ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ಪ್ರಿಯರಾದ ವ್ಯಕ್ತಿಗಳೊಂದಿಗೆ ಸಂಭಾಷಿಸುತ್ತೀರೊ?

ನಿಮಗೆ ಪ್ರಿಯರಾದ ವ್ಯಕ್ತಿಗಳೊಂದಿಗೆ ಸಂಭಾಷಿಸುತ್ತೀರೊ?

ನಿಮಗೆ ಪ್ರಿಯರಾದ ವ್ಯಕ್ತಿಗಳೊಂದಿಗೆ ಸಂಭಾಷಿಸುತ್ತೀರೊ?

“ಪ್ರಿಯರೊಂದಿಗೆ ಸಂವಾದಿಸುವ ನಮ್ಮ ಸಾಮರ್ಥ್ಯವು ಈಗ ಬಹಳಷ್ಟು ಕುಂಠಿತಗೊಳ್ಳುತ್ತಿದೆ,” ಎಂದು ಪೋಲೆಂಡಿನ ಪೋಲೀಟಿಕ ಎಂಬ ಸಾಪ್ತಾಹಿಕ ಪತ್ರಿಕೆಯು ವರದಿಸುತ್ತದೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿ, ವಿವಾಹಿತ ದಂಪತಿಗಳು ತಮ್ಮ ಸಂಗಾತಿಗಳೊಂದಿಗೆ ಪ್ರತಿದಿನ ಕೇವಲ ಆರು ನಿಮಿಷ ಅರ್ಥವತ್ತಾದ ಸಂಭಾಷಣೆ ನಡೆಸುತ್ತಾರೆಂದು ಅಂದಾಜುಮಾಡಲಾಗಿದೆ. ಸಂವಾದದ ಸಾಮರ್ಥ್ಯದಲ್ಲಾಗಿರುವ ಅವನತಿಯೇ ಅರ್ಧದಷ್ಟು ಸಂಖ್ಯೆಯ ಪ್ರತ್ಯೇಕವಾಸಕ್ಕೆ ಮತ್ತು ವಿವಾಹ ವಿಚ್ಛೇದಕ್ಕೆ ಕಾರಣ ಎಂದು ಕೆಲವು ಪರಿಣಿತರು ನೆನಸುತ್ತಾರೆ.

ಹೆತ್ತವರ ಮತ್ತು ಮಕ್ಕಳ ನಡುವಣ ಸಂಭಾಷಣೆಯ ಕುರಿತಾಗಿ ಏನು? ಹೆಚ್ಚಿನ ಸಂದರ್ಭಗಳಲ್ಲಿ, “ಅದೊಂದು ಸಂವಾದವಾಗಿರದೆ, ಇಂದು ಶಾಲೆ ಹೇಗಿತ್ತು? ನಿನ್ನ ಸ್ನೇಹಿತರು ಹೇಗಿದ್ದಾರೆ? ಈ ಮುಂತಾದ ಪ್ರಶ್ನೆಗಳಿಂದ ತುಂಬಿದ ವಿಚಾರಣೆಯಂತಿರುತ್ತದೆ” ಎಂದು ಮೇಲೆ ತಿಳಿಸಲಾದ ಆ ಪತ್ರಿಕಾ ವರದಿಯು ತಿಳಿಸುತ್ತದೆ. “ಹೀಗಿರುವಾಗ, ನಮ್ಮ ಮಕ್ಕಳು ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಹೇಗೆ ತಾನೇ ಕಲಿಯುವರು?” ಎಂದು ಆ ವರದಿಯಲ್ಲಿ ಪ್ರಶ್ನಿಸಲಾಗಿದೆ.

ಒಳ್ಳೇ ಸಂವಾದದ ಕೌಶಲವು ತನ್ನಿಂದ ತಾನೇ ಬರದಿರುವ ಕಾರಣ, ನಾವು ಹೇಗೆ ಆ ಸಾಮರ್ಥ್ಯವನ್ನು ಉತ್ತಮಗೊಳಿಸಬಲ್ಲೆವು? ಕ್ರೈಸ್ತ ಶಿಷ್ಯನಾದ ಯಾಕೋಬನು ಒಂದು ಪ್ರಾಮುಖ್ಯ ಸಲಹೆಯನ್ನು ನೀಡಿದ್ದಾನೆ: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ.” (ಯಾಕೋಬ 1:19) ಹೌದು, ಆತ್ಮೋನ್ನತಿಮಾಡುವಂಥ ಸಂಭಾಷಣೆಯನ್ನು ಹೊಂದಿರಲು ನಾವು ಕಿವಿಗೊಟ್ಟು ಆಲಿಸುವವರಾಗಿರಬೇಕು ಮತ್ತು ತಾಳ್ಮೆ ಕಳೆದುಕೊಂಡು ಮಧ್ಯಪ್ರವೇಶಿಸಬಾರದು ಅಥವಾ ಕೂಡಲೆ ಒಂದು ಸಮಾಪ್ತಿಗೆ ಬರಬಾರದು. ಟೀಕೆಯನ್ನು ತ್ಯಜಿಸಿರಿ, ಏಕೆಂದರೆ ಅದು ಸಂವಾದವನ್ನು ಸುಲಭವಾಗಿ ತಡೆಗಟ್ಟುತ್ತದೆ. ಅಷ್ಟುಮಾತ್ರವಲ್ಲದೆ, ಸಂವಾದ ಮಾಡುವಾಗ ಯೇಸು ಪ್ರಶ್ನೆಗಳನ್ನು ಉಪಯೋಗಿಸಿದನು. ಆದರೆ ಅವನು ವಿಚಾರಣೆಮಾಡುವವನಂತೆ ಪ್ರಶ್ನಿಸಲಿಲ್ಲ. ಬದಲಿಗೆ, ಅವನ ಕೇಳುಗರ ಹೃದಯದಲ್ಲಿರುವ ವಿಚಾರವನ್ನು ಹೊರಗೆಳೆಯಲು ಮತ್ತು ಅವರ ನಡುವಣ ಬಂಧವನ್ನು ಇನ್ನಷ್ಟು ಬಲಪಡಿಸಲು ಜಾಣ್ಮೆಯ ಪ್ರಶ್ನೆಗಳನ್ನು ಉಪಯೋಗಿಸಿದನು.​—⁠ಜ್ಞಾನೋಕ್ತಿ 20:5; ಮತ್ತಾಯ 16:​13-17; 17:​24-27.

ಬೈಬಲಿನಲ್ಲಿ ಕಂಡುಬರುವ ಉತ್ತಮ ಮೂಲತತ್ತ್ವಗಳನ್ನು ಅನ್ವಯಿಸುತ್ತಾ, ನಿಮ್ಮ ಪ್ರಿಯರೊಂದಿಗೆ ಮಾತಾಡಲು ಮತ್ತು ಸಂವಾದ ಬೆಳೆಸಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಿರಿ. ಇದು, ಬಹಳಷ್ಟು ವರುಷಗಳ ವರೆಗೆ, ಹೌದು ಇಡೀ ಜೀವಮಾನದ ವರೆಗೂ ಬಾಳುವ ಪ್ರೀತಿಭರಿತ ಸಂಬಂಧವನ್ನು ರೂಪಿಸಬಹುದು.