ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಯಾವುದೇ ಪರೀಕ್ಷೆಯನ್ನು ನಿಭಾಯಿಸಬಲ್ಲೆವು!

ನಾವು ಯಾವುದೇ ಪರೀಕ್ಷೆಯನ್ನು ನಿಭಾಯಿಸಬಲ್ಲೆವು!

ನಾವು ಯಾವುದೇ ಪರೀಕ್ಷೆಯನ್ನು ನಿಭಾಯಿಸಬಲ್ಲೆವು!

ನಿಮ್ಮ ಜೀವನದಲ್ಲಿ ನೀವೀಗ ಯಾವುದಾದರೂ ಪರೀಕ್ಷೆಯನ್ನು ಎದುರಿಸುತ್ತಿದ್ದೀರೊ? ಅದನ್ನು ನಿಭಾಯಿಸಲು ಅಶಕ್ತರಾಗಿ ನಿರಾಶೆಗೊಂಡಿದ್ದೀರೊ? ನಿಮ್ಮ ಸಮಸ್ಯೆ ಸಾಟಿಯಿಲ್ಲದ್ದೆಂದು ಮತ್ತು ಅದಕ್ಕೆ ಪರಿಹಾರವೇ ಇಲ್ಲವೆಂದು ನೀವು ಕೆಲವು ಬಾರಿ ಗಾಬರಿಗೊಳ್ಳುವುದೂ ಉಂಟೊ? ಹಾಗಿರುವಲ್ಲಿ, ಧೈರ್ಯ ತಂದುಕೊಳ್ಳಿ! ನಮ್ಮೆದುರಿಗೆ ಯಾವುದೇ ಪರೀಕ್ಷೆಗಳು ಬರಲಿ, ಅವುಗಳನ್ನು ನಿಭಾಯಿಸಿ ಜಯಿಸಲು ದೇವರು ನಮ್ಮನ್ನು ಶಕ್ತಗೊಳಿಸಬಲ್ಲನೆಂದು ಬೈಬಲು ಆಶ್ವಾಸನೆ ನೀಡುತ್ತದೆ.

ದೇವರ ಸೇವಕರಿಗೆ ‘ನಾನಾವಿಧವಾದ ಕಷ್ಟಗಳು’ ಬರುತ್ತವೆಂಬುದನ್ನು ಬೈಬಲು ಒಪ್ಪಿಕೊಳ್ಳುತ್ತದೆ. (ಯಾಕೋಬ 1:⁠2) “ನಾನಾವಿಧವಾದ” (ಗ್ರೀಕ್‌, ಪೈಕೀಲೋಸ್‌) ಎಂಬ ಪದವನ್ನು ಗಮನಿಸಿರಿ. ಪ್ರಾಚೀನಕಾಲದ ಬಳಕೆಗನುಸಾರ, ಮೂಲ ಪದದ ಅರ್ಥವು “ಬಗೆಬಗೆಯ” ಅಥವಾ “ಬಹುವರ್ಣಗಳ” ಎಂಬುದಾಗಿದ್ದು, ಅದು “ಪರೀಕ್ಷೆಗಳ ವೈವಿಧ್ಯ”ವನ್ನು ಒತ್ತಿಹೇಳುತ್ತದೆ. ವಾಸ್ತವದಲ್ಲಿ, ದಿನನಿತ್ಯದ ಭಾಷೆಯಲ್ಲಿ ಮೂಲತಃ ಅದರ ಅರ್ಥವು “ಅನೇಕ ವರ್ಣಗಳ” ಎಂದಾಗಿದೆ. ಹೀಗೆ, ‘ನಾನಾವಿಧವಾದ ಕಷ್ಟಗಳು’ ಅಂದರೆ ಅನೇಕ ವರ್ಣಗಳಲ್ಲಿ ಬರುವ ಪರೀಕ್ಷೆಗಳು ಎಂದರ್ಥ. ಆದರೂ, ನಾವು ಅವುಗಳಲ್ಲಿ ಪ್ರತಿಯೊಂದನ್ನು ನಿಭಾಯಿಸಲು ಶಕ್ತರಾಗುವಂತೆ ಯೆಹೋವನು ನಮಗೆ ಬೆಂಬಲ ನೀಡುತ್ತಾನೆ. ಇದರ ಬಗ್ಗೆ ನಾವೇಕೆ ಅಷ್ಟು ಖಾತ್ರಿಯಿಂದಿರಬಲ್ಲೆವು?

“ದೇವರ ಅಪಾತ್ರ ಕೃಪೆಯು ವಿವಿಧ ವಿಧಗಳಲ್ಲಿ ವ್ಯಕ್ತ”ವಾಗುತ್ತದೆ

ಕ್ರೈಸ್ತರು ‘ನಾನಾ ಕಷ್ಟಗಳಲ್ಲಿದ್ದು ದುಃಖಿಸುತ್ತಾರೆ’ ಎಂದು ಅಪೊಸ್ತಲ ಪೇತ್ರನು ಹೇಳುತ್ತಾನೆ. (1 ಪೇತ್ರ 1:⁠6) ಬಳಿಕ ತನ್ನ ಪ್ರೇರಿತ ಪತ್ರದಲ್ಲಿ ಅವನು, “ದೇವರ ಅಪಾತ್ರ ಕೃಪೆಯು ವಿವಿಧ ವಿಧಗಳಲ್ಲಿ ವ್ಯಕ್ತ”ವಾಗುತ್ತದೆಂದು ತಿಳಿಸುತ್ತಾನೆ. (1 ಪೇತ್ರ 4:​10, NW) “ವಿವಿಧ ವಿಧಗಳಲ್ಲಿ” ಎಂಬ ಈ ವಾಕ್ಸರಣಿ ಅದೇ ಮೂಲ ಗ್ರೀಕ್‌ ಪದದ ಒಂದು ರೂಪವನ್ನು ಒಳಗೊಂಡಿದೆ. ಈ ಅಭಿವ್ಯಕ್ತಿಯ ಬಗ್ಗೆ ಒಬ್ಬ ಬೈಬಲ್‌ ವಿದ್ವಾಂಸರು ಹೇಳಿದ್ದು: “ಇದು ಗಹನವಾದ ಒಂದು ವಿಚಾರವಾಗಿದೆ . . . ದೇವರ ಅನುಗ್ರಹವನ್ನು [ಇಲ್ಲವೆ, ಅಪಾತ್ರ ಕೃಪೆಯನ್ನು] ಪೈಕೀಲೋಸ್‌ ಎಂದು ಕರೆಯುವುದರ ಅರ್ಥ, ದೇವರ ಕೃಪೆಯು ನಿಭಾಯಿಸಲಾಗದ ಮಾನವ ಸನ್ನಿವೇಶವೇ ಇಲ್ಲ ಎಂದಾಗಿದೆ.” ಅವರು ಇನ್ನೂ ಹೇಳುವುದು: “ದೇವರ ಅನುಗ್ರಹಕ್ಕೆ ವ್ಯವಹರಿಸಲು ಸಾಧ್ಯವಿಲ್ಲದ ಮತ್ತು ನಿಭಾಯಿಸಿ ಜಯಿಸಲು ಆಗದಿರುವ ಯಾವುದೇ ಪರಿಸ್ಥಿತಿ, ಯಾವುದೇ ಬಿಕ್ಕಟ್ಟು, ತುರ್ತು ಪರಿಸ್ಥಿತಿ ಅಥವಾ ಕೋರಿಕೆ ಇರುವುದಿಲ್ಲ. ದೇವರ ಅನುಗ್ರಹವು ಜೀವನದಲ್ಲಿ ನಿಭಾಯಿಸಲಾಗದ ಯಾವುದೇ ಸಂಗತಿಯೂ ಇಲ್ಲ. ಪೈಕೀಲೋಸ್‌ ಎಂಬ ಈ ವರ್ಣನಾತ್ಮಕ ಪದವು, ಯಾವುದು ಸಕಲ ವಿಷಯಗಳಿಗೆ ಸಾಕಾಗುವಷ್ಟು ಪ್ರಮಾಣದಲ್ಲಿದೆಯೊ ಆ ದೇವರ ಅನೇಕ ವರ್ಣಗಳಿರುವ ಅನುಗ್ರಹವನ್ನು ಸ್ಪಷ್ಟವಾಗಿ ನೆನಪಿಗೆ ತರುತ್ತದೆ.”

ಪರೀಕ್ಷೆಗಳನ್ನು ಸಹಿಸಿಕೊಳ್ಳುವುದರಲ್ಲಿ ಅಪಾತ್ರ ಕೃಪೆಯು ಮಾಡುವ ಸಹಾಯ

ಪೇತ್ರನಿಗನುಸಾರ, ದೇವರ ಅಪಾತ್ರ ಕೃಪೆಯು ವ್ಯಕ್ತಪಡಿಸಲ್ಪಡುವ ಒಂದು ವಿಧವು, ಕ್ರೈಸ್ತ ಸಭೆಯಲ್ಲಿರುವ ಬೇರೆ ಬೇರೆ ವ್ಯಕ್ತಿಗಳ ಮುಖಾಂತರವೇ. (1 ಪೇತ್ರ 4:11) ದೇವರ ಸೇವಕರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಆಧ್ಯಾತ್ಮಿಕ ವರಗಳು ಅಥವಾ ಸಾಮರ್ಥ್ಯಗಳಿವೆ. ಇವು ಪರೀಕ್ಷೆಗಳನ್ನು ಎದುರಿಸುತ್ತಿರುವವರಿಗೆ ಪ್ರೋತ್ಸಾಹದ ಮೂಲವಾಗಿ ಪರಿಣಮಿಸಬಲ್ಲದು. (ರೋಮಾಪುರ 12:​6-8) ಉದಾಹರಣೆಗೆ, ಸಭೆಯ ಕೆಲವು ಮಂದಿ ಸದಸ್ಯರು ಎದ್ದುಕಾಣುವ ಬೈಬಲ್‌ ಬೋಧಕರಾಗಿರುತ್ತಾರೆ. ಅವರ ಒಳನೋಟಭರಿತ ಮಾತುಗಳು ಬೇರೆಯವರಿಗೆ ತಾಳಿಕೊಳ್ಳುವಂತೆ ಪ್ರೇರಣೆಯನ್ನೂ ಪ್ರಚೋದನೆಯನ್ನೂ ಕೊಡುತ್ತವೆ. (ನೆಹೆಮೀಯ 8:​1-4, 8, 12) ಇನ್ನಿತರರು ಸಹಾಯ ಬೇಕಾಗಿರುವ ಸಹೋದರರ ಮನೆಗಳಿಗೆ ಕ್ರಮವಾಗಿ ಕುರಿಪಾಲನೆಯ ಭೇಟಿಗಳನ್ನು ಮಾಡುತ್ತಾರೆ. ಇಂತಹ ಭೇಟಿಗಳು ಉತ್ತೇಜನದ ಮತ್ತು ‘ಹೃದಯವನ್ನು ದೃಢ’ಪಡಿಸುವ ಸಂದರ್ಭಗಳಾಗಿರುತ್ತವೆ. (ಕೊಲೊಸ್ಸೆ 2:⁠2) ಮೇಲ್ವಿಚಾರಕರು ಇಂತಹ ನಂಬಿಕೆವರ್ಧಕ ಭೇಟಿಗಳನ್ನು ಮಾಡುವಾಗ, ಅವರು ಆಧ್ಯಾತ್ಮಿಕ ವರವನ್ನು ಕೊಡುತ್ತಿದ್ದಾರೆ. (ಯೋಹಾನ 21:16) ಸಭೆಯಲ್ಲಿರುವ ಇನ್ನಿತರರು, ಪರೀಕ್ಷೆಗಳಿಂದ ದುಃಖಿಸುತ್ತಿರುವ ಜೊತೆವಿಶ್ವಾಸಿಗಳನ್ನು ಸೌಹಾರ್ದತೆ, ಕನಿಕರ ಮತ್ತು ಕೋಮಲತೆಯಿಂದ ಉಪಚರಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. (ಅ. ಕೃತ್ಯಗಳು 4:36; ರೋಮಾಪುರ 12:10; ಕೊಲೊಸ್ಸೆ 3:10) ಇಂತಹ ಪ್ರೀತಿಪೂರ್ಣ ಸೋದರಸೋದರಿಯರು ತೋರಿಸುವ ಪರಾನುಭೂತಿ ಮತ್ತು ಕ್ರಿಯಾಶೀಲ ನೆರವು ದೇವರ ಅಪಾತ್ರ ಕೃಪೆಯ ಗಮನಾರ್ಹ ಅಭಿವ್ಯಕ್ತಿ ಅಥವಾ “ವರ್ಣ”ವಾಗಿದೆ.​—⁠ಜ್ಞಾನೋಕ್ತಿ 12:25; 17:17.

“ಸಕಲ ವಿಧವಾಗಿ ಸಂತೈಸುವ ದೇವರು”

ಎಲ್ಲಕ್ಕೂ ಮಿಗಿಲಾಗಿ, ಯೆಹೋವನು ಸಾಂತ್ವನವನ್ನು ಒದಗಿಸುತ್ತಾನೆ. ಆತನು “ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುತ್ತಾನೆ.” (2 ಕೊರಿಂಥ 1:​3, 4) ಸಹಾಯಕ್ಕಾಗಿ ನಾವು ಮಾಡುವ ಪ್ರಾರ್ಥನೆಗಳಿಗೆ ಯೆಹೋವನು ಉತ್ತರವನ್ನು ಕೊಡುವ ಪ್ರಧಾನ ಮಾಧ್ಯಮಗಳು, ಆತನ ಪ್ರೇರಿತ ವಾಕ್ಯದಲ್ಲಿ ಕಂಡುಬರುವ ವಿವೇಕ ಮತ್ತು ಆತನ ಪವಿತ್ರಾತ್ಮವು ಕೊಡುವ ಬಲವೇ ಆಗಿವೆ. (ಯೆಶಾಯ 30:18, 21; ಲೂಕ 11:13; ಯೋಹಾನ 14:16) ಅಪೊಸ್ತಲ ಪೌಲನು ಮಾಡಿದಂಥ ಪ್ರೇರಿತ ವಾಗ್ದಾನದಿಂದ ನಾವು ಹುರಿದುಂಬಿಸಲ್ಪಡಬಲ್ಲೆವು. ಅವನು ಹೇಳಿದ್ದು: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.”​—⁠1 ಕೊರಿಂಥ 10:13.

ನಮ್ಮ ಪರೀಕ್ಷೆಯ ‘ವರ್ಣ’ ಅಥವಾ ಸ್ವರೂಪ ಯಾವುದೇ ಆಗಿರಲಿ, ಅದಕ್ಕೆ ಸರಿಸಾಟಿಯಲ್ಲಿ ದೇವರ ಅಪಾತ್ರ ಕೃಪೆಯ ಒಂದಲ್ಲ ಒಂದು ‘ವರ್ಣ’ ಅಥವಾ ಅಭಿವ್ಯಕ್ತಿಯು ಸದಾ ಇದ್ದೇ ಇದೆ. (ಯಾಕೋಬ 1:17) ಯೆಹೋವನ ಸೇವಕರಿಗೆ ಬರುವ ಪ್ರಲೋಭನೆಗಳು ಅಥವಾ ಪಂಥಾಹ್ವಾನಗಳು ಎಷ್ಟೇ ವಿಧದವುಗಳಾಗಿರಲಿ, ದೇವರು ಒದಗಿಸುವ ಸಮಯೋಚಿತ ಮತ್ತು ತಕ್ಕದಾದ ಬೆಂಬಲವು ಆತನ “ನಾನಾ ವಿಧವಾದ ಜ್ಞಾನ [“ವಿವೇಕ,” NW]ದ” ಒಂದು ರುಜುವಾತಾಗಿದೆ. (ಎಫೆಸ 3:10) ನೀವು ಇದನ್ನು ಸಮ್ಮತಿಸುವುದಿಲ್ಲವೆ?

[ಪುಟ 31ರಲ್ಲಿರುವ ಚಿತ್ರಗಳು]

ನಮ್ಮ ಪರೀಕ್ಷೆಗಳನ್ನು ನಿಭಾಯಿಸುವಂತೆ ಯೆಹೋವನು ನಮಗೆ ಸಹಾಯಮಾಡುತ್ತಾನೆ