ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವವ್ಯಾಪಕ ಬೈಬಲ್‌ ಶಿಕ್ಷಣದಲ್ಲಿ ನನಗೆ ದೊರೆತ ಪಾಲಿಗಾಗಿ ಧನ್ಯಳು

ವಿಶ್ವವ್ಯಾಪಕ ಬೈಬಲ್‌ ಶಿಕ್ಷಣದಲ್ಲಿ ನನಗೆ ದೊರೆತ ಪಾಲಿಗಾಗಿ ಧನ್ಯಳು

ಜೀವನ ಕಥೆ

ವಿಶ್ವವ್ಯಾಪಕ ಬೈಬಲ್‌ ಶಿಕ್ಷಣದಲ್ಲಿ ನನಗೆ ದೊರೆತ ಪಾಲಿಗಾಗಿ ಧನ್ಯಳು

ಆನಾ ಮಾತೇಆಕೀಸ್‌ ಅವರು ಹೇಳಿದಂತೆ

ಹಾಯಿದೋಣಿಗೆ ಬೆಂಕಿ ಹಿಡಿದಿತ್ತು. ಅದು ಮುಳುಗುವಲ್ಲಿ ಆ 171 ಮೀಟರ್‌ ಉದ್ದದ ದೋಣಿ ನನ್ನನ್ನು ಎಳೆದು ಜಲಸಮಾಧಿ ಮಾಡಲಿತ್ತು. ನಾನು ಬಿರುಸಾದ ಅಲೆಗಳೊಂದಿಗೆ ಹೋರಾಡುತ್ತ ಭದ್ರಸ್ಥಾನವನ್ನು ತಲಪಲಿಕ್ಕಾಗಿ ಮೈಮರೆತು ಈಜತೊಡಗಿದೆ. ತೇಲುತ್ತ ಇರಲು ನನಗಿದ್ದ ಒಂದೇ ಮಾರ್ಗವು ಇನ್ನೊಬ್ಬ ಸ್ತ್ರೀ ಧರಿಸಿದ್ದ ತೇಲು ಕವಚವನ್ನು (ಲೈಫ್‌ ಜ್ಯಾಕೆಟ್‌) ಬಿಗಿಯಾಗಿ ಹಿಡಿದುಕೊಳ್ಳುವುದೇ ಆಗಿತ್ತು. ಶಕ್ತಿ ಮತ್ತು ಧೈರ್ಯಕ್ಕಾಗಿ ನಾನು ದೇವರಿಗೆ ಪ್ರಾರ್ಥಿಸಿದೆ. ನಾನು ಅಷ್ಟನ್ನೇ ಮಾಡಸಾಧ್ಯವಿತ್ತು.

ಅದು ಇಸವಿ 1971 ಆಗಿತ್ತು. ನಾನು ನನ್ನ ಮೂರನೆಯ ಮಿಷನೆರಿ ಸೇವಾಸ್ಥಳಕ್ಕೆ ಹಿಂದಿರುಗುತ್ತಿದ್ದೆ. ಆ ಹಡಗೊಡೆತದಲ್ಲಿ ನನ್ನ ಬಳಿಯಿದ್ದ ಹೆಚ್ಚುಕಡಮೆ ಸಕಲವನ್ನೂ ನಾನು ಕಳೆದುಕೊಂಡೆ. ಆದರೆ ಅತಿ ಪ್ರಾಮುಖ್ಯವಾದ ವಿಷಯಗಳನ್ನು ನಾನು ಕಳೆದುಕೊಳ್ಳಲಿಲ್ಲ. ಅವು ನನ್ನ ಜೀವ, ಪ್ರೀತಿಭರಿತ ಕ್ರೈಸ್ತ ಸಹೋದರತ್ವ ಮತ್ತು ಯೆಹೋವನನ್ನು ಸೇವಿಸುವ ಸುಯೋಗವೇ ಆಗಿದ್ದವು. ಆ ಸೇವೆಯು ನನ್ನನ್ನು ಆಗಲೇ ಮೂರು ಭೂಖಂಡಗಳಿಗೆ ಕೊಂಡೊಯ್ದಿತ್ತು ಮತ್ತು ಈ ಹಡಗೊಡೆತವು ನನ್ನ ಜೀವನದಲ್ಲಿ ನಡೆದ ವಿಶೇಷ ಘಟನೆಗಳ ಸಾಲಿನಲ್ಲಿ ಕೇವಲ ಒಂದಾಗಿತ್ತು.

ನಾನು ಜನಿಸಿದ್ದು 1922ರಲ್ಲಿ. ನನ್ನ ಕುಟುಂಬ ಜೆರೂಸಲೇಮಿನಿಂದ ಸುಮಾರು 16 ಕಿಲೊಮೀಟರ್‌ ಉತ್ತರಕ್ಕಿರುವ ರಾಮಲ್ಲಾದಲ್ಲಿ ವಾಸಿಸುತ್ತಿತ್ತು. ನನ್ನ ತಂದೆತಾಯಿಗಳಿಬ್ಬರೂ ಕ್ರೀಟ್‌ ದ್ವೀಪದವರಾಗಿದ್ದರೂ, ನನ್ನ ತಂದೆ ಬೆಳೆದದ್ದು ನಜರೇತ್‌ನಲ್ಲಿ. ಮೂವರು ಹುಡುಗರು ಮತ್ತು ಇಬ್ಬರು ಹುಡುಗಿಯರಿದ್ದ ಐದು ಮಂದಿ ಮಕ್ಕಳಿದ್ದ ನಮ್ಮ ಕುಟುಂಬದಲ್ಲಿ ನಾನು ಕೊನೆಯವಳಾಗಿದ್ದೆ. ನನ್ನ ಎರಡನೆಯ ಅಣ್ಣ ಶಾಲಾ ವಿಹಾರಕ್ಕೆ ಹೋದ ಸಂದರ್ಭದಲ್ಲಿ ಜೋರ್ಡಾನ್‌ ನದಿಯಲ್ಲಿ ಮುಳುಗಿ ಸತ್ತುಹೋದಾಗ ನನ್ನ ಕುಟುಂಬವು ಜರ್ಜರಿತವಾಯಿತು. ಈ ದುರಂತದ ಬಳಿಕ ನನ್ನ ತಾಯಿ ರಾಮಲ್ಲಾದಲ್ಲಿ ಜೀವಿಸಲು ನಿರಾಕರಿಸಿದ್ದರಿಂದ, ನಾನು ಮೂರು ವರ್ಷದವಳಾಗಿದ್ದಾಗ ನಾವು ಗ್ರೀಸ್‌ ದೇಶದ ಆ್ಯಥೆನ್ಸ್‌ಗೆ ಹೋಗಿ ನೆಲೆಸಿದೆವು.

ಬೈಬಲ್‌ ಸತ್ಯವು ನಮ್ಮ ಕುಟುಂಬವನ್ನು ತಲಪುತ್ತದೆ

ನಾವು ಗ್ರೀಸ್‌ಗೆ ಬಂದು ತಲಪಿದ ಸ್ವಲ್ಪದರಲ್ಲಿ, ಆಗ 22ರ ವಯಸ್ಸಿನವನಾಗಿದ್ದ ನನ್ನ ಹಿರಿಯ ಅಣ್ಣ ನೀಕಾಸ್‌ನಿಗೆ, ಬೈಬಲ್‌ ವಿದ್ಯಾರ್ಥಿಗಳೆಂದು ಆ ಸಮಯದಲ್ಲಿ ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳ ಸಂಪರ್ಕವಾಯಿತು. ಬೈಬಲ್‌ ಜ್ಞಾನಾರ್ಜನೆಯು ಅವನಲ್ಲಿ ಮಹಾ ಸಂತೋಷವನ್ನೂ ಕ್ರೈಸ್ತ ಶುಶ್ರೂಷೆಗಾಗಿ ತೀಕ್ಷ್ಣ ಹುರುಪನ್ನೂ ತುಂಬಿಸಿತು. ಇದರಿಂದ ಕೋಪೋದ್ರೇಕಗೊಂಡ ತಂದೆಯವರು ನೀಕಾಸ್‌ನನ್ನು ಮನೆಯಿಂದ ಹೊರಗೆ ಹಾಕಿದರು. ಹಾಗಿದ್ದರೂ, ನನ್ನ ತಂದೆಯವರು ಪ್ಯಾಲಸ್ಟೈನ್‌ಗೆ ಪ್ರಯಾಣ ಬೆಳೆಸುತ್ತಿದ್ದಾಗಲೆಲ್ಲಾ ನನ್ನ ತಾಯಿ, ಅಕ್ಕ ಮತ್ತು ನಾನು ನೀಕಾಸ್‌ನೊಂದಿಗೆ ಕ್ರೈಸ್ತ ಕೂಟಗಳಿಗೆ ಹೋಗುತ್ತಿದ್ದೆವು. ನನ್ನ ತಾಯಿಯವರು ಕೂಟಗಳಲ್ಲಿ ಕೇಳಿಸಿಕೊಂಡ ವಿಷಯಗಳ ಕುರಿತು ಉತ್ಸಾಹಪೂರ್ವಕವಾಗಿ ಮಾತಾಡುತ್ತಿದ್ದುದನ್ನು ನಾನು ಈಗಲೂ ಜ್ಞಾಪಿಸಿಕೊಳ್ಳುತ್ತೇನೆ. ಆದರೆ ಅದಾಗಿ ಸ್ವಲ್ಪದರಲ್ಲಿಯೇ, ತಾಯಿಯವರು ಇನ್ನೂ 42 ವರ್ಷದವರಾಗಿದ್ದಾಗಲೇ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ಮರಣಹೊಂದಿದರು. ಆ ಕಷ್ಟಕರ ಸಮಯದಲ್ಲಿ ನನ್ನ ಅಕ್ಕ ಆ್ಯರಿಯಾಡ್ನೀ ಪ್ರೀತಿಪೂರ್ವಕವಾಗಿ ನಮ್ಮ ಕುಟುಂಬದ ಜೋಕೆವಹಿಸಿದಳು. ಅವಳಿನ್ನೂ ಒಬ್ಬ ಯುವತಿಯಾಗಿದ್ದರೂ ನನಗೆ ಅನೇಕ ವರ್ಷಗಳ ವರೆಗೆ ತಾಯಿಯಂತಿದ್ದಳು.

ಆ್ಯಥೆನ್ಸ್‌ನಲ್ಲಿದ್ದಾಗ ನನ್ನ ತಂದೆಯವರು ಯಾವಾಗಲೂ ನನ್ನನ್ನು ಅವರ ಜೊತೆಯಲ್ಲಿ ಗ್ರೀಕ್‌ ಆರ್ತೊಡಕ್ಸ್‌ ಚರ್ಚಿಗೆ ಕರೆದೊಯ್ಯುತ್ತಿದ್ದರು ಮತ್ತು ಅವರು ಮರಣಹೊಂದಿದ ಬಳಿಕವೂ ನಾನು ಅದೇ ಚರ್ಚಿಗೆ ಹೋದೆ, ಆದರೆ ಮೊದಲಿನಷ್ಟಲ್ಲ. ಚರ್ಚಿನಲ್ಲಿ ದೇವಭಕ್ತಿಯ ಆಚರಣೆಯ ಯಾವುದೇ ರುಜುವಾತು ನನಗೆ ಕಂಡುಬರದಿದ್ದರಿಂದ, ನಾನು ಕ್ರಮೇಣ ಚರ್ಚಿಗೆ ಹೋಗುವುದನ್ನು ನಿಲ್ಲಿಸಿದೆ.

ನನ್ನ ತಂದೆಯ ಮರಣಾನಂತರ ನನಗೆ ವಿತ್ತ ಖಾತೆಯಲ್ಲಿ (ಮಿನಿಸ್ಟ್ರಿ ಆಫ್‌ ಫೈನಾನ್ಸ್‌) ಒಂದು ಭದ್ರವಾದ ಕೆಲಸ ದೊರೆಯಿತು. ನನ್ನ ಅಣ್ಣನಾದರೊ ಗ್ರೀಸ್‌ನಲ್ಲಿ ಅನೇಕ ವರ್ಷಕಾಲ ಸೇವೆಮಾಡುತ್ತ ತನ್ನ ಜೀವನವನ್ನು ರಾಜ್ಯ ಸಾರುವ ಕೆಲಸಕ್ಕೆ ಮುಡಿಪಾಗಿಟ್ಟಿದ್ದನು. 1934ರಲ್ಲಿ ಅವನು ಸೈಪ್ರಸ್‌ ದೇಶದಲ್ಲಿ ನೆಲೆಸಿದನು. ಆ ಸಮಯದಲ್ಲಿ ಆ ದ್ವೀಪದಲ್ಲಿ ದೀಕ್ಷಾಸ್ನಾನ ಪಡೆದ ಯೆಹೋವನ ಸಾಕ್ಷಿಗಳೇ ಇಲ್ಲದಿದ್ದುದರಿಂದ, ಅವನಿಗೆ ಅಲ್ಲಿ ಸಾರುವ ಕೆಲಸವನ್ನು ಹೆಚ್ಚಿಸುವ ಸದವಕಾಶ ದೊರೆಯಿತು. ಅವನು ವಿವಾಹಿತನಾದಾಗ ಅವನ ಪತ್ನಿ ಗಾಲಾಟೀಅ ಸಹ ಅನೇಕ ವರ್ಷಕಾಲ ಪೂರ್ಣ ಸಮಯದ ಶುಶ್ರೂಷಕಳಾಗಿ ಸೇವೆಮಾಡಿದಳು. * ನೀಕಾಸ್‌ ನಮಗೆ ಪದೇ ಪದೇ ಬೈಬಲಾಧಾರಿತ ಪುಸ್ತಕಗಳನ್ನು ಮತ್ತು ಪತ್ರಿಕೆಗಳನ್ನು ಕಳುಹಿಸುತ್ತಿದ್ದರೂ ನಾವು ಅವನ್ನು ತೆರೆದು ಓದಿದ್ದು ತೀರ ಕಡಮೆ. ಅವನು ತನ್ನ ಮರಣಪರ್ಯಂತ ಸೈಪ್ರಸ್‌ಲ್ಲಿಯೇ ನೆಲೆಸಿದನು.

ಬೈಬಲ್‌ ಸತ್ಯವನ್ನು ನನ್ನದಾಗಿ ಮಾಡಿಕೊಂಡದ್ದು

ಇಸವಿ 1940ರಲ್ಲಿ, ಆ್ಯಥೆನ್ಸ್‌ನಲ್ಲಿ ಒಬ್ಬ ಹುರುಪಿನ ಸಾಕ್ಷಿಯೂ ನೀಕಾಸ್‌ನ ಮಿತ್ರರೂ ಆಗಿದ್ದ ಜಾರ್ಜ್‌ ಡೂರಾಸ್‌ ಎಂಬವರು ನಮ್ಮನ್ನು ಭೇಟಿಮಾಡಿದರು ಮತ್ತು ನಾವು ಅವರ ಮನೆಯಲ್ಲಿ ನಡೆಯುತ್ತಿದ್ದ ಒಂದು ಬೈಬಲ್‌ ಅಧ್ಯಯನದ ಗುಂಪನ್ನು ಜೊತೆಗೂಡುವಂತೆ ಆಮಂತ್ರಿಸಿದರು. ನಾವು ಸಂತೋಷದಿಂದ ಆ ಆಮಂತ್ರಣವನ್ನು ಸ್ವೀಕರಿಸಿದೆವು. ಬೇಗನೆ, ನಾವು ಕಲಿತದ್ದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದೆವು. ಬೈಬಲಿನಿಂದ ಗಳಿಸಿದ ಜ್ಞಾನವು, ನಾನು ಮತ್ತು ನನ್ನ ಅಕ್ಕ ಯೆಹೋವನಿಗೆ ನಮ್ಮ ಜೀವಿತಗಳನ್ನು ಸಮರ್ಪಿಸಿಕೊಳ್ಳುವಂತೆ ನಡೆಸಿತು. ಹೀಗೆ ಆ್ಯರಿಯಾಡ್ನೀ 1942ರಲ್ಲಿ ಮತ್ತು ನಾನು 1943ರಲ್ಲಿ ದೀಕ್ಷಾಸ್ನಾನ ಪಡೆದೆವು.

ಎರಡನೆಯ ಲೋಕ ಯುದ್ಧ ಮುಗಿದಾಗ, ನಾವು ಸೈಪ್ರಸ್‌ಗೆ ಬಂದು ನೆಲೆಸುವಂತೆ ನೀಕಾಸ್‌ ಕೇಳಿಕೊಂಡನು. ಆದುದರಿಂದ 1945ರಲ್ಲಿ ನಾವು ಸೈಪ್ರಸ್‌ಗೆ ಸ್ಥಳಾಂತರಿಸಿದೆವು. ಗ್ರೀಸ್‌ನಲ್ಲಿದ್ದಂತೆ ಸೈಪ್ರಸ್‌ನಲ್ಲಿ ಸಾರುವ ಕೆಲಸಕ್ಕೆ ನಿಷೇಧವಿರಲಿಲ್ಲ. ನಾವು ಮನೆಮನೆಯ ಸೇವೆಯಲ್ಲಿ ಮಾತ್ರವಲ್ಲ ಬೀದಿ ಸಾಕ್ಷಿಕಾರ್ಯದಲ್ಲಿಯೂ ಭಾಗವಹಿಸಿದೆವು.

ಎರಡು ವರ್ಷಗಳ ಬಳಿಕ ಆ್ಯರಿಯಾಡ್ನೀ ಗ್ರೀಸ್‌ಗೆ ಹಿಂದೆ ಹೋಗಬೇಕಾಯಿತು. ಅಲ್ಲಿ ಆಕೆ ಯೆಹೋವನ ಜೊತೆ ಆರಾಧಕನಾಗಿದ್ದ ತನ್ನ ಭಾವೀ ಗಂಡನನ್ನು ಭೇಟಿಯಾದಳು. ಆದಕಾರಣ ಆಕೆ ಆ್ಯಥೆನ್ಸ್‌ನಲ್ಲಿಯೇ ಉಳಿದಳು. ಮದುವೆಯಾದ ಬಳಿಕ ನನ್ನ ಅಕ್ಕ ಮತ್ತು ಭಾವ ನಾನು ಗ್ರೀಸ್‌ಗೆ ಹಿಂದಿರುಗಿ ರಾಜಧಾನಿಯಾದ ಆ್ಯಥೆನ್ಸ್‌ನಲ್ಲಿ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸುವಂತೆ ಪ್ರೋತ್ಸಾಹಿಸಿದರು. ಪಯನೀಯರ್‌ ಸೇವೆ ಯಾವಾಗಲೂ ನನ್ನ ಗುರಿಯಾಗಿದ್ದ ಕಾರಣ, ನಾನು ಆವಶ್ಯಕತೆ ಎಲ್ಲಿ ಹೆಚ್ಚಾಗಿತ್ತೊ ಆ ಆ್ಯಥೆನ್ಸ್‌ಗೆ ಹಿಂದಿರುಗಿದೆ.

ಹೊಸ ಸದವಕಾಶಗಳು ತೆರೆಯಲ್ಪಡುತ್ತವೆ

ನವೆಂಬರ್‌ 1, 1947ರಂದು ನಾನು ಪಯನೀಯರ್‌ ಸೇವೆಯನ್ನು ಆರಂಭಿಸಿದೆ, ಅಂದರೆ ಸಾರುವ ಕೆಲಸದಲ್ಲಿ ನಾನು ಪ್ರತಿ ತಿಂಗಳು 150 ತಾಸುಗಳನ್ನು ಕಳೆಯುತ್ತಿದ್ದೆ. ನಮ್ಮ ಸಭಾ ಟೆರಿಟೊರಿ ವಿಶಾಲವಾಗಿತ್ತು ಮತ್ತು ನಾನು ತುಂಬ ನಡೆಯಬೇಕಾಗುತ್ತಿತ್ತು. ಹೀಗಿದ್ದರೂ, ನಾನು ಅನೇಕ ಆಶೀರ್ವಾದಗಳನ್ನು ಪಡೆದುಕೊಂಡೆ. ಸಾರುವ ಕೆಲಸದಲ್ಲಿ ಭಾಗವಹಿಸುತ್ತಿದ್ದ ಅಥವಾ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದ ಯಾವುದೇ ಸಾಕ್ಷಿಯನ್ನು ಪೊಲೀಸರು ಅನೇಕವೇಳೆ ದಸ್ತಗಿರಿ ಮಾಡುತ್ತಿದ್ದುದರಿಂದ, ಸ್ವಲ್ಪ ಸಮಯದಲ್ಲಿ ಅವರು ನನ್ನನ್ನೂ ಕೈದುಮಾಡಿದರು.

ಆಗ ಒಂದು ದೊಡ್ಡ ಅಪರಾಧವಾಗಿದ್ದ ಮತಪರಿವರ್ತನೆಯ ಆರೋಪವನ್ನು ನನ್ನ ಮೇಲೆ ಹೊರಿಸಲಾಯಿತು. ನನಗೆ ಆ್ಯಥೆನ್ಸ್‌ನಲ್ಲಿದ್ದ ಆವೆರಾಫ್‌ ಸ್ತ್ರೀಯರ ಸೆರೆಮನೆಯಲ್ಲಿ ಎರಡು ತಿಂಗಳುಗಳ ಸೆರೆವಾಸವನ್ನು ವಿಧಿಸಲಾಯಿತು. ಇನ್ನೊಬ್ಬ ಮಹಿಳಾ ಸಾಕ್ಷಿಯು ಈಗಾಗಲೇ ಆ ಸೆರೆಮನೆಯಲ್ಲಿದ್ದಳು ಮತ್ತು ನಾವಿಬ್ಬರು ಸೆರೆಯಲ್ಲಿದ್ದರೂ ಸಂತೋಷಕರವಾದ ಮತ್ತು ಭಕ್ತಿವರ್ಧಕವಾದ ಕ್ರಿಸ್ತೀಯ ಸಾಹಚರ್ಯವನ್ನು ಸವಿದೆವು. ನನ್ನ ಸೆರೆವಾಸ ಮುಗಿದೊಡನೆ ನಾನು ಸಂತೋಷದಿಂದ ಪಯನೀಯರ್‌ ಸೇವೆಯನ್ನು ಮುಂದುವರಿಸಿದೆ. ಆಗ ನಾನು ಯಾರೊಂದಿಗೆ ಬೈಬಲ್‌ ಅಧ್ಯಯನ ನಡೆಸುತ್ತಿದ್ದೆನೊ ಅವರಲ್ಲಿ ಅನೇಕರು ಈಗಲೂ ಯೆಹೋವನ ನಂಬಿಗಸ್ತ ಸೇವಕರಾಗಿ ಸೇವೆಸಲ್ಲಿಸುತ್ತಿದ್ದಾರೆ ಮತ್ತು ಇದು ನನಗೆ ಮಹಾ ಸಂತೋಷವನ್ನು ಕೊಡುತ್ತದೆ.

ವರುಷ 1949ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 16ನೆಯ ಕ್ಲಾಸಿಗೆ ಹಾಜರಾಗಲು ನನಗೆ ಆಮಂತ್ರಣವು ದೊರೆಯಿತು. ಇಲ್ಲಿ ಮಿಷನೆರಿ ಸೇವೆಗಾಗಿ ಪೂರ್ಣ ಸಮಯದ ಸೇವಕರನ್ನು ತರಬೇತುಗೊಳಿಸಲಾಗುತ್ತದೆ. ನನ್ನ ಸಂಬಂಧಿಕರು ಮತ್ತು ನಾನು ರೋಮಾಂಚನಗೊಂಡೆವು. ನಾನು 1950ರ ಬೇಸಗೆಯಲ್ಲಿ ನ್ಯೂ ಯಾರ್ಕ್‌ ಸಿಟಿಯಲ್ಲಿ ನಡೆಯಲಿದ್ದ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗಿ ಬಳಿಕ ಗಿಲ್ಯಡ್‌ಗೆ ಹೋಗಲು ಯೋಜಿಸಿದೆ.

ಯುನೈಟೆಡ್‌ ಸ್ಟೇಟ್ಸ್‌ಗೆ ಹೋಗಿ ತಲಪಿದ ಬಳಿಕ, ನಾನು ನ್ಯೂ ಯಾರ್ಕ್‌ ಸಿಟಿಯಲ್ಲಿದ್ದ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ಕೆಲವು ತಿಂಗಳುಗಳ ಕಾಲ ಗೃಹಕೃತ್ಯ ನಿರ್ವಹಣೆಯಲ್ಲಿ ಕೆಲಸಮಾಡಿದೆ. ಅಲ್ಲಿನ ಪರಿಸರವು ನಿರ್ಮಲ, ರಮ್ಯ ಮತ್ತು ಭಕ್ತಿವರ್ಧಕವಾದುದಾಗಿತ್ತು ಮತ್ತು ಎಲ್ಲಿ ನೋಡಿದರೂ ನಗುಮುಖದ ಸೋದರಸೋದರಿಯರು ಇರುತ್ತಿದ್ದರು. ನಾನು ಅಲ್ಲಿ ಕಳೆದ ಆರು ತಿಂಗಳುಗಳನ್ನು ಸದಾ ಅಕ್ಕರೆಯಿಂದ ನೆನಪಿಸಿಕೊಳ್ಳುತ್ತೇನೆ. ಆಗ ಬಂತು ಗಿಲ್ಯಡ್‌ ಶಾಲೆಗೆ ಹಾಜರಾಗುವ ಸಮಯ. ಗಾಢ ಅಧ್ಯಯನ ಮತ್ತು ಶಿಕ್ಷಣದ ಐದು ತಿಂಗಳುಗಳು ಕ್ಷಣಮಾತ್ರದಲ್ಲಿ ದಾಟಿಹೋದವು. ಶಾಸ್ತ್ರಾಧಾರಿತ ಜ್ಞಾನವು ಎಷ್ಟು ಅಮೂಲ್ಯವೂ ಸೊಗಸಾದದ್ದೂ ಆಗಿದೆಯೆಂಬುದನ್ನು ಶಿಕ್ಷಾರ್ಥಿಗಳಾದ ನಾವು ಗ್ರಹಿಸಿದೆವು ಮತ್ತು ಇದು ಸತ್ಯದ ಜೀವದಾಯಕ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ವಿಷಯದಲ್ಲಿ ನಮ್ಮ ಸಂತಸ ಹಾಗೂ ಬಯಕೆಯನ್ನು ಹೆಚ್ಚಿಸಿತು.

ನನ್ನ ಪ್ರಥಮ ಮಿಷನೆರಿ ನೇಮಕ

ಗಿಲ್ಯಡ್‌ ಶಾಲೆಯಲ್ಲಿ, ಮಿಷನೆರಿ ನೇಮಕ ದೊರೆಯುವ ಮೊದಲು ನಮ್ಮ ಭಾವೀ ಸಹಭಾಗಿಗಳನ್ನು ಆಯ್ಕೆಮಾಡಲು ನಮಗೆ ಅನುಮತಿಕೊಡಲಾಯಿತು. ರೂತ್‌ ಹೆಮಿಗ್‌ (ಈಗ ಬೊಸ್‌ಹಾರ್ಡ್‌) ನನ್ನ ಜೊತೆಗಾರ್ತಿಯಾಗಿದ್ದಳು. ಅವಳೊಬ್ಬ ಅಸಾಧಾರಣ ಸಹೋದರಿಯಾಗಿದ್ದಳು. ಏಷ್ಯಾ ಮತ್ತು ಯೂರೋಪಿನ ಮಧ್ಯೆ ಕೂಡುಹಾದಿಯಾಗಿದ್ದ ಟರ್ಕಿ ದೇಶದ ಇಸ್ಟಂಬೂಲ್‌ ನಗರವನ್ನು ನಮ್ಮ ನೇಮಕ ಸ್ಥಳವಾಗಿ ಪಡೆದಾಗ ನಮ್ಮ ಹರ್ಷ ತುಂಬಿತುಳುಕಿತು! ಸಾರುವ ಕೆಲಸವು ಅಲ್ಲಿ ಇನ್ನೂ ಕಾನೂನುಬದ್ಧ ಮನ್ನಣೆ ಪಡೆದಿರಲಿಲ್ಲವೆಂಬ ವಿಷಯವು ನಮಗೆ ತಿಳಿದಿದ್ದರೂ ಯೆಹೋವನು ನಮ್ಮನ್ನು ಬೆಂಬಲಿಸುವನೆಂಬ ವಿಷಯದಲ್ಲಿ ನಮಗೆ ಯಾವ ಸಂಶಯವೂ ಇರಲಿಲ್ಲ.

ಇಸ್ಟಂಬೂಲ್‌ ಬಹುರಾಷ್ಟ್ರೀಯ ಜನರುಳ್ಳ ಒಂದು ಸುಂದರವಾದ ನಗರ. ಅಲ್ಲಿ ನಾವು ಸರಕುಸಾಮಾನುಗಳಿಂದ ತುಂಬಿತುಳುಕುವ ಪೇಟೆಗಳು, ಲೋಕದ ಅತ್ಯುತ್ತಮ ಪಾಕಪದ್ಧತಿಗಳ ಸಮ್ಮಿಶ್ರಣ, ಆಸಕ್ತಿದಾಯಕ ವಸ್ತುಸಂಗ್ರಹಾಲಯಗಳು, ಹೃದಯಂಗಮವಾದ ನೆರೆಹೊರೆಗಳು ಮತ್ತು ಸದಾ ಚಿತ್ತಾಕರ್ಷಕವಾದ ಸಾಗರದರ್ಶಿನಿ ಸ್ಥಳಗಳನ್ನು ನೋಡಿದೆವು. ಹೆಚ್ಚು ಪ್ರಾಮುಖ್ಯವಾಗಿ, ದೇವರ ಕುರಿತು ಕಲಿಯಬಯಸುವ ಯಥಾರ್ಥಮನಸ್ಸಿನ ಜನರನ್ನೂ ನಾವು ಕಂಡುಕೊಂಡೆವು. ಇಸ್ಟಂಬೂಲ್‌ನಲ್ಲಿದ್ದ ಚಿಕ್ಕ ಗುಂಪಿನಲ್ಲಿ ಪ್ರಧಾನವಾಗಿ, ಆರ್ಮೇನಿಯನ್‌, ಗ್ರೀಕ್‌ ಮತ್ತು ಯೆಹೂದಿ ಜನರಿದ್ದರು. ಆದರೂ ಅಲ್ಲಿ ಅನೇಕ ರಾಷ್ಟ್ರಗಳ ಜನರಿದ್ದುದರಿಂದ, ಟರ್ಕಿಷ್‌ ಭಾಷೆಯನ್ನು ಸೇರಿಸಿ ಇನ್ನೂ ಅನೇಕ ಭಾಷೆಗಳನ್ನು ತಿಳಿದಿರುವುದು ಉಪಯುಕ್ತವಾಗಿತ್ತು. ಸತ್ಯಕ್ಕಾಗಿ ಬಾಯಾರಿದ್ದ ವಿವಿಧ ರಾಷ್ಟ್ರಗಳ ಜನರನ್ನು ಭೇಟಿಮಾಡುವುದರಲ್ಲಿ ನಾವು ನಿಜವಾಗಿಯೂ ತುಂಬ ಸಂತೋಷಿಸಿದೆವು. ಇವರಲ್ಲಿ ಅನೇಕರು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಾ ಇದ್ದಾರೆ.

ಆದರೆ ವಿಷಾದಕರವಾಗಿ, ರೂತ್‌ಗೆ ತನ್ನ ದೇಶವಸತಿಯ ಪರವಾನಗಿಯನ್ನು (ರೆಸಿಡೆನ್ಸ್‌ ಪರ್ಮಿಟ್‌) ನವೀಕರಿಸಲು ಸಾಧ್ಯವಾಗದೆ ಹೋದುದರಿಂದ ಅವಳು ದೇಶವನ್ನು ಬಿಟ್ಟು ಹೋಗಬೇಕಾಯಿತು. ಅವಳು ಈಗಲೂ ಸ್ವಿಟ್ಸರ್ಲೆಂಡಿನಲ್ಲಿ ಪೂರ್ಣ ಸಮಯದ ಸೇವೆಯನ್ನು ಮುಂದುವರಿಸುತ್ತಿದ್ದಾಳೆ. ಇಷ್ಟು ವರ್ಷಗಳು ಕಳೆದರೂ, ನಾನು ಅವಳ ಹಿತಕರವೂ ಭಕ್ತಿವರ್ಧಕವೂ ಆದ ಒಡನಾಟವನ್ನು ಇನ್ನೂ ನೆನಪುಮಾಡಿಕೊಳ್ಳುತ್ತೇನೆ.

ಲೋಕದ ಇನ್ನೊಂದು ಭಾಗಕ್ಕೆ

ಇಸವಿ 1963ರಲ್ಲಿ, ಟರ್ಕಿಯಲ್ಲಿ ನನಗಿದ್ದ ದೇಶವಸತಿ ಪರವಾನಗಿ ನವೀಕರಿಸಲ್ಪಡಲಿಲ್ಲ. ಜೊತೆಕ್ರೈಸ್ತರನ್ನು ಬಿಟ್ಟುಹೋಗುವುದು ಕಷ್ಟಕರ ವಿಷಯವಾಗಿತ್ತು. ಅವರು ಅನೇಕ ಕಷ್ಟಗಳೊಂದಿಗೆ ಹೋರಾಡುತ್ತಿದ್ದರೂ, ಆಧ್ಯಾತ್ಮಿಕವಾಗಿ ಪ್ರಗತಿ ಮಾಡಿದ್ದನ್ನು ನಾನು ನೋಡಿದೆ. ನನ್ನನ್ನು ಹುರಿದುಂಬಿಸಲಿಕ್ಕಾಗಿ ನನ್ನ ಸಂಬಂಧಿಕರು ನಾನು ನ್ಯೂ ಯಾರ್ಕ್‌ ಸಿಟಿಯಲ್ಲಿ ನಡೆಯಲಿದ್ದ ಒಂದು ಅಧಿವೇಶನಕ್ಕೆ ಹಾಜರಾಗುವಂತೆ ಪ್ರಯಾಣಕ್ಕೆ ಬೇಕಾದ ಹಣವನ್ನು ಕೊಟ್ಟರು. ನಾನು ಆಗ ನನ್ನ ಮುಂದಿನ ನೇಮಕವನ್ನು ಇನ್ನೂ ಪಡೆದಿರಲಿಲ್ಲ.

ಅಧಿವೇಶನದ ಬಳಿಕ ನನ್ನನ್ನು ಪೆರು ದೇಶದ ಲೀಮ ನಗರಕ್ಕೆ ನೇಮಿಸಲಾಯಿತು. ನನ್ನ ಜೊತೆಗಾರ್ತಿಯಾಗಲಿದ್ದ ಒಬ್ಬ ಯುವ ಸಹೋದರಿಯ ಜೊತೆಯಲ್ಲಿ ನಾನು ನ್ಯೂ ಯಾರ್ಕ್‌ನಿಂದ ಸೀದಾ ನನ್ನ ಹೊಸ ನೇಮಕಸ್ಥಳಕ್ಕೆ ಹೋದೆ. ನಾನು ಸ್ಪ್ಯಾನಿಷ್‌ ಭಾಷೆಯನ್ನು ಕಲಿತೆ ಮತ್ತು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನ ಮೇಲ್ಮಹಡಿಯಲ್ಲಿದ್ದ ಮಿಷನೆರಿ ಮನೆಯಲ್ಲಿ ವಾಸಿಸಿದೆ. ಅಲ್ಲಿ ಸಾರುವುದು ಮತ್ತು ಸ್ಥಳಿಕ ಸೋದರಸೋದರಿಯರ ಪರಿಚಯಮಾಡಿಕೊಳ್ಳುವುದು ಅತಿ ಹಿತಕರವಾಗಿತ್ತು.

ಇನ್ನೊಂದು ನೇಮಕ, ಇನ್ನೊಂದು ಭಾಷೆ

ಸಮಯಾನಂತರ, ಗ್ರೀಸ್‌ನಲ್ಲಿದ್ದ ನನ್ನ ಸಂಬಂಧಿಕರು ವೃದ್ಧಾಪ್ಯ ಮತ್ತು ಕೆಡುತ್ತಿರುವ ಆರೋಗ್ಯದ ಪರಿಣಾಮಗಳನ್ನು ಅನುಭವಿಸತೊಡಗಿದರು. ಆದರೆ ನಾನು ಪೂರ್ಣ ಸಮಯದ ಸೇವೆಯನ್ನು ಬಿಡುವಂತೆ ಮತ್ತು ಅವರಿಗೆ ನೆರವಾಗುವ ಕಾರಣಕ್ಕಾಗಿ ಸಾಮಾನ್ಯವೆಂದು ಕರೆಯಲ್ಪಡುವ ಜೀವನಕ್ಕೆ ಹಿಂದಿರುಗುವಂತೆ ಅವರು ನನ್ನನ್ನು ಎಂದಿಗೂ ಪ್ರೋತ್ಸಾಹಿಸಲಿಲ್ಲ. ಆದರೂ ಬಹಳಷ್ಟು ಆಲೋಚನೆ ಮತ್ತು ಪ್ರಾರ್ಥನೆಯ ಬಳಿಕ, ನನ್ನ ಕುಟುಂಬಕ್ಕೆ ಹತ್ತಿರವಿದ್ದು ಸೇವೆಮಾಡುವುದು ಉತ್ತಮವಾದೀತೆಂದು ನಾನು ಗ್ರಹಿಸಿದೆ. ಜವಾಬ್ದಾರಿಯುತ ಸಹೋದರರು ಇದಕ್ಕೆ ಪ್ರೀತಿಪೂರ್ವಕವಾಗಿ ಒಪ್ಪಿ ನನ್ನನ್ನು ಇಟಲಿಗೆ ನೇಮಿಸಿದರು. ನನ್ನ ಸಂಬಂಧಿಕರು ಆ ವರ್ಗಾವಣೆಯ ಖರ್ಚನ್ನು ಭರ್ತಿಮಾಡಿಕೊಡಲು ಮುಂದೆಬಂದರು. ವಾಸ್ತವದಲ್ಲಿ, ಇಟಲಿಯಲ್ಲಿ ಸೌವಾರ್ತಿಕರ ಅಗತ್ಯ ಬಹಳಷ್ಟಿತ್ತು.

ನನಗೆ ಪುನಃ ಒಂದು ಹೊಸ ಭಾಷೆಯನ್ನು, ಅಂದರೆ ಇಟ್ಯಾಲಿಯನ್‌ ಭಾಷೆಯನ್ನು ಕಲಿಯಬೇಕಾಯಿತು. ಅಲ್ಲಿ ನನ್ನನ್ನು ಮೊದಲು ಫಾಜಾ ನಗರಕ್ಕೆ ನೇಮಿಸಲಾಯಿತು. ಅಲ್ಲಿಂದ ನನ್ನನ್ನು ಹೆಚ್ಚಿನ ಸಹಾಯದ ಅಗತ್ಯವಿದ್ದ ನೇಪ್‌ಲ್ಸ್‌ಗೆ ವರ್ಗಾಯಿಸಲಾಯಿತು. ಅಲ್ಲಿ ನನಗಿದ್ದ ಟೆರಿಟೊರಿಯು ನೇಪ್‌ಲ್ಸ್‌ನ ಅತಿ ಸೊಗಸಾದ ಭಾಗಗಳಲ್ಲಿ ಒಂದಾಗಿದ್ದ ಪೋಸೀಲೀಪೊ ಆಗಿತ್ತು. ಅದು ವಿಶಾಲವಾದ ಸ್ಥಳವಾಗಿತ್ತು ಮತ್ತು ಒಬ್ಬನೇ ರಾಜ್ಯ ಪ್ರಚಾರಕನು ಅಲ್ಲಿದ್ದನು. ಅಲ್ಲಿ ನಾನು ಸಾರುವ ಕಾರ್ಯದಲ್ಲಿ ತುಂಬ ಆನಂದಿಸಿದೆ ಮತ್ತು ಅನೇಕ ಅಧ್ಯಯನಗಳನ್ನು ಆರಂಭಿಸುವಂತೆ ಯೆಹೋವನು ನನಗೆ ಸಹಾಯಮಾಡಿದನು. ಕಾಲಾನಂತರ, ಅಲ್ಲಿ ಒಂದು ದೊಡ್ಡ ಸಭೆ ಬೆಳೆಯಿತು.

ನಾನು ಬೈಬಲ್‌ ಅಧ್ಯಯನ ನಡೆಸಿದ್ದ ಪ್ರಥಮ ಸ್ಥಳಿಕರಲ್ಲಿ ಒಬ್ಬ ತಾಯಿ ಮತ್ತು ಅವಳ ನಾಲ್ಕು ಮಂದಿ ಮಕ್ಕಳಿದ್ದರು. ಅವಳು ಮತ್ತು ಅವಳ ಇಬ್ಬರು ಹೆಣ್ಣು ಮಕ್ಕಳು ಈಗಲೂ ಯೆಹೋವನ ಸಾಕ್ಷಿಗಳಾಗಿದ್ದಾರೆ. ಚಿಕ್ಕ ಮಗಳಿದ್ದ ಒಂದು ವಿವಾಹಿತ ಜೋಡಿಯೊಂದಿಗೂ ನಾನು ಅಧ್ಯಯನ ನಡೆಸಿದ್ದೆ. ಆ ಕುಟುಂಬದವರೆಲ್ಲರೂ ಸತ್ಯದಲ್ಲಿ ಪ್ರಗತಿಮಾಡಿ, ತಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ತೋರಿಸಿಕೊಟ್ಟರು. ಆ ಮಗಳು ಈಗ ಯೆಹೋವನ ಒಬ್ಬ ನಂಬಿಗಸ್ತ ಸೇವಕನ ಹೆಂಡತಿಯಾಗಿದ್ದಾಳೆ ಮತ್ತು ಅವರಿಬ್ಬರೂ ಯೆಹೋವನನ್ನು ಹುರುಪಿನಿಂದ ಸೇವಿಸುತ್ತಿದ್ದಾರೆ. ಒಂದು ದೊಡ್ಡ ಕುಟುಂಬದೊಂದಿಗೆ ಅಧ್ಯಯನ ನಡೆಸುತ್ತಿದ್ದಾಗ, ದೇವರ ವಾಕ್ಯಕ್ಕಿರುವ ಬಲವನ್ನು ನೋಡಿ ನಾನು ಪ್ರಭಾವಿತಳಾದೆ. ವಿಗ್ರಹಗಳ ಆರಾಧನೆಯನ್ನು ದೇವರು ಒಪ್ಪುವುದಿಲ್ಲವೆಂಬುದನ್ನು ತೋರಿಸುವ ಅನೇಕ ವಚನಗಳನ್ನು ನಾವು ಓದಿದಾಗ, ತಾಯಿಯು ಅಧ್ಯಯನ ಮುಗಿಯುವ ವರೆಗೆ ಕಾಯದೆ, ಆ ಕೂಡಲೇ ತನ್ನ ಮನೆಯಲ್ಲಿದ್ದ ಎಲ್ಲ ವಿಗ್ರಹಗಳನ್ನು ತೆಗೆದುಹಾಕಿದಳು!

ಸಮುದ್ರದಲ್ಲಿ ಅಪಾಯಗಳು

ಇಟಲಿಯಿಂದ ಗ್ರೀಸ್‌ಗೆ ಹೋಗಿಬರುವಾಗಲೆಲ್ಲಾ ನಾನು ಯಾವಾಗಲೂ ಹಡಗಿನಲ್ಲಿ ಪ್ರಯಾಣಿಸುತ್ತಿದ್ದೆ. ಸಾಮಾನ್ಯವಾಗಿ ಈ ಪ್ರಯಾಣ ತುಂಬ ಹಿತಕರವಾಗಿರುತ್ತಿತ್ತು. ಆದರೆ 1971ರಲ್ಲಿ ಒಂದು ಪ್ರಯಾಣ ಭಿನ್ನವಾಗಿತ್ತು. ಇಟಲಿಗೆ ವಾಪಸ್ಸು ಹೋಗಲು ನಾನು ಎಲೆಏನಾ ಎಂಬ ಹಾಯಿದೋಣಿಯಲ್ಲಿ ಪಯಣಿಸುತ್ತಿದ್ದೆ. ಆಗಸ್ಟ್‌ 28ರ ಮುಂಜಾನೆ ಆ ಹಡಗಿನ ಅಡುಗೆಮನೆಯಲ್ಲಿ ಬೆಂಕಿ ಹೊತ್ತಿಕೊಂಡಿತು. ಅದು ಹಬ್ಬಿದಾಗ ಪ್ರಯಾಣಿಕರು ತೀವ್ರ ಗಾಬರಿಗೊಂಡರು. ಹೆಂಗಸರು ಮೂರ್ಛೆಹೋಗುತ್ತಿದ್ದರು, ಮಕ್ಕಳು ಅಳುತ್ತಿದ್ದರು ಮತ್ತು ಪುರುಷರು ಜೋರಾಗಿ ಗೊಣಗುತ್ತ, ಆವೇಶದಿಂದ ಬೆದರಿಕೆಯನ್ನೊಡ್ಡುತ್ತಿದ್ದರು. ಜನರು ಹಡಗಿನ ಎರಡೂ ಪಕ್ಕಗಳಲ್ಲಿದ್ದ ರಕ್ಷಾನೌಕೆಗಳತ್ತ ಓಡಿದರು. ಆದರೆ, ಅಲ್ಲಿ ಸಾಕಷ್ಟು ತೇಲುಕವಚಗಳು ಇರಲಿಲ್ಲ ಮತ್ತು ರಕ್ಷಾನೌಕೆಗಳನ್ನು ಸಮುದ್ರಕ್ಕಿಳಿಸುವ ಯಂತ್ರ ಸರಿಯಾಗಿ ಕೆಲಸಮಾಡುತ್ತಿರಲಿಲ್ಲ. ನನಗೆ ತೇಲುಕವಚ ಸಿಗಲಿಲ್ಲ. ಆದರೆ ಬೆಂಕಿಯ ಜ್ವಾಲೆಗಳು ಹೆಚ್ಚೆಚ್ಚು ಮೇಲೆ ಏರತೊಡಗಿದ್ದರಿಂದ, ಸಮುದ್ರಕ್ಕೆ ಹಾರುವುದೇ ವಿವೇಕದ ಸಂಗತಿಯಾಗಿತ್ತು.

ನಾನು ನೀರಿಗೆ ದುಮುಕಿದೊಡನೆ, ತೇಲುಕವಚ ಧರಿಸಿದ್ದ ಒಬ್ಬಾಕೆ ಸ್ತ್ರೀ ನನ್ನ ಪಕ್ಕದಲ್ಲಿ ತೇಲಿಕೊಂಡು ಹೋಗುವುದನ್ನು ನೋಡಿದೆ. ಅವಳಿಗೆ ಈಜು ಗೊತ್ತಿಲ್ಲವೆಂಬಂತೆ ತೋರಿತು, ಆದುದರಿಂದ ನಾನು ಆಕೆಯ ಕೈ ಹಿಡಿದು ಮುಳುಗುತ್ತಿದ್ದ ಆ ಹಡಗಿನಿಂದ ಆಕೆಯನ್ನು ದೂರ ಎಳೆದೆ. ಸಮುದ್ರ ಹೆಚ್ಚೆಚ್ಚು ಅಲ್ಲಕಲ್ಲೋಲವಾದಂತೆ, ತೇಲುತ್ತ ಇರಲು ನಾನು ಮಾಡುತ್ತಿದ್ದ ಹೋರಾಟವು ನನ್ನನ್ನು ತೀರ ದಣಿಸಿತು. ಪರಿಸ್ಥಿತಿ ನಿರೀಕ್ಷಾಹೀನವಾಗಿದ್ದರೂ, ನಾನು ಧೈರ್ಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತ ಹೋದುದರಿಂದ ಇದು ನನಗೆ ಬಲವನ್ನು ಕೊಟ್ಟಿತು. ಅಪೊಸ್ತಲ ಪೌಲನಿಗಾದ ಹಡಗೊಡೆತದ ಅನುಭವವು ನನ್ನ ಜ್ಞಾಪಕಕ್ಕೆ ಬಾರದೆ ಇರಲಿಲ್ಲ.​—⁠ಅ. ಕೃತ್ಯಗಳು ಅಧ್ಯಾಯ 27.

ನನ್ನ ಜೊತೆಯಲ್ಲಿದ್ದ ಆ ಸ್ತ್ರೀಯನ್ನು ಬಿಗಿಯಾಗಿ ಹಿಡಿದುಕೊಳ್ಳುತ್ತ, ನಾನು ನಾಲ್ಕು ತಾಸುಗಳ ವರೆಗೆ ಅಲೆಗಳೊಂದಿಗೆ ಹೋರಾಡಿ ಶಕ್ತಿಯಿದ್ದಾಗ ಈಜುತ್ತಹೋದೆ ಮತ್ತು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸುತ್ತ ಇದ್ದೆ. ಕೊನೆಗೆ ಒಂದು ಚಿಕ್ಕ ದೋಣಿ ಸಮೀಪಿಸುತ್ತಿರುವುದನ್ನು ನೋಡಿದೆ. ನನ್ನನ್ನು ರಕ್ಷಿಸಲಾಯಿತಾದರೂ ನನ್ನ ಜೊತೆಯಲ್ಲಿದ್ದ ಆ ಸ್ತ್ರೀ ಆಗಲೇ ಸತ್ತಿದ್ದಳು. ನಾವು ಇಟಲಿಯ ಬಾರೀ ಎಂಬ ಪಟ್ಟಣವನ್ನು ಮುಟ್ಟಿದಾಗ, ನನ್ನನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ನಾನು ಕೆಲವು ದಿನಗಳ ವರೆಗೆ ಆಸ್ಪತ್ರೆಯಲ್ಲಿ ಇರಬೇಕಾಯಿತು ಮತ್ತು ಅನೇಕ ಸಾಕ್ಷಿಗಳು ಅಲ್ಲಿ ನನ್ನನ್ನು ಭೇಟಿಮಾಡಿ ನನಗೆ ಅಗತ್ಯವಿರುವುದನ್ನೆಲ್ಲ ದಯೆಯಿಂದ ಒದಗಿಸಿದರು. ಅವರು ನನಗೆ ತೋರಿಸಿದ ಕ್ರೈಸ್ತ ಪ್ರೀತಿಯಿಂದ ಆಸ್ಪತ್ರೆಯ ವಾರ್ಡಿನಲ್ಲಿದ್ದವರೆಲ್ಲರು ಗಾಢವಾಗಿ ಪ್ರಭಾವಿತರಾದರು. *

ನಾನು ಪೂರ್ಣವಾಗಿ ಸ್ವಸ್ಥಳಾದ ಬಳಿಕ ನನ್ನನ್ನು ರೋಮ್‌ ನಗರಕ್ಕೆ ನೇಮಿಸಲಾಯಿತು. ನಗರದ ಕೇಂದ್ರಭಾಗದಲ್ಲಿದ್ದ ವ್ಯಾಪಾರ ಕ್ಷೇತ್ರದಲ್ಲಿ ಸೇವೆಮಾಡುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ಯೆಹೋವನ ಸಹಾಯದಿಂದ ನಾನು ಇದನ್ನು ಐದು ವರ್ಷಗಳ ವರೆಗೆ ಮಾಡಿದೆ. ನಾನು ಒಟ್ಟು 20 ವರ್ಷಕಾಲ ಇಟಲಿಯಲ್ಲಿನ ಸೇವೆಯಲ್ಲಿ ಆನಂದಿಸಿದೆ ಮತ್ತು ಇಟಲಿಯ ಜನರನ್ನು ಇಷ್ಟಪಡುವವಳಾದೆ.

ಆರಂಭಿಸಿದಲ್ಲಿಗೆ

ಸಮಯಾನಂತರ ಆ್ಯರಿಯಾಡ್ನೀ ಮತ್ತು ಆಕೆಯ ಗಂಡನ ಆರೋಗ್ಯ ಹದಗೆಟ್ಟಿತು. ನಾನು ಅವರಿಗೆ ಹತ್ತಿರದಲ್ಲಿ ಜೀವಿಸುವಲ್ಲಿ, ಅವರು ನನಗೆ ಪ್ರೀತಿಪೂರ್ವಕವಾಗಿ ಮಾಡಿರುವ ಎಲ್ಲ ವಿಷಯಗಳಿಗೆ ಸ್ವಲ್ಪವನ್ನಾದರೂ ಹಿಂದೆ ಸಲ್ಲಿಸಬಹುದೆಂದು ಯೋಚಿಸಿದೆ. ಆದರೆ ಇಟಲಿಯನ್ನು ಬಿಟ್ಟುಹೋಗುವಾಗ ನನ್ನ ಹೃದಯಹಿಂಡಿದಂಥಾಯಿತು ಎಂದು ನಾನು ಒಪ್ಪಿಕೊಳ್ಳಲೇಬೇಕು. ಆದರೂ, ಜವಾಬ್ದಾರಿಯುತ ಸಹೋದರರು ನನಗೆ ಅನುಮತಿಯನ್ನು ನೀಡಿದ ಕಾರಣ 1985ರ ಬೇಸಗೆಕಾಲದಿಂದ ನಾನು, 1947ರಲ್ಲಿ ಪೂರ್ಣ ಸಮಯದ ಸೇವೆಯನ್ನು ಎಲ್ಲಿ ಆರಂಭಿಸಿದೆನೊ ಅದೇ ಆ್ಯಥೆನ್ಸ್‌ನಲ್ಲಿ ಪಯನೀಯರ್‌ ಸೇವೆಯನ್ನು ಮಾಡುತ್ತ ಇದ್ದೇನೆ.

ನನ್ನ ಸಭೆಯ ಟೆರಿಟೊರಿಯಲ್ಲೇ ನಾನು ಸಾರಿದೆ ಮತ್ತು ನಾನು ನಗರದ ಕೇಂದ್ರದಲ್ಲಿರುವ ವ್ಯಾಪಾರ ಟೆರಿಟೊರಿಯಲ್ಲಿ ಸಾರಬಹುದೊ ಎಂದು ಬ್ರಾಂಚ್‌ ಆಫೀಸಿನಲ್ಲಿದ್ದ ಸಹೋದರರನ್ನು ಕೇಳಿದೆ. ನಾನು ಆ ಕೆಲಸವನ್ನು ಒಬ್ಬ ಪಯನೀಯರ್‌ ಸಂಗಡಿಗಳೊಂದಿಗೆ ಮೂರು ವರ್ಷಕಾಲ ಮಾಡಿದೆ. ಹೀಗೆ ನಾವು ಮನೆಯಲ್ಲಿ ವಿರಳವಾಗಿ ಕಂಡುಬರುವ ಜನರಿಗೆ ಸಮಗ್ರ ಸಾಕ್ಷಿಯನ್ನು ಕೊಡಲು ಶಕ್ತರಾದೆವು.

ಸಮಯವು ಗತಿಸುತ್ತ ಹೋಗುವಾಗ ಸೇವೆಮಾಡಲು ನನಗಿರುವ ಬಯಕೆಯು ಸದಾ ಹೆಚ್ಚುತ್ತಾ ಹೋಗುತ್ತದಾದರೂ, ನನ್ನ ಶಾರೀರಿಕ ಶಕ್ತಿ ಹಾಗಾಗುತ್ತಿಲ್ಲ. ನನ್ನ ಭಾವ ಈಗ ಮರಣದಲ್ಲಿ ನಿದ್ರೆಹೋಗಿದ್ದಾರೆ. ನನಗೆ ತಾಯಿಯಂತಿದ್ದ ಆ್ಯರಿಯಾಡ್ನೀ ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆ. ನನ್ನ ವಿಷಯದಲ್ಲಾದರೊ, ನಾನು ಪೂರ್ಣ ಸಮಯದ ಸೇವೆಯಲ್ಲಿ ತೊಡಗಿದ್ದಾಗ ನನ್ನ ಆರೋಗ್ಯ ಚೆನ್ನಾಗಿತ್ತು. ಆದರೆ ಇತ್ತೀಚೆಗೆ ನಾನು ಮಾರ್ಬಲ್‌ ಮೆಟ್ಟಲುಗಳಿಂದ ಇಳಿಯುತ್ತಿದ್ದಾಗ ಬಿದ್ದು ನನ್ನ ಬಲತೋಳು ಮುರಿಯಿತು. ಇನ್ನೊಮ್ಮೆ ನಾನು ಬಿದ್ದಾಗ ನನ್ನ ವಸ್ತಿಕುಹರ ಮುರಿಯಿತು. ಈ ಕಾರಣ ನನಗೆ ಶಸ್ತ್ರಚಿಕಿತ್ಸೆಯಾಗಿ ದೀರ್ಘಕಾಲ ಹಾಸಿಗೆ ಹಿಡಿಯಬೇಕಾಯಿತು. ಮತ್ತು ಈಗ ನನಗೆ ಸರಿಯಾಗಿ ಓಡಾಡಲು ಸಾಧ್ಯವಾಗುವುದಿಲ್ಲ. ನಾನೀಗ ಕೈಕೋಲನ್ನು ಉಪಯೋಗಿಸುವುದರಿಂದ ಇನ್ನೊಬ್ಬರು ಜೊತೆಗಿದ್ದರೆ ಮಾತ್ರ ಹೊರಗೆ ಹೋಗಬಲ್ಲೆ. ಆದರೂ ನನ್ನ ಶಾರೀರಿಕ ಸ್ಥಿತಿ ಉತ್ತಮಗೊಳ್ಳುವುದೆಂದು ನಿರೀಕ್ಷಿಸುತ್ತ ನನಗೆ ಸಾಧ್ಯವಿರುವಷ್ಟನ್ನು ಮಾಡುತ್ತೇನೆ. ಬೈಬಲ್‌ ಶಿಕ್ಷಣ ಕಾರ್ಯದಲ್ಲಿ, ಮಿತ ರೀತಿಯಲ್ಲಾದರೂ ಸರಿ, ಭಾಗವಹಿಸುವುದು ನನಗೀಗಲೂ ನನ್ನ ಸಂತೋಷ ಮತ್ತು ಸಂತೃಪ್ತಿಯ ಮೂಲವಾಗಿರುತ್ತದೆ.

ನಾನು ಪೂರ್ಣ ಸಮಯದ ಸೇವೆಯಲ್ಲಿ ಕಳೆದಿರುವ ಸಂತಸದ ವರುಷಗಳನ್ನು ಜ್ಞಾಪಿಸಿಕೊಳ್ಳುವಾಗ, ನನ್ನ ಹೃದಯವು ಯೆಹೋವನಿಗೆ ಕೃತಜ್ಞತೆಯಿಂದ ತುಂಬಿತುಳುಕುತ್ತದೆ. ನಾನು ಆತನ ಸೇವೆಯಲ್ಲಿ ನನ್ನ ಜೀವನವನ್ನು ಕಳೆದಿರುವಾಗ, ನನ್ನ ಸಾಮರ್ಥ್ಯಗಳನ್ನು ಪೂರ್ಣ ಮಟ್ಟಿಗೆ ಉಪಯೋಗಿಸಲು ಶಕ್ತಗೊಳಿಸುತ್ತಾ, ಆತನೂ ಆತನ ಸಂಘಟನೆಯ ಭೌಮಿಕ ಭಾಗವೂ ಏಕರೀತಿಯ ಹೊಂದಿಕೆಯಿಂದ ಭರವಸಾರ್ಹ ಮಾರ್ಗದರ್ಶನ ಮತ್ತು ಅಮೂಲ್ಯ ಸಹಾಯವನ್ನು ಕೊಟ್ಟಿರುತ್ತದೆ. ಯೆಹೋವನು ನಾನು ಆತನ ಸೇವೆಯಲ್ಲಿ ಮುಂದುವರಿಯುವಂತೆ ನನಗೆ ಬಲವನ್ನು ದಯಪಾಲಿಸಲಿ ಎಂಬುದೇ ನನ್ನ ಹೃತ್ಪೂರ್ವಕವಾದ ಬಯಕೆಯಾಗಿದೆ. ಆತನು ನಿರ್ದೇಶಿಸುತ್ತಿರುವ ವಿಶ್ವವ್ಯಾಪಕ ಬೈಬಲ್‌ ಶಿಕ್ಷಣ ಕಾರ್ಯದಲ್ಲಿ ನನಗೆ ದೊರೆತಿರುವ ಚಿಕ್ಕ ಪಾಲಿಗಾಗಿ ನಾನು ಧನ್ಯಳು.​—⁠ಮಲಾಕಿಯ 3:10.

[ಪಾದಟಿಪ್ಪಣಿಗಳು]

^ ಪ್ಯಾರ. 10 ಯೆಹೋವನ ಸಾಕ್ಷಿಗಳ ಪ್ರಕಾಶನವಾದ ಯೆಹೋವನ ಸಾಕ್ಷಿಗಳ 1995ರ ವರ್ಷಪುಸ್ತಕ (ಇಂಗ್ಲಿಷ್‌)ದ 73-89ನೇ ಪುಟಗಳನ್ನು ನೋಡಿ.

^ ಪ್ಯಾರ. 34 ಹೆಚ್ಚಿನ ವಿವರಗಳಿಗಾಗಿ, ಫೆಬ್ರವರಿ 8, 1972ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 12-16ನೇ ಪುಟಗಳನ್ನು ನೋಡಿ.

[ಪುಟ 9ರಲ್ಲಿರುವ ಚಿತ್ರ]

ನಾನು ಗಿಲ್ಯಡ್‌ಗೆ ಹೋಗುತ್ತಿದ್ದಾಗ ನನ್ನ ಅಕ್ಕ ಆ್ಯರಿಯಾಡ್ನೀ ಮತ್ತು ಅವಳ ಗಂಡ ಮಿಖಾಲಿಸ್‌ ಅವರೊಂದಿಗೆ

[ಪುಟ 10ರಲ್ಲಿರುವ ಚಿತ್ರ]

ರೂತ್‌ ಹೆಮಿಗ್‌ ಮತ್ತು ನನ್ನನ್ನು ಟರ್ಕಿಯ ಇಸ್ಟಂಬೂಲ್‌ಗೆ ನೇಮಿಸಲಾಯಿತು

[ಪುಟ 11ರಲ್ಲಿರುವ ಚಿತ್ರ]

ಇಟಲಿಯಲ್ಲಿ, 1970ರ ದಶಕದ ಆರಂಭದಲ್ಲಿ

[ಪುಟ 12ರಲ್ಲಿರುವ ಚಿತ್ರ]

ಇಂದು ನನ್ನ ಅಕ್ಕ ಆ್ಯರಿಯಾಡ್ನೀಯೊಂದಿಗೆ