ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾಲೆಯಲ್ಲಿ ಯೆಹೋವನನ್ನು ಸ್ತುತಿಸುವುದು

ಶಾಲೆಯಲ್ಲಿ ಯೆಹೋವನನ್ನು ಸ್ತುತಿಸುವುದು

ಶಾಲೆಯಲ್ಲಿ ಯೆಹೋವನನ್ನು ಸ್ತುತಿಸುವುದು

ಯೆಹೋವನ ಎಳೇ ವಯಸ್ಸಿನ ಸಾಕ್ಷಿಗಳು ಲೋಕವ್ಯಾಪಕವಾಗಿ ಶಾಲೆಯಲ್ಲಿ ತಮ್ಮ ನಡೆನುಡಿಯ ಮುಖಾಂತರ ದೇವರನ್ನು ಸ್ತುತಿಸಲು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಅವರ ಯೌವನಭರಿತ ಹುರುಪನ್ನು ತೋರಿಸುವ ಕೆಲವು ಅನುಭವಗಳಿಗೆ ಗಮನಕೊಡಿರಿ.

ಗ್ರೀಸ್‌ನಲ್ಲಿ ಯುವ ಸಾಕ್ಷಿಯೊಬ್ಬಳು ಭೂಮಿಯ ವಾಯುಮಂಡಲದ ಮಾಲಿನ್ಯದ ಬಗ್ಗೆ ಒಂದು ವರದಿಯನ್ನು ಬರೆಯುವಂತೆ ನೇಮಿಸಲ್ಪಟ್ಟಳು. ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ನಲ್ಲಿ ಹುಡುಕಿದಾಗ, ಆಕೆಗೆ ಎಚ್ಚರ! ಪತ್ರಿಕೆಯಲ್ಲಿ ಉಪಯುಕ್ತವಾದ ಮಾಹಿತಿಯು ದೊರೆಯಿತು. ಆಕೆ ತನ್ನ ಪ್ರಬಂಧದ ಕೊನೆಯಲ್ಲಿ, ಎಚ್ಚರ! ಪತ್ರಿಕೆಯು ಈ ಮಾಹಿತಿಯ ಮೂಲವೆಂದು ಸೂಚಿಸಿದಳು. ಆಕೆಯ ಉಪಾಧ್ಯಾಯಿನಿ ಅದನ್ನು ಓದಿ, ತಾನು ಓದಿರುವವುಗಳಲ್ಲೇ ಇದು ಅತ್ಯುತ್ತಮ ಪ್ರಬಂಧವೆಂದು ಆಕೆಗೆ ಹೇಳಿದಳು. ಆ ಉಪಾಧ್ಯಾಯಿನಿ ಆ ಬಳಿಕ ಅದೇ ಮಾಹಿತಿಯನ್ನು ಒಂದು ವಿಚಾರಸಂಕಿರಣ (ಸೆಮಿನಾರ್‌)ದಲ್ಲಿ ಉಪಯೋಗಿಸಿದಾಗ ಒಳ್ಳೇ ಫಲಿತಾಂಶಗಳನ್ನು ಪಡೆದಳು. ನಮ್ಮ ಯುವ ಸಹೋದರಿ ಉಪಾಧ್ಯಾಯಿನಿಗೆ ಎಚ್ಚರ! ಪತ್ರಿಕೆಯ ಇನ್ನೂ ಹೆಚ್ಚು ಸಂಚಿಕೆಗಳನ್ನು ಕೊಡಲು ನಿಶ್ಚಯಿಸಿದಳು. ಅವುಗಳಲ್ಲಿ ಒಂದು, “ಶಿಕ್ಷಕರು​—⁠ಇಲ್ಲದಿದ್ದಲ್ಲಿ ನಾವೇನು ಮಾಡುತ್ತಿದ್ದೆವು?” ಎಂಬ ಲೇಖನಮಾಲೆಯುಳ್ಳದ್ದಾಗಿತ್ತು. ಆ ಬಳಿಕ, ಆ ಉಪಾಧ್ಯಾಯಿನಿ ಕ್ಲಾಸಿನಲ್ಲಿ ಎಚ್ಚರ! ಪತ್ರಿಕೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದಳು, ಮತ್ತು ಕೆಲವು ವಿದ್ಯಾರ್ಥಿಗಳು ಪ್ರತಿಗಳಿಗಾಗಿ ಕೇಳತೊಡಗಿದರು. ವಿದ್ಯಾರ್ಥಿಗಳು ಬೇರೆ ಸಂಚಿಕೆಗಳನ್ನು ಓದಲಾಗುವಂತೆ ನಮ್ಮ ಸಹೋದರಿ ಆ ಪತ್ರಿಕೆಯ ಪ್ರತಿಗಳನ್ನು ಶಾಲೆಗೆ ತರಬೇಕಾಯಿತು.

ಆಫ್ರಿಕದ ಬೆನಿನ್‌ ದೇಶದಲ್ಲಿ, ಒಬ್ಬ ಹದಿಹರೆಯದ ಕ್ರೈಸ್ತಳು ಅಸಾಮಾನ್ಯ ರೀತಿಯ ಒತ್ತಡವನ್ನು ಎದುರಿಸಿದಳು. ವಾಡಿಕೆಗನುಸಾರ, ಆಕೆಯ ಶಾಲೆಯ ಅನೇಕ ವಿದ್ಯಾರ್ಥಿಗಳ ಹೆತ್ತವರು ಒಟ್ಟುಸೇರಿ, ಆ ಮಕ್ಕಳನ್ನು ಶಾಲಾ ಪರೀಕ್ಷೆಗಳಿಗೆ ತಯಾರುಮಾಡಲು, ಕಷ್ಟಕರವಾದ ವಿಷಯಗಳಿಗಾಗಿ ಖಾಸಗಿ ಶಿಕ್ಷಕರನ್ನು ಕೆಲಸಕ್ಕೆ ಹಿಡಿದರು. ಆದರೆ ಈ ಟ್ಯೂಷನ್‌ಗಳಿಗಾಗಿ ಆ ಶಿಕ್ಷಕರು ಶನಿವಾರ ಬೆಳಗ್ಗಿನ ಸಮಯವನ್ನು ಆರಿಸಿಕೊಂಡರು. ಆಗ ಈ ಯುವ ಸಾಕ್ಷಿಯು, “ಶನಿವಾರ ಬೆಳಗ್ಗೆ ನಮ್ಮ ಇಡೀ ಸಭೆ ಕೂಡಿ ಸಾರುವ ಸಮಯ. ಅದು ಇಡೀ ವಾರದಲ್ಲಿ ನನಗೆ ಅತ್ಯಂತ ಸಂತೋಷವನ್ನು ತರುವ ಸಮಯವಾಗಿದೆ. ಮತ್ತು ನಾನು ಆ ಸಮಯವನ್ನು ಇನ್ನಾವುದಕ್ಕೂ ಬಿಟ್ಟುಕೊಡಲಾರೆ!” ಎಂದು ಹೇಳಿದಳು. ಏಕಹೆತ್ತವನೂ ಯೆಹೋವನ ಸಾಕ್ಷಿಯೂ ಆಗಿರುವ ಆಕೆಯ ತಂದೆ ಇದಕ್ಕೆ ಒಪ್ಪಿ, ಹೆತ್ತವರ ಮತ್ತು ಶಿಕ್ಷಕರ ಒಂದು ಗುಂಪು ಅವರ ಸಮಯತಖ್ತೆಯನ್ನು ಬದಲಾಯಿಸುವಂತೆ ಮಾಡಲು ಪ್ರಯತ್ನಿಸಿದನು. ಆದರೆ ಅವರೆಲ್ಲರೂ ಹಾಗೆ ಮಾಡಲು ನಿರಾಕರಿಸಿದರು. ಆಗ ಈ ಹುಡುಗಿ ತನಗೆ ಆ ಟ್ಯೂಷನ್‌ಗಳೇ ಬೇಡವೆಂದು ನಿರ್ಧರಿಸಿದಳು. ಅದಕ್ಕೆ ಬದಲಾಗಿ ಆಕೆ ತನ್ನ ಸಭೆಯೊಂದಿಗೆ ಸಾರುವ ಕೆಲಸದಲ್ಲಿ ಪಾಲ್ಗೊಂಡಳು. ಆಕೆಯ ಸಹಪಾಠಿಗಳು ಆಕೆಗೆ ಗೇಲಿಮಾಡಿ, ಸಾಕ್ಷಿಕೊಡುವುದನ್ನು ಮತ್ತು ಆಕೆಯ ದೇವರನ್ನೂ ಬಿಟ್ಟುಬಿಡುವಂತೆ ಪ್ರೇರೇಪಿಸಿದರು. ಆಕೆ ಪರೀಕ್ಷೆಯಲ್ಲಿ ಖಂಡಿತ ‘ಫೇಲ್‌’ ಆಗುವಳೆಂಬ ಖಾತರಿ ಅವರಿಗಿತ್ತು. ಆದರೆ ಅಂತಿಮವಾಗಿ ನಡೆದದ್ದೇನೆಂದರೆ, ಟ್ಯೂಷನ್‌ ಪಡೆದಿದ್ದ ಆ ಗುಂಪಿನ ವಿದ್ಯಾರ್ಥಿಗಳೇ ‘ಫೇಲ್‌’ ಆದರು, ಆದರೆ ನಮ್ಮ ಸಹೋದರಿ ‘ಪಾಸ್‌’ ಆದಳು. ಇದರ ಪರಿಣಾಮವಾಗಿ ಅಪಹಾಸ್ಯ ನಿಂತಿತು. “ನೀನು ನಿನ್ನ ದೇವರ ಸೇವೆಮಾಡುವುದನ್ನು ಮುಂದುವರಿಸು” ಎನ್ನುತ್ತಾರೆ ಈಗ ಆ ವಿದ್ಯಾರ್ಥಿಗಳು.

ಚೆಕ್‌ ರಿಪಬ್ಲಿಕ್‌ ದೇಶದಲ್ಲಿ, 12 ವರ್ಷ ವಯಸ್ಸಿನ ಒಬ್ಬ ಹುಡುಗಿಗೆ ಯಾವುದಾದರೊಂದು ಪುಸ್ತಕದ ವಿಷಯದಲ್ಲಿ ಒಂದು ವರದಿಯನ್ನು ತಯಾರಿಸಲಿಕ್ಕಿತ್ತು. ಆಕೆಯ ತಾಯಿ ಆಕೆಗೆ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕದ ಕುರಿತು ವರದಿಯನ್ನು ಬರೆಯುವಂತೆ ಪ್ರೋತ್ಸಾಹಿಸಿದಳು. ಆಕೆ ತನ್ನ ವರದಿಯನ್ನು, “ನೀವೇನು ನೆನಸುತ್ತೀರಿ? ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಯಾರಾಗಿರಬಹುದು?” ಎಂದು ಕೇಳುತ್ತ ಶುರುಮಾಡಿದಳು. ಆಕೆ ಯೇಸುವನ್ನು, ಅವನ ಭೂಜೀವಿತವನ್ನು ಮತ್ತು ಅವನ ಬೋಧನೆಗಳನ್ನು ವರ್ಣಿಸಿದಳು. ಬಳಿಕ ಆಕೆ, “ಕ್ಷಮೆಯ ಒಂದು ಪಾಠ” ಎಂಬ ಅಧ್ಯಾಯವನ್ನು ಚರ್ಚಿಸಿದಳು. ಆಕೆಯ ಶಿಕ್ಷಕಿ ಉದ್ಗರಿಸಿದ್ದು: “ಇದು ನಾನು ನಿನ್ನಿಂದ ಕೇಳಿರುವವುಗಳಲ್ಲೇ ಅತ್ಯುತ್ತಮ ವರದಿಯಾಗಿದೆ.” ಶಿಕ್ಷಕಿ ಆ ಪುಸ್ತಕದ ಒಂದು ಪ್ರತಿಯನ್ನು ಕೃತಜ್ಞತೆಯಿಂದ ಸ್ವೀಕರಿಸಿದಳು. ಕೆಲವು ಜೊತೆ ವಿದ್ಯಾರ್ಥಿಗಳೂ ಅದರ ಪ್ರತಿಯನ್ನು ಪಡೆದುಕೊಳ್ಳಲು ಬಯಸಿದರು. ಮರುದಿನ, ಆ ಪುಸ್ತಕದ 18 ಪ್ರತಿಗಳನ್ನು ಹಂಚುವುದರಲ್ಲಿ ಆ ಹುಡುಗಿ ಸಂತೋಷಪಟ್ಟಳು.

ಇಂತಹ ಎಳೆಯ ಮಕ್ಕಳು ಶಾಲೆಯಲ್ಲಿ ಯೆಹೋವನನ್ನು ಸ್ತುತಿಸುವುದರಲ್ಲಿ ಅಪಾರ ಸಂತೋಷವನ್ನು ಪಡೆದುಕೊಳ್ಳುತ್ತಿದ್ದಾರೆ. ಅವರ ಯೌವನಭರಿತ ಹುರುಪನ್ನು ನಾವೆಲ್ಲರೂ ಅನುಕರಿಸಬೇಕು.