ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕವು ಎತ್ತ ಸಾಗುತ್ತಿದೆ?

ಲೋಕವು ಎತ್ತ ಸಾಗುತ್ತಿದೆ?

ಲೋಕವು ಎತ್ತ ಸಾಗುತ್ತಿದೆ?

ಜಾಗತಿಕ ಏಕತೆ. ಇದನ್ನು ಓದಲು ಎಷ್ಟು ಹಿತಕರವಾಗಿದೆ. ಖಂಡಿತವಾಗಿಯೂ ಎಲ್ಲರೂ ಬಯಸುವುದು ಇದನ್ನೇ, ಅಲ್ಲವೇ? ಏಕತೆಯ ಬಗ್ಗೆ ಬಹಳಷ್ಟು ಮಾತುಕತೆ ನಡೆದಿದೆ. ಲೋಕ ನಾಯಕರ ಕೂಟಗಳಲ್ಲಿ ಪುನಃ ಪುನಃ ಈ ವಿಷಯವನ್ನು ಚರ್ಚಿಸಲಾಗಿದೆ. 2000ದ ಆಗಸ್ಟ್‌ ತಿಂಗಳಿನಲ್ಲಿ, ಸಹಸ್ರಮಾನ ಲೋಕ ಶಾಂತಿ ಶೃಂಗಸಭೆಗಾಗಿ ನ್ಯೂ ಯಾರ್ಕ್‌ನ ವಿಶ್ವಸಂಸ್ಥೆಯಲ್ಲಿ 1,000ಕ್ಕಿಂತಲೂ ಹೆಚ್ಚು ಮಂದಿ ಧಾರ್ಮಿಕ ಮುಖಂಡರು ಕೂಡಿಬಂದರು. ಲೋಕ ಕಲಹಗಳಿಗಾಗಿನ ಪರಿಹಾರವನ್ನು ಅವರು ಚರ್ಚಿಸಿದರು. ಆದರೆ ವಾಸ್ತವದಲ್ಲಿ ಆ ಸಭೆಯೇ, ಲೋಕದಲ್ಲಿ ಎದ್ದುಕಾಣುವ ವಾಗ್ಯುದ್ಧಗಳ ಪ್ರತಿಬಿಂಬವಾಗಿತ್ತು. ಯೆಹೂದಿ ಧಾರ್ಮಿಕ ಮುಖಂಡರು ಆ ಸಭೆಯಲ್ಲಿ ಹಾಜರಿದ್ದ ಕಾರಣ ಯೆರೂಸಲೇಮಿನ ಒಬ್ಬ ಮುಸ್ಲಿಮ್‌ ಕಾನೂನುತಜ್ಞನು ಹಾಜರಾಗಲು ನಿರಾಕರಿಸಿದನು. ದಲೈ ಲಾಮಾರನ್ನು ಸಭೆಗೆ ಕರೆದರೆ ಚೀನಾದ ಜನರು ಪ್ರತಿಭಟಿಸಬಹುದೆಂಬ ಭಯದಿಂದ ಮೊದಲ ಎರಡು ದಿನಗಳ ಸಭೆಗೆ ಅವರನ್ನು ಕರೆಯಲಿಲ್ಲ. ಇದರಿಂದಾಗಿ ಇನ್ನಿತರರು ಕೋಪಿಸಿಕೊಂಡರು.

ಇಸವಿ 2003ರ ಅಕ್ಟೋಬರ್‌ ತಿಂಗಳಿನಲ್ಲಿ, ಥಾಯ್‌ಲೆಂಡ್‌ನಲ್ಲಿ ನಡೆದ ಏಷ್ಯಾ ಪ್ಯಾಸಿಫಿಕ್‌ ಆರ್ಥಿಕ ಸಹಕಾರ (ಎಪಿಈಸಿ) ಶೃಂಗಸಭೆಯಲ್ಲಿ ಶಾಂತಮಹಾಸಾಗರದ ಅಂಚಿನ ರಾಷ್ಟ್ರಗಳು ಲೋಕ ಭದ್ರತೆಯ ವಿವಾದಾಂಶಗಳ ಕುರಿತು ಚರ್ಚಿಸಿದವು. ಭಯೋತ್ಪಾದಕ ಗುಂಪುಗಳನ್ನು ಇಲ್ಲದಂತೆ ಮಾಡಲು ಮತ್ತು ಭೌಗೋಳಿಕ ಭದ್ರತೆಯನ್ನು ಹೆಚ್ಚಿಸಲು ಪ್ರಯತ್ನಿಸುವುದಾಗಿ 21 ರಾಷ್ಟ್ರಗಳು ಪ್ರತಿಜ್ಞೆಮಾಡಿದವು. ಆದರೆ, ಸಭೆಯು ನಡೆಯುತ್ತಿದ್ದ ಸಮಯದಲ್ಲಿ ಒಬ್ಬ ಪ್ರಧಾನ ಮಂತ್ರಿಯವರು ಮಾಡಿದ ಹೇಳಿಕೆಗಳ ವಿಷಯದಲ್ಲಿ ಅನೇಕ ಪ್ರತಿನಿಧಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಆ ಹೇಳಿಕೆಗಳು, ಯೆಹೂದ್ಯರ ವಿರುದ್ಧ ದ್ವೇಷಭರಿತವಾದ ವಾಗ್ದಾಳಿಯಾಗಿದ್ದವು ಎಂದು ಹೇಳಲಾಯಿತು.

ಏಕತೆಯು ಏಕಿಲ್ಲ?

ಲೋಕವನ್ನು ಐಕ್ಯಗೊಳಿಸುವ ಕುರಿತು ಹಲವಾರು ಮಾತುಕತೆಗಳು ನಡೆಯುತ್ತಿರುವುದಾದರೂ, ತೀರ ಕೊಂಚ ಪ್ರತಿಫಲಗಳನ್ನು ನಾವು ಕಾಣುತ್ತೇವೆ. ಅನೇಕರು ಯಥಾರ್ಥ ಪ್ರಯತ್ನಗಳನ್ನು ಮಾಡಿರುವುದಾದರೂ, ಈ 21ನೇ ಶತಮಾನದಲ್ಲೂ ಜಾಗತಿಕ ಏಕತೆಯು ಮಾನವಕುಲಕ್ಕೆ ನಿಲುಕದ ವಿಷಯವಾಗಿ ಏಕೆ ಉಳಿದಿದೆ?

ಇದರ ಭಾಗಶಃ ಉತ್ತರವು, ಎಪಿಈಸಿ ಶೃಂಗಸಭೆಗೆ ಹಾಜರಾದ ಪ್ರಧಾನ ಮಂತ್ರಿಗಳಲ್ಲಿ ಒಬ್ಬರು ಮಾಡಿದ ಹೇಳಿಕೆಯಿಂದ ತಿಳಿದುಬರುತ್ತದೆ. ಅವರು ಹೇಳಿದ್ದು: “ರಾಷ್ಟ್ರಾಭಿಮಾನ ಎಂಬ ಸಂಗತಿಯೊಂದಿದೆ.” ಹೌದು, ಮಾನವ ಸಮಾಜವು ರಾಷ್ಟ್ರೀಯತೆ ಎಂಬ ಪ್ರಪಾತದಲ್ಲಿ ಬಿದ್ದಿದೆ. ಪ್ರತಿಯೊಂದು ರಾಷ್ಟ್ರ ಮತ್ತು ಜನಾಂಗೀಯ ಗುಂಪು ಸ್ವನಿರ್ಧಾರದ ಇಚ್ಛೆಗನುಸಾರ ನಡೆಸಲ್ಪಡುತ್ತಿದೆ. ರಾಷ್ಟ್ರೀಯ ಪರಮಾಧಿಕಾರವು ಸ್ಪರ್ಧಾತ್ಮಕ ಮನೋಭಾವ ಮತ್ತು ಲೋಭದೊಂದಿಗೆ ಜೊತೆಗೂಡಿ ಭೀಕರ ಪರಿಸ್ಥಿತಿಯನ್ನು ಉಂಟುಮಾಡಿದೆ. ಅನೇಕ ಸಂದರ್ಭಗಳಲ್ಲಿ, ರಾಷ್ಟ್ರೀಯ ಅಭಿರುಚಿಗಳು ಭೌಗೋಳಿಕ ಅಭಿರುಚಿಗಳಿಗೆ ವಿರುದ್ಧವಾಗಿರುವಾಗ, ರಾಷ್ಟ್ರೀಯ ಅಭಿರುಚಿಗಳೇ ಮೇಲುಗೈ ಹೊಂದುತ್ತವೆ.

ಆದುದರಿಂದಲೇ ರಾಷ್ಟ್ರೀಯತೆಯನ್ನು ಕೀರ್ತನೆಗಾರನು “ಮರಣಕರವ್ಯಾಧಿ” ಎಂಬುದಾಗಿ ಸೂಕ್ತವಾಗಿಯೇ ವರ್ಣಿಸಿದ್ದಾನೆ. (ಕೀರ್ತನೆ 91:⁠3) ಇದು ಮಾನವಕುಲಕ್ಕೆ ತಗಲಿರುವ ಒಂದು ಅಂಟುರೋಗದಂತಿದೆ ಮತ್ತು ಹೇಳಲಾಗದಷ್ಟು ಕಷ್ಟಸಂಕಟಗಳಿಗೆ ನಡೆಸಿದೆ. ರಾಷ್ಟ್ರೀಯತೆ ಮತ್ತು ಅದರಿಂದಾಗಿ ಇತರ ರಾಷ್ಟ್ರದ ಜನರ ಕಡೆಗೆ ಹುಟ್ಟಿರುವ ಹಗೆತನವು ಶತಮಾನಗಳಿಂದ ಅಸ್ತಿತ್ವದಲ್ಲಿದೆ. ಇಂದಿನ ವರೆಗೂ ರಾಷ್ಟ್ರೀಯತೆಯು ವಿಭಜನೆಯನ್ನು ಉಂಟುಮಾಡುತ್ತಾ ಇದೆ ಮತ್ತು ಇದನ್ನು ತಡೆಯಲು ಮಾನವ ನಾಯಕರು ಅಶಕ್ತರಾಗಿದ್ದಾರೆ.

ರಾಷ್ಟ್ರೀಯತೆ ಮತ್ತು ಸ್ವಹಿತಾಸಕ್ತಿಯು ಲೋಕದಲ್ಲಿರುವ ಸಮಸ್ಯೆಗಳಿಗೆ ಮೂಲಕಾರಣಗಳಾಗಿವೆ ಎಂಬುದನ್ನು ಅನೇಕ ಅಧಿಕಾರಿಗಳು ಅಂಗೀಕರಿಸುತ್ತಾರೆ. ಉದಾಹರಣೆಗೆ, ವಿಶ್ವಸಂಸ್ಥೆಯ ಮಾಜಿ ಸೆಕ್ರಿಟರಿ ಜನರಲ್‌ ಉ ತಾಂತ್‌ ತಿಳಿಸಿದ್ದು: “ಇಂದು ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ತಪ್ಪು ಮನೋಭಾವದ ಕಾರಣ ಯಾ ಪರಿಣಾಮವಾಗಿವೆ . . . ಇವುಗಳಲ್ಲಿ ಒಂದು, ‘ಸರಿಯಾಗಿರಲಿ ತಪ್ಪಾಗಿರಲಿ ನನ್ನ ದೇಶ’ ಎಂಬ ಸಂಕುಚಿತ ರಾಷ್ಟ್ರೀಯತೆಯ ಭಾವನೆಯೇ ಆಗಿದೆ.” ಹಾಗಿದ್ದರೂ ರಾಷ್ಟ್ರಗಳು ಇಂದು ಸ್ವಹಿತಾಸಕ್ತಿಯಲ್ಲಿ ಮುಳುಗಿವೆ ಮತ್ತು ತಮ್ಮ ಸ್ವಂತ ಪರಮಾಧಿಕಾರಕ್ಕಾಗಿ ಹೆಚ್ಚೆಚ್ಚು ತಗಾದೆಮಾಡುತ್ತಿವೆ. ಯಾರಲ್ಲಿ ಅಧಿಕಾರವಿದೆಯೊ ಅವರು ತಮ್ಮ ಅಧಿಕಾರದಲ್ಲಿ ಸ್ವಲ್ಪವನ್ನೂ ಬಿಟ್ಟುಕೊಡಲು ಇಚ್ಛಿಸುವುದಿಲ್ಲ. ಉದಾಹರಣೆಗೆ, ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ ವಾರ್ತಾಪತ್ರಿಕೆಯು ಯೂರೋಪಿಯನ್‌ ಯೂನಿಯನ್‌ನ ಕುರಿತು ಈ ಹೇಳಿಕೆಯನ್ನು ಮಾಡಿತು: “ಯೂರೋಪಿಯನ್‌ ರಾಜಕೀಯದಲ್ಲಿ ಪ್ರತಿಸ್ಪರ್ಧೆ ಮತ್ತು ಅಪನಂಬಿಕೆಯು ಒಂದು ಮೂಲಭೂತ ಮಾದರಿಯಾಗಿಯೇ ಉಳಿದಿದೆ. ಯೂರೋಪಿಯನ್‌ ಯೂನಿಯನ್‌ನ ಹೆಚ್ಚಿನ ಸದಸ್ಯ ರಾಷ್ಟ್ರಗಳಿಗೆ, ತಮ್ಮಲ್ಲಿ ಒಂದು ರಾಷ್ಟ್ರವು ಉನ್ನತ ಸ್ಥಾನವನ್ನು ಪಡೆದುಕೊಂಡು ಮುಂದಾಳುತ್ವ ವಹಿಸುವುದನ್ನು ಸ್ವೀಕರಿಸಲು ಇನ್ನೂ ಅಸಾಧ್ಯವಾಗಿದೆ.”

ಎಲ್ಲ ಮಾನವ ಅಧಿಕಾರದ ಪರಿಣಾಮವನ್ನು ದೇವರ ವಾಕ್ಯವಾದ ಬೈಬಲ್‌ ಸರಿಯಾಗಿಯೇ ಹೀಗೆ ವರ್ಣಿಸಿದೆ: ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನುಂಟುಮಾಡಿದ್ದಾನೆ.’ (ಪ್ರಸಂಗಿ 8:⁠9) ಲೋಕವನ್ನು ತಮ್ಮ ಸ್ವಂತ ಪ್ರತ್ಯೇಕ ರಾಷ್ಟ್ರಗಳಾಗಿ ವಿಭಾಗಿಸುವ ಮೂಲಕ, ಜನರ ಗುಂಪುಗಳು ಮತ್ತು ವೈಯಕ್ತಿಕವಾಗಿ ಕೆಲವು ವ್ಯಕ್ತಿಗಳು ಈ ಬೈಬಲ್‌ ಮೂಲತತ್ತ್ವದ ನೆರವೇರಿಕೆಯನ್ನು ಅನುಭವಿಸಿದ್ದಾರೆ: “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.”​—⁠ಜ್ಞಾನೋಕ್ತಿ 18:⁠1.

ನಮಗೆ ಯಾವುದು ಒಳ್ಳೇದು ಎಂಬುದನ್ನು ಚೆನ್ನಾಗಿ ಅರಿತಿರುವ ನಮ್ಮ ಸೃಷ್ಟಿಕರ್ತನು, ನಾವು ನಮ್ಮ ಸ್ವಂತ ಸರಕಾರಗಳನ್ನು ಸ್ಥಾಪಿಸಿ ಸ್ವತಃ ಆಳಬೇಕೆಂಬುದನ್ನು ಎಂದಿಗೂ ಉದ್ದೇಶಿಸಿರಲಿಲ್ಲ. ಆದರೆ ಹೀಗೆ ಮಾಡುವ ಮೂಲಕ ಮನುಷ್ಯನು ದೇವರ ಉದ್ದೇಶವನ್ನು ಅಲಕ್ಷಿಸಿದ್ದಾನೆ ಮತ್ತು ಎಲ್ಲವೂ ದೇವರಿಗೆ ಸೇರಿದ್ದಾಗಿದೆ ಎಂಬ ವಾಸ್ತವಾಂಶವನ್ನೂ ಮರೆತಿದ್ದಾನೆ. ಕೀರ್ತನೆ 95:​3-5 ಹೇಳುವುದು: “ಯೆಹೋವನು ಮಹಾದೇವರೂ ಎಲ್ಲಾ ದೇವರುಗಳಲ್ಲಿ ಮಹಾರಾಜನೂ ಆಗಿದ್ದಾನೆ. ಭೂಮಿಯ ಅಗಾಧವು ಆತನ ಕೈಯಲ್ಲಿರುತ್ತದೆ; ಪರ್ವತಶಿಖರಗಳು ಆತನವೇ. ಆತನೇ ಸಮುದ್ರವನ್ನು ನಿರ್ಮಿಸಿದವನು; ಅದು ಆತನದೇ. ಒಣನೆಲವು ಆತನ ಕೈಕೆಲಸವೇ.” ದೇವರು ತಾನೇ ನ್ಯಾಯಬದ್ಧ ಪರಮಾಧಿಕಾರಿಯಾಗಿದ್ದಾನೆ ಮತ್ತು ಎಲ್ಲರೂ ಆತನ ಆಳ್ವಿಕೆಯ ಕಡೆಗೆ ನೋಡಬೇಕಾಗಿದೆ. ರಾಷ್ಟ್ರಗಳಾದರೋ ತಮ್ಮ ಸ್ವಂತ ಪರಮಾಧಿಕಾರಗಳನ್ನು ಬೆನ್ನಟ್ಟುವ ಮೂಲಕ ಆತನ ಚಿತ್ತಕ್ಕೆ ವಿರುದ್ಧವಾಗಿ ಕಾರ್ಯವೆಸಗುತ್ತಿವೆ.​—⁠ಕೀರ್ತನೆ 2:⁠2.

ಯಾವುದರ ಅಗತ್ಯವಿದೆ?

ಇಡೀ ಮಾನವಕುಲದ ಬಗ್ಗೆ ಕಾಳಜಿವಹಿಸುವ ಏಕೈಕ ಲೋಕ ಸರಕಾರವನ್ನು ಹೊಂದಿರುವುದಾದರೆ ಮಾತ್ರ ಲೋಕವು ಐಕ್ಯವಾಗಸಾಧ್ಯವಿದೆ. ಇದರ ಅಗತ್ಯವನ್ನು, ಆಲೋಚನಾಪರರಾದ ಅನೇಕ ಜನರು ಮನಗಾಣುತ್ತಾರೆ. ಹಾಗಿದ್ದರೂ, ಅಂಥ ಜನರು ಅನೇಕವೇಳೆ ಅದನ್ನು ತಪ್ಪಾದ ಸ್ಥಳದಲ್ಲಿ ಹುಡುಕುತ್ತಾರೆ. ಉದಾಹರಣೆಗೆ, ಧಾರ್ಮಿಕ ಮುಖಂಡರನ್ನು ಸೇರಿಸಿ ಅನೇಕ ಇತರ ವಿಮರ್ಶಕರು, ಲೋಕ ಐಕ್ಯಕ್ಕಾಗಿ ವಿಶ್ವಸಂಸ್ಥೆಯ ಕಡೆಗೆ ನೋಡುವಂತೆ ಜನರನ್ನು ಉತ್ತೇಜಿಸಿದ್ದಾರೆ. ಆದರೆ, ಮಾನವ ಸಂಘಟನೆಗಳ ಧ್ಯೇಯಗಳು ಎಷ್ಟೇ ಉತ್ತಮವಾಗಿರಲಿ, ಅವುಗಳಿಂದ ಎಂದಿಗೂ ಮಾನವಕುಲದ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ, ಇಂಥ ಸಂಘಟನೆಗಳಲ್ಲಿ ಹೆಚ್ಚಿನವು ಬೇರೆ ಬೇರೆ ರಾಷ್ಟ್ರಗಳ ಮಧ್ಯೆ ಇರುವ ಅನೈಕ್ಯದ ಪ್ರತಿಬಿಂಬವಾಗಿವೆ ಅಷ್ಟೇ.

ಪರಿಹಾರಕ್ಕಾಗಿ ಮಾನವ ಸಂಘಟನೆಗಳ ಕಡೆಗೆ ನೋಡುವುದರ ವಿರುದ್ಧ ಬೈಬಲ್‌ ಎಚ್ಚರಿಸುತ್ತಾ ಹೀಗೆ ಹೇಳುತ್ತದೆ: “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ.” (ಕೀರ್ತನೆ 146:⁠3) ಹಾಗಾದರೆ ಜಾಗತಿಕ ಏಕತೆಯು ಅಸಾಧ್ಯ ಎಂಬುದನ್ನು ಈ ಮಾತುಗಳು ಸೂಚಿಸುತ್ತವೊ? ಇಲ್ಲವೇ ಇಲ್ಲ. ಇನ್ನೊಂದು ಮಾರ್ಗವಿದೆ.

ಲೋಕವನ್ನು ಐಕ್ಯಗೊಳಿಸಬಲ್ಲ ಒಂದು ಸರಕಾರವನ್ನು ದೇವರು ಈಗಾಗಲೇ ಸ್ಥಾಪಿಸಿದ್ದಾನೆ ಎಂಬುದು ಅನೇಕರಿಗೆ ತಿಳಿದಿಲ್ಲ. ಯೆಹೋವ ದೇವರ ಕುರಿತಾಗಿ ಬೈಬಲ್‌ ಹೀಗೆ ಹೇಳುತ್ತದೆ: “ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು . . . ನೀನು ಕೇಳಿಕೊಂಡರೆ ನಾನು ಅನ್ಯಜನಗಳನ್ನೆಲ್ಲಾ [“ರಾಷ್ಟ್ರಗಳನ್ನು,” NW] ನಿನಗೆ ಅಧೀನಮಾಡುವೆನು; ಭೂಮಿಯ ಕಟ್ಟಕಡೆಯ ವರೆಗೂ ಇರುವ ಎಲ್ಲಾ ದೇಶಗಳನ್ನೂ ನಿನಗೆ ಸ್ವಾಸ್ತ್ಯವಾಗಿ ಕೊಡುವೆನು.” (ಕೀರ್ತನೆ 2:​5, 8) ಗಮನಿಸಿ, ಯೆಹೋವ ದೇವರು ಒಬ್ಬ ‘ಅರಸನನ್ನು ನೇಮಿಸಿದ್ದಾನೆ’ ಎಂಬುದಾಗಿ ಶಾಸ್ತ್ರವಚನವು ತಿಳಿಸುತ್ತದೆ. ಮತ್ತು 7ನೇ ವಚನದಲ್ಲಿ ಆ ಅರಸನನ್ನು “[ನನ್ನ] ಮಗನು” ಎಂದು ಯೆಹೋವನು ಸೂಚಿಸುತ್ತಾನೆ. ಇದು ಬೇರೆ ಯಾರೂ ಅಲ್ಲ, ದೇವರ ಅತ್ಯಂತ ಮಹಾನ್‌ ಆತ್ಮಪುತ್ರನಾದ ಯೇಸು ಕ್ರಿಸ್ತನೇ ಆಗಿದ್ದಾನೆ. ಅವನಿಗೆ ಎಲ್ಲ ರಾಷ್ಟ್ರಗಳ ಮೇಲೆ ಅಧಿಕಾರವನ್ನು ಕೊಡಲಾಗಿದೆ.

ಜಾಗತಿಕ ಏಕತೆಯು ಸಾಧಿಸಲ್ಪಡುವ ರೀತಿ

ದೇವರು ಸ್ಥಾಪಿಸಿರುವ ಈ ಸ್ವರ್ಗೀಯ ಆಳ್ವಿಕೆಯನ್ನು ಹೆಚ್ಚಿನ ಜನರು ಅಂಗೀಕರಿಸುವುದಿಲ್ಲ. ರಾಷ್ಟ್ರಗಳು ತಮ್ಮ ದೃಷ್ಟಿಗೆ ಸರಿಯೆಂದು ತೋರುವ ಪರಮಾಧಿಕಾರಕ್ಕೆ ಬೆಂಬಲವನ್ನು ನೀಡುತ್ತಾ ಇವೆ. ಆದರೆ, ತನ್ನ ಪರಮಾಧಿಕಾರವನ್ನು ಮತ್ತು ತಾನು ಸ್ಥಾಪಿಸಿದ ಸರಕಾರವನ್ನು ಅಂಗೀಕರಿಸಲು ನಿರಾಕರಿಸುವವರನ್ನು ದೇವರು ಸಹಿಸುವುದಿಲ್ಲ. ಈ ಏರ್ಪಾಡನ್ನು ಸ್ವೀಕರಿಸಲು ನಿರಾಕರಿಸುವವರ ಕುರಿತು ತಿಳಿಸುತ್ತಾ ಕೀರ್ತನೆ 2:9 ಹೇಳುವುದು: ‘[ಮಗನಾದ ಯೇಸು ಕ್ರಿಸ್ತನು] ಕಬ್ಬಿಣದ ಗದೆಯಿಂದ ಅವರನ್ನು ನಾಶಮಾಡುವನು; ಮಣ್ಣಿನ ಮಡಿಕೆಗಳನ್ನೋ ಎಂಬಂತೆ ಅವರನ್ನು ಒಡೆದುಹಾಕುವನು.’ ರಾಷ್ಟ್ರಗಳಿಗೆ ತಿಳಿದಿದೆಯೊ ಇಲ್ಲವೊ ಅವುಗಳಂತೂ ಇಂದು ದೇವರ ವಿರುದ್ಧ ಹೋರಾಡಲು ಮುಂದುವರಿಯುತ್ತಿವೆ. ಬೈಬಲಿನ ಕೊನೆಯ ಪುಸ್ತಕವು, ‘ಭೂಲೋಕದಲ್ಲೆಲ್ಲಿಯೂ ಇರುವ ರಾಜರು’ “ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ” ಕೂಡಿಸಲ್ಪಡುವುದರ ಕುರಿತು ತಿಳಿಸುತ್ತದೆ. (ಪ್ರಕಟನೆ 16:14) ರಾಷ್ಟ್ರಗಳೂ ಅವುಗಳ ವಿಭಜನ ಮಾರ್ಗಗಳೂ ತೆಗೆದುಹಾಕಲ್ಪಡುವವು. ಮತ್ತು ಇದು ದೇವರ ಸರಕಾರವು ತನ್ನ ಕೆಲಸವನ್ನು ಯಾವುದೇ ಅಡ್ಡಿ ಇಲ್ಲದೆ ಮಾಡುವಂತೆ ಸಾಧ್ಯಮಾಡುವುದು.

ವಿಶ್ವದ ಪರಮಾಧಿಕಾರಿಯಾದ ಯೆಹೋವ ದೇವರು ತನ್ನ ಮಗನ ಮೂಲಕ, ಜಾಗತಿಕ ಏಕತೆಗೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ತನ್ನ ಶಕ್ತಿಯನ್ನು ವಿವೇಕದಿಂದ ಉಪಯೋಗಿಸುವನು. ದೇವರ ಸರಕಾರವು ನಿಜ ಏಕತೆಯನ್ನು ತರುವುದು ಮತ್ತು ನೀತಿಪ್ರಿಯರೆಲ್ಲರನ್ನು ಆಶೀರ್ವದಿಸುವುದು. ನಿಮ್ಮ ಬೈಬಲಿನಿಂದಲೇ 72ನೇ ಕೀರ್ತನೆಯನ್ನು ಓದಲು ನೀವೇಕೆ ತುಸು ಸಮಯವನ್ನು ವಿನಿಯೋಗಿಸಬಾರದು? ಅಲ್ಲಿ, ದೇವರ ಮಗನ ಆಳ್ವಿಕೆಯು ಮಾನವಕುಲಕ್ಕೆ ಏನನ್ನು ಮಾಡಲಿದೆ ಎಂಬುದನ್ನು ಪ್ರವಾದನಾತ್ಮಕ ರೀತಿಯಲ್ಲಿ ವರ್ಣಿಸಲಾಗಿದೆ. ಜನರು ನಿಜವಾದ ಜಾಗತಿಕ ಏಕತೆಯನ್ನು ಅನುಭವಿಸುವರು ಮತ್ತು ದಬ್ಬಾಳಿಕೆ, ಹಿಂಸಾಚಾರ, ಬಡತನ ಹಾಗೂ ಇನ್ನಿತರ ಸಮಸ್ಯೆಗಳು ಇಲ್ಲವಾಗುವವು.

ಇಂದಿನ ವಿಭಜಿತ ಲೋಕದಲ್ಲಿ ಇಂಥ ನಿರೀಕ್ಷೆಯು ಅಸಾಧ್ಯ ಸಂಗತಿಯಾಗಿದೆ ಎಂದು ಅನೇಕರು ನೆನಸುತ್ತಾರೆ. ಆದರೆ ಅದು ಸರಿಯಲ್ಲ. ದೇವರು ಪೂರ್ವದಲ್ಲಿ ಮಾಡಿದ ವಾಗ್ದಾನಗಳೆಲ್ಲವೂ ನೆರವೇರಿದವು, ಮತ್ತು ಮುಂದೆಯೂ ನೆರವೇರುವವು. (ಯೆಶಾಯ 55:​10, 11) ಈ ಬದಲಾವಣೆಯನ್ನು ನೋಡಲು ನೀವು ಬಯಸುತ್ತೀರೊ? ಖಂಡಿತವಾಗಿಯೂ ನೀವು ನೋಡಬಲ್ಲಿರಿ. ವಾಸ್ತವದಲ್ಲಿ, ಈಗಾಗಲೇ ಆ ಸಮಯಕ್ಕಾಗಿ ತಮ್ಮನ್ನು ಸನ್ನದ್ಧರನ್ನಾಗಿಮಾಡಿಕೊಂಡಿರುವ ಜನರಿದ್ದಾರೆ. ಅವರು ಸಕಲ ಜನಾಂಗಗಳಿಂದ ಬಂದವರಾಗಿದ್ದರೂ ಕಾದಾಡುವ ಬದಲಿಗೆ ದೇವರ ಪರಮಾಧಿಕಾರಕ್ಕೆ ಐಕ್ಯದಿಂದ ವಿಧೇಯರಾಗುತ್ತಿದ್ದಾರೆ. (ಯೆಶಾಯ 2:​2-4) ಅವರು ಯಾರು? ಅವರು ಯೆಹೋವನ ಸಾಕ್ಷಿಗಳಾಗಿದ್ದಾರೆ. ತಮ್ಮ ಕೂಟಗಳಿಗೆ ಬರುವಂತೆ ಅವರು ನೀಡುವ ಆಮಂತ್ರಣವನ್ನು ನೀವೇಕೆ ಸ್ವೀಕರಿಸಬಾರದು? ಅಲ್ಲಿ ನೀವು, ದೇವರ ಪರಮಾಧಿಕಾರಕ್ಕೆ ವಿಧೇಯರಾಗಲು ಮತ್ತು ಎಂದಿಗೂ ಅಂತ್ಯಗೊಳ್ಳದ ಏಕತೆಯಲ್ಲಿ ಆನಂದಿಸಲು ನಿಮಗೆ ಸಹಾಯಮಾಡಬಲ್ಲ ಜನರ ಸಹವಾಸದಲ್ಲಿ ಆನಂದಿಸುವಿರಿ.

[ಪುಟ 7ರಲ್ಲಿರುವ ಚಿತ್ರಗಳು]

ಎಲ್ಲ ರಾಷ್ಟ್ರಗಳ ಜನರು ಐಕ್ಯಗೊಂಡ ಲೋಕದಲ್ಲಿನ ಜೀವನವನ್ನು ಆನಂದಿಸಲು ಸಿದ್ಧರಾಗುತ್ತಿದ್ದಾರೆ

[ಪುಟ 4ರಲ್ಲಿರುವ ಚಿತ್ರ ಕೃಪೆ]

Saeed Khan/AFP/Getty Images

[ಪುಟ 5ರಲ್ಲಿರುವ ಚಿತ್ರ ಕೃಪೆ]

ರೋದಿಸುತ್ತಿರುವ ಹೆಂಗಸು: Igor Dutina/AFP/Getty Images; ಪ್ರತಿಭಟಿಸುವವರು: Said Khatib/AFP/Getty Images; ಶಸ್ತ್ರಸಜ್ಜಿತ ಕಾರ್‌ಗಳು: Joseph Barrak/AFP/Getty Images