“ನೀವು ಏನಾಗಿದ್ದೀರಿ ಎಂಬುದನ್ನು ನಿಮಗೆ ನೀವೇ ರುಜುಪಡಿಸಿಕೊಳ್ಳುತ್ತಾ ಇರಿ”
“ನೀವು ಏನಾಗಿದ್ದೀರಿ ಎಂಬುದನ್ನು ನಿಮಗೆ ನೀವೇ ರುಜುಪಡಿಸಿಕೊಳ್ಳುತ್ತಾ ಇರಿ”
“ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ [“ನೀವು ಏನಾಗಿದ್ದೀರಿ ಎಂಬುದನ್ನು ನಿಮಗೆ ನೀವೇ ರುಜುಪಡಿಸಿಕೊಳ್ಳುತ್ತಾ ಇರಿ,” Nw].”—2 ಕೊರಿಂಥ 13:5.
ಗ್ರಾಮಾಂತರ ಪ್ರದೇಶದ ಮೂಲಕ ಪ್ರಯಾಣಿಸುತ್ತಿರುವ ಒಬ್ಬ ಮನುಷ್ಯನು ಒಂದು ರಸ್ತೆಯು ಎರಡು ರಸ್ತೆಗಳಾಗಿ ವಿಭಾಗಗೊಂಡಿರುವ ಸ್ಥಳಕ್ಕೆ ಬಂದು ತಲಪುತ್ತಾನೆ. ಯಾವ ಹಾದಿಯಲ್ಲಿ ಹೋದರೆ ತನ್ನ ಗಮ್ಯಸ್ಥಾನ ಸಿಗುತ್ತದೆ ಎಂಬ ವಿಷಯದಲ್ಲಿ ಅನಿಶ್ಚಿತನಾದ ಅವನು ದಾರಿಹೋಕರ ಬಳಿ ಮಾರ್ಗದರ್ಶನ ಕೇಳುತ್ತಾನೆ. ಆದರೆ ಅವರಿಂದ ಪರಸ್ಪರ ವಿರುದ್ಧವಾದ ಮಾಹಿತಿಯು ಅವನಿಗೆ ಸಿಗುತ್ತದೆ. ಇದರಿಂದ ಗೊಂದಲಗೊಂಡಿರುವ ಅವನು ಪ್ರಯಾಣವನ್ನು ಮುಂದುವರಿಸಲು ಅಶಕ್ತನಾಗಿದ್ದಾನೆ. ನಮ್ಮ ನಂಬಿಕೆಗಳ ಕುರಿತು ಸಂಶಯಗಳಿರುವುದು ನಮ್ಮ ಮೇಲೆ ತದ್ರೀತಿಯ ಪರಿಣಾಮವನ್ನು ಬೀರಬಲ್ಲದು. ಇಂಥ ಅನಿಶ್ಚಿತತೆಯು ನಿರ್ಣಯಗಳನ್ನು ಮಾಡುವ ನಮ್ಮ ಸಾಮರ್ಥ್ಯಕ್ಕೆ ಅಡ್ಡಬರಸಾಧ್ಯವಿದೆ ಮತ್ತು ಇದು ಯಾವ ಮಾರ್ಗದಲ್ಲಿ ಹೋಗಬೇಕೆಂಬುದರ ಬಗ್ಗೆ ನಾವು ಅನಿಶ್ಚಿತರಾಗುವಂತೆ ಮಾಡಸಾಧ್ಯವಿದೆ.
2 ಪ್ರಥಮ ಶತಮಾನದಲ್ಲಿ, ಗ್ರೀಸ್‌ನ ಕೊರಿಂಥದ ಕ್ರೈಸ್ತ ಸಭೆಯಲ್ಲಿ ಒಂದು ಸನ್ನಿವೇಶವು ಎದ್ದಿತು; ಇದು ಕೆಲವರ ಮೇಲೆ ಇಂಥ ಪರಿಣಾಮವನ್ನು ಬೀರಸಾಧ್ಯವಿತ್ತು. ಆಗ “ಅತಿಶ್ರೇಷ್ಠರಾದ ಅಪೊಸ್ತಲರು,” ‘ಅವನ ಪತ್ರಿಕೆಗಳು ಗೌರವವಾದವುಗಳೂ ಬಲವುಳ್ಳವುಗಳೂ ಆಗಿವೆ; ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನೂ ಅವನ ಮಾತುಗಳು ಗಣನೆಗೆ ಬಾರದವುಗಳೂ ಆಗಿವೆ’ ಎಂದು ಹೇಳುತ್ತಾ, ಅಪೊಸ್ತಲ ಪೌಲನ ಅಧಿಕಾರವನ್ನು ಪ್ರಶ್ನಿಸಿದರು. (2 ಕೊರಿಂಥ 10:7-12; 11:5, 6) ಇಂಥ ಒಂದು ದೃಷ್ಟಿಕೋನವು, ಕೊರಿಂಥ ಸಭೆಯಲ್ಲಿದ್ದ ಕೆಲವರು ತಾವು ಹೇಗೆ ನಡೆದುಕೊಳ್ಳಬೇಕು ಎಂಬ ವಿಷಯದಲ್ಲಿ ಅನಿಶ್ಚಿತರಾಗುವಂತೆ ಮಾಡಿದ್ದಿರಬಹುದು.
3 ಪೌಲನು ಸಾ.ಶ. 50ರಲ್ಲಿ ಕೊರಿಂಥವನ್ನು ಸಂದರ್ಶಿಸಿದಾಗ ಅಲ್ಲಿನ ಸಭೆಯನ್ನು ಸ್ಥಾಪಿಸಿದನು. ಅವನು ಕೊರಿಂಥದಲ್ಲೇ ‘ಒಂದು ವರುಷ ಆರು ತಿಂಗಳು ಇದ್ದುಕೊಂಡು ಆ ಜನರಿಗೆ ದೇವರ ವಾಕ್ಯವನ್ನು ಉಪದೇಶಮಾಡುತ್ತಿದ್ದನು.’ ವಾಸ್ತವದಲ್ಲಿ, “ಕೊರಿಂಥದವರಲ್ಲಿ ಅನೇಕರು ಕೇಳಿ ನಂಬಿ ದೀಕ್ಷಾಸ್ನಾನಮಾಡಿಸಿಕೊಂಡರು.” (ಅ. ಕೃತ್ಯಗಳು 18:5-11) ಪೌಲನು ಕೊರಿಂಥದಲ್ಲಿದ್ದ ತನ್ನ ಜೊತೆ ವಿಶ್ವಾಸಿಗಳ ಆಧ್ಯಾತ್ಮಿಕ ಹಿತಕ್ಷೇಮದ ಬಗ್ಗೆ ಬಹಳವಾಗಿ ಆಸಕ್ತನಾಗಿದ್ದನು. ಅಷ್ಟುಮಾತ್ರವಲ್ಲ, ಕೆಲವೊಂದು ವಿಷಯಗಳ ಕುರಿತು ಬುದ್ಧಿವಾದವನ್ನು ನೀಡುವಂತೆ ಕೊರಿಂಥದವರು ಪೌಲನಿಗೆ ಪತ್ರವನ್ನು ಬರೆದಿದ್ದರು. (1 ಕೊರಿಂಥ 7:1) ಆದುದರಿಂದ ಅವನು ಅವರಿಗೆ ಅತ್ಯುತ್ತಮವಾದ ಸಲಹೆಯನ್ನು ನೀಡಿದನು.
4 ಪೌಲನು ಬರೆದುದು: “ಕ್ರಿಸ್ತನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ, ನಿಮ್ಮನ್ನು ಪರಿಶೋಧಿಸಿಕೊಳ್ಳಿರಿ [“ನೀವು ಏನಾಗಿದ್ದೀರಿ ಎಂಬುದನ್ನು ನಿಮಗೆ ನೀವೇ ರುಜುಪಡಿಸಿಕೊಳ್ಳುತ್ತಾ ಇರಿ,” NW].” (2 ಕೊರಿಂಥ 13:5) ಈ ಸಲಹೆಯನ್ನು ಅನ್ವಯಿಸುವುದು, ಕೊರಿಂಥದಲ್ಲಿದ್ದ ಆ ಸಹೋದರರು ತಾವು ಯಾವ ಮಾರ್ಗದಲ್ಲಿ ನಡೆಯಬೇಕು ಎಂಬ ವಿಷಯದಲ್ಲಿ ಅನಿಶ್ಚಿತರಾಗುವುದರಿಂದ ಅವರನ್ನು ಸಂರಕ್ಷಿಸುತ್ತಿದ್ದಿರಬಹುದು. ತದ್ರೀತಿಯಲ್ಲಿ ಇದು ಇಂದು ನಮ್ಮನ್ನೂ ಸಂರಕ್ಷಿಸಸಾಧ್ಯವಿದೆ. ಹಾಗಾದರೆ, ನಾವು ಪೌಲನ ಬುದ್ಧಿವಾದವನ್ನು ಹೇಗೆ ಅನುಸರಿಸಸಾಧ್ಯವಿದೆ? ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಹೇಗೆ ಪರೀಕ್ಷಿಸಿಕೊಳ್ಳಸಾಧ್ಯವಿದೆ? ಮತ್ತು ನಾವು ಏನಾಗಿದ್ದೇವೆ ಎಂಬುದನ್ನು ರುಜುಪಡಿಸುವುದರಲ್ಲಿ ಏನು ಒಳಗೂಡಿದೆ?
‘ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂದು ನಿಮ್ಮನ್ನು ಪರೀಕ್ಷಿಸಿಕೊಳ್ಳುತ್ತಾ ಇರಿ’
5 ಒಂದು ಪರೀಕ್ಷೆಯಲ್ಲಿ, ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಅಥವಾ ಒಂದು ವಸ್ತುವು ಪರೀಕ್ಷೆಗೊಳಪಡಿಸಲ್ಪಡುತ್ತದೆ ಮತ್ತು ಈ ಪರೀಕ್ಷೆಯು ಒಂದು ಪ್ರಮಾಣ ಅಥವಾ ಮಾನದಂಡಕ್ಕನುಸಾರ ನಡೆಸಲ್ಪಡುತ್ತದೆ. ಇಲ್ಲಿ, ಪರೀಕ್ಷಿಸಲ್ಪಡುತ್ತಿರುವ ವಸ್ತು, ನಂಬಿಕೆ—ನಾವು ಅಂಗೀಕರಿಸಿರುವಂಥ ಅನೇಕ ನಂಬಿಕೆಗಳ ಸಂಗ್ರಹ—ಅಲ್ಲ. ವ್ಯಕ್ತಿಗತವಾಗಿ ನಾವೇ ಪರೀಕ್ಷೆಗೊಳಗಾಗುತ್ತಿದ್ದೇವೆ. ಈ ಪರೀಕ್ಷೆಯನ್ನು ನಡೆಸಲು ನಮಗೆ ಪರಿಪೂರ್ಣವಾದ ಮಾನದಂಡವಿದೆ. ಕೀರ್ತನೆಗಾರನಾದ ದಾವೀದನು ರಚಿಸಿದ ಒಂದು ಗೀತೆಯು ಹೀಗೆ ತಿಳಿಸುತ್ತದೆ: ಕೀರ್ತನೆ 19:7, 8) ಬೈಬಲಿನಲ್ಲಿ ಯೆಹೋವನ ಲೋಪವಿಲ್ಲದ ಅಂದರೆ ಪರಿಪೂರ್ಣವಾದ ನಿಯಮಗಳು ಹಾಗೂ ನೀತಿಯುಳ್ಳ ನಿಯಮಗಳು, ನಂಬಿಕೆಯೋಗ್ಯವಾದ ಜ್ಞಾಪನಗಳು ಮತ್ತು ಪವಿತ್ರವಾದ ಆಜ್ಞೆಗಳು ಒಳಗೂಡಿವೆ. ಅದರಲ್ಲಿ ಕಂಡುಬರುವ ಸಂದೇಶವು ಪರೀಕ್ಷಿಸಿ ನೋಡಲಿಕ್ಕಾಗಿ ಆದರ್ಶಪ್ರಾಯವಾದ ಮಾನದಂಡವಾಗಿದೆ.
“ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು; ಅದು ಪ್ರಾಣವನ್ನು ಉಜ್ಜೀವಿಸಮಾಡುವಂಥದ್ದು. ಯೆಹೋವನ ಕಟ್ಟಳೆ [“ಜ್ಞಾಪನವು,” NW] ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. ಯೆಹೋವನ ನಿಯಮಗಳು ನೀತಿಯುಳ್ಳವುಗಳಾಗಿವೆ; ಮನಸ್ಸನ್ನು ಹರ್ಷಪಡಿಸುತ್ತವೆ. ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.” (6 ಆ ದೇವಪ್ರೇರಿತ ಸಂದೇಶದ ಕುರಿತು ಅಪೊಸ್ತಲ ಪೌಲನು ಹೇಳುವುದು: “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:12) ಹೌದು, ದೇವರ ವಾಕ್ಯವು ನಮ್ಮ ಹೃದಯವನ್ನು, ಅಂದರೆ ಆಂತರ್ಯದಲ್ಲಿ ನಾವು ನಿಜವಾಗಿಯೂ ಏನಾಗಿದ್ದೇವೆ ಎಂಬುದನ್ನು ಪರೀಕ್ಷಿಸಬಲ್ಲದು. ಈ ಹದವಾದ ಅಥವಾ ಹರಿತವಾದ ಮತ್ತು ಕಾರ್ಯಸಾಧಕವಾದ ಸಂದೇಶದ ವೈಯಕ್ತಿಕ ಅನ್ವಯವನ್ನು ನಾವು ಹೇಗೆ ಮಾಡಿಕೊಳ್ಳಸಾಧ್ಯವಿದೆ? ನಮ್ಮ ಹೃದಯವನ್ನು ಪರೀಕ್ಷಿಸಲಿಕ್ಕಾಗಿ ದೇವರ ವಾಕ್ಯವನ್ನು ನಾವು ಹೇಗೆ ಅನ್ವಯಿಸಸಾಧ್ಯವಿದೆ ಎಂಬುದನ್ನು ಕೀರ್ತನೆಗಾರನು ಸ್ಪಷ್ಟವಾಗಿ ತಿಳಿಸುತ್ತಾನೆ. ಅವನು ಹಾಡಿದ್ದು: “ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು.” (ಕೀರ್ತನೆ 1:1, 2) ದೇವರ ಲಿಖಿತ ವಾಕ್ಯವಾದ ಬೈಬಲಿನಲ್ಲಿ ‘ಯೆಹೋವನ ಧರ್ಮಶಾಸ್ತ್ರವು’ ಕಂಡುಬರುತ್ತದೆ. ಯೆಹೋವನ ವಾಕ್ಯವನ್ನು ಓದುವುದರಲ್ಲಿ ನಾವು ಸಂತೋಷಪಡಬೇಕಾಗಿದೆ. ಅದರ ಕುರಿತು ಧ್ಯಾನಿಸಲು ನಾವು ಸಮಯವನ್ನು ಬದಿಗಿರಿಸಬೇಕು. ನಾವು ಹೀಗೆ ಮಾಡುವಾಗ, ಅದರಲ್ಲಿ ಏನು ಬರೆಯಲ್ಪಟ್ಟಿದೆಯೋ ಅದು ನಮ್ಮನ್ನು ಪರೀಕ್ಷಿಸುವಂತೆ ಬಿಟ್ಟುಕೊಡುವ ಅಗತ್ಯವಿದೆ.
7 ಹಾಗಾದರೆ, ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳುವ ಪ್ರಮುಖ ವಿಧವು ಯಾವುದೆಂದರೆ, ದೇವರ ವಾಕ್ಯವನ್ನು ಪ್ರಾರ್ಥನಾಪೂರ್ವಕವಾಗಿ ಓದುವುದು ಮತ್ತು ಅದರ ಕುರಿತು ಧ್ಯಾನಿಸುವುದು ಹಾಗೂ ನಮ್ಮ ನಡತೆಯು ನಾವು ಏನನ್ನು ಕಲಿಯುತ್ತೇವೋ ಅದಕ್ಕೆ ಎಷ್ಟರ ಮಟ್ಟಿಗೆ ಹೊಂದಿಕೆಯಲ್ಲಿದೆ ಎಂಬುದನ್ನು ಪರೀಕ್ಷಿಸುವುದೇ. ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಬಹಳಷ್ಟು ಸಹಾಯವಿರುವುದಕ್ಕಾಗಿ ನಾವು ಸಂತೋಷಿಸಸಾಧ್ಯವಿದೆ.
8 ಶಾಸ್ತ್ರವಚನಗಳನ್ನು ವಿವರಿಸುವಂಥ ಪ್ರಕಾಶನಗಳನ್ನು ತಯಾರಿಸುವ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮೂಲಕ ಯೆಹೋವನು ಬೋಧನೆಗಳನ್ನು ಮತ್ತು ಉಪದೇಶವನ್ನು ನೀಡಿದ್ದಾನೆ. (ಮತ್ತಾಯ 24:45) ಉದಾಹರಣೆಗೆ, ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕದಲ್ಲಿರುವ ಅಧಿಕಾಂಶ ಅಧ್ಯಾಯಗಳ ಕೊನೆಯಲ್ಲಿರುವ “ಧ್ಯಾನಕ್ಕಾಗಿ ಪ್ರಶ್ನೆಗಳು” ಎಂಬ ಮೇಲ್ಬರಹವಿರುವ ಚೌಕವನ್ನು ಪರಿಗಣಿಸಿರಿ. * ಆ ಪುಸ್ತಕದ ಈ ವೈಶಿಷ್ಟ್ಯವು ವೈಯಕ್ತಿಕ ಅವಲೋಕನಕ್ಕಾಗಿ ಎಷ್ಟು ಅತ್ಯುತ್ತಮವಾದ ಅವಕಾಶಗಳನ್ನು ಒದಗಿಸುತ್ತದೆ! ನಮ್ಮ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಚರ್ಚಿಸಲ್ಪಟ್ಟಿರುವ ಬೇರೆ ಬೇರೆ ವಿಷಯಗಳು ಸಹ ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಲು ಸಹಾಯಮಾಡುತ್ತವೆ. ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳಲ್ಲಿ ಬಂದಿರುವ ಜ್ಞಾನೋಕ್ತಿಗಳು ಪುಸ್ತಕದ ಕುರಿತಾದ ಲೇಖನಗಳ ಬಗ್ಗೆ ಒಬ್ಬ ಕ್ರೈಸ್ತ ಸ್ತ್ರೀಯು ಹೇಳಿದ್ದು: “ಈ ಲೇಖನಗಳು ತುಂಬ ಪ್ರಾಯೋಗಿಕವಾಗಿವೆ ಎಂದು ನನಗನಿಸುತ್ತದೆ. ನನ್ನ ಮಾತು, ನಡತೆ ಮತ್ತು ಮನೋಭಾವವು ನಿಜವಾಗಿಯೂ ಯೆಹೋವನ ನೀತಿಯ ಮಟ್ಟಗಳಿಗೆ ಅನುಸಾರವಾಗಿದೆಯೋ ಎಂಬುದನ್ನು ಪರೀಕ್ಷಿಸಿ ನೋಡುವಂತೆ ಅವು ನನಗೆ ಸಹಾಯಮಾಡುತ್ತವೆ.”
9 ನಾವು ಸಭಾ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿಯೂ ಹೇರಳವಾದ ಮಾರ್ಗದರ್ಶನ ಮತ್ತು ಉತ್ತೇಜನವನ್ನು ಪಡೆದುಕೊಳ್ಳುತ್ತೇವೆ. ಯೆಶಾಯನು ಯಾರ ಕುರಿತು ಈ ಮುಂದಿನಂತೆ ಪ್ರವಾದಿಸಿದನೊ ಅವರಿಗಾಗಿ ದೇವರು ಮಾಡಿರುವ ಆಧ್ಯಾತ್ಮಿಕ ಒದಗಿಸುವಿಕೆಗಳಲ್ಲಿ ಇವೂ ಸೇರಿವೆ: “ಅಂತ್ಯಕಾಲದಲ್ಲಿ ಯೆಹೋವನ ಮಂದಿರದ ಬೆಟ್ಟವು ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವದು; ಆಗ ಸಕಲದೇಶಗಳವರು ಅದರ ಕಡೆಗೆ ಪ್ರವಾಹಗಳಂತೆ ಬರುವರು. ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, . . . ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” (ಯೆಶಾಯ 2:2, 3) ಯೆಹೋವನ ಮಾರ್ಗಗಳ ಕುರಿತು ಇಂಥ ಉಪದೇಶವನ್ನು ಪಡೆದುಕೊಳ್ಳುವುದು ನಿಶ್ಚಯವಾಗಿಯೂ ಒಂದು ಆಶೀರ್ವಾದವಾಗಿದೆ.
10 ನಮ್ಮನ್ನು ಪರೀಕ್ಷಿಸಿಕೊಳ್ಳುವ ಇನ್ನೊಂದು ವಿಧವು, ಕ್ರೈಸ್ತ ಹಿರಿಯರನ್ನೂ ಸೇರಿಸಿ ಯಾರಿಗೆ ಆಧ್ಯಾತ್ಮಿಕ ಅರ್ಹತೆಗಳಿವೆಯೋ ಅಂಥವರಿಂದ ಕೊಡಲ್ಪಡುವ ಸಲಹೆಯ ಮೂಲಕವೇ ಆಗಿದೆ. ಗಲಾತ್ಯ 6:1) ನಮ್ಮ ತಿದ್ದುಪಾಟಿಗಾಗಿ ಮಾಡಲ್ಪಟ್ಟಿರುವ ಈ ಒದಗಿಸುವಿಕೆಗೆ ನಾವೆಷ್ಟು ಆಭಾರಿಗಳಾಗಿರಸಾಧ್ಯವಿದೆ!
ಅವರ ಕುರಿತಾಗಿ ಬೈಬಲ್ ಹೇಳುವುದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೂ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.” (11 ನಮ್ಮ ಪ್ರಕಾಶನಗಳು, ಕ್ರೈಸ್ತ ಕೂಟಗಳು, ನೇಮಿತ ಪುರುಷರು—ಎಲ್ಲವೂ ಯೆಹೋವನಿಂದ ಮಾಡಲ್ಪಟ್ಟಿರುವ ಅದ್ಭುತಕರ ಒದಗಿಸುವಿಕೆಗಳಾಗಿವೆ. ಆದರೂ ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಸ್ವಪರಿಶೀಲನೆಯನ್ನು ಅಗತ್ಯಪಡಿಸುತ್ತದೆ. ಆದುದರಿಂದ, ನಾವು ನಮ್ಮ ಪ್ರಕಾಶನಗಳನ್ನು ಓದುತ್ತಿರುವಾಗ ಅಥವಾ ಶಾಸ್ತ್ರೀಯ ಬುದ್ಧಿವಾದಕ್ಕೆ ಕಿವಿಗೊಡುತ್ತಿರುವಾಗ, ಸ್ವತಃ ಹೀಗೆ ಕೇಳಿಕೊಳ್ಳಬೇಕಾಗಿದೆ: ‘ಇದು ನನ್ನ ಬಗ್ಗೆ ಕೊಡಲ್ಪಟ್ಟಿರುವ ವರ್ಣನೆಯಂತಿದೆಯೊ? ನಾನು ಹೀಗೆ ಮಾಡುತ್ತೇನೊ? ನಾನು ಕ್ರೈಸ್ತ ನಂಬಿಕೆಗಳ ಇಡೀ ಸಂಗ್ರಹಕ್ಕನುಸಾರ ಜೀವಿಸುತ್ತಿದ್ದೇನೊ?’ ಈ ಒದಗಿಸುವಿಕೆಗಳ ಮೂಲಕ ನಾವು ಪಡೆದುಕೊಳ್ಳುವ ಮಾಹಿತಿಯ ಕಡೆಗೆ ನಾವು ತೋರಿಸುವ ಮನೋಭಾವವು ಸಹ ನಮ್ಮ ಆಧ್ಯಾತ್ಮಿಕ ಪರಿಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಬೈಬಲ್ ಹೇಳುವುದು: “ಪ್ರಾಕೃತಮನುಷ್ಯನು ದೇವರಾತ್ಮನ ವಿಷಯಗಳನ್ನು ಬೇಡವೆನ್ನುತ್ತಾನೆ; ಅವು ಅವನಿಗೆ ಹುಚ್ಚುಮಾತಾಗಿ ತೋರುತ್ತವೆ; . . . ದೇವರಾತ್ಮನಿಂದ ನಡಿಸಿಕೊಳ್ಳುವವನೋ ಎಲ್ಲವನ್ನೂ ವಿಚಾರಿಸಿ ತಿಳುಕೊಳ್ಳುತ್ತಾನೆ.” (1 ಕೊರಿಂಥ 2:14, 15) ಹೀಗಿರುವಾಗ, ನಮ್ಮ ಪುಸ್ತಕಗಳು, ಪತ್ರಿಕೆಗಳು ಮತ್ತು ಇತರ ಪ್ರಕಾಶನಗಳಲ್ಲಿ ನಾವು ಓದುವಂಥ ಹಾಗೂ ನಮ್ಮ ಕೂಟಗಳಲ್ಲಿ ಮತ್ತು ಹಿರಿಯರಿಂದ ನಾವು ಕೇಳಿಸಿಕೊಳ್ಳುವಂಥ ವಿಷಯಗಳ ಕುರಿತು ಸಕಾರಾತ್ಮಕವಾದ, ಆಧ್ಯಾತ್ಮಿಕ ನೋಟವನ್ನು ಕಾಪಾಡಿಕೊಳ್ಳಲು ನಾವು ಹೆಣಗಾಡಬೇಕಲ್ಲವೊ?
“ನೀವು ಏನಾಗಿದ್ದೀರಿ ಎಂಬುದನ್ನು ನಿಮಗೆ ನೀವೇ ರುಜುಪಡಿಸಿಕೊಳ್ಳುತ್ತಾ ಇರಿ”
12 ನಾವು ಏನಾಗಿದ್ದೇವೆ ಎಂಬುದನ್ನು ರುಜುಪಡಿಸುವುದರಲ್ಲಿ ಸ್ವಂತ ಮೌಲ್ಯಮಾಪನವನ್ನು ಮಾಡುವುದು ಒಳಗೂಡಿದೆ. ಹೌದು, ನಾವು ಸತ್ಯದಲ್ಲಿ ಇರಬಹುದು, ಆದರೆ ನಮ್ಮ ಆಧ್ಯಾತ್ಮಿಕತೆಯ ಮಟ್ಟವೇನಾಗಿದೆ? ನಾವು ಏನಾಗಿದ್ದೇವೆ ಎಂಬುದನ್ನು ರುಜುಪಡಿಸುವುದರಲ್ಲಿ, ಕ್ರೈಸ್ತ ಪ್ರೌಢತೆ ಮತ್ತು ಆಧ್ಯಾತ್ಮಿಕ ಒದಗಿಸುವಿಕೆಗಳಿಗಾಗಿ ನಿಜವಾದ ಗಣ್ಯತೆಯ ರುಜುವಾತನ್ನು ಕೊಡುವುದೂ ಸೇರಿದೆ.
13 ಸ್ವತಃ ನಮ್ಮಲ್ಲಿ ಕ್ರೈಸ್ತ ಪ್ರೌಢತೆಯ ಯಾವ ರುಜುವಾತನ್ನು ನಾವು ನೋಡಸಾಧ್ಯವಿದೆ? ಅಪೊಸ್ತಲ ಪೌಲನು ಬರೆದುದು: “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು [“ಗ್ರಹಣಶಕ್ತಿಗಳನ್ನು,” NW] ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” (ಇಬ್ರಿಯ 5:14) ನಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸುವ ಮೂಲಕ ನಾವು ಪ್ರೌಢತೆಯ ರುಜುವಾತನ್ನು ನೀಡುತ್ತೇವೆ. ಒಬ್ಬ ಕ್ರೀಡಾಪಟುವು ತನ್ನ ಕ್ರೀಡೆಯಲ್ಲಿ ಮೇಲ್ಮೆಹೊಂದುವ ಮುಂಚೆ ಅವನ ದೇಹದಲ್ಲಿರುವ ನಿರ್ದಿಷ್ಟ ಸ್ನಾಯುಗಳನ್ನು ಅನೇಕ ಬಾರಿ ಉಪಯೋಗಿಸುವ ಮೂಲಕ ತರಬೇತಿಯನ್ನು ಕೊಡಬೇಕಾದಂತೆಯೇ, ಬೈಬಲ್ ಮೂಲತತ್ತ್ವಗಳನ್ನು ಅನ್ವಯಿಸುವುದರಲ್ಲಿ ನಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸುವ ಮೂಲಕ ಅವುಗಳನ್ನು ತರಬೇತುಗೊಳಿಸಬೇಕಾಗಿದೆ.
14 ಆದರೂ, ನಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸುವುದಕ್ಕೆ ಮುಂಚೆ ನಾವು ಜ್ಞಾನವನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಶ್ರದ್ಧಾಪೂರ್ವಕವಾದ ವೈಯಕ್ತಿಕ ಅಧ್ಯಯನವು ಅತ್ಯಾವಶ್ಯಕವಾಗಿದೆ. ನಾವು ಕ್ರಮವಾಗಿ ವೈಯಕ್ತಿಕ ಅಧ್ಯಯನದಲ್ಲಿ, ಅದರಲ್ಲೂ ವಿಶೇಷವಾಗಿ ದೇವರ ವಾಕ್ಯದ ಅಗಾಧವಾದ ವಿಷಯಗಳ ಅಧ್ಯಯನದಲ್ಲಿ ಒಳಗೂಡುವಾಗ, ನಮ್ಮ ಗ್ರಹಣಶಕ್ತಿಗಳು ಉತ್ತಮಗೊಳ್ಳುತ್ತವೆ. ಗತ ವರ್ಷಗಳಲ್ಲಿ ಅನೇಕ ಅಗಾಧವಾದ ವಿಷಯಗಳು ಕಾವಲಿನಬುರುಜು ಪತ್ರಿಕೆಯಲ್ಲಿ ಚರ್ಚಿಸಲ್ಪಟ್ಟಿವೆ. ತುಂಬ ಅಗಾಧವಾದ ಸತ್ಯಗಳನ್ನು ಚರ್ಚಿಸುವಂಥ ಲೇಖನಗಳನ್ನು ನಾವು ಓದುವಾಗ ಹೇಗೆ ಪ್ರತಿಕ್ರಿಯಿಸುತ್ತೇವೆ? ಅವುಗಳಲ್ಲಿ ‘ತಿಳಿಯುವುದಕ್ಕೆ ಕಷ್ಟಕರವಾದ’ ವಿಷಯಗಳಿವೆ ಎಂಬ ಒಂದೇ ಕಾರಣಕ್ಕಾಗಿ ನಾವು ಅವುಗಳನ್ನು ಓದುವುದರಿಂದ ದೂರವಿರುತ್ತೇವೊ? (2 ಪೇತ್ರ 3:16) ಅದಕ್ಕೆ ಬದಲಾಗಿ, ಅವುಗಳಲ್ಲಿ ಏನು ಹೇಳಲಾಗಿದೆಯೋ ಅದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ನಾವು ಅತ್ಯಧಿಕ ಪ್ರಯತ್ನವನ್ನು ಮಾಡುತ್ತೇವೆ.—ಎಫೆಸ 3:18.
15 ಒಂದುವೇಳೆ ನಮಗೆ ವೈಯಕ್ತಿಕ ಅಧ್ಯಯನಮಾಡುವುದು ಕಷ್ಟಕರವಾಗಿರುವುದಾದರೆ ಆಗೇನು? ಅದಕ್ಕಾಗಿ ಬಯಕೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವುದು ಅತ್ಯಾವಶ್ಯಕವಾಗಿದೆ. * (1 ಪೇತ್ರ 2:2) ಪ್ರೌಢತೆಗೇರುವುದು, ಗಟ್ಟಿಯಾದ ಆಹಾರದಿಂದ ಅಂದರೆ ದೇವರ ವಾಕ್ಯದ ಹೆಚ್ಚು ಅಗಾಧವಾದ ಸತ್ಯಗಳಿಂದ ಪೋಷಣೆಯನ್ನು ಪಡೆದುಕೊಳ್ಳಲು ಕಲಿಯುವುದನ್ನು ಕೇಳಿಕೊಳ್ಳುತ್ತದೆ. ಆ ಪೋಷಣೆ ಇಲ್ಲದಿದ್ದರೆ ನಮ್ಮ ಗ್ರಹಣಶಕ್ತಿಗಳು ಮಿತವಾದವುಗಳು ಆಗಿರುವವು. ಆದರೂ, ಪ್ರೌಢತೆಯ ರುಜುವಾತನ್ನು ಕೊಡುವುದರಲ್ಲಿ ಗ್ರಹಣಶಕ್ತಿಗಳನ್ನು ನಮ್ಮದಾಗಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಶ್ರದ್ಧಾಪೂರ್ವಕವಾದ ವೈಯಕ್ತಿಕ ಅಧ್ಯಯನದ ಮೂಲಕ ನಾವು ಪಡೆದುಕೊಳ್ಳುವ ಜ್ಞಾನವನ್ನು ನಮ್ಮ ದೈನಂದಿನ ಜೀವನದಲ್ಲಿ ಅನ್ವಯಿಸಿಕೊಳ್ಳಬೇಕು.
16 ನಾವೇನು ಆಗಿದ್ದೇವೆಂಬುದರ ರುಜುವಾತು, ಸತ್ಯಕ್ಕಾಗಿರುವ ನಮ್ಮ ಗಣ್ಯತೆಯ ಅಭಿವ್ಯಕ್ತಿಗಳಲ್ಲಿ ಅಂದರೆ ನಮ್ಮ ನಂಬಿಕೆಯ ಕ್ರಿಯೆಗಳಲ್ಲಿಯೂ ಕಂಡುಬರುತ್ತದೆ. ಈ ರೀತಿಯಲ್ಲಿ ನಮ್ಮ ಮೌಲ್ಯಮಾಪನ ಮಾಡಿಕೊಳ್ಳುವುದನ್ನು ವಿವರಿಸಲಿಕ್ಕಾಗಿ ಪ್ರಬಲವಾದ ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾ ಶಿಷ್ಯ ಯಾಕೋಬನು ಹೇಳುವುದು: “ವಾಕ್ಯದ ಪ್ರಕಾರ ನಡೆಯುವವರಾಗಿರಿ; ಅದನ್ನು ಕೇಳುವವರು ಮಾತ್ರವೇ ಆಗಿದ್ದು ನಿಮ್ಮನ್ನು ನೀವೇ ಮೋಸಗೊಳಿಸಬೇಡಿರಿ. ಯಾವನಾದರೂ ವಾಕ್ಯವನ್ನು ಕೇಳುವವನಾದರೂ ಅದರ ಪ್ರಕಾರ ನಡೆಯದಿದ್ದರೆ ಅವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು; ಇವನು ತನ್ನನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತುಬಿಡುವನು. ಆದರೆ ಬಿಡುಗಡೆಯನ್ನುಂಟುಮಾಡುವ ಸರ್ವೋತ್ತಮ ಧರ್ಮಪ್ರಮಾಣವನ್ನು ಲಕ್ಷ್ಯಕೊಟ್ಟು ನೋಡಿ ಇನ್ನೂ ನೋಡುತ್ತಲೇ ಇರುವವನು ವಾಕ್ಯವನ್ನು ಕೇಳಿ ಮರೆತುಹೋಗುವವನಾಗಿರದೆ ಅದರ ಪ್ರಕಾರ ನಡೆಯುವವನಾಗಿದ್ದು ತನ್ನ ನಡತೆಯಿಂದ ಧನ್ಯನಾಗುವನು.”—ಯಾಕೋಬ 1:22-25.
17 ಯಾಕೋಬನು ಕಾರ್ಯತಃ ಹೀಗೆ ಹೇಳಿದನು: ‘ದೇವರ ವಾಕ್ಯವೆಂಬ ಕನ್ನಡಿಯಲ್ಲಿ ನಿಮ್ಮನ್ನು ನೋಡಿಕೊಳ್ಳಿರಿ, ಮತ್ತು ನಿಮ್ಮ ಮೌಲ್ಯಮಾಪನ ಮಾಡಿಕೊಳ್ಳಿರಿ. ಎಡೆಬಿಡದೆ ಹೀಗೆ ಮಾಡುತ್ತಾ ಇರಿ, ಮತ್ತು ದೇವರ ವಾಕ್ಯದಲ್ಲಿ ನೀವು ಏನನ್ನು ಕಂಡುಕೊಳ್ಳುತ್ತೀರೋ ಅದರ ಸಹಾಯದಿಂದ ನಿಮ್ಮನ್ನು ಪರಿಶೀಲಿಸಿಕೊಳ್ಳಿರಿ. ತದನಂತರ, ನೀವು ಏನನ್ನು ನೋಡಿದ್ದೀರೋ ಅದನ್ನು ಆ ಕೂಡಲೆ ಮರೆತುಬಿಡಬೇಡಿ. ಅಗತ್ಯವಿರುವ ಸರಿಪಡಿಸುವಿಕೆಗಳನ್ನು ಮಾಡಿರಿ.’ ಈ ಬುದ್ಧಿವಾದವನ್ನು ಅನುಸರಿಸುವುದು ಕೆಲವೊಮ್ಮೆ ಕಷ್ಟಕರವಾಗಿರಬಹುದು.
18 ರಾಜ್ಯ-ಸಾರುವಿಕೆಯ ಕೆಲಸದಲ್ಲಿ ಪಾಲ್ಗೊಳ್ಳುವ ಆವಶ್ಯಕತೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿರಿ. ಪೌಲನು ಬರೆದುದು: “ಹೃದಯದಿಂದ ನಂಬುವದರ ಮೂಲಕ ನೀತಿಯು ದೊರಕುತ್ತದೆ, ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.” (ರೋಮಾಪುರ 10:10) ರಕ್ಷಣೆಗಾಗಿ ಬಾಯಿಂದ ಅರಿಕೆಮಾಡುವುದು ಅನೇಕ ಹೊಂದಾಣಿಕೆಗಳನ್ನು ಅಗತ್ಯಪಡಿಸುತ್ತದೆ. ನಮ್ಮಲ್ಲಿ ಹೆಚ್ಚಿನವರಿಗೆ ಸಾರುವ ಕೆಲಸದಲ್ಲಿ ಭಾಗವಹಿಸುವುದು ಸುಲಭವಾದದ್ದಾಗಿರುವುದಿಲ್ಲ. ಸಾರುವ ಕೆಲಸದಲ್ಲಿ ಹುರುಪನ್ನು ತೋರಿಸುವುದು ಮತ್ತು ನಮ್ಮ ಜೀವನಗಳಲ್ಲಿ ಅದಕ್ಕೆ ಪ್ರಮುಖ ಸ್ಥಾನವನ್ನು ಕೊಡುವುದು, ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಮತ್ತು ತ್ಯಾಗಗಳನ್ನು ಕೇಳಿಕೊಳ್ಳುತ್ತದೆ. (ಮತ್ತಾಯ 6:33) ಆದರೆ ನಾವು ಈ ದೇವದತ್ತ ಕೆಲಸವನ್ನು ಮಾಡುವವರಾಗಿ ಪರಿಣಮಿಸಿದ ಬಳಿಕ ನಮಗೆ ತುಂಬ ಸಂತೋಷವಾಗುತ್ತದೆ, ಏಕೆಂದರೆ ಈ ಕೆಲಸವು ಯೆಹೋವನಿಗೆ ಸ್ತುತಿಯನ್ನು ತರುತ್ತದೆ. ಹಾಗಾದರೆ ನಾವು ಹುರುಪಿನ ರಾಜ್ಯ ಘೋಷಕರಾಗಿದ್ದೇವೋ?
19 ನಮ್ಮ ನಂಬಿಕೆಯ ಕ್ರಿಯೆಗಳು ಎಷ್ಟು ವ್ಯಾಪಕವಾಗಿರಬೇಕು? ಪೌಲನು ತಿಳಿಸಿದ್ದು: “ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ, ಮತ್ತು ಯಾವದನ್ನು ನನ್ನಲ್ಲಿ ಕೇಳಿ ಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ. ಹೀಗೆ ಮಾಡಿದರೆ ಶಾಂತಿದಾಯಕನಾದ ಫಿಲಿಪ್ಪಿ 4:9) ನಾವು ಏನಾಗಿದ್ದೇವೋ ಅದು, ನಾವು ಕಲಿತಿರುವ, ಅಂಗೀಕರಿಸಿರುವ, ಕೇಳಿಸಿಕೊಂಡಿರುವ ಮತ್ತು ನೋಡಿರುವ ವಿಷಯಗಳನ್ನು ಅಂದರೆ ಕ್ರೈಸ್ತ ಸಮರ್ಪಣೆ ಮತ್ತು ಶಿಷ್ಯತನದ ಪೂರ್ಣ ವ್ಯಾಪ್ತಿಯನ್ನು ಕಾರ್ಯರೂಪಕ್ಕೆ ಹಾಕುವುದರಿಂದ ಅಥವಾ ಅದನ್ನು ಮಾಡುವುದರಿಂದ ರುಜುಪಡಿಸಲ್ಪಡುತ್ತದೆ. “ಇದೇ ಮಾರ್ಗ, ಇದರಲ್ಲೇ ನಡೆಯಿರಿ” ಎಂದು ಯೆಹೋವನು ಪ್ರವಾದಿಯಾದ ಯೆಶಾಯನ ಮೂಲಕ ಉಪದೇಶಿಸುತ್ತಾನೆ.—ಯೆಶಾಯ 30:21.
ದೇವರು ನಿಮ್ಮೊಂದಿಗಿರುವನು.” (20 ದೇವರ ವಾಕ್ಯದ ಶ್ರದ್ಧಾಭರಿತ ವಿದ್ಯಾರ್ಥಿಗಳಾಗಿರುವ, ಸುವಾರ್ತೆಯ ಹುರುಪಿನ ಪ್ರಚಾರಕರಾಗಿರುವ, ತಮ್ಮ ಸಮಗ್ರತೆಯಲ್ಲಿ ಕುಂದಿಲ್ಲದಿರುವ ಮತ್ತು ರಾಜ್ಯದ ನಿಷ್ಠಾವಂತ ಬೆಂಬಲಿಗರಾಗಿರುವ ಸ್ತ್ರೀಪುರುಷರು ಸಭೆಗೆ ವಿಶೇಷ ಆಶೀರ್ವಾದವಾಗಿದ್ದಾರೆ. ಅವರು ಯಾವ ಸಭೆಯೊಂದಿಗೆ ಸಹವಾಸಮಾಡುತ್ತಾರೋ ಆ ಸಭೆಗೆ ಅವರ ಉಪಸ್ಥಿತಿಯು ಹೆಚ್ಚು ಸ್ಥಿರತೆಯನ್ನು ಉಂಟುಮಾಡುತ್ತದೆ. ಅಷ್ಟುಮಾತ್ರವಲ್ಲ ಅವರು ಸಭೆಗೆ ತುಂಬ ಸಹಾಯಕರವಾಗಿ ಕಂಡುಬರುತ್ತಾರೆ, ಏಕೆಂದರೆ ಪರಾಮರಿಕೆಯ ಅಗತ್ಯವಿರುವ ಅನೇಕ ಹೊಸಬರು ಸಭೆಯಲ್ಲಿದ್ದಾರೆ. ‘ನಾವು ಕ್ರಿಸ್ತನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳುವಂತೆ, ಮತ್ತು ನಾವು ಏನಾಗಿದ್ದೇವೆ ಎಂಬುದನ್ನು ರುಜುಪಡಿಸುತ್ತಾ ಇರುವಂತೆ’ ಪೌಲನು ನೀಡಿದ ಬುದ್ಧಿವಾದವನ್ನು ಹೃದಯಕ್ಕೆ ತೆಗೆದುಕೊಳ್ಳುವಾಗ, ನಾವು ಸಹ ಇತರರ ಮೇಲೆ ಒಳ್ಳೇ ಪ್ರಭಾವ ಬೀರುವವರಾಗಿರುತ್ತೇವೆ.
ದೇವರ ಚಿತ್ತವನ್ನು ಮಾಡುವುದರಲ್ಲಿ ಸಂತೋಷಪಡಿರಿ
21 ಪುರಾತನ ಇಸ್ರಾಯೇಲ್‌ನ ಅರಸನಾಗಿದ್ದ ದಾವೀದನು ಹಾಡಿದ್ದು: “ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” (ಕೀರ್ತನೆ 40:8) ದೇವರ ಚಿತ್ತವನ್ನು ಮಾಡುವುದು ದಾವೀದನಿಗೆ ಸಂತೋಷಕರ ವಿಷಯವಾಗಿತ್ತು. ಏಕೆ? ಏಕೆಂದರೆ ಯೆಹೋವನ ಧರ್ಮೋಪದೇಶವು ಅವನ ಅಂತರಂಗದಲ್ಲಿ ಅಂದರೆ ಹೃದಯದಲ್ಲಿತ್ತು. ಯಾವ ಮಾರ್ಗದಲ್ಲಿ ನಡೆಯಬೇಕು ಎಂಬ ವಿಷಯದಲ್ಲಿ ದಾವೀದನು ಅನಿಶ್ಚಿತನಾಗಿರಲಿಲ್ಲ.
22 ದೇವರ ಧರ್ಮೋಪದೇಶವು ನಮ್ಮ ಅಂತರಂಗದಲ್ಲಿರುವಾಗ, ಯಾವ ಮಾರ್ಗದಲ್ಲಿ ನಡೆಯಬೇಕು ಎಂಬ ವಿಷಯದಲ್ಲಿ ನಾವು ಅನಿಶ್ಚಿತರಾಗಿರುವುದಿಲ್ಲ. ದೇವರ ಚಿತ್ತವನ್ನು ಮಾಡುವುದರಲ್ಲಿ ನಾವು ಸಂತೋಷಪಡುತ್ತೇವೆ. ಹೀಗಿರುವುದರಿಂದ, ನಾವೆಲ್ಲರೂ ಹೃದಯದಾಳದಿಂದ ಯೆಹೋವನ ಸೇವೆಮಾಡಲು ‘ಹೆಣಗಾಡೋಣ.’—ಲೂಕ 13:24.
[ಪಾದಟಿಪ್ಪಣಿಗಳು]
^ ಪ್ಯಾರ. 11 ಯೆಹೋವನ ಸಾಕ್ಷಿಗಳು ಪ್ರಕಟಿಸಿದ್ದು.
^ ಪ್ಯಾರ. 19 ಹೇಗೆ ಅಧ್ಯಯನಮಾಡಬೇಕು ಎಂಬುದರ ಕುರಿತಾದ ಸಹಾಯಕರ ಸಲಹೆಗಳಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಎಂಬ ಪುಸ್ತಕದ 27-32ನೇ ಪುಟಗಳನ್ನು ನೋಡಿರಿ.
ನಿಮಗೆ ನೆನಪಿದೆಯೆ?
• ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಹೇಗೆ ಪರೀಕ್ಷಿಸಿಕೊಳ್ಳಸಾಧ್ಯವಿದೆ?
• ನಾವು ಏನಾಗಿದ್ದೇವೆ ಎಂಬುದನ್ನು ರುಜುಪಡಿಸುವುದರಲ್ಲಿ ಏನು ಒಳಗೂಡಿದೆ?
• ಕ್ರೈಸ್ತ ಪ್ರೌಢತೆಯ ಯಾವ ರುಜುವಾತನ್ನು ನಾವು ಕೊಡಸಾಧ್ಯವಿದೆ?
• ನಮ್ಮ ನಂಬಿಕೆಯ ಕ್ರಿಯೆಗಳು ನಾವೇನಾಗಿದ್ದೇವೋ ಅದರ ಮೌಲ್ಯಮಾಪನ ಮಾಡುವುದಕ್ಕೆ ನಮಗೆ ಹೇಗೆ ಸಹಾಯಕರವಾಗಿವೆ?
[ಅಧ್ಯಯನ ಪ್ರಶ್ನೆಗಳು]
1, 2. (ಎ) ನಮ್ಮ ನಂಬಿಕೆಗಳ ಕುರಿತಾದ ಅನಿಶ್ಚಿತತೆಯು ನಮ್ಮ ಮೇಲೆ ಹೇಗೆ ಪರಿಣಾಮ ಬೀರಬಲ್ಲದು? (ಬಿ) ಪ್ರಥಮ ಶತಮಾನದ ಕೊರಿಂಥದಲ್ಲಿದ್ದ ಯಾವ ಸನ್ನಿವೇಶವು, ಕೆಲವರು ಯಾವ ಮಾರ್ಗದಲ್ಲಿ ಹೋಗಬೇಕು ಎಂಬ ವಿಷಯದಲ್ಲಿ ಅನಿಶ್ಚಿತರಾಗುವಂತೆ ಮಾಡಿದ್ದಿರಬಹುದು?
3, 4. ಕೊರಿಂಥದವರಿಗೆ ಪೌಲನು ನೀಡಿದ ಸಲಹೆಯು ನಮಗೆ ಆಸಕ್ತಿದಾಯಕವಾಗಿರಬೇಕು ಏಕೆ?
5, 6. ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಲು ನಮಗೆ ಯಾವ ಮಾನದಂಡವಿದೆ, ಮತ್ತು ಅದೇ ಆದರ್ಶಪ್ರಾಯವಾದ ಮಾನದಂಡವಾಗಿದೆ ಏಕೆ?
7. ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳುವ ಪ್ರಮುಖ ವಿಧವು ಯಾವುದಾಗಿದೆ?
8. ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಪ್ರಕಾಶನಗಳು, ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳಲು ಹೇಗೆ ಸಹಾಯಮಾಡಬಲ್ಲವು?
9, 10. ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಾ ಇರಲಿಕ್ಕಾಗಿ ಯೆಹೋವನು ಯಾವ ಒದಗಿಸುವಿಕೆಗಳನ್ನು ಮಾಡಿದ್ದಾನೆ?
11. ನಾವು ನಂಬಿಕೆಯಲ್ಲಿ ಇದ್ದೇವೋ ಇಲ್ಲವೋ ಎಂಬುದನ್ನು ಪರೀಕ್ಷಿಸಿಕೊಳ್ಳುವುದರಲ್ಲಿ ಏನು ಒಳಗೂಡಿದೆ?
12. ನಾವು ಏನಾಗಿದ್ದೇವೆ ಎಂಬುದನ್ನು ರುಜುಪಡಿಸುವುದರಲ್ಲಿ ಏನು ಒಳಗೂಡಿದೆ?
13. ಇಬ್ರಿಯ 5:14ಕಕ್ಕನುಸಾರ ನಮ್ಮ ಪ್ರೌಢತೆಗೆ ಯಾವುದು ರುಜುವಾತಾಗಿದೆ?
14, 15. ದೇವರ ವಾಕ್ಯದ ಹೆಚ್ಚು ಅಗಾಧವಾದ ವಿಷಯಗಳನ್ನು ಅಧ್ಯಯನಮಾಡಲಿಕ್ಕಾಗಿ ನಾವು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಬೇಕು ಏಕೆ?
16, 17. ‘ವಾಕ್ಯದ ಪ್ರಕಾರ ನಡೆಯುವವರಾಗಿರುವುದರ’ ಕುರಿತು ಶಿಷ್ಯ ಯಾಕೋಬನು ಯಾವ ಬುದ್ಧಿವಾದವನ್ನು ನೀಡಿದನು?
18. ಯಾಕೋಬನ ಸಲಹೆಯನ್ನು ಅನುಸರಿಸುವುದು ಕಷ್ಟಕರವಾಗಿದೆ ಏಕೆ?
19. ನಮ್ಮ ನಂಬಿಕೆಯ ಕ್ರಿಯೆಗಳಲ್ಲಿ ಏನು ಒಳಗೂಡಿರಬೇಕು?
20. ಯಾವ ರೀತಿಯ ವ್ಯಕ್ತಿಗಳು ಸಭೆಗೆ ವಿಶೇಷ ಆಶೀರ್ವಾದವಾಗಿದ್ದಾರೆ?
21, 22. ದೇವರ ಚಿತ್ತವನ್ನು ಮಾಡುವುದರಲ್ಲಿ ನಾವು ಹೇಗೆ ಸಂತೋಷಪಡಸಾಧ್ಯವಿದೆ?
[ಪುಟ 23ರಲ್ಲಿರುವ ಚಿತ್ರ]
ನೀವು ನಂಬಿಕೆಯಲ್ಲಿ ಇದ್ದೀರೋ ಇಲ್ಲವೋ ಎಂಬುದನ್ನು ಪರೀಕ್ಷಿಸುವ ಅತಿ ಪ್ರಾಮುಖ್ಯ ವಿಧವು ನಿಮಗೆ ತಿಳಿದಿದೆಯೊ?
[ಪುಟ 24ರಲ್ಲಿರುವ ಚಿತ್ರ]
ನಮ್ಮ ಗ್ರಹಣಶಕ್ತಿಗಳನ್ನು ಉಪಯೋಗಿಸಿಕೊಳ್ಳುವ ಮೂಲಕ ನಾವು ನಮ್ಮ ಕ್ರೈಸ್ತ ಪ್ರೌಢತೆಯನ್ನು ರುಜುಪಡಿಸುತ್ತೇವೆ
[ಪುಟ 25ರಲ್ಲಿರುವ ಚಿತ್ರಗಳು]
ನಾವು ‘ವಾಕ್ಯವನ್ನು ಕೇಳಿ ಮರೆತುಹೋಗುವವರಾಗಿರದೆ, ಅದರ ಪ್ರಕಾರ ನಡೆಯುವವರೂ’ ಆಗಿರುವ ಮೂಲಕ ನಾವು ಏನಾಗಿದ್ದೇವೆ ಎಂಬುದನ್ನು ರುಜುಪಡಿಸುತ್ತೇವೆ