ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಶ್ಶಾಂತಿಗಾಗಿ ಅನ್ವೇಷಣೆ

ಮನಶ್ಶಾಂತಿಗಾಗಿ ಅನ್ವೇಷಣೆ

ಮನಶ್ಶಾಂತಿಗಾಗಿ ಅನ್ವೇಷಣೆ

ಆಲ್ಬರ್ಟ್‌ ಎಂಬವನು ಮುದ್ದಾದ ಇಬ್ಬರು ಮಕ್ಕಳಿದ್ದ, ಸುಖೀ ವಿವಾಹಿತ ವ್ಯಕ್ತಿಯಾಗಿದ್ದನು. ಆದರೆ ತನ್ನ ಜೀವನದಲ್ಲಿ ಏನೋ ಕೊರತೆ ಇರುವಂತೆ ಅವನಿಗೆ ತೋಚಿತು. ಕೆಲಸವನ್ನು ಕಂಡುಹಿಡಿಯಲು ಹೆಣಗಾಡುತ್ತಿದ್ದ ಒಂದು ಸಮಯದಲ್ಲಿ, ಅವನು ರಾಜಕೀಯದಲ್ಲಿ ಒಳಗೂಡಿ, ಸಮಾಜವಾದ ನೀತಿಯನ್ನು ಅಂಗೀಕರಿಸಿದನು. ಅವನು ಸ್ಥಳಿಕ ಕಮ್ಯೂನಿಸ್ಟ್‌ ಪಾರ್ಟಿಯ ಕ್ರಿಯಾಶೀಲ ಸದಸ್ಯನೂ ಆದನು.

ಆದರೆ ಸ್ವಲ್ಪ ಸಮಯದಲ್ಲೇ ಕಮ್ಯೂನಿಸ್ಟ್‌ವಾದದ ವಿಷಯದಲ್ಲಿ ಅವನಿಗೆ ಭ್ರಮನಿರಸನವಾಯಿತು. ಅವನು ರಾಜಕೀಯದಿಂದ ತನ್ನನ್ನು ಪ್ರತ್ಯೇಕಿಸಿಕೊಂಡು, ಪೂರ್ಣವಾಗಿ ತನ್ನ ಕುಟುಂಬಕ್ಕೆ ಗಮನಕೊಡುವವನಾದನು. ತನ್ನ ಕುಟುಂಬವನ್ನು ಸಂತೋಷವಾಗಿರಿಸುವುದೇ ಅವನ ಜೀವನೋದ್ದೇಶವಾಯಿತು. ಆದರೂ, ಆಂತರಿಕವಾಗಿ ಒಂದು ಶೂನ್ಯ ಭಾವನೆಯು ಅವನನ್ನು ಕಾಡುತ್ತಿತ್ತು; ನಿಜವಾದ ಮನಶ್ಶಾಂತಿಯು ಅವನ ಹಿಡಿತಕ್ಕೆ ಇನ್ನೂ ಸಿಕ್ಕಿರಲಿಲ್ಲ.

ಆಲ್ಬರ್ಟನ ಅನುಭವವು ಅಸಾಮಾನ್ಯವಾದುದೇನೂ ಅಲ್ಲ. ಅರ್ಥಗರ್ಭಿತವಾದ ಜೀವನೋದ್ದೇಶವನ್ನು ಕಂಡುಹಿಡಿಯಲಿಕ್ಕಾಗಿ ಕೋಟ್ಯಂತರ ಮಂದಿ ವಿವಿಧ ಸಿದ್ಧಾಂತಗಳು, ತತ್ತ್ವಜ್ಞಾನಗಳು ಮತ್ತು ಧರ್ಮಗಳನ್ನು ಪ್ರಯೋಗಿಸಿ ನೋಡಿದ್ದಾರೆ. ಪಾಶ್ಚಾತ್ಯ ಲೋಕದಲ್ಲಿ 1960ರ ದಶಕದಲ್ಲಿ ನಡೆದ ಹಿಪ್ಪಿ ಚಳುವಳಿಯು ಪರಂಪರಾಗತವಾದ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ವಿರುದ್ಧವಾಗಿದ್ದ ಒಂದು ದಂಗೆಯಾಗಿತ್ತು. ವಿಶೇಷವಾಗಿ ಯುವ ಜನರು, ಮನಃಸ್ಥಿತಿಯನ್ನು ಬದಲಾಯಿಸುವ ಅಮಲೌಷಧಗಳ ಮೂಲಕ ಹಾಗೂ ಆ ಚಳುವಳಿಯ ಗುರುಗಳ ಮತ್ತು ಆಧ್ಯಾತ್ಮಿಕ ಮುಖಂಡರ ತತ್ತ್ವಜ್ಞಾನಗಳ ಮೂಲಕ ಸಂತೋಷಕ್ಕಾಗಿಯೂ ಜೀವನದ ಅರ್ಥಕ್ಕಾಗಿಯೂ ಹುಡುಕಾಡಿದರು. ಆದರೂ, ಈ ಹಿಪ್ಪಿ ಚಳುವಳಿಯು ನೈಜ ಸಂತೋಷವನ್ನು ತರುವುದರಲ್ಲಿ ವಿಫಲಗೊಂಡಿತು. ಇದಕ್ಕೆ ಬದಲು, ಅದು ಅಮಲೌಷಧ ವ್ಯಸನಿಗಳಾದ ಮತ್ತು ಸ್ವಚ್ಛಂದ ಪ್ರವೃತ್ತಿಯ ಯುವ ಜನರನ್ನು ಉತ್ಪಾದಿಸಲು ಸಹಾಯಮಾಡಿ ಸಮಾಜವು ನೈತಿಕ ಗಲಿಬಿಲಿಯೊಳಗೆ ವೇಗಗತಿಯಲ್ಲಿ ಜಾರಿಬೀಳುವಂತೆ ಮಾಡಿತು.

ಹಲವಾರು ಶತಮಾನಗಳಿಂದ ಅನೇಕರು ಸಂಪತ್ತು, ಅಧಿಕಾರ ಅಥವಾ ವಿದ್ಯೆಯ ಮೂಲಕ ಸಂತೋಷವನ್ನು ಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಈ ಪಥಗಳು ಅಂತಿಮವಾಗಿ ನಿರಾಶೆಗೆ ನಡೆಸುತ್ತವೆ. “ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ” ಎಂದು ಯೇಸು ಹೇಳಿದನು. (ಲೂಕ 12:15) ಛಲದಿಂದ ಸಂಪತ್ತನ್ನು ಬೆನ್ನಟ್ಟಿಕೊಂಡು ಹೋಗುವುದು ಸಾಮಾನ್ಯವಾಗಿ ಅಸಂತೋಷವನ್ನು ತರುತ್ತದೆ. ಬೈಬಲು ಹೇಳುವುದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.”​—⁠1 ತಿಮೊಥೆಯ 6:​9, 10.

ಹಾಗಾದರೆ, ಒಬ್ಬನು ಮನಶ್ಶಾಂತಿಯನ್ನು ಮತ್ತು ಜೀವನದಲ್ಲಿ ಒಂದು ಉದ್ದೇಶವನ್ನು ಹೇಗೆ ಕಂಡುಕೊಳ್ಳಬಲ್ಲನು? ಕತ್ತಲೆಯಲ್ಲಿ ಅಸ್ಪಷ್ಟವಾಗಿರುವ ಗುರಿಹಲಗೆಗೆ ಬಾಣ ಹೊಡೆಯುವ ಹಾಗೆ, ಪರೀಕ್ಷಾಪ್ರಯೋಗ ಮಾಡುತ್ತ ಇದ್ದುಕೊಂಡೊ? ಸಂತೋಷದ ಸಂಗತಿಯೇನೆಂದರೆ ನಾವು ಹಾಗೆ ಮಾಡಬೇಕಾಗಿಲ್ಲ. ಮುಂದಿನ ಲೇಖನದಲ್ಲಿ ನಾವು ನೋಡಲಿರುವಂತೆ ಇದಕ್ಕಿರುವ ಪರಿಹಾರ ಮಾರ್ಗವು, ಒಂದು ಅತಿ ಪ್ರಾಮುಖ್ಯವಾದ ಮತ್ತು ನಿಶ್ಚಯವಾಗಿಯೂ ಅದ್ವಿತೀಯವಾಗಿರುವ ಮಾನವ ಅಗತ್ಯವನ್ನು ತೃಪ್ತಿಗೊಳಿಸುವುದೇ ಆಗಿದೆ.

[ಪುಟ 3ರಲ್ಲಿರುವ ಚಿತ್ರ]

ಸಂಪತ್ತು, ಅಧಿಕಾರ ಅಥವಾ ವಿದ್ಯೆಯನ್ನು ಬೆನ್ನಟ್ಟುವುದು ಮನಶ್ಶಾಂತಿಯನ್ನು ಹೊಂದುವಂತೆ ನಿಮಗೆ ಸಹಾಯಮಾಡೀತೆ?