ಜಾಗತಿಕ ಏಕತೆಗೆ ಏನು ಸಂಭವಿಸಿದೆ?
ಜಾಗತಿಕ ಏಕತೆಗೆ ಏನು ಸಂಭವಿಸಿದೆ?
“ಎರಡನೇ ಲೋಕಯುದ್ಧದಂದಿನಿಂದ ಅಂತಾರಾಷ್ಟ್ರೀಯ ಸಮುದಾಯವು ಐಕ್ಯವಾಗಿರುವುದು ಇದೇ ಮೊದಲ ಬಾರಿ. . . . ಆದುದರಿಂದ, ದೀರ್ಘಕಾಲದಿಂದ ಎದುರುನೋಡುತ್ತಿರುವ ನೂತನ ಲೋಕ ವ್ಯವಸ್ಥೆಯ ವಾಗ್ದಾನವನ್ನು ನೆರವೇರಿಸಲು ಲೋಕವು ಇದನ್ನು ಒಂದು ಸುಸಂದರ್ಭವಾಗಿ ಉಪಯೋಗಿಸಸಾಧ್ಯವಿದೆ.”
ಹೀಗೆಂದು, 20ನೇ ಶತಮಾನದ ಕೊನೆಯ ದಶಕದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಅಧ್ಯಕ್ಷರು ಹೇಳಿದರು. ಆ ಸಮಯದಲ್ಲಿನ ಅಂತಾರಾಷ್ಟ್ರೀಯ ಘಟನೆಗಳು, ಜಾಗತಿಕ ಏಕತೆಯು ಬಹಳ ಹತ್ತಿರದಲ್ಲಿದೆ ಎಂಬಂತೆ ಸೂಚಿಸುತ್ತಿದ್ದವು. ನಿರಂಕುಶ ಪ್ರಭುತ್ವದ ಸರಕಾರಗಳು ಒಂದರ ನಂತರ ಇನ್ನೊಂದರಂತೆ ಉರುಳಿದವು. ಯೂರೋಪಿಗೆ ಒಂದು ಹೊಸ ಯುಗವನ್ನು ಆರಂಭಿಸುತ್ತಾ, ಬರ್ಲಿನ್ ಗೋಡೆಯು ಕೆಳಗುರುಳಿತು. ಭೌಗೋಳಿಕ ಕಲಹಗಳ ಪ್ರಚೋದಕ ಶಕ್ತಿ ಎಂದು ಪಾಶ್ಚಾತ್ಯ ದೇಶಗಳಲ್ಲಿರುವ ಅನೇಕರು ಭಾವಿಸಿದ್ದ ಸೋವಿಯತ್ ಒಕ್ಕೂಟವು ಲೋಕದ ದೃಷ್ಟಿಯಿಂದ ಮರೆಯಾಯಿತು. ಇದು ಲೋಕಕ್ಕೆ ಅಚ್ಚರಿಯನ್ನುಂಟುಮಾಡಿತು. ಶೀತಲ ಯುದ್ಧ ಕೊನೆಗೊಂಡಿತು. ಅಣ್ವಸ್ತ್ರಗಳನ್ನು ಸೇರಿಸಿ ಎಲ್ಲ ಶಸ್ತ್ರಗಳ ನಿರ್ಮೂಲನದ ಕುರಿತಾಗಿ ಆಶಾವಾದದ ಮಾತುಕತೆಗಳು ನಡೆಯುತ್ತಿದ್ದವು. ಪರ್ಷಿಯನ್ ಕೊಲ್ಲಿಯಲ್ಲಿ ಯುದ್ಧವು ಸಂಭವಿಸಿತಾದರೂ ಅದೊಂದು ಕ್ಷಣಿಕ ತಡೆಯಾಗಿತ್ತು. ಇದು, ಶಾಂತಿಭರಿತ ಯುಗವನ್ನು ಬೆನ್ನಟ್ಟಲು ಲೋಕಕ್ಕೆ ಮತ್ತಷ್ಟು ನಿಶ್ಚಿತಾಭಿಪ್ರಾಯವನ್ನು ಮೂಡಿಸಿತು.
ಕೇವಲ ರಾಜ್ಯಕೀಯ ಕ್ಷೇತ್ರದಲ್ಲಿ ಮಾತ್ರವಲ್ಲ ಜೀವನದ ಇತರ ಕ್ಷೇತ್ರಗಳಲ್ಲಿಯೂ ಸಕಾರಾತ್ಮಕ ಚಿಹ್ನೆಗಳು ಕಾಣಿಸಿಕೊಂಡವು. ಲೋಕದ ಅನೇಕ ಭಾಗಗಳಲ್ಲಿ ಜೀವನ ಮಟ್ಟವು ಉತ್ತಮಗೊಂಡಿತು. ವೈದ್ಯಕೀಯ ಕ್ಷೇತ್ರದಲ್ಲಿನ ಪ್ರಗತಿಗಳ ಕಾರಣ, ಕೇವಲ ಕೆಲವೇ ದಶಕಗಳ ಹಿಂದೆ ಅಸಾಧ್ಯವೆಂದು ತೋರುತ್ತಿದ್ದಂಥ ವಿಷಯಗಳನ್ನು ವೈದ್ಯರು ನಿರ್ವಹಿಸಶಕ್ತರಾದರು. ಕೆಲವು ದೇಶಗಳಲ್ಲಿ ಆರ್ಥಿಕ ಬೆಳವಣಿಗೆಯು ಎಷ್ಟು ತ್ವರಿತಗೊಂಡಿತ್ತೆಂದರೆ ಇದು ಬೇಗನೆ ಭೌಗೋಳಿಕ ಸಮೃದ್ಧಿಗೆ ನಡೆಸುತ್ತದೆ ಎಂಬಂತೆ ತೋರುತ್ತಿತ್ತು. ವಿಷಯಗಳೆಲ್ಲಾ ಸರಿಯಾದ ದಿಕ್ಕಿನತ್ತ ಸಾಗುತ್ತಿವೆ ಎಂಬಂತೆ ಕಂಡುಬಂತು.
ಆದರೆ ಇಂದು, ಕೇವಲ ಕೆಲವೇ ವರುಷಗಳ ನಂತರ, ನಮ್ಮೆಲ್ಲರ ಮನಸ್ಸಿನಲ್ಲಿ ಈ ಪ್ರಶ್ನೆಯು ಮೂಡಿಬರುತ್ತದೆ: ‘ಏನಾಯಿತು? ವಾಗ್ದಾನಿಸಲಾದ ಜಾಗತಿಕ ಏಕತೆ ಎಲ್ಲಿದೆ?’ ಜಾಗತಿಕ ಏಕತೆಗೆ ವ್ಯತಿರಿಕ್ತವಾಗಿ, ಲೋಕವು ಇಂದು ವಿರುದ್ಧ ದಿಕ್ಕಿನತ್ತ ಸಾಗುತ್ತಿದೆ. ಸೂಇಸೈಡ್ ಬಾಂಬ್ ದಾಳಿಗಳು, ಭಯೋತ್ಪಾದಕರ ದಾಳಿಗಳು, ಬಹಳಷ್ಟು ಜನರನ್ನು ಒಮ್ಮೆಲೇ ನಾಶಮಾಡಬಲ್ಲ
ಶಸ್ತ್ರಗಳು ತ್ವರಿತವಾಗಿ ಹೆಚ್ಚುತ್ತಿರುವ ವರದಿ ಮತ್ತು ಕ್ಷೋಭೆಗೊಳಿಸುವಂಥ ಇತರ ಬೆಳವಣಿಗೆಗಳು ವಾರ್ತಾ ಪತ್ರಿಕೆಗಳಲ್ಲಿ ಕ್ರಮವಾಗಿ ಬರುವ ಅಂಶಗಳಾಗಿವೆ. ಇಂಥ ಘಟನೆಗಳು ಲೋಕವನ್ನು ಏಕತೆಯಿಂದ ಮತ್ತಷ್ಟು ದೂರಕ್ಕೆ ತಳ್ಳುವಂಥವುಗಳಾಗಿವೆ. ಒಬ್ಬ ಪ್ರಖ್ಯಾತ ಬಂಡವಾಳಗಾರನು ಇತ್ತೀಚೆಗೆ ಹೇಳಿದ್ದು: “ದಿನೇ ದಿನೇ ಹೆಚ್ಚುತ್ತಿರುವ ಹಿಂಸಾ ಕೃತ್ಯಗಳ ವಿಷಚಕ್ರದಲ್ಲಿ ನಾವು ಸಿಲುಕಿದ್ದೇವೆ.”ಜಾಗತಿಕ ಏಕತೆಯೊ ಭೌಗೋಳಿಕ ವಿಭಜನೆಯೊ?
ವಿಶ್ವಸಂಸ್ಥೆಯು ರಚಿಸಲ್ಪಟ್ಟ ಸಮಯದಲ್ಲಿ ಅದರ ನಿರ್ಧಾರಿತ ಉದ್ದೇಶಗಳಲ್ಲಿ ಒಂದು, “ಸಮಾನ ಹಕ್ಕುಗಳ ಮತ್ತು ಸ್ವನಿರ್ಧಾರಗಳ ಸೂತ್ರಕ್ಕೆ ಗೌರವದ ಮೇಲಾಧಾರಿತವಾಗಿ ರಾಷ್ಟ್ರಗಳ ಮಧ್ಯೆ ಸ್ನೇಹ ಸಂಬಂಧವನ್ನು ಬೆಳೆಸುವುದೇ” ಆಗಿತ್ತು. ಆದರೆ ಈಗ ಸುಮಾರು 60 ವರುಷಗಳ ಬಳಿಕ ಆ ಉನ್ನತ ಉದ್ದೇಶವು ನೆರವೇರಿಸಲ್ಪಟ್ಟಿದೆಯೊ? ಖಂಡಿತವಾಗಿಯೂ ಇಲ್ಲ! ‘ಸ್ನೇಹ ಸಂಬಂಧದ’ ಬದಲಿಗೆ “ಸ್ವನಿರ್ಧಾರ” ಎಂಬ ಅಭಿವ್ಯಕ್ತಿಯೇ ರಾಷ್ಟ್ರಗಳ ಮನಸ್ಸಿನಲ್ಲಿ ಹೆಚ್ಚು ಬೇರೂರಿದೆ ಎಂದು ತೋರುತ್ತದೆ. ಜನರು ಮತ್ತು ಜನಾಂಗೀಯ ಗುಂಪುಗಳು ತಮ್ಮ ಸ್ವಂತ ಗುರುತು ಹಾಗೂ ಪರಮಾಧಿಕಾರವನ್ನು ಸ್ಥಾಪಿಸಲು ಹೋರಾಡುತ್ತಿರುವ ಕಾರಣ ಲೋಕವು ಮತ್ತಷ್ಟು ವಿಭಾಗಗೊಳ್ಳುತ್ತಿದೆ. ವಿಶ್ವಸಂಸ್ಥೆಯು ಸ್ಥಾಪಿಸಲ್ಪಟ್ಟಾಗ 51 ಸದಸ್ಯ ರಾಷ್ಟ್ರಗಳಿದ್ದವು, ಆದರೆ ಇಂದು 191 ಸದಸ್ಯ ರಾಷ್ಟ್ರಗಳಿವೆ.
ನಾವು ಈಗಾಗಲೇ ಪರಿಗಣಿಸಿರುವಂತೆ, 20ನೇ ಶತಮಾನದ ಅಂತ್ಯದಷ್ಟಕ್ಕೆ ಜಾಗತಿಕ ಏಕತೆಯ ನಿರೀಕ್ಷೆಯು ಎಲ್ಲೆಡೆಯು ವ್ಯಾಪಿಸಿತ್ತು. ಆದರೆ ಅಂದಿನಿಂದ, ಲೋಕವು ಹಂತಹಂತವಾಗಿ ವಿಭಾಗಗೊಳ್ಳುತ್ತಾ ಹೋಗುವುದನ್ನು ಮಾನವಕುಲವು ನೋಡುವಾಗ ಆ ನಿರೀಕ್ಷೆಯು ಹತಾಶೆಯಾಗಿ ಬದಲಾಗುತ್ತಿದೆ. ಯುಗೊಸ್ಲಾವಿಯದಲ್ಲಿ ಸಂಭವಿಸಿದ ಹಿಂಸಾತ್ಮಕ ವಿಭಜನೆ, ಚೆಚ್ನಿಯ ಮತ್ತು ರಷ್ಯಾದ ನಡುವಿನ ಹೋರಾಟಗಳು, ಇರಾಕ್ ಯುದ್ಧ ಹಾಗೂ ಮಧ್ಯಪೂರ್ವ ದೇಶಗಳಲ್ಲಿ ಯಾವಾಗಲೂ ನಡೆಯುತ್ತಿರುವ ವ್ಯಾಪಕ ಹಲ್ಲೆಗಳು, ಇವೆಲ್ಲವೂ ಹಿಂದೆಂದಿಗಿಂತಲೂ ಹೆಚ್ಚಿನ ಅನೈಕ್ಯಕ್ಕೆ ಪುರಾವೆಗಳಾಗಿವೆ.
ಶಾಂತಿಯನ್ನು ಸ್ಥಾಪಿಸಲಿಕ್ಕಾಗಿ ಮಾಡಿರುವ ಅನೇಕ ಪ್ರಯತ್ನಗಳು ಯಥಾರ್ಥವಾದವುಗಳೂ ಒಳ್ಳೇ ಹೇತುವಿನಿಂದ ಮಾಡಲ್ಪಟ್ಟವುಗಳೂ ಆಗಿವೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಿದ್ದರೂ, ಜಾಗತಿಕ ಏಕತೆಯು ಅಸಾಧ್ಯ ಸಂಗತಿಯಾಗಿ ತೋರುತ್ತದೆ. ಅನೇಕರು, ‘ಜಾಗತಿಕ ಏಕತೆಯು ನಿಲುಕದ ಸಂಗತಿಯಾಗಿಯೇ ಉಳಿದಿದೆ ಏಕೆ? ಲೋಕವು ಎತ್ತ ಸಾಗುತ್ತಿದೆ?’ ಎಂದು ಯೋಚನೆಗೀಡಾಗಿದ್ದಾರೆ.
[ಪುಟ 3ರಲ್ಲಿರುವ ಚಿತ್ರ ಕೃಪೆ]
AP Photo/Lionel Cironneau
Arlo K. Abrahamson/AFP/ Getty Images