ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಯೆಹೋವನ ಕತ್ತಿ, ಗಿದ್ಯೋನನ ಕತ್ತಿ”

“ಯೆಹೋವನ ಕತ್ತಿ, ಗಿದ್ಯೋನನ ಕತ್ತಿ”

“ಯೆಹೋವನ ಕತ್ತಿ, ಗಿದ್ಯೋನನ ಕತ್ತಿ”

ಅವರು ಮಿಡತೆಗಳಂತೆ ಅಸಂಖ್ಯಾತರಾಗಿದ್ದಾರೆ, ಫಲವತ್ತಾದ ಪ್ರದೇಶಗಳನ್ನು ಬರಡುಭೂಮಿಯಾಗಿ ಮಾಡುತ್ತಿದ್ದಾರೆ. ಇದು ಇಸ್ರಾಯೇಲಿನಲ್ಲಿ ನ್ಯಾಯಸ್ಥಾಪಕರು ಆಳುತ್ತಿದ್ದ ಕಾಲಾವಧಿಯಲ್ಲಿ ನಡೆಯುತ್ತಿದೆ ಮತ್ತು ಇಸ್ರಾಯೇಲ್ಯರು ಹತಾಶರಾಗಿದ್ದಾರೆ. ಏಳು ವರ್ಷಗಳಿಂದ, ಬಿತ್ತಲ್ಪಟ್ಟ ಬೀಜವು ಮೊಳಕೆಯೊಡೆಯಲು ಆರಂಭಿಸಿದ ಕೂಡಲೆ, ಒಂಟೆಸವಾರಿಮಾಡಿಕೊಂಡು ಬರುತ್ತಿದ್ದ ಮಿದ್ಯಾನ್ಯರು, ಅಮಾಲೇಕ್ಯರು ಮತ್ತು ಮೂಡಣ ದೇಶದವರ ಕೊಳ್ಳೆಹೊಡೆಯುವ ಗುಂಪುಗಳು ಈ ಪ್ರದೇಶದ ಮೇಲೆ ದಂಡಿಳಿಯುತ್ತಿವೆ. ಈ ಕೊಳ್ಳೆಹೊಡೆಯುವವರ ಮಂದೆಗಳು ಮೇವಿನ ಹುಡುಕಾಟದಲ್ಲಿ ಈ ಪ್ರದೇಶದಲ್ಲೆಲ್ಲ ಚದರಿವೆ ಮತ್ತು ಸಸ್ಯಸಂಕುಲವನ್ನು ಸಂಪೂರ್ಣವಾಗಿ ಕಬಳಿಸುತ್ತಿವೆ. ಆದರೆ ಇಸ್ರಾಯೇಲ್ಯರ ಬಳಿ ಕತ್ತೆಗಳಾಗಲಿ ದನಗಳಾಗಲಿ ಕುರಿಗಳಾಗಲಿ ಇಲ್ಲ. ಮಿದ್ಯಾನ್ಯರ ಆಳ್ವಿಕೆಯ ಭೀಕರತೆಯು ಎಷ್ಟು ಘೋರವಾಗಿದೆಯೆಂದರೆ, ಬಡತನದಿಂದ ಬಸವಳಿದಿರುವ ಇಸ್ರಾಯೇಲ್ಯರು ಪರ್ವತಗಳಲ್ಲಿರುವ ಭೂಗತ ಶೇಖರಣಾ ಸ್ಥಳಗಳನ್ನು, ಅಂದರೆ ಗುಹೆಗಳನ್ನು ಮತ್ತು ದುರ್ಗಗಳಲ್ಲಿರುವ ಕಂದರಗಳನ್ನು ಉಪಯೋಗಿಸದೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ.

ಇಂಥ ಅವಸ್ಥೆ ಏಕೆ? ಧರ್ಮಭ್ರಷ್ಟ ಇಸ್ರಾಯೇಲ್‌ ಜನಾಂಗವು ಸುಳ್ಳು ದೇವತೆಗಳನ್ನು ಆರಾಧಿಸುತ್ತಿದೆ. ಆದುದರಿಂದ ಯೆಹೋವನು ಅವರನ್ನು ವಿರೋಧಿಗಳ ಕೈಗೆ ಒಪ್ಪಿಸಿದ್ದಾನೆ. ಇಸ್ರಾಯೇಲ್ಯರು ಇದನ್ನೆಲ್ಲ ತಾಳಿಕೊಳ್ಳಲು ಅಸಮರ್ಥರಾದಾಗ, ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ. ಆತನು ಅವರಿಗೆ ಕಿವಿಗೊಡುವನೊ? ಇಸ್ರಾಯೇಲ್ಯರ ಅನುಭವವು ನಮಗೆ ಯಾವ ಪಾಠವನ್ನು ಕಲಿಸಬಲ್ಲದು?​—⁠ನ್ಯಾಯಸ್ಥಾಪಕರು 6:1-6.

ಜಾಗರೂಕ ರೈತನೊ ಅಥವಾ ‘ಬಲಿಷ್ಠನಾದ ಪರಾಕ್ರಮಶಾಲಿಯೊ?’

ತೂರುವ ವಿಧಾನದಿಂದ ಗಾಳಿಯು ಹೊಟ್ಟನ್ನು ಧಾನ್ಯದಿಂದ ಬೇರ್ಪಡಿಸಲು ಸಾಧ್ಯವಾಗುವಂತೆ, ಇಸ್ರಾಯೇಲಿನ ರೈತರು ಸಾಮಾನ್ಯವಾಗಿ ಬಯಲುಪ್ರದೇಶದಲ್ಲಿ ತುಂಬ ಗಾಳಿ ಬೀಸುವಂಥ ಸ್ಥಳದಲ್ಲಿ ಒಂದು ಎತ್ತು ಮತ್ತು ಜಾರುಬಂಡಿಯ ಸಹಾಯದಿಂದ ಗೋದಿಯನ್ನು ಬಡಿಯುತ್ತಿದ್ದರು. ಆದರೆ ಈ ಪ್ರದೇಶವನ್ನು ಸೂರೆಮಾಡಬೇಕೆಂಬ ಛಲತೊಟ್ಟಿರುವ ಕೊಳ್ಳೆಹೊಡೆಯುವವರ ಬೆದರಿಕೆಯಿಂದಾಗಿ, ಈ ರೀತಿಯಲ್ಲಿ ತೂರುವ ಕೆಲಸವನ್ನು ಮಾಡುವುದು ಕೂಡಲೇ ಗಮನವನ್ನು ಸೆಳೆಯುವಂಥದ್ದಾಗಿರುವುದು. ಆದುದರಿಂದ ಮಿದ್ಯಾನ್ಯರಿಗೆ ಗೊತ್ತಾಗದ ಹಾಗೆ ಗಿದ್ಯೋನನು ದ್ರಾಕ್ಷೆಯ ಆಲೆಯ ಮರೆಯಲ್ಲಿ ಗೋದಿಯನ್ನು ಬಡಿಯುತ್ತಿದ್ದನು. ಈ ದ್ರಾಕ್ಷೆಯ ಆಲೆಯು ಬಹುಶಃ ತುಂಬ ದೊಡ್ಡದಾಗಿದ್ದ, ಬಂಡೆಯಲ್ಲಿ ಕೊರೆಯಲ್ಪಟ್ಟಿದ್ದ ಮುಚ್ಚಲ್ಪಟ್ಟಿರುವ ಒಂದು ತೊಟ್ಟಿಯಾಗಿತ್ತು. (ನ್ಯಾಯಸ್ಥಾಪಕರು 6:11) ಅಲ್ಲಿ ಗೋದಿಯನ್ನು ಚಿಕ್ಕ ಪ್ರಮಾಣದಲ್ಲಿ ಮಾತ್ರ ಕೋಲಿನ ಸಹಾಯದಿಂದ ಬಡಿಯಸಾಧ್ಯವಿದ್ದಿರುವುದು ಸಂಭವನೀಯ. ಇಂಥ ಸನ್ನಿವೇಶದ ಕೆಳಗೆ ಗಿದ್ಯೋನನು ಏನು ಲಭ್ಯವಿದೆಯೋ ಅದನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆ.

ಯೆಹೋವನ ದೂತನು ಗಿದ್ಯೋನನಿಗೆ ಪ್ರತ್ಯಕ್ಷನಾಗಿ, “ಬಲಿಷ್ಠನಾದ ಪರಾಕ್ರಮಶಾಲಿಯೇ, ಯೆಹೋವನು ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದಾಗ ಅವನಿಗೆಷ್ಟು ಆಶ್ಚರ್ಯವಾಗಿದ್ದಿರಬೇಕೆಂದು ಊಹಿಸಿಕೊಳ್ಳಿರಿ! (ನ್ಯಾಯಸ್ಥಾಪಕರು 6:​12, NIBV) ದ್ರಾಕ್ಷೆಯ ಆಲೆಯಲ್ಲಿ ಗುಪ್ತವಾಗಿ ಗೋದಿಯನ್ನು ಬಡಿಯುತ್ತಿದ್ದ ಗಿದ್ಯೋನನಿಗೆ ಖಂಡಿತವಾಗಿಯೂ ತಾನು ಬಲಿಷ್ಠನೆಂಬ ಅನಿಸಿಕೆ ಇಲ್ಲದಿರಬಹುದು. ಆದರೂ, ಆ ಮಾತುಗಳು, ಗಿದ್ಯೋನನು ಇಸ್ರಾಯೇಲ್‌ನಲ್ಲಿ ಒಬ್ಬ ಬಲಿಷ್ಠ ನಾಯಕನಾಗಸಾಧ್ಯವಿದೆ ಎಂದು ದೇವರಿಗಿದ್ದ ಭರವಸೆಯನ್ನು ವ್ಯಕ್ತಪಡಿಸಿದವು. ಹಾಗಿದ್ದರೂ, ಸ್ವತಃ ಗಿದ್ಯೋನನಿಗೇ ಈ ವಿಷಯದಲ್ಲಿ ಮನವರಿಕೆ ಆಗಬೇಕಿತ್ತು.

“ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು” ಎಂದು ಯೆಹೋವನು ಗಿದ್ಯೋನನಿಗೆ ನೇಮಕ ನೀಡಿದಾಗ, ಅವನು ವಿನೀತಭಾವದಿಂದ ಹೀಗೆ ಹೇಳುತ್ತಾನೆ: “ಸ್ವಾಮೀ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು.” ತದನಂತರ ಜಾಗರೂಕ ಮನೋಭಾವದವನಾದ ಗಿದ್ಯೋನನು, ಮಿದ್ಯಾನ್ಯರನ್ನು ಸಂಹರಿಸುವುದರಲ್ಲಿ ಯೆಹೋವನು ತನ್ನ ಸಂಗಡ ಇರುವನೋ ಇಲ್ಲವೊ ಎಂಬುದಕ್ಕೆ ಒಂದು ಗುರುತನ್ನು ಒದಗಿಸುವಂತೆ ದೇವರನ್ನು ಕೇಳಿಕೊಳ್ಳುತ್ತಾನೆ. ಮತ್ತು ಪುನರಾಶ್ವಾಸನೆಗಾಗಿರುವ ಗಿದ್ಯೋನನ ಈ ನ್ಯಾಯಸಮ್ಮತವಾದ ಆವಶ್ಯಕತೆಯನ್ನು ಪೂರೈಸಲು ಯೆಹೋವನು ಒಪ್ಪಿಕೊಳ್ಳುತ್ತಾನೆ. ಆಗ ಗಿದ್ಯೋನನು ತನ್ನ ದೇವದೂತ ಸಂದರ್ಶಕನಿಗೆ ಆಹಾರದ ಕಾಣಿಕೆಯನ್ನು ಅರ್ಪಿಸುತ್ತಾನೆ, ಮತ್ತು ಒಂದು ಬಂಡೆಯಿಂದ ಬೆಂಕಿಯೆದ್ದು ಆ ಕಾಣಿಕೆಯನ್ನು ದಹಿಸಿಬಿಡುತ್ತದೆ. ಯೆಹೋವನು ಗಿದ್ಯೋನನ ಹೆದರಿಕೆಯನ್ನು ಶಾಂತಗೊಳಿಸಿದ ಬಳಿಕ, ಗಿದ್ಯೋನನು ಆ ಸ್ಥಳದಲ್ಲಿ ಒಂದು ಯಜ್ಞವೇದಿಯನ್ನು ಕಟ್ಟುತ್ತಾನೆ.​—⁠ನ್ಯಾಯಸ್ಥಾಪಕರು 6:12-24.

‘ಬಾಳನು ತಾನೇ ವ್ಯಾಜ್ಯವಾಡಲಿ’

ಇಸ್ರಾಯೇಲ್ಯರ ಅತಿ ದೊಡ್ಡ ಸಮಸ್ಯೆಯು ಮಿದ್ಯಾನ್ಯರ ದಬ್ಬಾಳಿಕೆಯಾಗಿರಲಿಲ್ಲ. ಬದಲಿಗೆ ಬಾಳನ ಆರಾಧನೆಗೆ ಬಲಿಬಿದ್ದಿರುವುದೇ ಆಗಿತ್ತು. ಯೆಹೋವನು “ಈರ್ಷ್ಯೆಯುಳ್ಳ ದೇವರು” (NW) ಆಗಿದ್ದಾನೆ ಮತ್ತು ಆತನನ್ನು ಸೇವಿಸುವ ಸಮಯದಲ್ಲೇ ಇತರ ದೇವತೆಗಳನ್ನೂ ಆರಾಧಿಸಿ ಯಾರೊಬ್ಬರೂ ಆತನ ಅಂಗೀಕಾರವನ್ನು ಪಡೆಯಲಾರರು. (ವಿಮೋಚನಕಾಂಡ 34:14) ಆದುದರಿಂದ, ಗಿದ್ಯೋನನ ತಂದೆಯು ಬಾಳನಿಗೋಸ್ಕರ ಕಟ್ಟಿದ್ದ ಯಜ್ಞವೇದಿಯನ್ನು ಧ್ವಂಸಮಾಡುವಂತೆ ಮತ್ತು ವಿಗ್ರಹಸ್ತಂಭವನ್ನು ಕೆಡವಿಬಿಡುವಂತೆ ಯೆಹೋವನು ಅವನಿಗೆ ಅಪ್ಪಣೆ ನೀಡುತ್ತಾನೆ. ಒಂದುವೇಳೆ ಅವನು ಹಗಲುಹೊತ್ತಿನಲ್ಲಿ ಹೀಗೆ ಮಾಡುವಲ್ಲಿ ತನ್ನ ತಂದೆ ಹಾಗೂ ಇತರರು ಹೇಗೆ ಪ್ರತಿಕ್ರಿಯಿಸುವರೋ ಎಂಬ ಭಯದಿಂದ ಗಿದ್ಯೋನನು ಹತ್ತು ಮಂದಿ ಸೇವಕರ ಸಹಾಯದಿಂದ ರಾತ್ರಿಯಲ್ಲಿ ಈ ಕೆಲಸವನ್ನು ಮಾಡುತ್ತಾನೆ.

ಗಿದ್ಯೋನನ ಜಾಗರೂಕ ಮನೋಭಾವವು ಸಮರ್ಥನೀಯವಾದದ್ದಾಗಿದೆ, ಏಕೆಂದರೆ ‘ತಮ್ಮ ದೇವರಿಗೆ ಸೇರಿದ ವಸ್ತುಗಳನ್ನು ಹಾಳುಮಾಡಿದ್ದು’ ಅವನೇ ಎಂಬುದು ತಿಳಿದುಬಂದಾಗ ಬಾಳನ ಸ್ಥಳಿಕ ಆರಾಧಕರು ಅವನನ್ನು ಕೊಲ್ಲುವಂತೆ ತಗಾದೆಮಾಡುತ್ತಾರೆ. ಆದರೆ ಗಿದ್ಯೋನನ ತಂದೆಯಾದ ಯೋವಾಷನು, ಬಾಳನು ದೇವನಾಗಿದ್ದರೆ ತನ್ನನ್ನು ಸಮರ್ಥಿಸಿಕೊಳ್ಳಲು ತಾನೇ ವ್ಯಾಜ್ಯವಾಡಲು ಶಕ್ತನಾಗಿರಬೇಕು ಎಂದು ಹೇಳುತ್ತಾ ಆಕ್ಷೇಪಿಸಲಾಗದಂಥ ಮಾತುಗಳಿಂದ ಜನರೊಂದಿಗೆ ತರ್ಕಿಸುತ್ತಾನೆ. ಆಗ ಯೋವಾಷನು ಯೋಗ್ಯವಾಗಿಯೇ ತನ್ನ ಮಗನನ್ನು ಯೆರುಬ್ಬಾಳನೆಂದು ಕರೆಯುತ್ತಾನೆ; ಅದರರ್ಥ “ಬಾಳನು ವ್ಯಾಜ್ಯವಾಡಲಿ” ಎಂದಾಗಿದೆ.​—⁠ನ್ಯಾಯಸ್ಥಾಪಕರು 6:​25-32 BSI Reference Edition ಪಾದಟಿಪ್ಪಣಿ.

ಸತ್ಯ ಆರಾಧನೆಗಾಗಿ ಧೈರ್ಯದಿಂದ ನಿಲುವನ್ನು ತೆಗೆದುಕೊಳ್ಳುವಂಥ ತನ್ನ ಸೇವಕರನ್ನು ದೇವರು ಯಾವಾಗಲೂ ಆಶೀರ್ವದಿಸುತ್ತಾನೆ. ಮಿದ್ಯಾನ್ಯರು ಮತ್ತು ಅವರ ಮಿತ್ರಜನಾಂಗಗಳು ಪುನಃ ಇಸ್ರಾಯೇಲ್ಯರ ಪ್ರದೇಶದ ಮೇಲೆ ಆಕ್ರಮಣವೆಸಗಿದಾಗ, ‘ಯೆಹೋವನ ಆತ್ಮವು ಗಿದ್ಯೋನನ ಮೇಲೆ ಬರುತ್ತದೆ.’ (ನ್ಯಾಯಸ್ಥಾಪಕರು 6:34) ದೇವರ ಆತ್ಮ ಅಥವಾ ಕ್ರಿಯಾಶೀಲ ಶಕ್ತಿಯ ಪ್ರಭಾವದ ಕೆಳಗೆ ಗಿದ್ಯೋನನು, ಮನಸ್ಸೆ, ಆಶೇರ್‌, ಜೆಬುಲೂನ್‌ ಮತ್ತು ನಫ್ತಾಲಿ ಕುಲಗಳವರಿಂದ ಸೈನ್ಯವನ್ನು ಒಟ್ಟುಗೂಡಿಸಿಕೊಳ್ಳುತ್ತಾನೆ.​—⁠ನ್ಯಾಯಸ್ಥಾಪಕರು 6:⁠35.

ಕ್ರಿಯೆಗೈಯಲಿಕ್ಕಾಗಿ ಸಿದ್ಧತೆಯನ್ನು ಮಾಡುವುದು

ಈಗ ಗಿದ್ಯೋನನ ಬಳಿ 32,000 ಮಂದಿಯಿರುವ ಒಂದು ಸೈನ್ಯವಿದೆಯಾದರೂ, ಅವನು ದೇವರ ಬಳಿ ಒಂದು ಸೂಚನೆಯನ್ನು ಕೇಳುತ್ತಾನೆ. ಕಣದಲ್ಲಿ ಇಡಲ್ಪಟ್ಟಿರುವ ಕುರಿಯ ತುಪ್ಪಟವು ಮಾತ್ರ ಮಂಜಿನಿಂದ ತೋಯ್ದಿದ್ದು ನೆಲವೆಲ್ಲಾ ಒಣಗಿದ್ದರೆ, ಇದು ದೇವರು ಅವನ ಮೂಲಕ ಇಸ್ರಾಯೇಲ್ಯರನ್ನು ರಕ್ಷಿಸುವನು ಎಂಬುದನ್ನು ಸೂಚಿಸುವುದು. ಯೆಹೋವನು ಈ ಅದ್ಭುತಕಾರ್ಯವನ್ನು ಮಾಡುತ್ತಾನೆ, ಮತ್ತು ಗಿದ್ಯೋನನು ಅದೇ ಸೂಚನೆಯು ವ್ಯತಿರಿಕ್ತ ಕ್ರಮದಲ್ಲಿ ಅಂದರೆ ತುಪ್ಪಟವು ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿಬಿದ್ದಿರುವಂತೆ ಕೇಳಿಕೊಳ್ಳುತ್ತಾನೆ ಮತ್ತು ಇದು ಸಹ ದೃಢೀಕರಿಸಲ್ಪಡುತ್ತದೆ. ಗಿದ್ಯೋನನು ಅಗತ್ಯಕ್ಕಿಂತ ಹೆಚ್ಚೇ ಜಾಗರೂಕನಾಗಿದ್ದನೋ? ಇಲ್ಲ ಎಂಬುದು ಸುವ್ಯಕ್ತ, ಏಕೆಂದರೆ ಪುನರಾಶ್ವಾಸನೆಗಾಗಿರುವ ಅವನ ವಿನಂತಿಯನ್ನು ಯೆಹೋವನು ಪೂರೈಸುತ್ತಾನೆ. (ನ್ಯಾಯಸ್ಥಾಪಕರು 6:36-40) ನಾವು ಇಂದು ಇಂಥ ಅದ್ಭುತಗಳನ್ನು ನಿರೀಕ್ಷಿಸುವುದಿಲ್ಲ. ಆದರೂ, ನಾವು ಯೆಹೋವನ ಮಾರ್ಗದರ್ಶನ ಹಾಗೂ ಪುನರಾಶ್ವಾಸನೆಯನ್ನು ಆತನ ವಾಕ್ಯವಾದ ಬೈಬಲಿನಿಂದ ಪಡೆದುಕೊಳ್ಳಸಾಧ್ಯವಿದೆ.

ಈಗ ದೇವರು ಗಿದ್ಯೋನನ ಸೈನ್ಯವು ತೀರ ದೊಡ್ಡದಿದೆ ಎಂದು ಹೇಳುತ್ತಾನೆ. ಇಷ್ಟು ದೊಡ್ಡ ಸೇನಾಬಲದಿಂದ ಇಸ್ರಾಯೇಲ್ಯರು ವೈರಿಗಳನ್ನು ಜಯಿಸುವಲ್ಲಿ, ಸ್ವಹಸ್ತದಿಂದಲೇ ತಮಗೆ ರಕ್ಷಣೆಯುಂಟಾಗಿದೆ ಎಂದು ಅವರು ಜಂಬಕೊಚ್ಚಿಕೊಳ್ಳುವ ಸಾಧ್ಯತೆಯಿತ್ತು. ಆದರೆ ಬರಲಿರುವ ಜಯಕ್ಕಾಗಿ ಯೆಹೋವನಿಗೇ ಕೀರ್ತಿಯು ಸಲ್ಲತಕ್ಕದ್ದು. ಹಾಗಾದರೆ ಏನು ಮಾಡಬೇಕು? ಅಂಜಿಕೊಳ್ಳುವವರು ಮನೆಗೆ ಹೋಗಲಿ ಎಂದು ಪ್ರಕಟಿಸುವ ಮೂಲಕ ಗಿದ್ಯೋನನು ಮೋಶೆಯ ಧರ್ಮಶಾಸ್ತ್ರದ ಒಂದು ಒದಗಿಸುವಿಕೆಯನ್ನು ಅನ್ವಯಿಸಬೇಕಾಗಿತ್ತು. ಆಗ, ಅವನ ಜನರಲ್ಲಿ ಸುಮಾರು 22,000 ಮಂದಿ ಹಿಂದಿರುಗಿಹೋಗುತ್ತಾರೆ; ಕೇವಲ 10,000 ಮಂದಿ ಉಳಿಯುತ್ತಾರೆ.​—⁠ಧರ್ಮೋಪದೇಶಕಾಂಡ 20:8; ನ್ಯಾಯಸ್ಥಾಪಕರು 7:2, 3.

ದೇವರ ದೃಷ್ಟಿಕೋನದಲ್ಲಿ, ಈಗಲೂ ಗಿದ್ಯೋನನ ಬಳಿಯಲ್ಲಿರುವ ಜನರು ಇನ್ನೂ ಹೆಚ್ಚಾಗಿದ್ದಾರೆ. ಅವರನ್ನು ನೀರಿನ ಹಳ್ಳಕ್ಕೆ ಕರೆದುಕೊಂಡುಹೋಗುವಂತೆ ಗಿದ್ಯೋನನಿಗೆ ಹೇಳಲಾಗುತ್ತದೆ. ಹಗಲಿನ ಬಿಸಿಲಿನಲ್ಲಿ ತನ್ನ ಸೈನಿಕರನ್ನು ಒಂದು ನದಿಯ ಬಳಿಗೆ ಕರೆದೊಯ್ಯುವಂತೆ ದೇವರು ಮಾಡಿದನು ಎಂದು ಯೆಹೂದಿ ಇತಿಹಾಸಗಾರನಾದ ಜೋಸೀಫಸನು ಹೇಳುತ್ತಾನೆ. ಸನ್ನಿವೇಶವು ಏನೇ ಆಗಿರಲಿ, ಆ ಪುರುಷರು ಹೇಗೆ ನೀರನ್ನು ಕುಡಿಯುತ್ತಾರೆಂಬುದನ್ನು ಗಿದ್ಯೋನನು ಗಮನಿಸುತ್ತಾನೆ. ಕೇವಲ 300 ಮಂದಿ ಮಾತ್ರ ಕೈಯಿಂದ ನೀರನ್ನು ಬಾಯಿಗೆ ತೆಗೆದುಕೊಂಡು ನೆಕ್ಕುತ್ತಾರೆ ಮತ್ತು ಅದೇ ಸಮಯದಲ್ಲಿ ಸಾಧ್ಯವಿರುವ ವೈರಿಆಕ್ರಮಣಕ್ಕಾಗಿ ಜಾಗರೂಕತೆಯಿಂದ ಅತ್ತಿತ್ತ ನೋಡುತ್ತಿರುತ್ತಾರೆ. ತುಂಬ ಜಾಗರೂಕರಾದ ಈ 300 ಮಂದಿ ಮಾತ್ರ ಗಿದ್ಯೋನನ ಸಂಗಡ ಹೋಗಲಿದ್ದರು. (ನ್ಯಾಯಸ್ಥಾಪಕರು 7:4-8) ನೀವು ಅವರ ಸನ್ನಿವೇಶದಲ್ಲಿರುವುದನ್ನು ಚಿತ್ರಿಸಿಕೊಳ್ಳಿರಿ. ನಿಮ್ಮ ವೈರಿಗಳು 1,35,000 ಸಂಖ್ಯೆಯಲ್ಲಿರುವುದರಿಂದ, ಗೆಲುವು ಖಂಡಿತವಾಗಿಯೂ ನಿಮ್ಮ ಶಕ್ತಿಯಿಂದಲ್ಲ ಬದಲಾಗಿ ಯೆಹೋವನ ಶಕ್ತಿಯಿಂದಲೇ ಸಿಗಸಾಧ್ಯವಿದೆ ಎಂಬ ನಿರ್ಧಾರಕ್ಕೆ ನೀವು ಬರುವಿರಿ!

ತದನಂತರ ದೇವರು ಗಿದ್ಯೋನನಿಗೆ, ಒಬ್ಬ ಸೇವಕನನ್ನು ಕರೆದುಕೊಂಡು ಮಿದ್ಯಾನ್ಯರ ಪಾಳೆಯದ ಬೇಹುಗಾರಿಕೆ ನಡೆಸುವಂತೆ ಹೇಳುತ್ತಾನೆ. ಅಲ್ಲಿಗೆ ಹೋಗಿದ್ದಾಗ, ಒಬ್ಬ ಮನುಷ್ಯನು ತನ್ನ ಜೊತೆಗಾರನಿಗೆ ಒಂದು ಕನಸನ್ನು ಹೇಳುವುದು ಮತ್ತು ಆ ಜೊತೆಗಾರನು ಯಾವುದೇ ಹಿಂಜರಿಕೆಯಿಲ್ಲದೆ ಈ ಕನಸಿನ ಅರ್ಥ, ದೇವರು ಮಿದ್ಯಾನ್ಯರನ್ನು ಗಿದ್ಯೋನನ ಕೈಗೆ ಒಪ್ಪಿಸುವ ನಿರ್ಧಾರವನ್ನು ಮಾಡಿದ್ದಾನೆ ಎಂದು ತಿಳಿಸುವುದು ಗಿದ್ಯೋನನ ಕಿವಿಗೆ ಬೀಳುತ್ತದೆ. ಗಿದ್ಯೋನನಿಗೂ ಇದೇ ಬೇಕಾಗಿತ್ತು. ಈಗ ಅವನಿಗೆ, ಯೆಹೋವನು ತನಗೆ ಮತ್ತು ತನ್ನ 300 ಮಂದಿಗೆ ಮಿದ್ಯಾನ್ಯರ ವಿರುದ್ಧ ಜಯವನ್ನು ನೀಡುತ್ತಾನೆ ಎಂಬ ಖಾತ್ರಿಯುಂಟಾಗುತ್ತದೆ.​—⁠ನ್ಯಾಯಸ್ಥಾಪಕರು 7:9-15.

ಯುದ್ಧತಂತ್ರ

ಆ 300 ಮಂದಿ, 100 ಜನರಿರುವ ಮೂರು ಗುಂಪುಗಳಾಗಿ ವಿಭಾಗಿಸಲ್ಪಟ್ಟಿದ್ದಾರೆ. ಅವರಲ್ಲಿ ಪ್ರತಿಯೊಬ್ಬನಿಗೆ ಒಂದು ಕೊಂಬು ಮತ್ತು ದೊಡ್ಡದಾದ ಬರಿಕೊಡವನ್ನು ಕೊಡಲಾಗಿದೆ. ಆ ಕೊಡದಲ್ಲಿ ಉರಿಯುವ ಪಂಜನ್ನು ಅಡಗಿಸಲಾಗಿದೆ. ಗಿದ್ಯೋನನು ಕೊಡುವ ಮೊದಲ ಆದೇಶವು ಹೀಗಿದೆ: ‘ನನ್ನನ್ನೇ ನೋಡುತ್ತಾ ನಾನು ಹೇಗೆ ಮಾಡುತ್ತೇನೋ ಹಾಗೆ ಮಾಡಿರಿ. ನಾನು ಕೊಂಬನ್ನು ಊದುವಾಗ ನೀವೂ ನಿಮ್ಮ ಕೊಂಬುಗಳನ್ನು ಊದಿ “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ” ಎಂದು ಕೂಗಿರಿ.’​—⁠ನ್ಯಾಯಸ್ಥಾಪಕರು 7:16-18, 20.

ಆ 300 ಮಂದಿ ಇಸ್ರಾಯೇಲ್ಯ ಯುದ್ಧವೀರರು ಯಾರಿಗೂ ಗೊತ್ತಾಗದಂತೆ ಶತ್ರುಗಳ ಪಾಳೆಯದ ಅಂಚಿಗೆ ಬರುತ್ತಾರೆ. ಆಗ ಸುಮಾರು ರಾತ್ರಿ ಹತ್ತು ಗಂಟೆಯಾಗಿದ್ದು, ಸ್ವಲ್ಪ ಸಮಯಕ್ಕೆ ಮುಂಚೆಯಷ್ಟೇ ಕಾವಲುಗಾರರು ಬದಲಾಗಿದ್ದಾರೆ. ಇದು ಅವರ ಮೇಲೆರಗಲು ಅನುಕೂಲಕರವಾದ ಸಮಯವಾಗಿರುವಂತೆ ತೋರುತ್ತದೆ, ಏಕೆಂದರೆ ಹೊಸ ಕಾವಲುಗಾರರ ಕಣ್ಣುಗಳು ಕತ್ತಲೆಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಹಿಡಿಯುತ್ತದೆ.

ಈಗ ಮಿದ್ಯಾನ್ಯರು ಎಂಥ ಭೀತಿಯನ್ನು ಅನುಭವಿಸುತ್ತಾರೆ! ಇದ್ದಕ್ಕಿದ್ದಂತೆ, 300 ಕೊಡಗಳ ಒಡೆಯುವಿಕೆ, 300 ಕೊಂಬುಗಳ ಊದುವಿಕೆ ಮತ್ತು 300 ಮಂದಿಯ ಆರ್ಭಟವು ರಾತ್ರಿಯ ನೀರವತೆಗೆ ಭಂಗವನ್ನು ಉಂಟುಮಾಡುತ್ತದೆ. ವಿಶೇಷವಾಗಿ “ಯೆಹೋವನ ಕತ್ತಿ, ಗಿದ್ಯೋನನ ಕತ್ತಿ” ಎಂಬ ಕೂಗಿನಿಂದ ದಿಗ್ಭ್ರಮೆಗೊಂಡ ಮಿದ್ಯಾನ್ಯರು ಸಹ ಭ್ರಾಂತರಾಗಿ ಕೂಗತೊಡಗಿದರು, ಮತ್ತು ಇದು ಇನ್ನಷ್ಟು ಕೋಲಾಹಲವನ್ನು ಉಂಟುಮಾಡುತ್ತದೆ. ಈ ಅವ್ಯವಸ್ಥೆಯಲ್ಲಿ, ತಮ್ಮ ಶತ್ರುವು ಯಾರು ಎಂಬುದನ್ನು ಅವರು ಅರ್ಥಮಾಡಿಕೊಳ್ಳಲು ಅಸಮರ್ಥರಾಗುತ್ತಾರೆ. ಆ 300 ಮಂದಿ ಮಾತ್ರ ತಮ್ಮ ನೇಮಿತ ಸ್ಥಾನಗಳಲ್ಲೇ ನಿಂತುಕೊಂಡಿದ್ದಾರೆ, ಏಕೆಂದರೆ ವೈರಿಗಳು ಪರಸ್ಪರ ಹತಮಾಡಿಕೊಳ್ಳಲಿಕ್ಕಾಗಿ ತಮ್ಮ ಸ್ವಂತ ಕತ್ತಿಗಳನ್ನೇ ಉಪಯೋಗಿಸುವಂತೆ ದೇವರು ಮಾಡಿದ್ದಾನೆ. ಆ ಪಾಳೆಯವನ್ನು ಸದೆಬಡಿಯಲಾಗಿದೆ, ತಪ್ಪಿಸಿಕೊಳ್ಳುವ ಮಾರ್ಗವೇ ಇಲ್ಲ ಮತ್ತು ಪ್ರಯಾಸಕರವಾದ ಬೆನ್ನಟ್ಟುವಿಕೆಯ ಮೂಲಕ ಉಳಿದಿರುವ ಶತ್ರುಸೈನಿಕರನ್ನು ಸೆರೆಹಿಡಿಯುವ ಅಥವಾ ಕೊಂದುಹಾಕುವ ಕಾರ್ಯಾಚರಣೆಯು, ಮಿದ್ಯಾನ್ಯರ ಬೆದರಿಕೆಯನ್ನು ಶಾಶ್ವತವಾಗಿ ಇಲ್ಲವಾಗಿಸುತ್ತದೆ. ದೀರ್ಘವಾದ ಮತ್ತು ವಿನಾಶಕರವಾದ ದಾಳಿಯು ಅಂತಿಮವಾಗಿ ಮುಕ್ತಾಯಗೊಂಡಿದೆ.​—⁠ನ್ಯಾಯಸ್ಥಾಪಕರು 7:19-25; 8:10-12, 28.

ಈ ವಿಜಯದ ಬಳಿಕವೂ ಗಿದ್ಯೋನನು ವಿನೀತಭಾವದವನಾಗಿಯೇ ಇದ್ದಾನೆ. ತಮ್ಮನ್ನು ಯುದ್ಧಕ್ಕೆ ಕರೆಯದೇ ಅವಮಾನಿಸಲಾಗಿದೆ ಎಂದು ನೆನಸಿದ ಎಫ್ರಾಯೀಮ್ಯರು ಅವನೊಂದಿಗೆ ಜಗಳಕ್ಕೆ ಬಂದಾಗ ಅವನು ಮೃದುವಾಗಿ ಪ್ರತಿಕ್ರಿಯಿಸುತ್ತಾನೆ. ಅವನ ಮೃದುವಾದ ಪ್ರತ್ಯುತ್ತರವು ಅವರ ಸಿಟ್ಟನ್ನಾರಿಸುತ್ತದೆ ಮತ್ತು ಅವರನ್ನು ಶಾಂತಗೊಳಿಸುತ್ತದೆ.​—⁠ನ್ಯಾಯಸ್ಥಾಪಕರು 8:1-3; ಜ್ಞಾನೋಕ್ತಿ 15:⁠1.

ಈಗ ಶಾಂತಿಯು ಸ್ಥಾಪಿಸಲ್ಪಟ್ಟಿರುವುದರಿಂದ ಇಸ್ರಾಯೇಲ್ಯರು ತಮ್ಮ ಮೇಲೆ ಅರಸನಾಗುವಂತೆ ಗಿದ್ಯೋನನನ್ನು ಉತ್ತೇಜಿಸುತ್ತಾರೆ. ಎಂಥ ಒಂದು ಪ್ರಲೋಭನೆ! ಆದರೆ ಗಿದ್ಯೋನನು ಇದನ್ನು ನಿರಾಕರಿಸುತ್ತಾನೆ. ಮಿದ್ಯಾನ್ಯರ ಮೇಲಿನ ಜಯಕ್ಕೆ ಯಾರು ಕಾರಣ ಎಂಬುದನ್ನು ಅವನು ಮರೆತಿಲ್ಲ. ಅವನು ಘೋಷಿಸಿದ್ದು: “ನಾನಾಗಲಿ ನನ್ನ ಮಗನಾಗಲಿ ನಿಮ್ಮನ್ನು ಆಳುವದಿಲ್ಲ; ಯೆಹೋವನೇ ನಿಮ್ಮ ಅರಸನಾಗಿರುವನು.”​—⁠ನ್ಯಾಯಸ್ಥಾಪಕರು 8:⁠23.

ಆದರೂ, ಅಪರಿಪೂರ್ಣನಾಗಿದ್ದರಿಂದ ಗಿದ್ಯೋನನು ಕೆಲವೊಂದು ತಪ್ಪು ನಿರ್ಣಯಗಳನ್ನು ಮಾಡುತ್ತಾನೆ. ಯಾವುದೋ ಒಂದು ಅವ್ಯಕ್ತ ಕಾರಣಕ್ಕಾಗಿ ಅವನು ಯುದ್ಧದಿಂದ ಕೊಳ್ಳೆಹೊಡೆದ ವಸ್ತುಗಳಿಂದ ಏಫೋದನ್ನು ಮಾಡುತ್ತಾನೆ ಮತ್ತು ಅದನ್ನು ತನ್ನ ಊರಿನಲ್ಲಿ ಪ್ರದರ್ಶನಕ್ಕಿಡುತ್ತಾನೆ. ಎಲ್ಲ ಇಸ್ರಾಯೇಲ್ಯರು ಆ ಏಫೋದಿನೊಂದಿಗೆ ‘ಪೂಜೆಯನ್ನು’ (NIBV) ನಡೆಸಲು ಆರಂಭಿಸಿದರು ಎಂದು ದಾಖಲೆಯು ತಿಳಿಸುತ್ತದೆ. ಅವರು ಅದನ್ನು ಪೂಜಿಸಿದರು, ಮತ್ತು ಅದು ಗಿದ್ಯೋನಿಗೂ ಅವನ ಮನೆಯವರಿಗೂ ಉರುಲಾಯಿತು. ಆದರೂ, ಅವನು ಪೂರ್ತಿಯಾಗಿ ಒಬ್ಬ ವಿಗ್ರಹಾರಾಧಕನಾಗಲಿಲ್ಲ, ಏಕೆಂದರೆ ಶಾಸ್ತ್ರವಚನಗಳು ಅವನನ್ನು ಯೆಹೋವನಲ್ಲಿ ನಂಬಿಕೆಯಿಟ್ಟ ಒಬ್ಬ ವ್ಯಕ್ತಿಯಾಗಿ ಪರಿಗಣಿಸುತ್ತವೆ.​—⁠ನ್ಯಾಯಸ್ಥಾಪಕರು 8:27; ಇಬ್ರಿಯ 11:32-34.

ನಮಗಾಗಿರುವ ಪಾಠಗಳು

ಗಿದ್ಯೋನನ ಕಥೆಯು ಎಚ್ಚರಿಕೆಯ ಹಾಗೂ ಉತ್ತೇಜನದ ಪಾಠಗಳನ್ನು ಕಲಿಸುತ್ತದೆ. ನಮ್ಮ ಮೊಂಡ ವರ್ತನೆಯ ಕಾರಣದಿಂದ ಯೆಹೋವನು ನಮ್ಮಿಂದ ತನ್ನ ಆತ್ಮ ಹಾಗೂ ಅನುಗ್ರಹವನ್ನು ಹಿಂದೆಗೆಯುವಲ್ಲಿ, ನಮ್ಮ ಆಧ್ಯಾತ್ಮಿಕ ಪರಿಸ್ಥಿತಿಯು, ಮಿಡತೆಗಳಿಂದ ಧ್ವಂಸಗೊಳಿಸಲ್ಪಟ್ಟಿರುವ ಒಂದು ಪ್ರದೇಶದಲ್ಲಿ ಬಡತನದಿಂದ ಬಸವಳಿದಿದ್ದ ನಿವಾಸಿಗಳ ಸ್ಥಿತಿಯಂತಾಗುವುದು ಎಂದು ಅದು ಎಚ್ಚರಿಕೆಯನ್ನು ನೀಡುತ್ತದೆ. ನಾವು ಕಷ್ಟಕರವಾದ ಸಮಯಗಳಲ್ಲಿ ಜೀವಿಸುತ್ತಿದ್ದೇವೆ ಮತ್ತು “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು” ಎಂಬುದನ್ನು ನಾವೆಂದಿಗೂ ಮರೆಯಬಾರದು. (ಜ್ಞಾನೋಕ್ತಿ 10:22) ನಾವು ‘ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ದೇವರನ್ನು ಸೇವಿಸುವ’ ಕಾರಣದಿಂದಲೇ ಆತನ ಆಶೀರ್ವಾದಗಳನ್ನು ಪಡೆಯುತ್ತೇವೆ. ಇಲ್ಲದಿದ್ದರೆ ಆತನು ನಮ್ಮನ್ನು ತಳ್ಳಿಹಾಕುತ್ತಿದ್ದನು.​—⁠1 ಪೂರ್ವಕಾಲವೃತ್ತಾಂತ 28:⁠9.

ಗಿದ್ಯೋನನ ಕುರಿತಾದ ವೃತ್ತಾಂತದಿಂದ ನಾವು ಉತ್ತೇಜನವನ್ನು ಪಡೆದುಕೊಳ್ಳಸಾಧ್ಯವಿದೆ, ಏಕೆಂದರೆ ಯೆಹೋವನು ತನ್ನ ಜನರನ್ನು ಯಾವುದೇ ವಿಪತ್ತಿನಿಂದ, ದುರ್ಬಲರಾಗಿ ಅಥವಾ ನಿಸ್ಸಹಾಯಕರಾಗಿ ತೋರುವವರನ್ನು ಉಪಯೋಗಿಸುವ ಮೂಲಕವೂ ರಕ್ಷಿಸಬಲ್ಲನು ಎಂಬುದನ್ನು ಅದು ರುಜುಪಡಿಸುತ್ತದೆ. ಗಿದ್ಯೋನನೂ ಅವನ 300 ಮಂದಿಯೂ 1,35,000 ಮಿದ್ಯಾನ್ಯರನ್ನು ಪರಾಜಯಗೊಳಿಸಲು ಶಕ್ತರಾಗಿದ್ದರೆಂಬುದು ದೇವರ ಅಪರಿಮಿತ ಶಕ್ತಿಯ ರುಜುವಾತಾಗಿದೆ. ನಾವು ಸ್ವತಃ ಹತಾಶಕರವಾದ ದುಸ್ಥಿತಿಯಲ್ಲಿ ಬೀಳಬಹುದು ಮತ್ತು ನಮ್ಮ ವೈರಿಗಳು ನಮಗಿಂತಲೂ ಅಪಾರ ಸಂಖ್ಯೆಯಲ್ಲಿದ್ದಾರೆ ಎಂಬಂತೆ ತೋರಬಹುದು. ಆದರೆ, ಗಿದ್ಯೋನನನ್ನು ಒಳಗೂಡಿರುವ ಬೈಬಲ್‌ ವೃತ್ತಾಂತವು, ತನ್ನಲ್ಲಿ ನಂಬಿಕೆಯಿಡುವವರೆಲ್ಲರನ್ನು ಆಶೀರ್ವದಿಸುವ ಮತ್ತು ರಕ್ಷಿಸುವ ಯೆಹೋವನಲ್ಲಿ ಭರವಸೆಯಿಡುವಂತೆ ನಮ್ಮನ್ನು ಉತ್ತೇಜಿಸುತ್ತದೆ.