್ಲಿಗೆ ಬರುವಾಗ ಬಹಳ ಚಿಂತಿತನಾಗಿದ್ದನು. ಚಿಂತಿಸುವ ಅಗತ್ಯವಿಲ್ಲ, ಮಾರ್ಸೀಲೊ ಒಬ್ಬ ಯೆಹೋವನ ಸಾಕ್ಷಿ ಎಂಬುದಾಗಿ ಮಾರ್ಸೀಲೊವಿನ ಧಣಿಯು ಅವನಿಗೆ ತಿಳಿಸಿದನು. ತನ್ನ ಬ್ರೀಫ್‌ಕೇಸನ್ನು ಹಿಂದಿರುಗಿಸಿದ್ದಕ್ಕೆ ಬಹುಮಾನವಾಗಿ ಆ ಮಾಲೀಕನು ಮಾರ್ಸೀಲೊವಿಗೆ ಕೇವಲ 20 ಪೇಸೊ (ಸುಮಾರು 300 ರೂಪಾಯಿ) ನೀಡಿದನು. ಇಷ್ಟು ಸಣ್ಣ ಮೊತ್ತವನ್ನು ಬಹುಮಾನವಾಗಿ ನೀಡಿದ್ದಕ್ಕೆ ಮಾರ್ಸೀಲೊವಿನ ಧಣಿಯು ಬಹಳ ಕುಪಿತನಾದನು. ಏಕೆಂದರೆ ಅವನು ಮಾರ್ಸೀಲೊವಿನ ಪ್ರಾಮಾಣಿಕತೆಯಿಂದ ಬಹಳ ಪ್ರಭಾವಿತನಾಗಿದ್ದನು. ಇದು ಮಾರ್ಸೀಲೊಗೆ, ಯೆಹೋವನ ಸಾಕ್ಷಿಯಾಗಿರುವ ತಾನು ಎಲ್ಲ ಸಮಯಗಳಲ್ಲಿ ಪ್ರಾಮಾಣಿಕನಾಗಿರಲು ಇಚ್ಛಿಸುತ್ತೇನೆ ಎಂದು ವಿವರಿಸಲು ಒಂದು ಸುಸಂದರ್ಭವನ್ನು ಒದಗಿಸಿತು.

ಇದು ಕಿರ್ಗಿಸ್ತಾನ್‌ನ ಅನುಭವವಾಗಿದೆ. ರಿನಾಟ್‌ ಎಂಬ ಆರು ವರುಷದ ಹುಡುಗನಿಗೆ, ಹತ್ತಿರದಲ್ಲೇ ವಾಸಿಸುತ್ತಿದ್ದ ಒಬ್ಬ ಸ್ತ್ರೀಯ ಪರ್ಸ್‌ ಸಿಕ್ಕಿತು. ಆ ಪರ್ಸಿನಲ್ಲಿ 1,100 ಸೋಮ್‌ (ಸುಮಾರು 1,125 ರೂಪಾಯಿ) ಹಣವಿತ್ತು. ರಿನಾಟ್‌ ಅದನ್ನು ಆ ಸ್ತ್ರೀಗೆ ತಲಪಿಸಿದಾಗ, ಆಕೆ ಅದನ್ನು ಲೆಕ್ಕಿಸಿ ಅದರಲ್ಲಿ 200 ಸೋಮ್‌ (ಸುಮಾರು 225 ರೂಪಾಯಿ) ಕಡಿಮೆಯಿದೆ ಎಂದು ರಿನಾಟ್‌ನ ತಾಯಿಗೆ ತಿಳಿಸಿದಳು. ತಾನು ಹಣವನ್ನು ತೆಗೆಯಲಿಲ್ಲ ಎಂದು ರಿನಾಟ್‌ ತಿಳಿಸಿದನು. ಅವರೆಲ್ಲರು ಆ ಪರ್ಸ್‌ ಬಿದ್ದಿದ್ದ ಸ್ಥಳಕ್ಕೆ ಹೋಗಿ ಅಲ್ಲಿ ಹುಡುಕಾಡಿದಾಗ, ಅಲ್ಲಿ ಆ 200 ಸೋಮ್‌ ಅನ್ನೂ ಕಂಡುಕೊಂಡರು. ಆ ಸ್ತ್ರೀಗೆ ಬಹಳ ಆಶ್ಚರ್ಯವಾಯಿತು. ತನ್ನ ಹಣವನ್ನು ಹಿಂದಿರುಗಿಸಿದ್ದಕ್ಕಾಗಿ ಅವಳು ರಿನಾಟ್‌ಗೆ ಉಪಕಾರ ಹೇಳಿದಳು ಮತ್ತು ಅವನನ್ನು ಒಬ್ಬ ಉತ್ತಮ ಕ್ರೈಸ್ತನಾಗಿ ಬೆಳೆಸುತ್ತಿರುವುದಕ್ಕಾಗಿ ಅವನ ತಾಯಿಗೂ ಉಪಕಾರ ತಿಳಿಸಿದಳು.