ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲಸ ಆಶೀರ್ವಾದವೊ ಶಾಪವೊ?

ಕೆಲಸ ಆಶೀರ್ವಾದವೊ ಶಾಪವೊ?

ಕೆಲಸ ಆಶೀರ್ವಾದವೊ ಶಾಪವೊ?

‘ತನ್ನ ಪ್ರಯಾಸದಲ್ಲಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಮನುಷ್ಯನಿಗೆ ಮೇಲಿಲ್ಲ.’​—⁠ಪ್ರಸಂಗಿ 2:24.

“ಕೆಲಸದ ದಿನದಂತ್ಯದಲ್ಲಿ ಬಳಲಿ ಸುಸ್ತಾಗಿರುತ್ತೇನೆ.” ಇತ್ತೀಚೆಗೆ ನಡೆಸಿದಂಥ ಸಮೀಕ್ಷೆಯೊಂದರಲ್ಲಿ, ಮೂರರಲ್ಲಿ ಒಬ್ಬ ಉದ್ಯೋಗಿಯು ಅನೇಕವೇಳೆ ತನಗೆ ಹೀಗನಿಸುತ್ತದೆಂದು ಹೇಳಿದನು. ಇದೇನೂ ಆಶ್ಚರ್ಯದ ಸಂಗತಿಯಲ್ಲ, ಏಕೆಂದರೆ ಇಂದು ಜನರು ಮಾನಸಿಕ ಒತ್ತಡವಿರುವಂಥ ಪರಿಸರದಲ್ಲಿ ಕೆಲಸಮಾಡುತ್ತಾರೆ; ಅವರು ಹೆಚ್ಚು ಸಮಯ ಕೆಲಸಮಾಡುತ್ತಾರೆ ಮತ್ತು ಮನೆಗೂ ಕೆಲಸವನ್ನು ಕೊಂಡೊಯ್ಯುತ್ತಾರೆ. ಇಷ್ಟೆಲ್ಲಾ ಮಾಡಿಯೂ, ಅವರಿಗೆ ಧಣಿಯಿಂದ ಮೆಚ್ಚುಗೆಯ ಎರಡು ಮಾತುಗಳು ಕೇಳಸಿಗುವುದು ತೀರ ಅಪರೂಪ.

ಸಾಮಾನುಗಳ ರಾಶಿಗಟ್ಟಲೆ ತಯಾರಿಕೆಯ ಆರಂಭವಾದಂದಿನಿಂದ, ಕೆಲಸಮಾಡುವ ಅನೇಕರಿಗೆ ತಾವು ಒಂದು ದೊಡ್ಡ, ಭಾವಶೂನ್ಯ ಯಂತ್ರದ ಚಕ್ರಗಳಲ್ಲಿರುವ ಬರೀ ಹಲ್ಲುಗಳಾಗಿದ್ದೇವಷ್ಟೇ ಎಂದು ಅನಿಸಲಾರಂಭಿಸಿದೆ. ಸ್ಫೂರ್ತಿ ಮತ್ತು ಸೃಜನಶೀಲತೆಯನ್ನು ಅನೇಕವೇಳೆ ತುಳಿದುಹಾಕಲಾಗುತ್ತದೆ. ಇದು ಸ್ವಾಭಾವಿಕವಾಗಿಯೇ ಜನರಿಗೆ ಕೆಲಸದ ಕಡೆಗಿರುವ ಮನೋಭಾವಗಳನ್ನು ಬಾಧಿಸುತ್ತದೆ. ತನ್ನ ಕೆಲಸದಲ್ಲಿ ವೈಯಕ್ತಿಕ ಆಸಕ್ತಿಯನ್ನು ತೆಗೆದುಕೊಳ್ಳಲು ಒಬ್ಬನಿಗಿರುವ ಪ್ರಚೋದನೆಯು ಸುಲಭವಾಗಿ ತಣ್ಣಗಾಗಿಹೋಗುತ್ತದೆ. ಕಸುಬುದಾರಿಕೆಯಲ್ಲಿ ಉತ್ಕೃಷ್ಟತೆಯನ್ನು ತಲಪಬೇಕೆಂಬ ಆಸೆಯು ಆರಿಹೋಗುತ್ತದೆ. ಇದೆಲ್ಲವೂ ಒಬ್ಬ ವ್ಯಕ್ತಿಯು ತನ್ನ ಕೆಲಸವನ್ನೇ ಇಷ್ಟಪಡದಿರುವಂತೆ ಮಾಡಬಹುದು, ಬಹುಶಃ ತನ್ನ ಕೆಲಸವನ್ನು ದ್ವೇಷಿಸುವಂತೆಯೂ ಮಾಡಬಹುದು.

ನಮ್ಮ ಮನೋಭಾವವನ್ನು ಪರೀಕ್ಷಿಸುವುದು

ನಮ್ಮ ಪರಿಸ್ಥಿತಿಗಳನ್ನು ನಾವು ಯಾವಾಗಲೂ ಬದಲಾಯಿಸಸಾಧ್ಯವಿಲ್ಲವೆಂಬುದು ನಿಜ. ಆದರೆ ನಾವು ನಮ್ಮ ಮನೋಭಾವವನ್ನು ಸರಿಹೊಂದಿಸಬಹುದೆಂಬ ಮಾತನ್ನು ಒಪ್ಪುತ್ತೀರಲ್ಲವೇ? ಕೆಲಸದ ಕಡೆಗಿನ ನಕಾರಾತ್ಮಕ ಮನೋಭಾವಗಳು ನಿಮ್ಮ ಮೇಲೆ ಸ್ವಲ್ಪಮಟ್ಟಿಗೆ ಪ್ರಭಾವಬೀರಿವೆಯೆಂದು ನಿಮಗನಿಸುವಲ್ಲಿ, ಈ ವಿಷಯಕ್ಕೆ ಸಂಬಂಧಪಟ್ಟ ದೇವರ ದೃಷ್ಟಿಕೋನ ಮತ್ತು ತತ್ವಗಳನ್ನು ಪರಿಗಣಿಸುವುದು ನಿಮಗೆ ಒಳಿತನ್ನು ಮಾಡುವುದು. (ಪ್ರಸಂಗಿ 5:18) ಇವುಗಳನ್ನು ಪರಿಗಣಿಸುವುದು, ತಮಗೆ ಕೆಲಸದಲ್ಲಿ ಸಂತೋಷ ಮತ್ತು ಸಂತೃಪ್ತಿಯನ್ನು ತಂದಿದೆ ಎಂಬುದನ್ನು ಅನೇಕರು ಕಂಡುಕೊಂಡಿದ್ದಾರೆ.

ದೇವರು ಪರಮೋಚ್ಚ ಕೆಲಸಗಾರನು. ದೇವರು ಕೆಲಸಮಾಡುತ್ತಾನೆ. ಆತನು ಸಹ ಕೆಲಸಮಾಡುತ್ತಾನೆಂದು ನಾವೆಂದೂ ಯೋಚಿಸಿರಲಿಕ್ಕಿಲ್ಲ, ಆದರೆ ಬೈಬಲಿನಲ್ಲಿ ಆತನು ಆರಂಭದಲ್ಲಿ ತನ್ನನ್ನು ಹೀಗೆಯೇ ಪರಿಚಯಿಸಿಕೊಳ್ಳುತ್ತಾನೆ. ಯೆಹೋವನು ಆಕಾಶಭೂಮಿಯನ್ನು ಸೃಷ್ಟಿಸಿದ ವಿಷಯದೊಂದಿಗೆ ಆದಿಕಾಂಡದ ವೃತ್ತಾಂತವು ಆರಂಭಗೊಳ್ಳುತ್ತದೆ. (ಆದಿಕಾಂಡ 1:⁠1) ದೇವರು ಹೀಗೆ ಸೃಷ್ಟಿಮಾಡಲಾರಂಭಿಸಿದಾಗ ವಹಿಸಿದ ವಿವಿಧ ಪಾತ್ರಗಳ ಶ್ರೇಣಿಯ ಕುರಿತು ಸ್ವಲ್ಪ ಯೋಚಿಸಿ. ಅವುಗಳಲ್ಲಿ ಕೆಲವೊಂದನ್ನು ಹೇಳುವುದಾದರೆ ಆತನು ವಿನ್ಯಾಸಗಾರನು, ಸಂಘಟಕನು, ಇಂಜಿನೀಯರನು, ಕಲಾಕಾರನು, ಸಾಮಗ್ರಿ ವಿಶೇಷಜ್ಞನು, ಪ್ರಾಜೆಕ್ಟ್‌ ಡೆವಲಪ್‌ ಮಾಡುವವನು, ರಾಸಾಯನಶಾಸ್ತ್ರಜ್ಞ, ಜೀವವಿಜ್ಞಾನಿ, ಪ್ರಾಣಿವಿಜ್ಞಾನಿ, ಪ್ರೋಗ್ರ್ಯಾಮರ್‌, ಭಾಷಾಪಂಡಿತನು ಆಗಿದ್ದನು.​—⁠ಜ್ಞಾನೋಕ್ತಿ 8:​12, 22-31.

ದೇವರ ಕೆಲಸದ ಗುಣಮಟ್ಟ ಹೇಗಿತ್ತು? ಬೈಬಲ್‌ ದಾಖಲೆಯು ಅದು ‘ಒಳ್ಳೇದಾಗಿತ್ತು,’ “ಬಹು ಒಳ್ಳೇದಾಗಿತ್ತು” ಎಂದು ಹೇಳುತ್ತದೆ. (ಆದಿಕಾಂಡ 1:​4, 31) ವಾಸ್ತವದಲ್ಲಿ ಸೃಷ್ಟಿಯು “ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ” ಮತ್ತು ನಾವು ಸಹ ಆತನನ್ನು ಸ್ತುತಿಸಬೇಕು!​—⁠ಕೀರ್ತನೆ 19:1; 148:⁠1.

ಆದರೆ ಆಕಾಶಭೂಮಿ ಮತ್ತು ಪ್ರಥಮ ಮಾನವ ಜೋಡಿಯ ಸೃಷ್ಟಿಯೊಂದಿಗೆ ದೇವರ ಕೆಲಸ ಮುಗಿಯಲಿಲ್ಲ. ಯೆಹೋವನ ಮಗನಾದ ಯೇಸು ಕ್ರಿಸ್ತನು ಹೇಳಿದ್ದು: “ನನ್ನ ತಂದೆಯು ಇಂದಿನ ವರೆಗೂ ಕೆಲಸಮಾಡುತ್ತಾನೆ.” (ಯೋಹಾನ 5:17) ಹೌದು, ತನ್ನ ಸೃಷ್ಟಿಜೀವಿಗಳಿಗೆ ಅಗತ್ಯವಿರುವದನ್ನು ಒದಗಿಸುವ, ತನ್ನ ಸೃಷ್ಟಿಯನ್ನು ಪೋಷಿಸುವ ಮತ್ತು ತನ್ನ ನಂಬಿಗಸ್ತ ಆರಾಧಕರನ್ನು ಸಂರಕ್ಷಿಸುವ ಮೂಲಕ ಯೆಹೋವನು ಕೆಲಸಮಾಡುವುದನ್ನು ಮುಂದುವರಿಸುತ್ತಿದ್ದಾನೆ. (ನೆಹೆಮೀಯ 9:6; ಕೀರ್ತನೆ 36:9; 145:​15, 16) ನಿರ್ದಿಷ್ಟ ಕೆಲಸಗಳನ್ನು ಪೂರೈಸುವುದರಲ್ಲಿ ದೇವರು ‘ತನ್ನ ಜೊತೆ ಕೆಲಸದವರು’ ಆಗಿರುವ ಜನರನ್ನೂ ಉಪಯೋಗಿಸುತ್ತಾನೆ.​—⁠1 ಕೊರಿಂಥ 3:⁠9.

ಕೆಲಸವು ಒಂದು ಆಶೀರ್ವಾದವಾಗಿರಬಲ್ಲದು. ಕೆಲಸ ಒಂದು ಶಾಪವಾಗಿದೆಯೆಂದು ಬೈಬಲ್‌ ತಾನೇ ಹೇಳುತ್ತದಲ್ಲವೊ? ಆದಿಕಾಂಡ 3:​17-19ರಲ್ಲಿರುವ ಮಾತುಗಳು, ಆದಾಮಹವ್ವರು ದಂಗೆಯೆದ್ದದಕ್ಕಾಗಿ ದೇವರು ಅವರನ್ನು ಶಿಕ್ಷಿಸುತ್ತಾ ಅವರ ಮೇಲೆ ಕೆಲಸದ ಭಾರವನ್ನು ಹೇರಿದನೆಂಬ ಅಭಿಪ್ರಾಯವನ್ನು ಮೂಡಿಸಬಹುದು. ಆ ಪ್ರಥಮ ಮಾನವರನ್ನು ಖಂಡಿಸುವಾಗ ದೇವರು ಆದಾಮನಿಗೆ ಹೇಳಿದ್ದು: “ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು.” ಇದು ಎಲ್ಲಾ ರೀತಿಯ ಕೆಲಸದ ಕುರಿತಾದ ಖಂಡನೆಯಾಗಿತ್ತೊ?

ಇಲ್ಲ. ಆದಾಮಹವ್ವರ ಅಪನಂಬಿಗಸ್ತಿಕೆಯಿಂದಾಗಿ ಏದೆನ್‌ ತೋಟದ ವಿಸ್ತರಣೆಯು ಆಗಲೇ ನಡೆಯದಿರಲಿಕ್ಕಿತ್ತು. ನೆಲ ದೇವರ ಶಾಪಕ್ಕೆ ಗುರಿಯಾಯಿತು. ನೆಲದಿಂದ ಜೀವನಾವಶ್ಯಕತೆಗಳನ್ನು ಪಡೆಯಲಿಕ್ಕಾಗಿ ಬೆವರು ಸುರಿಸಿ ದುಡಿಯುವುದು ಆವಶ್ಯಕವಾಗಿತ್ತು.​—⁠ರೋಮಾಪುರ 8:​20, 21.

ಬೈಬಲು ಕೆಲಸವನ್ನು ಒಂದು ಶಾಪವಾಗಿ ಅಲ್ಲ ಬದಲಾಗಿ ನೆಚ್ಚಬೇಕಾದಂಥ ಒಂದು ಆಶೀರ್ವಾದವಾಗಿ ವರ್ಣಿಸುತ್ತದೆ. ನಾವು ಈ ಹಿಂದೆ ನೋಡಿರುವಂತೆ ದೇವರು ತಾನೇ ಕಷ್ಟಪಟ್ಟು ದುಡಿಯುವವನಾಗಿದ್ದಾನೆ. ಯೆಹೋವನು ಮಾನವರನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿರುವುದರಿಂದ ಆತನು ಅವರಿಗೆ ತನ್ನ ಭೂಸೃಷ್ಟಿಯನ್ನು ನಿರ್ವಹಿಸುವ ಸಾಮರ್ಥ್ಯ ಮತ್ತು ಅಧಿಕಾರವನ್ನು ಕೊಟ್ಟಿದ್ದಾನೆ. (ಆದಿಕಾಂಡ 1:​26, 28; 2:15) ಈ ಕೆಲಸದ ನೇಮಕವನ್ನು, ಆದಿಕಾಂಡ 3:19ರಲ್ಲಿ ದಾಖಲಿಸಲ್ಪಟ್ಟಿರುವ ಮಾತುಗಳನ್ನು ದೇವರು ಉಚ್ಚರಿಸುವ ಮುಂಚೆಯೇ ಕೊಡಲಾಗಿತ್ತು. ಕೆಲಸವು ಒಂದು ಶಾಪ ಮತ್ತು ಕೆಡುಕು ಆಗಿರುತ್ತಿದ್ದಲ್ಲಿ ಅದರಲ್ಲಿ ತೊಡಗುವಂತೆ ಯೆಹೋವನು ಜನರನ್ನು ಎಂದಿಗೂ ಉತ್ತೇಜಿಸುತ್ತಿರಲಿಲ್ಲ. ಜಲಪ್ರಳಯದ ಮುಂಚೆಯೂ ನಂತರವೂ ನೋಹನಿಗೂ ಅವನ ಕುಟುಂಬಕ್ಕೂ ಬಹಳಷ್ಟು ಕೆಲಸವನ್ನು ಮಾಡಲಿಕ್ಕಿತ್ತು. ಕ್ರೈಸ್ತ ಶಕದಲ್ಲಿ, ಯೇಸುವಿನ ಶಿಷ್ಯರಿಗೂ ಕೆಲಸಮಾಡುವಂತೆ ಉತ್ತೇಜಿಸಲಾಯಿತು.​—⁠1 ಥೆಸಲೊನೀಕ 4:⁠11.

ಆದರೂ, ಈಗಿನ ದಿನಗಳಲ್ಲಿ ಕೆಲಸವು ಒಂದು ಹೊರೆಯಾಗಿರಬಲ್ಲದೆಂದು ನಮಗೆಲ್ಲರಿಗೂ ತಿಳಿದಿದೆ. ಒತ್ತಡ, ಅಪಾಯಗಳು, ಬೇಸರ, ನಿರಾಶೆ, ಪೈಪೋಟಿ, ವಂಚನೆ ಮತ್ತು ಅನ್ಯಾಯ ಇವೆಲ್ಲವೂ ಈಗ ಕೆಲಸದೊಂದಿಗೆ ಅಂಟಿಕೊಂಡಿರುವ ‘ಮುಳ್ಳುಕಳೆಗಳಲ್ಲಿ’ ಕೆಲವಾಗಿವೆ. ಆದರೆ ಕೆಲಸ ತಾನೇ ಒಂದು ಶಾಪವಲ್ಲ. ಕೆಲಸ ಮತ್ತು ಅದರ ಫಲಗಳನ್ನು ಬೈಬಲು ಪ್ರಸಂಗಿ 3:13ರಲ್ಲಿ ದೇವರ ಅನುಗ್ರಹ ಇಲ್ಲವೆ ಆಶೀರ್ವಾದವೆಂದು ಕರೆಯುತ್ತದೆ.​—⁠“ಕೆಲಸ ಸಂಬಂಧಿತ ಒತ್ತಡವನ್ನು ನಿಭಾಯಿಸುವುದು” ಎಂಬ ಚೌಕವನ್ನು ನೋಡಿರಿ.

ನಿಮ್ಮ ಕೆಲಸದಿಂದ ನೀವು ದೇವರನ್ನು ಮಹಿಮೆಪಡಿಸಬಲ್ಲಿರಿ. ಕೆಲಸದ ಸ್ಥಳದಲ್ಲಿ ಒಬ್ಬ ವ್ಯಕ್ತಿಯ ಕೆಲಸವು ಉತ್ತಮ ಗುಣಮಟ್ಟ ಮತ್ತು ಉತ್ಕೃಷ್ಟತೆಯದ್ದಾಗಿ ಇರುವಲ್ಲಿ ಅದನ್ನು ಯಾವಾಗಲೂ ಹಾಡಿಹೊಗಳಲಾಗುತ್ತದೆ. ಕೆಲಸದ ಕುರಿತಾದ ಬೈಬಲ್‌ ನೋಟದ ಒಂದು ಪ್ರಾಮುಖ್ಯ ಅಂಶ ಗುಣಮಟ್ಟವಾಗಿದೆ. ದೇವರು ತಾನೇ ತನ್ನ ಕೆಲಸವನ್ನು ಉತ್ಕೃಷ್ಟ ರೀತಿಯಲ್ಲಿ ಮಾಡುತ್ತಾನೆ. ಆತನು ನಮಗೆ ಪ್ರತಿಭೆಗಳನ್ನೂ ಸಾಮರ್ಥ್ಯಗಳನ್ನೂ ಕೊಟ್ಟಿದ್ದಾನೆ, ಮತ್ತು ನಾವು ಆ ಕೌಶಲಗಳನ್ನು ಒಳ್ಳೇ ಉದ್ದೇಶಕ್ಕಾಗಿ ಉಪಯೋಗಿಸಬೇಕೆಂದು ಬಯಸುತ್ತಾನೆ. ಉದಾಹರಣೆಗಾಗಿ ಪ್ರಾಚೀನ ಇಸ್ರಾಯೇಲಿನಲ್ಲಿ ದೇವಗುಡಾರದ ನಿರ್ಮಾಣದ ಸಮಯದಲ್ಲಿ ಯೆಹೋವನು ಬೆಚಲೇಲ, ಒಹೊಲೀಯಾಬರಂಥ ಜನರನ್ನು ವಿವೇಕ, ತಿಳಿವಳಿಕೆ, ಜ್ಞಾನದಿಂದ ತುಂಬಿಸಿದನು ಮತ್ತು ಇದು ಅವರು ನಿರ್ದಿಷ್ಟವಾದ ಕಲಾತ್ಮಕ ಹಾಗೂ ಪ್ರಾಯೋಗಿಕ ಕೆಲಸಗಳನ್ನು ಪೂರೈಸುವಂತೆ ಶಕ್ತಗೊಳಿಸಿತು. (ವಿಮೋಚನಕಾಂಡ 31:​1-11) ಇದು, ದೇವರು ಅವರ ಕೆಲಸದ ಕಾರ್ಯವೈಖರಿ, ಕೌಶಲ, ವಿನ್ಯಾಸ ಮತ್ತು ಇತರ ವಿವರಗಳಲ್ಲಿ ವಿಶೇಷ ಆಸಕ್ತಿ ವಹಿಸಿದನೆಂದು ತೋರಿಸುತ್ತದೆ.

ಇದು, ವೈಯಕ್ತಿಕ ಸಾಮರ್ಥ್ಯಗಳು ಮತ್ತು ಕೆಲಸದ ರೂಢಿಗಳ ಕುರಿತಾದ ನಮ್ಮ ಗ್ರಹಿಕೆಯ ಮೇಲೆ ಗಾಢವಾದ ಪರಿಣಾಮಗಳನ್ನು ಬೀರುತ್ತದೆ. ನಮ್ಮ ವೈಯಕ್ತಿಕ ಸಾಮರ್ಥ್ಯಗಳನ್ನೂ ಕೆಲಸದ ರೂಢಿಗಳನ್ನೂ ನಾವು ಹಗುರವಾಗಿ ತೆಗೆದುಕೊಳ್ಳಬಾರದಂಥ ದೇವರ ಉಡುಗೊರೆಗಳಾಗಿ ನೋಡುವಂತೆ ಅದು ಸಹಾಯಮಾಡುತ್ತದೆ. ಹೀಗಿರುವುದರಿಂದ ಕ್ರೈಸ್ತರು ತಮ್ಮ ಕೆಲಸವನ್ನು ದೇವರು ತಾನೇ ಅವರೇನನ್ನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿದ್ದಾನೊ ಎಂಬ ರೀತಿಯಲ್ಲಿ ಮಾಡುವಂತೆ ಪ್ರೋತ್ಸಾಹಿಸಲ್ಪಟ್ಟಿದ್ದಾರೆ: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.” (ಕೊಲೊಸ್ಸೆ 3:23) ದೇವರ ಸೇವಕರಿಗೆ ಒಳ್ಳೇ ರೀತಿಯಲ್ಲಿ ಕೆಲಸಮಾಡುವಂತೆ ಆಜ್ಞಾಪಿಸಲಾಗಿದೆ, ಮತ್ತು ಹೀಗೆ ಮಾಡುವುದರಿಂದ ಕ್ರೈಸ್ತ ಸಂದೇಶವು ಜೊತೆಕೆಲಸಗಾರರಿಗೂ ಇತರರಿಗೂ ಹೆಚ್ಚು ಆಕರ್ಷಕವಾಗುತ್ತದೆ.​—⁠“ಕೆಲಸದ ಸ್ಥಳದಲ್ಲಿ ಬೈಬಲ್‌ ತತ್ವಗಳನ್ನು ಅನ್ವಯಿಸುವುದು” ಎಂಬ ಚೌಕವನ್ನು ನೋಡಿ.

ಇದನ್ನು ಮನಸ್ಸಿನಲ್ಲಿಟ್ಟವರಾಗಿ, ನಮ್ಮ ಕೆಲಸದ ಗುಣಮಟ್ಟ ಮತ್ತು ಅದನ್ನು ಮಾಡುವುದರಲ್ಲಿ ನಮಗಿರುವ ಶ್ರದ್ಧೆಯು ಹೇಗಿದೆಯೆಂದು ನಮ್ಮನ್ನೇ ಕೇಳಿಕೊಳ್ಳುವುದು ಉತ್ತಮ. ನಮ್ಮ ಕೆಲಸವನ್ನು ನೋಡಿ ದೇವರು ಪ್ರಸನ್ನನಾಗುವನೊ? ನಮ್ಮ ನೇಮಿತ ಕೆಲಸಗಳನ್ನು ನಾವು ಮಾಡುವ ರೀತಿಯಿಂದ ನಮಗೆ ಪೂರ್ಣ ತೃಪ್ತಿಯಿದೆಯೊ? ಇಲ್ಲದಿರುವಲ್ಲಿ, ಸುಧಾರಣೆಮಾಡಲು ಬಹಳಷ್ಟು ಅವಕಾಶವಿದೆ.​—⁠ಜ್ಞಾನೋಕ್ತಿ 10:4; 22:⁠29.

ಆಧ್ಯಾತ್ಮಿಕತೆಯೊಂದಿಗೆ ಕೆಲಸವನ್ನು ಸರಿದೂಗಿಸಿರಿ. ಕಠಿನ ದುಡಿಮೆಯು ಶ್ಲಾಘನೀಯ ನಿಜ, ಆದರೆ ಕೆಲಸದಲ್ಲೂ ಜೀವನದಲ್ಲೂ ಸಂತೃಪ್ತಿಯನ್ನು ಕಂಡುಕೊಳ್ಳಲಿಕ್ಕಾಗಿ ಇನ್ನೊಂದು ಮೂಲಾಂಶ ಸಹ ಇದೆ. ಅದು ಆಧ್ಯಾತ್ಮಿಕತೆಯೇ. ಶ್ರಮಪಟ್ಟು ಕೆಲಸಮಾಡಿದ ಮತ್ತು ಜೀವನದ ಎಲ್ಲಾ ಐಶ್ವರ್ಯ ಹಾಗೂ ಸುಖಸೌಕರ್ಯಗಳನ್ನು ಹೊಂದಿದ್ದ ರಾಜ ಸೊಲೊಮೋನನು ಈ ತೀರ್ಮಾನಕ್ಕೆ ಬಂದನು: “ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.”​—⁠ಪ್ರಸಂಗಿ 12:⁠13.

ಸ್ಪಷ್ಟವಾಗಿ, ನಾವು ಮಾಡುವಂಥ ಎಲ್ಲ ವಿಷಯಗಳಲ್ಲಿ ದೇವರ ಚಿತ್ತವೇನೆಂಬುದನ್ನು ಪರಿಗಣಿಸಬೇಕು. ನಾವು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ಕೆಲಸಮಾಡುತ್ತಿದ್ದೇವೊ, ಅಥವಾ ಬಹುಶಃ ಅದಕ್ಕೆ ವಿರುದ್ಧವಾಗಿ ಕೆಲಸಮಾಡುತ್ತಿದ್ದೇವೊ? ನಾವು ದೇವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇವೊ ಅಥವಾ ಬರೀ ನಮ್ಮನ್ನೇ ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇವೊ? ನಾವು ದೇವರ ಚಿತ್ತವನ್ನು ಮಾಡದಿರುವಲ್ಲಿ, ನಾವು ಕೊನೆಗೆ ಹತಾಶೆ, ಒಂಟಿತನ ಮತ್ತು ಶೂನ್ಯಭಾವನೆಯ ನೋವನ್ನು ಉಣ್ಣುವೆವು.

ಮಾನಸಿಕವಾಗಿ ಬಳಲಿಹೋಗಿರುವ ಕಾರ್ಯನಿರ್ವಾಹಕರು ‘ತಮಗೆ ಯಾವುದರ ಬಗ್ಗೆ ತುಂಬ ಹುರುಪಿದೆಯೊ ಅಂಥ ಒಂದು ಉದಾತ್ತ ಕೆಲಸವನ್ನು ಕಂಡುಹಿಡಿದು, ಅದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡುವಂತೆ’ ಸ್ಟೀವನ್‌ ಬರ್ಗ್ಲಸ್‌ ಸಲಹೆಕೊಟ್ಟರು. ಅರ್ಥಭರಿತ ಕೆಲಸವನ್ನು ಮಾಡಲಿಕ್ಕಾಗಿ ಕೌಶಲಗಳನ್ನೂ ಸಾಮರ್ಥ್ಯಗಳನ್ನೂ ಕೊಟ್ಟಿರುವವನ ಸೇವೆಯನ್ನು ಮಾಡುವುದಕ್ಕಿಂತ ಹೆಚ್ಚು ಸಾರ್ಥಕವಾದ ಸಂಗತಿ ಬೇರೊಂದಿಲ್ಲ. ನಮ್ಮ ಸೃಷ್ಟಿಕರ್ತನನ್ನು ಮೆಚ್ಚಿಸುವಂಥ ಕೆಲಸವನ್ನು ಮಾಡುವುದರಿಂದ ನಮಗೆ ಅತೃಪ್ತಿಯ ಭಾವನೆ ಉಂಟಾಗದು. ಯೇಸುವಿಗೆ, ಯೆಹೋವನು ನೇಮಿಸಿದಂಥ ಕೆಲಸವು ಆಹಾರದಷ್ಟೇ ಪೋಷಕವೂ ತೃಪ್ತಿದಾಯಕವೂ ಚೈತನ್ಯದಾಯಕವೂ ಆಗಿತ್ತು. (ಯೋಹಾನ 4:34; 5:36) ಅಷ್ಟುಮಾತ್ರವಲ್ಲದೆ, ಪರಮೋಚ್ಚ ಕೆಲಸಗಾರನಾಗಿರುವ ದೇವರು ನಾವು ಆತನ “ಜೊತೆಕೆಲಸದವ”ರಾಗಿರುವಂತೆ ಆಮಂತ್ರಿಸುತ್ತಾನೆ ಎಂಬುದನ್ನೂ ನೆನಪಿಗೆ ತನ್ನಿ.​—⁠1 ಕೊರಿಂಥ 3:⁠9.

ದೇವರನ್ನು ಆರಾಧಿಸುವುದು ಮತ್ತು ಆಧ್ಯಾತ್ಮಿಕವಾಗಿ ಬೆಳೆಯುವುದು, ಪ್ರತಿಫಲದಾಯಕ ಕೆಲಸ ಹಾಗೂ ಜವಾಬ್ದಾರಿಗಾಗಿ ನಮ್ಮನ್ನು ಸಿದ್ಧಗೊಳಿಸುತ್ತದೆ. ಕೆಲಸದ ಸ್ಥಳದಲ್ಲಿ ಅನೇಕವೇಳೆ ಒತ್ತಡಗಳು, ಸಂಘರ್ಷಗಳು ಮತ್ತು ಬೇಡಿಕೆಗಳು ಅತಿಯಾಗಿರುವುದರಿಂದ, ಆಳವಾಗಿ ಬೇರೂರಿರುವ ನಮ್ಮ ನಂಬಿಕೆಯು ಮತ್ತು ಆಧ್ಯಾತ್ಮಿಕತೆಯು ನಾವು ಹೆಚ್ಚು ಉತ್ತಮ ಉದ್ಯೋಗಿಗಳು ಇಲ್ಲವೆ ಧಣಿಗಳಾಗಿರಲು ಪ್ರಯತ್ನಿಸುವಾಗ ತುಂಬ ಅಗತ್ಯವಿರುವ ಬಲವನ್ನು ಒದಗಿಸಬಲ್ಲದು. ಇನ್ನೊಂದು ಬದಿಯಲ್ಲಿ, ಈ ಭಕ್ತಿಹೀನ ಲೋಕದಲ್ಲಿನ ಜೀವನದ ವಾಸ್ತವಿಕತೆಗಳು ನಾವು ಯಾವ ಕ್ಷೇತ್ರಗಳಲ್ಲಿ ನಂಬಿಕೆಯಲ್ಲಿ ಬೆಳೆಯಬೇಕೆಂಬುದನ್ನು ತೋರಿಸಿಕೊಡಬಲ್ಲದು.​—⁠1 ಕೊರಿಂಥ 16:​13, 14.

ಕೆಲಸವು ಒಂದು ಆಶೀರ್ವಾದವಾಗಿರಲಿರುವ ಸಮಯ

ದೇವರ ಸೇವೆಯನ್ನು ಮಾಡಲು ಈಗ ಕಷ್ಟಪಟ್ಟು ಕೆಲಸಮಾಡುವವರು, ಆತನು ಪರದೈಸನ್ನು ಪುನಸ್ಸ್ಥಾಪಿಸುವಂಥ ಮತ್ತು ಇಡೀ ಭೂಮಿಯಲ್ಲಿ ಪ್ರಯೋಜನದಾಯಕ ಕೆಲಸವು ತುಂಬಿರುವಂಥ ಸಮಯಕ್ಕಾಗಿ ಎದುರುನೋಡಬಲ್ಲರು. ಆ ಸಮಯದಲ್ಲಿನ ಜೀವನದ ಕುರಿತಾಗಿ ಯೆಹೋವನ ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; . . . ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”​—⁠ಯೆಶಾಯ 65:21-23.

ಆ ಸಮಯದಲ್ಲಿ ಕೆಲಸವು ಎಂಥ ಒಂದು ಆಶೀರ್ವಾದವಾಗಿರುವುದು! ನಿಮಗಾಗಿ ದೇವರ ಚಿತ್ತವೇನೆಂಬುದನ್ನು ಕಲಿತು ಅದಕ್ಕೆ ಹೊಂದಿಕೆಯಲ್ಲಿ ಕೆಲಸಮಾಡುವ ಮೂಲಕ, ನೀವು ಯೆಹೋವನ ಆಶೀರ್ವದಿತ ಜನರಲ್ಲೊಬ್ಬರಾಗಿ ‘ನಿಮ್ಮ ನಾನಾಪ್ರಯಾಸಗಳಲ್ಲಿ ಸುಖವನ್ನನುಭವಿಸು’ವಂತಾಗಲಿ.​—⁠ಪ್ರಸಂಗಿ 3:⁠13.

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ದೇವರು ಪರಮೋಚ್ಚ ಕೆಲಸಗಾರನು: ಆದಿಕಾಂಡ 1:​1, 4, 31; ಯೋಹಾನ 5:⁠17

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ಕೆಲಸವು ಒಂದು ಆಶೀರ್ವಾದವಾಗಿರಬಲ್ಲದು: ಆದಿಕಾಂಡ 1:28; 2:15; 1 ಥೆಸಲೊನೀಕ 4:⁠11

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಮ್ಮ ಕೆಲಸದಿಂದ ನೀವು ದೇವರನ್ನು ಮಹಿಮೆಪಡಿಸಬಲ್ಲಿರಿ: ವಿಮೋಚನಕಾಂಡ 31: ​1-11; ಕೊಲೊಸ್ಸೆ 3:⁠23

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ಆಧ್ಯಾತ್ಮಿಕತೆಯೊಂದಿಗೆ ಕೆಲಸವನ್ನು ಸರಿದೂಗಿಸಿರಿ: ಪ್ರಸಂಗಿ 12:13; 1 ಕೊರಿಂಥ 3:⁠9

[ಪುಟ 6ರಲ್ಲಿರುವ ಚೌಕ/ಚಿತ್ರ]

ಕೆಲಸ ಸಂಬಂಧಿತ ಒತ್ತಡವನ್ನು ನಿಭಾಯಿಸುವುದು

ವೈದ್ಯಕೀಯ ವೃತ್ತಿಪರರು, ಉದ್ಯೋಗದ ಒತ್ತಡವನ್ನು ಔದ್ಯೋಗಿಕ ಅಪಾಯವೆಂದು ವರ್ಗೀಕರಿಸಿದ್ದಾರೆ. ಅದು ಹೊಟ್ಟೆಯಲ್ಲಿ ಹುಣ್ಣುಗಳನ್ನು, ಮತ್ತು ಖಿನ್ನತೆಯನ್ನು ಉಂಟುಮಾಡಬಲ್ಲದು, ಹಾಗೂ ಆತ್ಮಹತ್ಯೆಗೂ ನಡೆಸಬಲ್ಲದು. ಜಪಾನೀಯರು ಅದನ್ನು ಕಾರೊಶೀ ಎಂದು ಕರೆಯುತ್ತಾರೆ, ಅದರರ್ಥ “ವಿಪರೀತ ಕೆಲಸದಿಂದ ಸಾವು.”

ಕೆಲಸಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳು ಒತ್ತಡಕ್ಕೆ ಕಾರಣವಾಗಿರಬಲ್ಲವು. ಕೆಲಸದ ಸಮಯಗಳಲ್ಲಿ ಇಲ್ಲವೆ ಪರಿಸ್ಥಿತಿಗಳಲ್ಲಿನ ಬದಲಾವಣೆ, ತಮ್ಮ ಮೇಲಿರುವ ಅಧಿಕಾರಿಗಳೊಂದಿಗೆ ಸಮಸ್ಯೆಗಳು, ಜವಾಬ್ದಾರಿಗಳಲ್ಲಿ ಇಲ್ಲವೆ ಕೆಲಸದ ವಿಧಾನದಲ್ಲಿ ಬದಲಾವಣೆ, ನಿವೃತ್ತಿ ಮತ್ತು ವಜಾಮಾಡುವಿಕೆಯು ಇದರಲ್ಲಿ ಸೇರಿರಬಲ್ಲದು. ಇಂಥ ಒತ್ತಡಕ್ಕೆ ಪ್ರತಿಕ್ರಿಯೆಯಲ್ಲಿ, ಕೆಲವರು ಉದ್ಯೋಗಗಳನ್ನು ಇಲ್ಲವೆ ವಾತಾವರಣವನ್ನು ಬದಲಾಯಿಸುತ್ತಾ ಇರುವ ಮೂಲಕ ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರು ಇಂಥ ಒತ್ತಡವನ್ನು ತಡೆಹಿಡಿಯಲು ಪ್ರಯತ್ನಿಸುತ್ತಾರೆ, ಆದರೆ ಆಗ ಅದು ಜೀವನದ ಇತರ ಕ್ಷೇತ್ರಗಳಲ್ಲಿ, ಹೆಚ್ಚು ಸಾಮಾನ್ಯವಾಗಿ ಕುಟುಂಬದೊಳಗೆ ಹರಿದುಬರುತ್ತದೆ. ಕೆಲವರು ಭಾವನಾತ್ಮಕವಾಗಿಯೂ ಕಷ್ಟಪಡುತ್ತಾರೆ, ಮತ್ತು ಇದು ಖಿನ್ನತೆ ಹಾಗೂ ಹತಾಶೆಗೆ ನಡೆಸುತ್ತದೆ.

ಕ್ರೈಸ್ತರು ಕೆಲಸದಿಂದ ಬರುವ ಒತ್ತಡವನ್ನು ನಿಭಾಯಿಸಲು ಸುಸಜ್ಜಿತರಾಗಿದ್ದಾರೆ. ಬೈಬಲು ಮೂಲಭೂತವಾದ ಹಲವಾರು ತತ್ವಗಳನ್ನು ಕೊಡುತ್ತದೆ, ಮತ್ತು ಇವು ಕಷ್ಟದ ಸಮಯಗಳಲ್ಲಿ ನಮ್ಮ ಆಧ್ಯಾತ್ಮಿಕ ಹಾಗೂ ಭಾವನಾತ್ಮಕ ಕ್ಷೇಮದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿ ನಮ್ಮನ್ನು ಪೋಷಿಸಬಲ್ಲದು. ಉದಾಹರಣೆಗೆ ಯೇಸು ಹೇಳಿದ್ದು: “ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.” ಇಲ್ಲಿ ನಮಗೆ, ನಾಳಿನ ಸಮಸ್ಯೆಗಳ ಮೇಲಲ್ಲ ಬದಲಾಗಿ ಇವತ್ತಿನ ಸಮಸ್ಯೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಉತ್ತೇಜಿಸಲಾಗಿದೆ. ಈ ರೀತಿಯಲ್ಲಿ ನಾವು ನಮ್ಮ ಚಿಕ್ಕ ಸಮಸ್ಯೆಗಳನ್ನು ದೊಡ್ಡದಾಗಿ ಮಾಡುವುದರಿಂದ ಮತ್ತು ಹಾಗೆ ಮಾಡುವ ಮೂಲಕ ಒತ್ತಡದ ಭಾವನೆಯನ್ನು ಹೆಚ್ಚಿಸುವುದರಿಂದ ದೂರವಿರುವೆವು.​—⁠ಮತ್ತಾಯ 6:​25-34.

ಕ್ರೈಸ್ತರು ತಮ್ಮ ಸ್ವಂತ ಬಲದ ಮೇಲಲ್ಲ ಬದಲಾಗಿ ದೇವರ ಬಲದ ಮೇಲೆ ಹೊಂದಿಕೊಂಡಿರುವುದು ಅತ್ಯಾವಶ್ಯಕ. ನಾವಿನ್ನೇನು ಕುಸಿದುಬೀಳಲಿದ್ದೇವೆ ಎಂದು ನಮಗನಿಸುವಾಗ, ದೇವರು ನಮ್ಮ ಹೃದಯಗಳಿಗೆ ಶಾಂತಿ ಮತ್ತು ಆನಂದವನ್ನು ಕೊಡಬಲ್ಲನು, ಮತ್ತು ಯಾವುದೇ ಕಷ್ಟವನ್ನು ನಿಭಾಯಿಸಲು ಬೇಕಾದ ವಿವೇಕವನ್ನು ಒದಗಿಸಬಲ್ಲನು. “ನೀವು ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ” ಎಂದು ಅಪೊಸ್ತಲ ಪೌಲನು ಹೇಳಿದನು.​—⁠ಎಫೆಸ 6:10; ಫಿಲಿಪ್ಪಿ 4:​7.

ಕೊನೆ ವಿಷಯವೇನೆಂದರೆ, ಒತ್ತಡಭರಿತ ಪರಿಸ್ಥಿತಿಗಳಿಂದಲೂ ಸಕಾರಾತ್ಮಕ ಫಲಿತಾಂಶಗಳು ಬರಬಲ್ಲವು. ಪರೀಕ್ಷೆಗಳು ನಾವು ಯೆಹೋವನ ಕಡೆಗೆ ತಿರುಗುವಂತೆ, ಆತನನ್ನು ಹುಡುಕುವಂತೆ ಮತ್ತು ಆತನಲ್ಲಿ ಭರವಸೆಯಿಡುವಂತೆ ಮಾಡಬಲ್ಲವು. ಮಾತ್ರವಲ್ಲ, ನಾವು ಕ್ರೈಸ್ತ ವ್ಯಕ್ತಿತ್ವವನ್ನು ಹಾಗೂ ಒತ್ತಡದ ಕೆಳಗೂ ಪಟ್ಟುಹಿಡಿಯುವ ಸಾಮರ್ಥ್ಯವನ್ನು ವಿಕಸಿಸುವುದನ್ನು ಮುಂದುವರಿಸುವಂತೆ ಅವು ನಮ್ಮನ್ನು ಪ್ರಚೋದಿಸಬಲ್ಲವು ಸಹ. ಪೌಲನು ನಮಗೆ ಬುದ್ಧಿಹೇಳುವುದು: “ನಮಗೆ ಉಂಟಾಗುವ ಉಪದ್ರವಗಳಲ್ಲಿಯೂ ಉಲ್ಲಾಸವಾಗಿದ್ದೇವೆ. ಯಾಕಂದರೆ ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ, ಅನುಭವದಿಂದ ನಿರೀಕ್ಷಣ ಹುಟ್ಟುತ್ತದೆಂದು ಬಲ್ಲೆವು.”​—⁠ರೋಮಾಪುರ 5:3, 4.

ಹೀಗೆ ಒತ್ತಡವು ಸಹ ಹತಾಶೆ ಹಾಗೂ ದುಃಖದ ಮೂಲವಾಗಿರುವ ಬದಲಿಗೆ ಆಧ್ಯಾತ್ಮಿಕ ಬೆಳವಣಿಗೆಗೆ ಪ್ರಚೋದಕವಾಗಿರಬಲ್ಲದು.

[ಪುಟ 7ರಲ್ಲಿರುವ ಚೌಕ/ಚಿತ್ರ]

ಕೆಲಸದ ಸ್ಥಳದಲ್ಲಿ ಬೈಬಲ್‌ ತತ್ವಗಳನ್ನು ಅನ್ವಯಿಸುವುದು

ಒಬ್ಬ ಕ್ರೈಸ್ತ ವ್ಯಕ್ತಿಯು ತನ್ನ ಉದ್ಯೋಗದ ಸ್ಥಳದಲ್ಲಿ ತೋರಿಸುವ ಮನೋಭಾವ ಮತ್ತು ನಡವಳಿಕೆಯು, ಸಹೋದ್ಯೋಗಿಗಳನ್ನು ಮತ್ತು ಇತರರನ್ನು ಬೈಬಲಿನ ಸಂದೇಶದ ಕಡೆಗೆ ಆಕರ್ಷಿಸಬಲ್ಲದು. ಅಪೊಸ್ತಲ ಪೌಲನು ತೀತನಿಗೆ ಬರೆದಂಥ ಪತ್ರದಲ್ಲಿ, ಉದ್ಯೋಗಿಗಳಂಥ ಸನ್ನಿವೇಶದಲ್ಲಿರುವವರಿಗೆ ಹೇಳುವುದು: ‘ಎಲ್ಲಾದರಲ್ಲಿ ತಮ್ಮ ಯಜಮಾನರಿಗೆ ಅಧೀನರಾಗಿದ್ದು ಅವರನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡುತ್ತಾ ಎದುರುಮಾತನ್ನಾಡದೆ ಯಾವದನ್ನೂ ಕದ್ದಿಟ್ಟುಕೊಳ್ಳದೆ ಪೂರಾ ನಂಬಿಗಸ್ತರೆಂದು ಹೆಸರುಹೊಂದಿ ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರಿ.’​—⁠ತೀತ 2:9, 10.

ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯಕ್ಕೆ ಒಬ್ಬ ವ್ಯಾಪಾರಸ್ಥನು ಬರೆದಂಥ ಪತ್ರವನ್ನು ಪರಿಗಣಿಸಿರಿ: “ಯೆಹೋವನ ಸಾಕ್ಷಿಗಳನ್ನು ಕೆಲಸಕ್ಕಿಟ್ಟುಕೊಳ್ಳಲು ನಿಮ್ಮ ಅನುಮತಿ ಪಡೆಯಲಿಕ್ಕೋಸ್ಕರ ಈ ಪತ್ರಬರೆಯುತ್ತಿದ್ದೇನೆ. ನಾನು ಅವರನ್ನೇ ಕೆಲಸಕ್ಕಿಟ್ಟುಕೊಳ್ಳಲು ಬಯಸುತ್ತೇನೆ ಏಕೆಂದರೆ ಅವರು ಪ್ರಾಮಾಣಿಕರು, ಯಥಾರ್ಥರು, ಭರವಸಾರ್ಹರು ಮತ್ತು ತಮ್ಮ ಧಣಿಗಳಿಗೆ ಮೋಸಮಾಡದವರೆಂದು ನನಗೆ ನಿಶ್ಚಯವಿದೆ. ನಾನು ಯೆಹೋವನ ಸಾಕ್ಷಿಗಳನ್ನು ಮಾತ್ರ ನಂಬುತ್ತೇನೆ. ದಯವಿಟ್ಟು ನನಗೆ ಸಹಾಯಮಾಡಿ.”

ಕೈಲ್‌ ಎಂಬವಳು ಒಂದು ಖಾಸಗಿ ಶಾಲೆಯಲ್ಲಿ ಸ್ವಾಗತಕಾರಿಣಿಯಾಗಿ ಕೆಲಸಮಾಡುತ್ತಿರುವ ಒಬ್ಬ ಕ್ರೈಸ್ತಳು. ಯಾವುದೊ ತಪ್ಪಾಭಿಪ್ರಾಯದಿಂದಾಗಿ ಸಹೋದ್ಯೋಗಿಯೊಬ್ಬಳು ಕೆಲವು ವಿದ್ಯಾರ್ಥಿಗಳ ಮುಂದೆಯೇ ಅವಳಿಗೆ ಕೆಟ್ಟ ಕೆಟ್ಟ ಮಾತುಗಳನ್ನಾಡಿದಳು. “ಯೆಹೋವನ ಹೆಸರಿಗೆ ಯಾವುದೇ ಕಳಂಕ ತರದಂತೆ ನಾನು ಜಾಗ್ರತೆಯಿಂದಿರಬೇಕಿತ್ತು” ಎಂದು ಕೈಲ್‌ ಜ್ಞಾಪಿಸಿಕೊಳ್ಳುತ್ತಾಳೆ. ಮುಂದಿನ ಐದು ದಿನಗಳ ವರೆಗೆ, ತಾನು ಬೈಬಲ್‌ ತತ್ವಗಳನ್ನು ಹೇಗೆ ಅನ್ವಯಿಸಬಲ್ಲೆ ಎಂಬುದರ ಬಗ್ಗೆ ಕೈಲ್‌ ಯೋಚಿಸಿದಳು. ಇವುಗಳಲ್ಲಿ ಒಂದು ರೋಮಾಪುರ 12:18ರಲ್ಲಿದೆ: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.” ತನ್ನ ಸಹೋದ್ಯೋಗಿಗೆ ಇ-ಮೇಲ್‌ ಮಾಡಿ ತಮ್ಮ ನಡುವಣ ಬಿಗುಪಿಗಾಗಿ ಕ್ಷಮೆಯಾಚಿಸಿದಳು. ಕೆಲಸದ ನಂತರ ಹಿಂದುಳಿದು ಆ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ ತನ್ನೊಂದಿಗೆ ಸ್ವಲ್ಪ ಹೊತ್ತು ಮಾತಾಡುವಂತೆ ಕೈಲ್‌ ಕೇಳಿಕೊಂಡಳು. ಅವರಿಬ್ಬರೂ ಕೂಡಿ ಮಾತಾಡಿದಾಗ, ಆ ಸಹೋದ್ಯೋಗಿಯ ಮನಕರಗಿತು ಮತ್ತು ಕೈಲ್‌ ಸಮಸ್ಯೆಯನ್ನು ಬಗೆಹರಿಸಲು ಉಪಯೋಗಿಸಿದ ವಿಧಾನವು ಎಷ್ಟು ವಿವೇಕಯುತವಾಗಿತ್ತೆಂದು ಅವಳು ಒಪ್ಪಿಕೊಂಡಳು. “ಇದಕ್ಕೂ ನಿನ್ನ ಧರ್ಮಕ್ಕೂ ಏನೋ ಸಂಬಂಧವಿರಬೇಕು” ಎಂದು ಅವಳು ಕೈಲ್‌ಗೆ ಹೇಳಿದಳು. ಅನಂತರ ಅವಳನ್ನು ಪ್ರೀತಿಯಿಂದ ಅಪ್ಪಿ ವಿದಾಯಹೇಳಿದಳು. ಕೈಲ್‌ಳ ಅಭಿಪ್ರಾಯವೇನು? “ನಾವು ಬೈಬಲ್‌ ತತ್ವಗಳನ್ನು ಅನ್ವಯಿಸುವಾಗ ಎಂದಿಗೂ ತಪ್ಪಾಗಲು ಸಾಧ್ಯವೇ ಇಲ್ಲ.”

[ಪುಟ 4, 5ರಲ್ಲಿರುವ ಚಿತ್ರ]

ಕೆಲಸಮಾಡುವ ಅನೇಕರಿಗೆ, ತಾವು ಒಂದು ಭಾವಶೂನ್ಯ ಯಂತ್ರದ ಚಕ್ರಗಳಲ್ಲಿ ಬರೀ ಹಲ್ಲುಗಳಾಗಿದ್ದೇವೆ ಎಂದು ಅನಿಸುತ್ತದೆ

[ಕೃಪೆ]

Japan Information Center, Consulate General of Japan in NY

[ಪುಟ 8ರಲ್ಲಿರುವ ಚಿತ್ರ ಕೃಪೆ]

ಭೂಗೋಳ: NASA photo