ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲಸ ಎಂಬ ಸಂದಿಗ್ಧತೆ

ಕೆಲಸ ಎಂಬ ಸಂದಿಗ್ಧತೆ

ಕೆಲಸ ಎಂಬ ಸಂದಿಗ್ಧತೆ

“ಕೆಲಸ! ನಮಗೆ ಮಾಡಲು ಇನ್ನೂ ಬಹಳಷ್ಟು ಕೆಲಸಗಳಿವೆ ಎಂಬ ಅರಿವು ಅಪಾರ ಸಂತೋಷವನ್ನು ಉಂಟುಮಾಡುತ್ತದೆ.” ​—⁠ಕ್ಯಾತ್‌ರೀನ್‌ ಮ್ಯಾನ್ಸ್‌ಫೀಲ್ಡ್‌, ಲೇಖಕಿ (1888-1923).

ಕೆಲಸದ ಬಗ್ಗೆ ನಿಮಗೆ ಈ ಮೇಲ್ಕಂಡ ಹೇಳಿಕೆಯಲ್ಲಿರುವಂಥ ರೀತಿಯ ಉದಾತ್ತ ದೃಷ್ಟಿಕೋನವಿದೆಯೊ? ಕೆಲಸದ ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯವೇನು? ಅದು, ಆರಾಮದ ಎರಡು ವಾರಾಂತ್ಯಗಳ ನಡುವೆ ಬರುವ ಒಂದು ಉದ್ದವಾದ, ಕತ್ತಲಿನ ಸುರಂಗದಂತಿದೆಯೆಂದು ನಿಮಗನಿಸುತ್ತದೊ? ಅಥವಾ ಅದು ನಿಮಗೆ ಬಹುಮಟ್ಟಿಗೆ ಒಂದು ಗೀಳಾಗಿಬಿಟ್ಟಿದೆಯೊ?

ಹೆಚ್ಚಿನ ಜನರಿಗೆ, ಅವರು ಎಚ್ಚರದಿಂದಿರುವ ಸಮಯದಲ್ಲಿ ಹೆಚ್ಚಿನಾಂಶ ಕೆಲಸಕ್ಕಾಗಿಯೇ ಹೋಗುತ್ತದೆ. ನಾವು ಎಲ್ಲಿ ವಾಸಿಸಬೇಕು ಮತ್ತು ನಮ್ಮ ಜೀವನ ಶೈಲಿಯು ಎಂಥದ್ದಾಗಿರಬೇಕು ಎಂಬುದನ್ನು ಕೆಲಸವೇ ನಿರ್ಧರಿಸಬಹುದು. ಪ್ರೌಢಾವಸ್ಥೆಯಿಂದ ಹಿಡಿದು ನಿವೃತ್ತಿಯಾಗುವ ವರೆಗೂ, ತಮ್ಮ ಜೀವನಗಳನ್ನು ಆಳುವ ಒಂದೇ ಒಂದು ವಿಷಯ ತಮ್ಮ ಕೆಲಸ ಎಂಬುದನ್ನು ಅನೇಕರು ಕಂಡುಕೊಳ್ಳುತ್ತಾರೆ. ನಮ್ಮಲ್ಲಿ ಕೆಲವರಿಗೆ ತಮ್ಮ ದುಡಿಮೆಯಿಂದ ಬಹಳಷ್ಟು ವೈಯಕ್ತಿಕ ತೃಪ್ತಿ ಸಿಗುತ್ತದೆ. ಇತರರು ಕೆಲಸದ ಮೌಲ್ಯವನ್ನು ತಮ್ಮ ವರಮಾನ ಇಲ್ಲವೆ ಪ್ರತಿಷ್ಠೆಯ ಆಧಾರದ ಮೇರೆಗೆ ತೂಗಿನೋಡುತ್ತಾರೆ. ಇನ್ನೂ ಕೆಲವರಾದರೊ, ಕೆಲಸವನ್ನು ಕೇವಲ ಸಮಯ ಕಳೆಯಲಿಕ್ಕಾಗಿರುವ ಒಂದು ಮಾರ್ಗ ಇಲ್ಲವೆ ಸಮಯ ಪೋಲುಮಾಡುವ ವಿಧವೆಂದು ಸಹ ದೃಷ್ಟಿಸುತ್ತಾರೆ.

ಬದುಕಲಿಕ್ಕಾಗಿ ಕೆಲಸಮಾಡುವವರು ಇದ್ದಾರೆ, ಮತ್ತು ಕೆಲಸಮಾಡಲಿಕ್ಕಾಗಿಯೇ ಬದುಕುವವರೂ ಇದ್ದಾರೆ; ಇನ್ನೂ ಕೆಲವರು ತಮ್ಮ ಕೆಲಸದ ಸ್ಥಳದಲ್ಲೇ ಕೊನೆಯುಸಿರೆಳೆಯುತ್ತಾರೆ ಇಲ್ಲವೆ ಕೆಲಸಮಾಡುವ ಸ್ಥಳದಲ್ಲಿನ ಪರಿಸ್ಥಿತಿಗಳಿಂದಾಗಿ ಸಾವನ್ನಪ್ಪುತ್ತಾರೆ. ದೃಷ್ಟಾಂತಕ್ಕಾಗಿ, ವಿಶ್ವ ಸಂಸ್ಥೆಯ ಇತ್ತೀಚಿನ ವರದಿಯೊಂದಕ್ಕನುಸಾರ ಕೆಲಸವು, “ಯುದ್ಧಗಳು ಇಲ್ಲವೆ ಅಮಲೌಷಧ ಮತ್ತು ಮದ್ಯ ಇವೆಲ್ಲವೂ ಸೇರಿ” ಉಂಟುಮಾಡುವುದಕ್ಕಿಂತ ಹೆಚ್ಚಿನ ನೋವು ಹಾಗೂ ಮರಣಕ್ಕೆ ಕಾರಣವಾಗಿರುತ್ತದೆ. ಇದರ ಬಗ್ಗೆ ಹೇಳಿಕೆಯನ್ನು ನೀಡುತ್ತಾ, ಲಂಡನ್‌ನ ದ ಗಾರ್ಡಿಯನ್‌ ವಾರ್ತಾಪತ್ರಿಕೆಯು ವರದಿಸಿದ್ದು: “ಪ್ರತಿ ವರ್ಷ 20 ಲಕ್ಷಕ್ಕಿಂತಲೂ ಹೆಚ್ಚಿನ ಜನರು ಕೆಲಸಕ್ಕೆ ಸಂಬಂಧಪಟ್ಟ ಅಪಘಾತಗಳು ಇಲ್ಲವೆ ರೋಗಗಳಿಂದ ಸಾಯುತ್ತಾರೆ . . . ಧೂಳು, ರಾಸಾಯನಿಕಗಳು, ಶಬ್ದ ಮತ್ತು ವಿಕಿರಣದೊಂದಿಗಾಗುವ ಸಂಪರ್ಕವು ಕ್ಯಾನ್ಸರ್‌, ಹೃದ್ರೋಗ ಮತ್ತು ಮಿದುಳು ಆಘಾತಗಳನ್ನು ಉಂಟುಮಾಡುತ್ತಿದೆ.” ಬಾಲ ಕಾರ್ಮಿಕ ಪದ್ಧತಿ ಮತ್ತು ಕಡ್ಡಾಯ ದುಡಿಮೆಯ ಪದ್ಧತಿಯು ಸದ್ಯದಲ್ಲಿರುವ ಕೆಲಸದ ಸ್ಥಿತಿಗತಿಗಳ ಇನ್ನೆರಡು ಕುರೂಪ ಮುಖಗಳು ಅಷ್ಟೇ.

ಇದಲ್ಲದೆ, ಮನಶ್ಶಾಸ್ತ್ರಜ್ಞ ಸ್ಟೀವನ್‌ ಬರ್ಗ್ಲಸ್‌ರವರು “ಸೂಪರ್‌ನೊವಾ ಬರ್ನ್‌ಔಟ್‌” (ಮಾನಸಿಕ ಮತ್ತು ಭಾವನಾತ್ಮಕವಾಗಿ ದುರ್ಬಲವಾಗುವುದು) ಎಂದು ಕರೆಯುವಂಥ ಸ್ಥಿತಿಯೂ ಇದೆ. ಅವರು ಶ್ರದ್ಧೆಯಿಂದ ಕೆಲಸಮಾಡುವವನ ಬಗ್ಗೆ ವರ್ಣಿಸುತ್ತಾರೆ. ಅವರು ವರ್ಣಿಸುವಂಥ ಈ ವ್ಯಕ್ತಿಯು, ತನ್ನ ಜೀವನವೃತ್ತಿಯ ಶಿಖರವನ್ನು ತಲಪಿದ್ದಾನೆ, ಆದರೆ “ಸತತವಾಗಿ ಹೆದರಿಕೆ, ಸಂಕಟ, ಮತ್ತು ತಾನೆಂದೂ ತಪ್ಪಿಸಿಕೊಳ್ಳಲಾರದ ಇಲ್ಲವೆ ಮಾನಸಿಕ ಸಂತೃಪ್ತಿಯನ್ನು ಪಡೆಯಲಾರದ ಒಂದು ಉದ್ಯೋಗ ಇಲ್ಲವೆ ಜೀವನವೃತ್ತಿಯ ಪಥದಲ್ಲಿ ಸಿಕ್ಕಿಬಿದ್ದಿದ್ದೇನೆಂಬ ಭಾವನೆಯಿಂದಾಗಿ ಉಂಟಾಗುವ ಹತಾಶೆ ಇಲ್ಲವೆ ಖಿನ್ನತೆಯನ್ನು” ಅನುಭವಿಸುತ್ತಾನೆ.

ಕಷ್ಟಪಟ್ಟು ಕೆಲಸಮಾಡುವುದು ಮತ್ತು ಕೆಲಸವ್ಯಸನ

ಇಂದಿನ ಜಗತ್ತಿನಲ್ಲಿ ಬೆಳಗ್ಗಿನಿಂದ ರಾತ್ರಿ ವರೆಗೂ ಕೆಲಸಮಾಡುವವರು ಅನೇಕರು. ಆದುದರಿಂದ ಕಷ್ಟಪಟ್ಟು ಕೆಲಸಮಾಡುವವರು ಯಾರು ಮತ್ತು ಕೆಲಸವ್ಯಸನಿಗಳು ಯಾರು ಎಂಬುದರ ನಡುವೆ ವ್ಯತ್ಯಾಸವನ್ನು ತಿಳಿಯುವುದು ಸಹಾಯಕರವಾಗಿರುವುದು. ಕೆಲಸವ್ಯಸನಿಗಳು, ಮುಂದೇನಾಗುವುದೆಂದು ಹೇಳಲಾಗದ ಈ ಅಪಾಯಕಾರಿ ಜಗತ್ತಿನಲ್ಲಿ ಕೆಲಸದ ಸ್ಥಳವನ್ನು ಒಂದು ಸುರಕ್ಷಿತ ತಾಣವಾಗಿ ಪರಿಗಣಿಸುತ್ತಾರೆ; ಶ್ರಮಜೀವಿಗಳಾದರೊ ಕೆಲಸವನ್ನು ಅತ್ಯಾವಶ್ಯಕ ಮತ್ತು ಕೆಲವೊಮ್ಮೆ ಸಂತೃಪ್ತಿದಾಯಕವಾಗಿರುವ ಕರ್ತವ್ಯದೋಪಾದಿ ದೃಷ್ಟಿಸುತ್ತಾರೆ. ಕೆಲಸವ್ಯಸನಿಗಳಿಗೆ ಕೆಲಸವೇ ಸರ್ವಸ್ವವಾಗಿದ್ದು, ಅದು ತಮ್ಮ ಜೀವನದಲ್ಲಿ ಬೇರೆಲ್ಲಾ ವಿಷಯಗಳ ಸ್ಥಾನವನ್ನು ಆಕ್ರಮಿಸುವಂತೆ ಬಿಡುತ್ತಾರೆ. ಆದರೆ ಕಷ್ಟಪಟ್ಟು ಕೆಲಸಮಾಡುವವರಿಗೆ ಯಾವಾಗ ತಮ್ಮ ಕಂಪ್ಯೂಟರನ್ನು ಆಫ್‌ ಮಾಡಬೇಕೆಂದೂ, ಯಾವಾಗ ತಮ್ಮ ಗಮನದ ಕೇಂದ್ರವನ್ನು ಬದಲಾಯಿಸಬೇಕೆಂದೂ, ಮತ್ತು ಯಾವಾಗ ಎಲ್ಲಿ ಉಪಸ್ಥಿತರಿರಬೇಕೆಂದೂ (ಉದಾಹರಣೆಗೆ, ತಮ್ಮ ವಿವಾಹದ ವಾರ್ಷಿಕೋತ್ಸವದಂದು) ತಿಳಿದಿರುತ್ತದೆ. ಕೆಲಸವ್ಯಸನಿಗಳಿಗೆ ಅತಿಯಾದ ಕೆಲಸಮಾಡುವುದರಿಂದ ಭಾವನಾತ್ಮಕ ಸಂತೃಪ್ತಿ ಸಿಗುತ್ತದೆ ಮತ್ತು ಅದರಿಂದ ಅವರು ಪ್ರಚೋದಿತರಾಗುತ್ತಾರೆ, ಆದರೆ ಕಷ್ಟಪಟ್ಟು ಕೆಲಸಮಾಡುವವರಿಗೆ ಈ ರೀತಿಯ ಅನಿಸಿಕೆಗಳಿರುವುದಿಲ್ಲ.

ಆಧುನಿಕ ಸಮಾಜವು, ಇವೆರಡರ ನಡುವಿನ ಮೇರೆಯು ಸ್ಪಷ್ಟವಾಗಿ ಗೋಚರವಾಗದಂತೆ ಮಾಡುತ್ತದೆ. ಅದು ಅತಿಯಾದ ಕೆಲಸವು ಚಿತ್ತಾಕರ್ಷಕವಾಗಿ ತೋರುವಂತೆ ಮಾಡುತ್ತದೆ. ಮೋಡೆಮ್‌ಗಳು, ಮೊಬೈಲ್‌ಗಳು, ಮತ್ತು ಪೇಜರ್‌ಗಳಿಂದಾಗಿ ಕೆಲಸದ ಸ್ಥಳ ಯಾವುದು ಮನೆ ಯಾವುದು ಎಂಬುದರ ಮಧ್ಯೆ ವ್ಯತ್ಯಾಸವನ್ನು ಕಂಡುಕೊಳ್ಳುವುದು ಕಷ್ಟಕರವಾಗುತ್ತದೆ. ಯಾವುದೇ ಸ್ಥಳವು ಕೆಲಸದ ಸ್ಥಳವಾಗಿ ಪರಿಣಮಿಸಬಲ್ಲದು ಮತ್ತು ಯಾವುದೇ ಸಮಯವು ಕೆಲಸದ ಸಮಯವಾಗಿ ಬದಲಾಗಬಹುದು, ಹಾಗೂ ಕೆಲವರಂತೂ ತಮಗೆ ಹಾನಿಯಾದರೂ ಸರಿ ವಿಪರೀತವಾಗಿ ಕೆಲಸಮಾಡುವುದನ್ನಂತೂ ನಿಲ್ಲಿಸುವುದಿಲ್ಲ.

ಇಂಥ ಅಹಿತಕರ ಮನೋಭಾವಕ್ಕೆ ಕೆಲವು ಜನರ ಪ್ರತಿಕ್ರಿಯೆಯೇನು? ವಿಪರೀತ ಕೆಲಸ ಮತ್ತು ವಿಪರೀತ ಮಾನಸಿಕ ಒತ್ತಡಕ್ಕೊಳಗಾಗಿರುವ ಜನರ ನಡುವೆ, ಕೆಲಸದ ಸ್ಥಳದಲ್ಲಿ ಆಧ್ಯಾತ್ಮಿಕತೆಯನ್ನು ತಂದು ಧಾರ್ಮಿಕ ಹಾಗೂ ವೃತ್ತಿಪರ ಜೀವನವನ್ನು ಮೇಳೈಸುವುದರ ಒಂದು ಪ್ರವೃತ್ತಿಯನ್ನು ಸಮಾಜಶಾಸ್ತ್ರಜ್ಞರು ಗಮನಿಸಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೊ ಎಕ್ಸಾಮಿನರ್‌ ವರದಿಸಿದ್ದೇನೆಂದರೆ, “ಆಧ್ಯಾತ್ಮಿಕತೆ ಮತ್ತು ಕೆಲಸದ ಮೇಳೈಸುವಿಕೆಯು ಒಂದು ರೀತಿಯ ಸಾರ್ವಜನಿಕ ವಿದ್ಯಮಾನವಾಗಿಬಿಟ್ಟಿದೆ.”

ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಉನ್ನತ ತಂತ್ರಜ್ಞಾನದ ಮುಖ್ಯಕೇಂದ್ರವಾಗಿರುವ ಸಿಲಿಕಾನ್‌ ವ್ಯಾಲಿಯ ಬಗ್ಗೆ, ಇತ್ತೀಚಿನ ವರದಿಯೊಂದು ತಿಳಿಸಿದ್ದು: “ಸಿಬ್ಬಂದಿಯಲ್ಲಿನ ಕಡಿತದಿಂದಾಗಿ ಕಾರ್ಯನಿರ್ವಾಹಕರು ಕೆಲಸದ ಸ್ಥಳಗಳಲ್ಲಿನ ಖಾಲಿ ಪಾರ್ಕಿಂಗ್‌ ಜಾಗಗಳನ್ನು ಎಣಿಸಸಾಧ್ಯವಿದೆ, ಆದರೆ ಸಾಯಂಕಾಲದ ಬೈಬಲ್‌ ಅಧ್ಯಯನ ಕೇಂದ್ರಗಳಲ್ಲಾದರೊ ಪಾರ್ಕಿಂಗ್‌ ಜಾಗಗಳು ಸಾಕಾಗುತ್ತಿಲ್ಲ.” ಇದರ ಅರ್ಥ ಏನೇ ಆಗಿರಲಿ, ಭೂಗೋಳದಾದ್ಯಂತವಂತೂ ಅನೇಕರಿಗೆ, ಬೈಬಲು ಕೆಲಸದ ಕುರಿತಾದ ತಮ್ಮ ನೋಟದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತಾ, ಹೆಚ್ಚು ಸಮತೂಕದ ಜೀವನರೀತಿಯನ್ನು ಫಲಿಸುತ್ತದೆಂಬುದು ತಿಳಿದುಬಂದಿದೆ.

ಕೆಲಸದ ಬಗ್ಗೆ ಸಮತೂಕದ ದೃಷ್ಟಿಕೋನವನ್ನು ಹೊಂದಿರುವಂತೆ ಬೈಬಲ್‌ ನಮಗೆ ಹೇಗೆ ಸಹಾಯಮಾಡಬಲ್ಲದು? ಆಧುನಿಕ ಕೆಲಸಸ್ಥಳದಲ್ಲಿನ ಪಂಥಾಹ್ವಾನಗಳನ್ನು ಯಶಸ್ವಿಕರವಾಗಿ ಎದುರಿಸಲು ನಮಗೆ ಸಹಾಯಮಾಡಬಲ್ಲ ಯಾವುದೇ ಶಾಸ್ತ್ರೀಯ ತತ್ವಗಳು ಇವೆಯೊ? ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಪರಿಗಣಿಸುವುದು.