“ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು”
“ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು”
ಜಾಣನಾದ ಒಬ್ಬ ವ್ಯಕ್ತಿಯು ವ್ಯವಹಾರಶೀಲನೂ ಬುದ್ಧಿವಂತನೂ ಒಳ್ಳೇ ವಿಚಾರಶಕ್ತಿಯುಳ್ಳವನೂ ಕುಶಾಗ್ರಮತಿಯೂ ಔಚಿತ್ಯಪ್ರಜ್ಞೆಯುಳ್ಳವನೂ ಜಾಗರೂಕನೂ ವಿವೇಚನಾಶಕ್ತಿಯುಳ್ಳವನೂ ವಿವೇಕಿಯೂ ಆಗಿರುತ್ತಾನೆ. ಅವನು ವಂಚನಾತ್ಮಕ ಮನೋಭಾವದವನಾಗಿರುವುದಿಲ್ಲ ಅಥವಾ ಒಳಸಂಚು ನಡೆಸುವವನಾಗಿರುವುದಿಲ್ಲ. “ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು” ಎಂದು ಜ್ಞಾನೋಕ್ತಿ 13:16 ಹೇಳುತ್ತದೆ. ಹೌದು, ಜಾಣತನವು ಅಪೇಕ್ಷಣೀಯವಾದ ಗುಣವಾಗಿದೆ.
ನಮ್ಮ ದೈನಂದಿನ ಜೀವನದಲ್ಲಿ ನಾವು ಜಾಣತನವನ್ನು ಹೇಗೆ ತೋರಿಸಸಾಧ್ಯವಿದೆ? ನಾವು ಮಾಡುವ ಆಯ್ಕೆಗಳು, ಇತರರನ್ನು ಉಪಚರಿಸುವ ವಿಧ ಮತ್ತು ಬೇರೆ ಬೇರೆ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುವ ರೀತಿಯ ಮೂಲಕ ಈ ಗುಣವು ಹೇಗೆ ವ್ಯಕ್ತವಾಗುತ್ತದೆ? ಜಾಣರಿಗೆ ಯಾವ ಪ್ರತಿಫಲಗಳು ಸಿಗುತ್ತವೆ? ಅವರು ಯಾವ ವಿಪತ್ತುಗಳಿಗೆ ತುತ್ತಾಗುವುದಿಲ್ಲ? ಪುರಾತನ ಇಸ್ರಾಯೇಲಿನ ಅರಸನಾಗಿದ್ದ ಸೊಲೊಮೋನನು ಈ ಪ್ರಶ್ನೆಗಳಿಗೆ ಪ್ರಾಯೋಗಿಕ ಉತ್ತರಗಳನ್ನು ಕೊಡುತ್ತಾನೆ. ಇದನ್ನು ನಾವು ಜ್ಞಾನೋಕ್ತಿ 14:12-25ರಲ್ಲಿ ಓದಬಹುದು. *
ನಿಮ್ಮ ಮಾರ್ಗವನ್ನು ವಿವೇಕಯುತವಾಗಿ ಆಯ್ಕೆಮಾಡಿರಿ
ವಿವೇಕಯುತವಾದ ಆಯ್ಕೆಗಳನ್ನು ಮಾಡುವುದು ಮತ್ತು ಜೀವನದಲ್ಲಿ ಸಾಫಲ್ಯವನ್ನು ಪಡೆಯುವುದು, ಯಾವುದು ತಪ್ಪು ಮತ್ತು ಯಾವುದು ಸರಿ ಎಂಬ ವ್ಯತ್ಯಾಸವನ್ನು ಗ್ರಹಿಸುವ ಸಾಮರ್ಥ್ಯವನ್ನು ಅಗತ್ಯಪಡಿಸುತ್ತದೆ ಎಂಬುದಂತೂ ನಿಶ್ಚಯ. ಆದರೂ, ಬೈಬಲ್ ಹೀಗೆ ಎಚ್ಚರಿಕೆ ನೀಡುತ್ತದೆ: “ಮನುಷ್ಯದೃಷ್ಟಿಗೆ ಸರಳವಾಗಿ [“ಸರಿಯೆಂದು,” NIBV] ತೋರುವ ಒಂದು ದಾರಿಯುಂಟು. ಅದು ಕಟ್ಟಕಡೆಗೆ ಮರಣಮಾರ್ಗವೇ.” (ಜ್ಞಾನೋಕ್ತಿ 14:12) ಆದುದರಿಂದ, ಯಾವುದು ಸರಿಯಾಗಿ ತೋರುತ್ತದೆ ಮತ್ತು ಯಾವುದು ನಿಜವಾಗಿಯೂ ಸರಿಯಾಗಿದೆ ಎಂಬುದರ ನಡುವಣ ವ್ಯತ್ಯಾಸವನ್ನು ನಾವು ಗ್ರಹಿಸಲು ಕಲಿಯಬೇಕು. ‘ಮರಣದ ಮಾರ್ಗಗಳು’ ಎಂಬ ಅಭಿವ್ಯಕ್ತಿಯು, ಇಂಥ ಅನೇಕ ವಂಚನಾತ್ಮಕ ಹಾದಿಗಳು ಇವೆ ಎಂಬುದನ್ನು ಸೂಚಿಸುತ್ತದೆ. ನಾವು ಅರಿತುಕೊಳ್ಳಬೇಕಾದ ಮತ್ತು ದೂರವಿರಬೇಕಾದ ಕೆಲವೊಂದು ಕ್ಷೇತ್ರಗಳನ್ನು ಪರಿಗಣಿಸಿರಿ.
ಲೋಕದ ಧನಿಕ ಹಾಗೂ ಪ್ರಸಿದ್ಧ ವ್ಯಕ್ತಿಗಳು ಸಾಮಾನ್ಯವಾಗಿ ಮೆಚ್ಚುಗೆಗೆ ಅರ್ಹರಾದ ಗೌರವಾನ್ವಿತ ಜನರಾಗಿ ಪರಿಗಣಿಸಲ್ಪಡುತ್ತಾರೆ. ಅವರ ಸಾಮಾಜಿಕ ಹಾಗೂ ಹಣಕಾಸಿನ ಯಶಸ್ಸು, ಅವರು ಕಾರ್ಯನಡಿಸುವಂಥ ರೀತಿಯು ಸರಿಯಾಗಿದೆ ಎಂದು ತೋರುವಂತೆ ಮಾಡಬಹುದು. ಆದರೂ, ಐಶ್ವರ್ಯ ಅಥವಾ ಪ್ರಸಿದ್ಧಿಯನ್ನು ಪಡೆಯಲಿಕ್ಕಾಗಿ ಅಂಥ ವ್ಯಕ್ತಿಗಳಲ್ಲಿ ಅನೇಕರು ಉಪಯೋಗಿಸುವಂಥ ಮಾರ್ಗಗಳ ಕುರಿತಾಗಿ ಏನು? ಅವರ ಮಾರ್ಗಗಳೆಲ್ಲಾ ಯಾವಾಗಲೂ ಯಥಾರ್ಥವಾಗಿವೆಯೋ ಮತ್ತು ನೈತಿಕವಾಗಿವೆಯೋ? ಇನ್ನೂ ಕೆಲವು ವ್ಯಕ್ತಿಗಳು, ತಮ್ಮ ಧಾರ್ಮಿಕ ನಂಬಿಕೆಗಳಿಗಾಗಿ ಶ್ಲಾಘನೀಯ ರೀತಿಯ ಹುರುಪನ್ನು ತೋರಿಸುತ್ತಾರೆ. ಆದರೆ ಅವರ ನಿಷ್ಕಪಟತೆಯು ತಾನೇ ಅವರ ನಂಬಿಕೆಗಳು ಸರಿಯಾದವುಗಳೆಂದು ರುಜುಪಡಿಸುತ್ತದೊ?—ರೋಮಾಪುರ 10:2, 3.
ಆತ್ಮವಂಚನೆಯ ಕಾರಣದಿಂದಲೂ ಒಂದು ಮಾರ್ಗವು ಸರಿಯಾದದ್ದಾಗಿ ತೋರಬಹುದು. ಯಾವುದು ಸರಿಯೆಂದು ವೈಯಕ್ತಿಕವಾಗಿ ನಮಗನಿಸುತ್ತದೋ ಅದರ ಮೇಲೆ ಆಧಾರಿಸಿ ನಮ್ಮ ನಿರ್ಣಯಗಳನ್ನು ಮಾಡುವುದು, ವಾಸ್ತವದಲ್ಲಿ ವಂಚಕ ಮಾರ್ಗದರ್ಶಿಯಾಗಿರುವ ಹೃದಯದ ಮೇಲೆ ಅವಲಂಬಿಸುವಂತಿದೆ. (ಯೆರೆಮೀಯ 17:9) ಅಶಿಕ್ಷಿತ ಹಾಗೂ ತರಬೇತಿರಹಿತ ಮನಸ್ಸಾಕ್ಷಿಯು, ತಪ್ಪಾದ ಮಾರ್ಗವೇ ಸರಿಯಾದ ಮಾರ್ಗವೆಂದು ನೆನಸುವಂತೆ ಮಾಡಬಲ್ಲದು. ಹಾಗಾದರೆ, ಒಂದು ಯೋಗ್ಯವಾದ ಮಾರ್ಗವನ್ನು ಆಯ್ಕೆಮಾಡಲು ಯಾವುದು ನಮಗೆ ಸಹಾಯಮಾಡುವುದು?
ನಾವು ‘ಒಳ್ಳೇದು ಮತ್ತು ಕೆಟ್ಟದ್ದರ ಭೇದವನ್ನು ತಿಳಿಯಲು ಶಿಕ್ಷಿಸಲ್ಪಟ್ಟಿರುವ ಜ್ಞಾನೇಂದ್ರಿಯಗಳನ್ನು’ ಪಡೆದುಕೊಳ್ಳಬೇಕಾದರೆ, ದೇವರ ವಾಕ್ಯದ ಗಹನವಾದ ಸತ್ಯಗಳ ಕುರಿತಾದ ಶ್ರದ್ಧಾಪೂರ್ವಕ ವೈಯಕ್ತಿಕ ಅಧ್ಯಯನವನ್ನು ಮಾಡುವುದು ಅತ್ಯಾವಶ್ಯಕವಾಗಿದೆ. ಅಷ್ಟುಮಾತ್ರವಲ್ಲ, ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರಲ್ಲಿ ಈ ಜ್ಞಾನೇಂದ್ರಿಯಗಳನ್ನು “ಸಾಧನೆ” ಅಥವಾ ಉಪಯೋಗದ ಮೂಲಕ ತರಬೇತುಗೊಳಿಸಬೇಕಾಗಿದೆ. (ಇಬ್ರಿಯ 5:14) ಕೇವಲ ಹೊರತೋರಿಕೆಗೆ ಸರಿಯಾಗಿ ಕಾಣುತ್ತಿರಬಹುದಾದ ಒಂದು ಮಾರ್ಗವು, ‘ನಿತ್ಯಜೀವಕ್ಕೆ ನಡಿಸುವ ಬಿಕ್ಕಟ್ಟಾದ ದಾರಿಯಿಂದ’ ನಮ್ಮನ್ನು ದಾರಿತಪ್ಪಿಸದಂತೆ ನಾವು ಜಾರೂಕರಾಗಿರಬೇಕು.—ಮತ್ತಾಯ 7:13, 14.
‘ಹೃದಯವು ದುಃಖದಿಂದ ಇರುವ’ ಸಮಯ
ಮನಶ್ಶಾಂತಿ ಇಲ್ಲದಿರುವಾಗ ನಾವು ಸಂತೋಷದಿಂದ ಇರಸಾಧ್ಯವಿದೆಯೊ? ನಗುವಿಕೆಯು ಮತ್ತು ಉಲ್ಲಾಸವು ಮನಸ್ಸಿನಾಳದಲ್ಲಿರುವ ಜ್ಞಾನೋಕ್ತಿ 14:13ಎ, NIBV.
ನೋವನ್ನು ಕಡಿಮೆಮಾಡುತ್ತದೊ? ಖಿನ್ನತೆಯ ಅನಿಸಿಕೆಗಳನ್ನು ಹೋಗಲಾಡಿಸಲಿಕ್ಕಾಗಿ ಮದ್ಯವನ್ನು ಉಪಯೋಗಿಸುವುದು, ಅಮಲೌಷಧಗಳನ್ನು ದುರುಪಯೋಗಿಸುವುದು ಅಥವಾ ಸ್ವೇಚ್ಛಾಪರ ಜೀವನ ಶೈಲಿಯನ್ನು ಹೊಂದಿಸಿಕೊಳ್ಳುವ ಮೂಲಕ ಅಂಥ ಅನಿಸಿಕೆಗಳನ್ನು ದೂರಮಾಡಲು ಪ್ರಯತ್ನಿಸುವುದು ಜಾಣತನವಾಗಿದೆಯೊ? ಇಲ್ಲ ಎಂಬುದೇ ಉತ್ತರವಾಗಿದೆ. “ನಗೆಯಲ್ಲಿಯೂ ಹೃದಯವು ದುಃಖದಿಂದ ಇರುವುದು” ಎಂದು ವಿವೇಕಿಯಾದ ಅರಸನು ಹೇಳುತ್ತಾನೆ.—ನಗುವು ನೋವನ್ನು ಮರೆಮಾಡಬಹುದು, ಆದರೆ ಅದು ನೋವನ್ನು ತೆಗೆದುಹಾಕುವುದಿಲ್ಲ. “ಪ್ರತಿಯೊಂದು ಕಾರ್ಯಕ್ಕೂ ಕಾಲವು ಕ್ಲುಪ್ತವಾಗಿದೆ” ಎಂದು ಬೈಬಲ್ ತಿಳಿಸುತ್ತದೆ. ವಾಸ್ತವದಲ್ಲಿ, “ಅಳುವ ಸಮಯ, ನಗುವ ಸಮಯ, ಗೋಳಾಡುವ ಸಮಯ, ಕುಣಿದಾಡುವ ಸಮಯ” ಇದೆ. (ಪ್ರಸಂಗಿ 3:1, 4) ಖಿನ್ನತೆಯು ಬೆನ್ನುಬಿಡದೆ ಕಾಡುತ್ತಿರುವಾಗ, ಅಗತ್ಯವಿರುವಲ್ಲಿ “ಜ್ಞಾನಯುಕ್ತವಾದ ಆಲೋಚನೆ” ಇಲ್ಲವೆ ನಿರ್ದೇಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವ ಮೂಲಕವೂ, ಅದನ್ನು ಹೊಡೆದೋಡಿಸಲು ನಾವು ಸೂಕ್ತವಾದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. (ಜ್ಞಾನೋಕ್ತಿ 24:6, NIBV) * ನಗುವಿಕೆ ಮತ್ತು ವಿನೋದವು ಸ್ವಲ್ಪಮಟ್ಟಿಗೆ ಅಮೂಲ್ಯವಾದದ್ದಾಗಿದೆ, ಆದರೆ ಅದರ ತುಲನಾತ್ಮಕ ಪ್ರಯೋಜನವು ಕೊಂಚವೇ. ಅನುಚಿತವಾದ ರೀತಿಯ ವಿನೋದ ಮತ್ತು ವಿಪರೀತ ಮನೋರಂಜನೆಯ ವಿರುದ್ಧ ಎಚ್ಚರಿಸುತ್ತಾ ಸೊಲೊಮೋನನು ಹೇಳಿದ್ದು: “ಉಲ್ಲಾಸದ ಅಂತ್ಯವು ವ್ಯಾಕುಲವೇ.”—ಜ್ಞಾನೋಕ್ತಿ 14:13ಬಿ.
ನಂಬಿಕೆಯಿಲ್ಲದವನು ಮತ್ತು ಶಿಷ್ಟನು—ಹೇಗೆ ತೃಪ್ತರಾಗುವರು?
ಇಸ್ರಾಯೇಲಿನ ಅರಸನು ಮುಂದುವರಿಸುತ್ತಾ ಹೇಳಿದ್ದು: “ಭ್ರಷ್ಟನು [“ನಂಬಿಕೆಯಿಲ್ಲದವನು,” NW] ಕರ್ಮಫಲವನ್ನು ತಿಂದು ತಿಂದು ದಣಿಯುವನು; ಶಿಷ್ಟನು ತನ್ನಲ್ಲಿ ತಾನೇ [“ತನ್ನ ವ್ಯವಹಾರಗಳ ಫಲಗಳಿಂದ,” NW] ತೃಪ್ತನಾಗುವನು.” (ಜ್ಞಾನೋಕ್ತಿ 14:14) ನಂಬಿಕೆಯಿಲ್ಲದವನೂ ಶಿಷ್ಟನೂ ತಮ್ಮ ವ್ಯವಹಾರಗಳ ಫಲಗಳಿಂದ ಹೇಗೆ ತೃಪ್ತರಾಗುತ್ತಾರೆ?
ನಂಬಿಕೆಯಿಲ್ಲದವನಾದ ಒಬ್ಬ ವ್ಯಕ್ತಿಯು ದೇವರಿಗೆ ಲೆಕ್ಕವೊಪ್ಪಿಸುವುದರ ಬಗ್ಗೆ ಚಿಂತಿತನಾಗಿರುವುದಿಲ್ಲ. ಆದುದರಿಂದ, ನಂಬಿಕೆರಹಿತ ವ್ಯಕ್ತಿಯೊಬ್ಬನಿಗೆ ಯೆಹೋವನ ದೃಷ್ಟಿಯಲ್ಲಿ ಸರಿಯಾಗಿರುವಂಥದ್ದನ್ನು ಮಾಡುವುದು ಪ್ರಾಮುಖ್ಯ ಸಂಗತಿಯೇನಾಗಿರುವುದಿಲ್ಲ. (1 ಪೇತ್ರ 4:3-5) ಇಂಥ ಒಬ್ಬ ವ್ಯಕ್ತಿಯು ತನ್ನ ಪ್ರಾಪಂಚಿಕ ಜೀವನ ಶೈಲಿಯಿಂದ ದೊರಕುವ ಫಲಗಳಿಂದ ತೃಪ್ತನಾಗುತ್ತಾನೆ. (ಕೀರ್ತನೆ 144:11-15ಎ) ಇನ್ನೊಂದು ಕಡೆಯಲ್ಲಿ, ಶಿಷ್ಟನ ಹೃದಯದಲ್ಲಿ ಯಾವಾಗಲೂ ಆಧ್ಯಾತ್ಮಿಕ ಅಭಿರುಚಿಗಳಿರುತ್ತವೆ. ತನ್ನೆಲ್ಲ ವ್ಯವಹಾರಗಳಲ್ಲಿ ಅವನು ದೇವರ ನೀತಿಯ ಮಟ್ಟಗಳಿಗೆ ಅಂಟಿಕೊಳ್ಳುತ್ತಾನೆ. ಇಂಥ ವ್ಯಕ್ತಿಯು ತನಗೆ ದೊರಕುವ ಫಲಿತಾಂಶಗಳಿಂದ ತೃಪ್ತನಾಗುತ್ತಾನೆ, ಏಕೆಂದರೆ ಯೆಹೋವನು ಅವನ ದೇವರಾಗಿದ್ದಾನೆ ಮತ್ತು ಆ ಸರ್ವೋನ್ನತನ ಸೇವೆಮಾಡುವ ಮೂಲಕ ಅವನು ಅತುಲ್ಯ ಆನಂದವನ್ನು ಪಡೆದುಕೊಳ್ಳುತ್ತಾನೆ.—ಕೀರ್ತನೆ 144:15ಬಿ.
‘ಎಲ್ಲ ಮಾತನ್ನು ನಂಬದಿರಿ’
ಅನನುಭವಿಗಳು ಮತ್ತು ಜಾಣರ ಮಾರ್ಗಗಳ ವ್ಯತ್ಯಾಸ ತೋರಿಸುತ್ತಾ ಸೊಲೊಮೋನನು ಹೇಳುವುದು: “ಮೂಢನು ಯಾವ ಜ್ಞಾನೋಕ್ತಿ 14:15) ಜಾಣನು ಸುಲಭವಾಗಿ ಮೋಸಹೋಗುವುದಿಲ್ಲ. ಅವನು ತಾನು ಕೇಳಿಸಿಕೊಳ್ಳುವುದನ್ನೆಲ್ಲಾ ನಂಬುವುದಕ್ಕೆ ಬದಲಾಗಿ ಅಥವಾ ಕೇವಲ ಇತರರ ಅಭಿಪ್ರಾಯಗಳನ್ನು ಅಂಗೀಕರಿಸುವುದಕ್ಕೆ ಬದಲಾಗಿ, ತನ್ನ ಹೆಜ್ಜೆಗಳನ್ನು ವಿವೇಕಯುತವಾಗಿ ಪರಿಗಣಿಸುತ್ತಾನೆ. ಅವನು ಲಭ್ಯವಿರುವ ಎಲ್ಲ ವಾಸ್ತವಾಂಶಗಳನ್ನು ಒಟ್ಟುಗೂಡಿಸಿ, ಜ್ಞಾನದಿಂದ ಕ್ರಿಯೆಗೈಯುತ್ತಾನೆ.
ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಉದಾಹರಣೆಗೆ, “ಒಬ್ಬ ದೇವರಿದ್ದಾನೊ?” ಎಂಬ ಪ್ರಶ್ನೆಯನ್ನು ತೆಗೆದುಕೊಳ್ಳಿ. ಮೂಢನು ಅಥವಾ ಅನನುಭವಿಯು ಜನಪ್ರಿಯವಾಗಿರುವ ವಿಚಾರಧಾರೆಯನ್ನು ಅಥವಾ ಅಗ್ರಗಣ್ಯರಾದ ಜನರು ನಂಬುವ ವಿಷಯವನ್ನು ಅಂಗೀಕರಿಸುವ ಪ್ರವೃತ್ತಿಯವನಾಗಿರುತ್ತಾನೆ. ಇನ್ನೊಂದು ಕಡೆಯಲ್ಲಿ, ಜಾಣನಾದರೋ ವಾಸ್ತವಾಂಶಗಳನ್ನು ಪರೀಕ್ಷಿಸಿ ನೋಡಲು ಸಮಯವನ್ನು ತೆಗೆದುಕೊಳ್ಳುತ್ತಾನೆ. ಅವನು ರೋಮಾಪುರ 1:20 ಮತ್ತು ಇಬ್ರಿಯ 3:4ರಂಥ ಶಾಸ್ತ್ರವಚನಗಳ ಕುರಿತು ಧ್ಯಾನಿಸುತ್ತಾನೆ. ಆಧ್ಯಾತ್ಮಿಕ ವಿಷಯಗಳಲ್ಲಿ, ಒಬ್ಬ ಜಾಣನು ಧಾರ್ಮಿಕ ಮುಖಂಡರ ಅಭಿಪ್ರಾಯವನ್ನು ಸುಮ್ಮನೆ ಅಂಗೀಕರಿಸಿಬಿಡುವುದಿಲ್ಲ. ಅವನು ‘ಆಯಾ ನುಡಿಗಳು ದೇವರಿಂದ ಪ್ರೇರಿತವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಿ ನೋಡುತ್ತಾನೆ.’—1 ಯೋಹಾನ 4:1.
‘ಎಲ್ಲ ಮಾತನ್ನು ನಂಬ’ದಿರುವಂತೆ ಕೊಡಲ್ಪಟ್ಟಿರುವ ಬುದ್ಧಿವಾದಕ್ಕೆ ಕಿವಿಗೊಡುವುದು ಎಷ್ಟು ವಿವೇಕಭರಿತವಾಗಿದೆ! ವಿಶೇಷವಾಗಿ ಕ್ರೈಸ್ತ ಸಭೆಯಲ್ಲಿ ಇತರರಿಗೆ ಸಲಹೆ ನೀಡುವ ಜವಾಬ್ದಾರಿಯನ್ನು ಹೊತ್ತಿರುವವರು ಇದನ್ನು ಹೃದಯಕ್ಕೆ ತೆಗೆದುಕೊಳ್ಳಬೇಕು. ಸಲಹೆ ನೀಡುವವನು, ಏನು ಸಂಭವಿಸಿದೆಯೋ ಅದರ ಪೂರ್ಣ ಚಿತ್ರಣವನ್ನು ಹೊಂದಿರಬೇಕು. ಅವನು ಜಾಗರೂಕತೆಯಿಂದ ಕಿವಿಗೊಡಬೇಕು ಮತ್ತು ಒಳಗೂಡಿರುವ ಎಲ್ಲ ಪಕ್ಷಗಳಿಂದ ವಾಸ್ತವಾಂಶಗಳನ್ನು ಸಂಗ್ರಹಿಸಬೇಕು, ಆಗ ಮಾತ್ರ ಅವನ ಸಲಹೆಯು ತರ್ಕಬದ್ಧವಾಗಿರುತ್ತದೆ, ಒಂದೇ ದೃಷ್ಟಿಕೋನದ ಮೇಲೆ ಆಧಾರಿತವಾದದ್ದಾಗಿರುವುದಿಲ್ಲ.—ಜ್ಞಾನೋಕ್ತಿ 18:13; 29:20.
“ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು”
ಜ್ಞಾನಿಯ ಮತ್ತು ಜ್ಞಾನಹೀನನ ಮಧ್ಯೆ ಇರುವ ಇನ್ನೊಂದು ವ್ಯತ್ಯಾಸವನ್ನು ಸೂಚಿಸುತ್ತಾ ಇಸ್ರಾಯೇಲಿನ ಅರಸನು ಹೀಗನ್ನುತ್ತಾನೆ: “ಜ್ಞಾನಿಯು ಕೇಡಿಗೆ ಭಯಪಟ್ಟು ಓರೆಯಾಗುವನು; ಜ್ಞಾನಹೀನನು ಸೊಕ್ಕೇರಿ ಭಯವನ್ನು ಲಕ್ಷಿಸನು. ಮುಂಗೋಪಿಯು ಬುದ್ಧಿಗೆಡುವನು; ಕುಯುಕ್ತಿಯುಳ್ಳವನು ದ್ವೇಷಕ್ಕೆ ಪಾತ್ರನು.”—ಜ್ಞಾನೋಕ್ತಿ 14:16, 17.
ಜ್ಞಾನಿ ಇಲ್ಲವೆ ವಿವೇಕಿಯಾದ ವ್ಯಕ್ತಿಯು ತಪ್ಪು ಮಾರ್ಗವನ್ನು ಹಿಂಬಾಲಿಸುವುದರ ಪರಿಣಾಮಗಳ ಕುರಿತು ಭಯಪಡುತ್ತಾನೆ. ಆದುದರಿಂದ ಅವನು ಜಾಗರೂಕನಾಗಿರುತ್ತಾನೆ ಮತ್ತು ಕೇಡಿನಿಂದ ದೂರವಿರುವಂತೆ ಅವನಿಗೆ ಸಹಾಯಮಾಡುವ ಯಾವುದೇ ಸಲಹೆಯನ್ನು ಗಣ್ಯತಾಭಾವದಿಂದ ಸ್ವೀಕರಿಸುತ್ತಾನೆ. ಜ್ಞಾನಹೀನನಿಗೆ ಇಂಥ ಭಯವಿರುವುದಿಲ್ಲ. ಅವನು ಸೊಕ್ಕೇರಿದವನಾಗಿರುವುದರಿಂದ, ಇತರರ ಸಲಹೆಯನ್ನು ದುರಹಂಕಾರದಿಂದ ಅಲಕ್ಷಿಸುತ್ತಾನೆ. ಬೇಗನೆ ಕೋಪಗೊಳ್ಳುವ ಪ್ರವೃತ್ತಿಯವನಾಗಿರುವ ಅಂಥ ವ್ಯಕ್ತಿಯು ಬುದ್ಧಿಗೇಡಿತನದಿಂದ ಕ್ರಿಯೆಗೈಯುವನು.
ಕನ್ನಡ ಬೈಬಲಿನಲ್ಲಿ “ಕುಯುಕ್ತಿಯುಳ್ಳವನು” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಭಾಷೆಯ ಅಭಿವ್ಯಕ್ತಿಗೆ ಎರಡು ಅರ್ಥಗಳಿವೆ. ಸಕಾರಾತ್ಮಕ ಅರ್ಥದಲ್ಲಿ ಅದು ವಿವೇಚನಾಶಕ್ತಿಯನ್ನು ಅಥವಾ ಚಾಣಾಕ್ಷತೆಯನ್ನು ಸೂಚಿಸಬಲ್ಲದು. (ಜ್ಞಾನೋಕ್ತಿ 1:4; 2:11; 3:21) ಅಥವಾ ನಕಾರಾತ್ಮಕ ಅರ್ಥದಲ್ಲಿ ಈ ವಾಕ್ಸರಣಿಯು ದುಷ್ಟ ವಿಚಾರಗಳಿಗೆ ಇಲ್ಲವೆ ಹಗೆತನದಿಂದ ಕೂಡಿದ ಆಲೋಚನೆಗೆ ಸೂಚಿಸಸಾಧ್ಯವಿದೆ.—ಕೀರ್ತನೆ 37:7; ಜ್ಞಾನೋಕ್ತಿ 12:2; 24:8.
ಮೂಲ ಅಭಿವ್ಯಕ್ತಿಯು ‘ಕುಯುಕ್ತಿಯುಳ್ಳವನಿಗೆ’ ಸೂಚಿತವಾಗಿರುವಲ್ಲಿ, ಅಂಥ ವ್ಯಕ್ತಿಯೊಬ್ಬನನ್ನು ಏಕೆ ದ್ವೇಷಿಸಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೇನಲ್ಲ. ಆದರೆ ಅದು ಸಕಾರಾತ್ಮಕ ಅರ್ಥಕ್ಕೆ ಸೂಚಿತವಾಗಿರುವಲ್ಲಿ, ಆಲೋಚನಾ ಸಾಮರ್ಥ್ಯಗಳುಳ್ಳ ಒಬ್ಬ ವ್ಯಕ್ತಿಯು ಹೇಗೆ ದ್ವೇಷಕ್ಕೆ ಪಾತ್ರನಾಗುತ್ತಾನೆ? ಯಾರಲ್ಲಿ ವಿವೇಚನಾಶಕ್ತಿಯಿಲ್ಲವೋ ಅಂಥವರು ಈ ಗುಣವನ್ನು ಹೊಂದಿರುವಂಥ ಒಬ್ಬ ವ್ಯಕ್ತಿಯನ್ನು ದ್ವೇಷಿಸಬಹುದು ಎಂಬುದು ನಿಜವಲ್ಲವೊ? ಉದಾಹರಣೆಗೆ, ಯಾರು ತಮ್ಮ ಮಾನಸಿಕ ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು, ‘ಲೋಕದ ಭಾಗವಾಗಿರದೇ ಇರಲು’ (NW) ಆಯ್ಕೆಮಾಡುತ್ತಾರೋ ಅಂಥವರು ಲೋಕದಿಂದ ದ್ವೇಷಿಸಲ್ಪಡುತ್ತಾರೆ. (ಯೋಹಾನ 15:19) ತಮ್ಮ ಆಲೋಚನಾ ಸಾಮರ್ಥ್ಯಗಳನ್ನು ಉಪಯೋಗಿಸಿಕೊಂಡು ಅನುಚಿತ ವರ್ತನೆಯಿಂದ ದೂರವಿರಲಿಕ್ಕಾಗಿ ಅಹಿತಕರವಾದ ಸಮಾನಸ್ಥರ ಒತ್ತಡವನ್ನು ಪ್ರತಿರೋಧಿಸುವ ಕ್ರೈಸ್ತ ಯುವ ಜನರು ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ವಾಸ್ತವಾಂಶವೇನೆಂದರೆ, ಪಿಶಾಚನಾದ ಸೈತಾನನ ವಶದಲ್ಲಿ ಬಿದ್ದಿರುವ ಈ ಲೋಕದಿಂದ ಸತ್ಯ ಆರಾಧಕರು ದ್ವೇಷಿಸಲ್ಪಡುತ್ತಾರೆ.—1 ಯೋಹಾನ 5:19.
‘ದುಷ್ಟರು ಅಡ್ಡಬೀಳುವರು’
ಇನ್ನೊಂದು ವಿಧದಲ್ಲಿಯೂ ಜಾಣರು ಮೂರ್ಖರಿಗಿಂತ ಭಿನ್ನರಾಗಿರುತ್ತಾರೆ. “ಮೂರ್ಖರಿಗೆ ಮೂರ್ಖತನವೇ ಸ್ವಾಸ್ತ್ಯ; ಜಾಣರಿಗೆ ಜ್ಞಾನವೇ ಮುಕುಟ.” (ಜ್ಞಾನೋಕ್ತಿ 14:18) ಮೂರ್ಖರಲ್ಲಿ ವಿವೇಚನಾಶಕ್ತಿಯ ಕೊರತೆಯಿರುವುದರಿಂದ, ಅವರು ಮೂರ್ಖತನವನ್ನೇ ಆಯ್ಕೆಮಾಡುತ್ತಾರೆ. ಇದು ಅವರ ಜೀವನದ ಪಾಡಾಗುತ್ತದೆ. ಇನ್ನೊಂದು ಕಡೆಯಲ್ಲಿ, ಮುಕುಟ ಅಥವಾ ಕಿರೀಟವು ಒಬ್ಬ ರಾಜನಿಗೆ ಸನ್ಮಾನವನ್ನು ತರುವಂತೆಯೇ ಜ್ಞಾನವು ಜಾಣನಿಗೆ ಸೊಬಗನ್ನು ನೀಡುತ್ತದೆ.
ವಿವೇಕಿ ಅರಸನು ಹೇಳುವುದು: “ಕೆಟ್ಟವರು ಒಳ್ಳೆಯವರಿಗೆ ಬಾಗುವರು; ದುಷ್ಟರು ಶಿಷ್ಟರ ಬಾಗಿಲಲ್ಲಿ ಅಡ್ಡಬೀಳುವರು.” (ಜ್ಞಾನೋಕ್ತಿ 14:19) ಬೇರೆ ಮಾತುಗಳಲ್ಲಿ ಹೇಳುವಲ್ಲಿ, ಅಂತಿಮವಾಗಿ ಒಳ್ಳೆಯವರು ಕೆಟ್ಟವರ ಮೇಲೆ ವಿಜಯಹೊಂದುವರು. ಇಂದು ದೇವಜನರಲ್ಲಿ ಆಗುತ್ತಿರುವ ಸಂಖ್ಯಾಭಿವೃದ್ಧಿಯನ್ನು ಮತ್ತು ಅವರು ಅನುಭವಿಸುತ್ತಿರುವ ಅತ್ಯುತ್ತಮವಾದ ಜೀವನ ರೀತಿಯನ್ನು ಪರಿಗಣಿಸಿರಿ. ಯೆಹೋವನ ಸೇವಕರ ಮೇಲೆ ಸುರಿಸಲ್ಪಡುತ್ತಿರುವ ಈ ಆಶೀರ್ವಾದಗಳನ್ನು ನೋಡಿ, ಭೂಮಿಯಲ್ಲಿ ಆತ್ಮಾಭಿಷಿಕ್ತ ಉಳಿಕೆಯವರಿಂದ ಪ್ರತಿನಿಧಿಸಲ್ಪಡುವ ಯೆಹೋವನ ಸಾಂಕೇತಿಕ ಸ್ವರ್ಗೀಯ ಸ್ತ್ರೀಗೆ ‘ಅಡ್ಡಬೀಳು’ವಂತೆ ಕೆಲವು ವೈರಿಗಳು ನಿರ್ಬಂಧಿಸಲ್ಪಡುವರು. ಅರ್ಮಗೆದೋನ್‌ಗೆ ಮುಂಚೆಯಲ್ಲದಿದ್ದರೂ ಅರ್ಮಗೆದೋನ್‌ನ ಸಮಯದಲ್ಲಿ ಆ ವೈರಿಗಳು, ದೇವರ ಸಂಘಟನೆಯ ಐಹಿಕ ಭಾಗವು ನಿಜವಾಗಿಯೂ ಸ್ವರ್ಗೀಯ ಭಾಗವನ್ನು ಪ್ರತಿನಿಧಿಸುತ್ತದೆ ಎಂಬುದನ್ನು ಅಂಗೀಕರಿಸುವಂತೆ ಒತ್ತಾಯಿಸಲ್ಪಡುವರು.—ಯೆಶಾಯ 60:1, 14; ಗಲಾತ್ಯ 6:16; ಪ್ರಕಟನೆ 16:14, 16.
‘ದರಿದ್ರನನ್ನು ಕನಿಕರಿಸುವುದು’
ಮಾನವ ಸ್ವಭಾವದ ಕುರಿತು ಹೇಳಿಕೆ ನೀಡುತ್ತಾ ಸೊಲೊಮೋನನು ಹೇಳುವುದು: “ಬಡವನು ನೆರೆಯವನಿಗೂ ಅಸಹ್ಯ; ಧನವಂತನಿಗೆ ಬಹು ಜನ ಮಿತ್ರರು.” (ಜ್ಞಾನೋಕ್ತಿ 14:20) ಅಪರಿಪೂರ್ಣ ಮಾನವರ ವಿಷಯದಲ್ಲಿ ಇದು ಎಷ್ಟು ನಿಜವಾಗಿದೆ! ಸ್ವಾರ್ಥ ಪ್ರವೃತ್ತಿಯುಳ್ಳವರಾಗಿರುವ ಮಾನವರು ಬಡವರಿಗಿಂತಲೂ ಶ್ರೀಮಂತರಿಗೆ ಹೆಚ್ಚು ಅನುಗ್ರಹವನ್ನು ತೋರಿಸುತ್ತಾರೆ. ಧನವಂತನಿಗೆ ಬಹು ಜನ ಮಿತ್ರರಿರುವುದಾದರೂ, ಅವನ ಐಶ್ವರ್ಯದಂತೆಯೇ ಅವರ ಸ್ನೇಹವೂ ತಾತ್ಕಾಲಿಕವಾಗಿದೆ. ಹೀಗಿರುವಾಗ, ಹಣದಿಂದ ಅಥವಾ ಮುಖಸ್ತುತಿಯ ಸಹಾಯದಿಂದ ಮಿತ್ರರನ್ನು ಮಾಡಿಕೊಳ್ಳುವುದರಿಂದ ನಾವು ದೂರವಿರಬೇಕಲ್ಲವೊ?
ನಮ್ಮನ್ನು ಕೂಲಂಕಷವಾಗಿ ಪರೀಕ್ಷಿಸಿಕೊಳ್ಳುವಾಗ, ನಾವು ಧನವಂತರಿಗೆ ಬೆಣ್ಣೆಹಚ್ಚಲು ಪ್ರಯತ್ನಿಸುತ್ತೇವೆ ಮತ್ತು ಬಡವರನ್ನು ಕೀಳಾಗಿ ಕಾಣುತ್ತೇವೆ ಎಂದು ತಿಳಿದುಬರುವಲ್ಲಿ ಆಗೇನು? ಬೈಬಲಿನಲ್ಲಿ ಇಂಥ ಪಕ್ಷಪಾತವನ್ನು ಖಂಡಿಸಲಾಗಿದೆ ಎಂಬುದನ್ನು ನಾವು ಮನಗಾಣಬೇಕು. ಅದು ಹೀಗನ್ನುತ್ತದೆ: “ನೆರೆಯವನನ್ನು ತಿರಸ್ಕರಿಸುವವನು ದೋಷಿ; ದರಿದ್ರನನ್ನು ಕನಿಕರಿಸುವವನು ಧನ್ಯನು.”—ಜ್ಞಾನೋಕ್ತಿ 14:21.
ಕಷ್ಟಕರ ಸನ್ನಿವೇಶಗಳಲ್ಲಿರುವವರಿಗೆ ನಾವು ಪರಿಗಣನೆಯನ್ನು ತೋರಿಸಬೇಕು. (ಯಾಕೋಬ 1:27) ನಾವಿದನ್ನು ಹೇಗೆ ಮಾಡಸಾಧ್ಯವಿದೆ? ಜೀವನಾಧಾರಕ್ಕಾಗಿ ‘ಈ ಲೋಕದ ಸಂಪತ್ತನ್ನು’ ಒದಗಿಸುವ ಮೂಲಕವೇ. ಇದರಲ್ಲಿ ಹಣ, ಆಹಾರ, ವಸತಿ, ವಸ್ತ್ರ ಹಾಗೂ ವೈಯಕ್ತಿಕ ಗಮನವನ್ನು ಕೊಡುವುದು ಒಳಗೂಡಿರಸಾಧ್ಯವಿದೆ. (1 ಯೋಹಾನ 3:17) ಇಂಥವರಿಗೆ ಕನಿಕರವನ್ನು ತೋರಿಸುವವನು ಧನ್ಯನಾಗಿದ್ದಾನೆ ಅಂದರೆ ಸಂತೋಷಭರಿತ ವ್ಯಕ್ತಿಯಾಗಿದ್ದಾನೆ, ಏಕೆಂದರೆ “ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲೇ ಹೆಚ್ಚಿನ ಸಂತೋಷವಿದೆ.”—ಅ. ಕೃತ್ಯಗಳು 20:35, NW.
ಜಾಣರ ಮತ್ತು ಮೂರ್ಖರ ಬಾಳು ಹೇಗಿರುತ್ತದೆ?
“ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು” ಎಂಬ ಮೂಲತತ್ತ್ವವು, ಜಾಣನಿಗೂ ಅನ್ವಯವಾಗುತ್ತದೆ ಮತ್ತು ಮೂರ್ಖನಿಗೂ ಅನ್ವಯವಾಗುತ್ತದೆ. (ಗಲಾತ್ಯ 6:7) ಜಾಣನು ಸರಿಯಾದುದನ್ನೇ ಮಾಡುತ್ತಾನೆ ಆದರೆ ಮೂರ್ಖನು ಕುಯುಕ್ತಿಯನ್ನೇ ಯೋಜಿಸುತ್ತಾನೆ. ‘ಕುಯುಕ್ತಿಯುಳ್ಳವರು ದಾರಿತಪ್ಪುತ್ತಾರಲ್ಲವೇ?’ ಎಂದು ವಿವೇಕಿ ಅರಸನು ಪ್ರಶ್ನಿಸುತ್ತಾನೆ. ಹೌದು ಎಂಬುದೇ ಉತ್ತರವಾಗಿದೆ; ಅವರು ತಪ್ಪುದಾರಿ ಹಿಡಿಯುತ್ತಾರೆ. ಆದರೆ “ಸುಯುಕ್ತಿಯುಳ್ಳವರು ಪ್ರೀತಿ [“ಪ್ರೀತಿಪೂರ್ವಕ ದಯೆ,” NW] ಸತ್ಯತೆಗಳಿಗೆ ಪಾತ್ರರು.” (ಜ್ಞಾನೋಕ್ತಿ 14:22) ಸುಯುಕ್ತಿಯುಳ್ಳವರು ಅಂದರೆ ಒಳ್ಳೇದನ್ನು ಮಾಡುವವರು, ಇತರರ ಸದ್ಭಾವನೆಗೆ ಹಾಗೂ ದೇವರ ಪ್ರೀತಿಪೂರ್ವಕ ದಯೆಗೆ ಪಾತ್ರರಾಗುತ್ತಾರೆ.
ಸಾಫಲ್ಯವನ್ನು ಪರಿಶ್ರಮದ ಕೆಲಸದೊಂದಿಗೆ ಮತ್ತು ವೈಫಲ್ಯವನ್ನು ವಿಪರೀತವಾಗಿ ಮಾತಾಡುವುದು ಆದರೆ ಕಡಿಮೆ ಕೆಲಸಮಾಡುವುದರೊಂದಿಗೆ ಸಂಬಂಧಿಸುತ್ತಾ ಸೊಲೊಮೋನನು ಹೇಳುವುದು: “ಎಲ್ಲಾ ಪ್ರಯಾಸದಲ್ಲಿ ಲಾಭವಿದೆ; ಹರಟೆ ಮಾತು ಬಡತನಕ್ಕೆ ಮಾತ್ರ ದಾರಿ.” (ಜ್ಞಾನೋಕ್ತಿ 14:23, NIBV) ನಿಶ್ಚಯವಾಗಿಯೂ ಈ ಮೂಲತತ್ತ್ವವು ನಮ್ಮ ಆಧ್ಯಾತ್ಮಿಕ ಪರಿಶ್ರಮಗಳಿಗೆ ಅನ್ವಯವಾಗುತ್ತದೆ. ಕ್ರೈಸ್ತ ಶುಶ್ರೂಷೆಯಲ್ಲಿ ಶ್ರಮಿಸುವಾಗ, ದೇವರ ವಾಕ್ಯದ ಜೀವರಕ್ಷಕ ಸತ್ಯವನ್ನು ಇನ್ನೂ ಅನೇಕರಿಗೆ ಪರಿಚಯಿಸುವುದರಿಂದ ಸಿಗುವ ಪ್ರತಿಫಲಗಳನ್ನು ನಾವು ಪಡೆದುಕೊಳ್ಳುತ್ತೇವೆ. ನಮಗೆ ಕೊಡಲ್ಪಡುವ ಯಾವುದೇ ದೇವಪ್ರಭುತ್ವಾತ್ಮಕ ನೇಮಕವನ್ನು ನಂಬಿಗಸ್ತಿಕೆಯಿಂದ ನಿರ್ವಹಿಸುವುದು, ಆನಂದ ಹಾಗೂ ಸಂತೃಪ್ತಿಗೆ ನಡಿಸುತ್ತದೆ.
“ಜ್ಞಾನಿಗಳ [ಜ್ಞಾನ] ಕಿರೀಟವೇ ಅವರ ಶ್ರೇಷ್ಠ ಸಂಪತ್ತು; ಜ್ಞಾನಹೀನರ ಮೂರ್ಖತನವು ಬರೀ ಮೂರ್ಖತನವೇ” ಎಂದು ಜ್ಞಾನೋಕ್ತಿ 14:24 ಹೇಳುತ್ತದೆ. ಇದರ ಅರ್ಥವೇನಾಗಿರಸಾಧ್ಯವಿದೆ ಎಂದರೆ, ಜ್ಞಾನಿಗಳು ಅಥವಾ ವಿವೇಕಿಗಳು ಯಾವ ವಿವೇಕವನ್ನು ಪಡೆದುಕೊಳ್ಳಲು ಹೆಣಗಾಡುತ್ತಾರೋ ಅದು ಅವರಿಗೆ ಶ್ರೇಷ್ಠ ಸಂಪತ್ತಿನಂತಿದೆ, ಮತ್ತು ಇದು ಅವರಿಗೆ ಕಿರೀಟಪ್ರಾಯವಾಗಿದೆ ಅಥವಾ ಅವರಿಗೆ ಹೆಚ್ಚಿನ ಸೊಬಗನ್ನು ನೀಡುತ್ತದೆ. ಇನ್ನೊಂದು ಕಡೆಯಲ್ಲಿ, ಜ್ಞಾನಹೀನರು ಕೇವಲ ಮೂರ್ಖತನವನ್ನು ಸಂಪಾದಿಸುತ್ತಾರೆ. ಒಂದು ಪರಾಮರ್ಶನ ಕೃತಿಗನುಸಾರ, ಈ ಜ್ಞಾನೋಕ್ತಿಯು “ಯಾರು ಐಶ್ವರ್ಯವನ್ನು ವಿವೇಕಯುತವಾಗಿ ಉಪಯೋಗಿಸುತ್ತಾರೋ ಅವರಿಗೆ ಅದು ಒಂದು ಆಭರಣದಂತಿದೆ . . . [ಆದರೆ] ಮೂರ್ಖರ ಬಳಿ ಅವರ ಮೂರ್ಖತನವು ಮಾತ್ರ ಇರುತ್ತದೆ” ಎಂಬುದನ್ನು ಸೂಚಿಸಸಾಧ್ಯವಿದೆ. ಅದೇನೇ ಇರಲಿ, ವಿವೇಕಿಗಳು ಮೂರ್ಖರಿಗಿಂತಲೂ ಚೆನ್ನಾಗಿ ಬಾಳುತ್ತಾರೆ.
ಇಸ್ರಾಯೇಲ್ಯರ ಅರಸನು ಹೇಳುವುದು: “ಸತ್ಯಸಾಕ್ಷಿಯು ಪ್ರಾಣಗಳನ್ನು ರಕ್ಷಿಸುತ್ತಾನೆ; ಮೋಸದ ಸಾಕ್ಷಿಯು ಸುಳ್ಳುಗಳನ್ನು ಆಡುತ್ತಾನೆ.” (ಜ್ಞಾನೋಕ್ತಿ 14:25) ನ್ಯಾಯಸ್ಥಾನೀಯ ಹಿನ್ನೆಲೆಯಲ್ಲಿ ಇದು ಖಂಡಿತವಾಗಿಯೂ ನಿಜವಾಗಿರುವಾಗ, ನಮ್ಮ ಶುಶ್ರೂಷೆಗೆ ಅದು ಹೇಗೆ ಅನ್ವಯಿಸುತ್ತದೆಂಬುದನ್ನು ಪರಿಗಣಿಸಿರಿ. ನಮ್ಮ ರಾಜ್ಯಸಾರುವಿಕೆ ಹಾಗೂ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ, ದೇವರ ವಾಕ್ಯದ ಸತ್ಯದ ವಿಷಯದಲ್ಲಿ ಸಾಕ್ಷಿನೀಡುವುದು ಒಳಗೂಡಿದೆ. ಆ ಸಾಕ್ಷಿಯು ಯೋಗ್ಯಹೃದಯದ ವ್ಯಕ್ತಿಗಳನ್ನು ಸುಳ್ಳು ಧರ್ಮದಿಂದ ವಿಮೋಚಿಸುತ್ತದೆ ಮತ್ತು ಜೀವಗಳನ್ನು ರಕ್ಷಿಸುತ್ತದೆ. ಸ್ವತಃ ನಮ್ಮ ವಿಷಯದಲ್ಲಿ ಮತ್ತು ನಮ್ಮ ಉಪದೇಶದ ವಿಷಯದಲ್ಲಿ ಸತತವಾಗಿ ಎಚ್ಚರಿಕೆಯಿಂದಿರುವ ಮೂಲಕ, ನಮ್ಮನ್ನೂ ನಮ್ಮ ಉಪದೇಶಕ್ಕೆ ಕಿವಿಗೊಡುವವರನ್ನೂ ನಾವು ರಕ್ಷಿಸುವೆವು. (1 ತಿಮೊಥೆಯ 4:16) ನಾವಿದನ್ನು ಮಾಡುತ್ತಾ ಮುಂದುವರಿಯುವಾಗ, ಜೀವನದ ಎಲ್ಲ ಕ್ಷೇತ್ರಗಳಲ್ಲಿ ಜಾಣತನವನ್ನು ತೋರಿಸಲು ಎಚ್ಚರವಾಗಿರೋಣ.
[ಪಾದಟಿಪ್ಪಣಿಗಳು]
^ ಪ್ಯಾರ. 3 ಜ್ಞಾನೋಕ್ತಿ 14:1-11ರ ಚರ್ಚೆಗಾಗಿ, ನವೆಂಬರ್ 15, 2004ರ ಕಾವಲಿನಬುರುಜು ಪತ್ರಿಕೆಯ 26-29ನೇ ಪುಟಗಳನ್ನು ನೋಡಿರಿ.
^ ಪ್ಯಾರ. 11 ಅಕ್ಟೋಬರ್ 22, 1987ರ ಎಚ್ಚರ! (ಇಂಗ್ಲಿಷ್) ಸಂಚಿಕೆಯ 11-16ನೇ ಪುಟಗಳನ್ನು ನೋಡಿರಿ.
[ಪುಟ 18ರಲ್ಲಿರುವ ಚಿತ್ರ]
ಯಾವುದು ತಪ್ಪು ಮತ್ತು ಯಾವುದು ಸರಿ ಎಂಬ ವ್ಯತ್ಯಾಸವನ್ನು ನಾವು ಗ್ರಹಿಸಬೇಕಾದರೆ, ಗಹನವಾದ ಸತ್ಯಗಳ ಕುರಿತಾದ ಶ್ರದ್ಧಾಪೂರ್ವಕ ಅಧ್ಯಯನವು ಅತ್ಯಾವಶ್ಯಕ
[ಪುಟ 18ರಲ್ಲಿರುವ ಚಿತ್ರ]
ಪ್ರಾಪಂಚಿಕ ಜೀವನ ಶೈಲಿಯು ನಿಜವಾಗಿಯೂ ತೃಪ್ತಿದಾಯಕವಾಗಿದೆಯೊ?