ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರಿ

ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರಿ

ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರಿ

“ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ [“ಒಳ್ಳೇದಾಗಿರಲಿ,” NW]” ಎಂದು ಅಪೊಸ್ತಲ ಪೇತ್ರನು ಬುದ್ಧಿಹೇಳುತ್ತಾನೆ. (1 ಪೇತ್ರ 2:12) ‘ಒಳ್ಳೇದು’ ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು “ಸುಂದರ, ಶ್ರೇಷ್ಠ, ಗೌರವಾರ್ಹ, ಅತ್ಯುತ್ತಮ”ವಾಗಿರುವ ವಿಷಯಗಳಿಗೆ ಸೂಚಿಸುತ್ತದೆ. ಈಗಿನ ಕಾಲಗಳಲ್ಲಿ, ಜನಸಾಮಾನ್ಯರಿಂದ ಶ್ರೇಷ್ಠವಾದ ಅಥವಾ ಗೌರವಾರ್ಹವಾದ ನಡತೆಯನ್ನು ಎದುರುನೋಡುವುದು ಸಂಪೂರ್ಣ ಅವಾಸ್ತವಿಕ ಸಂಗತಿಯೆಂದು ತೋರಬಹುದು. ಹಾಗಿದ್ದರೂ, ಇಂದು ಯೆಹೋವನ ಸಾಕ್ಷಿಗಳು ಒಂದು ಗುಂಪಾಗಿ ಪೇತ್ರನ ಈ ಬುದ್ಧಿವಾದವನ್ನು ಅನುಕರಿಸುವುದರಲ್ಲಿ ಯಶಸ್ವಿಗಳಾಗಿದ್ದಾರೆ. ವಾಸ್ತವದಲ್ಲಿ, ಅವರು ತಮ್ಮ ಒಳ್ಳೇ ನಡವಳಿಕೆಯಿಂದಾಗಿ ಲೋಕವ್ಯಾಪಕವಾಗಿ ಪ್ರಖ್ಯಾತರಾಗಿದ್ದಾರೆ.

‘ನಿಭಾಯಿಸಲು ಕಷ್ಟಕರವಾಗಿರುವ ಈ ಕಠಿನಕಾಲಗಳಲ್ಲಿ’ ನಾವು ಎದುರಿಸುವಂಥ ಸಮಸ್ಯೆಗಳು ಮತ್ತು ವ್ಯಾಕುಲತೆಗಳನ್ನು ಪರಿಗಣಿಸುವಾಗ ಇದು ಮುಖ್ಯವಾಗಿ ಗಮನಾರ್ಹ ಸಂಗತಿಯಾಗಿದೆ. (2 ತಿಮೊಥೆಯ 3:⁠1, NW) ಪರೀಕ್ಷೆಯು ನಮ್ಮ ದೈನಂದಿನ ಜೀವಿತದ ಒಂದು ಭಾಗವಾಗಿದೆ. ಕ್ರೈಸ್ತ ಜೀವನ ರೀತಿಗೆ ವಿರೋಧವು ಬರುವುದು ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ಕೂಡಿಕೆಯಾಗಿ, ಕೆಲವು ಪರೀಕ್ಷೆಗಳು ಸ್ವಲ್ಪ ಸಮಯದಲ್ಲಿಯೇ ಕೊನೆಗೊಳ್ಳುತ್ತವೆ, ಆದರೆ ಇನ್ನಿತರ ಪರೀಕ್ಷೆಗಳು ದೀರ್ಘಕಾಲದ ವರೆಗೆ ಮುಂದುವರಿಯುತ್ತವೆ. ಮಾತ್ರವಲ್ಲ, ಅವು ತೀಕ್ಷ್ಣವಾಗುತ್ತಾ ಹೋಗುತ್ತವೆ. ಹಾಗಿದ್ದರೂ, ಅಪೊಸ್ತಲ ಪೌಲನು ಸಲಹೆನೀಡಿದ್ದು: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.” (ಗಲಾತ್ಯ 6:9) ಆದರೆ, ಅತಿ ದುಃಖಕರ ಪರೀಕ್ಷೆಗಳ ಮತ್ತು ಎಡೆಬಿಡದ ವಿರೋಧದ ಎದುರಿನಲ್ಲಿಯೂ ಯಾವುದು ಒಳ್ಳೇದಾಗಿದೆಯೊ ಅದನ್ನು ಮಾಡಲು ಹಾಗೂ ಅದನ್ನು ಮಾಡುತ್ತಾ ಮುಂದುವರಿಯಲು ಹೇಗೆ ಸಾಧ್ಯ?

ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದಿರಲು ಸಹಾಯಕಗಳು

“ಶ್ರೇಷ್ಠ, ಗೌರವಾರ್ಹ, ಅತ್ಯುತ್ತಮ” ಎಂಬುದಾಗಿ ಹೇಳುವಾಗ ಅದು ಸ್ಪಷ್ಟವಾಗಿ ಆಂತರಿಕ ವ್ಯಕ್ತಿಯನ್ನು, ಅಂದರೆ ಹೃದಯದ ಗುಣಗಳನ್ನು ಒಳಗೂಡಿದೆ. ಆದುದರಿಂದಲೇ, ಪರೀಕ್ಷೆಗಳ ಮತ್ತು ತೊಂದರೆಗಳ ಎದುರಿನಲ್ಲಿ ಒಳ್ಳೇ ನಡವಳಿಕೆಯನ್ನು ಕಾಪಾಡಿಕೊಳ್ಳುವುದು ಆ ಕ್ಷಣದಲ್ಲಿಯೇ ಸಂಭವಿಸುವ ಪ್ರತಿಕ್ರಿಯೆಯಲ್ಲ, ಬದಲಾಗಿ ದಿನನಿತ್ಯವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನುಸರಿಸಿ ಅಭ್ಯಾಸಿಸುವುದರಿಂದ ಬರುವ ಫಲಿತಾಂಶವೇ ಆಗಿದೆ. ಈ ವಿಷಯದಲ್ಲಿ ಸಹಾಯಮಾಡಬಲ್ಲ ಕೆಲವು ಸಂಗತಿಗಳಾವುವು? ಈ ಕೆಳಗಿನ ವಿಷಯಗಳನ್ನು ಪರಿಗಣಿಸಿರಿ.

ಕ್ರಿಸ್ತನಂಥ ಮನೋಭಾವವನ್ನು ಬೆಳೆಸಿಕೊಳ್ಳಿರಿ. ಅನ್ಯಾಯವನ್ನು ಸಹಿಸಿಕೊಳ್ಳಲು ದೀನತೆಯು ಬಹಳ ಅಗತ್ಯವಾಗಿದೆ. ತನ್ನನ್ನು ಶ್ರೇಷ್ಠನೆಂದು ಎಣಿಸಿಕೊಳ್ಳುವ ವ್ಯಕ್ತಿ ದುರುಪಚಾರವನ್ನು ಸಹಿಸಿಕೊಳ್ಳುವುದು ಅಸಂಭವನೀಯ. ಆದರೆ ಯೇಸು “ತನ್ನನ್ನು ತಗ್ಗಿಸಿಕೊಂಡು ಮರಣವನ್ನು . . . ಹೊಂದುವಷ್ಟು ವಿಧೇಯನಾದನು.” (ಫಿಲಿಪ್ಪಿ 2:5, 8) ಅವನನ್ನು ಅನುಕರಿಸುವ ಮೂಲಕ ನಾವು ನಮ್ಮ ಪವಿತ್ರ ಸೇವೆಯಲ್ಲಿ ‘ಮನಗುಂದುವುದಿಲ್ಲ ಅಥವಾ ಬೇಸರಗೊಳ್ಳುವುದಿಲ್ಲ.’ (ಇಬ್ರಿಯ 12:​2, 3) ನಿಮ್ಮ ಸ್ಥಳಿಕ ಸಭೆಯಲ್ಲಿ ಮುಂದಾಳುತ್ವ ವಹಿಸುವವರೊಂದಿಗೆ ಮನಃಪೂರ್ವಕವಾಗಿ ಸಹಕರಿಸುವ ಮೂಲಕ ದೀನ ವಿಧೇಯತೆಯನ್ನು ಅಭ್ಯಾಸಿಸಿರಿ. (ಇಬ್ರಿಯ 13:17) ಸ್ವಹಿತಕ್ಕಿಂತ ಪರಹಿತವನ್ನು ಮೊದಲಾಗಿ ನೋಡುವವರಾಗಿದ್ದು, ಇತರರನ್ನು ನಿಮಗಿಂತ ಶ್ರೇಷ್ಠರೆಂದು ಎಣಿಸಲು ಕಲಿಯಿರಿ.​—⁠ಫಿಲಿಪ್ಪಿ 2:​3, 4.

ಯೆಹೋವನು ನಿಮ್ಮನ್ನು ಪ್ರೀತಿಸುತ್ತಾನೆ ಎಂಬುದನ್ನು ನೆನಪಿನಲ್ಲಿಡಿರಿ. ಯೆಹೋವನು “ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂಬ ದೃಢನಿಶ್ಚಯ ನಮಗಿರಬೇಕು. (ಇಬ್ರಿಯ 11:⁠6) ಆತನು ನಮಗೋಸ್ಕರ ನಿಜವಾಗಿಯೂ ಚಿಂತಿಸುತ್ತಾನೆ ಮತ್ತು ನಾವು ನಿತ್ಯಜೀವವನ್ನು ಪಡೆಯಬೇಕೆಂದು ಆತನು ಬಯಸುತ್ತಾನೆ. (1 ತಿಮೊಥೆಯ 2:4; 1 ಪೇತ್ರ 5:7) ಯಾವುದೇ ಸಂಗತಿಗಳು ನಮ್ಮನ್ನು ದೇವರ ಪ್ರೀತಿಯಿಂದ ಅಗಲಿಸಲಾರವೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು, ಪರೀಕ್ಷೆಯ ಸಮಯಗಳಲ್ಲಿ ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದಂತೆ ನಮಗೆ ಸಹಾಯಮಾಡುತ್ತದೆ.​—⁠ರೋಮಾಪುರ 8:​38, 39.

ಯೆಹೋವನಲ್ಲಿ ಪೂರ್ಣ ಭರವಸೆಯನ್ನಿಡಿರಿ. ಯೆಹೋವನಲ್ಲಿ ಭರವಸೆಯು ಅತ್ಯಾವಶ್ಯಕ. ಮುಖ್ಯವಾಗಿ, ಪರೀಕ್ಷೆಗಳು ಕೊನೆಗೊಳ್ಳದಿರುವಂತೆ ತೋರುವಾಗ ಅಥವಾ ಜೀವಕ್ಕೆ ಬೆದರಿಕೆಯನ್ನೊಡ್ಡುವಂಥ ಪರೀಕ್ಷೆಗಳ ಸಮಯದಲ್ಲಿ ಇದು ಹೆಚ್ಚು ಅವಶ್ಯಕವಾಗಿದೆ. ಯೆಹೋವನು ‘ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ಬರಗೊಡಿಸುವುದಿಲ್ಲ’ ಮತ್ತು ಯಾವಾಗಲೂ “ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು” ಎಂಬ ಸಂಪೂರ್ಣ ಭರವಸೆ ನಮಗಿರಬೇಕು. (1 ಕೊರಿಂಥ 10:13) ನಮ್ಮ ಭರವಸೆಯು ಯೆಹೋವನ ಮೇಲಿರುವಾಗ, ನಾವು ಮರಣದ ಬೆದರಿಕೆಯನ್ನೂ ಧೈರ್ಯದಿಂದ ಎದುರಿಸಬಲ್ಲೆವು.​—⁠2 ಕೊರಿಂಥ 1:​8, 9.

ಎಡೆಬಿಡದೆ ಪ್ರಾರ್ಥಿಸಿರಿ. ಹೃತ್ಪೂರ್ವಕ ಪ್ರಾರ್ಥನೆಯು ಅತ್ಯಾವಶ್ಯಕ. (ರೋಮಾಪುರ 12:12) ಯೆಹೋವನ ಸಮೀಪಕ್ಕೆ ಬರಲು ಒಂದು ಮಾರ್ಗವು ನಮ್ಮ ಯಥಾರ್ಥವಾದ ಪ್ರಾರ್ಥನೆಯೇ ಆಗಿದೆ. (ಯಾಕೋಬ 4:⁠8) “ನಾವು . . . ಏನಾದರೂ ಬೇಡಿಕೊಂಡರೆ ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ” ಎಂಬುದನ್ನು ನಾವು ವೈಯಕ್ತಿಕ ಅನುಭವದ ಮೂಲಕ ತಿಳಿದುಕೊಳ್ಳುತ್ತೇವೆ. (1 ಯೋಹಾನ 5:14) ನಮಗೆ ಎದುರಾದ ಸಂಕಷ್ಟವು ನಮ್ಮ ಸಮಗ್ರತೆಯನ್ನು ಪರೀಕ್ಷಿಸುತ್ತಾ ಮುಂದುವರಿಯುವಂತೆ ಯೆಹೋವನು ಅನುಮತಿಸಿದರೆ, ತಾಳಿಕೊಳ್ಳಲು ಬೇಕಾಗಿರುವ ಸಹಾಯಕ್ಕಾಗಿ ನಾವು ಆತನಿಗೆ ಪ್ರಾರ್ಥಿಸೋಣ. (ಲೂಕ 22:​41-43) ನಾವು ಒಂಟಿಗರಾಗಿಲ್ಲ, ಯೆಹೋವನು ನಮ್ಮ ಪಕ್ಷದಲ್ಲಿದ್ದಾನೆ ಮತ್ತು ಈ ಕಾರಣ ನಾವು ಯಾವಾಗಲೂ ಜಯಶಾಲಿಗಳಾಗುತ್ತೇವೆ ಎಂಬುದನ್ನು ಪ್ರಾರ್ಥನೆಯು ನಮಗೆ ಕಲಿಸುತ್ತದೆ.​—⁠ರೋಮಾಪುರ 8:​31, 37.

ಒಳ್ಳೇ ಕೆಲಸಗಳು​—⁠‘ಕೀರ್ತಿ ಮತ್ತು ಮಾನವನ್ನು ಉಂಟುಮಾಡುವವು’

ಆಗಿಂದಾಗ್ಗೆ ಎಲ್ಲ ಕ್ರೈಸ್ತರು ‘ನಾನಾ ಕಷ್ಟಗಳಲ್ಲಿದ್ದು ದುಃಖಿಸುವವರಾಗಿದ್ದಾರೆ.’ ಹಾಗಿದ್ದರೂ, ನಾವು “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ” ಇರಬೇಕು. ಒತ್ತಡವನ್ನು ಎದುರಿಸುವಾಗ, ನಿಮ್ಮ ನಂಬಿಗಸ್ತಿಕೆಯು ಕೊನೆಯಲ್ಲಿ “ಕೀರ್ತಿ ಪ್ರಭಾವ ಮಾನಗಳನ್ನು ಉಂಟುಮಾಡುವದು” ಎಂಬ ಜ್ಞಾನದಿಂದ ಬಲವನ್ನು ಪಡೆದುಕೊಳ್ಳಿರಿ. (1 ಪೇತ್ರ 1:​6, 7) ನಿಮ್ಮನ್ನು ಬಲಪಡಿಸಲು ಯೆಹೋವನು ನೀಡುವ ಎಲ್ಲ ಆಧ್ಯಾತ್ಮಿಕ ಒದಗಿಸುವಿಕೆಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಿರಿ. ನಿಮಗೆ ವೈಯಕ್ತಿಕ ಗಮನದ ಅಗತ್ಯವಿರುವಾಗ ಕ್ರೈಸ್ತ ಸಭೆಯಲ್ಲಿ ಕುರುಬರಾಗಿ, ಬೋಧಕರಾಗಿ ಮತ್ತು ಸಲಹೆಗಾರರಾಗಿ ಸೇವೆಸಲ್ಲಿಸುತ್ತಿರುವವರ ಬಳಿಗೆ ಹೋಗಿರಿ. (ಅ. ಕೃತ್ಯಗಳು 20:28) ಎಲ್ಲ ಕ್ರೈಸ್ತ ಕೂಟಗಳಿಗೆ ತಪ್ಪದೆ ಹಾಜರಾಗಿರಿ. ಕೂಟಗಳು, ನಾವು ‘ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಪ್ರೇರೇಪಿಸುತ್ತದೆ.’ (ಇಬ್ರಿಯ 10:24) ನೀವು ಜಾಗರೂಕರಾಗಿರುವಂತೆಯೂ ಆಧ್ಯಾತ್ಮಿಕವಾಗಿ ಬಲಶಾಲಿಗಳಾಗಿರುವಂತೆಯೂ ಪ್ರತಿದಿನ ಬೈಬಲ್‌ ಓದುವಿಕೆ ಮತ್ತು ವೈಯಕ್ತಿಕ ಅಧ್ಯಯನವು ಸಹಾಯಮಾಡುತ್ತದೆ. ಅದೇ ರೀತಿಯಲ್ಲಿ, ಕ್ರೈಸ್ತ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವಾಗಲೂ ನೀವು ಆಧ್ಯಾತ್ಮಿಕವಾಗಿ ಬಲಹೊಂದುವಿರಿ.​—⁠ಕೀರ್ತನೆ 1:​1-3; ಮತ್ತಾಯ 24:14.

ಯೆಹೋವನ ಪ್ರೀತಿ ಮತ್ತು ಕಾಳಜಿಯನ್ನು ನೀವು ಎಷ್ಟು ಹೆಚ್ಚಾಗಿ ಸವಿದು ನೋಡುತ್ತೀರೊ, ‘ಸತ್ಕ್ರಿಯೆಗಳಲ್ಲಿ ಆಸಕ್ತರಾಗಿರುವ’ ನಿಮ್ಮ ಇಚ್ಛೆಯು ಅಷ್ಟೇ ಹೆಚ್ಚಾಗಿ ಬಲಗೊಳ್ಳುತ್ತದೆ. (ತೀತ 2:14) ನೆನಪಿನಲ್ಲಿಡಿ, “ಕಡೇ ವರೆಗೂ ತಾಳುವವನು ರಕ್ಷಣೆಹೊಂದುವನು.” (ಮತ್ತಾಯ 24:13) ಹೌದು, ‘ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರಲು’ ದೃಢನಿರ್ಧಾರವನ್ನು ಮಾಡಿರಿ!

[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನು ‘ನಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ಬರಗೊಡಿಸುವುದಿಲ್ಲ’ ಮತ್ತು ಯಾವಾಗಲೂ “ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು” ಎಂಬ ಸಂಪೂರ್ಣ ಭರವಸೆ ನಮಗಿರಬೇಕು

[ಪುಟ 30ರಲ್ಲಿರುವ ಚಿತ್ರಗಳು]

ದೇವಪ್ರಭುತ್ವಾತ್ಮಕ ಚಟುವಟಿಕೆಗಳಲ್ಲಿ ಕಾರ್ಯಮಗ್ನರಾಗಿರುವುದು ಪರೀಕ್ಷೆಗಳನ್ನು ಎದುರಿಸಲಿಕ್ಕಾಗಿ ನಮ್ಮನ್ನು ಸಿದ್ಧಗೊಳಿಸಲು ಸಹಾಯಮಾಡಬಲ್ಲದು