ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು”

“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು”

“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು”

ಪಕ್ಷಿಗಳು ಮುಂಜಾನೆ ಎಚ್ಚತ್ತ ಬಳಿಕ ಅನೇಕವೇಳೆ ಸ್ವಲ್ಪ ಹೊತ್ತು ಚಿಲಿಪಿಲಿಗುಟ್ಟುತ್ತಿದ್ದು ಆಮೇಲೆ ಆಹಾರವನ್ನು ಹುಡುಕಲಿಕ್ಕಾಗಿ ಹಾರಿಹೋಗುತ್ತವೆ. ಸಾಯಂಕಾಲದಲ್ಲಿ, ಅವು ತಮ್ಮ ಗೂಡುಗಳಿಗೆ ಬಂದು ಪುನಃ ತುಸು ಕಾಲ ಚಿಲಿಪಿಲಿಗುಟ್ಟುತ್ತಿದ್ದು ತರುವಾಯ ನಿದ್ದೆಹೋಗುತ್ತವೆ. ಋತುಗಳಿಗನುಸಾರ ಅವು ಕೂಡುತ್ತವೆ, ಮೊಟ್ಟೆಯಿಡುತ್ತವೆ ಮತ್ತು ಮರಿಗಳನ್ನು ಬೆಳೆಸುತ್ತವೆ. ಬೇರೆ ಪ್ರಾಣಿಗಳು ಸಹ ಇದೇ ರೀತಿಯ ಮಾದರಿಯನ್ನು ಅನುಸರಿಸುತ್ತವೆ.

ಮಾನವರಾದ ನಾವಾದರೊ ಭಿನ್ನರು. ನಾವು ಉಣ್ಣುತ್ತೇವೆ, ನಿದ್ರಿಸುತ್ತೇವೆ ಮತ್ತು ಸಂತಾನೋತ್ಪತ್ತಿ ಮಾಡುತ್ತೇವೆ ನಿಜ. ಆದರೆ ನಮ್ಮಲ್ಲಿ ಹೆಚ್ಚಿನವರು ಅದರಲ್ಲಿ ಮಾತ್ರ ತೃಪ್ತಿಪಡುವುದಿಲ್ಲ. ನಾವು ಏಕೆ ಜೀವಿಸುತ್ತಿದ್ದೇವೆ ಎಂಬುದನ್ನು ತಿಳಿಯಬಯಸುತ್ತೇವೆ. ನಮ್ಮ ಜೀವನದ ಉದ್ದೇಶವನ್ನು ಹುಡುಕಬಯಸುತ್ತೇವೆ. ಭವಿಷ್ಯತ್ತಿಗಾಗಿ ಒಂದು ನಿರೀಕ್ಷೆಯನ್ನೂ ಪಡೆಯಲು ಬಯಸುತ್ತೇವೆ. ಇಂತಹ ಗಹನವಾದ ಆವಶ್ಯಕತೆಗಳು ಮಾನವಕುಲಕ್ಕಿರುವ ಅದ್ವಿತೀಯವಾದ ಒಂದು ಗುಣಕ್ಕೆ ಕೈತೋರಿಸುತ್ತವೆ. ಅದು, ಆಧ್ಯಾತ್ಮಿಕತೆ ಅಥವಾ ಆಧ್ಯಾತ್ಮಿಕ ವಿಷಯಗಳಿಗಾಗಿರುವ ಅಗತ್ಯ ಮತ್ತು ಆಧ್ಯಾತ್ಮಿಕ ಸಾಮರ್ಥ್ಯವೇ ಆಗಿದೆ.

ದೇವರ ಸ್ವರೂಪದಲ್ಲಿ ನಿರ್ಮಿಸಲ್ಪಟ್ಟದ್ದು

ಮನುಷ್ಯನಲ್ಲಿರುವ ಆಧ್ಯಾತ್ಮಿಕ ಅಗತ್ಯಕ್ಕೆ ಕಾರಣವೇನೆಂಬುದನ್ನು ಬೈಬಲ್‌ ಹೀಗನ್ನುತ್ತಾ ವಿವರಿಸುತ್ತದೆ: “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” (ಆದಿಕಾಂಡ 1:27) ನಾವು ‘ದೇವರ ಸ್ವರೂಪದಲ್ಲಿ’ ರೂಪಿಸಲ್ಪಟ್ಟಿದ್ದೇವೆ ಎಂಬುದರ ಅರ್ಥವು, ನಮ್ಮಲ್ಲಿ ಪಾಪ ಮತ್ತು ಅಪರಿಪೂರ್ಣತೆಯ ಕಳಂಕಗಳು ಇರುವುದಾದರೂ, ದೇವರ ಕೆಲವು ಗುಣಗಳನ್ನು ಪ್ರತಿಬಿಂಬಿಸುವ ಸಾಮರ್ಥ್ಯ ನಮ್ಮಲ್ಲಿದೆ ಎಂದಾಗುತ್ತದೆ. (ರೋಮಾಪುರ 5:12) ದೃಷ್ಟಾಂತಕ್ಕಾಗಿ, ನಾವು ಸೃಜನಶೀಲರಾಗಿದ್ದೇವೆ. ನಮ್ಮಲ್ಲಿ ಸ್ಪಲ್ಪಮಟ್ಟಿಗೆ ವಿವೇಕವೂ ನ್ಯಾಯಪ್ರಜ್ಞೆಯೂ ಪರಸ್ಪರರಿಗಾಗಿ ಸ್ವತ್ಯಾಗದ ಪ್ರೀತಿಯನ್ನು ತೋರಿಸುವ ಸಾಮರ್ಥ್ಯವೂ ಇದೆ. ಅದಲ್ಲದೆ, ಗತವಿಷಯಗಳನ್ನು ಜ್ಞಾಪಿಸಿಕೊಳ್ಳುವ ಹಾಗೂ ಭವಿಷ್ಯತ್ತಿಗಾಗಿ ಯೋಜಿಸುವ ಸಾಮರ್ಥ್ಯ ನಮಗಿದೆ.​—⁠ಜ್ಞಾನೋಕ್ತಿ 4:7; ಪ್ರಸಂಗಿ 3:1, 11; ಮೀಕ 6:8; ಯೋಹಾನ 13:34; 1 ಯೋಹಾನ 4:⁠8.

ದೇವರನ್ನು ಆರಾಧಿಸಬೇಕೆಂಬ ನಮ್ಮ ಸ್ವಾಭಾವಿಕ ಬಯಕೆಯು ನಮಗಿರುವ ಆಧ್ಯಾತ್ಮಿಕ ಸಾಮರ್ಥ್ಯವನ್ನು ಅತಿ ಸ್ಪಷ್ಟವಾಗಿ ತೋರಿಸುತ್ತದೆ. ನಮ್ಮ ಸೃಷ್ಟಿಕರ್ತನೊಂದಿಗೆ ಸುಸಂಬಂಧವನ್ನು ಇಟ್ಟುಕೊಳ್ಳಲು ನಮ್ಮಲ್ಲಿರುವ ಅಗತ್ಯವನ್ನು ನಾವು ಯೋಗ್ಯ ರೀತಿಯಲ್ಲಿ ತೃಪ್ತಿಗೊಳಿಸದಿರುವಲ್ಲಿ, ನಿಜವಾದ ಮತ್ತು ಶಾಶ್ವತವಾದ ಸಂತೋಷವನ್ನು ನಾವೆಂದಿಗೂ ಪಡೆಯಲಾರೆವು. “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದನು ಯೇಸು. (ಮತ್ತಾಯ 5:​3, NW) ಆದರೆ ಈ ಅಗತ್ಯವನ್ನು ಆಧ್ಯಾತ್ಮಿಕ ಸತ್ಯದಿಂದ ಅಂದರೆ ದೇವರ, ಆತನ ಮಟ್ಟಗಳ ಮತ್ತು ಮಾನವಕುಲಕ್ಕಾಗಿರುವ ಆತನ ಉದ್ದೇಶದ ಕುರಿತಾದ ವಾಸ್ತವಾಂಶಗಳಿಂದ ತೃಪ್ತಿಪಡಿಸಲು ನಾವು ಜಾಗ್ರತೆವಹಿಸಬೇಕು. ನಾವು ಆಧ್ಯಾತ್ಮಿಕ ಸತ್ಯವನ್ನು ಎಲ್ಲಿ ಕಂಡುಕೊಳ್ಳಬಲ್ಲೆವು? ಬೈಬಲಿನಲ್ಲಿಯೇ.

“ನಿನ್ನ ವಾಕ್ಯವೇ ಸತ್ಯವು”

ಅಪೊಸ್ತಲ ಪೌಲನು ಬರೆದದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಪೌಲನ ಆ ಮಾತುಗಳು, “ನಿನ್ನ ವಾಕ್ಯವೇ ಸತ್ಯವು” ಎಂದು ಯೇಸು ದೇವರಿಗೆ ಮಾಡಿದ ಪ್ರಾರ್ಥನೆಯಲ್ಲಿ ಹೇಳಿದ ಮಾತುಗಳೊಂದಿಗೆ ಸಹಮತದಲ್ಲಿವೆ. ಇಂದು ಆ ವಾಕ್ಯವು ಪವಿತ್ರ ಬೈಬಲೆಂದು ನಮಗೆ ತಿಳಿದದೆ ಮತ್ತು ನಮ್ಮ ನಂಬಿಕೆಗಳು ಹಾಗೂ ಮಟ್ಟಗಳು ಅದಕ್ಕನುಸಾರವಾಗಿವೆಯೊ ಇಲ್ಲವೊ ಎಂದು ಪರೀಕ್ಷಿಸಿ ನೋಡುವುದು ವಿವೇಕಪ್ರದವಾಗಿದೆ.​—⁠ಯೋಹಾನ 17:17.

ನಮ್ಮ ನಂಬಿಕೆಗಳನ್ನು ದೇವರ ವಾಕ್ಯದೊಂದಿಗೆ ನಾವು ಹೋಲಿಸಿ ನೋಡುವಾಗ, ಪೌಲನ ಬೋಧನೆಗಳು ಶಾಸ್ತ್ರಾನುಸಾರವಾಗಿವೆಯೊ ಎಂದು ಪರೀಕ್ಷಿಸಿ ನೋಡಿದಂಥ ಹಿಂದಿನ ಕಾಲದ ಬೆರೋಯದ ಜನರನ್ನು ನಾವು ಅನುಕರಿಸುತ್ತೇವೆ. ಹಾಗೆ ಮಾಡಿದ್ದಕ್ಕೆ ಬೆರೋಯದವರನ್ನು ಟೀಕಿಸುವ ಬದಲಾಗಿ ಲೂಕನು ಅವರ ಮನೋಭಾವವನ್ನು ಪ್ರಶಂಸಿಸಿದನು. ಅವರು “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿ ಇವರು ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸುತ್ತಿದ್ದರು” ಎಂದು ಅವನು ಬರೆದನು. (ಅ. ಕೃತ್ಯಗಳು 17:11) ಇಂದು ಪರಸ್ಪರ ವಿರೋಧಾತ್ಮಕವಾಗಿರುವ ಧಾರ್ಮಿಕ ಹಾಗೂ ನೈತಿಕ ಬೋಧನೆಗಳು ಬಹಳಷ್ಟು ಇರುವುದರಿಂದ, ನಾವು ಆ ಉದಾತ್ತ ನೀತಿಯ ಬೆರೋಯದವರ ಮಾದರಿಯನ್ನು ಅನುಕರಿಸುವುದು ಪ್ರಾಮುಖ್ಯ.

ಆಧ್ಯಾತ್ಮಿಕ ಸತ್ಯವು ಯಾವುದು ಎಂಬುದನ್ನು ಗುರುತಿಸುವ ಇನ್ನೊಂದು ವಿಧವು, ಜನರ ಜೀವನಗಳನ್ನು ಅದು ಹೇಗೆ ಪ್ರಭಾವಿಸುತ್ತದೆಂದು ಗಮನಿಸುವುದೇ ಆಗಿದೆ. (ಮತ್ತಾಯ 7:17) ಉದಾಹರಣೆಗೆ, ಬೈಬಲ್‌ ಸತ್ಯಾನುಸಾರ ಬದುಕುವುದು ಒಬ್ಬನನ್ನು ಹೆಚ್ಚು ಉತ್ತಮ ಪತಿಯಾಗಿ, ಹೆಚ್ಚು ಉತ್ತಮ ತಂದೆಯಾಗಿ, ಹೆಚ್ಚು ಉತ್ತಮ ಪತ್ನಿಯಾಗಿ ಅಥವಾ ತಾಯಿಯಾಗಿ ಮಾಡಬೇಕು ಮತ್ತು ಹೀಗೆ ಕುಟುಂಬ ಸಂತೋಷವನ್ನು ಹಾಗೂ ಒಬ್ಬನ ಸಂತೃಪ್ತಿಯನ್ನು ಹೆಚ್ಚಿಸಬೇಕು. “ದೇವರ ವಾಕ್ಯವನ್ನು ಕೇಳಿ ಅದಕ್ಕೆ ಸರಿಯಾಗಿ ನಡಕೊಳ್ಳುವವರೇ ಧನ್ಯರು,” ಅಂದರೆ ಸಂತೋಷಿತರು ಎಂದನು ಯೇಸು.​—⁠ಲೂಕ 11:28.

ಯೇಸುವಿನ ಆ ಮಾತುಗಳು, ಪುರಾತನಕಾಲದ ಇಸ್ರಾಯೇಲ್ಯರಿಗೆ ಅವನ ಸ್ವರ್ಗೀಯ ತಂದೆ ಹೇಳಿದ ಈ ಮಾತುಗಳನ್ನು ನಮ್ಮ ಮನಸ್ಸಿಗೆ ತರುತ್ತವೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:​17, 18) ಇಂತಹ ಪ್ರೀತಿಪೂರ್ವಕವಾದ ಮನವಿಯಿಂದ ಒಳ್ಳೇತನ ಮತ್ತು ನೀತಿಯನ್ನು ಪ್ರೀತಿಸುವವರೆಲ್ಲರೂ ಪ್ರಚೋದಿತರಾಗುವರು ನಿಶ್ಚಯ!

ಕೆಲವರಿಗೆ ತಮ್ಮ ‘ಕಿವಿಗೆ ಹಿತವೆನಿಸುವುದನ್ನು’ ಕೇಳಿಸಿಕೊಳ್ಳುವುದೇ ಇಷ್ಟ

ಇಸ್ರಾಯೇಲ್ಯರು ಧಾರ್ಮಿಕ ಸುಳ್ಳುಗಳಿಂದ ತಪ್ಪುದಾರಿಗೆಳೆಯಲ್ಪಡುತ್ತಿದ್ದ ಕಾರಣವೇ ದೇವರು ಆ ಮನಮುಟ್ಟುವ ಮನವಿಯನ್ನು ಮಾಡಿದನು. (ಕೀರ್ತನೆ 106:​35-40) ನಾವು ಸಹ ಸುಳ್ಳುಗಳ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು. ಕ್ರೈಸ್ತರೆಂದು ಹೇಳಿಕೊಳ್ಳುವವರ ವಿಷಯವಾಗಿ ಪೌಲನು ಬರೆದುದು: “ಜನರು ಸತ್ಯೋಪದೇಶವನ್ನು ಕೇಳದಿರುವ ಕಾಲವು ಬರಲಿದೆ. ಜನರು ತಮ್ಮನ್ನು ಮೆಚ್ಚಿಸುವಂಥ ಬೋಧಕರನ್ನು ಮತ್ತು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು. ಜನರು ಸತ್ಯವನ್ನು ಕೇಳದೆ ಸುಳ್ಳು ಕಥೆಗಳನ್ನು ಕೇಳಲಾರಂಭಿಸುತ್ತಾರೆ.”​—⁠2 ತಿಮೊಥೆಯ 4:​3, 4, ಪರಿಶುದ್ಧ ಬೈಬಲ್‌. *

ಧಾರ್ಮಿಕ ಮುಖಂಡರು ಜನರ ಕಿವಿಗೆ ಹಿತವೆನಿಸುವುದನ್ನು ಕಲಿಸುವುದು, ವಿವಾಹದ ಹೊರಗಣ ಲೈಂಗಿಕ ಸಂಬಂಧ, ಸಲಿಂಗೀಕಾಮ ಮತ್ತು ಕುಡುಕತನಗಳಂತಹ ದುರಿಚ್ಛೆಗಳನ್ನು ತಣಿಸುವ ಆಚರಣೆಗಳನ್ನು ಮನ್ನಿಸುವ ಮೂಲಕವೇ. ಆದರೆ ಇಂತಹ ಆಚರಣೆಗಳಿಗೆ ಮನ್ನಣೆ ಕೊಡುವವರೂ ಅವುಗಳನ್ನು ಆಚರಿಸುವವರೂ, “ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂದು ಬೈಬಲು ಸ್ಪಷ್ಟವಾಗಿ ನುಡಿಯುತ್ತದೆ.​—⁠1 ಕೊರಿಂಥ 6:9, 10; ರೋಮಾಪುರ 1:24-32.

ಬೈಬಲ್‌ ಮಟ್ಟಗಳಿಗನುಸಾರ ಜೀವಿಸಲು, ಅದರಲ್ಲೂ ಕುಚೋದ್ಯದ ಎದುರಿನಲ್ಲಿ ಹೀಗೆ ಜೀವಿಸಲು ಧೈರ್ಯವು ಬೇಕೆಂಬುದರಲ್ಲಿ ಸಂದೇಹವಿಲ್ಲವಾದರೂ ಹಾಗೆ ಜೀವಿಸುವುದು ಸಾಧ್ಯ. ಈ ಹಿಂದೆ ಅಮಲೌಷಧ ವ್ಯಸನಿಗಳು, ಕುಡುಕರು, ವ್ಯಭಿಚಾರಿಗಳು, ಬೀದಿಪುಂಡರು, ಕಳ್ಳರು, ಸುಳ್ಳುಗಾರರು ಆಗಿದ್ದವರು ಈಗ ಯೆಹೋವನ ಸಾಕ್ಷಿಗಳಾಗಿದ್ದಾರೆ. ಹೀಗಿದ್ದರೂ ಅವರು ದೇವರ ವಾಕ್ಯವನ್ನು ಹೃದಯಕ್ಕೆ ತೆಗೆದುಕೊಂಡು, ಯೆಹೋವನಿಗೆ “ಯೋಗ್ಯರಾಗಿ ನಡೆದು”ಕೊಳ್ಳಲಿಕ್ಕಾಗಿ ಪವಿತ್ರಾತ್ಮದ ಸಹಾಯದಿಂದ ತಮ್ಮ ಜೀವಿತಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. (ಕೊಲೊಸ್ಸೆ 1:9, 10; 1 ಕೊರಿಂಥ 6:11) ದೇವರೊಂದಿಗೆ ಸಮಾಧಾನಮಾಡಿಕೊಂಡ ಕಾರಣ ಅವರು ಮನಶ್ಶಾಂತಿಯನ್ನು ಮತ್ತು ನಾವು ಮುಂದಕ್ಕೆ ನೋಡಲಿರುವಂತೆ ಭವಿಷ್ಯತ್ತಿಗಾಗಿ ನಿಜ ನಿರೀಕ್ಷೆಯನ್ನು ಸಹ ಪಡೆದುಕೊಂಡರು.

ರಾಜ್ಯ ನಿರೀಕ್ಷೆ

ವಿಧೇಯ ಮಾನವರಿಗಾಗಿ ಬರಲಿರುವ ನಿತ್ಯ ಶಾಂತಿಯ ಕುರಿತಾದ ಬೈಬಲ್‌ ನಿರೀಕ್ಷೆಯು ದೇವರ ರಾಜ್ಯದ ಮುಖಾಂತರ ನೆರವೇರುವುದು. ಯೇಸು ತನ್ನ ಮಾದರಿ ಪ್ರಾರ್ಥನೆಯಲ್ಲಿ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂದು ಬೇಡಿಕೊಂಡನು. (ಮತ್ತಾಯ 6:10) ಹೌದು, ದೇವರ ರಾಜ್ಯವು ಮಾತ್ರ ದೇವರ ಚಿತ್ತವು ಭೂಮಿಯ ಮೇಲೆ ನಿಶ್ಚಯವಾಗಿ ನೆರವೇರುವಂತೆ ಮಾಡಸಾಧ್ಯವಿದೆ. ಏಕೆ? ಏಕೆಂದರೆ ಆ ಸ್ವರ್ಗೀಯ ರಾಜ್ಯ ಅಂದರೆ ಯೇಸು ಕ್ರಿಸ್ತನ ವಶದಲ್ಲಿರುವ ಸರಕಾರವು ಭೂಮಿಯ ಮೇಲೆ ದೇವರ ನ್ಯಾಯವಾದ ಪರಮಾಧಿಕಾರವನ್ನು ವ್ಯಕ್ತಪಡಿಸುವ ಆತನ ಮಾಧ್ಯಮವಾಗಿದೆ.​—⁠ಕೀರ್ತನೆ 2:7-12; ದಾನಿಯೇಲ 7:13, 14.

ಆ ಸ್ವರ್ಗೀಯ ರಾಜ್ಯದ ಅರಸನಾಗಿರುವ ಯೇಸು ಕ್ರಿಸ್ತನು ವಿಧೇಯ ಮಾನವರನ್ನು, ಆದಾಮನಿಂದ ಬಂದ ಪಾಪ ಮತ್ತು ಅದರ ಸಂಬಳವಾದ ರೋಗ ಹಾಗೂ ಮರಣದ ಬಿಗಿಮುಷ್ಟಿಯಿಂದ ಮಾತ್ರವಲ್ಲದೆ, ಬೇರೆ ಪ್ರತಿಯೊಂದು ರೀತಿಯ ಬಂಧನದಿಂದ ವಿಮೋಚಿಸುವನು. ಪ್ರಕಟನೆ 21:​3, 4 ಹೇಳುವುದು: “ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು [ಯೆಹೋವ ದೇವರು] . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”

ಆಗ ಶಾಶ್ವತವಾದ ಶಾಂತಿ ಲೋಕವ್ಯಾಪಕವಾಗಿ ನೆಲೆಸುವುದು. ನಾವು ಏಕೆ ಅದರ ಕುರಿತು ಖಾತ್ರಿಯಿಂದಿರಬಲ್ಲೆವು? ಇದರ ಕಾರಣವನ್ನು ಯೆಶಾಯ 11:9ರಲ್ಲಿ ಹೀಗೆ ತಿಳಿಸಲಾಗಿದೆ: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ [ರಾಜ್ಯದ ಪ್ರಜೆಗಳು] ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ಹೌದು, ಆಗ ಭೂಮಿಯ ಮೇಲಿರುವ ಪ್ರತಿಯೊಬ್ಬ ಮಾನವನಿಗೆ ದೇವರ ಕುರಿತಾದ ನಿಷ್ಕೃಷ್ಟ ಜ್ಞಾನವಿರುವುದು ಮತ್ತು ಅವನು ದೇವರಿಗೆ ವಿಧೇಯನಾಗಿರುವನು. ಈ ಪ್ರತೀಕ್ಷೆ ನಿಮಗೆ ಉತ್ತೇಜನ ಕೊಡುತ್ತದೆಯೆ? ಹಾಗಿರುವಲ್ಲಿ, ಅಮೂಲ್ಯವಾದ “ಯೆಹೋವನ ಜ್ಞಾನ”ವನ್ನು ಪಡೆದುಕೊಳ್ಳಲು ಆರಂಭಿಸಬೇಕಾದ ಸಮಯವು ಇದೇ ಆಗಿದೆ.

ನೀವು ರಾಜ್ಯ ಸಂದೇಶಕ್ಕೆ ಕಿವಿಗೊಡುವಿರೊ?

ಆ ರಾಜ್ಯದ ಮೂಲಕ ದೇವರು ಸೈತಾನನ ಸಕಲ ಕೃತ್ಯಗಳನ್ನು ರದ್ದುಗೊಳಿಸಿ ಜನರನ್ನು ತನ್ನ ನೀತಿಯ ಮಾರ್ಗಗಳಲ್ಲಿ ಶಿಕ್ಷಿತಗೊಳಿಸುವನು. ಆದಕಾರಣ, ಆ ರಾಜ್ಯವು ಯೇಸುವಿನ ಬೋಧಿಸುವಿಕೆಯ ಕೇಂದ್ರಬಿಂದು ಆಗಿದ್ದುದರಲ್ಲಿ ಆಶ್ಚರ್ಯವೇನೂ ಇಲ್ಲ. ಅವನಂದದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43) ತನ್ನ ಶಿಷ್ಯರು ಅದೇ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಕ್ರಿಸ್ತನು ಆಜ್ಞಾಪಿಸಿದನು. (ಮತ್ತಾಯ 28:​19, 20) ಅವನು ಮುಂತಿಳಿಸಿದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:14) ಆ ಅಂತ್ಯ ಧಾವಿಸಿ ಬರುತ್ತಿದೆ. ಆದುದರಿಂದ, ಪ್ರಾಮಾಣಿಕ ಹೃದಯದ ಜನರು ಈ ಜೀವರಕ್ಷಕ ಸುವಾರ್ತೆಗೆ ಕಿವಿಗೊಡುವುದು ಅದೆಷ್ಟು ಪ್ರಾಮುಖ್ಯ!

ಹಿಂದಿನ ಲೇಖನದಲ್ಲಿ ತಿಳಿಸಲಾಗಿರುವ ಆಲ್ಬರ್ಟ್‌, ತನ್ನ ಹೆಂಡತಿ ಮತ್ತು ಮಗನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡುತ್ತಿದ್ದಾಗ ರಾಜ್ಯ ಸಂದೇಶವನ್ನು ಆಲಿಸಿದನು. ಆರಂಭದಲ್ಲಿ ಆಲ್ಬರ್ಟ್‌ ಅದರ ಕುರಿತು ಸಂದೇಹಪಟ್ಟನು. ಅವನು ಸಾಕ್ಷಿಗಳ ತಪ್ಪುಗಳನ್ನು ಬಯಲುಪಡಿಸುವ ಉದ್ದೇಶದಿಂದ ತನ್ನ ಹೆಂಡತಿ ಮತ್ತು ಮಗನನ್ನು ಭೇಟಿಯಾಗುವಂತೆ ಸ್ಥಳಿಕ ಪಾದ್ರಿಯೊಬ್ಬನನ್ನು ಕೇಳಿಕೊಂಡದ್ದೂ ಹೌದು. ಆದರೆ ಆ ಪಾದ್ರಿಗೆ ಇದರಲ್ಲಿ ಸಿಕ್ಕಿಕೊಳ್ಳಲು ಮನಸ್ಸಿರಲಿಲ್ಲ. ಆದುದರಿಂದ ಒಂದು ಬೈಬಲ್‌ ಚರ್ಚೆಯ ಸಮಯದಲ್ಲಿ ಸುಮ್ಮನೆ ಕುಳಿತು ಕೇಳಲು ಮತ್ತು ತಪ್ಪನ್ನು ತೋರಿಸಿಕೊಡಲು ಆಲ್ಬರ್ಟ್‌ ನಿಶ್ಚಯಿಸಿದನು. ಆದರೆ ಒಂದೇ ಒಂದು ಅಧ್ಯಯನದ ನಂತರ, ಹೆಚ್ಚು ಕಲಿಯಲು ಆತುರವುಳ್ಳವನಾಗಿ ಅವನು ಅಧ್ಯಯನದಲ್ಲಿ ಜೊತೆಗೂಡಿದನು. ತನ್ನ ಮನೋಭಾವ ಏಕೆ ಬದಲಾಯಿತೆಂದು ಅವನು ಆ ಬಳಿಕ ವಿವರಿಸಿದನು. “ನಾನು ಇಷ್ಟರ ವರೆಗೆ ಹುಡುಕುತ್ತ ಇದ್ದದ್ದು ಇದನ್ನೇ” ಎಂದನು ಅವನು.

ಕಟ್ಟಕಡೆಗೆ, ಆಲ್ಬರ್ಟ್‌ ತನ್ನ ಆಧ್ಯಾತ್ಮಿಕ ಅಗತ್ಯವನ್ನು ತೃಪ್ತಿಪಡಿಸಲು ಆರಂಭಿಸಿದನು ಮತ್ತು ಅವನು ಹಿಂದೆ ನೋಡಲೇ ಇಲ್ಲ. ಬೈಬಲ್‌ ಸತ್ಯವು ಅವನಿಗೆ, ಅವನು ಜೀವಮಾನದಲ್ಲೆಲ್ಲ ಯಾವುದಕ್ಕಾಗಿ ಹುಡುಕುತ್ತಿದ್ದನೊ ಅದನ್ನು, ಅಂದರೆ ಸಮಾಜದಲ್ಲಿ ವ್ಯಾಪಿಸಿರುವ ಅನ್ಯಾಯ ಮತ್ತು ಭ್ರಷ್ಟಾಚಾರಕ್ಕೆ ಪರಿಹಾರವನ್ನು ಹಾಗೂ ಭವಿಷ್ಯತ್ತಿಗಾಗಿ ನಿರೀಕ್ಷೆಯನ್ನು ಕೊಟ್ಟಿತು. ಅದು ಅವನಿಗೆ ಮನಶ್ಶಾಂತಿಯನ್ನೂ ನೀಡಿತು. ನಿಮ್ಮ ಆಧ್ಯಾತ್ಮಿಕ ಅಗತ್ಯವು ತೃಪ್ತಿಗೊಳಿಸಲ್ಪಡುತ್ತಿದೆಯೆ? 6ನೇ ಪುಟದಲ್ಲಿರುವ ಚೌಕದಲ್ಲಿ ಕೊಡಲಾಗಿರುವ ಪ್ರಶ್ನೆಗಳನ್ನು ಓದಲು ನೀವೇಕೆ ಒಂದು ಕ್ಷಣ ತೆಗೆದುಕೊಳ್ಳಬಾರದು? ನೀವು ಹೆಚ್ಚಿನ ಮಾಹಿತಿಯನ್ನು ಬಯಸುವಲ್ಲಿ, ನಿಮಗೆ ಸಹಾಯ ನೀಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.

[ಪಾದಟಿಪ್ಪಣಿ]

^ ಪ್ಯಾರ. 13 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 6ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಆಧ್ಯಾತ್ಮಿಕ ಅಗತ್ಯವು ಪೂರೈಸಲ್ಪಡುತ್ತಿದೆಯೆ?

ನಿಮಗೆ ದೊರೆಯುವ ಆಧ್ಯಾತ್ಮಿಕ ಆಹಾರದಿಂದ ನೀವು ತೃಪ್ತರಾಗಿದ್ದೀರೊ? ಈ ಕೆಳಗಣ ಪ್ರಶ್ನೆಗಳನ್ನು ಓದುವಂತೆಯೂ ನೀವು ಸರಿಯಾಗಿ ಉತ್ತರ ಕೊಡಲು ಸಾಧ್ಯವಿರುವ ಪ್ರಶ್ನೆಗಳಿಗೆ ಗುರುತು ಹಾಕುವಂತೆಯೂ ನಾವು ಕೇಳಿಕೊಳ್ಳುತ್ತೇವೆ.

□ ದೇವರು ಯಾರು, ಮತ್ತು ಆತನ ಹೆಸರೇನು?

□ ಯೇಸು ಕ್ರಿಸ್ತನು ಯಾರು? ಅವನು ಏಕೆ ಸಾಯಬೇಕಾಯಿತು? ಅವನ ಮರಣವು ನಿಮಗೆ ಹೇಗೆ ಪ್ರಯೋಜನಗಳನ್ನು ತರಬಲ್ಲದು?

□ ಪಿಶಾಚನು ಇದ್ದಾನೊ? ಇದ್ದರೆ, ಅವನು ಎಲ್ಲಿಂದ ಬಂದನು?

□ ನಾವು ಸತ್ತಾಗ ನಮಗೇನು ಸಂಭವಿಸುತ್ತದೆ?

□ ಭೂಮಿಗಾಗಿಯೂ ಮಾನವಕುಲಕ್ಕಾಗಿಯೂ ದೇವರ ಉದ್ದೇಶವೇನು?

□ ದೇವರ ರಾಜ್ಯ ಎಂದರೇನು?

□ ದೇವರ ನೈತಿಕ ಮಟ್ಟಗಳಾವುವು?

□ ಕುಟುಂಬದಲ್ಲಿ ಗಂಡ ಮತ್ತು ಹೆಂಡತಿಯ ದೇವನೇಮಿತ ಪಾತ್ರಗಳಾವುವು? ಕುಟುಂಬ ಸಂತೋಷವನ್ನು ವರ್ಧಿಸುವ ಕೆಲವು ಬೈಬಲ್‌ ಮೂಲತತ್ತ್ವಗಳಾವುವು?

ಇವುಗಳಲ್ಲಿ ಯಾವುದೇ ಪ್ರಶ್ನೆಗಿರುವ ಉತ್ತರ ನಿಮಗೆ ಅನಿಶ್ಚಿತವಾಗಿರುವಲ್ಲಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನ ಒಂದು ಪ್ರತಿಗಾಗಿ ನೀವು ವಿನಂತಿಸಿಕೊಳ್ಳಬಹುದು. ಸುಮಾರು 300 ಭಾಷೆಗಳಲ್ಲಿ ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ಈ ಬ್ರೋಷರ್‌, ಬೈಬಲಿನ 16 ಮೂಲಭೂತ ವಿಷಯಗಳನ್ನು ಚರ್ಚಿಸಿ, ಮೇಲೆ ಕೊಡಲಾಗಿರುವ ಎಲ್ಲ ಪ್ರಶ್ನೆಗಳಿಗೆ ಶಾಸ್ತ್ರಾಧಾರಿತವಾದ ಉತ್ತರವನ್ನು ನೀಡುತ್ತದೆ.

[ಪುಟ 4ರಲ್ಲಿರುವ ಚಿತ್ರಗಳು]

ಪ್ರಾಣಿಗಳಿಗಿಂತ ಭಿನ್ನವಾಗಿ ಮಾನವರಲ್ಲಿ ಆಧ್ಯಾತ್ಮಿಕ ಅಗತ್ಯವಿದೆ

[ಪುಟ 5ರಲ್ಲಿರುವ ಚಿತ್ರ]

‘ಜನರು ತಮ್ಮ ಕಿವಿಗೆ ಹಿತವೆನಿಸುವ ಬೋಧನೆಯನ್ನು ನೀಡುವ ಬೋಧಕರನ್ನು ಕಂಡುಕೊಳ್ಳುವರು.’ ​—⁠2 ತಿಮೊಥೆಯ 4:​3

[ಪುಟ 7ರಲ್ಲಿರುವ ಚಿತ್ರ]

ಮೆಸ್ಸೀಯನ ನಿಯಂತ್ರಣದಲ್ಲಿರುವ ದೇವರ ರಾಜ್ಯದ ಮುಖಾಂತರ ಶಾಶ್ವತವಾದ ಶಾಂತಿಯು ಸ್ಥಾಪಿಸಲ್ಪಡುವುದು