ಕೇವಲ ಕ್ರಿಯೆಗಳಿಂದ ಅಲ್ಲ, ಬದಲಾಗಿ ಅಪಾತ್ರ ಕೃಪೆಯಿಂದಲೇ ರಕ್ಷಿಸಲ್ಪಡುವುದು
ಕೇವಲ ಕ್ರಿಯೆಗಳಿಂದ ಅಲ್ಲ, ಬದಲಾಗಿ ಅಪಾತ್ರ ಕೃಪೆಯಿಂದಲೇ ರಕ್ಷಿಸಲ್ಪಡುವುದು
“[ನೀವು] ನಂಬಿಕೆಯ ಮೂಲಕ . . . ರಕ್ಷಣೆಹೊಂದಿದವರಾಗಿದ್ದೀರಿ. . . . ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.”—ಎಫೆಸ 2:8, 9.
ಇಂದು ಜನರು ವೈಯಕ್ತಿಕ ಸಾಧನೆಗಳ ವಿಷಯದಲ್ಲಿ ಹೆಮ್ಮೆಪಡುತ್ತಾರೆ, ಮತ್ತು ಸಮಯ ಸಿಕ್ಕಾಗೆಲ್ಲ ಅವುಗಳ ಕುರಿತು ಜಂಬಕೊಚ್ಚಿಕೊಳ್ಳಲು ತವಕಿಸುತ್ತಾರೆ. ಕ್ರೈಸ್ತರಾದರೋ ಭಿನ್ನರಾಗಿದ್ದಾರೆ. ಅವರು ತಮ್ಮ ಸ್ವಂತ ಸಾಧನೆಗಳಿಗೆ ಮಿತಿಮೀರಿದ ಮಹತ್ವ ನೀಡುವುದರಿಂದ ದೂರವಿರುತ್ತಾರೆ. ಸತ್ಯ ಆರಾಧನೆಗೆ ಸಂಬಂಧಪಟ್ಟ ಸಾಧನೆಗಳ ವಿಷಯದಲ್ಲಿಯೂ ಅವರು ಜಂಬಕೊಚ್ಚಿಕೊಳ್ಳುವುದಿಲ್ಲ. ಒಂದು ಗುಂಪಾಗಿ ಯೆಹೋವನ ಜನರು ಏನನ್ನು ಸಾಧಿಸುತ್ತಾರೋ ಅದರ ವಿಷಯದಲ್ಲಿ ಅವರು ಸಂತೋಷಪಡುತ್ತಾರಾದರೂ, ಈ ಸಾಧನೆಗಳಲ್ಲಿ ತಮ್ಮ ವೈಯಕ್ತಿಕ ಪಾತ್ರವನ್ನು ಅವರು ಒತ್ತಿಹೇಳುವುದಿಲ್ಲ. ಯೆಹೋವನ ಸೇವೆಯಲ್ಲಿ ವೈಯಕ್ತಿಕ ಸಾಧನೆಗಳಿಗಿಂತಲೂ ಯೋಗ್ಯವಾದ ಹೇತುಗಳೇ ಹೆಚ್ಚು ಪ್ರಾಮುಖ್ಯವಾಗಿವೆ ಎಂಬುದನ್ನು ಅವರು ಮನಗಾಣುತ್ತಾರೆ. ಕಟ್ಟಕಡೆಗೆ ನಿತ್ಯಜೀವದ ವರದಾನವನ್ನು ಪಡೆದುಕೊಳ್ಳುವ ಯಾರೇ ಆದರೂ, ಅದನ್ನು ತಮ್ಮ ವೈಯಕ್ತಿಕ ಸಾಧನೆಗಳ ಮೂಲಕ ಪಡೆದುಕೊಳ್ಳುವುದಿಲ್ಲ ಬದಲಾಗಿ ನಂಬಿಕೆಯ ಮೂಲಕ ಮತ್ತು ದೇವರ ಅಪಾತ್ರ ಕೃಪೆಯಿಂದಲೇ ಪಡೆದುಕೊಳ್ಳುತ್ತಾರೆ.—ಲೂಕ 17:10; ಯೋಹಾನ 3:16.
2 ಅಪೊಸ್ತಲ ಪೌಲನಿಗೆ ಈ ವಾಸ್ತವಾಂಶವು ಚೆನ್ನಾಗಿ ತಿಳಿದಿತ್ತು. ‘ಶರೀರದಲ್ಲಿ ನಾಟಿದ್ದ ಒಂದು ಶೂಲದಿಂದ’ ಉಪಶಮನವನ್ನು ಪಡೆಯಲಿಕ್ಕಾಗಿ ಅವನು ಮೂರು ಸಲ ಪ್ರಾರ್ಥಿಸಿದ ಬಳಿಕ ಯೆಹೋವನಿಂದ 2 ಕೊರಿಂಥ 12:7-9.
ಈ ಉತ್ತರವನ್ನು ಪಡೆದುಕೊಂಡನು: “ನನ್ನ [ಅಪಾತ್ರ] ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.” ಯೆಹೋವನ ನಿರ್ಧಾರವನ್ನು ದೀನಭಾವದಿಂದ ಅಂಗೀಕರಿಸುತ್ತಾ ಪೌಲನಂದದ್ದು: “ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು.” ಪೌಲನ ದೀನ ಮನೋಭಾವವನ್ನು ನಾವು ಸಹ ಅನುಕರಿಸಲು ಬಯಸಬೇಕು.—3 ಕ್ರೈಸ್ತ ಕೆಲಸಗಳನ್ನು ನಿರ್ವಹಿಸುವುದರಲ್ಲಿ ಪೌಲನು ಉತ್ತಮ ಮಾದರಿಯಾಗಿದ್ದನಾದರೂ, ತನ್ನ ಸ್ವಂತ ಸಾಮರ್ಥ್ಯಗಳಿಂದ ತಾನು ಈ ಕೆಲಸಗಳನ್ನು ಸಾಧಿಸಲಿಲ್ಲ ಎಂಬುದನ್ನು ಅವನು ಮನಗಂಡನು. ವಿನಯಭಾವದಿಂದ ಅವನು ತಿಳಿಸಿದ್ದು: “ನಾನು ಕ್ರಿಸ್ತನ ಅಪ್ರಮೇಯವಾದ ಐಶ್ವರ್ಯದ ವಿಷಯವಾದ ಶುಭಸಮಾಚಾರವನ್ನು ಅನ್ಯಜನರಿಗೆ ಪ್ರಸಿದ್ಧಿಪಡಿಸುವ ಹಾಗೆ . . . ದೇವಜನರೊಳಗೆ ಅತ್ಯಲ್ಪನಾದ ನನಗೆ [“ಈ ಅಪಾತ್ರ ಕೃಪೆಯು,” NW] ಅನುಗ್ರಹಿಸೋಣವಾಯಿತು.” (ಎಫೆಸ 3:8) ಇಲ್ಲಿ ಪೌಲನು ಜಂಬಕೊಚ್ಚಿಕೊಳ್ಳುವ ಮನೋಭಾವವನ್ನು ಅಥವಾ ಇತರರಿಗಿಂತ ತಾನು ಹೆಚ್ಚು ನೀತಿವಂತನು ಎಂಬ ಭಾವನೆಯನ್ನು ತೋರಿಸಲಿಲ್ಲ. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ [ಅಪಾತ್ರ] ಕೃಪೆಯನ್ನು ಅನುಗ್ರಹಿಸುತ್ತಾನೆ.” (ಯಾಕೋಬ 4:6; 1 ಪೇತ್ರ 5:5) ದೀನಭಾವದಿಂದ ನಾವು ನಮ್ಮನ್ನೇ, ನಮ್ಮ ಸಹೋದರರಲ್ಲಿ ಅತ್ಯಲ್ಪನಾಗಿರುವವನಿಗಿಂತಲೂ ಅಲ್ಪರಾಗಿ ಪರಿಗಣಿಸಿಕೊಳ್ಳುತ್ತಾ, ಪೌಲನ ಮಾದರಿಯನ್ನು ಅನುಸರಿಸುತ್ತೇವೋ?
‘ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಿಕೊಳ್ಳುವುದು’
4 ಅಪೊಸ್ತಲ ಪೌಲನು ಕ್ರೈಸ್ತರಿಗೆ ಸಲಹೆ ನೀಡಿದ್ದು: “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.” (ಫಿಲಿಪ್ಪಿ 2:3) ವಿಶೇಷವಾಗಿ ನಾವು ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಇದು ಒಂದು ಪಂಥಾಹ್ವಾನವಾಗಿರಬಹುದು. ದೀನಭಾವವನ್ನು ತೋರಿಸುವುದು ಏಕೆ ಕಷ್ಟಕರವಾಗಿರಬಹುದೆಂದರೆ, ನಾವು ಇಂದಿನ ಲೋಕದಲ್ಲಿ ವ್ಯಾಪಕವಾಗಿ ಪ್ರಚಲಿತವಾಗಿರುವ ಸ್ಪರ್ಧಾತ್ಮಕ ಮನೋಭಾವದಿಂದ ನಿರ್ದಿಷ್ಟ ಹಂತದ ವರೆಗೆ ಪ್ರಭಾವಿಸಲ್ಪಟ್ಟಿದ್ದೇವೆ. ಮಕ್ಕಳಾಗಿ ನಾವು ಮನೆಯಲ್ಲಿ ನಮ್ಮ ಒಡಹುಟ್ಟಿದವರೊಂದಿಗೆ ಅಥವಾ ಶಾಲೆಯಲ್ಲಿ ನಮ್ಮ ಸಹಪಾಠಿಗಳೊಂದಿಗೆ ಸ್ಪರ್ಧಿಸುವಂತೆ ಕಲಿಸಲ್ಪಟ್ಟಿರಬಹುದು. ಶಾಲೆಯಲ್ಲಿ ಪ್ರಸಿದ್ಧ ಕ್ರೀಡಾಪಟು ಅಥವಾ ಅತ್ಯುತ್ತಮ ವಿದ್ಯಾರ್ಥಿ ಎಂಬ ಹೆಸರು ಗಳಿಸಲು ಪ್ರಯತ್ನಿಸುವಂತೆ ನಮಗೆ ಸತತವಾಗಿ ಪ್ರೋತ್ಸಾಹಿಸಲಾಗಿರಬಹುದು. ಯೋಗ್ಯವಾದ ಯಾವುದೇ ಕೆಲಸದಲ್ಲಿ ಅತ್ಯುತ್ತಮ ಪ್ರಯತ್ನವನ್ನು ಮಾಡುವುದು ಪ್ರಶಂಸಾರ್ಹ ಎಂಬುದು ನಿಶ್ಚಯ. ಆದರೂ, ಕ್ರೈಸ್ತರು ಸ್ವತಃ ತಮ್ಮ ಕಡೆಗೆ ಅನಗತ್ಯ ಗಮನವನ್ನು ಸೆಳೆಯಲಿಕ್ಕಾಗಿ ಹೀಗೆ ಮಾಡುವುದಿಲ್ಲ, ಬದಲಾಗಿ ಆ ಚಟುವಟಿಕೆಯಿಂದ ಪೂರ್ಣವಾಗಿ ಪ್ರಯೋಜನ ಪಡೆದುಕೊಳ್ಳಲು ಮತ್ತು ಇತರರಿಗೂ ಪ್ರಯೋಜನ ನೀಡಲಿಕ್ಕಾಗಿ ಅದನ್ನು ಮಾಡುತ್ತಾರೆ. ಆದರೆ, ತಾನೇ ಅತ್ಯುತ್ತಮನು ಎಂದು ಇತರರು ಹೊಗಳಬೇಕು ಎಂದು ಯಾವಾಗಲೂ ಬಯಸುವುದು ಅಪಾಯಕರವಾಗಿರಸಾಧ್ಯವಿದೆ. ಹೇಗೆ?
5 ಒಂದುವೇಳೆ ಸ್ಪರ್ಧಾತ್ಮಕವಾದ ಅಥವಾ ದುರಭಿಮಾನದ ಮನೋಭಾವವನ್ನು ನಿಯಂತ್ರಿಸದಿರುವಲ್ಲಿ, ಅದು ಒಬ್ಬ ವ್ಯಕ್ತಿಯು ಅಗೌರವಭರಿತನಾಗಿ ಮತ್ತು ಅಹಂಕಾರಿಯಾಗಿ ಪರಿಣಮಿಸುವಂತೆ ಮಾಡಬಲ್ಲದು. ಅವನು ಇತರರ ಸಾಮರ್ಥ್ಯಗಳು ಮತ್ತು ಸುಯೋಗಗಳನ್ನು ನೋಡಿ ಅಸೂಯೆಪಡಲು ಆರಂಭಿಸಬಹುದು. ಜ್ಞಾನೋಕ್ತಿ 28:22 (NIBV) ಹೇಳುವುದು: “ಧನವಂತನಾಗಲು ಆತುರಪಡುವವನು ಕೆಟ್ಟ ಕಣ್ಣುಳ್ಳವನಾಗಿದ್ದಾನೆ. ತನಗೆ ಬಡತನವು ಬರುವುದನ್ನು ಅವನು ಯೋಚಿಸುವುದಿಲ್ಲ.” ಅವನು ಯಾವ ಸ್ಥಾನಮಾನಗಳಿಗೆ ಅರ್ಹತೆಯನ್ನು ಪಡೆದಿಲ್ಲವೋ ಆ ಸ್ಥಾನಮಾನಗಳನ್ನು ದುರಹಂಕಾರದಿಂದ ಎಟುಕಿಸಿಕೊಳ್ಳಲು ಪ್ರಯತ್ನಿಸಬಹುದು. ತನ್ನ ಕೃತ್ಯಗಳನ್ನು ಸರಿಯೆಂದು ಸಮರ್ಥಿಸಲಿಕ್ಕಾಗಿ ಅವನು ಗುಣುಗುಟ್ಟಲಾರಂಭಿಸಬಹುದು ಮತ್ತು ಇತರರನ್ನು ಟೀಕಿಸತೊಡಗಬಹುದು. ಇಂಥ ಪ್ರವೃತ್ತಿಗಳನ್ನು ಕ್ರೈಸ್ತರು ವರ್ಜಿಸಬೇಕಾಗಿದೆ. (ಯಾಕೋಬ 3:14-16) ಏನೇ ಆದರೂ ಇಂಥ ವ್ಯಕ್ತಿಯು ‘ತಾನು ಮೊದಲು’ ಎಂಬ ಮನೋಭಾವವನ್ನು ಬೆಳೆಸಿಕೊಳ್ಳುವ ಅಪಾಯಕ್ಕೆ ಒಳಗಾಗಿರುತ್ತಾನೆ.
ಗಲಾತ್ಯ 5:26) ಸುವ್ಯಕ್ತವಾಗಿಯೇ ಈ ರೀತಿಯ ಮನೋಭಾವಕ್ಕೆ ಬಲಿಬಿದ್ದಂಥ ಒಬ್ಬ ಜೊತೆ ಕ್ರೈಸ್ತನ ಕುರಿತು ಅಪೊಸ್ತಲ ಯೋಹಾನನು ಮಾತಾಡಿದನು. ಅವನು ಹೇಳಿದ್ದು: “[ನಾನು] ಸಭೆಗೆ ಕೆಲವು ಮಾತುಗಳನ್ನು ಬರೆದಿದ್ದೆನು; ಆದರೆ ಸಭೆಯವರಲ್ಲಿ ಪ್ರಮುಖನಾಗಬೇಕೆಂದಿರುವ ದಿಯೋತ್ರೇಫನು ನಮ್ಮ ಮಾತನ್ನು ಅಂಗೀಕರಿಸುವದಿಲ್ಲ. ಆದಕಾರಣ ನಾನು ಬಂದರೆ ಅವನು ಮಾಡುವ ಕೃತ್ಯಗಳ ವಿಷಯದಲ್ಲಿ ಎಲ್ಲರಿಗೂ ನೆನಪುಕೊಡುವೆನು. ಅವನು ಹರಟೆಕೊಚ್ಚುವವನಾಗಿ ನಮ್ಮ ವಿಷಯದಲ್ಲಿ ಕೆಟ್ಟಕೆಟ್ಟ ಮಾತುಗಳನ್ನಾಡುತ್ತಾನೆ.” ಒಬ್ಬ ಕ್ರೈಸ್ತನು ಇಂಥ ಸ್ಥಿತಿಯನ್ನು ತಲಪುವುದು ಎಷ್ಟು ದುಃಖಕರ ಸನ್ನಿವೇಶವಾಗಿದೆ!—3 ಯೋಹಾನ 9, 10.
6 ಆದುದರಿಂದಲೇ ಬೈಬಲು ಕ್ರೈಸ್ತರನ್ನು ಹೀಗೆ ಹುರಿದುಂಬಿಸುತ್ತದೆ: “ಅಹಂಕಾರಿಗಳೂ ಒಬ್ಬರನ್ನೊಬ್ಬರು ಕೆಣಕುವವರೂ ಒಬ್ಬರ ಮೇಲೊಬ್ಬರು ಮತ್ಸರವುಳ್ಳವರೂ ಆಗದೇ ಇರೋಣ.” (7 ಕ್ರೈಸ್ತನೊಬ್ಬನು ಎಲ್ಲ ಸ್ಪರ್ಧಾತ್ಮಕ ಬೆನ್ನಟ್ಟುವಿಕೆಗಳಿಂದ ಸಂಪೂರ್ಣವಾಗಿ ದೂರವಿರಸಾಧ್ಯವಿದೆ ಎಂದು ನೆನಸುವುದು ಅವಾಸ್ತವಿಕವಾದದ್ದಾಗಿದೆ ಎಂಬುದು ನಿಜ. ಉದಾಹರಣೆಗೆ, ಅವನ ಐಹಿಕ ಉದ್ಯೋಗದಲ್ಲಿ, ಒಂದೇ ರೀತಿಯ ಉತ್ಪನ್ನಗಳನ್ನು ಉತ್ಪಾದಿಸುವ ಅಥವಾ ತದ್ರೀತಿಯ ಸೇವಾಸೌಲಭ್ಯಗಳನ್ನು ಒದಗಿಸುವ ಬೇರೆ ವ್ಯಕ್ತಿಗಳೊಂದಿಗೆ ಅಥವಾ ವ್ಯಾಪಾರಗಳೊಂದಿಗಿನ ಆರ್ಥಿಕ ಸ್ಪರ್ಧೆಯಲ್ಲಿ ಅವನು ಒಳಗೂಡಿರಬಹುದು. ಆದರೂ, ಅಂಥ ಸಂದರ್ಭಗಳಲ್ಲಿಯೂ ಕ್ರೈಸ್ತನೊಬ್ಬನು ಗೌರವ, ಪ್ರೀತಿ ಮತ್ತು ಪರಿಗಣನೆಯ ಮನೋಭಾವದಿಂದ ತನ್ನ ವ್ಯಾಪಾರವನ್ನು ನಡೆಸಿಕೊಂಡುಹೋಗಲು ಬಯಸುವನು. ಅವನು ಕಾನೂನುಬಾಹಿರ ಅಥವಾ ಅಕ್ರೈಸ್ತ ರೂಢಿಗಳನ್ನು ತಿರಸ್ಕರಿಸುವನು ಮತ್ತು ಒಂದು ಸ್ಪರ್ಧಾತ್ಮಕವಾದ, ದಯದಾಕ್ಷಿಣ್ಯವಿಲ್ಲದ ಪೈಪೋಟಿಗೆ ತುಂಬ ಹೆಸರುವಾಸಿಯಾಗುವ ವ್ಯಕ್ತಿಯಾಗಿ ಪರಿಣಮಿಸುವುದರಿಂದ ದೂರವಿರುವನು. ಯಾವುದೇ ಬೆನ್ನಟ್ಟುವಿಕೆಯಲ್ಲಿ ತಾನು ಮೊದಲಿನ ಸ್ಥಾನದಲ್ಲೇ ಇರುವುದು ಜೀವನದಲ್ಲಿ ಅತ್ಯಂತ ಪ್ರಾಮುಖ್ಯವಾದದ್ದಾಗಿದೆ ಎಂದು ಅವನು ಎಂದೂ ಭಾವಿಸುವುದಿಲ್ಲ. ಕ್ರೈಸ್ತನೊಬ್ಬನು ಐಹಿಕ ಬೆನ್ನಟ್ಟುವಿಕೆಗಳ ವಿಷಯದಲ್ಲೇ ಇಂಥ ಮನೋಭಾವವನ್ನು ತೋರಿಸುವ ಅಗತ್ಯವಿರುವಾಗ, ಆರಾಧನಾ ಕ್ಷೇತ್ರದಲ್ಲಿ ಈ ಮನೋಭಾವವು ಇನ್ನೆಷ್ಟು ಹೆಚ್ಚು ಪ್ರಾಮುಖ್ಯವಾದದ್ದಾಗಿದೆ!
“ಮತ್ತೊಬ್ಬನೊಂದಿಗೆ ಹೋಲಿಕೆಯಲ್ಲಿ ಅಲ್ಲ”
8 ತಮ್ಮ ಆರಾಧನೆಯ ವಿಷಯದಲ್ಲಿ ಕ್ರೈಸ್ತರಿಗಿರಬೇಕಾದ ಮನೋಭಾವವು ಈ ಪ್ರೇರಿತ ಮಾತುಗಳಲ್ಲಿ ವರ್ಣಿಸಲ್ಪಟ್ಟಿದೆ: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ [“ಮತ್ತೊಬ್ಬನೊಂದಿಗೆ ಹೋಲಿಕೆಯಲ್ಲಿ ಅಲ್ಲ,” NW].” (ಗಲಾತ್ಯ 6:4) ತಾವು ಪರಸ್ಪರ ಪೈಪೋಟಿಯನ್ನು ನಡೆಸುತ್ತಿಲ್ಲ ಎಂಬುದನ್ನು ಅರಿತಿರುವ ಸಭಾ ಹಿರಿಯರು, ಒಂದು ಮಂಡಲಿಯಾಗಿ ಒಬ್ಬರು ಇನ್ನೊಬ್ಬರೊಂದಿಗೆ ಸಹಕರಿಸುತ್ತಾರೆ ಮತ್ತು ಐಕ್ಯಭಾವದಿಂದ ಕೆಲಸಮಾಡುತ್ತಾರೆ. ಇಡೀ ಸಭೆಯ ಒಳಿತಿಗಾಗಿ ಪ್ರತಿಯೊಬ್ಬರೂ ನೀಡಸಾಧ್ಯವಿರುವ ಬೆಂಬಲದಲ್ಲಿ ಅವರು ಸಂತೋಷಪಡುತ್ತಾರೆ. ಹೀಗೆ ಅವರು ಒಡಕನ್ನು ಉಂಟುಮಾಡುವ ಪೈಪೋಟಿಯಿಂದ ದೂರವಿರುತ್ತಾರೆ ಮತ್ತು ಐಕ್ಯಭಾವದ ವಿಷಯದಲ್ಲಿ ಇಡೀ ಸಭೆಗೆ ಅತ್ಯುತ್ತಮ ಮಾದರಿಯನ್ನಿಡುತ್ತಾರೆ.
9 ವಯಸ್ಸು, ಅನುಭವ ಇಲ್ಲವೆ ಸಹಜ ಸಾಮರ್ಥ್ಯಗಳ ಕಾರಣದಿಂದ ಕೆಲವು ಹಿರಿಯರು ಬೇರೆ ಹಿರಿಯರಿಗಿಂತ ಹೆಚ್ಚು ಕಾರ್ಯಸಮರ್ಥರಾಗಿರಬಹುದು, ಅಥವಾ ಅವರಿಗೆ ಹೆಚ್ಚು ವಿವೇಚನಾಶಕ್ತಿಯು ಇರಬಹುದು. ಇದರ ಪರಿಣಾಮವಾಗಿ, ಯೆಹೋವನ ಸಂಘಟನೆಯಲ್ಲಿ ಹಿರಿಯರಿಗೆ ಭಿನ್ನ ಜವಾಬ್ದಾರಿಗಳಿರುತ್ತವೆ. ಹೋಲಿಕೆಗಳನ್ನು ಮಾಡುವುದಕ್ಕೆ ಬದಲಾಗಿ ಅವರು ಈ ಸಲಹೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ: “ನೀವೆಲ್ಲರು ದೇವರ ವಿವಿಧ [ಅಪಾತ್ರ] ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ.” (1 ಪೇತ್ರ 4:10) ವಾಸ್ತವದಲ್ಲಿ ಈ ವಚನವು ಯೆಹೋವನ ಸೇವಕರೆಲ್ಲರಿಗೆ ಅನ್ವಯವಾಗುತ್ತದೆ, ಏಕೆಂದರೆ ಬಹುತೇಕವಾಗಿ ಎಲ್ಲರೂ ನಿಷ್ಕೃಷ್ಟ ಜ್ಞಾನದ ಕೃಪಾವರವನ್ನು ಪಡೆದಿದ್ದಾರೆ ಮತ್ತು ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸುವ ಸುಯೋಗದಲ್ಲಿ ಎಲ್ಲರೂ ಆನಂದಿಸುತ್ತಾರೆ.
ಜ್ಞಾನೋಕ್ತಿ 24:12; 1 ಸಮುವೇಲ 16:7) ಹೀಗಿರುವುದರಿಂದ, ನಾವು ಆಗಿಂದಾಗ್ಗೆ ‘ನಾನು ಯಾವ ಹೇತುವಿನಿಂದ ನಂಬಿಕೆಯ ಕ್ರಿಯೆಗಳನ್ನು ಮಾಡುತ್ತೇನೆ?’ ಎಂದು ನಮ್ಮನ್ನೇ ಕೇಳಿಕೊಳ್ಳುವುದು ಒಳ್ಳೇದು.—ಕೀರ್ತನೆ 24:3, 4; ಮತ್ತಾಯ 5:8.
10 ನಾವು ನಮ್ಮ ಪವಿತ್ರ ಸೇವೆಯನ್ನು, ಇತರರಿಗಿಂತ ಮೇಲೇರಿಸಿಕೊಳ್ಳುವ ಕಾರಣಕ್ಕಾಗಿ ಅಲ್ಲ, ಬದಲಾಗಿ ಪ್ರೀತಿಯಿಂದ ಮತ್ತು ಭಕ್ತಿಯಿಂದ ಮಾಡುವಾಗ ಮಾತ್ರ ಯೆಹೋವನು ಅದನ್ನು ಸಂತೋಷದಿಂದ ಸ್ವೀಕರಿಸುತ್ತಾನೆ. ಆದುದರಿಂದಲೇ ಸತ್ಯ ಆರಾಧನೆಯನ್ನು ಬೆಂಬಲಿಸುವ ನಮ್ಮ ಚಟುವಟಿಕೆಯ ವಿಷಯದಲ್ಲಿ ನಾವು ಸಮತೂಕ ನೋಟವನ್ನು ಹೊಂದಿರುವುದು ಅತ್ಯಾವಶ್ಯಕವಾಗಿದೆ. ಯಾರೊಬ್ಬರೂ ಇನ್ನೊಬ್ಬರ ಹೇತುಗಳೇನು ಎಂಬುದನ್ನು ನಿಷ್ಕೃಷ್ಟವಾಗಿ ತೀರ್ಮಾನಿಸಲು ಸಾಧ್ಯವಿಲ್ಲವಾದರೂ, “ಹೃದಯಶೋಧಕ”ನಾಗಿರುವ ಯೆಹೋವನು ಎಲ್ಲವನ್ನೂ ‘ಗ್ರಹಿಸುತ್ತಾನೆ.’ (ನಮ್ಮ ನಂಬಿಕೆಯ ಕ್ರಿಯೆಗಳ ಕುರಿತಾದ ಯೋಗ್ಯ ನೋಟ
11 ಯೆಹೋವನ ಸಮ್ಮತಿಯನ್ನು ಪಡೆಯುವುದರಲ್ಲಿ ನಮ್ಮ ಹೇತುವು ಸರ್ವಪ್ರಾಮುಖ್ಯವಾಗಿರುವಲ್ಲಿ, ನಮ್ಮ ನಂಬಿಕೆಯ ಕ್ರಿಯೆಗಳ ವಿಷಯದಲ್ಲಿ ನಾವು ಎಷ್ಟರ ಮಟ್ಟಿಗೆ ಚಿಂತಿತರಾಗಿರಬೇಕು? ನಾವು ನಮ್ಮ ಶುಶ್ರೂಷೆಯನ್ನು ಯೋಗ್ಯ ಹೇತುವಿನಿಂದ ಮಾಡುವಷ್ಟರ ತನಕ, ನಾವು ಏನು ಮಾಡುತ್ತೇವೆ ಮತ್ತು ಎಷ್ಟನ್ನು ಮಾಡುತ್ತೇವೆ ಎಂಬುದರ ದಾಖಲೆಯನ್ನಿಡುವುದು ನಿಜವಾಗಿಯೂ ಅಗತ್ಯವಾಗಿದೆಯೋ? ಇವು ಸಮಂಜಸವಾದ ಪ್ರಶ್ನೆಗಳಾಗಿವೆ, ಏಕೆಂದರೆ ನಮ್ಮ ನಂಬಿಕೆಯ ಕ್ರಿಯೆಗಳಿಗಿಂತಲೂ ಸಂಖ್ಯೆಗಳಿಗೆ ಹೆಚ್ಚಿನ ಮಹತ್ವವನ್ನು ಕೊಡಲು ನಾವು ಬಯಸುವುದಿಲ್ಲ ಅಥವಾ ನಮ್ಮ ಕ್ರೈಸ್ತ ಚಟುವಟಿಕೆಯ ವಿಷಯದಲ್ಲಿ ಒಂದು ಒಳ್ಳೇ ವರದಿಯು ತುಂಬ ಪ್ರಾಮುಖ್ಯವಾದ ವಿಷಯವಾಗುವಂತೆ ಬಿಡಲು ಬಯಸುವುದಿಲ್ಲ.
12ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಎಂಬ ಪುಸ್ತಕವು ಏನು ಹೇಳುತ್ತದೆ ಎಂಬುದನ್ನು ಗಮನಿಸಿರಿ: “ಯೇಸುವಿನ ಆದಿ ಹಿಂಬಾಲಕರು ಸಾರುವ ಕೆಲಸದ ಪ್ರಗತಿಯ ಕುರಿತಾದ ವರದಿಗಳಲ್ಲಿ ಆಸಕ್ತಿವಹಿಸಿದರು. (ಮಾರ್ಕ 6:30) ಬೈಬಲಿನ ಅಪೊಸ್ತಲರ ಕೃತ್ಯಗಳು ಪುಸ್ತಕವು, ಪಂಚಾಶತ್ತಮದಂದು ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಾಗ ಸುಮಾರು 120 ಜನರು ಇದ್ದರು ಎಂದು ಹೇಳುತ್ತದೆ. ಬೇಗನೆ ಶಿಷ್ಯರ ಸಂಖ್ಯೆಯು 3,000ಕ್ಕೆ ಮತ್ತು ಬಳಿಕ 5,000ಕ್ಕೆ ಏರಿತು. . . . (ಅ. ಕೃತ್ಯಗಳು 1:15; 2:5-11, 41, 47; 4:4; 6:7) ಈ ಅಭಿವೃದ್ಧಿಯ ವಾರ್ತೆಯು ಆ ಶಿಷ್ಯರಿಗೆ ಎಷ್ಟೊಂದು ಉತ್ತಮವಾದ ಪ್ರೋತ್ಸಾಹವನ್ನು ನೀಡಿರಬೇಕು!” ಇದೇ ಕಾರಣಕ್ಕಾಗಿ ಯೆಹೋವನ ಸಾಕ್ಷಿಗಳು ಇಂದು, ಯೇಸುವಿನ ಮಾತುಗಳ ನೆರವೇರಿಕೆಯಲ್ಲಿ ಲೋಕವ್ಯಾಪಕವಾಗಿ ಯಾವ ಕೆಲಸವು ಪೂರೈಸಲ್ಪಡುತ್ತಿದೆಯೋ ಅದರ ನಿಷ್ಕೃಷ್ಟ ದಾಖಲೆಗಳನ್ನು ಇಡಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುತ್ತಾರೆ. ಯೇಸುವಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಇಂಥ ವರದಿಗಳು ಲೋಕವ್ಯಾಪಕವಾಗಿ ಏನನ್ನು ಸಾಧಿಸಲಾಗುತ್ತಿದೆ ಎಂಬುದರ ಕುರಿತಾದ ಒಂದು ವಾಸ್ತವಿಕ ಚಿತ್ರಣವನ್ನು ಒದಗಿಸುತ್ತವೆ. ಸಾರುವ ಕೆಲಸವನ್ನು ಮುಂದುವರಿಸಲು ಎಲ್ಲಿ ಸಹಾಯದ ಅಗತ್ಯವಿದೆ ಮತ್ತು ಯಾವ ರೀತಿಯ ಸಾಹಿತ್ಯವು ಬೇಕಾಗಿದೆ ಹಾಗೂ ಎಷ್ಟು ಪ್ರಮಾಣದಲ್ಲಿ ಆ ಸಾಹಿತ್ಯದ ಅಗತ್ಯವಿದೆ ಎಂಬುದನ್ನೂ ಅವು ತೋರಿಸುತ್ತವೆ.
13 ಹೀಗೆ, ನಮ್ಮ ಸಾರುವ ಚಟುವಟಿಕೆಯನ್ನು ವರದಿಸುವುದು, ರಾಜ್ಯದ ಸುವಾರ್ತೆಯನ್ನು ಸಾರುವ ನಮ್ಮ ನೇಮಕವನ್ನು ಹೆಚ್ಚು ಪರಿಣಾಮಕಾರಿಯಾಗಿ ಪೂರೈಸುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಅಷ್ಟುಮಾತ್ರವಲ್ಲ, ಲೋಕದ ಇತರ ಭಾಗಗಳಲ್ಲಿನ ನಮ್ಮ ಸಹೋದರರ ಚಟುವಟಿಕೆಗಳ ಕುರಿತು ನಾವು ಕೇಳಿಸಿಕೊಳ್ಳುವಾಗ ನಮಗೆ ಪ್ರೋತ್ಸಾಹ ಸಿಗುವುದಿಲ್ಲವೊ? ಭೂವ್ಯಾಪಕವಾಗಿ ಆಗಿರುವ ಅಭಿವೃದ್ಧಿ ಮತ್ತು ವಿಸ್ತರಣೆಯ ಕುರಿತಾದ ಸುದ್ದಿಯು ನಮ್ಮನ್ನು ಸಂತೋಷಭರಿತರನ್ನಾಗಿ ಮಾಡುತ್ತದೆ, ನಮ್ಮ ಚಟುವಟಿಕೆಯನ್ನು ಹೆಚ್ಚಿಸುವಂತೆ ಪ್ರಚೋದಿಸುತ್ತದೆ ಹಾಗೂ ನಮಗೆ ಯೆಹೋವನ ಆಶೀರ್ವಾದದ ಆಶ್ವಾಸನೆಯನ್ನು ನೀಡುತ್ತದೆ. ಆ ಲೋಕವ್ಯಾಪಕ ವರದಿಯಲ್ಲಿ ನಮ್ಮ ವೈಯಕ್ತಿಕ ವರದಿಯು ಸಹ ಒಳಗೂಡಿಸಲ್ಪಟ್ಟಿದೆ ಎಂದು ತಿಳಿದಿರುವುದು ಎಷ್ಟು ತೃಪ್ತಿಕರವಾಗಿದೆ! ಲೋಕವ್ಯಾಪಕ ವರದಿಯ ಒಟ್ಟು ಮೊತ್ತಕ್ಕೆ ಹೋಲಿಸುವಾಗ ನಮ್ಮ ವರದಿಯು ತೀರ ಅಲ್ಪವಾದದ್ದಾಗಿದೆ, ಆದರೆ ಅದು ಯೆಹೋವನ ದೃಷ್ಟಿಗೆ ಬೀಳದಿರುವುದಿಲ್ಲ. (ಮಾರ್ಕ 12:42, 43) ಒಂದು ವಿಷಯವನ್ನು ಮಾತ್ರ ಮರೆಯದಿರಿ, ನಿಮ್ಮ ವರದಿಯು ಇಲ್ಲದಿದ್ದರೆ ಆ ಇಡೀ ವರದಿಯು ಅಪೂರ್ಣವಾಗಿಬಿಡುತ್ತದೆ.
14 ಯೆಹೋವನ ಸಮರ್ಪಿತ ಸೇವಕನಾಗಿ ತನ್ನ ಜವಾಬ್ದಾರಿಯನ್ನು ಪೂರೈಸುವುದರಲ್ಲಿ ಪ್ರತಿಯೊಬ್ಬ ಸಾಕ್ಷಿಯು ಏನನ್ನು ಮಾಡುತ್ತಾನೋ ಅದರಲ್ಲಿ ಹೆಚ್ಚಿನದ್ದು ಅವನ ವರದಿಯಲ್ಲಿ ಕಂಡುಬರುವುದಿಲ್ಲ ಎಂಬುದು ನಿಜ. ಉದಾಹರಣೆಗೆ, ಕ್ರಮವಾದ ವೈಯಕ್ತಿಕ ಬೈಬಲ್ ಅಧ್ಯಯನ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಮತ್ತು ಅದರಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವುದು, ಸಭೆಯ ಕರ್ತವ್ಯಗಳು, ಅಗತ್ಯವಿರುವ ಜೊತೆ ವಿಶ್ವಾಸಿಗಳಿಗೆ ಮಾಡಲ್ಪಡುವ ಸಹಾಯ, ಲೋಕವ್ಯಾಪಕ ರಾಜ್ಯ ಕೆಲಸಕ್ಕಾಗಿ ಕೊಡಲ್ಪಟ್ಟಿರುವ ಆರ್ಥಿಕ ಬೆಂಬಲ, ಇನ್ನು ಮುಂತಾದವುಗಳು ಆ ವರದಿಯಲ್ಲಿರುವುದಿಲ್ಲ. ಆದುದರಿಂದ, ಸಾರುವಿಕೆಯಲ್ಲಿ ನಮ್ಮ ಹುರುಪನ್ನು ಕಾಪಾಡಿಕೊಳ್ಳುವಂತೆ ಮತ್ತು ಅಲಕ್ಷ್ಯ ಮನೋಭಾವದವರಾಗುವುದರಿಂದ ದೂರವಿರುವಂತೆ ನಮಗೆ ಸಹಾಯಮಾಡುವುದರಲ್ಲಿ ನಮ್ಮ ಕ್ಷೇತ್ರ ಸೇವಾ ವರದಿಯು ಪ್ರಮುಖವಾದ ಪಾತ್ರವನ್ನು ವಹಿಸುತ್ತದಾದರೂ, ನಾವು ಅದನ್ನು ಸೂಕ್ತವಾದ ಸ್ಥಾನದಲ್ಲಿಡಬೇಕು. ನಿತ್ಯಜೀವಕ್ಕಾಗಿರುವ ನಮ್ಮ ಅರ್ಹತೆಯನ್ನು ನಿರ್ಧರಿಸಲಿಕ್ಕಾಗಿ ಅದನ್ನು ಒಂದು ಆಧ್ಯಾತ್ಮಿಕ ಲೈಸನ್ಸ್ ಆಗಿ ಅಥವಾ ಪಾಸ್‌ಪೋರ್ಟ್ ಆಗಿ ಪರಿಗಣಿಸಬಾರದು.
‘ಸತ್ಕ್ರಿಯೆಗಳಲ್ಲಿ ಆಸಕ್ತರು’
15 ಬರೇ ಕ್ರಿಯೆಗಳು ಮಾತ್ರ ನಮ್ಮನ್ನು ಕಾಪಾಡಲಾರವಾದರೂ, ಅವು ಅಗತ್ಯವಾಗಿವೆ ಎಂಬುದು ಸ್ಪಷ್ಟ. ಆದುದರಿಂದಲೇ ಕ್ರೈಸ್ತರನ್ನು ‘ಸತ್ಕ್ರಿಯೆಗಳಲ್ಲಿ ಆಸಕ್ತರಾದ ಜನರು’ ಎಂದು ಕರೆಯಲಾಗಿದೆ ಮತ್ತು ‘ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುವಂತೆಯೂ ಸತ್ಕಾರ್ಯಮಾಡುವಂತೆಯೂ’ ಅವರನ್ನು ಉತ್ತೇಜಿಸಲಾಗಿದೆ. (ತೀತ 2:14; ಇಬ್ರಿಯ 10:24) ಈ ಅಂಶಕ್ಕೆ ಹೆಚ್ಚನ್ನು ಕೂಡಿಸುತ್ತಾ ಇನ್ನೊಬ್ಬ ಬೈಬಲ್ ಲೇಖಕನಾದ ಯಾಕೋಬನು ತಿಳಿಸುವುದು: “ಆತ್ಮವಿಲ್ಲದ ದೇಹವು ಸತ್ತದ್ದಾಗಿರುವ ಪ್ರಕಾರವೇ ಕ್ರಿಯೆಗಳಿಲ್ಲದ ನಂಬಿಕೆಯೂ ಸತ್ತದ್ದೇ.”—ಯಾಕೋಬ 2:26.
16 ಸತ್ಕಾರ್ಯಗಳನ್ನು ಮಾಡುವುದು ಪ್ರಾಮುಖ್ಯವಾಗಿರಬಹುದಾದರೂ, ಅವುಗಳನ್ನು ಮಾಡುವುದರ ಹಿಂದಿರುವ ಹೇತುಗಳು ಇದಕ್ಕಿಂತ ಹೆಚ್ಚು ಪ್ರಾಮುಖ್ಯವಾಗಿವೆ. ಆದುದರಿಂದಲೇ ಆಗಿಂದಾಗ್ಗೆ ನಮ್ಮ ಹೇತುಗಳನ್ನು ಪರಿಶೀಲಿಸುವುದು ವಿವೇಕಯುತ. ಆದರೂ, ಯಾವ ಮಾನವನೂ ಇತರರ ಹೇತುಗಳನ್ನು ನಿಷ್ಕೃಷ್ಟವಾಗಿ ಅರಿಯಲು ಸಾಧ್ಯವಿಲ್ಲದಿರುವುದರಿಂದ, ಇತರರ ವಿಷಯವಾಗಿ ತೀರ್ಪುಮಾಡುವುದರ ಬಗ್ಗೆ ನಾವು ಎಚ್ಚರವಹಿಸಬೇಕು. “ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವದಕ್ಕೆ ನೀನು ಯಾರು?” ಎಂದು ನಮ್ಮನ್ನು ಕೇಳಲಾಗಿದೆ ಮತ್ತು ಇದಕ್ಕೆ ಸ್ಪಷ್ಟವಾದ ಉತ್ತರವೂ ಕೊಡಲ್ಪಟ್ಟಿದೆ: “ಅವನು ನಿರ್ದೋಷಿಯಾಗಿ ನಿಂತರೂ ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು.” (ರೋಮಾಪುರ 14:4) ಎಲ್ಲರ ಯಜಮಾನನಾಗಿರುವ ಯೆಹೋವನು ಮತ್ತು ಆತನಿಂದ ನೇಮಿಸಲ್ಪಟ್ಟಿರುವ ನ್ಯಾಯಾಧಿಪತಿಯಾದ ಕ್ರಿಸ್ತ ಯೇಸು ನಮ್ಮ ವಿಷಯವಾಗಿ ತೀರ್ಪುಮಾಡುವರು; ಕೇವಲ ನಮ್ಮ ಸತ್ಕ್ರಿಯೆಗಳ ಆಧಾರದ ಮೇಲೆ ಅಲ್ಲ, ಬದಲಾಗಿ ನಮ್ಮ ಹೇತುಗಳು, ನಮಗೆ ಸಿಗುವಂಥ ಅವಕಾಶಗಳು, ನಮ್ಮ ಪ್ರೀತಿ ಮತ್ತು ನಮ್ಮ ಭಕ್ತಿಯ ಆಧಾರದ ಮೇಲೆಯೂ ಅವರು ತೀರ್ಪುಮಾಡುವರು. ಅಪೊಸ್ತಲ ಪೌಲನ ಈ ಮಾತುಗಳಲ್ಲಿ, ಕ್ರೈಸ್ತರಾದ ನಮಗೆ ಏನು ಮಾಡುವಂತೆ ಹೇಳಲಾಗಿದೆಯೋ ಅದನ್ನು ನಾವು ಮಾಡಿದ್ದೇವೋ ಇಲ್ಲವೋ ಎಂಬುದನ್ನು ಯೆಹೋವನು ಮತ್ತು ಕ್ರಿಸ್ತ ಯೇಸು ಮಾತ್ರ ನಿಷ್ಕೃಷ್ಟವಾಗಿ ನಿರ್ಧರಿಸಬಲ್ಲರು: “ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು.”—2 ತಿಮೊಥೆಯ 2:15; 2 ಪೇತ್ರ 1:10; 3:14.
17 ಯೆಹೋವನು ನಮ್ಮಿಂದ ಏನನ್ನು ನಿರೀಕ್ಷಿಸುತ್ತಾನೋ ಅದು ನ್ಯಾಯಸಮ್ಮತವಾದದ್ದಾಗಿದೆ. ಯಾಕೋಬ 3:17ಕ್ಕನುಸಾರ (NW), ಇನ್ನಿತರ ವಿಷಯಗಳೊಂದಿಗೆ “ಮೇಲಣಿಂದ ಬರುವ ವಿವೇಕವು” ‘ನ್ಯಾಯಸಮ್ಮತವಾದದ್ದಾಗಿದೆ.’ ಈ ವಿಷಯದಲ್ಲಿ ನಾವು ಯೆಹೋವನನ್ನು ಅನುಕರಿಸುವುದು ವಿವೇಕದ ಮಾರ್ಗವೂ ಒಂದು ನಿಜ ಸಾಧನೆಯೂ ಆಗಿರುವುದಿಲ್ಲವೊ? ಹೀಗೆ, ನಮ್ಮ ವಿಷಯದಲ್ಲಿಯೂ ಅಥವಾ ನಮ್ಮ ಸಹೋದರರ ವಿಷಯದಲ್ಲಿಯೂ ನಾವು ನ್ಯಾಯಸಮ್ಮತವಲ್ಲದ ಹಾಗೂ ಪೂರೈಸಲು ಅಸಾಧ್ಯವಾದ ನಿರೀಕ್ಷಣೆಗಳನ್ನು ಇಟ್ಟುಕೊಳ್ಳಬಾರದು.
18 ನಮ್ಮ ನಂಬಿಕೆಯ ಕ್ರಿಯೆಗಳು ಹಾಗೂ ಯೆಹೋವನ ಅಪಾತ್ರ ಕೃಪೆಯ ವಿಷಯದಲ್ಲಿ ನಾವು ಸಮತೂಕವಾದ ನೋಟವನ್ನು ಇಟ್ಟುಕೊಂಡಿರುವಷ್ಟು ಸಮಯ, ಯೆಹೋವನ ನಿಜ ಸೇವಕರನ್ನು ಭಿನ್ನರನ್ನಾಗಿ ಗುರುತಿಸುವಂಥ ಆನಂದವನ್ನು ಕಾಪಾಡಿಕೊಳ್ಳುವೆವು. (ಯೆಶಾಯ 65:13, 14) ನಾವು ವೈಯಕ್ತಿಕವಾಗಿ ಎಷ್ಟನ್ನೇ ಮಾಡಲು ಶಕ್ತರಾಗಿದ್ದರೂ, ಒಂದು ಗುಂಪಾಗಿ ತನ್ನ ಜನರ ಮೇಲೆ ಯೆಹೋವನು ಸುರಿಸುತ್ತಿರುವ ಆಶೀರ್ವಾದಗಳಲ್ಲಿ ನಾವು ಆನಂದಿಸಸಾಧ್ಯವಿದೆ. ನಾವು “ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ” ಮಾಡುತ್ತಾ ಮುಂದುವರಿಯುವ ಮೂಲಕ, ನಮ್ಮಿಂದಾದುದೆಲ್ಲವನ್ನೂ ಮಾಡಲು ಸಹಾಯಮಾಡುವಂತೆ ದೇವರನ್ನು ಬೇಡಿಕೊಳ್ಳುವೆವು. ಆಗ, ನಿಸ್ಸಂದೇಹವಾಗಿಯೂ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು [ನಮ್ಮ] ಹೃದಯಗಳನ್ನೂ [ನಮ್ಮ] ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:4-7) ಹೌದು, ನಾವು ಕೇವಲ ಕ್ರಿಯೆಗಳಿಂದ ಅಲ್ಲ ಬದಲಾಗಿ ಯೆಹೋವನ ಅಪಾತ್ರ ಕೃಪೆಯಿಂದ ಕಾಪಾಡಲ್ಪಡಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ಸಾಂತ್ವನ ಹಾಗೂ ಉತ್ತೇಜನವನ್ನು ಪಡೆದುಕೊಳ್ಳಬಲ್ಲೆವು!
ನೀವು ಇದನ್ನು ವಿವರಿಸಬಲ್ಲಿರೊ?
• ಕ್ರೈಸ್ತರು ವೈಯಕ್ತಿಕ ಸಾಧನೆಗಳ ಕುರಿತು ಜಂಬಕೊಚ್ಚಿಕೊಳ್ಳುವುದರಿಂದ ದೂರವಿರುತ್ತಾರೆ ಏಕೆ?
• ಕ್ರೈಸ್ತರು ಏಕೆ ಸ್ಪರ್ಧಾತ್ಮಕ ಮನೋಭಾವವನ್ನು ತೋರಿಸುವುದರಿಂದ ದೂರವಿರಬೇಕು?
• ಕ್ರೈಸ್ತರು ಕ್ಷೇತ್ರ ಶುಶ್ರೂಷೆಯಲ್ಲಿನ ತಮ್ಮ ಕ್ರೈಸ್ತ ಚಟುವಟಿಕೆಯನ್ನು ಏಕೆ ವರದಿಸಬೇಕು?
• ಜೊತೆ ಕ್ರೈಸ್ತರ ವಿಷಯವಾಗಿ ತೀರ್ಪುಮಾಡುವುದರಿಂದ ಕ್ರೈಸ್ತರು ದೂರವಿರಬೇಕು ಏಕೆ?
[ಅಧ್ಯಯನ ಪ್ರಶ್ನೆಗಳು]
1. ವೈಯಕ್ತಿಕ ಸಾಧನೆಗಳ ವಿಷಯದಲ್ಲಿ ಬೇರೆ ಜನರಿಗಿಂತಲೂ ಕ್ರೈಸ್ತರು ಹೇಗೆ ಭಿನ್ನರಾಗಿದ್ದಾರೆ, ಮತ್ತು ಏಕೆ?
2, 3. ಪೌಲನು ಯಾವುದರ ಕುರಿತು ಹೆಚ್ಚಳಪಟ್ಟನು, ಮತ್ತು ಏಕೆ?
4. ಕೆಲವೊಮ್ಮೆ ಇತರರನ್ನು ನಮಗಿಂತಲೂ ಶ್ರೇಷ್ಠರಾಗಿ ಪರಿಗಣಿಸುವುದು ನಮಗೆ ಏಕೆ ಕಷ್ಟಕರವಾಗಿರಬಹುದು?
5. ಒಂದುವೇಳೆ ಸ್ಪರ್ಧಾತ್ಮಕವಾದ ಮನೋಭಾವವನ್ನು ನಿಯಂತ್ರಿಸದಿರುವಲ್ಲಿ, ಅದು ಯಾವುದಕ್ಕೆ ಮುನ್ನಡಿಸಬಲ್ಲದು?
6. ಸ್ಪರ್ಧಾತ್ಮಕ ಮನೋಭಾವದ ವಿರುದ್ಧ ಬೈಬಲು ಹೇಗೆ ಎಚ್ಚರಿಕೆಯನ್ನು ನೀಡುತ್ತದೆ?
7. ಇಂದಿನ ಸ್ಪರ್ಧಾತ್ಮಕ ಕಾರ್ಯಕ್ಷೇತ್ರದಲ್ಲಿ ಕ್ರೈಸ್ತನೊಬ್ಬನು ಯಾವುದರಿಂದ ದೂರವಿರಲು ಬಯಸುವನು?
8, 9. (ಎ) ಕ್ರೈಸ್ತ ಹಿರಿಯರು ಪರಸ್ಪರ ಪೈಪೋಟಿ ನಡೆಸಲು ಯಾವುದೇ ಕಾರಣವಿಲ್ಲವೇಕೆ? (ಬಿ) ಒಂದನೇ ಪೇತ್ರ 4:10 ದೇವರ ಸೇವಕರೆಲ್ಲರಿಗೂ ಅನ್ವಯವಾಗುತ್ತದೆ ಏಕೆ?
10. ಯಾವ ವಿಧದಲ್ಲಿ ಮಾತ್ರ ನಮ್ಮ ಪವಿತ್ರ ಸೇವೆಯು ಯೆಹೋವನಿಗೆ ಸ್ವೀಕಾರಾರ್ಹವಾಗಿರುವುದು?
11. ಶುಶ್ರೂಷೆಯಲ್ಲಿನ ನಮ್ಮ ಚಟುವಟಿಕೆಯ ಕುರಿತು ಯಾವ ಪ್ರಶ್ನೆಗಳನ್ನು ಪರಿಗಣಿಸುವುದು ಸಮಂಜಸವಾಗಿದೆ?
12, 13. (ಎ) ನಾವು ನಮ್ಮ ಕ್ಷೇತ್ರ ಸೇವೆಯ ದಾಖಲೆಯನ್ನು ಇಡುವುದಕ್ಕಾಗಿರುವ ಕೆಲವು ಕಾರಣಗಳು ಯಾವುವು? (ಬಿ) ನಮ್ಮ ಸಾರುವ ಚಟುವಟಿಕೆಯ ಇಡೀ ವರದಿಯನ್ನು ಪರಿಗಣಿಸುವಾಗ ಆನಂದಪಡಲು ನಮಗೆ ಯಾವ ಕಾರಣಗಳಿವೆ?
14. ಯೆಹೋವನಿಗೆ ಸಲ್ಲಿಸುವ ನಮ್ಮ ಆರಾಧನೆಯಲ್ಲಿ, ಸಾರುವುದು ಮತ್ತು ಕಲಿಸುವುದು ಮಾತ್ರವಲ್ಲದೆ ಇನ್ನೂ ಏನು ಒಳಗೂಡಿದೆ?
15. ಬರೇ ಕ್ರಿಯೆಗಳು ಮಾತ್ರ ನಮ್ಮನ್ನು ಕಾಪಾಡಲಾರವಾದರೂ, ಅವು ಏಕೆ ಅಗತ್ಯವಾಗಿವೆ?
16. ಕ್ರಿಯೆಗಳಿಗಿಂತಲೂ ಯಾವುದು ಹೆಚ್ಚು ಪ್ರಾಮುಖ್ಯವಾಗಿದೆ, ಆದರೆ ನಾವು ಯಾವುದರ ಬಗ್ಗೆ ಎಚ್ಚರಿಕೆಯಿಂದಿರಬೇಕು?
17. ನಮ್ಮಿಂದಾದುದೆಲ್ಲವನ್ನು ಮಾಡಲು ಹೆಣಗಾಡುತ್ತಿರುವಾಗ ನಾವು ಯಾಕೋಬ 3:17ನ್ನು ಏಕೆ ಮನಸ್ಸಿನಲ್ಲಿಟ್ಟುಕೊಳ್ಳಬೇಕು?
18. ನಾವು ನಮ್ಮ ನಂಬಿಕೆಯ ಕ್ರಿಯೆಗಳು ಹಾಗೂ ಯೆಹೋವನ ಅಪಾತ್ರ ಕೃಪೆಯ ವಿಷಯದಲ್ಲಿ ಸಮತೂಕವಾದ ನೋಟವನ್ನು ಇಟ್ಟುಕೊಂಡಿರುವಾಗ ಯಾವುದಕ್ಕಾಗಿ ಮುನ್ನೋಡಸಾಧ್ಯವಿದೆ?
[ಪುಟ 15ರಲ್ಲಿರುವ ಚಿತ್ರ]
‘ನನ್ನ ಅಪಾತ್ರ ಕೃಪೆಯೇ ನಿನಗೆ ಸಾಕು’
[ಪುಟ 16, 17ರಲ್ಲಿರುವ ಚಿತ್ರಗಳು]
ಸಭೆಯ ಒಳಿತಿಗಾಗಿ ಪ್ರತಿಯೊಬ್ಬರು ಮಾಡಸಾಧ್ಯವಿರುವ ಸಹಾಯದಿಂದ ಹಿರಿಯರಿಗೆ ಸಂತೋಷವಾಗುತ್ತದೆ
[ಪುಟ 18, 19ರಲ್ಲಿರುವ ಚಿತ್ರಗಳು]
ನಿಮ್ಮ ವರದಿ ಇಲ್ಲದಿದ್ದರೆ, ಲೋಕವ್ಯಾಪಕ ವರದಿಯು ಅಪೂರ್ಣವಾಗಿಬಿಡುತ್ತದೆ