ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಲೆಕ್ಸಾಂಡ್ರಿಯದ ಫೀಲೊ ಶಾಸ್ತ್ರವಚನಗಳಿಗೆ ಊಹೆಗಳನ್ನು ಬೆರೆಸಿದವನು

ಅಲೆಕ್ಸಾಂಡ್ರಿಯದ ಫೀಲೊ ಶಾಸ್ತ್ರವಚನಗಳಿಗೆ ಊಹೆಗಳನ್ನು ಬೆರೆಸಿದವನು

ಅಲೆಕ್ಸಾಂಡ್ರಿಯದ ಫೀಲೊ ಶಾಸ್ತ್ರವಚನಗಳಿಗೆ ಊಹೆಗಳನ್ನು ಬೆರೆಸಿದವನು

ಮಹಾ ಅಲೆಕ್ಸಾಂಡರನು ಸಾ.ಶ.ಪೂ. 332ರಲ್ಲಿ ಈಜಿಪ್ಟ್‌ನೊಳಗೆ ತನ್ನ ಸೈನ್ಯವನ್ನು ಮುನ್ನಡೆಸಿದನು. ಲೋಕವನ್ನು ಜಯಿಸುವ ಪಥದಲ್ಲಿ ಅವನು ಪೂರ್ವದಿಕ್ಕಿಗೆ ಮುನ್ನಡೆಯುವ ಮುಂಚೆ ಅಲೆಕ್ಸಾಂಡ್ರಿಯ ಎಂಬ ನಗರವನ್ನು ಸ್ಥಾಪಿಸಿದನು ಮತ್ತು ಇದು ಗ್ರೀಕ್‌ ಸಂಸ್ಕೃತಿಯ ಒಂದು ಕೇಂದ್ರವಾಯಿತು. ಈ ನಗರದಲ್ಲೇ ಸಾ.ಶ.ಪೂ. 20ರಷ್ಟಕ್ಕೆ ಇನ್ನೊಬ್ಬ ವಿಜೇತನು ಹುಟ್ಟಿದನು. ಆದರೆ ಇವನ ಆಯುಧಗಳು ಖಡ್ಗಭಲ್ಲೆಗಳಾಗಿರಲಿಲ್ಲ, ಬದಲಾಗಿ ತತ್ವಶಾಸ್ತ್ರೀಯ ತರ್ಕಸರಣಿಗಳಾಗಿದ್ದವು. ಅವನು ಅಲೆಕ್ಸಾಂಡ್ರಿಯದ ಫೀಲೊ ಅಥವಾ ಅವನ ಯೆಹೂದಿ ಹಿನ್ನೆಲೆಯಿಂದಾಗಿ ಫೀಲೊ ಜೂಡೀಯಸ್‌ ಎಂದು ಪ್ರಸಿದ್ಧನಾಗಿದ್ದಾನೆ.

ಸಾ.ಶ.ಪೂ. 607ರಲ್ಲಿ ಯೆರೂಸಲೇಮಿನ ನಾಶನದ ನಂತರ ನಡೆದ ಯೆಹೂದಿ ಜನಾಂಗದ ಚದರುವಿಕೆಯಿಂದಾಗಿ, ಅನೇಕ ಯೆಹೂದ್ಯರು ಈಜಿಪ್ಟ್‌ಗೆ ಬಂದು ವಾಸಿಸಲಾರಂಭಿಸಿದರು. ಸಾವಿರಾರು ಮಂದಿ ಯೆಹೂದ್ಯರು ಅಲೆಕ್ಸಾಂಡ್ರಿಯದಲ್ಲಿ ವಾಸಿಸಿದರು. ಆದರೆ ಯೆಹೂದ್ಯರು ಮತ್ತು ಅವರ ಗ್ರೀಕ್‌ ನೆರೆಯವರ ಮಧ್ಯೆ ಕಚ್ಚಾಟಗಳಿರುತ್ತಿದ್ದವು. ಯೆಹೂದ್ಯರು ಗ್ರೀಕ್‌ ದೇವತೆಗಳನ್ನು ಆರಾಧಿಸಲು ನಿರಾಕರಿಸಿದರು, ಮತ್ತು ಗ್ರೀಕರು ಹೀಬ್ರು ಶಾಸ್ತ್ರಗಳನ್ನು ಅಪಹಾಸ್ಯಮಾಡುತ್ತಿದ್ದರು. ಯೆಹೂದಿಯಾಗಿ ಬೆಳೆದು ಗ್ರೀಕ್‌ ಶಿಕ್ಷಣವನ್ನು ಹೊಂದಿದ್ದ ಫೀಲೊಗೆ ಈ ವಾಗ್ವಾದದ ಬಗ್ಗೆ ಚೆನ್ನಾಗಿ ತಿಳಿದಿತ್ತು. ಯೆಹೂದಿ ಧರ್ಮವೇ ಸತ್ಯ ಧರ್ಮವೆಂದು ಅವನು ನಂಬುತ್ತಿದ್ದನು. ಆದರೆ ಹೆಚ್ಚಿನ ಇತರರಂತಿರದೆ, ಅನ್ಯರನ್ನು ದೇವರ ಬಳಿ ನಡೆಸಲಿಕ್ಕಾಗಿ ಅವನೊಂದು ಶಾಂತಿಭರಿತ ಮಾರ್ಗಕ್ಕಾಗಿ ಹುಡುಕಿದನು. ಯೆಹೂದಿಮತವು ಅವರಿಗೆ ಅಂಗೀಕಾರಾರ್ಹವಾಗುವಂತೆ ಮಾಡುವ ಅಪೇಕ್ಷೆ ಅವನಿಗಿತ್ತು.

ಹಳೇ ಬರಹಗಳಿಗೆ ಹೊಸ ಅರ್ಥ

ಅಲೆಕ್ಸಾಂಡ್ರಿಯದಲ್ಲಿದ್ದ ಅನೇಕ ಮಂದಿ ಯೆಹೂದ್ಯರಂತೆ, ಫೀಲೊವಿನ ಮಾತೃಭಾಷೆ ಗ್ರೀಕ್‌ ಆಗಿತ್ತು. ಆದುದರಿಂದ ಹೀಬ್ರು ಶಾಸ್ತ್ರಗಳ ಗ್ರೀಕ್‌ ಸೆಪ್ಟ್ಯುಅಜಿಂಟ್‌ ಭಾಷಾಂತರ ಅವನ ಅಧ್ಯಯನದ ಆಧಾರವಾಗಿತ್ತು. ಅವನು ಈ ಸೆಪ್ಟ್ಯುಅಜಿಂಟ್‌ನ ಪಾಠವನ್ನು ಪರಿಶೀಲಿಸಿದಾಗ, ಅದರಲ್ಲಿ ತತ್ವಜ್ಞಾನದ ಅಂಶಗಳಿವೆ ಮತ್ತು ಮೋಶೆಗೆ “ಒಬ್ಬ ತತ್ವಜ್ಞಾನಿಯ ಬುದ್ಧಿವಂತಿಕೆ” ಇತ್ತೆಂದು ಅವನಿಗೆ ನಿಶ್ಚಯವಾಯಿತು.

ಎಷ್ಟೋ ಶತಮಾನಗಳ ಹಿಂದೆ, ಗ್ರೀಕ್‌ ಪ್ರಾಜ್ಞರಿಗೆ, ತಮ್ಮ ಪುರಾತನಕಾಲದ ಗ್ರೀಕ್‌ ಪುರಾಣಗಳ ದೇವದೇವತೆಗಳು ಮತ್ತು ರಾಕ್ಷಸ ದೆವ್ವಗಳ ಕುರಿತಾದ ಕಥೆಗಳನ್ನು ನಂಬಲು ಕಷ್ಟಕರವಾಗಿತ್ತು. ಆದುದರಿಂದ ಅವರು ಆ ಹಳೇ ಕಥೆಗಳಿಗೆ ಹೊಸ ಅರ್ಥವಿವರಣೆ ಕೊಡಲಾರಂಭಿಸಿದರು. ಅವರ ಈ ಕಾರ್ಯವಿಧಾನದ ಕುರಿತಾಗಿ ಪ್ರಾಚೀನ ಗ್ರೀಕ್‌ ಸಾಹಿತ್ಯದ ವಿದ್ವಾಂಸರಾದ ಜೇಮ್ಸ್‌ ಡ್ರಮಂಡ್‌ ಹೇಳಿದ್ದು: “ತತ್ವಜ್ಞಾನಿಗಳು, ಆ ಮಿಥ್ಯ ಕಥೆಗಳ ಹಿಂದೆ ಅಡಗಿರುವ ನವಿರಾದ ಅರ್ಥಗಳಿಗಾಗಿ ಹುಡುಕುತ್ತಿದ್ದರು, ಮತ್ತು ಆ ಕಥೆಗಳ ಲೇಖಕರು ಇಂದ್ರಿಯಗಳನ್ನು ಕೆರಳಿಸುವಂಥ ಭಾಷಾಶೈಲಿಯ ಮೂಲಕ ಯಾವುದೊ ಗಾಢವಾದ ಇಲ್ಲವೆ ಜ್ಞಾನೋದಯಗೊಳಿಸುವ ಸತ್ಯವನ್ನು ತಿಳಿಸಲು ಪ್ರಯತ್ನಿಸಿದರೆಂದು ಆ ಕಥೆಗಳ ಅಸಹ್ಯಕರ ಹಾಗೂ ಹುಚ್ಚು ಒಳವಿಷಯಗಳಿಂದಲೇ ಅರ್ಥ ಸೂಚಿಸಲು ಆರಂಭಿಸುತ್ತಿದ್ದರು.” ಈ ಕಾರ್ಯವಿಧಾನವನ್ನು ಸಾಂಕೇತಿಕ ನಿರೂಪಣೆಯ ಅರ್ಥವಿವರಣೆಯೆಂದು ಕರೆಯಲಾಗುತ್ತದೆ. ಶಾಸ್ತ್ರವಚನಗಳನ್ನು ಇಲ್ಲವೆ ಬೈಬಲನ್ನು ವಿವರಿಸಲಿಕ್ಕಾಗಿ ಫೀಲೊ ಈ ವಿಧಾನವನ್ನೇ ಬಳಸಲು ಪ್ರಯತ್ನಿಸಿದನು.

ಇದರ ಒಂದು ಉದಾರಣೆಯಾಗಿ, ಸೆಪ್ಟ್ಯುಅಜಿಂಟ್‌ನ ಬ್ಯಾಗ್ಸ್ಟರ್ಸ್‌ ಭಾಷಾಂತರದಲ್ಲಿರುವ ಆದಿಕಾಂಡ 3:22ನ್ನು ಪರಿಗಣಿಸಿರಿ. ಅದು ಹೇಳುವುದು: “ಕರ್ತನಾದ ದೇವರು ಆದಾಮ ಮತ್ತು ಅವನ ಪತ್ನಿಗಾಗಿ ಚರ್ಮದ ಬಟ್ಟೆಗಳನ್ನು ಮಾಡಿ, ಅವರಿಗೆ ತೊಡಿಸಿದನು.” ದೇವರು ಬಟ್ಟೆಗಳನ್ನು ಮಾಡಿದನೆಂದು ಹೇಳುವುದು, ಆತನ ಘನತೆಗೆ ಕುಂದು ತರುತ್ತದೆಂಬುದು ಗ್ರೀಕರ ಅನಿಸಿಕೆಯಾಗಿತ್ತು. ಆದುದರಿಂದ ಆ ವಚನಕ್ಕೆ ಸಾಂಕೇತಿಕಾರ್ಥ ಇದೆಯೆಂದು ಹೇಳುತ್ತಾ ಫೀಲೊ ತಿಳಿಸಿದ್ದು: “ಚರ್ಮದ ಬಟ್ಟೆ ಎಂಬುದು ನೈಸರ್ಗಿಕವಾದ ಚರ್ಮಕ್ಕಾಗಿ ಅಂದರೆ ನಮ್ಮ ದೇಹಕ್ಕಾಗಿ ಉಪಯೋಗಿಸಲ್ಪಟ್ಟಿರುವ ಒಂದು ಸಾಂಕೇತಿಕ ಅಭಿವ್ಯಕ್ತಿಯಾಗಿತ್ತು; ಯಾಕಂದರೆ ದೇವರು ಮೊತ್ತಮೊದಲು ಬುದ್ಧಿಯನ್ನು ಸೃಷ್ಟಿಸಿ, ಅದನ್ನು ಆದಾಮ ಎಂದು ಕರೆದನು; ತದನಂತರ ಅವನು ಅದಕ್ಕೆ ಚೇತನವನ್ನು ಕೊಟ್ಟು, ಅದಕ್ಕೆ ಜೀವ ಎಂದು ಹೆಸರುಕೊಟ್ಟನು. ಕೊನೆಯಲ್ಲಿ, ಅವನು ಆವಶ್ಯಕವಾಗಿದ್ದ ಒಂದು ದೇಹವನ್ನೂ ಮಾಡಿದನು, ಮತ್ತು ಅದನ್ನು ಸಾಂಕೇತಿಕ ರೀತಿಯಲ್ಲಿ ಚರ್ಮದ ಬಟ್ಟೆ ಎಂದು ಕರೆದನು.” ಈ ರೀತಿಯಲ್ಲಿ ಫೀಲೊ, ಆದಾಮಹವ್ವರಿಗೆ ದೇವರು ಬಟ್ಟೆಯನ್ನು ತೊಡಿಸಿದಂಥ ವಿಷಯವನ್ನು, ಚಿಂತನೆಗಾಗಿರುವ ತತ್ವಜ್ಞಾನದ ಒಂದು ಅಂಶವನ್ನಾಗಿ ಮಾಡಿದನು.

ಆದಿಕಾಂಡ 2:​10-14ನ್ನು ಸಹ ಪರಿಗಣಿಸಿರಿ. ಅಲ್ಲಿ, ಏದೆನ್‌ ತೋಟಕ್ಕೆ ಇದ್ದ ನೀರಿನ ಮೂಲವನ್ನು ವರ್ಣಿಸಲಾಗಿದೆ, ಮತ್ತು ಆ ತೋಟದಿಂದ ನಾಲ್ಕು ನದಿಗಳು ಹೊರಡುತ್ತಿದ್ದವೆಂದೂ ತಿಳಿಸಲಾಗಿದೆ. ಫೀಲೊ ಆ ತೋಟವನ್ನು ವರ್ಣಿಸುವ ಮಾತುಗಳ ಒಳಾರ್ಥವೇನೆಂದು ತಿಳಿಯಲು ಪ್ರಯತ್ನಿಸಿದ. ಆ ತೋಟದ ಬಗ್ಗೆಯೇ ಹೇಳಿಕೆ ನೀಡಿದ ಬಳಿಕ ಅವನಂದದ್ದು: “ಈ ವಚನಗಳಿಗೆ ಒಂದು ಸಾಂಕೇತಿಕ ಗೂಢಾರ್ಥವೂ ಇರಬಹುದು; ಆ ನಾಲ್ಕು ನದಿಗಳು ನಾಲ್ಕು ಸದ್ಗುಣಗಳ ಸಂಕೇತಗಳಾಗಿವೆ.” ಪೀಶೋನ್‌ ನದಿಯು ದೂರದೃಷ್ಟಿಯನ್ನು, ಗೀಹೋನ್‌ ನದಿಯು ಗಾಂಭೀರ್ಯವನ್ನು, ಹಿದ್ದೆಕೆಲ್‌ ಇಲ್ಲವೆ ಟೈಗ್ರಿಸ್‌ ನದಿಯು ಸ್ಥೈರ್ಯವನ್ನು ಮತ್ತು ಯೂಫ್ರೇಟೀಸ್‌ ನದಿಯು ನ್ಯಾಯವನ್ನು ಪ್ರತಿನಿಧಿಸುತ್ತದೆಂಬುದು ಅವನ ಊಹೆಯಾಗಿತ್ತು. ಹೀಗೆ ಇಲ್ಲಿ, ಭೌತಶಾಸ್ತ್ರವನ್ನು ತೆಗೆದು ಅದರ ಸ್ಥಾನದಲ್ಲಿ ಸಾಂಕೇತಿಕ ನಿರೂಪಣೆಯನ್ನು ಇಟ್ಟನು.

ಸೃಷ್ಟಿಯ ವೃತ್ತಾಂತ, ಕಾಯಿನನು ಹೇಬೆಲನನ್ನು ಕೊಲೆಮಾಡಿದ ದಾಖಲೆ, ನೋಹನ ದಿನದ ಜಲಪ್ರಳಯ, ಬಾಬೆಲಿನಲ್ಲಿ ಭಾಷೆಗಳ ಗಲಿಬಿಲಿ ಮತ್ತು ಮೋಶೆಯ ಧರ್ಮಶಾಸ್ತ್ರದ ಅನೇಕ ಸೂತ್ರಗಳನ್ನು ವಿಶ್ಲೇಷಿಸಲಿಕ್ಕಾಗಿ ಫೀಲೊ ಸಾಂಕೇತಿಕ ನಿರೂಪಣೆಯ ಅರ್ಥವಿವರಣೆಯನ್ನು ಬಳಸಿದನು. ಹಿಂದಿನ ಪ್ಯಾರಗ್ರಾಫ್‌ನಲ್ಲಿರುವ ಉದಾಹರಣೆಯು ತೋರಿಸುವಂತೆ ಅವನು ಹೆಚ್ಚಾಗಿ ಒಂದು ಬೈಬಲ್‌ ವಚನದ ಅಕ್ಷರಾರ್ಥಕ ಅಂಶವನ್ನು ಅಂಗೀಕರಿಸಿದನು ಮತ್ತು ನಂತರ ತನ್ನ ಸಾಂಕೇತಿಕ ತಿಳಿವಳಿಕೆಯನ್ನು ಪರಿಚಯಿಸಲಿಕ್ಕಾಗಿ ಈ ಮಾತುಗಳನ್ನು ಬಳಸುತ್ತಿದ್ದನು: “ಈ ಮಾತುಗಳು, ಸಾಂಕೇತಿಕ ನಿರೂಪಣೆಯ ವಿಧದಲ್ಲಿ ಕೊಟ್ಟಿರಬಹುದೊ ಎಂಬುದನ್ನು ಕಂಡುಹಿಡಿಯಲು ನಾವು ಇದನ್ನು ಇನ್ನೂ ಮುಂದೆ ಪರಿಗಣಿಸಬೇಕು.” ಫೀಲೊವಿನ ಬರಹಗಳಲ್ಲಿ ಸಾಂಕೇತಿಕಾರ್ಥಗಳೇ ಹೆಚ್ಚು ಎದ್ದುಕಾಣುತ್ತವೆ ಮತ್ತು ದುಃಖಕರವಾಗಿ ಶಾಸ್ತ್ರವಚನಗಳ ಸ್ಪಷ್ಟ ಅರ್ಥವು ಮರೆಯಾಗುತ್ತದೆ.

ದೇವರು ಯಾರು?

ದೇವರು ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಪ್ರತಿಪಾದಿಸಲು ಫೀಲೊ ಒಂದು ಪ್ರಭಾವಶಾಲಿ ದೃಷ್ಟಾಂತವನ್ನು ಉಪಯೋಗಿಸಿದನು. ಜಮೀನು, ನದಿಗಳು, ಗ್ರಹಗಳು ಮತ್ತು ನಕ್ಷತ್ರಗಳನ್ನು ವರ್ಣಿಸಿದ ಬಳಿಕ ಅವನು ಕೊನೆಯಲ್ಲಿ ಈ ತೀರ್ಮಾನಕ್ಕೆ ಬಂದನು: “ಈ ಪ್ರಪಂಚವು ಇಡೀ ಸೃಷ್ಟಿಯಲ್ಲೇ ಅತ್ಯಂತ ಹೆಚ್ಚು ಕಲಾತ್ಮಕವಾಗಿ ಮತ್ತು ಕೌಶಲಭರಿತವಾಗಿ ರಚಿಸಲ್ಪಟ್ಟಿದೆ. ತುಂಬ ನೈಪುಣ್ಯವುಳ್ಳ ಮತ್ತು ಜ್ಞಾನದಲ್ಲಿ ಪರಿಪೂರ್ಣನಾಗಿರುವ ಒಬ್ಬ ವ್ಯಕ್ತಿ ಇದೆಲ್ಲವನ್ನೂ ರಚಿಸಿರುವಂತೆ ಇದೆ. ಈ ರೀತಿಯಲ್ಲಿ, ನಮಗೆ ದೇವರ ಅಸ್ತಿತ್ವದ ಬಗ್ಗೆ ಗೊತ್ತಾಗುತ್ತದೆ.” ಇದು ದೃಢವಾದ ತರ್ಕಸರಣಿಯಾಗಿತ್ತು.​—⁠ರೋಮಾಪುರ 1:⁠20.

ಆದರೆ ಫೀಲೊ ಸರ್ವಶಕ್ತನಾದ ದೇವರ ಸ್ವಭಾವವನ್ನು ವಿವರಿಸಿದಾಗ, ಸತ್ಯದಿಂದ ತೀರ ದೂರ ಹೋದನು. ದೇವರಿಗೆ “ಯಾವುದೇ ವಿಶೇಷ ಗುಣಗಳಿಲ್ಲ” ಮತ್ತು ದೇವರು “ಗ್ರಹಿಸಿಕೊಳ್ಳಲಾಗದವನು” ಎಂದು ಫೀಲೊ ಹೇಳಿದನು. ದೇವರನ್ನು ತಿಳಿದುಕೊಳ್ಳಲಿಕ್ಕಾಗಿರುವ ಪ್ರಯತ್ನಗಳನ್ನು ಫೀಲೊ ನಿರುತ್ತೇಜಿಸುತ್ತಾ ಹೇಳಿದ್ದೇನೆಂದರೆ, “ದೇವರ ಸ್ವಭಾವವಾಗಲಿ ಆತನ ವಿಶೇಷ ಗುಣಗಳ ಬಗ್ಗೆಯಾಗಲಿ ತಿಳಿದುಕೊಳ್ಳುವ ಯತ್ನದಲ್ಲಿ ಮುಂದೆಹೋಗುವುದು ಶುದ್ಧ ಮೂರ್ಖತನವಾಗಿದೆ.” ಈ ಯೋಚನಾಧಾಟಿಯು, ಬೈಬಲ್‌ನಿಂದಲ್ಲ ಬದಲಾಗಿ ವಿಧರ್ಮಿ ತತ್ವಜ್ಞಾನಿಯಾದ ಪ್ಲೇಟೊವಿನಿಂದ ಬಂದದ್ದಾಗಿತ್ತು.

ದೇವರನ್ನು ಅರಿತುಕೊಳ್ಳುವುದು ಅಸಾಧ್ಯವೆಂಬುದನ್ನು ತೋರಿಸಲಿಕ್ಕಾಗಿ ಫೀಲೊ ಹೇಳಿದ್ದೇನೆಂದರೆ, ಆತನನ್ನು ಒಂದು ವೈಯಕ್ತಿಕ ಹೆಸರಿನಿಂದ ಕರೆಯಲು ಸಾಧ್ಯವೇ ಇಲ್ಲ. ಅವನಂದದ್ದು: “ಆದುದರಿಂದ, ಸತ್ಯವಾಗಿ ಜೀವಂತ ದೇವರಾಗಿರುವಾತನಿಗೆ ಒಂದು ವೈಯಕ್ತಿಕ ಹೆಸರನ್ನು ಕೊಡದೇ ಇರುವುದು ತರ್ಕಸಮ್ಮತವಾಗಿದೆ.” ಇದು ವಾಸ್ತವಾಂಶಕ್ಕೆ ಎಷ್ಟು ತದ್ವಿರುದ್ಧವಾಗಿದೆ!

ದೇವರಿಗೊಂದು ವೈಯಕ್ತಿಕ ಹೆಸರಿದೆಯೆಂಬ ವಿಷಯದಲ್ಲಿ ಬೈಬಲ್‌ ಯಾವುದೇ ಸಂದೇಹಕ್ಕೆ ಎಡೆಕೊಡುವುದಿಲ್ಲ. ಕೀರ್ತನೆ 83:18 ಹೇಳುವುದು: ‘ಯೆಹೋವನಾಮದಿಂದ ಪ್ರಸಿದ್ಧನಾದ ನೀನೊಬ್ಬನೇ ಭೂಲೋಕದಲ್ಲೆಲ್ಲಾ ಸರ್ವೋನ್ನತನು.’ ಯೆಶಾಯ 42:8 ದೇವರು ಹೀಗೆ ಹೇಳುವುದನ್ನು ಉಲ್ಲೇಖಿಸುತ್ತದೆ: “ನಾನೇ ಯೆಹೋವನು; ಇದೇ ನನ್ನ ನಾಮವು.” ಯೆಹೂದ್ಯನಾಗಿದ್ದು, ಈ ಬೈಬಲ್‌ ವಚನಗಳ ಜ್ಞಾನವಿದ್ದ ಫೀಲೊ ದೇವರಿಗೆ ಹೆಸರಿಲ್ಲವೆಂದು ಕಲಿಸಿದ್ದೇಕೆ? ಏಕೆಂದರೆ ಅವನು ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ವ್ಯಕ್ತಿತ್ವವುಳ್ಳ ದೇವರನ್ನಲ್ಲ, ಬದಲಾಗಿ ಗ್ರೀಕ್‌ ತತ್ವಜ್ಞಾನದ ಹೆಸರಿಲ್ಲದ ತಲಪಲಾರದಂಥ ದೇವರ ಬಗ್ಗೆ ವರ್ಣಿಸುತ್ತಿದ್ದನು.

ಮೃತರ ಸ್ಥಿತಿ ಏನಾಗಿದೆ?

ಸೈಖೀ ದೇಹದಿಂದ ಪ್ರತ್ಯೇಕವಾದದ್ದೆಂದು ಫೀಲೊ ಕಲಿಸಿದನು. ಮಾನವನು “ದೇಹ ಮತ್ತು ಸೈಖೀ ಉಳ್ಳವನು” ಎಂಬುದಾಗಿ ಅವನು ಹೇಳಿದನು. ಮರಣದ ನಂತರ ಬದುಕಿ ಉಳಿಯುವ ಏನಾದರೊ ಇದೆಯೊ? ಫೀಲೊ ಕೊಟ್ಟ ವಿವರಣೆಯನ್ನು ಗಮನಿಸಿರಿ: “ನಾವು ಜೀವದಿಂದಿರುವಾಗ, ನಮ್ಮ ಸೈಖೀ ಸತ್ತಿದ್ದು ನಮ್ಮ ದೇಹದೊಳಗೆ ಒಂದು ಸಮಾಧಿಯೊಳಗೆ ಹೂತಿಡಲ್ಪಟ್ಟಂತೆ ಇರುತ್ತದೆ. ಆದರೆ [ದೇಹವು] ಸಾಯುವಲ್ಲಿ, ಆಗ ನಮ್ಮ ಸೈಖೀ ಅದರ ಸರಿಯಾದ ಜೀವನವನ್ನು ನಡೆಸುವಂತೆ ಇರುತ್ತದೆ, ಏಕೆಂದರೆ ಅದು ಯಾವುದರಲ್ಲಿ ಬಂಧಿತವಾಗಿದೆಯೊ ಆ ಕೆಡುಕಿನ ಮತ್ತು ಮೃತ ದೇಹದಿಂದ ಬಿಡಿಸಲ್ಪಟ್ಟಿರುತ್ತದೆ.” ಫೀಲೊಗನುಸಾರ, ಸೈಖೀಯ ಮರಣವು ಸಾಂಕೇತಿಕವಾಗಿತ್ತು. ಅದು ನಿಜವಾಗಿ ಸಾಯುವುದಿಲ್ಲ, ಅದು ಅಮರವಾಗಿದೆ.

ಆದರೆ ಬೈಬಲ್‌ ಏನನ್ನು ಕಲಿಸುತ್ತದೆ? ಪ್ರಸಂಗಿ 9:​5, 10 ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ. ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” ಬೈಬಲಿಗನುಸಾರ, ಮರಣದ ನಂತರವೂ ಬದುಕಿ ಉಳಿಯುವ ಯಾವುದೇ ಭಾಗವು ಮಾನವರಲ್ಲಿಲ್ಲ. *

ಫೀಲೊ ಸತ್ತ ಬಳಿಕ ಯೆಹೂದ್ಯರು ಅವನ ಬಗ್ಗೆ ಸ್ವಲ್ಪವೂ ಗಮನಕೊಡಲಿಲ್ಲ. ಆದರೆ ಕ್ರೈಸ್ತಪ್ರಪಂಚವು ಅವನನ್ನು ಅಂಗೀಕರಿಸಿತು. ಫೀಲೊ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿದ್ದನೆಂದು ಯುಸೀಬಿಯಸ್‌ ಮತ್ತು ಇತರ ಚರ್ಚು ಮುಖಂಡರು ನಂಬಿದರು. ಜೆರೋಮ್‌ ಅವನನ್ನು ಚರ್ಚು ಪಿತೃಗಳ ಪಟ್ಟಿಯಲ್ಲಿ ಸೇರಿಸಿದನು. ಯೆಹೂದ್ಯರಲ್ಲ ಬದಲಾಗಿ ಧರ್ಮಭ್ರಷ್ಟರಾಗಿದ್ದ ಕ್ರೈಸ್ತರು ಫೀಲೊವಿನ ಬರಹಗಳನ್ನು ಉಳಿಸಿದರು.

ಫೀಲೊವಿನ ಬರಹಗಳು ಒಂದು ಧಾರ್ಮಿಕ ಕ್ರಾಂತಿಗೆ ದಾರಿಮಾಡಿಕೊಟ್ಟವು. ಅವನ ಪ್ರಭಾವವು, ನಾಮಮಾತ್ರದ ಕ್ರೈಸ್ತರು ಆತ್ಮದ ಅಮರತ್ವವೆಂಬ ಅಶಾಸ್ತ್ರೀಯ ಬೋಧನೆಯನ್ನು ಸ್ವೀಕರಿಸುವಂತೆ ಮಾಡಿತು. ಮತ್ತು ಲೋಗಾಸ್‌ (ಇಲ್ಲವೆ, ವಾಕ್ಯ) ಕುರಿತಾದ ಫೀಲೊವಿನ ಬೋಧನೆಯೇ, ಧರ್ಮಭ್ರಷ್ಟವಾದ ಕ್ರೈಸ್ತಧರ್ಮದ ಬೈಬಲೇತರ ಬೋಧನೆಯಾದ ತ್ರಯೈಕ್ಯದ ವಿಕಸನಕ್ಕೆ ನಡಿಸಿತು.

ಮೋಸಹೋಗಬೇಡಿ

ಹೀಬ್ರು ಶಾಸ್ತ್ರಗಳ ತನ್ನ ಅಧ್ಯಯನದಲ್ಲಿ ಫೀಲೊ “ಸರಳವಾದ ಭಾಷೆಯ ಮರೆಯಲ್ಲಿ ಅಡಗಿರಬಹುದಾದ ಯಾವುದೇ ಸಾಂಕೇತಿಕ ನಿರೂಪಣೆಯು ತಪ್ಪಿಹೋಗದಂತೆ” ಖಚಿತಪಡಿಸಿಕೊಂಡನು. ಆದರೆ ಧರ್ಮೋಪದೇಶಕಾಂಡ 4:2ರಲ್ಲಿ ತೋರಿಬರುವಂತೆ, ಮೋಶೆಯು ಧರ್ಮಶಾಸ್ತ್ರದ ಬಗ್ಗೆ ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಮಾತುಗಳನ್ನು ನೀವು ಕೈಕೊಳ್ಳಬೇಕೇ ಹೊರತು ಅವುಗಳಿಗೆ ಏನೂ ಕೂಡಿಸಬಾರದು, ಅವುಗಳಿಂದ ಏನೂ ತೆಗೆದುಬಿಡಬಾರದು.” ಫೀಲೊಗೆ ತುಂಬ ಒಳ್ಳೇ ಉದ್ದೇಶಗಳಿದ್ದಂತೆ ತೋರಿದರೂ ಅವನು ಹೇರಿದಂಥ ಊಹೆಗಳ ಪದರಗಳು, ದಟ್ಟವಾದ ಮಂಜಿನಂತೆ ದೇವರ ಪ್ರೇರಿತ ವಾಕ್ಯದ ಸ್ಪಷ್ಟವಾದ ಉಪದೇಶವನ್ನು ಅಸ್ಪಷ್ಟಗೊಳಿಸಿದವು.

‘ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸಲಿಲ್ಲ’ ಎಂದು ಅಪೊಸ್ತಲ ಪೇತ್ರನು ಹೇಳಿದನು. (2 ಪೇತ್ರ 1:16) ಆರಂಭದ ಕ್ರೈಸ್ತ ಸಭೆಗೆ ಪೇತ್ರನು ಕೊಟ್ಟ ಉಪದೇಶವು ಫೀಲೊವಿನ ಬರಹಗಳಂತಿರದೆ, ವಾಸ್ತವಾಂಶದ ಮೇಲೆ ಮತ್ತು ಅವರನ್ನು ಸತ್ಯಕ್ಕೆ ನಡೆಸಿದಂಥ “ಸತ್ಯದ ಆತ್ಮ” ಆಗಿರುವ ದೇವರಾತ್ಮದ ನಿರ್ದೇಶನದ ಮೇಲೆ ಆಧರಿಸಲ್ಪಟ್ಟಿತ್ತು.​—⁠ಯೋಹಾನ 16:⁠13.

ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ದೇವರನ್ನು ಆರಾಧಿಸಲು ನೀವು ಆಸಕ್ತರಾಗಿದ್ದರೆ ನಿಮಗೆ ಸತ್ಯಭರಿತ ಮಾರ್ಗದರ್ಶನದ ಅಗತ್ಯವಿದೆಯೇ ಹೊರತು, ಮಾನವ ಯೋಚನೆಯ ಮೇಲಾಧಾರಿತವಾದ ಅರ್ಥವಿವರಣೆಗಳಲ್ಲ. ನಿಮಗೆ ಯೆಹೋವ ಮತ್ತು ಆತನ ಚಿತ್ತದ ಬಗ್ಗೆ ನಿಷ್ಕೃಷ್ಟ ಜ್ಞಾನದ ಅಗತ್ಯವಿದೆ ಹಾಗೂ ಒಬ್ಬ ಪ್ರಾಮಾಣಿಕ ವಿದ್ಯಾರ್ಥಿಯಾಗಿರಲು ದೀನತೆಯ ಅಗತ್ಯವಿದೆ. ಈ ಹಿತಕರವಾದ ಮನೋಭಾವದಿಂದ ನೀವು ಅಧ್ಯಯನಮಾಡುವಲ್ಲಿ, ನಿಮಗೆ ‘ಪರಿಶುದ್ಧ ಗ್ರಂಥಗಳ ಪರಿಚಯವಾಗುವುದು. ಈ ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವುದಕ್ಕೆ ಶಕ್ತವಾಗಿವೆ.’ ದೇವರ ವಾಕ್ಯವು ನಿಮ್ಮನ್ನು ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರನ್ನಾಗಿ’ ಮಾಡಬಲ್ಲದು.​—⁠2 ತಿಮೊಥೆಯ 3:​15-17.

[ಪಾದಟಿಪ್ಪಣಿ]

^ ಪ್ಯಾರ. 17 ಸೈಖೀ ಅಥವಾ ನೆಫೆಷ್‌ ಕುರಿತಾಗಿ, 1910ರ ದ ಜ್ಯೂವಿಷ್‌ ಎನ್‌ಸೈಕ್ಲಪೀಡಿಯ ಹೇಳುವುದು: “ದೇಹವು ಕೊಳೆತ ಬಳಿಕವೂ ನೆಫೆಷ್‌ ಅದರ ಅಸ್ತಿತ್ವವನ್ನು ಮುಂದುವರಿಸುತ್ತದೆಂಬ ನಂಬಿಕೆಯು, ಮೂಲ ನಂಬಿಕೆಯ ವಿಷಯವಾಗಿರುವ ಬದಲಿಗೆ ತತ್ವಜ್ಞಾನ ಇಲ್ಲವೆ ದೇವತಾಶಾಸ್ತ್ರ ಊಹೆಯ ಕೆಲಸವಾಗಿದೆ. ಅದರ ಬಗ್ಗೆ ಪವಿತ್ರ ಶಾಸ್ತ್ರಗಳಲ್ಲಿ ಎಲ್ಲಿಯೂ ನೇರವಾಗಿ ಕಲಿಸಲಾಗಿಲ್ಲ.”

[ಪುಟ 10ರಲ್ಲಿರುವ ಚೌಕ/ಚಿತ್ರ]

ಫೀಲೊವಿನ ನಗರ

ಫೀಲೊ ಈಜಿಪ್ಟ್‌ನ ಅಲೆಕ್ಸಾಂಡ್ರಿಯದಲ್ಲಿ ವಾಸಿಸುತ್ತಿದ್ದನು ಮತ್ತು ಅಲ್ಲಿಯೇ ಕೆಲಸಮಾಡಿದನು. ಶತಮಾನಗಳ ವರೆಗೆ ಈ ನಗರವು, ಪುಸ್ತಕಗಳು ಮತ್ತು ವಿದ್ವಾಂಸರ ಚರ್ಚೆಗಳ ಲೋಕ ರಾಜಧಾನಿಯಾಗಿತ್ತು.

ಆ ನಗರದ ಶಾಲೆಗಳಲ್ಲಿ ಪ್ರಸಿದ್ಧ ವಿದ್ವಾಂಸರು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದರು. ಅಲೆಕ್ಸಾಂಡ್ರಿಯದ ಗ್ರಂಥಾಲಯವು ಜಗದ್ವಿಖ್ಯಾತವಾಯಿತು. ಆ ಗ್ರಂಥಾಲಯದ ಅಧಿಕಾರಿಗಳು ಪ್ರತಿಯೊಂದು ಲಿಖಿತ ದಾಖಲೆಯ ಪ್ರತಿಗಳನ್ನು ಪಡೆಯಲು ಪ್ರಯತ್ನಿಸುತ್ತಾ ಹೋದಂತೆ, ಅದರಲ್ಲಿ ಪುಸ್ತಕಗಳ ಸಂಗ್ರಹವು ಲಕ್ಷಾಂತರ ಸಂಖ್ಯೆಗೆ ಬೆಳೆಯಿತು.

ತದನಂತರ, ಅಲೆಕ್ಸಾಂಡ್ರಿಯ ಮತ್ತು ಅದರ ಜ್ಞಾನದ ಭಂಡಾರಕ್ಕಾಗಿದ್ದ ಲೋಕವ್ಯಾಪಕ ಮನ್ನಣೆಯು ಕ್ರಮೇಣ ಕುಂದಿಹೋಯಿತು. ರೋಮ್‌ನಲ್ಲಿದ್ದ ಸಾಮ್ರಾಟರು ತಮ್ಮ ಸ್ವಂತ ನಗರಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟರು, ಮತ್ತು ಸಾಂಸ್ಕೃತಿಕ ಕೇಂದ್ರವನ್ನು ಯುರೋಪಿಗೆ ಸ್ಥಳಾಂತರಿಸಿದರು. ಅಲೆಕ್ಸಾಂಡ್ರಿಯದ ಈ ಅವನತಿಯು, ಸಾ.ಶ. ಏಳನೆಯ ಶತಮಾನದಲ್ಲಿ ದಾಳಿಮಾಡುವವರು ನಗರವನ್ನು ವಶಪಡಿಸಿಕೊಂಡಾಗ ಪರಾಕಾಷ್ಠೆಯನ್ನು ತಲಪಿತು. ಈ ದಿನದ ವರೆಗೂ ಇತಿಹಾಸಕಾರರು ಆ ಪ್ರಸಿದ್ಧ ಗ್ರಂಥಾಲಯದ ನಷ್ಟದ ಬಗ್ಗೆ ಪ್ರಲಾಪಿಸುತ್ತಾರೆ. ಅದರಿಂದಾಗಿ ನಾಗರಿಕತೆಯ ಮುನ್ನಡೆಯು 1,000 ವರ್ಷ ಹಿಂದಕ್ಕೆ ತೆರಳಿತು ಎಂಬುದು ಅವರ ಹೇಳಿಕೆ.

[ಕೃಪೆ]

L. Chapons/Illustrirte Familien-Bibel nach der deutschen Uebersetzung Dr. Martin Luthers

[ಪುಟ 12ರಲ್ಲಿರುವ ಚೌಕ]

ಇಂದು ಸಾಂಕೇತಿಕ ನಿರೂಪಣೆಯ ಅರ್ಥವಿವರಣೆ

ಸಾಮಾನ್ಯವಾಗಿ ಸಾಂಕೇತಿಕ ನಿರೂಪಣೆ ಅಂದರೆ, “ಮಾನವ ಅಸ್ತಿತ್ವದ ಸತ್ಯಗಳನ್ನು ಇಲ್ಲವೆ ತತ್ವನಿರೂಪಣೆಗಳನ್ನು ಸಾಂಕೇತಿಕ ಊಹಾತ್ಮಕ ಸಂಖ್ಯೆಗಳು ಮತ್ತು ಕ್ರಿಯೆಗಳ ಮುಖಾಂತರ ವ್ಯಕ್ತಪಡಿಸುವುದು” ಆಗಿದೆ. ಸಾಂಕೇತಿಕ ನಿರೂಪಣೆಯನ್ನು ಬಳಸುವ ಬರಹಗಳು, ಮರೆಯಾಗಿರುವ ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಸಾಂಕೇತಿಸುತ್ತವೆ ಎಂದು ಹೇಳಲಾಗುತ್ತದೆ. ಅಲೆಕ್ಸಾಂಡ್ರಿಯದ ಫೀಲೊವಿನಂತೆ, ಕೆಲವು ಆಧುನಿಕ ದಿನದ ಧಾರ್ಮಿಕ ಮುಖಂಡರು, ಬೈಬಲನ್ನು ವಿವರಿಸಲಿಕ್ಕಾಗಿ ಸಾಂಕೇತಿಕ ನಿರೂಪಣೆಯ ಅರ್ಥವಿವರಣೆಯನ್ನು ಬಳಸುತ್ತಾರೆ.

ಆದಿಕಾಂಡ 1-11ನೇ ಅಧ್ಯಾಯಗಳನ್ನು ಪರಿಗಣಿಸಿರಿ. ಈ ಅಧ್ಯಾಯಗಳಲ್ಲಿ ಸೃಷ್ಟಿಯಿಂದ ಹಿಡಿದು ಬಾಬೆಲ್‌ ಗೋಪುರದಲ್ಲಿ ಜನರ ಚದರಿಹೋಗುವಿಕೆಯ ವರೆಗಿನ ಮಾನವ ಇತಿಹಾಸವು ದಾಖಲಿಸಲ್ಪಟ್ಟಿದೆ. ಕ್ಯಾಥೊಲಿಕ್‌ ಭಾಷಾಂತರವಾಗಿರುವ ದ ನ್ಯೂ ಅಮೆರಿಕನ್‌ ಬೈಬಲ್‌, ಆ ಅಧ್ಯಾಯಗಳ ಬಗ್ಗೆ ಹೀಗನ್ನುತ್ತದೆ: “ಈ ಅಧ್ಯಾಯಗಳಲ್ಲಿ ಅಡಕವಾಗಿರುವ ಸತ್ಯಗಳನ್ನು ಸಂರಕ್ಷಿಸಲಿದ್ದ ಇಸ್ರಾಯೇಲ್ಯ ಜನರಿಗೆ ಅವುಗಳನ್ನು ಬುದ್ಧಿಗ್ರಾಹ್ಯವನ್ನಾಗಿ ಮಾಡಲು, ಆ ಸಮಯದಲ್ಲಿ ಜನರ ನಡುವೆ ಚಾಲ್ತಿಯಲ್ಲಿದ್ದ ವಿಚಾರಗಳ ಮುಖಾಂತರ ವ್ಯಕ್ತಪಡಿಸುವ ಅಗತ್ಯವಿತ್ತು. ಈ ಕಾರಣಕ್ಕಾಗಿಯೇ, ಸಾಹಿತ್ಯಿಕ ಹೊದಿಕೆಗಳಡಿಯಲ್ಲಿರುವ ಆ ಸತ್ಯಗಳನ್ನು ಸ್ಪಷ್ಟವಾಗಿ ಗುರುತಿಸಬೇಕು.” ಇದು, ಆದಿಕಾಂಡ 1-11ನೇ ಅಧ್ಯಾಯಗಳನ್ನು ಅಕ್ಷರಶಃವಾಗಿ ತೆಗೆದುಕೊಳ್ಳಬಾರದೆಂದು ಹೇಳುತ್ತಿದೆ. ಬದಲಿಗೆ ಉಡುಗೆಯು ದೇಹವನ್ನು ಹೇಗೆ ಮುಚ್ಚುತ್ತದೊ, ಹಾಗೆಯೇ ಆ ಮಾತುಗಳು ಒಂದು ಗೂಢಾರ್ಥವನ್ನು ಮುಚ್ಚಿಹಾಕಿವೆ.

ಆದರೆ ಆದಿಕಾಂಡದ ಆ ಆರಂಭದ ಅಧ್ಯಾಯಗಳು ಅಕ್ಷರಶಃವಾಗಿ ಸತ್ಯವಾಗಿವೆಯೆಂದು ಯೇಸು ಕಲಿಸಿದನು. (ಮತ್ತಾಯ 19:​4-6; 24:​37-39) ಅಪೊಸ್ತಲರಾದ ಪೌಲ ಮತ್ತು ಪೇತ್ರರು ಅದನ್ನೇ ಕಲಿಸಿದರು. (ಅ. ಕೃತ್ಯಗಳು 17:​24-26; 2 ಪೇತ್ರ 2:5; 3:​6, 7) ಪ್ರಾಮಾಣಿಕ ಮನಸ್ಸಿನ ಬೈಬಲ್‌ ವಿದ್ಯಾರ್ಥಿಗಳು, ದೇವರ ಇಡೀ ವಾಕ್ಯದೊಂದಿಗೆ ಸಮ್ಮತಿಸದಂಥ ವಿವರಣೆಗಳನ್ನು ತಳ್ಳಿಹಾಕುತ್ತಾರೆ.

[ಪುಟ 9ರಲ್ಲಿರುವ ಚಿತ್ರ]

ಅಲೆಕ್ಸಾಂಡ್ರಿಯದ ಮಹಾನ್‌ ದೀಪದಮನೆ

[ಕೃಪೆ]

Archives Charmet/Bridgeman Art Library