ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವುದು’

‘ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವುದು’

‘ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವುದು’

“ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವವನ . . . ಪಾದಗಳು ಪರ್ವತಗಳ ಮೇಲೆ ಎಷ್ಟು ಅಂದವಾಗಿವೆ!”​—⁠ಯೆಶಾಯ 52:⁠7, Nw.

ಇಂದು ಲೋಕವ್ಯಾಪಕವಾಗಿ ಜನರಿಗೆ ತಾವು ಕೆಟ್ಟ ಸುದ್ದಿಗಳ ಪ್ರವಾಹದಲ್ಲಿ ಮುಳುಗಿಹೋಗುತ್ತಿದ್ದೇವೆಂದು ಅನಿಸುತ್ತಿದೆ. ರೇಡಿಯೊ ಹಾಕಿದರೆ, ಭೂಮಿಯ ಮೇಲೆ ಹಾವಳಿಮಾಡುತ್ತಿರುವ ಮಾರಕ ರೋಗಗಳ ಭಯಾನಕ ವರದಿಗಳನ್ನು ಅವರು ಕೇಳುತ್ತಾರೆ. ಟಿವಿ ವಾರ್ತೆಗಳನ್ನು ನೋಡಲಾಗಿ ಹೊಟ್ಟೆಗಿಲ್ಲದಿರುವ ಮಕ್ಕಳು ಸಹಾಯಕ್ಕಾಗಿ ಅಂಗಲಾಚುತ್ತಿರುವ ಮನಕರಗಿಸುವ ಚಿತ್ರಗಳನ್ನು ನೋಡುತ್ತಾರೆ. ವಾರ್ತಾಪತ್ರವನ್ನು ಕೈಗೆತ್ತಿ ನೋಡಿದರೆ, ಕಟ್ಟಡಗಳನ್ನು ನೆಲಸಮಮಾಡಿ ನೂರಾರು ಅಮಾಯಕರನ್ನು ಸಾಯಿಸುವ ಬಾಂಬು ಸ್ಫೋಟಗಳ ಕುರಿತು ಅವರು ಓದುತ್ತಾರೆ.

2 ಹೌದು, ದಿನಾಲೂ ಭಯಂಕರವಾದ ಸಂಗತಿಗಳು ನಡೆಯುತ್ತಿವೆ. ಲೋಕದೃಶ್ಯವು ಬದಲಾವಣೆ ಹೊಂದುತ್ತಿರುವುದು ನಿಶ್ಚಯ, ಆದರೆ ಅದು ಹೆಚ್ಚು ಕೆಟ್ಟದಾಗುತ್ತಿದೆ. (1 ಕೊರಿಂಥ 7:31) ಪಶ್ಚಿಮ ಯೂರೋಪಿನ ಒಂದು ವಾರ್ತಾಪತ್ರಿಕೆ ತಿಳಿಸಿದಂತೆ, ಇಡೀ ಲೋಕವು “ಉರಿಯುತ್ತಿರುವ ಜ್ವಾಲೆಯಲ್ಲಿ ಇನ್ನೇನು ಲಯವಾಗಲಿದೆಯೊ” ಎಂಬಂಥ ಸ್ಥಿತಿಯಲ್ಲಿದೆ. ಆದಕಾರಣ ಹೆಚ್ಚೆಚ್ಚು ಜನರು ವ್ಯಥೆಗೀಡಾಗುವುದರಲ್ಲಿ ಆಶ್ಚರ್ಯವೇನಿಲ್ಲ! ಅಮೆರಿಕದ ಟೆಲಿವಿಷನ್‌ ವಾರ್ತೆಗಳ ಬಗ್ಗೆ ನಡೆಸಲ್ಪಟ್ಟ ಒಂದು ಸಮೀಕ್ಷೆಯಲ್ಲಿ ಒಬ್ಬ ವ್ಯಕ್ತಿಯು, ‘ವಾರ್ತೆಗಳನ್ನು ನೋಡಿದ ಬಳಿಕ ನಾನು ಪೂರ್ತಿಯಾಗಿ ಖಿನ್ನನಾಗುತ್ತೇನೆ. ಎಲ್ಲವೂ ಕೆಟ್ಟ ಸುದ್ದಿಯೇ ಆಗಿರುತ್ತದೆ, ಸಹಿಸಲಾಗುವುದಿಲ್ಲ’ ಎಂದು ಹೇಳಿದಾಗ, ಅವನು ಕೋಟಿಗಟ್ಟಲೆ ಜನರ ಅನಿಸಿಕೆಗಳನ್ನು ಪ್ರತಿಧ್ವನಿಸುತ್ತಿದ್ದನು ಎಂಬುದರಲ್ಲಿ ಸಂದೇಹವಿಲ್ಲ.

ಪ್ರತಿಯೊಬ್ಬನೂ ಕೇಳಬೇಕಾಗಿರುವ ವಾರ್ತೆ

3 ಇಂಥ ನಿರಾಶೆದಾಯಕ ಲೋಕದಲ್ಲಿ ಒಳ್ಳೇ ವಾರ್ತೆಯು ಕೇಳಸಿಗಬಹುದೇ? ಹೌದು, ಸಿಗುತ್ತದೆಂಬುದು ನಿಶ್ಚಯ! ಬೈಬಲು ಸುವಾರ್ತೆಯನ್ನು ಘೋಷಿಸುತ್ತದೆ ಎಂದು ತಿಳಿಯುವುದು ಸಾಂತ್ವನದಾಯಕವೇ ಸರಿ. ರೋಗ, ಹಸಿವೆ, ಪಾತಕ, ಯುದ್ಧ ಮತ್ತು ಸಕಲ ವಿಧವಾದ ದಬ್ಬಾಳಿಕೆಗಳನ್ನು ದೇವರ ರಾಜ್ಯವು ಅಂತ್ಯಗೊಳಿಸುತ್ತದೆ ಎಂಬುದೇ ಆ ಸುವಾರ್ತೆ. (ಕೀರ್ತನೆ 46:9; 72:12) ಸಕಲರೂ ಕೇಳಬೇಕಾಗಿರುವ ವಾರ್ತೆ ಅದಾಗಿದೆಯಲ್ಲವೆ? ಹಾಗೆಂದು ಯೆಹೋವನ ಸಾಕ್ಷಿಗಳು ನಿಶ್ಚಯವಾಗಿಯೂ ನೆನಸುತ್ತಾರೆ. ಆದುದರಿಂದಲೇ, ದೇವರ ರಾಜ್ಯದ ಸುವಾರ್ತೆಯನ್ನು ಎಲ್ಲ ಜನಾಂಗಗಳ ಜನರಿಗೆ ಸಾರಲು ಮಾಡಲಾಗುತ್ತಿರುವ ಅವರ ಸತತ ಪ್ರಯತ್ನಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.​—⁠ಮತ್ತಾಯ 24:14.

4 ಆದರೆ ಈ ಸುವಾರ್ತೆಗೆ ಕೊಂಚವೇ ಪ್ರತಿಕ್ರಿಯೆಯನ್ನು ತೋರಿಸುವ ಟೆರಿಟೊರಿಗಳಲ್ಲಿಯೂ ತೃಪ್ತಿಕರವಾದ ಮತ್ತು ಅರ್ಥವತ್ತಾದ ರೀತಿಯಲ್ಲಿ ಸಾರುವುದರಲ್ಲಿ ಪಾಲ್ಗೊಳ್ಳುವುದನ್ನು ಮುಂದುವರಿಸಲು ನಾವೇನು ಮಾಡಬಲ್ಲೆವು? (ಲೂಕ 8:15) ನಮ್ಮ ಸಾರುವ ಕೆಲಸದ ಮೂರು ಪ್ರಮುಖ ಅಂಶಗಳನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸುವುದು ನಮಗೆ ನಿಸ್ಸಂದೇಹವಾಗಿಯೂ ಸಹಾಯಮಾಡುವುದು. ನಾವು ಇವುಗಳನ್ನು ಪರೀಕ್ಷಿಸಬಹುದು: (1) ನಮ್ಮ ಹೇತುಗಳು, ಅಥವಾ ಇನ್ನೊಂದು ಮಾತಿನಲ್ಲಿ ನಾವು ಏಕೆ ಸಾರುತ್ತೇವೆ; (2) ನಮ್ಮ ಸಂದೇಶ, ಇಲ್ಲವೆ ನಾವು ಏನನ್ನು ಸಾರುತ್ತೇವೆ; (3) ನಮ್ಮ ವಿಧಾನ, ಅಥವಾ ನಾವು ಹೇಗೆ ಸಾರುತ್ತೇವೆ. ನಮ್ಮ ಹೇತುಗಳನ್ನು ಶುದ್ಧವಾಗಿ, ನಮ್ಮ ಸಂದೇಶವನ್ನು ಸ್ಪಷ್ಟವಾಗಿ ಮತ್ತು ನಮ್ಮ ವಿಧಾನಗಳನ್ನು ಪರಿಣಾಮಕಾರಿಯಾಗಿ ಇಟ್ಟುಕೊಳ್ಳುವ ಮೂಲಕ, ನಾವು ವಿವಿಧ ರೀತಿಯ ಜನರಿಗೆ ಒಳ್ಳೇ ವಾರ್ತೆಗಳಲ್ಲಿಯೇ ಅತ್ಯುತ್ತಮವಾದ ದೇವರ ರಾಜ್ಯದ ಸುವಾರ್ತೆಯನ್ನು ಕೇಳಲು ಅವಕಾಶವನ್ನು ಕೊಡುವೆವು. *

ಸುವಾರ್ತೆಯನ್ನು ಸಾರುವುದರಲ್ಲಿ ನಾವು ಏಕೆ ಪಾಲ್ಗೊಳ್ಳುತ್ತೇವೆ?

5 ನಮ್ಮ ಹೇತುಗಳು ಎಂಬ ಪ್ರಥಮ ಅಂಶವನ್ನು ಪರಿಗಣಿಸೋಣ. ನಾವು ಸುವಾರ್ತೆಯನ್ನು ಏಕೆ ಸಾರುತ್ತೇವೆ? ಯೇಸು ಏಕೆ ಸಾರಿದನೊ ಅದೇ ಕಾರಣಕ್ಕಾಗಿ. ಅವನಂದದ್ದು: “ನಾನು ತಂದೆಯನ್ನು ಪ್ರೀತಿಸುತ್ತೇನೆ.” (ಯೋಹಾನ 14:31; ಕೀರ್ತನೆ 40:⁠8) ಪ್ರಧಾನವಾಗಿ, ದೇವರ ಮೇಲೆ ನಮಗಿರುವ ಪ್ರೀತಿಯಿಂದ ನಾವು ಪ್ರಚೋದಿಸಲ್ಪಟ್ಟಿದ್ದೇವೆ. (ಮತ್ತಾಯ 22:​37, 38) ದೇವರ ಮೇಲಿರುವ ಪ್ರೀತಿ ಮತ್ತು ಶುಶ್ರೂಷೆ​—⁠ಇವುಗಳ ಮಧ್ಯೆ ಸಂಬಂಧವಿದೆಯೆಂದು ಬೈಬಲು ತೋರಿಸುತ್ತದೆ. ಅದು ಹೇಳುವುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ.” (1 ಯೋಹಾನ 5:3; ಯೋಹಾನ 14:21) ದೇವರ ಆಜ್ಞೆಗಳಲ್ಲಿ, ‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ’ ಎಂಬ ಆಜ್ಞೆಯೂ ಸೇರಿದೆಯೊ? (ಮತ್ತಾಯ 28:19) ಹೌದು. ಈ ಮಾತುಗಳನ್ನು ಹೇಳಿದ್ದು ಯೇಸುವೆಂಬುದು ನಿಜ, ಆದರೆ ಅವುಗಳ ಕಟ್ಟಕಡೆಯ ಮೂಲನು ಯೆಹೋವನೇ. ಅದು ಹೇಗೆ? ಯೇಸು ತನ್ನ ವಿಷಯದಲ್ಲಿ ವಿವರಿಸಿದ್ದು: “ಆತನೆಂದೂ [ಮನುಷ್ಯ ಕುಮಾರನು] ತನ್ನಷ್ಟಕ್ಕೆ ತಾನೇ ಏನೂ ಮಾಡದೆ ತಂದೆಯು ತನಗೆ ಬೋಧಿಸಿದ ಹಾಗೆ ಅದನ್ನೆಲ್ಲಾ ಮಾತಾಡಿದನು.” (ಯೋಹಾನ 8:28; ಮತ್ತಾಯ 17:5) ಆದಕಾರಣ, ಸಾರುವ ಆಜ್ಞೆಯನ್ನು ಪಾಲಿಸುವ ಮೂಲಕ ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ಆತನಿಗೆ ತೋರಿಸಿಕೊಡುತ್ತೇವೆ.

6 ಇದಲ್ಲದೆ ಯೆಹೋವನ ಮೇಲಿರುವ ನಮ್ಮ ಪ್ರೀತಿಯು ನಾವು ಸಾರುವಂತೆ ಪ್ರಚೋದಿಸುತ್ತದೆ ಏಕೆಂದರೆ, ಸೈತಾನನು ಯೆಹೋವನ ವಿರುದ್ಧವಾಗಿ ಪ್ರವರ್ಧಿಸುವ ಸುಳ್ಳುಗಳನ್ನು ಪ್ರತಿರೋಧಿಸುವ ಬಯಕೆ ನಮಗಿದೆ. (2 ಕೊರಿಂಥ 4:⁠4) ದೇವರ ಆಳ್ವಿಕೆಯ ನ್ಯಾಯಬದ್ಧತೆಯನ್ನು ಸೈತಾನನು ವಿವಾದಕ್ಕೆಳೆದಿದ್ದಾನೆ. (ಆದಿಕಾಂಡ 3:​1-5) ಆದಕಾರಣ ಯೆಹೋವನ ಸಾಕ್ಷಿಗಳಾಗಿರುವ ನಾವು ಸೈತಾನನ ಮಿಥ್ಯಾಪವಾದಗಳನ್ನು ಬಯಲಿಗೆಳೆದು, ದೇವರ ನಾಮವನ್ನು ಮಾನವಕುಲದ ಮುಂದೆ ಪವಿತ್ರೀಕರಿಸಲು ಹಂಬಲಿಸುತ್ತೇವೆ. (ಯೆಶಾಯ 43:​10-12) ಇದಲ್ಲದೆ, ಯೆಹೋವನ ಗುಣಗಳು ಮತ್ತು ಮಾರ್ಗಗಳ ಬಗ್ಗೆ ತಿಳಿದಿರುವ ಕಾರಣದಿಂದಲೂ ನಾವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತೇವೆ. ಆತನಿಗೆ ನಿಕಟವಾಗಿರುವ ಭಾವನೆ ನಮಗಿದೆ ಮತ್ತು ನಮ್ಮ ದೇವರ ಕುರಿತು ಇತರರಿಗೆ ತಿಳಿಸುವ ಬಲವಾದ ಬಯಕೆ ನಮಗಿದೆ. ವಾಸ್ತವದಲ್ಲಿ, ಯೆಹೋವನ ಒಳ್ಳೇತನವೂ ನೀತಿಯ ಮಾರ್ಗಗಳೂ ನಮಗೆಷ್ಟು ಹರ್ಷವನ್ನು ತರುತ್ತವೆಂದರೆ ನಾವು ಆತನ ಬಗ್ಗೆ ಮಾತಾಡುವುದನ್ನು ನಿಲ್ಲಿಸಲಾರೆವು. (ಕೀರ್ತನೆ 145:​7-12) ಆತನ ಸ್ತುತಿಯನ್ನು ಹಾಡಲು ಮತ್ತು ಆತನ “ಗುಣಾತಿಶಯಗಳ” ಬಗ್ಗೆ ಯಾರಿಗೆ ಕೇಳಲು ಮನಸ್ಸಿದೆಯೋ ಅವರಿಗೆ ಅವುಗಳನ್ನು ತಿಳಿಸಲು ನಾವು ಪ್ರೇರಿಸಲ್ಪಡುತ್ತೇವೆ.​—⁠1 ಪೇತ್ರ 2:9; ಯೆಶಾಯ 43:20.

7 ಶುಶ್ರೂಷೆಯಲ್ಲಿ ಭಾಗವಹಿಸುತ್ತ ಮುಂದುವರಿಯಲು ಇನ್ನೊಂದು ಪ್ರಮುಖ ಕಾರಣವಿದೆ: ಕೆಟ್ಟ ಸುದ್ದಿಯ ಎಡೆಬಿಡದ ದಾಳಿಯಿಂದ ಸೋತುಹೋಗಿರುವವರಿಗೆ ಮತ್ತು ಒಂದಲ್ಲ ಒಂದು ಕಾರಣದಿಂದ ನರಳುತ್ತಿರುವವರಿಗೆ ಉಪಶಮನವನ್ನು ನೀಡಲು ನಾವು ಯಥಾರ್ಥವಾಗಿ ಬಯಸುತ್ತೇವೆ. ಈ ವಿಷಯದಲ್ಲಿ ನಾವು ಯೇಸುವನ್ನು ಅನುಕರಿಸಲು ಪ್ರಯತ್ನಿಸುತ್ತೇವೆ. ದೃಷ್ಟಾಂತಕ್ಕೆ, ಮಾರ್ಕ 6ನೆಯ ಅಧ್ಯಾಯದಲ್ಲಿ ಏನು ವರ್ಣಿಸಲ್ಪಟ್ಟಿದೆ ಎಂಬುದನ್ನು ನೋಡಿ.

8 ಅಪೊಸ್ತಲರು ಸಾರುವ ಕಾರ್ಯಾಚರಣೆಯಿಂದ ಹಿಂದಿರುಗಿದಾಗ, ತಾವು ಮಾಡಿದ ಮತ್ತು ಬೋಧಿಸಿದ ಎಲ್ಲ ವಿಷಯಗಳನ್ನು ಯೇಸುವಿಗೆ ತಿಳಿಸುತ್ತಾರೆ. ಅಪೊಸ್ತಲರು ದಣಿದಿದ್ದಾರೆಂದು ಗಮನಿಸಿದ ಯೇಸು, ಅವರು ತನ್ನೊಂದಿಗೆ “ಬಂದು ಸ್ವಲ್ಪ ದಣುವಾರಿಸಿ”ಕೊಳ್ಳುವಂತೆ ಹೇಳುತ್ತಾನೆ. ಆಗ ಅವರು ದೋಣಿಯನ್ನು ಹತ್ತಿ ಒಂದು ಪ್ರಶಾಂತವಾದ ಸ್ಥಳಕ್ಕೆ ಹೋಗುತ್ತಾರೆ. ಆದರೆ ಜನರು ಅವರನ್ನು ಹಿಂಬಾಲಿಸಿ, ಸಮುದ್ರ ತೀರದಲ್ಲಿ ಓಡುತ್ತ ಬಂದು ಅವರ ಬಳಿ ತಲಪುತ್ತಾರೆ. ಆಗ ಯೇಸು ಏನು ಮಾಡುತ್ತಾನೆ? ದಾಖಲೆ ಹೇಳುವುದು: “[ಅವನು] ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶ” ಮಾಡಿದನು. (ಮಾರ್ಕ 6:​31-34) ಯೇಸು ದಣಿದಿದ್ದರೂ, ಕನಿಕರಭಾವವು ಅವನು ಸುವಾರ್ತೆ ಸಾರುವುದನ್ನು ಮುಂದುವರಿಸುತ್ತಾ ಹೋಗುವಂತೆ ಮಾಡುತ್ತದೆ. ಅವನಿಗೆ ಈ ಜನರ ಕುರಿತು ಗಾಢವಾದ ಪರಾನುಭೂತಿಯಿತ್ತು.

9 ಈ ವೃತ್ತಾಂತದಿಂದ ನಾವೇನು ಕಲಿಯುತ್ತೇವೆ? ನಾವು ಕ್ರೈಸ್ತರಾಗಿರುವುದರಿಂದ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕರ್ತವ್ಯ ನಮಗಿದೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು” ಹೊಂದುವುದು ದೇವರ ಚಿತ್ತವಾಗಿರುವುದರಿಂದ, ಸುವಾರ್ತೆಯನ್ನು ಸಾರಲು ನಮಗಿರುವ ಜವಾಬ್ದಾರಿಯನ್ನು ನಾವು ಒಪ್ಪಿಕೊಳ್ಳುತ್ತೇವೆ. (1 ತಿಮೊಥೆಯ 2:⁠4) ಆದರೂ, ನಾವು ನಮ್ಮ ಶುಶ್ರೂಷೆಯನ್ನು ಕೇವಲ ಕರ್ತವ್ಯಪ್ರಜ್ಞೆಯಿಂದಲ್ಲ, ಬದಲಾಗಿ ಕನಿಕರದ ಕಾರಣದಿಂದಲೂ ಮಾಡುತ್ತೇವೆ. ಜನರ ಕುರಿತು ನಾವು ಯೇಸುವಿನಷ್ಟು ಆಳವಾಗಿ ಕನಿಕರಪಡುವಲ್ಲಿ, ಅವರಿಗೆ ಸುವಾರ್ತೆಯನ್ನು ಸಾರುವುದನ್ನು ಮುಂದುವರಿಸಲು ನಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡುವಂತೆ ನಮ್ಮ ಹೃದಯವು ಪ್ರೇರಿಸುವುದು. (ಮತ್ತಾಯ 22:39) ಶುಶ್ರೂಷೆಯಲ್ಲಿ ಭಾಗವಹಿಸಲು ಇಂತಹ ಉತ್ತಮ ಹೇತುಗಳಿರುವುದು, ನಾವು ಎಡೆಬಿಡದೆ ಸುವಾರ್ತೆಯನ್ನು ಸಾರುವಂತೆ ನಮ್ಮನ್ನು ಪ್ರೇರಿಸುವುದು.

ನಮ್ಮ ಸಂದೇಶ​—⁠ದೇವರ ರಾಜ್ಯದ ಸುವಾರ್ತೆ

10 ನಮ್ಮ ಶುಶ್ರೂಷೆಯ ದ್ವಿತೀಯ ಅಂಶವಾದ ನಮ್ಮ ಸಂದೇಶದ ವಿಷಯದಲ್ಲೇನು? ನಾವು ಏನನ್ನು ಸಾರುತ್ತೇವೆ? ಪ್ರವಾದಿಯಾದ ಯೆಶಾಯನು ನಾವು ಪ್ರಕಟಿಸುವ ಸಂದೇಶದ ಈ ಸೊಗಸಾದ ವರ್ಣನೆಯನ್ನು ಕೊಡುತ್ತಾನೆ: “ಸುವಾರ್ತೆಯನ್ನು ಸಾರುವವನ, ಶಾಂತಿಯನ್ನು ಪ್ರಕಟಪಡಿಸುವವನ, ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವವನ, ರಕ್ಷಣೆಯನ್ನು ಪ್ರಕಟಿಸುವವನ ಮತ್ತು ಚಿಯೋನಿಗೆ, ‘ನಿನ್ನ ದೇವರು ಅರಸನಾಗಿದ್ದಾನೆ!’ ಎಂದು ಹೇಳುವವನ ಪಾದಗಳು ಪರ್ವತಗಳ ಮೇಲೆ ಎಷ್ಟು ಅಂದವಾಗಿವೆ!”​—⁠ಯೆಶಾಯ 52:⁠7, NW.

11 ಈ ಶಾಸ್ತ್ರವಚನದ “ನಿನ್ನ ದೇವರು ಅರಸನಾಗಿದ್ದಾನೆ!” ಎಂಬ ಪ್ರಮುಖ ಅಭಿವ್ಯಕ್ತಿಯು ನಾವು ಸಾರಬೇಕಾದ ಸಂದೇಶವನ್ನು, ಅಂದರೆ ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸಬೇಕೆಂದು ನಮಗೆ ನೆನಪು ಹುಟ್ಟಿಸುತ್ತದೆ. (ಮಾರ್ಕ 13:10) ಈ ವಚನವು ನಮ್ಮ ಸಂದೇಶದ ಸಕಾರಾತ್ಮಕ ಸಾರವನ್ನೂ ತಿಳಿಸುತ್ತದೆಂಬುದನ್ನು ಗಮನಿಸಿರಿ. ಯೆಶಾಯನು “ರಕ್ಷಣೆ,” “ಶುಭವರ್ತಮಾನ,” “ಶಾಂತಿ,” ಮತ್ತು “ಹೆಚ್ಚು ಉತ್ತಮ” ಎಂಬ ಪದಗಳನ್ನು ಉಪಯೋಗಿಸುತ್ತಾನೆ. ಯೆಶಾಯನ ನಂತರ ಅನೇಕ ಶತಮಾನಗಳು ಕಳೆದ ಬಳಿಕ, ಸಾ.ಶ. ಒಂದನೆಯ ಶತಮಾನದಲ್ಲಿ, ಹೆಚ್ಚು ಉತ್ತಮವಾದ ಶುಭವರ್ತಮಾನವನ್ನು ಅಂದರೆ ಬರಲಿದ್ದ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಹುರುಪಿನ ಮಾದರಿಯನ್ನಿಡುವ ಮೂಲಕ ಯೇಸು ಕ್ರಿಸ್ತನು ಈ ಪ್ರವಾದನೆಯನ್ನು ಒಂದು ಗಮನಾರ್ಹವಾದ ವಿಧದಲ್ಲಿ ನೆರವೇರಿಸಿದನು. (ಲೂಕ 4:43) ಆಧುನಿಕ ದಿನಗಳಲ್ಲಿ, ವಿಶೇಷವಾಗಿ 1919ರಿಂದ ಯೆಹೋವನ ಸಾಕ್ಷಿಗಳು ದೇವರ ಸ್ಥಾಪಿತ ರಾಜ್ಯ ಮತ್ತು ಅದು ತರಲಿರುವ ಆಶೀರ್ವಾದಗಳ ಕುರಿತಾದ ಸುವಾರ್ತೆಯನ್ನು ಹುರುಪಿನಿಂದ ಘೋಷಿಸುವುದರಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸಿದ್ದಾರೆ.

12 ರಾಜ್ಯದ ಸುವಾರ್ತೆಗೆ ಪ್ರತಿಕ್ರಿಯೆ ತೋರಿಸುವವರ ಮೇಲೆ ಅದು ಯಾವ ಪರಿಣಾಮವನ್ನು ಬೀರುತ್ತದೆ? ಯೇಸುವಿನ ದಿನಗಳಲ್ಲಿದ್ದಂತೆಯೇ ಇಂದು ಈ ಸುವಾರ್ತೆಯು ನಿರೀಕ್ಷೆ ಹಾಗೂ ಸಾಂತ್ವನವನ್ನು ನೀಡುತ್ತದೆ. (ರೋಮಾಪುರ 12:12; 15:⁠4) ಹೆಚ್ಚು ಒಳ್ಳೆಯ ಸಮಯಗಳು ತಮ್ಮ ಮುಂದಿವೆಯೆಂದು ನಂಬಲು ಬಲವಾದ ಕಾರಣಗಳಿವೆಯೆಂದು ಪ್ರಾಮಾಣಿಕ ಹೃದಯದವರು ಕಲಿತುಕೊಳ್ಳುವುದರಿಂದ ಇದು ಅವರಿಗೆ ನಿರೀಕ್ಷೆಯನ್ನು ಕೊಡುತ್ತದೆ. (ಮತ್ತಾಯ 6:​9, 10; 2 ಪೇತ್ರ 3:13) ದೇವಭಯವುಳ್ಳವರು ಸಕಾರಾತ್ಮಕ ಹೊರನೋಟವನ್ನು ಕಾಪಾಡಿಕೊಳ್ಳುವಂತೆ ಇಂತಹ ನಿರೀಕ್ಷೆಯು ಭಾರೀ ಸಹಾಯವನ್ನು ಕೊಡುತ್ತದೆ. ಅವರಿಗೆ “ಕೆಟ್ಟ ಸುದ್ದಿಯ ಭಯವಿರುವದಿಲ್ಲ” ಎನ್ನುತ್ತಾನೆ ಕೀರ್ತನೆಗಾರನು.​—⁠ಕೀರ್ತನೆ 112:​1, 7.

“ಮನಮುರಿದವರನ್ನು ಕಟ್ಟಿ ವಾಸಿಮಾಡುವ” ಸಂದೇಶ

13 ಇದಲ್ಲದೆ, ನಾವು ಸಾರುವ ಸುವಾರ್ತೆಯು ಅದನ್ನು ಆಲಿಸುವವರಿಗೆ ಒಡನೆಯೇ ನೆಮ್ಮದಿ ಮತ್ತು ಆಶೀರ್ವಾದಗಳನ್ನು ತರುತ್ತದೆ. ಹೇಗೆ? ಪ್ರವಾದಿಯಾದ ಯೆಶಾಯನು ಹೀಗೆ ಮುಂತಿಳಿಸಿದಾಗ ಆ ಆಶೀರ್ವಾದಗಳಲ್ಲಿ ಕೆಲವನ್ನು ಸೂಚಿಸಿದನು: “ಕರ್ತನಾದ ಯೆಹೋವನ ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು; ಮನಮುರಿದವರನ್ನು ಕಟ್ಟಿ ವಾಸಿಮಾಡುವದಕ್ಕೂ ಸೆರೆಯವರಿಗೆ ಬಿಡುಗಡೆಯಾಗುವದನ್ನು, ಬಂದಿಗಳಿಗೆ [ಕದ] ತೆರೆಯುವದನ್ನು ಪ್ರಸಿದ್ಧಿಪಡಿಸುವದಕ್ಕೂ ಯೆಹೋವನು ನೇಮಿಸಿರುವ ಶುಭವರುಷ, ನಮ್ಮ ದೇವರು ಮುಯ್ಯಿತೀರಿಸುವ ದಿನ, ಇವುಗಳನ್ನು ಪ್ರಚುರಗೊಳಿಸುವದಕ್ಕೂ ದುಃಖಿತರೆಲ್ಲರನ್ನು ಸಂತೈಸುವದಕ್ಕೂ . . . ಕಳುಹಿಸಿದ್ದಾನೆ.”​—⁠ಯೆಶಾಯ 61:1-3; ಲೂಕ 4:16-21.

14 ಈ ಪ್ರವಾದನೆಗನುಸಾರ ಯೇಸು, ಸುವಾರ್ತೆಯನ್ನು ಸಾರುವ ಮೂಲಕ “ಮನಮುರಿದವರನ್ನು ಕಟ್ಟಿ ವಾಸಿ”ಮಾಡಲಿದ್ದನು. ಯೆಶಾಯನು ಇಲ್ಲಿ ಎಷ್ಟೊಂದು ಮನಮುಟ್ಟುವ ವರ್ಣನೆಯನ್ನು ಬಳಸುತ್ತಾನೆ! ಒಂದು ಬೈಬಲ್‌ ಶಬ್ದಕೋಶಕ್ಕನುಸಾರ, “ಕಟ್ಟಿ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು, “ಅನೇಕವೇಳೆ ಬ್ಯಾಂಡೆಜ್‌ ‘ಕಟ್ಟುವುದಕ್ಕೆ’ ಮತ್ತು ಔಷಧ ಹಚ್ಚಿ ಗಾಯಗೊಂಡವನನ್ನು ವಾಸಿಮಾಡುವುದಕ್ಕೆ ಉಪಯೋಗಿಸಲ್ಪಡುತ್ತದೆ.” ಚಿಂತೆವಹಿಸುವ ಒಬ್ಬ ನರ್ಸ್‌ ಪೆಟ್ಟಾದ ವ್ಯಕ್ತಿಯ ಗಾಯವಾಗಿರುವ ದೇಹಾಂಗಕ್ಕೆ ಆಸರೆಗಾಗಿ ಬ್ಯಾಂಡೆಜನ್ನು ಸುತ್ತಬಹುದು ಅಥವಾ ಪಟ್ಟಿಯನ್ನು ಕಟ್ಟಬಹುದು. ಅದೇ ರೀತಿ, ಚಿಂತೆವಹಿಸುವ ಪ್ರಚಾರಕರು ರಾಜ್ಯದ ಸಂದೇಶವನ್ನು ಸಾರುವಾಗ, ಯಾವುದೇ ರೀತಿಯಲ್ಲಿ ಕಷ್ಟಪಡುತ್ತಿರುವುದಾದರೂ ಸಂದೇಶಕ್ಕೆ ಪ್ರತಿಕ್ರಿಯೆ ತೋರಿಸುವವರೆಲ್ಲರಿಗೆ ಆಸರೆಯನ್ನು ನೀಡುತ್ತಾರೆ. ಮತ್ತು ಅಗತ್ಯದಲ್ಲಿರುವವರನ್ನು ಬೆಂಬಲಿಸುವ ಮೂಲಕ ಅವರು ಯೆಹೋವನ ಚಿಂತೆಯನ್ನು ಪ್ರತಿಬಿಂಬಿಸುತ್ತಾರೆ. (ಯೆಹೆಜ್ಕೇಲ 34:​15, 16) ದೇವರ ಕುರಿತಾಗಿ ಕೀರ್ತನೆಗಾರನು ಹೇಳುವುದು: “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.”​—⁠ಕೀರ್ತನೆ 147:⁠3.

ರಾಜ್ಯದ ಸಂದೇಶವು ಮಾಡಬಲ್ಲ ವ್ಯತ್ಯಾಸ

15 ನಿಜ ಜೀವನದಲ್ಲಿನ ಅನೇಕಾನೇಕ ಉದಾಹರಣೆಗಳು, ರಾಜ್ಯದ ಸಂದೇಶವು ಹೇಗೆ ಮನಮುರಿದವರಿಗೆ ನಿಶ್ಚಯವಾಗಿಯೂ ಆಸರೆಕೊಟ್ಟು ಬಲಪಡಿಸುತ್ತದೆಂಬುದನ್ನು ತೋರಿಸುತ್ತವೆ. ದಕ್ಷಿಣ ಅಮೆರಿಕದಲ್ಲಿ, ಜೀವನದಲ್ಲಿ ಆಸೆಯನ್ನೇ ಕಳೆದುಕೊಂಡಿದ್ದ ಆರಿಯಾನ ಎಂಬ ವೃದ್ಧೆಯನ್ನು ತೆಗೆದುಕೊಳ್ಳಿ. ಯೆಹೋವನ ಸಾಕ್ಷಿಯೊಬ್ಬಳು ಆರಿಯಾನಳನ್ನು ಸಂದರ್ಶಿಸಿ, ಬೈಬಲಿನಿಂದ ಮತ್ತು ಬೈಬಲ್‌ ಕಥೆಗಳ ನನ್ನ ಪುಸ್ತಕ * ಎಂಬ ಸಾಹಿತ್ಯದಿಂದ ಅವಳಿಗೆ ಓದಿಹೇಳತೊಡಗಿದಳು. ಆರಂಭದಲ್ಲಿ, ಆ ಖಿನ್ನ ಸ್ತ್ರೀ ಹಾಸಿಗೆಯಲ್ಲಿ ಮಲಗಿದ್ದುಕೊಂಡೇ ಕಣ್ಣುಮುಚ್ಚಿ ಓದುವಿಕೆಯನ್ನು ಕೇಳಿಸಿಕೊಂಡು, ಆಗಾಗ ನಿಟ್ಟುಸಿರುಬಿಡುತ್ತಿದ್ದಳು. ಆದರೆ ಸ್ವಲ್ಪ ಸಮಯದೊಳಗೆ, ಓದುವಿಕೆಯ ಸಮಯದಲ್ಲಿ ಆಕೆ ಹಾಸಿಗೆಯಲ್ಲಿ ಎದ್ದುಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಸ್ವಲ್ಪ ಸಮಯಾನಂತರ ಆಕೆ, ವಾಸದ ಕೋಣೆಗೆ ಬಂದು ಕುರ್ಚಿಯ ಮೇಲೆ ಕುಳಿತು ತನ್ನ ಬೈಬಲ್‌ ಶಿಕ್ಷಕಿಯ ಬರೋಣಕ್ಕಾಗಿ ಕಾಯುತ್ತಿದ್ದಳು. ಬಳಿಕ, ಆಕೆ ರಾಜ್ಯ ಸಭಾಗೃಹದಲ್ಲಿ ಕ್ರೈಸ್ತ ಕೂಟಗಳಿಗೆ ಹಾಜರಾಗತೊಡಗಿದಳು. ಆ ಕೂಟಗಳಲ್ಲಿ ತಾನು ಕಲಿತ ವಿಷಯಗಳಿಂದ ಉತ್ತೇಜಿತಳಾದ ಆಕೆ, ತನ್ನ ಮನೆಯ ಬಳಿಯಿಂದ ಹೋಗುತ್ತಿದ್ದ ಎಲ್ಲರಿಗೆ ಬೈಬಲ್‌ ಸಾಹಿತ್ಯಗಳನ್ನು ಕೊಡತೊಡಗಿದಳು. ಬಳಿಕ, ತನ್ನ 93ನೆಯ ವಯಸ್ಸಿನಲ್ಲಿ ಆರಿಯಾನ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದುಕೊಂಡಳು. ರಾಜ್ಯದ ಸಂದೇಶವು ಆಕೆಯಲ್ಲಿ ಜೀವನದ ಆಸೆಯನ್ನು ಪುನಃ ಚಿಗುರಿಸಿದೆ.​—⁠ಜ್ಞಾನೋಕ್ತಿ 15:30; 16:24.

16 ರೋಗದ ಕಾರಣ ತಮ್ಮ ಜೀವನವು ಇನ್ನೇನು ಅಂತ್ಯಗೊಳ್ಳಲಿಕ್ಕಿದೆ ಎಂದು ತಿಳಿದಿರುವವರಿಗೆ ಸಹ ರಾಜ್ಯದ ಸಂದೇಶವು ಅತ್ಯಗತ್ಯವಾದ ಆಸರೆಯನ್ನು ನೀಡುತ್ತದೆ. ಪಶ್ಚಿಮ ಯೂರೋಪಿನ ಮರೀಯ ಎಂಬವಳ ದೃಷ್ಟಾಂತವನ್ನು ತೆಗೆದುಕೊಳ್ಳಿ. ಆಕೆ ಮಾರಕವಾದ ರೋಗದಿಂದ ಬಳಲುತ್ತಿದ್ದು ನಿರೀಕ್ಷಾಹೀನಳಾಗಿದ್ದಳು. ಯೆಹೋವನ ಸಾಕ್ಷಿಗಳು ಆಕೆಯನ್ನು ಸಂಪರ್ಕಿಸಿದ ಸಮಯದಲ್ಲಿ ಆಕೆ ತುಂಬ ಖಿನ್ನಳಾಗಿದ್ದಳು. ಆದರೂ, ಆಕೆ ದೇವರ ಉದ್ದೇಶಗಳ ಕುರಿತು ಕಲಿತಾಗ, ಆಕೆಯ ಜೀವನವು ಪುನಃ ಉದ್ದೇಶಭರಿತವಾಯಿತು. ಆಕೆ ದೀಕ್ಷಾಸ್ನಾನ ಪಡೆದುಕೊಂಡು ಸಾರುವ ಕಾರ್ಯದಲ್ಲಿ ತುಂಬ ಕ್ರಿಯಾಶೀಲಳಾದಳು. ಆಕೆಯ ಜೀವನದ ಕೊನೆಯ ಎರಡು ವರುಷಗಳಲ್ಲಿ ಆಕೆಯ ಕಣ್ಣುಗಳು ನಿರೀಕ್ಷೆಯನ್ನೂ ಆನಂದವನ್ನೂ ಹೊರಸೂಸಿದವು. ಕೊನೆಗೆ ಮರೀಯ ಪುನರುತ್ಥಾನದಲ್ಲಿ ದೃಢನಿರೀಕ್ಷೆಯುಳ್ಳವಳಾಗಿ ತೀರಿಕೊಂಡಳು.​—⁠ರೋಮಾಪುರ 8:​38, 39.

17 ಬೈಬಲ್‌ ಸತ್ಯಗಳಿಗಾಗಿ ಹಂಬಲಿಸುವವರ ಜೀವನಗಳಲ್ಲಿ ರಾಜ್ಯದ ಸಂದೇಶವು ಮಾಡಬಲ್ಲ ವ್ಯತ್ಯಾಸಕ್ಕೆ ಇಂತಹ ವರದಿಗಳು ಸಾಕ್ಷ್ಯವಾಗಿವೆ. ಒಬ್ಬ ಪ್ರಿಯ ವ್ಯಕ್ತಿಯ ಮರಣದಿಂದ ಶೋಕಿಸುತ್ತಿರುವವರು, ಪುನರುತ್ಥಾನದ ನಿರೀಕ್ಷೆಯ ಕುರಿತು ಕಲಿಯುವಾಗ ಹೊಸ ಬಲವನ್ನು ಪಡೆದುಕೊಳ್ಳುತ್ತಾರೆ. (1 ಥೆಸಲೊನೀಕ 4:13) ಬಡತನದಲ್ಲಿ ಜೀವಿಸುತ್ತ ಕುಟುಂಬವನ್ನು ಪರಾಮರಿಸಲು ಹೆಣಗಾಡುತ್ತಿರುವವರು, ತಾವು ಯೆಹೋವನಿಗೆ ನಿಷ್ಠರಾಗಿರುವಲ್ಲಿ ಆತನು ಎಂದಿಗೂ ತಮ್ಮ ಕೈಬಿಡನು ಎಂಬುದನ್ನು ಕಲಿಯುವಾಗ ಹೊಸದಾದ ಗೌರವವನ್ನೂ ಧೈರ್ಯವನ್ನೂ ಕಂಡುಕೊಳ್ಳುತ್ತಾರೆ. (ಕೀರ್ತನೆ 37:28) ಖಿನ್ನತೆಯಲ್ಲಿ ಮುಳುಗಿದ್ದ ಅನೇಕರು, ಯೆಹೋವನ ಸಹಾಯದಿಂದ ಅದನ್ನು ನಿಭಾಯಿಸಲು ಬೇಕಾಗಿರುವ ಬಲವನ್ನು ಕ್ರಮೇಣ ಬೆಳೆಸಿಕೊಂಡಿರುವುದಲ್ಲದೆ, ಕೆಲವು ಸಂದರ್ಭಗಳಲ್ಲಿ ಆ ರೋಗಾವಸ್ಥೆಯನ್ನು ಜಯಿಸಲು ಸಹ ಅವರಿಗೆ ಸಾಧ್ಯವಾಗಿದೆ. (ಕೀರ್ತನೆ 40:​1, 2) ಹೌದು, ತನ್ನ ವಾಕ್ಯದ ಮೂಲಕ ಕೊಡಲ್ಪಡುವ ಶಕ್ತಿಯಿಂದ ಯೆಹೋವನು ಈಗ, “ಬಿದ್ದವರನ್ನೆಲ್ಲಾ ಎತ್ತು”ತ್ತಿದ್ದಾನೆ. (ಕೀರ್ತನೆ 145:14) ರಾಜ್ಯದ ಸುವಾರ್ತೆಯು ನಮ್ಮ ಟೆರಿಟೊರಿಯಲ್ಲಿ ಮತ್ತು ಕ್ರೈಸ್ತ ಸಭೆಯಲ್ಲಿ ಮನಮುರಿದವರಿಗೆ ಸಾಂತ್ವನವನ್ನು ತರುವ ರೀತಿಯನ್ನು ನಾವು ಅವಲೋಕಿಸುವಾಗ, ಲಭ್ಯವಿರುವುದರಲ್ಲೇ ಅತ್ಯುತ್ತಮವಾದ ವಾರ್ತೆಯು ನಮ್ಮ ಬಳಿಯಿದೆ ಎಂದು ನಮಗೆ ಪದೇ ಪದೇ ಜ್ಞಾಪಿಸಲಾಗುತ್ತಿದೆ!​—⁠ಕೀರ್ತನೆ 51:17.

“ದೇವರಿಗೆ ನಾನು ಮಾಡುವ ವಿಜ್ಞಾಪನೆ”

18 ನಮ್ಮ ಸಂದೇಶದಲ್ಲಿ ಅತ್ಯುತ್ತಮವಾದ ವಾರ್ತೆ ಇದೆಯಾದರೂ, ಅನೇಕರು ಅದನ್ನು ಬೇಡವೆನ್ನುತ್ತಾರೆ. ಇದು ನಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು? ಅಪೊಸ್ತಲ ಪೌಲನ ಮೇಲೆ ಪರಿಣಾಮ ಬೀರಿದಂತೆಯೇ. ಅವನು ಅನೇಕವೇಳೆ ಯೆಹೂದ್ಯರಿಗೆ ಸಾರಿದರೂ ಆ ರಕ್ಷಣಾಸಂದೇಶವನ್ನು ಅವರಲ್ಲಿ ಹೆಚ್ಚಿನವರು ತಳ್ಳಿಹಾಕಿದರು. ಇದು ಪೌಲನನ್ನು ಬಹಳಷ್ಟು ಬಾಧಿಸಿತು. ಅವನು ಒಪ್ಪಿಕೊಂಡದ್ದು: “ನನಗೆ ಮಹಾ ದುಃಖವೂ ನನ್ನ ಹೃದಯದಲ್ಲಿ ಎಡೆಬಿಡದೆ ವೇದನೆಯೂ ಉಂಟು.” (ರೋಮಾಪುರ 9:⁠1) ಪೌಲನು ಯಾರಿಗೆ ಸಾರಿದನೊ ಆ ಯೆಹೂದ್ಯರ ಕುರಿತು ಅವನಿಗೆ ಕನಿಕರವಿತ್ತು. ಆದರೆ ಅವರು ಸುವಾರ್ತೆಯನ್ನು ತಿರಸ್ಕರಿಸಿದ್ದು ಅವನಿಗೆ ದುಃಖವನ್ನುಂಟುಮಾಡಿತು.

19 ನಾವೂ ಕನಿಕರದಿಂದಾಗಿ ಸುವಾರ್ತೆಯನ್ನು ಸಾರುತ್ತೇವೆ. ಆದುದರಿಂದ, ಅನೇಕರು ರಾಜ್ಯದ ಸಂದೇಶವನ್ನು ತಳ್ಳಿಹಾಕುವಾಗ ನಾವು ನಿರುತ್ತೇಜಿತರಾಗಬಹುದು ಎಂಬುದು ಅರ್ಥಮಾಡಿಕೊಳ್ಳಬಹುದಾದ ವಿಷಯ. ಅಂತಹ ಪ್ರತಿಕ್ರಿಯೆಯು, ನಾವು ಯಾರಿಗೆ ಸಾರುತ್ತೇವೊ ಅವರ ಆಧ್ಯಾತ್ಮಿಕ ಹಿತದ ಕುರಿತಾಗಿ ನಿಜ ಚಿಂತೆ ನಮಗಿದೆ ಎಂಬುದನ್ನು ತೋರಿಸುತ್ತದೆ. ಆದರೂ, ನಾವು ಅಪೊಸ್ತಲ ಪೌಲನ ಮಾದರಿಯನ್ನು ಜ್ಞಾಪಿಸಿಕೊಳ್ಳಬೇಕು. ತನ್ನ ಸಾರುವ ಕೆಲಸದಲ್ಲಿ ಮುಂದುವರಿಯುವಂತೆ ಅವನಿಗೆ ಯಾವುದು ಸಹಾಯಮಾಡಿತು? ಯೆಹೂದ್ಯರು ಸುವಾರ್ತೆಯನ್ನು ತಳ್ಳಿಹಾಕಿದ್ದು ಅವನಿಗೆ ದುಃಖ ಮತ್ತು ವೇದನೆಯನ್ನು ಉಂಟುಮಾಡಿತಾದರೂ, ಅವರಿಗೆ ಸಹಾಯಕೊಟ್ಟರೂ ಪ್ರಯೋಜನವಿಲ್ಲ ಎಂದು ನೆನಸಿ ಅವನು ಎಲ್ಲ ಯೆಹೂದ್ಯರನ್ನು ತ್ಯಜಿಸಿಬಿಡಲಿಲ್ಲ. ಕ್ರಿಸ್ತನನ್ನು ಅಂಗೀಕರಿಸಲಿರುವ ಕೆಲವರು ಇನ್ನೂ ಇದ್ದಾರೆಂಬ ನಿರೀಕ್ಷೆ ಅವನಲ್ಲಿತ್ತು. ಆದಕಾರಣ, ಒಬ್ಬೊಬ್ಬ ಯೆಹೂದ್ಯನ ಕುರಿತು ತನಗಿದ್ದ ಭಾವನೆಗಳ ಬಗ್ಗೆ ಪೌಲನು ಬರೆದುದು: “ಇಸ್ರಾಯೇಲ್ಯರು ರಕ್ಷಣೆಹೊಂದಬೇಕೆಂಬದೇ ನನ್ನ ಮನೋಭಿಲಾಷೆಯೂ ದೇವರಿಗೆ ನಾನು ಮಾಡುವ ವಿಜ್ಞಾಪನೆಯೂ ಆಗಿದೆ.”​—⁠ರೋಮಾಪುರ 10:⁠1.

20 ಪೌಲನು ಎತ್ತಿ ಹೇಳಿದ ಎರಡು ವಿಷಯಗಳನ್ನು ಗಮನಿಸಿರಿ. ಕೆಲವರು ರಕ್ಷಣೆಯನ್ನು ಪಡೆಯಬೇಕೆಂಬುದು ಅವನ ಮನದಾಸೆಯಾಗಿತ್ತು ಮತ್ತು ಅವನು ಅದಕ್ಕಾಗಿ ದೇವರಿಗೆ ಪ್ರಾರ್ಥಿಸಿದನು. ಇಂದು ನಾವು ಪೌಲನ ಮಾದರಿಯನ್ನು ಅನುಸರಿಸುತ್ತೇವೆ. ಸುವಾರ್ತೆಯ ಕಡೆಗೆ ಸರಿಯಾದ ಪ್ರವೃತ್ತಿಯನ್ನು ಇನ್ನೂ ತೋರಿಸಬಯಸುವ ಯಾರನ್ನಾದರೂ ಕಂಡುಕೊಳ್ಳುವ ಹೃತ್ಪೂರ್ವಕ ಬಯಕೆ ನಮಗಿದೆ. ಅಂತಹ ವ್ಯಕ್ತಿಗಳನ್ನು ನಾವು ಕಂಡುಕೊಳ್ಳುವಂತೆ ಮತ್ತು ಆ ಮೂಲಕ ರಕ್ಷಣೆಯ ಮಾರ್ಗವನ್ನು ಅನುಸರಿಸಲು ಅವರಿಗೆ ಸಹಾಯಮಾಡಲಿಕ್ಕಾಗುವಂತೆ ನಾವು ಯೆಹೋವನಿಗೆ ಪ್ರಾರ್ಥಿಸುತ್ತ ಇರುತ್ತೇವೆ.​—⁠ಜ್ಞಾನೋಕ್ತಿ 11:30; ಯೆಹೆಜ್ಕೇಲ 33:11; ಯೋಹಾನ 6:44.

21 ಆದರೂ, ರಾಜ್ಯದ ಸಂದೇಶದಿಂದ ಸಾಧ್ಯವಾದಷ್ಟು ಜನರನ್ನು ತಲಪಲಿಕ್ಕಾಗಿ, ನಾವು ಏಕೆ ಸಾರುತ್ತೇವೆ ಮತ್ತು ಏನನ್ನು ಸಾರುತ್ತೇವೆ ಎಂಬುದಕ್ಕೆ ಮಾತ್ರವಲ್ಲ ಹೇಗೆ ಸಾರುತ್ತೇವೆ ಎಂಬುದಕ್ಕೂ ಗಮನ ಕೊಡುವುದು ಅಗತ್ಯ. ಈ ವಿಷಯವನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 7 ಈ ಲೇಖನವು ಮೊದಲ ಎರಡು ಅಂಶಗಳನ್ನು ಚರ್ಚಿಸುವುದು. ಮೂರನೆಯ ಅಂಶವನ್ನು ಎರಡನೇ ಲೇಖನವು ಪರಿಗಣಿಸುವುದು.

^ ಪ್ಯಾರ. 22 ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟದ್ದು.

ನೀವೇನು ಕಲಿತುಕೊಂಡಿರಿ?

• ನಾವು ಯಾವ ಕಾರಣಗಳಿಗಾಗಿ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತೇವೆ?

• ನಾವು ಸಾರುವ ಪ್ರಧಾನ ಸಂದೇಶವು ಯಾವುದು?

• ರಾಜ್ಯದ ಸಂದೇಶವನ್ನು ಸ್ವೀಕರಿಸುವವರು ಯಾವ ಆಶೀರ್ವಾದಗಳನ್ನು ಅನುಭವಿಸುತ್ತಾರೆ?

• ನಮ್ಮ ಶುಶ್ರೂಷೆಯಲ್ಲಿ ಮುಂದುವರಿಯುವಂತೆ ನಮಗೆ ಯಾವುದು ಸಹಾಯಮಾಡುವುದು?

[ಅಧ್ಯಯನ ಪ್ರಶ್ನೆಗಳು]

1, 2. (ಎ) ಯಾವ ಭಯಂಕರ ಸಂಗತಿಗಳು ದಿನಾಲೂ ನಡೆಯುತ್ತವೆ? (ಬಿ) ಸದಾ ಕೆಟ್ಟ ಸುದ್ದಿಗಳನ್ನೇ ಕೇಳುತ್ತಾ ಇರುವುದರ ಬಗ್ಗೆ ಜನರು ಹೇಗೆ ಪ್ರತಿಕ್ರಿಯೆ ತೋರಿಸುತ್ತಾರೆ?

3. (ಎ) ಬೈಬಲು ಯಾವ ಸುವಾರ್ತೆಯನ್ನು ಘೋಷಿಸುತ್ತದೆ? (ಬಿ) ರಾಜ್ಯದ ಸುವಾರ್ತೆಗೆ ನೀವೇಕೆ ಮಹತ್ವ ಕೊಡುತ್ತೀರಿ?

4. ನಮ್ಮ ಶುಶ್ರೂಷೆಯ ಯಾವ ಅಂಶಗಳನ್ನು ಈ ಲೇಖನದಲ್ಲಿ ಮತ್ತು ಮುಂದಿನ ಲೇಖನದಲ್ಲಿ ಪರಿಗಣಿಸುವೆವು?

5. (ಎ) ಶುಶ್ರೂಷೆಯಲ್ಲಿ ಭಾಗವಹಿಸಲು ನಮ್ಮನ್ನು ಪ್ರಧಾನವಾಗಿ ಯಾವುದು ಪ್ರಚೋದಿಸುತ್ತದೆ? (ಬಿ) ಸಾರಬೇಕೆಂಬ ಬೈಬಲಿನ ಆಜ್ಞೆಗೆ ನಮ್ಮ ವಿಧೇಯತೆಯು, ದೇವರ ಮೇಲಿರುವ ಪ್ರೀತಿಯ ಅಭಿವ್ಯಕ್ತಿಯಾಗಿದೆ ಎಂದು ಏಕೆ ಹೇಳಸಾಧ್ಯವಿದೆ?

6. ದೇವರ ಮೇಲಿರುವ ಪ್ರೀತಿಯು ನಾವು ಸಾರುವಂತೆ ಯಾವ ವಿಧಗಳಲ್ಲಿ ನಮ್ಮನ್ನು ಪ್ರಚೋದಿಸುತ್ತದೆ?

7. ದೇವರನ್ನು ಪ್ರೀತಿಸುತ್ತಿರುವ ಕಾರಣಕ್ಕಾಗಿ ಅಲ್ಲದೆ, ಇನ್ನಾವ ಪ್ರಮುಖ ಕಾರಣಕ್ಕಾಗಿ ನಾವು ಸಾರುವ ಕೆಲಸದಲ್ಲಿ ಭಾಗವಹಿಸುತ್ತೇವೆ?

8. ಮಾರ್ಕ 6ನೆಯ ಅಧ್ಯಾಯದಲ್ಲಿರುವ ವೃತ್ತಾಂತವು ಜನರಿಗಾಗಿ ಯೇಸುವಿನಲ್ಲಿದ್ದ ಭಾವನೆಗಳ ವಿಷಯವಾಗಿ ಏನು ತೋರಿಸುತ್ತದೆ?

9. ಸಾರುವುದಕ್ಕಾಗಿ ಇರಬೇಕಾದ ಸರಿಯಾದ ಹೇತುವಿನ ಕುರಿತು ಮಾರ್ಕ 6ನೆಯ ಅಧ್ಯಾಯದಲ್ಲಿರುವ ವೃತ್ತಾಂತದಿಂದ ನಾವೇನನ್ನು ಕಲಿಯುತ್ತೇವೆ?

10, 11. (ಎ) ನಾವು ಸಾರುವ ಸಂದೇಶವನ್ನು ಯೆಶಾಯನು ಹೇಗೆ ವರ್ಣಿಸುತ್ತಾನೆ? (ಬಿ) ಯೇಸು ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತಂದದ್ದು ಹೇಗೆ, ಮತ್ತು ಆಧುನಿಕ ದಿನಗಳಲ್ಲಿ ದೇವರ ಸೇವಕರು ಯೇಸುವಿನ ಮಾದರಿಯನ್ನು ಹೇಗೆ ಅನುಸರಿಸಿದ್ದಾರೆ?

12. ರಾಜ್ಯದ ಸುವಾರ್ತೆಯು, ಅದನ್ನು ಸ್ವೀಕರಿಸುವವರ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ?

13. ಸುವಾರ್ತೆಯನ್ನು ಅಂಗೀಕರಿಸುವವರಿಗೆ ಒಡನೆಯೇ ದೊರೆಯುವ ಆಶೀರ್ವಾದಗಳನ್ನು ಪ್ರವಾದಿಯಾದ ಯೆಶಾಯನು ಹೇಗೆ ವರ್ಣಿಸುತ್ತಾನೆ?

14. (ಎ) ‘ಮನಮುರಿದವರನ್ನು ಕಟ್ಟಿ ವಾಸಿಮಾಡುವದು’ ಎಂಬ ಅಭಿವ್ಯಕ್ತಿಯು ರಾಜ್ಯದ ಸಂದೇಶದ ಕುರಿತು ಏನನ್ನು ಸೂಚಿಸುತ್ತದೆ? (ಬಿ) ಮನಮುರಿದವರ ಬಗ್ಗೆ ಯೆಹೋವನಿಗಿರುವ ಚಿಂತೆಯನ್ನು ನಾವು ಹೇಗೆ ಪ್ರತಿಬಿಂಬಿಸುತ್ತೇವೆ?

15, 16. ರಾಜ್ಯದ ಸಂದೇಶವು ಅಗತ್ಯವಿರುವವರಿಗೆ ಆಸರೆಯನ್ನೂ ಬಲವನ್ನೂ ನೀಡುತ್ತದೆಂದು ನಿಜ ಜೀವನದಲ್ಲಿನ ಯಾವ ಉದಾಹರಣೆಗಳು ತೋರಿಸುತ್ತವೆ?

17. (ಎ) ರಾಜ್ಯದ ಸಂದೇಶವು, ಅದನ್ನು ಸ್ವೀಕರಿಸುವವರ ಜೀವನದಲ್ಲಿ ಹೇಗೆ ವ್ಯತ್ಯಾಸವನ್ನು ಉಂಟುಮಾಡುತ್ತಿದೆ? (ಬಿ) ಯೆಹೋವನು “ಬಿದ್ದವರನ್ನೆಲ್ಲಾ ಎತ್ತು”ತ್ತಾನೆ ಎಂಬುದನ್ನು ನೀವು ವೈಯಕ್ತಿಕವಾಗಿ ಯಾವ ವಿಧಗಳಲ್ಲಿ ಅನುಭವಿಸಿದ್ದೀರಿ?

18. ಯೆಹೂದ್ಯರು ಸುವಾರ್ತೆಯನ್ನು ತಳ್ಳಿಹಾಕಿದ ವಿಷಯವು ಪೌಲನನ್ನು ಹೇಗೆ ಬಾಧಿಸಿತು, ಮತ್ತು ಏಕೆ?

19. (ಎ) ಕೆಲವೊಮ್ಮೆ ನಾವು ನಿರುತ್ತೇಜನಗೊಳ್ಳಬಹುದು ಎಂಬುದು ಅರ್ಥಮಾಡಿಕೊಳ್ಳಬಹುದಾದ ವಿಷಯವಾಗಿದೆ ಏಕೆ? (ಬಿ) ತನ್ನ ಸಾರುವ ಕೆಲಸದಲ್ಲಿ ಮುಂದುವರಿಯುವಂತೆ ಪೌಲನಿಗೆ ಯಾವುದು ಸಹಾಯಮಾಡಿತು?

20, 21. (ಎ) ನಮ್ಮ ಶುಶ್ರೂಷೆಯಲ್ಲಿ ನಾವು ಪೌಲನ ಮಾದರಿಯನ್ನು ಹೇಗೆ ಅನುಸರಿಸಬಲ್ಲೆವು? (ಬಿ) ನಮ್ಮ ಶುಶ್ರೂಷೆಯ ಯಾವ ಅಂಶವನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು?

[ಪುಟ 18ರಲ್ಲಿರುವ ಚಿತ್ರಗಳು]

ರಾಜ್ಯದ ಸಂದೇಶವು ಮನಮುರಿದವರಿಗೆ ಬಲವನ್ನು ಒದಗಿಸುತ್ತದೆ

[ಪುಟ 20ರಲ್ಲಿರುವ ಚಿತ್ರಗಳು]

ನಮ್ಮ ಶುಶ್ರೂಷೆಯಲ್ಲಿ ತಾಳಿಕೊಳ್ಳುವಂತೆ ಪ್ರಾರ್ಥನೆಯು ನಮಗೆ ಸಹಾಯಮಾಡುತ್ತದೆ