ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ಕಾಲದಲ್ಲಿ ಆದಿ ಕ್ರೈಸ್ತತ್ವವು ಅಭಿವೃದ್ಧಿಯಾದ ಸ್ಥಳದಲ್ಲಿ ವಿಸ್ತರಣಕಾರ್ಯ

ಒಂದು ಕಾಲದಲ್ಲಿ ಆದಿ ಕ್ರೈಸ್ತತ್ವವು ಅಭಿವೃದ್ಧಿಯಾದ ಸ್ಥಳದಲ್ಲಿ ವಿಸ್ತರಣಕಾರ್ಯ

ಒಂದು ಕಾಲದಲ್ಲಿ ಆದಿ ಕ್ರೈಸ್ತತ್ವವು ಅಭಿವೃದ್ಧಿಯಾದ ಸ್ಥಳದಲ್ಲಿ ವಿಸ್ತರಣಕಾರ್ಯ

ಮೆಡಿಟರೇನಿಯನ್‌ ಸಮುದ್ರದೊಳಗೆ ಚಾಚುವ ಬೂಟ್‌ ಆಕಾರದ ದ್ವೀಪಕಲ್ಪವಾಗಿರುವ ಇಟಲಿ ದೇಶವು, ಲೋಕದ ಇತಿಹಾಸವನ್ನು ಪ್ರಭಾವಿಸಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಘಟನೆಗಳ ಸ್ಥಳವಾಗಿರುತ್ತದೆ. ಅದರ ವೈವಿಧ್ಯಭರಿತ ಭೂದೃಶ್ಯ, ಜಗತ್ಪ್ರಸಿದ್ಧ ಕಲಾಕೃತಿಗಳು, ಮತ್ತು ರುಚಿಕರ ಅಡುಗೆಯಿಂದ ಅದು ಕೋಟಿಗಟ್ಟಲೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಆದರೆ ಈ ದೇಶದಲ್ಲಿ ಬೈಬಲ್‌ ಶಿಕ್ಷಣವೂ ಏಳಿಗೆಹೊಂದುತ್ತಿದೆ.

ಸಾ.ಶ. 33ರ ಪಂಚಾಶತ್ತಮದಂದು ಕ್ರೈಸ್ತರಾಗಿ ಪರಿಣಮಿಸಿದ ಯೆಹೂದ್ಯರೂ ಯೆಹೂದಿ ಮತಾವಲಂಬಿಗಳೂ ಯೆರೂಸಲೇಮಿನಿಂದ ಸ್ವದೇಶಕ್ಕೆ ಹಿಂದಿರುಗಿದಾಗ, ಸತ್ಯ ಕ್ರೈಸ್ತತ್ವವು ಆ ಸಮಯದಲ್ಲಿನ ಲೋಕ ಶಕ್ತಿಯಾಗಿದ್ದ ರೋಮ್‌ ಅನ್ನು ಪ್ರಪ್ರಥಮ ಬಾರಿ ತಲಪಿದ್ದಿರಬಹುದು. ಸುಮಾರು ಸಾ.ಶ. 59ರಲ್ಲಿ ಅಪೊಸ್ತಲ ಪೌಲನು ಮೊಟ್ಟಮೊದಲ ಬಾರಿ ಇಟಲಿಗೆ ಭೇಟಿಯಿತ್ತನು. ಅಲ್ಲಿ ಸಮುದ್ರ ತೀರದಲ್ಲಿದ್ದ ಪೊತಿಯೋಲದಲ್ಲಿ ಅವನಿಗೆ “ಕ್ರೈಸ್ತ ಸಹೋದರರು ಸಿಕ್ಕಿದರು.”​—⁠ಅ. ಕೃತ್ಯಗಳು 2:​5-11; 28:​11-16.

ಯೇಸು ಮತ್ತು ಅವನ ಅಪೊಸ್ತಲರು ಮುಂತಿಳಿಸಿದಂತೆ, ಸಾ.ಶ. ಪ್ರಥಮ ಶತಮಾನವು ಕೊನೆಗೊಳ್ಳುವುದಕ್ಕೆ ಮುಂಚೆಯೇ ಧರ್ಮಭ್ರಷ್ಟರ ಗುಂಪುಗಳು ಸತ್ಯ ಕ್ರೈಸ್ತತ್ವವನ್ನು ಕ್ರಮೇಣವಾಗಿ ಬಿಟ್ಟುಬಿಟ್ಟವು. ಹಾಗಿದ್ದರೂ, ಈ ದುಷ್ಟ ವ್ಯವಸ್ಥೆಯ ಅಂತ್ಯದ ಮುಂಚೆ ಯೇಸುವಿನ ನಿಜ ಶಿಷ್ಯರು ಇಟಲಿಯನ್ನು ಸೇರಿಸಿ ಲೋಕವ್ಯಾಪಕವಾಗಿ ಸುವಾರ್ತೆಯನ್ನು ಸಾರುವ ಕೆಲಸವನ್ನು ಮುಂದೆಸಾಗಿಸಿದ್ದಾರೆ.​—⁠ಮತ್ತಾಯ 13:​36-43; ಅ. ಕೃತ್ಯಗಳು 20:​29, 30; 2 ಥೆಸಲೊನೀಕ 2:​3-8; 2 ಪೇತ್ರ 2:​1-3.

ನಿರಾಶಾದಾಯಕ ಆರಂಭ

ಇಸವಿ 1891ರಲ್ಲಿ, ಬೈಬಲ್‌ ವಿದ್ಯಾರ್ಥಿಗಳ (ಆಗ ಯೆಹೋವನ ಸಾಕ್ಷಿಗಳು ಹೀಗೆ ಜ್ಞಾತರಾಗಿದ್ದರು) ಲೋಕವ್ಯಾಪಕ ಸಾರುವ ಕೆಲಸದಲ್ಲಿ ಮುಂದಾಳುತ್ವ ವಹಿಸುತ್ತಿದ್ದ ಚಾರ್ಲ್ಸ್‌ ಟೇಸ್‌ ರಸಲರು ಮೊತ್ತಮೊದಲ ಬಾರಿಗೆ ಇಟಲಿಯ ಕೆಲವು ನಗರಗಳಿಗೆ ಭೇಟಿಯಿತ್ತರು. ತನ್ನ ಶುಶ್ರೂಷೆಯಲ್ಲಿ ಫಲಿತಾಂಶಗಳು ಅಷ್ಟೇನೂ ಉತ್ತೇಜನದಾಯಕವಾಗಿರಲಿಲ್ಲ ಎಂದು ಅವರು ಒಪ್ಪಿಕೊಳ್ಳಬೇಕಾಯಿತು: “ಇಟಲಿಯಲ್ಲಿ ಕೊಯ್ಲಿನ ಕೆಲಸದ ವಿಷಯದಲ್ಲಿ ನಿರೀಕ್ಷೆಯನ್ನಿಡುವಂತೆ ನಮ್ಮನ್ನು ಉತ್ತೇಜಿಸುವ ಯಾವುದೂ ನಮಗೆ ಕಾಣಸಿಗಲಿಲ್ಲ.” 1910ರ ವಸಂತಕಾಲದಲ್ಲಿ ಸಹೋದರ ರಸಲರು ಪುನಃ ಇಟಲಿಗೆ ಹೋದರು ಮತ್ತು ರೋಮ್‌ನ ಕೇಂದ್ರಭಾಗದಲ್ಲಿರುವ ವ್ಯಾಯಾಮಶಾಲೆಯಲ್ಲಿ ಒಂದು ಬೈಬಲ್‌ ಭಾಷಣವನ್ನು ಕೊಟ್ಟರು. ಫಲಿತಾಂಶವೇನಾಗಿತ್ತು? “ಒಟ್ಟಿನಲ್ಲಿ ಆ ಕೂಟವು ತುಂಬ ನಿರಾಶಾದಾಯಕವಾಗಿತ್ತು” ಎಂದವರು ವರದಿಸಿದರು.

ವಾಸ್ತವದಲ್ಲಿ ಕೆಲವು ದಶಕಗಳ ವರೆಗೆ ಇಟಲಿಯಲ್ಲಿ ಸುವಾರ್ತೆ ಸಾರುವ ಕೆಲಸದ ಪ್ರಗತಿಯು ಆಮೆಗತಿಯಲ್ಲಿ ನಡೆಯುತ್ತಿತ್ತು. ಇದಕ್ಕೆ ಒಂದು ಕಾರಣ, ಯೆಹೋವನ ಸಾಕ್ಷಿಗಳು ಫ್ಯಾಸಿಸ್ಟ್‌ ನಿರಂಕುಶಾಧಿಕಾರದಿಂದ ಹಿಂಸೆಗೊಳಗಾಗಿದ್ದರು. ಆ ಅವಧಿಯಲ್ಲಿ ಆ ದೇಶದಲ್ಲಿ ಬರೀ 150 ಮಂದಿ ಯೆಹೋವನ ಸಾಕ್ಷಿಗಳು ಮಾತ್ರ ಇದ್ದರು. ಇವರಲ್ಲಿ ಅಧಿಕಾಂಶ ಮಂದಿ ಬೈಬಲ್‌ ಸತ್ಯಗಳನ್ನು ಹೊರದೇಶಗಳಲ್ಲಿ ವಾಸಿಸುತ್ತಿದ್ದ ತಮ್ಮ ಸಂಬಂಧಿಕರು ಇಲ್ಲವೆ ಸ್ನೇಹಿತರಿಂದ ಕಲಿತಿದ್ದರು.

ಅದ್ಭುತ ಪ್ರಗತಿ

ಎರಡನೇ ಜಾಗತಿಕ ಯುದ್ಧದ ನಂತರ, ಹಲವಾರು ಮಿಷನೆರಿಗಳನ್ನು ಇಟಲಿಗೆ ಕಳುಹಿಸಲಾಯಿತು. ಆದರೆ, ಸರಕಾರದ ಪತ್ರಾಗಾರಗಳಲ್ಲಿರುವ ಪತ್ರವ್ಯವಹಾರದಿಂದ ತಿಳಿದುಬರುವಂತೆ, ವ್ಯಾಟಿಕನಿನ ಪುರೋಹಿತವರ್ಗದಲ್ಲಿ ಉನ್ನತ ಪದವಿಯಲ್ಲಿದ್ದ ವ್ಯಕ್ತಿಗಳು ಈ ಮಿಷನೆರಿಗಳನ್ನು ಹೊರಹಾಕುವಂತೆ ಸರಕಾರವನ್ನು ಕೇಳಿಕೊಂಡರು. ಕೆಲವು ಮಿಷನೆರಿಗಳನ್ನು ಹೊರತುಪಡಿಸಿ, ಬೇರೆಲ್ಲರನ್ನೂ ದೇಶದಿಂದ ಹೊರಡುವಂತೆ ಒತ್ತಾಯಿಸಲಾಯಿತು.

ಅಡಚಣೆಗಳ ಮಧ್ಯೆಯೂ ಇಟಲಿಯಲ್ಲಿರುವ ಜನಸಮೂಹಗಳು ಯೆಹೋವನ ಆರಾಧನೆಯ ‘ಬೆಟ್ಟಕ್ಕೆ’ ಪ್ರವಾಹಗಳಂತೆ ಬರಲಾರಂಭಿಸಿದರು. (ಯೆಶಾಯ 2:​2-4) ಸಾಕ್ಷಿಗಳ ಸಂಖ್ಯೆಗಳಲ್ಲಾಗಿರುವ ವೃದ್ಧಿಯು ಗಮನಾರ್ಹವಾಗಿದೆ. 2004ರಲ್ಲಿ ಸುವಾರ್ತೆಯ ಪ್ರಚಾರಕರ ಉಚ್ಚಾಂಕವು 2,33,527 ಆಗಿತ್ತು. ಅಂದರೆ ಪ್ರತಿ 248 ನಿವಾಸಿಗಳಲ್ಲಿ ಒಬ್ಬನು ಸಾಕ್ಷಿಯಾಗಿದ್ದಾನೆ, ಮತ್ತು ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 4,33,242 ಮಂದಿ ಹಾಜರಿದ್ದರು. ಉತ್ತಮವಾದ ರಾಜ್ಯ ಸಭಾಗೃಹಗಳಲ್ಲಿ ಕೂಡಿಬರುತ್ತಿದ್ದ ಯೆಹೋವನ ಸಾಕ್ಷಿಗಳ 3,049 ಸಭೆಗಳಿದ್ದವು. ಇತ್ತೀಚೆಗೆ, ಜನರ ಕೆಲವೊಂದು ಗುಂಪುಗಳಲ್ಲಿ ನಿರ್ದಿಷ್ಟವಾಗಿ ಬಹಳಷ್ಟು ಅಭಿವೃದ್ಧಿಯಾಗುತ್ತಿದೆ.

ಅನೇಕ ಭಾಷೆಗಳಲ್ಲಿ ಸಾರುವುದು

ಆಫ್ರಿಕ, ಏಷಿಯಾ ಮತ್ತು ಪೂರ್ವ ಯೂರೋಪಿನಿಂದ ಅನೇಕ ವಲಸಿಗರು ಕೆಲಸವನ್ನು ಹುಡುಕಿಕೊಂಡೊ, ಹೆಚ್ಚು ಉತ್ತಮ ಜೀವನ ಮಟ್ಟವನ್ನು ಆರಸಿಕೊಂಡೊ, ಇಲ್ಲವೆ ಕೆಲವು ಸಂದರ್ಭಗಳಲ್ಲಿ ದುರಂತಮಯ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲಿಕ್ಕಾಗಿಯೊ ಇಟಲಿಗೆ ಬರುತ್ತಾರೆ. ಈ ಲಕ್ಷಾಂತರ ಜನರಿಗೆ ಆಧ್ಯಾತ್ಮಿಕವಾಗಿ ಹೇಗೆ ಸಹಾಯಮಾಡಸಾಧ್ಯವಿದೆ?

ಇಟಲಿಯಲ್ಲಿರುವ ಅನೇಕ ಸಾಕ್ಷಿಗಳು ಇತರ ಭಾಷೆಗಳನ್ನು ಕಲಿಯುವ ಕಷ್ಟಕರವಾದ ಪಂಥಾಹ್ವಾನವನ್ನು ಸ್ವೀಕರಿಸಿದ್ದಾರೆ. ಇದರಲ್ಲಿ ಅಲ್ಬೇನ್ಯನ್‌, ಆ್ಯಮ್‌ಹಾರಿಕ್‌, ಆ್ಯರಬಿಕ್‌, ಟಗಾಲಗ್‌, ಚೈನೀಸ್‌, ಪಂಜಾಬಿ, ಬಂಗಾಳಿ ಮತ್ತು ಸಿನ್ಹಾಲಾ ಭಾಷೆಗಳು ಸೇರಿವೆ. ಸಿದ್ಧಮನಸ್ಸುಳ್ಳ ಇಂಥವರಿಗೆ ವಿದೇಶಿ ಭಾಷೆಗಳಲ್ಲಿ ಸಾಕ್ಷಿಕೊಡುವುದನ್ನು ಕಲಿಸಲಿಕ್ಕಾಗಿ 2001ರಲ್ಲಿ ಆರಂಭಿಸುತ್ತಾ ಭಾಷಾ ಕ್ಲಾಸುಗಳು ನಡೆಸಲ್ಪಟ್ಟವು. ಕಳೆದ ಮೂರು ವರ್ಷಗಳಲ್ಲಿ 17 ಭಿನ್ನ ಭಾಷೆಗಳಲ್ಲಿ ನಡೆಸಲ್ಪಟ್ಟಿರುವ 79 ಕ್ಲಾಸುಗಳಿಗೆ 3,711 ಮಂದಿ ಸಾಕ್ಷಿಗಳು ಹಾಜರಾಗಿದ್ದಾರೆ. ಇದರಿಂದಾಗಿ, 25 ಭಿನ್ನ ಭಾಷೆಗಳಲ್ಲಿ 146 ಸಭೆಗಳನ್ನೂ 274 ಗುಂಪುಗಳನ್ನೂ ರಚಿಸಲು ಮತ್ತು ಬಲಪಡಿಸಲು ಸಾಧ್ಯವಾಗಿದೆ. ಹೀಗೆ ಅನೇಕ ಪ್ರಾಮಾಣಿಕ ಮನಸ್ಸಿನವರು ಸುವಾರ್ತೆಯನ್ನು ಕೇಳಿದ್ದಾರೆ ಮತ್ತು ಬೈಬಲ್‌ ಅಧ್ಯಯನವನ್ನು ಆರಂಭಿಸಿದ್ದಾರೆ. ಫಲಿತಾಂಶಗಳು ಅನೇಕವೇಳೆ ಆಶ್ಚರ್ಯಕರವಾಗಿರುತ್ತವೆ.

ಯೆಹೋವನ ಸಾಕ್ಷಿಗಳಲ್ಲೊಬ್ಬನು, ಭಾರತದವನಾಗಿರುವ ಮತ್ತು ಮಲೆಯಾಳಂ ಭಾಷೆಯನ್ನಾಡುವ ಜಾರ್ಜ್‌ ಎಂಬ ವ್ಯಕ್ತಿಯೊಂದಿಗೆ ಬೈಬಲ್‌ ಬಗ್ಗೆ ಮಾತಾಡಿದನು. ಕೆಲಸದ ಸ್ಥಳದಲ್ಲಿ ಜಾರ್ಜ್‌ಗೆ ದೊಡ್ಡ ಸಮಸ್ಯೆಗಳಿದ್ದರೂ ಬೈಬಲ್‌ ಅಧ್ಯಯನಮಾಡಲು ಅವನು ಸಂತೋಷದಿಂದ ಒಪ್ಪಿಕೊಂಡನು. ಕೆಲವು ದಿನಗಳ ನಂತರ, ಜಾರ್ಜ್‌ನ ಪಂಜಾಬಿ ಮಾತಾಡುವ ಗಿಲ್‌ ಎಂಬ ಭಾರತೀಯ ಸ್ನೇಹಿತನೊಬ್ಬನು ರಾಜ್ಯ ಸಭಾಗೃಹಕ್ಕೆ ಹೋದನು, ಮತ್ತು ಅವನೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು. ಗಿಲ್‌, ಡೇವಿಡ್‌ ಎಂಬ ಹೆಸರಿನ ತೆಲುಗು ಭಾಷೆಯನ್ನಾಡುವ ಭಾರತೀಯನನ್ನು ಸಾಕ್ಷಿಗಳಿಗೆ ಪರಿಚಯಿಸಿದನು. ಡೇವಿಡ್‌ ಸಹ ಬೈಬಲ್‌ ಅಧ್ಯಯನವನ್ನು ಮಾಡಲಾರಂಭಿಸಿದನು. ಸನ್ನಿ ಮತ್ತು ಶುಭಾಷ್‌ ಎಂಬ ಇನ್ನಿಬ್ಬರು ಭಾರತೀಯರು ಡೇವಿಡ್‌ನೊಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಸಹ ಬೈಬಲ್‌ ಅಧ್ಯಯನದಲ್ಲಿ ಜೊತೆಗೂಡಿದರು.

ಕೆಲವು ವಾರಗಳ ನಂತರ ಸಾಕ್ಷಿಗಳಿಗೆ, ಮರಾಠಿ ಮಾತಾಡುವ ದಿಲೀಪ್‌ ಎಂಬವನಿಂದ ಫೋನ್‌ ಕರೆ ಬಂತು. ಅವನು ಹೇಳಿದ್ದು: “ನಾನು ಜಾರ್ಜ್‌ನ ಗೆಳೆಯ. ನೀವು ನನಗೆ ಬೈಬಲ್‌ ಕಲಿಸಬಹುದೊ?” ನಂತರ, ತಮಿಳು ಮಾತಾಡುವ ಸುಮೀತ್‌ ಎಂಬವನಿಗೆ ಬೈಬಲ್‌ ಅಧ್ಯಯನ ಬೇಕಾಗಿತ್ತು. ಕೊನೆಗೆ ಜಾರ್ಜ್‌ನ ಸ್ನೇಹಿತರಲ್ಲಿ ಇನ್ನೊಬ್ಬನು ಬೈಬಲ್‌ ಅಧ್ಯಯನಕ್ಕಾಗಿ ಕೇಳಲು ಫೋನ್‌ ಮಾಡಿದನು. ಆ ಬಳಿಕ ಜಾರ್ಜ್‌ ಇನ್ನೊಬ್ಬ ಯೌವನಸ್ಥನಾದ ಮಾಕ್ಸ್‌ನನ್ನು ರಾಜ್ಯ ಸಭಾಗೃಹಕ್ಕೆ ಕರೆತಂದನು. ಅವನೂ ಅಧ್ಯಯನಕ್ಕಾಗಿ ಕೇಳಿಕೊಂಡನು. ಇವರಲ್ಲಿ ಈ ವರೆಗೆ ಆರು ಮಂದಿಯೊಂದಿಗೆ ಬೈಬಲ್‌ ಅಧ್ಯಯನಗಳನ್ನು ನಡೆಸಲಾಗುತ್ತಿದೆ, ಮತ್ತು ಇನ್ನೂ ನಾಲ್ಕು ಮಂದಿಯೊಂದಿಗಿನ ಅಧ್ಯಯನಗಳಿಗಾಗಿ ಏರ್ಪಾಡುಗಳು ಮಾಡಲ್ಪಡುತ್ತಿವೆ. ಅಧ್ಯಯನಕ್ಕಾಗಿ ಉರ್ದು, ತಮಿಳು, ತೆಲುಗು, ಪಂಜಾಬಿ, ಮರಾಠಿ, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿನ ಪ್ರಕಾಶನಗಳು ಬಳಸಲ್ಪಡುತ್ತಿವೆಯಾದರೂ, ಅಧ್ಯಯನಗಳನ್ನು ಇಂಗ್ಲಿಷ್‌ನಲ್ಲಿ ನಡೆಸಲಾಗುತ್ತಿದೆ.

ಕಿವುಡರು ಸುವಾರ್ತೆಯನ್ನು “ಕೇಳಿಸಿಕೊಳ್ಳುತ್ತಾರೆ”

ಇಟಲಿಯಲ್ಲಿ 90,000ಕ್ಕಿಂತಲೂ ಹೆಚ್ಚು ಮಂದಿ ಕಿವುಡರು ಇದ್ದಾರೆ. 1970ರ ದಶಕದ ಮಧ್ಯ ಭಾಗದಲ್ಲಿ ಕಿವುಡರಿಗೂ ಸತ್ಯವನ್ನು ಕಲಿಸುವುದರ ಕಡೆಗೆ ಸಾಕ್ಷಿಗಳು ಗಮನಕೊಡಲಾರಂಭಿಸಿದರು. ಆರಂಭದಲ್ಲಿ ಕೆಲವು ಕಿವುಡ ಸಾಕ್ಷಿಗಳು, ಆ ಕ್ಷೇತ್ರದಲ್ಲಿ ನೆರವುನೀಡಲು ಸಿದ್ಧರಿದ್ದ ಜೊತೆ ಶುಶ್ರೂಷಕರಿಗೆ ಇಟಾಲಿಯನ್‌ ಸಂಕೇತ ಭಾಷೆಯನ್ನು ಕಲಿಸಿದರು. ಆಗ ಹೆಚ್ಚೆಚ್ಚು ಕಿವುಡ ಜನರು ಬೈಬಲಿನಲ್ಲಿ ಆಸಕ್ತಿಯನ್ನು ತೋರಿಸಲಾರಂಭಿಸಿದರು. ಇಂದು ಇಟಾಲಿಯನ್‌ ಸಂಕೇತ ಭಾಷೆಯನ್ನು ಉಪಯೋಗಿಸುವ 1,400ಕ್ಕಿಂತಲೂ ಹೆಚ್ಚು ಮಂದಿ, ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದಾರೆ. 15 ಸಭೆಗಳು ಮತ್ತು 52 ಗುಂಪುಗಳು ಈ ಭಾಷೆಯಲ್ಲಿ ಕೂಟಗಳನ್ನು ನಡೆಸುತ್ತವೆ.

ಆರಂಭದಲ್ಲಿ, ಕಿವುಡರಿಗೆ ಸಾರುವ ಕೆಲಸವು ಮುಖ್ಯವಾಗಿ ವ್ಯಕ್ತಿಗತ ಸಾಕ್ಷಿಗಳು ತೆಗೆದುಕೊಳ್ಳುತ್ತಿದ್ದ ಆಸಕ್ತಿಯ ಮೇಲೆ ಹೊಂದಿಕೊಂಡಿತ್ತು. ಆದರೆ 1978ರಲ್ಲಿ, ಇಟಲಿಯಲ್ಲಿನ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸು ಕಿವುಡರಿಗಾಗಿ ಅಧಿವೇಶನಗಳನ್ನು ಸಂಘಟಿಸಲಾರಂಭಿಸಿತು. ಆ ವರ್ಷದ ಮೇ ತಿಂಗಳಲ್ಲಿ, ಮಿಲನ್‌ನಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಕಿವುಡರಿಗಾಗಿಯೂ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಗುವುದೆಂದು ಪ್ರಕಟಿಸಲಾಯಿತು. ಕಿವುಡರಿಗಾಗಿದ್ದ ಪ್ರಥಮ ಸರ್ಕಿಟ್‌ ಸಮ್ಮೇಳನವನ್ನು 1979ರ ಫೆಬ್ರವರಿ ತಿಂಗಳಲ್ಲಿ ಮಿಲನ್‌ನಲ್ಲಿನ ಸಮ್ಮೇಳನ ಸಭಾಗೃಹದಲ್ಲಿ ನಡೆಸಲಾಯಿತು.

ಅಂದಿನಿಂದ ಬ್ರಾಂಚ್‌ ಆಫೀಸು, ಬೆಳೆಯುತ್ತಿರುವ ಸಂಖ್ಯೆಯ ಸೌವಾರ್ತಿಕರು ಈ ಭಾಷೆಯಲ್ಲಿ ನೈಪುಣ್ಯವನ್ನು ಹೆಚ್ಚಿಸುವಂತೆ ಉತ್ತೇಜಿಸುವ ಮೂಲಕ, ಕಿವಿಕೇಳಿಸದಂಥವರ ಆಧ್ಯಾತ್ಮಿಕ ಪೋಷಣೆಗೆ ನಿಕಟ ಗಮನವನ್ನು ಕೊಟ್ಟಿದೆ. 1995ರಿಂದಾರಂಭಿಸುತ್ತಾ, ಶುಶ್ರೂಷೆಯಲ್ಲಿ ಮತ್ತು ಕ್ರೈಸ್ತ ಕೂಟಗಳನ್ನು ಸಂಘಟಿಸುವುದರಲ್ಲಿ ಕಿವುಡ ಸಾಕ್ಷಿಗಳಿಗೆ ತರಬೇತಿಕೊಡಲಿಕ್ಕಾಗಿ ವಿಶೇಷ ಪಯನೀಯರರನ್ನು (ಪೂರ್ಣ ಸಮಯದ ಸೌವಾರ್ತಿಕರನ್ನು) ಕಳುಹಿಸಲಾಗಿದೆ. ಮೂರು ಸಮ್ಮೇಳನ ಸಭಾಗೃಹಗಳಲ್ಲಿ, ಕಾರ್ಯಕ್ರಮವನ್ನು ಚೆನ್ನಾಗಿ ವೀಕ್ಷಿಸಲು ಸಾಧ್ಯವಾಗುವಂತೆ ಅತ್ಯಾಧುನಿಕವಾದ ವಿಡಿಯೊ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಕಿವುಡರಿಗೆ ಆಧ್ಯಾತ್ಮಿಕ ಆಹಾರವನ್ನು ಲಭ್ಯಗೊಳಿಸಲಿಕ್ಕಾಗಿ ಕ್ರೈಸ್ತ ಪ್ರಕಾಶನಗಳ ವಿಡಿಯೊ ಕ್ಯಾಸೆಟ್‌ಗಳು ಇವೆ.

ಸಾಕ್ಷಿಗಳು, ಕಿವುಡರ ಆಧ್ಯಾತ್ಮಿಕ ಅಗತ್ಯಗಳನ್ನು ಅತ್ಯುತ್ತಮವಾಗಿ ಪೂರೈಸುತ್ತಿದ್ದಾರೆಂದು ಇತರರು ಗಮನಿಸಿದ್ದಾರೆ. ಇಟಲಿಯ ಕಿವುಡರ ಸಮಾಜವು ಪ್ರಕಾಶಿಸುವ ಪಾರೊಲೇ ಸೇನ್ಯೀ ಎಂಬ ಪತ್ರಿಕೆಯು, ಒಬ್ಬ ಕ್ಯಾಥೊಲಿಕ್‌ ಸಂಸ್ಥಾನಾಧಿಕಾರಿಯಿಂದ ಕಳುಹಿಸಲ್ಪಟ್ಟ ಪತ್ರವನ್ನು ಉಲ್ಲೇಖಿಸಿತು: “ಒಬ್ಬ ಕಿವುಡ ವ್ಯಕ್ತಿಗೆ ಸತತವಾದ ಗಮನದ ಅಗತ್ಯವಿರುವುದರಿಂದ ಕಿವುಡರಾಗಿರುವುದು ಕಷ್ಟಕರವಾದ ಸಂಗತಿಯಾಗಿದೆ. ಉದಾಹರಣೆಗೆ, ಯಾವುದೇ ತೊಂದರೆಯಿಲ್ಲದೆ ಅವನೊಬ್ಬನೇ ಚರ್ಚಿಗೆ ಬಂದು ತಲಪುತ್ತಾನೆ, ಆದರೆ ಆರಾಧನಾವಿಧಿಗಳ ಸಮಯದಲ್ಲಿ ಏನನ್ನು ಓದಲಾಗುತ್ತದೊ, ತಿಳಿಸಲಾಗುತ್ತದೊ ಇಲ್ಲವೆ ಹಾಡಲಾಗುತ್ತದೊ ಅದೆಲ್ಲವನ್ನೂ ಅರ್ಥಮಾಡಿಕೊಳ್ಳಲಿಕ್ಕಾಗಿ ಅವನಿಗೆ ಒಬ್ಬ ವ್ಯಾಖ್ಯಾನಕಾರನ ಅಗತ್ಯವಿರುತ್ತದೆ.” ಆ ಪತ್ರಿಕೆಯು ಕೂಡಿಸಿ ಹೇಳಿದ್ದೇನೆಂದರೆ, ಆ ಧರ್ಮಾಧ್ಯಕ್ಷನು “ಈ ಶಾರೀರಿಕ ವಿಕಲತೆಯೊಂದಿಗೆ ವ್ಯವಹರಿಸಲು ಚರ್ಚು ವಿಷಾದಕರವಾಗಿ ಇನ್ನೂ ಸಿದ್ಧವಾಗಿಲ್ಲ, ಆದರೆ ಪ್ಯಾರಿಷ್‌ ಚರ್ಚಿಗಿಂತ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳಲ್ಲಿ ಅನೇಕ ಕಿವುಡರ ಹೆಚ್ಚು ಉತ್ತಮ ಆರೈಕೆಯನ್ನು ಮಾಡಲಾಗುತ್ತಿದೆ ಎಂದು ಒಪ್ಪಿಕೊಂಡನು.”

ಸೆರೆವಾಸಿಗಳಿಗೆ ಸುವಾರ್ತೆ ಸಾರಲ್ಪಡುವುದು

ಒಬ್ಬ ವ್ಯಕ್ತಿಯು ಸೆರೆಯಲ್ಲಿದ್ದರೂ ಸ್ವತಂತ್ರನಾಗಿರಬಲ್ಲನೊ? ಹೌದು, ಏಕೆಂದರೆ ದೇವರ ವಾಕ್ಯಕ್ಕೆ, ಅದನ್ನು ಸ್ವೀಕರಿಸಿ ತಮ್ಮ ಜೀವನಗಳಲ್ಲಿ ಅನ್ವಯಿಸುವವರನ್ನು “ಬಿಡುಗಡೆಮಾಡುವ” ಶಕ್ತಿ ಇದೆ. ಯೇಸು “ಸೆರೆಯವರಿಗೆ” ಸಾರಿದಂಥ ಸಂದೇಶವು, ಪಾಪ ಮತ್ತು ಸುಳ್ಳು ಧರ್ಮದಿಂದ ಬಿಡುಗಡೆಯ ಸಂದೇಶವಾಗಿತ್ತು. (ಯೋಹಾನ 8:32; ಲೂಕ 4:​16-19) ಸೆರೆಮನೆಗಳಲ್ಲಿ ಸಾರುವುದರ ಮೂಲಕ ಇಟಲಿಯಲ್ಲಿ ಉತ್ಕೃಷ್ಟ ಫಲಿತಾಂಶಗಳು ದೊರೆಯುತ್ತಿವೆ. ಯೆಹೋವನ ಸಾಕ್ಷಿಗಳ ಬಹುಮಟ್ಟಿಗೆ 400 ಮಂದಿ ಶುಶ್ರೂಷಕರಿಗೆ, ಸೆರೆವಾಸಿಗಳಿಗೆ ಆಧ್ಯಾತ್ಮಿಕ ನೆರವನ್ನು ನೀಡಲಿಕ್ಕಾಗಿ ಅವರನ್ನು ಭೇಟಿಮಾಡುವ ಅನುಮತಿ ಸರಕಾರದಿಂದ ಸಿಕ್ಕಿದೆ. ಈ ರೀತಿಯ ಅನುಮತಿಯನ್ನು ಕೇಳಿ ಪಡೆದ ಮೊತ್ತಮೊದಲ ಕ್ಯಾಥೊಲಿಕಲ್ಲದ ಸಂಘಟನೆಯು ಯೆಹೋವನ ಸಾಕ್ಷಿಗಳದ್ದಾಗಿದೆ.

ಊಹಿಸಲಾಗದಂಥ ರೀತಿಗಳಲ್ಲಿ ಬೈಬಲ್‌ ಸಂದೇಶವು ಹಬ್ಬಿಸಲ್ಪಡಬಹುದು. ಯೆಹೋವನ ಸಾಕ್ಷಿಗಳ ಬೈಬಲ್‌ ಶಿಕ್ಷಣ ಕೆಲಸದ ಕುರಿತಾಗಿ ಸೆರೆವಾಸಿಗಳು ತಮ್ಮ ಜೊತೆ ಸೆರೆವಾಸಿಗಳೊಂದಿಗೆ ಮಾತಾಡುತ್ತಾರೆ. ಆಗ ಈ ಸೆರೆವಾಸಿಗಳಲ್ಲಿ ಕೆಲವರು, ಒಬ್ಬ ಸಾಕ್ಷಿಯು ತಮ್ಮನ್ನು ಭೇಟಿಮಾಡುವಂತೆ ಕೇಳಿಕೊಂಡಿದ್ದಾರೆ. ಅಥವಾ, ಬೈಬಲ್‌ ಅಧ್ಯಯನ ಮಾಡಲಾರಂಭಿಸಿರುವ ಕುಟುಂಬ ಸದಸ್ಯರು, ಸೆರೆವಾಸಿಗಳು ಸಾಕ್ಷಿಗಳ ಭೇಟಿಗಾಗಿ ವಿನಂತಿಸುವಂತೆ ಅವರನ್ನು ಉತ್ತೇಜಿಸುತ್ತಾರೆ. ಕೊಲೆ ಇಲ್ಲವೆ ಬೇರಾವುದೇ ಗಂಭೀರ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಯನ್ನು ಪಡೆದಿರುವ ಕೆಲವು ಸೆರೆವಾಸಿಗಳು ಪಶ್ಚಾತ್ತಾಪಪಟ್ಟು, ತಮ್ಮ ಜೀವನಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ಮಾಡಿದ್ದಾರೆ. ಇದು ಅವರನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳಲು ಮತ್ತು ದೀಕ್ಷಾಸ್ನಾನ ತೆಗೆದುಕೊಳ್ಳಲು ಸಿದ್ಧಪಡಿಸುತ್ತದೆ.

ಹಲವಾರು ಸೆರೆಮನೆಗಳಲ್ಲಿ, ಬೈಬಲ್‌ ವಿಷಯಗಳ ಕುರಿತು ಸಾರ್ವಜನಿಕ ಭಾಷಣಗಳನ್ನು ಕೊಡಲಿಕ್ಕಾಗಿ, ಯೇಸುವಿನ ಮರಣದ ಜ್ಞಾಪಕಾಚರಣೆಗಾಗಿ, ಮತ್ತು ಯೆಹೋವನ ಸಾಕ್ಷಿಗಳಿಂದ ತಯಾರಿಸಲ್ಪಟ್ಟಿರುವ ಬೈಬಲ್‌ ಕಾರ್ಯಕ್ರಮಗಳ ವಿಡಿಯೊಕ್ಯಾಸೆಟ್‌ಗಳನ್ನು ತೋರಿಸಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟಿವೆ. ಅನೇಕವೇಳೆ ದೊಡ್ಡ ಸಂಖ್ಯೆಯಲ್ಲಿ ಸೆರೆವಾಸಿಗಳು ಈ ಕೂಟಗಳಿಗೆ ಹಾಜರಾಗುತ್ತಾರೆ.

ಸೆರೆಮನೆಯಲ್ಲಿರುವ ಜನರಿಗೆ ಪ್ರಾಯೋಗಿಕ ವಿಧಗಳಲ್ಲಿ ಸಹಾಯಮಾಡಲಿಕ್ಕಾಗಿ, ಸಾಕ್ಷಿಗಳು ಸೆರೆವಾಸಿಗಳಿಗೆ ಸಹಾಯಕಾರಿಯಾಗಿರಬಲ್ಲ ವಿಷಯಗಳ ಕುರಿತಾದ ಪತ್ರಿಕೆಗಳನ್ನು ವಿತರಿಸಿದ್ದಾರೆ. ಇವುಗಳಲ್ಲಿ ಒಂದು, 2001 ಮೇ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಾಗಿತ್ತು. ಅದರ ವಿಷಯ, “ಸೆರೆವಾಸಿಗಳನ್ನು ಸುಧಾರಿಸಲು ಸಾಧ್ಯವಿದೆಯೊ?” ಎಂದಾಗಿತ್ತು. 2003 ಏಪ್ರಿಲ್‌ 8ರ (ಇಂಗ್ಲಿಷ್‌) ಸಂಚಿಕೆಯು, “ಕುಟುಂಬದಲ್ಲಿ ಅಮಲೌಷಧದ ದುರುಪಯೋಗ​—⁠ನೀವೇನು ಮಾಡಬಲ್ಲಿರಿ?” ಎಂಬ ವಿಷಯದ ಕುರಿತಾಗಿತ್ತು. ಇವುಗಳ ಸಾವಿರಾರು ಪ್ರತಿಗಳನ್ನು ಸೆರೆವಾಸಿಗಳಿಗೆ ಹಂಚಲಾಯಿತು. ಫಲಿತಾಂಶವಾಗಿ, ನೂರಾರು ಬೈಬಲ್‌ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಕೆಲವು ಸೆರೆಕಾವಲುಗಾರರು ಸಹ ಬೈಬಲಿನ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸಿದ್ದಾರೆ.

ಕೊಸ್ಟಾಂಟೀನೊ ಎಂಬ ಹೆಸರಿನ ಸೆರೆವಾಸಿಯು ಅಧಿಕಾರಿಗಳಿಂದ ವಿಶೇಷ ಪರ್ಮಿಟ್‌ ಅನ್ನು ಪಡೆದುಕೊಂಡ ನಂತರ, ಸಾನ್‌ ರೇಮೊ ಎಂಬಲ್ಲಿನ ಒಂದು ರಾಜ್ಯ ಸಭಾಗೃಹದಲ್ಲಿ ದೀಕ್ಷಾಸ್ನಾನಪಡೆದುಕೊಂಡನು. ಆಗ 138 ಮಂದಿ ಸ್ಥಳಿಕ ಸಾಕ್ಷಿಗಳು ಹಾಜರಿದ್ದರು. “ನನ್ನ ಮೇಲೆ ಪ್ರೀತಿಯ ಸುರಿಮಳೆಗೈಯಲಾದಂತೆ ಅನಿಸಿತು” ಎಂದು ದೀಕ್ಷಾಸ್ನಾನದ ನಂತರ ಕೊಸ್ಟಾಂಟೀನೊ ಭಾವುಕನಾಗಿ ಹೇಳಿದನು. ಒಂದು ಸ್ಥಳಿಕ ವಾರ್ತಾಪತ್ರಿಕೆಯು ಸೆರೆಮನೆಯ ವಾರ್ಡನ್‌ನ ಈ ಮಾತುಗಳನ್ನು ವರದಿಸಿತು: “ತುಂಬ ಆನಂದದಿಂದ . . . ನಾವು ಈ ಅನುಮತಿಯನ್ನು ಕೊಟ್ಟೆವು. ಒಬ್ಬ ಸೆರೆವಾಸಿಯ ಸಾಮಾಜಿಕ, ವೈಯಕ್ತಿಕ ಮತ್ತು ಆಧ್ಯಾತ್ಮಿಕ ಪುನಃಸ್ಥಾಪನೆಯನ್ನು ಪ್ರವರ್ಧಿಸಬಲ್ಲ ಯಾವುದೇ ವಿಷಯವು ಪರಿಗಣನೆಗೆ ಯೋಗ್ಯವಾಗಿದೆ.” ಬೈಬಲಿನ ನಿಷ್ಕೃಷ್ಟ ಜ್ಞಾನವು ಕೊಸ್ಟಾಂಟೀನೊವಿನ ಜೀವಿತವನ್ನು ಪ್ರಭಾವಿಸಿದ ರೀತಿ ಅವನ ಹೆಂಡತಿ ಮತ್ತು ಮಗಳ ಮೇಲೆ ಗಾಢಪರಿಣಾಮ ಬೀರಿತು ಮತ್ತು ಅವರಂದದ್ದು: “ಅವರು ಮಾಡಿರುವ ಬದಲಾವಣೆಗಳಿಂದಾಗಿ ಅವರ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ. ಅವರು ಶಾಂತಭಾವದವರಾಗಿದ್ದಾರೆ, ಮತ್ತು ನಮಗಾಗಿ ಅವರಿಗಿರುವ ಕಳಕಳಿಯು ಹೆಚ್ಚೆಚ್ಚಾಗುತ್ತಾ ಇದೆ. ಈಗ ನಮಗೆ ಅವರ ಮೇಲಿನ ಭರವಸೆ ಮತ್ತು ಗೌರವವು ಪುನಃ ಹುಟ್ಟಿಕೊಂಡಿದೆ.” ಅವರಿಬ್ಬರೂ ಬೈಬಲ್‌ ಅಧ್ಯಯನವನ್ನು ಮಾಡಲು ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದ್ದಾರೆ.

ಕಳ್ಳತನ, ಶಸ್ತ್ರಸಜ್ಜಿತ ದರೋಡೆ, ಅಮಲೌಷಧಗಳ ಕಳ್ಳಸಾಗಣೆ ಮತ್ತು ಕೊಲೆಗಾಗಿ ಸೆರ್ಜೊ ಎಂಬವನಿಗೆ 2024ರ ವರೆಗೆ ಸೆರೆವಾಸದ ಶಿಕ್ಷೆಯನ್ನು ಕೊಡಲಾಗಿತ್ತು. ಮೂರು ವರ್ಷಗಳ ವರೆಗೆ ಶಾಸ್ತ್ರವಚನಗಳ ಅಧ್ಯಯನವನ್ನು ಮಾಡಿ, ತನ್ನ ಜೀವನವನ್ನು ಪೂರ್ತಿಯಾಗಿ ಬದಲಾಯಿಸಿದ ಬಳಿಕ, ಸೆರ್ಜೊ ದೀಕ್ಷಾಸ್ನಾನ ಪಡೆಯಲು ನಿರ್ಧರಿಸಿದನು. ಎಲ್ಬ ದ್ವೀಪದಲ್ಲಿರುವ ಪೊರ್ಟೋ ಆಟ್ಸುರೊ ಸೆರೆಮನೆಯಲ್ಲಿ, ಯೆಹೋವನ ಸಾಕ್ಷಿಯಾಗಲು ದೀಕ್ಷಾಸ್ನಾನ ಪಡೆದವರಲ್ಲಿ ಅವನು 15ನೆಯ ಸೆರೆವಾಸಿಯಾಗಿದ್ದಾನೆ. ಸೆರೆಮನೆಯ ಕ್ರೀಡಾ ಮೈದಾನದಲ್ಲಿ ರಚಿಸಲ್ಪಟ್ಟ ಒಂದು ಪೊರ್ಟಬಲ್‌ ಕೊಳದಲ್ಲಿ, ಹಲವಾರು ಸೆರೆವಾಸಿಗಳ ಸಮ್ಮುಖದಲ್ಲಿ ಅವನಿಗೆ ದೀಕ್ಷಾಸ್ನಾನವನ್ನು ನೀಡಲಾಯಿತು.

ಇಪ್ಪತ್ತು ವರ್ಷಗಳ ಸೆರೆವಾಸ ಶಿಕ್ಷೆಯನ್ನು ಅನುಭವಿಸುತ್ತಿರುವ ಲಿಯೊನಾರ್ಡೊ ಎಂಬವನು, ಪಾರ್ಮದಲ್ಲಿರುವ ರಾಜ್ಯ ಸಭಾಗೃಹದಲ್ಲಿ ದೀಕ್ಷಾಸ್ನಾನಪಡೆಯಲು ಅನುಮತಿಯನ್ನು ಕೇಳಿ ಪಡೆದುಕೊಂಡನು. ಸ್ಥಳಿಕ ವಾರ್ತಾಪತ್ರಿಕೆಯು ಅವನನ್ನು ಇಂಟರ್‌ವ್ಯೂ ಮಾಡಿದಾಗ, “ತಾನು ಯೆಹೋವನ ಸಾಕ್ಷಿಯಾಗಲು ನಿರ್ಣಯಿಸಿದ್ದು ಸೆರೆಮನೆಯ ಅಂಧಕಾರದಿಂದ ಹೊರಬರುವ ಮಾರ್ಗವಾಗಿ ಉಪಯೋಗಿಸಲು ಅಲ್ಲ ಬದಲಾಗಿ ತನ್ನೊಳಗಿದ್ದ ಒಂದು ಗಾಢವಾದ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲಿಕ್ಕಾಗಿಯೇ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಲಿಯೊನಾರ್ಡೊ ಹೇಳಿದನು. ಅವನು ಮತ್ತೂ ಹೇಳಿದ್ದು: “ನನ್ನ ಜೀವನವು ಪೂರ್ತಿಯಾಗಿ ತಪ್ಪುಗಳಿಂದ ತುಂಬಿದಂಥದ್ದಾಗಿತ್ತು. ಆದರೆ ನಾನೀಗ ಆ ಬದುಕನ್ನು ಹಿಂದೆ ಬಿಟ್ಟುಬಂದಿದ್ದೇನೆ. ನಾನು ಬದಲಾಗಿದ್ದೇನೆ, ಆದರೆ ಇದು ದಿನಬೆಳಗಾಗುವುದರೊಳಗೆ ನಡೆಯಲಿಲ್ಲ. ನಾನು ಯಥಾರ್ಥವಂತನಾಗಿ ಹೀಗೆಯೇ ಮುಂದುವರಿಯುವ ಅಗತ್ಯವಿದೆ.”

ಕೊಲೆಗಾಗಿ ದಂಡನೆ ಅನುಭವಿಸುತ್ತಿರುವ ಸಾಲ್ವಟೋರೆ ಎಂಬವನು, ಸ್ಪೋಲೇಟೋ ಗರಿಷ್ಠ ಭದ್ರತೆಯ ಸೆರೆಮನೆಯಲ್ಲಿದ್ದಾನೆ. ಸೆರೆಮನೆಯೊಳಗೆಯೇ ನಡೆಸಲ್ಪಟ್ಟ ಅವನ ದೀಕ್ಷಾಸ್ನಾನವು, ಅನೇಕರ ಮಸ್ಸಿನ ಮೇಲೆ ಗಾಢವಾದ ಪರಿಣಾಮಬೀರಿತು. ಅಲ್ಲಿನ ಸೆರೆಮನೆಯ ವಾರ್ಡನ್‌ ಹೇಳಿದ್ದು: “ಎಲ್ಲರೊಂದಿಗೆ ಉತ್ತಮ ನಡವಳಿಕೆಗೆ ನಡೆಸುವ ಒಂದು ಆಯ್ಕೆಯ ಸಾಮಾಜಿಕ ಮಹತ್ವಕ್ಕೆ ಇಂಬುಕೊಡತಕ್ಕದ್ದು, ಇದು ಸೆರೆಮನೆಯಲ್ಲಿನ ಸಮುದಾಯಕ್ಕೂ ಇಡೀ ಸಮಾಜಕ್ಕೂ ಉಪಯುಕ್ತವಾಗಿದೆ.” ಸಾಲ್ವಟೋರೆ ಮಾಡಿದಂಥ ಬದಲಾವಣೆಗಳ ಪರಿಣಾಮವಾಗಿ, ಅವನ ಹೆಂಡತಿ ಮತ್ತು ಮಗಳು ಈಗ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗುತ್ತಿದ್ದಾರೆ. ಸಾಲ್ವಟೋರೆ ಸಾಕ್ಷಿಕೊಟ್ಟ ಒಬ್ಬ ಸೆರೆವಾಸಿಯು ಯೆಹೋವನ ಸಮರ್ಪಿತ ಸೇವಕನಾಗಿ ದೀಕ್ಷಾಸ್ನಾನಪಡೆದುಕೊಂಡನು.

ಆದಿ ಕ್ರೈಸ್ತತ್ವದ ವಿಸ್ತರಣೆ ಮತ್ತು ವೃದ್ಧಿಯು ಇಟಲಿಯಲ್ಲಿ ನಡೆಯಿತು. (ಅ. ಕೃತ್ಯಗಳು 2:10; ರೋಮಾಪುರ 1:⁠2) ಪೌಲನು ಮತ್ತು ಅವನ ಜೊತೆ ಕ್ರೈಸ್ತರು ಸುವಾರ್ತೆಯನ್ನು ಸಾರಲು ಎಲ್ಲಿ ಶ್ರಮಿಸಿದರೊ ಅದೇ ಕ್ಷೇತ್ರಗಳಲ್ಲಿ ಈ ಕೊಯ್ಲಿನ ಸಮಯದಲ್ಲೂ ಆಧ್ಯಾತ್ಮಿಕ ಬೆಳವಣಿಗೆ ಮತ್ತು ವಿಸ್ತರಣೆಯು ಮುಂದುವರಿಯುತ್ತಿದೆ.​—⁠ಅ. ಕೃತ್ಯಗಳು 23:11; 28:​14-16.

[ಪುಟ 13ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಇಟಲಿ

ರೋಮ್‌

[ಪುಟ 15ರಲ್ಲಿರುವ ಚಿತ್ರಗಳು]

ಬೀಟಾಂಟೋ ಸಮ್ಮೇಳನ ಸಭಾಗೃಹ ಮತ್ತು ರೋಮ್‌ನಲ್ಲಿ ಇಟಾಲಿಯನ್‌ ಸಂಕೇತ ಭಾಷೆಯ ಒಂದು ಸಭೆ

[ಪುಟ 16ರಲ್ಲಿರುವ ಚಿತ್ರ]

ಬೈಬಲ್‌ ಸತ್ಯವು ಸೆರೆವಾಸಿಗಳನ್ನು ‘ಬಿಡುಗಡೆಮಾಡುತ್ತಿದೆ’

[ಪುಟ 17ರಲ್ಲಿರುವ ಚಿತ್ರಗಳು]

ಒಂದು ಕಾಲದಲ್ಲಿ ಆದಿ ಕ್ರೈಸ್ತತ್ವವು ಅಭಿವೃದ್ಧಿಯಾದ ಸ್ಥಳದಲ್ಲಿ ಆಧ್ಯಾತ್ಮಿಕ ಬೆಳವಣಿಗೆಯು ಮುಂದುವರಿಯುತ್ತದೆ