ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವಾಗ

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವಾಗ

ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗುವಾಗ

ಯುಕ್ತಾಯುಕ್ತ ಪರಿಜ್ಞಾನವುಳ್ಳ ಯಾವನೇ ಗಂಡನಾಗಲಿ ಅಥವಾ ಹೆಂಡತಿಯಾಗಲಿ ದಾಂಪತ್ಯದ ತಿಕ್ಕಾಟವನ್ನು ಇಷ್ಟಪಡುವುದಿಲ್ಲ, ಆದರೆ ಇದು ಸಾಧಾರಣವಾಗಿ ಸಂಭವಿಸುತ್ತದೆ. ಸಾಮಾನ್ಯವಾಗಿ ಒಬ್ಬ ಸಂಗಾತಿಯು ಇನ್ನೊಬ್ಬ ವ್ಯಕ್ತಿಗೆ ಸಿಟ್ಟನ್ನು ಬರಿಸುವಂಥ ಮಾತುಗಳನ್ನಾಡಿಬಿಡಬಹುದು. ತದನಂತರ ಇಬ್ಬರೂ ಕೋಪದಿಂದ ಸಿಡಿಯುತ್ತಾರೆ, ಧ್ವನಿಯೇರಿಸಿ ಮಾತಾಡತೊಡಗುತ್ತಾರೆ, ಮತ್ತು ಇದು ಕಟುನುಡಿಗಳಿಂದ ಕೂಡಿದ ಮಾತಿನ ಚಕಮಕಿಗೆ ಕಾರಣವಾಗುತ್ತದೆ. ಇದಾದ ಬಳಿಕ ಇಬ್ಬರೂ ಹಠದಿಂದ ಪರಸ್ಪರ ಮಾತಾಡದೆ ಮೌನವಾಗಿದ್ದುಬಿಡುತ್ತಾರೆ. ಸ್ವಲ್ಪ ಸಮಯಾನಂತರ ಕೋಪವು ಇಳಿಯುತ್ತದೆ ಮತ್ತು ಗಂಡಹೆಂಡತಿಯರು ಪರಸ್ಪರ ಕ್ಷಮೆಯಾಚಿಸುತ್ತಾರೆ. ಮುಂದಿನ ಭಿನ್ನಾಭಿಪ್ರಾಯವು ಉಂಟಾಗುವ ವರೆಗೆ ಶಾಂತಿಯ ಸಂಬಂಧವೇರ್ಪಡುತ್ತದೆ.

ದಾಂಪತ್ಯದ ಸಣ್ಣಪುಟ್ಟ ಜಗಳಗಳು ಟೆಲಿವಿಷನ್‌ ಕಾರ್ಯಕ್ರಮಗಳಲ್ಲಿ ಬರುವ ಅಸಂಖ್ಯಾತ ಜೋಕುಗಳು ಮತ್ತು ಕಥೆಗಳಿಗೆ ಮುಖ್ಯವಿಷಯವಾಗಿವೆಯಾದರೂ ವಾಸ್ತವಿಕತೆಯು ಹಾಸ್ಯಕರವಾಗೇನಿಲ್ಲ. ಒಂದು ಬೈಬಲ್‌ ಜ್ಞಾನೋಕ್ತಿಯು ಹೀಗೆ ಹೇಳುತ್ತದೆ: “ದುಡಿಕಿದ ಮಾತು ಖಡ್ಗದಂತೆ ನೋವುಮಾಡುತ್ತದೆ.” (ಜ್ಞಾನೋಕ್ತಿ 12:​18, ಪರಿಶುದ್ಧ ಬೈಬಲ್‌ *) ಹೌದು, ಕಟುವಾದ ಮಾತು ಎಂಥ ಭಾವನಾತ್ಮಕ ಕಲೆಯನ್ನು ಉಂಟುಮಾಡಬಹುದೆಂದರೆ, ಜಗಳವು ಕೊನೆಗೊಂಡು ದೀರ್ಘಾವಧಿಯು ಕಳೆದ ಬಳಿಕವೂ ಅದು ಮನಸ್ಸಿನಲ್ಲಿ ಉಳಿಯುತ್ತದೆ. ವಾಗ್ವಾದ ಮಾಡುವುದು ಹಿಂಸಾತ್ಮಕ ಪರಿಸ್ಥಿತಿಗೂ ನಡೆಸಬಹುದು.​—⁠ವಿಮೋಚನಕಾಂಡ 21:18.

ಮಾನವ ಅಪರಿಪೂರ್ಣತೆಯ ಕಾರಣ ದಾಂಪತ್ಯದಲ್ಲಿ ಸಮಸ್ಯೆಗಳು ಉಂಟಾಗುವುದು ಕೆಲವೊಮ್ಮೆ ಅನಿವಾರ್ಯ ಎಂಬುದಂತೂ ನಿಶ್ಚಯ. (ಆದಿಕಾಂಡ 3:16; 1 ಕೊರಿಂಥ 7:28) ಆದರೂ, ಆಗಾಗ್ಗೆ ಆಗುವ ಮತ್ತು ಗಂಭೀರವಾಗಿರುವ ಜಗಳಗಳನ್ನು ಸರ್ವಸಾಮಾನ್ಯವೆಂದು ಪರಿಗಣಿಸಿ ಬದಿಗೊತ್ತಬಾರದು. ಆಗಿಂದಾಗ್ಗೆ ಜಗಳವಾಡುತ್ತಾ ಇರುವುದು, ಆ ದಂಪತಿಗಳು ಕಾಲಕ್ರಮೇಣ ವಿವಾಹ ವಿಚ್ಛೇದವನ್ನು ಪಡೆದುಕೊಳ್ಳುವ ಸಂಭವನೀಯತೆಯನ್ನು ಹೆಚ್ಚಿಸುತ್ತದೆ ಎಂದು ಪರಿಣತರು ತಿಳಿಸಿದ್ದಾರೆ. ಆದುದರಿಂದ, ನೀವು ಮತ್ತು ನಿಮ್ಮ ಸಂಗಾತಿಯು ಸಮಾಧಾನಕರವಾದ ರೀತಿಯಲ್ಲಿ ಭಿನ್ನಾಭಿಪ್ರಾಯಗಳನ್ನು ನಿರ್ವಹಿಸಲು ಕಲಿಯುವುದು ಅತ್ಯಾವಶ್ಯಕವಾಗಿದೆ.

ಒಂದು ಸನ್ನಿವೇಶವನ್ನು ವಿಶ್ಲೇಷಿಸುವುದು

ನಿಮ್ಮ ದಾಂಪತ್ಯವು ವಾದವಿವಾದಗಳ ದಾಳಿಗೆ ತುತ್ತಾಗಿರುವಲ್ಲಿ, ನಿಮ್ಮ ಕಲಹಗಳಿಗೆ ಪುನರಾವರ್ತಿತ ನಮೂನೆ ಇದೆಯೋ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿರಿ. ಸಾಮಾನ್ಯವಾಗಿ, ಒಂದು ವಿಷಯದ ಬಗ್ಗೆ ನಿಮಗೆ ಮತ್ತು ನಿಮ್ಮ ಸಂಗಾತಿಗೆ ಭಿನ್ನಾಭಿಪ್ರಾಯವಿರುವಾಗ ಏನು ಸಂಭವಿಸುತ್ತದೆ? ತತ್‌ಕ್ಷಣವೇ ನಿಮ್ಮ ಚರ್ಚೆಯು ಹದ್ದುಮೀರಿ, ಹೀನೈಸುವ ಮಾತುಗಳು ಮತ್ತು ಆರೋಪಗಳ ಸುರಿಮಳೆಯ ದಾಳಿಗೆ ಸಿಲುಕುವಷ್ಟರ ಮಟ್ಟಿಗೆ ಸನ್ನಿವೇಶವು ಬಿಗಡಾಯಿಸುತ್ತದೊ? ಹಾಗಿರುವಲ್ಲಿ ನೀವು ಏನು ಮಾಡಸಾಧ್ಯವಿದೆ?

ಮೊದಲನೆಯದಾಗಿ, ವ್ಯಕ್ತಿಗತವಾಗಿ ನೀವು ಆ ಸಮಸ್ಯೆಗೆ ಹೇಗೆ ಹೆಚ್ಚನ್ನು ಕೂಡಿಸುತ್ತಿದ್ದೀರಿ ಎಂಬುದನ್ನು ಪ್ರಾಮಾಣಿಕವಾಗಿ ಆಲೋಚಿಸಿ ನೋಡಿ. ನೀವು ಬೇಗನೆ ಕೆರಳುವ ಸ್ವಭಾವದವರೊ? ನೀವು ಸ್ವಭಾವತಃ ವಾದಮಾಡುವವರಾಗಿದ್ದೀರೋ? ನೀವು ವಾದಮಾಡುವ ಪ್ರವೃತ್ತಿಯವರೋ ಇಲ್ಲವೋ ಎಂಬ ವಿಷಯದಲ್ಲಿ ನಿಮ್ಮ ಕುರಿತು ನಿಮ್ಮ ಸಂಗಾತಿಯು ಏನು ಹೇಳಬಲ್ಲರು? ಈ ಕೊನೆ ಪ್ರಶ್ನೆಯನ್ನು ಪರಿಗಣಿಸುವುದು ಪ್ರಾಮುಖ್ಯವಾಗಿದೆ, ಏಕೆಂದರೆ ವಾದಮಾಡುವವರಾಗಿರುವುದರಲ್ಲಿ ಏನು ಒಳಗೂಡಿದೆ ಎಂಬುದರ ಕುರಿತು ನಿಮಗೆ ಮತ್ತು ನಿಮ್ಮ ಸಂಗಾತಿಗೆ ಬೇರೆ ಬೇರೆ ದೃಷ್ಟಿಕೋನಗಳಿರಬಹುದು.

ಉದಾಹರಣೆಗೆ, ನಿಮ್ಮ ಸಂಗಾತಿಯು ಹೆಚ್ಚು ಮಾತಾಡುವ ಸ್ವಭಾವದವಳಲ್ಲ, ಆದರೆ ನೀವು ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವಾಗ ನೇರವಾಗಿ ಉತ್ತರ ಕೊಡುವವರೂ ತುಂಬ ಭಾವೋದ್ವೇಗಗೊಳ್ಳುವವರೂ ಆಗಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಹೀಗೆ ಹೇಳಬಹುದು: “ನಾನು ಬೆಳೆಯುತ್ತಿರುವಾಗ, ನನ್ನ ಕುಟುಂಬದಲ್ಲಿದ್ದ ಪ್ರತಿಯೊಬ್ಬರೂ ಹೀಗೆಯೇ ಮಾತಾಡುತ್ತಿದ್ದರು. ಇದು ವಾದವಲ್ಲ!” ನಿಮ್ಮ ದೃಷ್ಟಿಯಲ್ಲಿ ಇದು ವಾದವಾಗಿಲ್ಲದಿರಬಹುದು. ಆದರೂ, ಯಾವುದನ್ನು ನೀವು ಹಿಂಜರಿಕೆಯಿಲ್ಲದ ನೇರಮಾತು ಎಂದು ಪರಿಗಣಿಸುತ್ತೀರೋ ಅದನ್ನು ನಿಮ್ಮ ಸಂಗಾತಿಯು ನೋವನ್ನುಂಟುಮಾಡುವ ಮತ್ತು ಜಗಳಕ್ಕೆ ಕಾರಣವಾಗುವ ವಾದವಾಗಿ ಪರಿಗಣಿಸುವ ಸಾಧ್ಯತೆಯಿರಬಹುದು. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಭಿನ್ನವಾದ ಸಂವಾದ ಶೈಲಿಗಳಿವೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಹೆಚ್ಚಿನ ಅಪಾರ್ಥಗಳನ್ನು ತಡೆಗಟ್ಟಲು ಸಹಾಯಮಾಡಬಲ್ಲದು.

ವಾದಿಸುವುದರಲ್ಲಿ ಯಾವಾಗಲೂ ಕೂಗಾಡುವುದು ಒಳಗೂಡಿರುವುದಿಲ್ಲ ಎಂಬುದನ್ನು ಸಹ ಮರೆಯದಿರಿ. ಪೌಲನು ಕ್ರೈಸ್ತರಿಗೆ ಬರೆದುದು: ‘ಎಲ್ಲಾ ಕಲಹ [“ಕಿರಿಚಾಡುವಿಕೆ,” NW] ದೂಷಣೆ ಇವುಗಳನ್ನು ನಿಮ್ಮಿಂದ ದೂರಮಾಡಿರಿ.’ (ಎಫೆಸ 4:31) ಇದು ಧ್ವನಿಯೇರಿಸಿ ಮಾತಾಡುವುದನ್ನು ಮಾತ್ರವಲ್ಲ, ಮಾತುಗಳ ಮೂಲಕ ವಾದಾತ್ಮಕ ಸಂದೇಶವನ್ನು ವ್ಯಕ್ತಪಡಿಸುವುದನ್ನೂ ಸೂಚಿಸುತ್ತದೆ. ಇದನ್ನು ಗಣನೆಗೆ ತೆಗೆದುಕೊಳ್ಳುವಲ್ಲಿ, ಪಿಸುಮಾತುಗಳು ಸಹ ಕೋಪವನ್ನೆಬ್ಬಿಸುವಂಥ ರೀತಿಯಲ್ಲಿ ಅಥವಾ ಕೀಳಾದ ರೀತಿಯಲ್ಲಿ ಮಾತಾಡಲ್ಪಡುವಾಗ ವಾದಾತ್ಮಕವಾಗಿರಸಾಧ್ಯವಿದೆ.

ಈ ಎಲ್ಲ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ನಿಮ್ಮ ಸಂಗಾತಿಯೊಂದಿಗಿನ ಭಿನ್ನಾಭಿಪ್ರಾಯಗಳನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬುದರ ಕಡೆಗೆ ಪುನಃ ಗಮನಹರಿಸಿರಿ. ನೀವು ವಾದಮಾಡುವವರಾಗಿದ್ದೀರೊ? ಈಗಾಗಲೇ ನಾವು ನೋಡಿರುವಂತೆ, ಈ ಪ್ರಶ್ನೆಗೆ ನಿಜವಾದ ಉತ್ತರವು ಹೆಚ್ಚಾಗಿ ನಿಮ್ಮ ಸಂಗಾತಿಯ ದೃಷ್ಟಿಕೋನದ ಮೇಲೆ ಆಧಾರಿತವಾಗಿದೆ. ಅವರದ್ದು ‘ಅತಿಯಾಗಿ ನೊಂದುಕೊಳ್ಳುವ ಸ್ವಭಾವ’ ಎಂದು ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಕಡೆಗಣಿಸುವುದಕ್ಕೆ ಬದಲಾಗಿ, ನಿಮ್ಮ ಸಂಗಾತಿಯು ನಿಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಾರೋ ಅದೇ ದೃಷ್ಟಿಯಿಂದ ನಿಮ್ಮನ್ನು ನೋಡಿಕೊಳ್ಳಲು ಪ್ರಯತ್ನಿಸಿರಿ, ಮತ್ತು ಅಗತ್ಯವಿರುವಲ್ಲಿ ಹೊಂದಾಣಿಕೆಗಳನ್ನು ಮಾಡಿರಿ. ಪೌಲನು ಬರೆದುದು: “ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.”​—⁠1 ಕೊರಿಂಥ 10:⁠24.

“ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ”

ಭಿನ್ನಾಭಿಪ್ರಾಯಗಳನ್ನು ನಿರ್ವಹಿಸುವ ಇನ್ನೊಂದು ಅಂಶವು ಯೇಸುವಿನ ಮಾತುಗಳಲ್ಲಿ ಕಂಡುಬರುತ್ತದೆ: “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ.” (ಲೂಕ 8:18) ಇಲ್ಲಿ ದಾಂಪತ್ಯದಲ್ಲಿನ ಸಂವಾದದ ಕುರಿತು ಯೇಸು ಮಾತಾಡುತ್ತಿರಲಿಲ್ಲ ಎಂಬುದು ನಿಜ. ಆದರೂ, ಅವನು ತಿಳಿಸಿದ ಮಾತುಗಳ ಮೂಲತತ್ತ್ವವು ಅನ್ವಯವಾಗುತ್ತದೆ. ನಿಮ್ಮ ಸಂಗಾತಿಯು ಮಾತಾಡುವಾಗ ನೀವು ಎಷ್ಟರ ಮಟ್ಟಿಗೆ ಕಿವಿಗೊಡುತ್ತೀರಿ? ನೀವು ಎಂದಾದರೂ ಕಿವಿಗೊಡುತ್ತೀರೊ? ಅಥವಾ ಅವರು ಮಾತು ಮುಗಿಸುವ ಮುಂಚೆಯೇ ಮಧ್ಯೆ ಬಾಯಿಹಾಕಿ, ನೀವು ಪೂರ್ಣವಾಗಿ ಅರ್ಥವನ್ನೇ ಮಾಡಿಕೊಂಡಿರದಂಥ ಸಮಸ್ಯೆಗಳಿಗೆ ಕೂಡಲೆ ಪರಿಹಾರಗಳನ್ನು ಸೂಚಿಸಿಬಿಡುತ್ತೀರೊ? “ಸಂಗತಿಯನ್ನು ಕೇಳುವುದಕ್ಕೆ ಮುಂಚೆ ಉತ್ತರ ಕೊಡುವವರಿಗೆ ಅದು ಮೂರ್ಖತನವೂ ಅವಮಾನವೂ ಆಗಿದೆ” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 18:​13, NIBV) ಆದುದರಿಂದ, ಭಿನ್ನಾಭಿಪ್ರಾಯಗಳು ಏಳುವಾಗ ನೀವು ಮತ್ತು ನಿಮ್ಮ ಸಂಗಾತಿಯು ಆ ವಿಷಯದ ಕುರಿತು ಮನಬಿಚ್ಚಿ ಮಾತಾಡಬೇಕು ಹಾಗೂ ಹೀಗೆ ಮಾತಾಡುವಾಗ ಪರಸ್ಪರರಿಗೆ ನಿಜವಾಗಿಯೂ ಕಿವಿಗೊಡಬೇಕು.

ನಿಮ್ಮ ಸಂಗಾತಿಯ ದೃಷ್ಟಿಕೋನವನ್ನು ಕ್ಷುಲ್ಲಕವಾಗಿ ಪರಿಗಣಿಸುವ ಬದಲಾಗಿ “ಅನುಕಂಪವನ್ನು” ತೋರಿಸಲು ಪ್ರಯತ್ನಿಸಿರಿ. (1 ಪೇತ್ರ 3:​8, NW) ಮೂಲ ಗ್ರೀಕ್‌ ಭಾಷೆಯಲ್ಲಿ ಈ ಪದವು ಮೂಲತಃ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಷ್ಟಾನುಭವಿಸುವುದನ್ನು ಸೂಚಿಸುತ್ತದೆ. ಯಾವುದಾದರೊಂದು ವಿಷಯದ ಕುರಿತು ನಿಮ್ಮ ಸಂಗಾತಿಯು ದುಃಖಿತರಾಗಿರುವಲ್ಲಿ, ನೀವು ಸಹ ಆ ಅನಿಸಿಕೆಯಲ್ಲಿ ಪಾಲಿಗರಾಗಬೇಕು. ಅವನ ಅಥವಾ ಅವಳ ದೃಷ್ಟಿಕೋನದಿಂದ ವಿಷಯವನ್ನು ಪರಿಗಣಿಸಲು ಪ್ರಯತ್ನಿಸಿರಿ.

ದೇವಭಕ್ತಿಯುಳ್ಳ ಮನುಷ್ಯನಾಗಿದ್ದ ಇಸಾಕನು ತನ್ನ ಪತ್ನಿಯ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಂಡನು ಎಂಬುದು ಸುವ್ಯಕ್ತ. ಅವನ ಪತ್ನಿಯಾದ ರೆಬೆಕ್ಕಳು, ಅವಳ ಮಗನಾದ ಯಾಕೋಬನನ್ನು ಒಳಗೂಡಿದ್ದ ಕೌಟುಂಬಿಕ ವಾದಾಂಶದ ವಿಷಯದಲ್ಲಿ ಬಹಳವಾಗಿ ಚಿಂತಿತಳಾಗಿದ್ದಳು ಎಂದು ಬೈಬಲು ನಮಗೆ ತಿಳಿಸುತ್ತದೆ. ಅವಳು ಯಾಕೋಬನಿಗೆ ಹೇಳಿದ್ದು: “ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು [“ನನ್ನ ಜೀವ ನನಗೆ ಬೇಸರವಾಗಿದೆ,” NIBV]. ಯಾಕೋಬನೂ ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯ ಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು”?​—⁠ಆದಿಕಾಂಡ 27:⁠46.

ರೆಬೆಕ್ಕಳು ವಿಷಯವನ್ನು ಉತ್ಪ್ರೇಕ್ಷಿಸಿ ಹೇಳಿದ್ದಿರುವ ಸಂಭವನೀಯತೆ ಇದೆ ಎಂಬುದು ಒಪ್ಪಿಕೊಳ್ಳತಕ್ಕದ್ದೇ. ವಾಸ್ತವದಲ್ಲಿ ಅವಳಿಗೆ ನಿಜವಾಗಿಯೂ ಜೀವನವು ಬೇಸರಕರವಾಗಿತ್ತೊ? ಒಂದುವೇಳೆ ಅವಳ ಮಗನು ಒಬ್ಬ ಹಿತ್ತಿಯ ಸ್ತ್ರೀಯನ್ನು ಮದುವೆಮಾಡಿಕೊಂಡಿದ್ದರೆ ಅವಳು ಅಕ್ಷರಾರ್ಥವಾಗಿ ಸಾಯಲು ಇಷ್ಟಪಡುತ್ತಿದ್ದಳೊ? ಬಹುಶಃ ಇಲ್ಲ. ಆದರೂ ಇಸಾಕನು ರೆಬೆಕ್ಕಳ ಭಾವನೆಗಳನ್ನು ಕ್ಷುಲ್ಲಕವಾಗಿ ಪರಿಗಣಿಸಲಿಲ್ಲ. ಅದಕ್ಕೆ ಬದಲಾಗಿ, ರೆಬೆಕ್ಕಳ ಚಿಂತೆಯು ಸಮಂಜಸವಾಗಿದೆ ಎಂಬುದನ್ನು ಇಸಾಕನು ಅರ್ಥಮಾಡಿಕೊಂಡನು ಮತ್ತು ಅದಕ್ಕನುಸಾರ ಕ್ರಿಯೆಗೈದನು. (ಆದಿಕಾಂಡ 28:1) ಮುಂದಿನ ಸಲ ನಿಮ್ಮ ಸಂಗಾತಿಯು ಒಂದು ವಿಷಯದ ಕುರಿತು ಚಿಂತಿತರಾಗಿರುವಾಗ ನೀವು ಹೀಗೇ ಮಾಡಿ. ಆ ವಿಷಯವನ್ನು ಅಲ್ಪವಾಗಿ ಎಣಿಸಿ ಬದಿಗೊತ್ತುವುದಕ್ಕೆ ಬದಲಾಗಿ, ನಿಮ್ಮ ಸಂಗಾತಿಗೆ ಕಿವಿಗೊಡಿರಿ, ಅವನ ಅಥವಾ ಅವಳ ದೃಷ್ಟಿಕೋನವನ್ನು ಗೌರವಿಸಿರಿ, ಮತ್ತು ಸಹಾನುಭೂತಿಯಿಂದ ಪ್ರತಿಕ್ರಿಯಿಸಿರಿ.

ಕಿವಿಗೊಡುವುದರ ಮತ್ತು ಒಳನೋಟವನ್ನು ಹೊಂದಿರುವುದರ ಮೌಲ್ಯ

ಬೈಬಲ್‌ ಜ್ಞಾನೋಕ್ತಿಯೊಂದು ಹೀಗಿದೆ: “ಮನುಷ್ಯನ ವಿವೇಕವು [“ಒಳನೋಟವು,” NW] ಅವನ ಸಿಟ್ಟಿಗೆ ಅಡ್ಡಿ.” (ಜ್ಞಾನೋಕ್ತಿ 19:11) ಒಂದು ಭಿನ್ನಾಭಿಪ್ರಾಯದ ಒತ್ತಡಕ್ಕೆ ಒಳಗಾಗಿರುವಾಗ, ನಿಮ್ಮ ಸಂಗಾತಿಯು ನುಡಿಯುವ ಪ್ರತಿಯೊಂದು ಕಟುಮಾತಿಗೂ ಹಿಂದೆಮುಂದೆ ಆಲೋಚಿಸದೆ ಥಟ್ಟನೆ ಪ್ರತಿಕ್ರಿಯಿಸುವುದು ತುಂಬ ಸುಲಭ. ಆದರೆ, ಸಾಮಾನ್ಯವಾಗಿ ಇದೇ ವಾಗ್ವಾದವನ್ನು ಗಂಭೀರಗೊಳಿಸಲು ಕಾರಣವಾಗಿಬಿಡುತ್ತದೆ. ಆದುದರಿಂದ, ನಿಮ್ಮ ಸಂಗಾತಿಯ ಮಾತಿಗೆ ಕಿವಿಗೊಡುತ್ತಿರುವಾಗ, ನುಡಿಯಲ್ಪಡುತ್ತಿರುವ ಮಾತುಗಳನ್ನು ಮಾತ್ರವಲ್ಲ ಆ ಮಾತುಗಳ ಹಿಂದಿರುವ ಭಾವನೆಗಳನ್ನೂ ಕೇಳಿಸಿಕೊಳ್ಳಲು ದೃಢನಿರ್ಧಾರವನ್ನು ಮಾಡಿರಿ. ಇಂಥ ಒಳನೋಟವು, ವೈಯಕ್ತಿಕ ಕಿರಿಕಿರಿಯನ್ನು ಮಾತ್ರ ಪರಿಗಣಿಸದೆ, ಸಮಸ್ಯೆಯ ಮೂಲವನ್ನು ಗ್ರಹಿಸುವಂತೆ ನಿಮಗೆ ಸಹಾಯಮಾಡುವುದು.

ಉದಾಹರಣೆಗೆ, “ನೀವು ನನ್ನೊಂದಿಗೆ ಸಮಯವನ್ನೇ ಕಳೆಯುವುದಿಲ್ಲ!” ಎಂದು ನಿಮ್ಮ ಪತ್ನಿಯು ನಿಮಗೆ ಹೇಳುತ್ತಾಳೆ ಎಂದಿಟ್ಟುಕೊಳ್ಳಿ. ಆಗ ನೀವು ತುಂಬ ಕೋಪಗೊಂಡು, ಅನಿಶ್ಚಿತ ವಾಸ್ತವಾಂಶಗಳೊಂದಿಗೆ ಆ ಆರೋಪವನ್ನು ಅಲ್ಲಗಳೆಯಸಾಧ್ಯವಿದೆ. “ಕಳೆದ ತಿಂಗಳು ಇಡೀ ದಿನ ನಿನ್ನೊಟ್ಟಿಗೆ ಕಳೆದಿದ್ದೆನಲ್ಲ!” ಎಂದು ನೀವು ಉತ್ತರಿಸಬಹುದು. ಆದರೆ, ನೀವು ಜಾಗ್ರತೆಯಿಂದ ಕಿವಿಗೊಡುವಲ್ಲಿ, ವಾಸ್ತವದಲ್ಲಿ ನಿಮ್ಮ ಪತ್ನಿಯು ನೀವು ಹೆಚ್ಚು ನಿಮಿಷಗಳನ್ನು ಅಥವಾ ತಾಸುಗಳನ್ನು ತನ್ನೊಟ್ಟಿಗೆ ಕಳೆಯುವಂತೆ ಕೇಳಿಕೊಳ್ಳುತ್ತಿಲ್ಲ ಎಂಬುದು ನಿಮಗೆ ಗೊತ್ತಾಗಬಹುದು. ಅದಕ್ಕೆ ಬದಲಾಗಿ, ತನ್ನನ್ನು ಅಲಕ್ಷಿಸಲಾಗುತ್ತಿದೆ ಮತ್ತು ತನ್ನನ್ನು ಪ್ರೀತಿಸಲಾಗುತ್ತಿಲ್ಲ ಎಂಬ ಸಂದೇಶವನ್ನು ಕೊಡುವ ಮೂಲಕ ಅವಳು ನಿಮ್ಮಿಂದ ಪುನರಾಶ್ವಾಸನೆಯನ್ನು ಕೇಳಿಕೊಳ್ಳುತ್ತಿರಬಹುದು.

ನೀವು ಒಬ್ಬ ಪತ್ನಿಯಾಗಿದ್ದೀರಿ ಮತ್ತು ಇತ್ತೀಚೆಗೆ ನೀವು ಮಾಡಿದ ಒಂದು ಖರೀದಿಯ ವಿಷಯದಲ್ಲಿ ನಿಮ್ಮ ಪತಿ ಚಿಂತೆಯನ್ನು ವ್ಯಕ್ತಪಡಿಸುತ್ತಾರೆ ಎಂದು ಭಾವಿಸಿ. “ಇಷ್ಟೊಂದು ಹಣವನ್ನು ಏಕೆ ಖರ್ಚುಮಾಡಿದಿ?” ಎಂದು ನಂಬಲಾರದಂಥ ರೀತಿಯಲ್ಲಿ ಅವರು ಕೇಳುತ್ತಾರೆ. ಆಗ ನೀವು, ಕುಟುಂಬದ ಖರ್ಚುವೆಚ್ಚದ ನಿಜಾಂಶಗಳಿಂದಲೊ ಅಥವಾ ನಿಮ್ಮ ಖರೀದಿಯನ್ನು ಅವರ ಒಂದು ಖರೀದಿಗೆ ಹೋಲಿಸುವ ಮೂಲಕವೊ ನಿಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಬಹುದು. ಆದರೆ, ನಿಮ್ಮ ಪತಿ ಖರ್ಚುವೆಚ್ಚದ ಕುರಿತಾಗಿ ಮಾತಾಡುತ್ತಾ ಇಲ್ಲದಿರಬಹುದು ಎಂಬುದನ್ನು ಗ್ರಹಿಸಲು ಒಳನೋಟವು ನಿಮಗೆ ಸಹಾಯಮಾಡುವುದು. ಅದಕ್ಕೆ ಬದಲಾಗಿ, ಒಂದು ದೊಡ್ಡ ಖರೀದಿಯನ್ನು ಮಾಡುವುದರ ಸಂಬಂಧದಲ್ಲಿ ನಿರ್ಧಾರವನ್ನು ಮಾಡುವಾಗ ತನಗೆ ಒಂದು ಮಾತನ್ನೂ ತಿಳಿಸಲಿಲ್ಲವಲ್ಲ ಎಂಬ ಕಾರಣಕ್ಕಾಗಿ ಅವರು ಬೇಸರಗೊಂಡಿರಬಹುದು.

ತಾವು ಜೊತೆಯಾಗಿ ಎಷ್ಟು ಸಮಯವನ್ನು ಕಳೆಯಬೇಕು ಮತ್ತು ಖರೀದಿಯ ನಿರ್ಣಯಗಳನ್ನು ಹೇಗೆ ಮಾಡಬೇಕು ಎಂಬ ವಿಷಯಗಳನ್ನು ಬಗೆಹರಿಸುವುದರಲ್ಲಿ ಪ್ರತಿಯೊಬ್ಬ ದಂಪತಿಗೂ ಭಿನ್ನವಾದ ಮಾರ್ಗವಿರುತ್ತದೆ ಎಂಬುದು ನಿಶ್ಚಯ. ನಾವು ಕಲಿಯಬೇಕಾಗಿರುವ ಪಾಠವೇನೆಂದರೆ, ಒಂದು ಭಿನ್ನಾಭಿಪ್ರಾಯವು ಉಂಟಾಗುವಾಗ ಒಳನೋಟವು ನಿಮ್ಮ ಸಿಟ್ಟಿಗೆ ಅಡ್ಡಿಯಾಗುವುದು ಮತ್ತು ಸದ್ಯದ ನಿಜವಾದ ವಾದಾಂಶವೇನು ಎಂಬುದನ್ನು ಗ್ರಹಿಸುವಂತೆ ನಿಮಗೆ ಸಹಾಯಮಾಡುವುದು. ಹಿಂದೆಮುಂದೆ ಆಲೋಚಿಸದೆ ಥಟ್ಟನೆ ಪ್ರತಿಕ್ರಿಯಿಸುವುದಕ್ಕೆ ಬದಲಾಗಿ, ‘ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಕೋಪಿಸುವದರಲ್ಲಿ ನಿಧಾನವಾಗಿಯೂ’ ಇರುವಂತೆ ಬೈಬಲ್‌ ಲೇಖಕನಾದ ಯಾಕೋಬನು ಕೊಟ್ಟ ಬುದ್ಧಿವಾದವನ್ನು ಅನುಸರಿಸಿರಿ.​—⁠ಯಾಕೋಬ 1:⁠19.

ನೀವು ಮಾತಾಡುವಾಗ, ನಿಮ್ಮ ಸಂಗಾತಿಯೊಂದಿಗೆ ಹೇಗೆ ಮಾತಾಡುತ್ತೀರಿ ಎಂಬುದು ಪ್ರಾಮುಖ್ಯವಾಗಿದೆ ಎಂಬುದನ್ನು ನೆನಪಿನಲ್ಲಿಡಿರಿ. “ಮತಿವಂತರ ಮಾತೇ ಮದ್ದು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 12:18) ನೀವು ಮತ್ತು ನಿಮ್ಮ ಸಂಗಾತಿಯು ಒಂದು ಭಿನ್ನಾಭಿಪ್ರಾಯದಲ್ಲಿ ಸಿಕ್ಕಿಕೊಂಡಿರುವಾಗ, ನಿಮ್ಮ ಮಾತುಗಳು ನೋವನ್ನುಂಟುಮಾಡುತ್ತವೊ ಅಥವಾ ಜಗಳವನ್ನು ಕೊನೆಗೊಳಿಸುವಂತಿರುತ್ತವೊ? ಅವು ಅಡ್ಡಗೋಡೆಗಳನ್ನು ನಿರ್ಮಿಸುತ್ತವೊ ಅಥವಾ ರಾಜಿಮಾಡಿಕೊಳ್ಳಲಿಕ್ಕಾಗಿ ದಾರಿಯನ್ನು ಮಾಡಿಕೊಡುತ್ತವೊ? ನಾವು ಈಗಾಗಲೇ ನೋಡಿರುವಂತೆ, ಕೋಪದ ಅಥವಾ ದುಡುಕಿನ ಪ್ರತಿಕ್ರಿಯೆಗಳು ಜಗಳವನ್ನು ಹೆಚ್ಚಿಸುತ್ತವೆ.​—⁠ಜ್ಞಾನೋಕ್ತಿ 29:⁠22.

ಒಂದು ಭಿನ್ನಾಭಿಪ್ರಾಯವು ಕೋಪದ ಮಾತಿನಿಂದ ಆರಂಭಿಸಿ ಕಲಹದ ಸ್ಥಿತಿಯನ್ನು ತಲಪುವಲ್ಲಿ, ಮುಖ್ಯ ವಾದಾಂಶಕ್ಕೇ ಅಂಟಿಕೊಳ್ಳಲು ಹೆಚ್ಚಿನ ಪ್ರಯತ್ನವನ್ನು ಮಾಡಿರಿ. ಆ ವ್ಯಕ್ತಿಯ ಮೇಲಲ್ಲ ಬದಲಾಗಿ ಭಿನ್ನಾಭಿಪ್ರಾಯಕ್ಕೆ ಕಾರಣವಾದ ಅಂಶದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ಯಾರು ಸರಿ ಎಂಬುದಕ್ಕಿಂತ ಯಾವುದು ಸರಿ ಎಂಬ ವಿಷಯದಲ್ಲಿ ಆಸಕ್ತರಾಗಿರಿ. ನಿಮ್ಮ ಮಾತುಗಳು ವಾಗ್ವಾದದ ಜ್ವಾಲೆಗೆ ಎಣ್ಣೆಯನ್ನು ಸುರಿಯದಂತೆ ಜಾಗ್ರತೆ ವಹಿಸಿರಿ. ಬೈಬಲ್‌ ಹೇಳುವುದು: “ಬಿರುನುಡಿಯು ಸಿಟ್ಟನ್ನೇರಿಸುವದು.” (ಜ್ಞಾನೋಕ್ತಿ 15:1) ಹೌದು, ನೀವು ಏನು ಹೇಳುತ್ತೀರಿ ಮತ್ತು ಅದನ್ನು ಹೇಗೆ ಹೇಳುತ್ತೀರಿ ಎಂಬುದು, ನೀವು ನಿಮ್ಮ ಸಂಗಾತಿಯ ಸಹಕಾರವನ್ನು ಪಡೆಯುತ್ತೀರೊ ಇಲ್ಲವೊ ಎಂಬುದನ್ನು ನಿರ್ಧರಿಸಬಹುದು.

ವಾದವನ್ನು ಗೆಲ್ಲುವುದಲ್ಲ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಗುರಿಯನ್ನಿಡಿರಿ

ನಾವು ಭಿನ್ನಾಭಿಪ್ರಾಯಗಳನ್ನು ನಿರ್ವಹಿಸುವಾಗ ನಮ್ಮ ಗುರಿಯು ವಾದದಲ್ಲಿ ಗೆಲ್ಲುವುದಲ್ಲ ಬದಲಾಗಿ ಸಮಸ್ಯೆಯನ್ನು ಬಗೆಹರಿಸುವುದೇ ಆಗಿದೆ. ನೀವು ಒಂದು ಪರಿಹಾರವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ? ಅತ್ಯಂತ ನಿಶ್ಚಿತವಾದ ವಿಧವು, ಬೈಬಲ್‌ ಸಲಹೆಯನ್ನು ಕಂಡುಕೊಳ್ಳಲು ಪ್ರಯತ್ನಿಸುವುದು ಮತ್ತು ಅದನ್ನು ಅನ್ವಯಿಸಿಕೊಳ್ಳುವುದೇ ಆಗಿದೆ; ವಿಶೇಷವಾಗಿ ಗಂಡಂದಿರು ಹೀಗೆ ಮಾಡಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಬೇಕು. ನಡೆಯುತ್ತಿರುವ ವಿವಾದಾಂಶಗಳು ಅಥವಾ ಸಮಸ್ಯೆಗಳ ಕುರಿತು ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆತುರಪಡುವುದಕ್ಕೆ ಬದಲಾಗಿ, ಯೆಹೋವನ ದೃಷ್ಟಿಕೋನದಿಂದ ಅವುಗಳ ಕಡೆಗೆ ನೋಡಬಾರದೇಕೆ? ಆತನಿಗೆ ಪ್ರಾರ್ಥಿಸಿರಿ, ಮತ್ತು ನಿಮ್ಮ ಹೃದಯಗಳನ್ನೂ ಮಾನಸಿಕ ಶಕ್ತಿಗಳನ್ನೂ ಕಾಯುವಂಥ ದೇವಶಾಂತಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿರಿ. (ಎಫೆಸ 6:18; ಫಿಲಿಪ್ಪಿ 4:6, 7) ಕೇವಲ ನಿಮ್ಮ ಸ್ವಹಿತವನ್ನು ನೋಡದೆ ನಿಮ್ಮ ಸಂಗಾತಿಯ ಹಿತವನ್ನೂ ಪರಿಗಣಿಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿರಿ.​—⁠ಫಿಲಿಪ್ಪಿ 2:⁠4.

ಕೆಲವೊಮ್ಮೆ ಬಿಗಡಾಯಿಸಿದ ಒಂದು ಸನ್ನಿವೇಶವನ್ನು ಯಾವುದು ಇನ್ನೂ ಗಂಭೀರವಾಗಿ ಮಾಡುತ್ತದೆಂದರೆ, ನೋವಿನ ಅನಿಸಿಕೆಗಳು ಹಾಗೂ ಅನಿಯಂತ್ರಿತ ಭಾವನೆಗಳು ನಿಮ್ಮ ಆಲೋಚನೆಗಳನ್ನು ಮತ್ತು ಕ್ರಿಯೆಗಳನ್ನು ನಿಯಂತ್ರಿಸುವಂತೆ ಬಿಡುವುದೇ ಆಗಿದೆ. ಇನ್ನೊಂದು ಕಡೆಯಲ್ಲಿ, ದೇವರ ವಾಕ್ಯದ ಸಲಹೆಯ ಮೂಲಕ ತಿದ್ದಿಕೊಳ್ಳಲು ಸಿದ್ಧಮನಸ್ಕರಾಗಿರುವುದು ಶಾಂತಿ, ರಾಜಿಮಾಡಿಕೊಳ್ಳುವಿಕೆ ಹಾಗೂ ಯೆಹೋವನ ಆಶೀರ್ವಾದಕ್ಕೆ ನಡಿಸುತ್ತದೆ. (2 ಕೊರಿಂಥ 13:11) ಆದುದರಿಂದ, “ಮೇಲಣಿಂದ ಬರುವ” ವಿವೇಕದಿಂದ ಮಾರ್ಗದರ್ಶಿಸಲ್ಪಟ್ಟು ದೈವಿಕ ಗುಣಗಳನ್ನು ಪ್ರದರ್ಶಿಸಿರಿ, ಮತ್ತು ‘ಸಮಾಧಾನಪಡಿಸುವವರಾಗಿ’ ಅದರ ಫಲಗಳನ್ನು ಕೊಯ್ಯಿರಿ.​—⁠ಯಾಕೋಬ 3:17, 18.

ವೈಯಕ್ತಿಕ ಇಷ್ಟಾನಿಷ್ಟಗಳನ್ನು ತ್ಯಾಗಮಾಡಬೇಕಾಗಿ ಬಂದರೂ ಸರಿ, ಭಿನ್ನಾಭಿಪ್ರಾಯಗಳನ್ನು ಸಮಾಧಾನದಿಂದ ನಿರ್ವಹಿಸಲು ಎಲ್ಲರೂ ಕಲಿಯಬೇಕು. (1 ಕೊರಿಂಥ 6:7) ವಾಸ್ತವದಲ್ಲಿ, ‘ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ. ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿಕೊಳ್ಳಿರಿ’ ಎಂಬ ಪೌಲನ ಬುದ್ಧಿವಾದವನ್ನು ಅನ್ವಯಿಸಿಕೊಳ್ಳಿರಿ.​—⁠ಕೊಲೊಸ್ಸೆ 3:8-10.

ಕೆಲವೊಮ್ಮೆ, ನೀವು ಏನಾದರೂ ಹೇಳಿಬಿಡುತ್ತೀರಿ ಆದರೆ ಸಮಯಾನಂತರ ಅದರ ಬಗ್ಗೆ ವಿಷಾದಪಡುತ್ತೀರಿ ಎಂಬುದೇನೊ ನಿಜ. (ಯಾಕೋಬ 3:8) ಹೀಗೆ ಸಂಭವಿಸುವಾಗ, ನಿಮ್ಮ ಸಂಗಾತಿಯ ಬಳಿ ಕ್ಷಮೆಯಾಚಿಸಿರಿ. ಪ್ರಯತ್ನಮಾಡುವುದನ್ನು ಮುಂದುವರಿಸಿರಿ. ಸಕಾಲದಲ್ಲಿ, ನೀವು ಭಿನ್ನಾಭಿಪ್ರಾಯಗಳನ್ನು ಹೇಗೆ ನಿರ್ವಹಿಸುತ್ತೀರೋ ಅದರಲ್ಲಿ ಮಹತ್ತರವಾದ ಪ್ರಗತಿಯನ್ನು ಮಾಡಿರುವುದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಗಮನಕ್ಕೆ ಬರುವುದು ಸಂಭವನೀಯ.

[ಪಾದಟಿಪ್ಪಣಿ]

^ ಪ್ಯಾರ. 3 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 22ರಲ್ಲಿರುವ ಚೌಕ/ಚಿತ್ರ]

ಒಂದು ವಾದವನ್ನು ತಣ್ಣಗಾಗಿಸಲು ಮೂರು ಹೆಜ್ಜೆಗಳು

• ನಿಮ್ಮ ಸಂಗಾತಿಗೆ ಕಿವಿಗೊಡಿರಿ. ಜ್ಞಾನೋಕ್ತಿ 10:19

• ಅವನ ಅಥವಾ ಅವಳ ದೃಷ್ಟಿಕೋನವನ್ನು ಗೌರವಿಸಿರಿ. ಫಿಲಿಪ್ಪಿ 2:⁠4

• ಪ್ರೀತಿಯಿಂದ ಪ್ರತಿಕ್ರಿಯಿಸಿರಿ. 1 ಕೊರಿಂಥ 13:4-7

[ಪುಟ 23ರಲ್ಲಿರುವ ಚೌಕ/ಚಿತ್ರ]

ಈಗ ನೀವು ಏನು ಮಾಡಸಾಧ್ಯವಿದೆ?

ನಿಮ್ಮ ಸಂಗಾತಿಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿರಿ, ಮತ್ತು ಮಧ್ಯೆ ಬಾಯಿಹಾಕದೆ ಅವರ ಉತ್ತರಗಳಿಗೆ ಕಿವಿಗೊಡಿರಿ. ತದನಂತರ ಅವರು ನಿಮಗೆ ಇವೇ ಪ್ರಶ್ನೆಗಳನ್ನು ಕೇಳಲಿ ಮತ್ತು ನೀವು ಉತ್ತರಿಸಿರಿ.

• ನಾನು ವಾದಮಾಡುವವನೊ/ಳೊ?

• ನೀನು ನಿನ್ನ ಭಾವನೆಗಳನ್ನು ಹೇಳಿಕೊಳ್ಳುವಾಗ ನಾನು ನಿಜವಾಗಿಯೂ ಕಿವಿಗೊಡುತ್ತೇನೊ, ಅಥವಾ ನೀನು ಮಾತನ್ನು ಮುಗಿಸುವುದಕ್ಕೆ ಮೊದಲೇ ಥಟ್ಟನೆ ಪ್ರತಿಕ್ರಿಯಿಸುತ್ತೇನೊ?

• ನನ್ನ ಮಾತುಗಳು ನಿನಗೆ ಭಾವಶೂನ್ಯವಾಗಿ ಅಥವಾ ಕೋಪಗೊಂಡಿರುವಂತೆ ಧ್ವನಿಸುತ್ತವೊ?

• ವಿಶೇಷವಾಗಿ ಒಂದು ವಿಷಯದ ಕುರಿತು ನಾವು ಪರಸ್ಪರ ಸಮ್ಮತಿಸದಿರುವಾಗ, ನಮ್ಮ ಸಂವಾದದ ಶೈಲಿಯನ್ನು ಉತ್ತಮಗೊಳಿಸಲು ನಾವಿಬ್ಬರೂ ಏನು ಮಾಡಸಾಧ್ಯವಿದೆ?

[ಪುಟ 21ರಲ್ಲಿರುವ ಚಿತ್ರ]

ನೀವು ಕಿವಿಗೊಡುತ್ತೀರೊ?

[ಪುಟ 22ರಲ್ಲಿರುವ ಚಿತ್ರ]

“ನನ್ನನ್ನು ಅಲಕ್ಷಿಸಲಾಗುತ್ತಿದೆ ಮತ್ತು ನನ್ನನ್ನು ಪ್ರೀತಿಸುವುದಿಲ್ಲ ಎಂಬ ಅನಿಸಿಕೆ ಆಗುತ್ತಿದೆ”

[ಪುಟ 22ರಲ್ಲಿರುವ ಚಿತ್ರ]

“ನೀವು ನನ್ನೊಂದಿಗೆ ಸಮಯವನ್ನೇ ಕಳೆಯುವುದಿಲ್ಲ!”

[ಪುಟ 22ರಲ್ಲಿರುವ ಚಿತ್ರ]

“ಕಳೆದ ತಿಂಗಳು ಇಡೀ ದಿನ ನಿನ್ನೊಟ್ಟಿಗೆ ಕಳೆದಿದ್ದೆನಲ್ಲ!”