ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದನೇ ಅರಸುಗಳು ಪುಸ್ತಕದ ಮುಖ್ಯಾಂಶಗಳು

ಒಂದನೇ ಅರಸುಗಳು ಪುಸ್ತಕದ ಮುಖ್ಯಾಂಶಗಳು

ಯೆಹೋವನ ವಾಕ್ಯವು ಸಜೀವವಾದದ್ದು

ಒಂದನೇ ಅರಸುಗಳು ಪುಸ್ತಕದ ಮುಖ್ಯಾಂಶಗಳು

“ಶಿಷ್ಟರ ವೃದ್ಧಿ ಜನರಿಗೆ ಉಲ್ಲಾಸ; ದುಷ್ಟನ ಆಳಿಕೆ ಜನರಿಗೆ ನರಳಾಟ.” (ಜ್ಞಾನೋಕ್ತಿ 29:⁠2) ಈ ಜ್ಞಾನೋಕ್ತಿಯ ಸತ್ಯತೆಯನ್ನು ಬೈಬಲಿನ ಒಂದನೇ ಅರಸುಗಳು ಪುಸ್ತಕವು ಸುವ್ಯಕ್ತವಾಗಿ ತೋರಿಸಿಕೊಡುತ್ತದೆ. ಅದು ಸೊಲೊಮೋನನ ಜೀವನ ಚರಿತ್ರೆಯನ್ನು ವ್ಯಾಖ್ಯಾನಿಸುತ್ತದೆ. ಅವನ ರಾಜತ್ವದ ಸಮಯದಲ್ಲೇ ಪುರಾತನ ಇಸ್ರಾಯೇಲ್‌ ಭದ್ರತೆ ಮತ್ತು ಮಹಾ ಸಮೃದ್ಧಿಯಲ್ಲಿ ಆನಂದಿಸಿತು. ಸೊಲೊಮೋನನ ಮರಣಾನಂತರ ಆ ರಾಜ್ಯವು ಹೇಗೆ ವಿಭಾಗವಾಯಿತು ಎಂಬುದರ ಕುರಿತಾದ ವೃತ್ತಾಂತ ಮತ್ತು ಸೊಲೊಮೋನನ ನಂತರ ಬಂದ 14 ಮಂದಿ ಅರಸರ ವೃತ್ತಾಂತವು ಒಂದನೇ ಅರಸುಗಳು ಪುಸ್ತಕದಲ್ಲಿದೆ. ಕೆಲವರು ಇಸ್ರಾಯೇಲಿನಲ್ಲಿ ಮತ್ತು ಇನ್ನು ಕೆಲವರು ಯೆಹೂದದಲ್ಲಿ ಆಳಿದರು. ಆದರೆ ಈ ಅರಸರಲ್ಲಿ ಇಬ್ಬರು ಮಾತ್ರ ಯೆಹೋವನಿಗೆ ಎಡೆಬಿಡದೆ ನಂಬಿಗಸ್ತರಾಗಿದ್ದರು. ಇದಲ್ಲದೆ, ಈ ಪುಸ್ತಕವು ಎಲೀಯನನ್ನು ಸೇರಿಸಿ ಆರು ಮಂದಿ ಪ್ರವಾದಿಗಳ ಚಟುವಟಿಕೆಗಳನ್ನು ವರ್ಣಿಸುತ್ತದೆ.

ಪ್ರವಾದಿಯಾಗಿದ್ದ ಯೆರೆಮೀಯನು, ಯೆರೂಸಲೇಮ್‌ ಮತ್ತು ಯೆಹೂದದಲ್ಲಿ ಬರೆದಂಥ ಈ ಪುಸ್ತಕದಲ್ಲಿ ಸುಮಾರು 129 ವರುಷಗಳ ಅಂದರೆ ಸಾ.ಶ.ಪೂ. 1040ರಿಂದ ಸಾ.ಶ.ಪೂ. 911ರ ವರೆಗಿನ ಕಥನವಿದೆ. ಈ ಪುಸ್ತಕವನ್ನು ಸಂಕಲಿಸುವಾಗ, ಯೆರೆಮೀಯನು “ಸೊಲೊಮೋನನ ಚರಿತ್ರ”ದಂತಹ ಪುರಾತನ ದಾಖಲೆಗಳನ್ನು ಪರಿಶೀಲಿಸಿರಬೇಕೆಂಬುದು ವ್ಯಕ್ತ. ಈ ಪ್ರತ್ಯೇಕ ದಾಖಲೆಗಳು ಈಗ ಅಸ್ತಿತ್ವದಲ್ಲಿಲ್ಲ.​—⁠1 ಅರಸುಗಳು 11:41; 14:19; 15:⁠7.

ವಿವೇಕಿಯಾದ ಅರಸನು ಶಾಂತಿ ಮತ್ತು ಸಮೃದ್ಧಿಯನ್ನು ವರ್ಧಿಸುತ್ತಾನೆ

(1 ಅರಸುಗಳು 1:​1–11:43)

ಒಂದನೇ ಅರಸುಗಳು ಪುಸ್ತಕವು, ಅರಸ ದಾವೀದನ ಪುತ್ರನಾಗಿದ್ದ ಅದೋನೀಯನು ತನ್ನ ತಂದೆಯಿಂದ ರಾಜತ್ವವನ್ನು ಕಿತ್ತುಕೊಳ್ಳುವ ಪ್ರಯತ್ನದ ಕುರಿತಾದ ಒಂದು ಆಸಕ್ತಿ ಕೆರಳಿಸುವ ವೃತ್ತಾಂತದಿಂದ ಆರಂಭಗೊಳ್ಳುತ್ತದೆ. ಆದರೆ ಪ್ರವಾದಿ ನಾತಾನನು ತಡಮಾಡದೆ ಒಡನೆಯೇ ತೆಗೆದುಕೊಂಡ ಕ್ರಮವು ಆ ಪ್ರಯತ್ನವನ್ನು ಭಂಗಪಡಿಸುತ್ತದೆ ಮತ್ತು ದಾವೀದನ ಪುತ್ರ ಸೊಲೊಮೋನನನ್ನು ಅರಸನನ್ನಾಗಿ ಮಾಡಲಾಗುತ್ತದೆ. ಹೊಸದಾಗಿ ಪಟ್ಟವನ್ನೇರಿದ ಅರಸನ ಬಿನ್ನಹದಿಂದ ಸಂತುಷ್ಟನಾದ ಯೆಹೋವನು ಅವನಿಗೆ “ಜ್ಞಾನವನ್ನೂ ವಿವೇಕವನ್ನೂ” ‘ಐಶ್ವರ್ಯ ಮತ್ತು ಘನವನ್ನೂ’ ಕೊಡುತ್ತಾನೆ. (1 ಅರಸುಗಳು 3:​12, 13) ಅರಸನ ವಿವೇಕವು ಅಪ್ರತಿಮವೂ ಅವನ ಐಶ್ವರ್ಯವು ಅತುಲ್ಯವೂ ಆಗಿದೆ. ಇಸ್ರಾಯೇಲು ಶಾಂತಿ ಮತ್ತು ಸಮೃದ್ಧಿಯ ಅವಧಿಯನ್ನು ಅನುಭೋಗಿಸುತ್ತದೆ.

ಸೊಲೊಮೋನನು ಕಟ್ಟಿ ಮುಗಿಸಿದ ಕಟ್ಟಡ ಯೋಜನೆಗಳಲ್ಲಿ ಯೆಹೋವನ ದೇವಾಲಯ ಮತ್ತು ವಿವಿಧ ಸರಕಾರೀ ಭವನಗಳಿವೆ. ಯೆಹೋವನು ಅರಸನಾದ ಸೊಲೊಮೋನನಿಗೆ, ಅವನು ವಿಧೇಯನಾಗಿರುವಲ್ಲಿ, “ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು” ಎಂಬ ಆಶ್ವಾಸನೆಯನ್ನು ಕೊಡುತ್ತಾನೆ. (1 ಅರಸುಗಳು 9:​4, 5) ಅವಿಧೇಯನಾಗುವುದರ ಪರಿಣಾಮಗಳ ಕುರಿತು ಎಚ್ಚರಿಕೆಯನ್ನೂ ಸತ್ಯದೇವರು ಕೊಡುತ್ತಾನೆ. ಆದರೆ ಸೊಲೊಮೋನನು ಕ್ರಮೇಣ ಅನೇಕ ವಿದೇಶೀ ಪತ್ನಿಯರನ್ನು ಮಾಡಿಕೊಳ್ಳುತ್ತಾನೆ. ಅವರ ಪ್ರಭಾವದ ಕಾರಣ ಅವನು ತನ್ನ ಮುದಿಪ್ರಾಯದಲ್ಲಿ ಮಿಥ್ಯಾರಾಧನೆಯಲ್ಲಿ ತೊಡಗುತ್ತಾನೆ. ಅವನ ರಾಜ್ಯವು ವಿಭಾಗವಾಗುವುದೆಂದು ಯೆಹೋವನು ಮುಂತಿಳಿಸುತ್ತಾನೆ. ಸಾ.ಶ.ಪೂ. 997ರಲ್ಲಿ ಸೊಲೊಮೋನನು ಸಾಯುತ್ತಾನೆ ಮತ್ತು ಹೀಗೆ ಅವನ 40 ವರ್ಷಾವಧಿಯ ಆಳಿಕೆಯು ಮುಗಿಯುತ್ತದೆ. ಅವನ ಪುತ್ರ ರೆಹಬ್ಬಾಮನು ಸಿಂಹಾಸನವನ್ನೇರುತ್ತಾನೆ.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

1:​5​—⁠ದಾವೀದನು ಇನ್ನೂ ಜೀವಿತನಾಗಿದ್ದಾಗಲೇ ಅದೋನೀಯನು ಅವನ ಸಿಂಹಾಸನವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದೇಕೆ? ಇದಕ್ಕೆ ಕಾರಣವನ್ನು ಬೈಬಲು ತಿಳಿಸುವುದಿಲ್ಲ. ಆದರೂ, ಅದೋನೀಯನ ಅಣ್ಣಂದಿರಾದ ಅಮ್ನೋನನೂ ಅಬ್ಷಾಲೋಮನೂ ಈಗಾಗಲೇ ಸತ್ತಿದ್ದ ಕಾರಣ ಮತ್ತು ದಾವೀದನ ಪುತ್ರ ಕಿಲಾಬನೂ ಪ್ರಾಯಶಃ ಸತ್ತಿದ್ದ ಕಾರಣ, ದಾವೀದನ ಉಳಿದಿದ್ದ ಪುತ್ರರಲ್ಲಿ ಹಿರಿಯನಾಗಿದ್ದ ತನಗೆ ಸಿಂಹಾಸನವನ್ನೇರುವ ಹಕ್ಕಿದೆಯೆಂದು ಅದೋನೀಯನು ನೆನಸಿದ್ದಿರಬಹುದು. (2 ಸಮುವೇಲ 3:2-4; 13:28, 29; 18:14-17) ಬಲಾಢ್ಯ ಸೇನಾಪತಿಯಾಗಿದ್ದ ಯೋವಾಬನ ಮತ್ತು ಪ್ರಭಾವಶಾಲಿ ಮಹಾಯಾಜಕನಾದ ಎಬ್ಯಾತಾರನ ಬೆಂಬಲವನ್ನು ಈ ಮೊದಲೇ ಪಡೆದುಕೊಂಡದ್ದರಿಂದ, ತನ್ನ ಪ್ರಯತ್ನವು ಕೈಗೂಡುವುದೆಂಬ ಭರವಸೆ ಅದೋನೀಯನಿಗೆ ಇದ್ದಿರಬಹುದು. ಸೊಲೊಮೋನನು ಪಟ್ಟಕ್ಕೆ ಬರಬೇಕೆಂಬ ದಾವೀದನ ಇರಾದೆ ಅದೋನೀಯನಿಗೆ ಗೊತ್ತಿತ್ತೊ ಇಲ್ಲವೊ ಎಂಬುದನ್ನು ಬೈಬಲು ತಿಳಿಸುವುದಿಲ್ಲ. ಆದರೂ, ಅದೋನೀಯನು ಸೊಲೊಮೋನನನ್ನಾಗಲಿ ದಾವೀದನಿಗೆ ನಿಷ್ಠೆ ತೋರಿಸುತ್ತಿದ್ದ ಇತರರನ್ನಾಗಲಿ ಒಂದು ‘ಯಜ್ಞಕ್ಕೆ’ ಆಮಂತ್ರಿಸಲಿಲ್ಲ. (1 ಅರಸುಗಳು 1:​9, 10) ಅವನು ಸೊಲೊಮೋನನನ್ನು ತನ್ನ ಪ್ರತಿಸ್ಪರ್ಧಿಯಾಗಿ ಕಂಡನೆಂದು ಇದು ಸೂಚಿಸುತ್ತದೆ.

1:​49-53; 2:​13-25​—⁠ಸೊಲೊಮೋನನು ಅದೋನೀಯನನ್ನು ಕ್ಷಮಿಸಿದ ಬಳಿಕ ಅವನನ್ನು ವಧಿಸಿದ್ದೇಕೆ? ಅಬೀಷಗ್‌ ಎಂಬವಳನ್ನು ತನಗೆ ಪತ್ನಿಯಾಗಿ ಅರಸನು ಕೊಡಬೇಕೆಂಬ ಅದೋನೀಯನ ಬಿನ್ನಹದ ಹಿಂದೆ ಇದ್ದ ಹೇತುವು ಬತ್ಷೆಬೆಗೆ ತಿಳಿಯದೆ ಹೋಗಿದ್ದರೂ, ಸೊಲೊಮೋನನು ಅದನ್ನು ವಿವೇಚಿಸಿ ತಿಳಿದಿದ್ದನು. ದಾವೀದನು ಅಬೀಷಗ್‌ಳನ್ನು ಕೂಡಿರದಿದ್ದರೂ ಆ ಸುಂದರಿಯನ್ನು ಅವನ ಉಪಪತ್ನಿಯಾಗಿ ನೋಡಲಾಗುತ್ತಿತ್ತು. ಆ ಸಮಯದ ಪದ್ಧತಿಯಂತೆ, ಆಕೆ ದಾವೀದನ ಕಾನೂನುಬದ್ಧ ಉತ್ತರಾಧಿಕಾರಿಯ ಸ್ವತ್ತು ಮಾತ್ರ ಆಗಲಿದ್ದಳು. ಆದುದರಿಂದ ಅಬೀಷಗ್‌ಳನ್ನು ತನ್ನ ಪತ್ನಿಯಾಗಿ ತೆಗೆದುಕೊಳ್ಳುವಲ್ಲಿ ತಾನು ಪುನಃ ಸಿಂಹಾಸನವನ್ನೇರುವ ಪ್ರಯತ್ನವನ್ನು ಮಾಡಬಹುದೆಂದು ಅದೋನೀಯನು ನೆನಸಿರಬಹುದು. ಅದೋನೀಯನ ಈ ಬಿನ್ನಹವು ರಾಜತ್ವಕ್ಕಾಗಿರುವ ಹೆಬ್ಬಯಕೆಯಾಗಿದೆಯೆಂದು ತೀರ್ಮಾನಿಸಿದ ಸೊಲೊಮೋನನು ಕ್ಷಮೆಯನ್ನು ರದ್ದುಮಾಡಿದನು.

6:​37-8:2​—⁠ದೇವಾಲಯವನ್ನು ಯಾವಾಗ ಪ್ರತಿಷ್ಠಾಪಿಸಲಾಯಿತು? ಸೊಲೊಮೋನನ ಆಳಿಕೆಯ 11ನೆಯ ವರುಷ, ಅಂದರೆ ಸಾ.ಶ.ಪೂ. 1027ರ ಎಂಟನೆಯ ತಿಂಗಳಿನಲ್ಲಿ ದೇವಾಲಯವನ್ನು ಕಟ್ಟಿ ಮುಗಿಸಲಾಯಿತು. ಸಜ್ಜುಗೊಳಿಸುವಿಕೆ ಮತ್ತು ಬೇರೆ ಸಿದ್ಧತೆಗಳನ್ನು ಮಾಡಲು 11 ತಿಂಗಳುಗಳು ಹಿಡಿದಿರುವಂತೆ ತೋರುತ್ತದೆ. ಪ್ರತಿಷ್ಠಾಪನೆಯು ಸಾ.ಶ.ಪೂ. 1026ನೆಯ ವರುಷದ ಏಳನೆಯ ತಿಂಗಳಿನಲ್ಲಿ ನಡೆದಿರಬೇಕು. ಕಟ್ಟಡ ಕಾರ್ಯಸರಣಿಗಳ ಕುರಿತಾದ ಪೂರ್ತಿ ವರ್ಣನೆಯನ್ನು ಕೊಡಲಿಕ್ಕಾಗಿಯೇ, ದೇವಾಲಯವನ್ನು ಕಟ್ಟಿ ಮುಗಿಸಿದ ಮೇಲೆ ಮತ್ತು ಅದರ ಪ್ರತಿಷ್ಠಾಪನೆಯ ಬಗ್ಗೆ ತಿಳಿಸುವ ಮುಂಚೆ, ಈ ವೃತ್ತಾಂತವು ಬೇರೆ ನಿರ್ಮಾಣ ಯೋಜನೆಗಳ ಕುರಿತು ವರ್ಣಿಸುತ್ತದೆ.​—⁠2 ಪೂರ್ವಕಾಲವೃತ್ತಾಂತ 5:​1-3.

9:​10-13​—⁠ಸೊಲೊಮೋನನು ತೂರಿನ ಅರಸನಾದ ಹೀರಾಮನಿಗೆ ಗಲಿಲಾಯ ಪ್ರಾಂತದಲ್ಲಿ ಕೊಟ್ಟ 20 ಪಟ್ಟಣಗಳ ದಾನವು ಮೋಶೆಯ ಧರ್ಮಶಾಸ್ತ್ರಕ್ಕನುಸಾರವಾಗಿತ್ತೊ? ಯಾಜಕಕಾಂಡ 25:​23, 24ರಲ್ಲಿ ಕೊಡಲಾಗಿರುವ ನಿಯಮವು ಇಸ್ರಾಯೇಲ್ಯರು ನೆಲೆಸಿದ್ದ ಪ್ರದೇಶಗಳಿಗೆ ಮಾತ್ರ ಅನ್ವಯಿಸಲ್ಪಟ್ಟಿರಸಾಧ್ಯವಿತ್ತು. ಸೊಲೊಮೋನನು ಹೀರಾಮನಿಗೆ ಕೊಟ್ಟ ಪಟ್ಟಣಗಳು ವಾಗ್ದತ್ತ ದೇಶದ ಮೇರೆಯೊಳಗಿದ್ದರೂ, ಇಸ್ರಾಯೇಲ್ಯರಲ್ಲದವರು ವಾಸಿಸುತ್ತಿದ್ದ ಪಟ್ಟಣಗಳಾಗಿರುವ ಸಾಧ್ಯತೆಯಿದೆ. (ವಿಮೋಚನಕಾಂಡ 23:31) ಸೊಲೊಮೋನನ ಈ ವರ್ತನೆಯು, ಅವನು ‘ಕುದುರೆಯ ದಂಡನ್ನು ಕೂಡಿಸಿದಾಗ’ ಮತ್ತು ಅನೇಕ ಹೆಂಡತಿಯರನ್ನು ಮಾಡಿಕೊಂಡಾಗ ಹೇಗೆ ಧರ್ಮಶಾಸ್ತ್ರಕ್ಕನುಗುಣವಾಗಿ ಪೂರ್ತಿಯಾಗಿ ನಡೆದುಕೊಳ್ಳಲು ತಪ್ಪಿಹೋದನೊ ಹಾಗೆಯೇ ಈ ವಿಷಯದಲ್ಲೂ ಅವನು ತಪ್ಪಿಹೋಗಿರುವುದನ್ನು ಸಹ ಸೂಚಿಸಸಾಧ್ಯವಿತ್ತು. (ಧರ್ಮೋಪದೇಶಕಾಂಡ 17:​16, 17) ವಿಷಯವು ಏನೇ ಆಗಿದ್ದಿರಲಿ, ಹೀರಾಮನಿಗೆ ಆ ದಾನ ಇಷ್ಟವಾಗಲಿಲ್ಲ. ಒಂದುವೇಳೆ ಆ ಪಟ್ಟಣಗಳ ವಿಧರ್ಮಿ ನಿವಾಸಿಗಳು ಅವುಗಳನ್ನು ದುರಸ್ತಾಗಿ ಇಟ್ಟಿರದೆ ಇದ್ದಿರಬಹುದು ಅಥವಾ ಆ ಪಟ್ಟಣಗಳ ನೆಲೆ ಯೋಗ್ಯವಾಗಿರದೇ ಇದ್ದಿರಬಹುದು.

11:​4​—⁠ಸೊಲೊಮೋನನು ತನ್ನ ವೃದ್ಧಾಪ್ಯದಲ್ಲಿ ಅಪನಂಬಿಗಸ್ತನಾದದ್ದು ಮುಪ್ಪಿನ ದೌರ್ಬಲ್ಯದ ಕಾರಣದಿಂದಲೋ? ಇದು ಕಾರಣವಾಗಿರಲಿಕ್ಕಿಲ್ಲವೆಂದು ತೋರುತ್ತದೆ. ಸೊಲೊಮೋನನು ಆಳತೊಡಗಿದಾಗ ಎಳೆಯ ಪ್ರಾಯದವನಾಗಿದ್ದನು ಮತ್ತು ಅವನು 40 ವರುಷ ಆಳಿದರೂ ಮುದಿಪ್ರಾಯವನ್ನು ತಲಪಲಿಲ್ಲ. ಇದಲ್ಲದೆ, ಅವನು ಯೆಹೋವನನ್ನು ಆರಾಧಿಸುವುದನ್ನು ಪೂರ್ಣವಾಗಿ ಬಿಟ್ಟಿರಲಿಲ್ಲ. ಅವನು ಒಂದು ರೀತಿಯ ಮಿಶ್ರನಂಬಿಕೆಯನ್ನು ಅನುಸರಿಸಲು ಪ್ರಯತ್ನಿಸಿದನೆಂದು ವ್ಯಕ್ತವಾಗುತ್ತದೆ.

ನಮಗಾಗಿರುವ ಪಾಠಗಳು:

2:​26, 27, 35. ಯೆಹೋವನು ಮುಂತಿಳಿಸುವ ಸಂಗತಿಗಳೆಲ್ಲ ಯಾವಾಗಲೂ ನೆರವೇರುತ್ತವೆ. ಏಲಿಯ ವಂಶಸ್ಥನಾದ ಎಬ್ಯಾತಾರನ ಪದಚ್ಯುತಿಯಿಂದಾಗಿ, ಯೆಹೋವನು “ಏಲಿಯ ಮನೆಯನ್ನು ಕುರಿತು ಹೇಳಿದ ಮಾತು ನೆರವೇರಿತು.” ಎಬ್ಯಾತಾರನ ಸ್ಥಾನದಲ್ಲಿ ಫೀನೆಹಾಸನ ವಂಶದ ಚಾದೋಕನನ್ನು ಭರ್ತಿಮಾಡಿದ್ದು ಅರಣ್ಯಕಾಂಡ 25:10-13ರ ನೆರವೇರಿಕೆಯಾಗಿತ್ತು.​—⁠ವಿಮೋಚನಕಾಂಡ 6:25; 1 ಸಮುವೇಲ 2:31; 3:12; 1 ಪೂರ್ವಕಾಲವೃತ್ತಾಂತ 24:​3.

2:​37, 41-46. ದೇವರ ನಿಯಮಗಳನ್ನು ಮುರಿದು ದಂಡನೆಯನ್ನು ತಪ್ಪಿಸಿಕೊಳ್ಳಬಹುದೆಂದು ನೆನಸುವುದು ಎಷ್ಟು ಅಪಾಯಕರ! ‘ಜೀವಕ್ಕೆ ನಡೆಸುವ ಇಕ್ಕಟ್ಟಾದ ಮಾರ್ಗ’ದಿಂದ ಬೇಕೆಂದು ತಿರುಗಿ ಹೋಗುವವರು ಆ ಅವಿವೇಕದ ನಿರ್ಣಯದ ಫಲಗಳನ್ನು ಕೊಯ್ಯುವರು.​—⁠ಮತ್ತಾಯ 7:14.

3:​9, 12-14. ಯೆಹೋವನ ಸೇವಕರು ಆತನ ಸೇವೆಯನ್ನು ಮಾಡುತ್ತ ಹೋಗಲು ವಿವೇಕ, ತಿಳಿವಳಿಕೆ ಮತ್ತು ಮಾರ್ಗದರ್ಶನಕ್ಕಾಗಿ ಯಥಾರ್ಥಚಿತ್ತದಿಂದ ಬೇಡುವಲ್ಲಿ, ಅವರ ಪ್ರಾರ್ಥನೆಗಳಿಗೆ ಆತನು ಉತ್ತರಕೊಡುತ್ತಾನೆ.​—⁠ಯಾಕೋಬ 1:⁠5.

8:​22-53. ಪ್ರೀತಿಪೂರ್ವಕ ದಯೆಯ ದೇವರು, ವಾಗ್ದಾನಗಳನ್ನು ಈಡೇರಿಸುವಾತನು ಮತ್ತು ಪ್ರಾರ್ಥನೆಗಳನ್ನು ಆಲಿಸುವಾತನು ಆದ ಯೆಹೋವನಿಗೆ ಸೊಲೊಮೋನನು ಎಷ್ಟು ಹೃತ್ಪೂರ್ವಕವಾದ ಕೃತಜ್ಞತೆಯನ್ನು ಸಲ್ಲಿಸಿದನು! ಸೊಲೊಮೋನನು ಪ್ರತಿಷ್ಠಾಪನೆಯ ಸಮಯದಲ್ಲಿ ಮಾಡಿದ ಪ್ರಾರ್ಥನೆಯ ಕುರಿತು ಧ್ಯಾನಿಸುವುದು, ದೇವರ ವ್ಯಕ್ತಿತ್ವದ ಈ ಅಂಶಗಳಿಗೂ ಇತರ ಅಂಶಗಳಿಗೂ ನಮ್ಮ ಗಣ್ಯತೆಯನ್ನು ವರ್ಧಿಸುವುದು.

11:​9-14, 23, 26. ಸೊಲೊಮೋನನು ತದನಂತರದ ವರುಷಗಳಲ್ಲಿ ಅವಿಧೇಯನಾದಾಗ, ಯೆಹೋವನು ಅವನ ವಿರುದ್ಧ ವೈರಿಗಳನ್ನು ಎಬ್ಬಿಸಿದನು. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ” ಎಂದು ಅಪೊಸ್ತಲ ಪೇತ್ರನು ಹೇಳಿದನು.​—⁠1 ಪೇತ್ರ 5:⁠5.

11:​30-40. ಅಹೀಯನು ಯಾರೊಬ್ಬಾಮನ ವಿಷಯದಲ್ಲಿ ಪ್ರವಾದಿಸಿದ ಸಂಗತಿಗಳ ಕಾರಣ ಅರಸ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಪ್ರಯತ್ನಿಸಿದನು. ಇದು, ಸುಮಾರು 40 ವರುಷಗಳ ಹಿಂದೆ ಅದೋನೀಯನ ಮತ್ತು ಬೇರೆ ದ್ರೋಹಿಗಳ ವಿರುದ್ಧ ಸೇಡು ತೀರಿಸಲು ನಿರಾಕರಿಸಿದ್ದ ಇದೇ ಅರಸನ ಪ್ರತಿವರ್ತನೆಗಿಂತ ಎಷ್ಟು ಭಿನ್ನವಾಗಿತ್ತು! (1 ಅರಸುಗಳು 1:​50-53) ಮನೋಭಾವದಲ್ಲಾದ ಈ ಬದಲಾವಣೆಗೆ ಅವನು ಯೆಹೋವನನ್ನು ತೊರೆದು ಹೋದದ್ದೇ ಕಾರಣವಾಗಿತ್ತು.

ಐಕ್ಯರಾಜ್ಯವು ವಿಭಾಗವಾಗುತ್ತದೆ

(1 ಅರಸುಗಳು 12:​1–22:53)

ಯಾರೊಬ್ಬಾಮನೂ ಜನರೂ ಅರಸ ರೆಹಬ್ಬಾಮನ ಬಳಿಗೆ ಬಂದು ಅವನ ತಂದೆ ಸೊಲೊಮೋನನು ಹೇರಿದ್ದ ಹೊರೆಗಳನ್ನು ಕಡಮೆಮಾಡುವಂತೆ ಕೇಳಿಕೊಳ್ಳುತ್ತಾರೆ. ಆದರೆ ಅವರ ಬಿನ್ನಹವನ್ನು ಪೂರೈಸುವ ಬದಲಾಗಿ ರೆಹಬ್ಬಾಮನು ಅವರ ಹೊರೆಯನ್ನು ಹೆಚ್ಚಿಸುವ ಬೆದರಿಕೆಯನ್ನು ಹಾಕುತ್ತಾನೆ. ಆಗ ಆ ಹತ್ತು ಕುಲಗಳವರು ದಂಗೆಯೆದ್ದು ಯಾರೊಬ್ಬಾಮನನ್ನು ತಮ್ಮ ಅರಸನನ್ನಾಗಿ ಮಾಡಿಕೊಳ್ಳುತ್ತಾರೆ. ಹೀಗೆ ರಾಜ್ಯವು ಒಡೆದುಹೋಗುತ್ತದೆ. ರೆಹಬ್ಬಾಮನು ಯೆಹೂದ ಮತ್ತು ಬೆನ್ಯಾಮೀನ್‌ ಕುಲಗಳಿದ್ದ ದಕ್ಷಿಣ ರಾಜ್ಯವನ್ನೂ, ಯಾರೊಬ್ಬಾಮನು ಹತ್ತು ಕುಲಗಳ ಉತ್ತರದ ಇಸ್ರಾಯೇಲ್‌ ರಾಜ್ಯವನ್ನೂ ಆಳುತ್ತಾರೆ.

ಆದರೆ, ಆರಾಧನೆಗಾಗಿ ಜನರು ಯೆರೂಸಲೇಮಿಗೆ ಹೋಗುವುದನ್ನು ನಿರುತ್ತೇಜಿಸಲು ಯಾರೊಬ್ಬಾಮನು ಎರಡು ಬಂಗಾರದ ಬಸವಗಳನ್ನು, ಒಂದನ್ನು ದಾನ್‌ನಲ್ಲಿ ಮತ್ತು ಇನ್ನೊಂದನ್ನು ಬೇತೇಲಿನಲ್ಲಿ ಸ್ಥಾಪಿಸುತ್ತಾನೆ. ಯಾರೊಬ್ಬಾಮನ ತರುವಾಯ ಇಸ್ರಾಯೇಲಿನಲ್ಲಿ ಅರಸರಾಗಿ ಆಳಿದವರಲ್ಲಿ ನಾದಾಬ, ಬಾಷ, ಏಲ, ಜಿಮ್ರಿ, ತಿಬ್ನಿ, ಒಮ್ರಿ, ಅಹಾಬ ಮತ್ತು ಅಹಜ್ಯರೆಂಬವರಿದ್ದರು. ಯೆಹೂದದಲ್ಲಿ ರೆಹಬ್ಬಾಮನ ತರುವಾಯ ಅಬೀಯಾಮ, ಆಸ, ಯೆಹೋಷಾಫಾಟ ಮತ್ತು ಯೆಹೋರಾಮರು ಆಳಿದರು. ಈ ಅರಸರ ಕಾಲದಲ್ಲಿ ಕ್ರಿಯಾಶೀಲರಾಗಿದ್ದ ಪ್ರವಾದಿಗಳು, ಅಹೀಯ, ಶೆಮಾಯ, ದೇವರ ಒಬ್ಬ ಅನಾಮಿಕ ಮನುಷ್ಯನು ಹಾಗೂ ಯೇಹು, ಎಲೀಯ ಮತ್ತು ಮೀಕಾಯೆಹು ಆಗಿದ್ದರು.

ಉತ್ತರಿಸಲ್ಪಟ್ಟಿರುವ ಶಾಸ್ತ್ರೀಯ ಪ್ರಶ್ನೆಗಳು:

18:​21​—⁠ಯೆಹೋವನನ್ನು ಹಿಂಬಾಲಿಸಿರಿ ಇಲ್ಲವೆ ಬಾಳನನ್ನು ಹಿಂಬಾಲಿಸಿರಿ ಎಂದು ಎಲೀಯನು ಹೇಳಿದಾಗ ಜನರು ಸುಮ್ಮನಿದ್ದದ್ದೇಕೆ? ಯೆಹೋವನು ಕೇಳಿಕೊಳ್ಳುವ ಸಂಪೂರ್ಣ ಭಕ್ತಿಯನ್ನು ಕೊಡಲು ತಾವು ತಪ್ಪಿದ್ದೇವೆ ಎಂಬುದನ್ನು ಅವರು ಗುರುತಿಸಿದ್ದರಿಂದ ಮತ್ತು ಇದರಿಂದಾಗಿ ಅವರಲ್ಲಿ ಅಪರಾಧಿಭಾವವು ಇದ್ದದರಿಂದ ಅವರು ಹಾಗೆ ಸುಮ್ಮನಿದ್ದಿರಬಹುದು. ಅಥವಾ ತಾವು ಯೆಹೋವನ ಆರಾಧಕರು ಎಂದು ಹೇಳಿಕೊಳ್ಳುತ್ತಿದ್ದರೂ ಅದೇ ಸಮಯದಲ್ಲಿ ಬಾಳನ ಆರಾಧನೆಯನ್ನು ಮಾಡುವುದರಲ್ಲಿ ಏನೂ ತಪ್ಪಿರಲಿಕ್ಕಿಲ್ಲವೆಂದು ನೆನಸುವಷ್ಟರ ಮಟ್ಟಿಗೆ ಅವರ ಮನಸ್ಸಾಕ್ಷಿಗಳು ಕಠಿನವಾಗಿದ್ದಿರಬಹುದು. ಯೆಹೋವನು ತನ್ನ ಶಕ್ತಿಯನ್ನು ತೋರ್ಪಡಿಸಿದ ಬಳಿಕವೇ ಅವರು “ಯೆಹೋವನೇ ದೇವರು, ಯೆಹೋವನೇ ದೇವರು” ಎಂದು ಹೇಳಿದರು.​—⁠1 ಅರಸುಗಳು 18:39.

20:34​​—⁠ಯೆಹೋವನು ಅಹಾಬನಿಗೆ ಅರಾಮ್ಯರ ಮೇಲೆ ಜಯಕೊಟ್ಟಾಗ ಅಹಾಬನು ಅವರ ಅರಸ ಬೆನ್ಹದದನನ್ನು ಸಾಯಿಸದೆ ಉಳಿಸಿದ್ದೇಕೆ? ಬೆನ್ಹದದನನ್ನು ಸಾಯಿಸುವ ಬದಲಾಗಿ ಅಹಾಬನು ಅವನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಇದರಿಂದಾಗಿ ಸಿರಿಯದ ರಾಜಧಾನಿಯಾದ ದಮಸ್ಕದ ರಸ್ತೆಗಳು, ಪ್ರಾಯಶಃ ಪೇಟೆ ಅಥವಾ ಮಾರುಕಟ್ಟೆಗಳ ಸ್ಥಾಪನೆಗಾಗಿ ಅಹಾಬನಿಗೆ ನೇಮಿಸಲ್ಪಡಲಿದ್ದವು. ಈ ಹಿಂದೆ, ಬೆನ್ಹದದನ ತಂದೆಯೂ ಹಾಗೆಯೇ ವ್ಯಾಪಾರಕ್ಕಾಗಿ ಸಮಾರ್ಯದಲ್ಲಿ ಕೆಲವು ರಸ್ತೆಗಳನ್ನು ತನಗೆ ನೇಮಿಸಿಕೊಂಡಿದ್ದನು. ಹೀಗೆ, ದಮಸ್ಕದಲ್ಲಿ ವ್ಯಾಪಾರವನ್ನು ಸ್ಥಾಪಿಸುವ ಸಲುವಾಗಿ ಅಹಾಬನು ಬೆನ್ಹದದನನ್ನು ಬಿಡುಗಡೆಮಾಡಿದನು.

ನಮಗಾಗಿರುವ ಪಾಠಗಳು:

12:​13, 14. ನಾವು ಜೀವನದಲ್ಲಿ ಅತಿ ಪ್ರಮುಖ ನಿರ್ಣಯಗಳನ್ನು ಮಾಡುವಾಗ ಶಾಸ್ತ್ರಜ್ಞಾನವಿರುವ ಮತ್ತು ದೈವಿಕ ಮೂಲತತ್ತ್ವಗಳಿಗಾಗಿ ಉಚ್ಚ ಮಾನ್ಯತೆಯುಳ್ಳ ವಿವೇಕಿಗಳೂ ಪ್ರೌಢರೂ ಆದ ವ್ಯಕ್ತಿಗಳಿಂದ ಸಲಹೆಯನ್ನು ಕೋರಬೇಕು.

13:​11-24. ಸಂಶಯಾಸ್ಪದವಾದ ಬುದ್ಧಿವಾದ ಅಥವಾ ಸೂಚನೆಯು ಹಿತೈಷಿಯಾಗಿರುವ ಒಬ್ಬ ಜೊತೆವಿಶ್ವಾಸಿಯಿಂದ ಬಂದರೂ ಅದನ್ನು ದೇವರ ವಾಕ್ಯದ ಸ್ವಸ್ಥ ಮಾರ್ಗದರ್ಶನದ ಬೆಳಕಿನಲ್ಲಿ ಪರಿಶೀಲಿಸಬೇಕು.​—⁠1 ಯೋಹಾನ 4:⁠1.

14:13. ಯೆಹೋವನು ನಮ್ಮಲ್ಲಿ ಒಳ್ಳೆಯದನ್ನು ಕಂಡುಕೊಳ್ಳಲು ನಮ್ಮನ್ನು ಕೂಲಂಕಷವಾಗಿ ಪರೀಕ್ಷಿಸುತ್ತಾನೆ. ಆ ಒಳ್ಳೆಯ ವಿಷಯವು ಎಷ್ಟೇ ಅಲ್ಪವಾಗಿರಲಿ, ನಾವು ಆತನನ್ನು ಸೇವಿಸಲು ಸಾಧ್ಯವಿರುವಷ್ಟು ಅತ್ಯುತ್ತಮವಾದುದನ್ನು ಮಾಡುವಾಗ ಆತನು ಅದನ್ನು ಬೆಳೆಸಬಲ್ಲನು.

15:10​-13. ನಾವು ಧೈರ್ಯದಿಂದ ಧರ್ಮಭ್ರಷ್ಟತೆಯನ್ನು ತಳ್ಳಿಹಾಕಿ, ಅದಕ್ಕೆ ಬದಲಾಗಿ ಸತ್ಯಾರಾಧನೆಯನ್ನು ವರ್ಧಿಸಬೇಕು.

17:​10-16. ಚಾರೆಪ್ತಾ ಊರಿನ ವಿಧವೆಯು ಎಲೀಯನನ್ನು ಪ್ರವಾದಿಯೆಂದು ಗುರುತಿಸಿ ಅವನನ್ನು ಅದಕ್ಕನುಸಾರ ಉಪಚರಿಸಿದಾಗ, ಯೆಹೋವನು ಆಕೆಯ ನಂಬಿಕೆಯ ಕ್ರಿಯೆಗಳನ್ನು ಆಶೀರ್ವದಿಸಿದನು. ಇಂದು, ಯೆಹೋವನು ನಮ್ಮ ನಂಬಿಕೆಯ ಕ್ರಿಯೆಗಳನ್ನು ಕೂಡ ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಾನೆ ಮತ್ತು ವಿವಿಧ ವಿಧಗಳಲ್ಲಿ ರಾಜ್ಯದ ಕೆಲಸವನ್ನು ಬೆಂಬಲಿಸುವವರಿಗೆ ಪ್ರತಿಫಲವನ್ನು ಕೊಡುತ್ತಾನೆ.​—⁠ಮತ್ತಾಯ 6:33; 10:41, 42; ಇಬ್ರಿಯ 6:10.

19:​1-8. ನಾವು ತೀವ್ರ ವಿರೋಧವನ್ನು ಅನುಭವಿಸುವಾಗ ಯೆಹೋವನ ಬೆಂಬಲದ ಭರವಸೆ ನಮಗಿರಬಲ್ಲದು.​—⁠2 ಕೊರಿಂಥ 4:​7-9.

19:​10, 14, 18. ಸತ್ಯಾರಾಧಕರು ಒಬ್ಬಂಟಿಗರಾಗಿರುವುದೇ ಇಲ್ಲ. ಯೆಹೋವನು ಮತ್ತು ಅವರ ಲೋಕವ್ಯಾಪಕ ಸಹೋದರತ್ವ ಅವರ ಜೊತೆಗಿದೆ.

19:​11-13. ಯೆಹೋವನು ಒಬ್ಬ ಪ್ರಕೃತಿ ದೇವನಲ್ಲ ಅಥವಾ ಬರಿಯ ಪ್ರಕೃತಿ ಶಕ್ತಿಗಳ ವ್ಯಕ್ತೀಕರಣವಲ್ಲ.

20:11. ಬೆನ್ಹದದನು ಸಮಾರ್ಯವನ್ನು ನಾಶಮಾಡುವ ವಿಷಯದಲ್ಲಿ ಜಂಬಕೊಚ್ಚಿಕೊಂಡಾಗ, ಇಸ್ರಾಯೇಲಿನ ಅರಸನು ಉತ್ತರಕೊಟ್ಟದ್ದು: “ಯುದ್ಧಕ್ಕಾಗಿ ನಡುಕಟ್ಟನ್ನು ಬಿಗಿದುಕೊಳ್ಳುವವನು ಅದನ್ನು ಬಿಚ್ಚಿಡುವ ಜಯಶಾಲಿಯಂತೆ ಹೆಚ್ಚಳಪಡಬಾರದು.” ಹೊಸ ಕಾರ್ಯವೊಂದು ನಮ್ಮ ಎದುರಿಗಿರುವಾಗ, ಬಡಾಯಿಕೋರನು ತೋರಿಸುವಂಥ ಮಿತಿಮೀರಿದ ಆತ್ಮವಿಶ್ವಾಸದಿಂದ ನಾವು ದೂರವಿರಬೇಕು.​—⁠ಜ್ಞಾನೋಕ್ತಿ 27:1; ಯಾಕೋಬ 4:​13-16.

ನಮಗೆ ಅತ್ಯಧಿಕ ಮೌಲ್ಯವುಳ್ಳದ್ದು

ಸೀನಾಯಿ ಬೆಟ್ಟದಲ್ಲಿ ಧರ್ಮಶಾಸ್ತ್ರವು ಕೊಡಲ್ಪಟ್ಟದ್ದರ ಕುರಿತು ಮೋಶೆಯು ಹೇಳುತ್ತಿದ್ದಾಗ, ಅವನು ಇಸ್ರಾಯೇಲ್ಯರಿಗೆ ಹೇಳಿದ್ದು: “ನೋಡಿರಿ, ಈ ಹೊತ್ತು ನಾನು ಆಶೀರ್ವಾದವನ್ನೂ ಶಾಪವನ್ನೂ ನಿಮ್ಮ ಮುಂದೆ ಇಡುತ್ತಾ ಇದ್ದೇನೆ. ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾಗಿ ನಡೆದರೆ ಆಶೀರ್ವಾದವೂ ಈ ಆಜ್ಞೆಗಳಿಗೆ ವಿಧೇಯರಾಗದೆ ನಾನು ಈಗ ಬೋಧಿಸುವ ಮಾರ್ಗವನ್ನು ಬಿಟ್ಟು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಅವಲಂಬಿಸಿದರೆ ಶಾಪವೂ ನಿಮಗುಂಟಾಗುವವು.”​—⁠ಧರ್ಮೋಪದೇಶಕಾಂಡ 11:​26-28.

ಈ ಮಹತ್ವಪೂರ್ಣ ಸತ್ಯವು ಒಂದನೇ ಅರಸುಗಳ ಪುಸ್ತಕದಲ್ಲಿ ಎಷ್ಟು ಸ್ಪಷ್ಟವಾಗಿ ನಮ್ಮ ಗಮನಕ್ಕೆ ತರಲ್ಪಟ್ಟಿದೆ! ನಾವು ನೋಡಿರುವಂತೆ, ಈ ಪುಸ್ತಕವು ಇನ್ನಿತರ ಅಮೂಲ್ಯ ಪಾಠಗಳನ್ನೂ ಕಲಿಸುತ್ತದೆ. ಅದರ ಸಂದೇಶವು ಸಜೀವವಾದದ್ದು ಕಾರ್ಯಸಾಧಕವಾದದ್ದೂ ಆಗಿದೆ ಎಂಬುದಂತೂ ನಿಶ್ಚಯ.​—⁠ಇಬ್ರಿಯ 4:12.

[ಪುಟ 29ರಲ್ಲಿರುವ ಚಿತ್ರ]

ಸೊಲೊಮೋನನು ನಿರ್ಮಿಸಿದ ದೇವಾಲಯ ಮತ್ತು ಇತರ ಭವನಗಳು

[ಪುಟ 30, 31ರಲ್ಲಿರುವ ಚಿತ್ರ]

ಯೆಹೋವನು ತನ್ನ ಶಕ್ತಿಯನ್ನು ಪ್ರದರ್ಶಿಸಿದ ಬಳಿಕ ಜನರು “ಯೆಹೋವನೇ ದೇವರು” ಎಂದು ಉದ್ಗರಿಸಿದರು