ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆನಂದವನ್ನು ಪಡೆಯುವಂತೆ ಬೈಬಲ್‌ ನಿಮಗೆ ಸಹಾಯಮಾಡಬಲ್ಲದು

ಆನಂದವನ್ನು ಪಡೆಯುವಂತೆ ಬೈಬಲ್‌ ನಿಮಗೆ ಸಹಾಯಮಾಡಬಲ್ಲದು

ಆನಂದವನ್ನು ಪಡೆಯುವಂತೆ ಬೈಬಲ್‌ ನಿಮಗೆ ಸಹಾಯಮಾಡಬಲ್ಲದು

ಬೈಬಲ್‌ ಒಂದು ವೈದ್ಯಶಾಸ್ತ್ರ ಕೈಪಿಡಿ ಅಲ್ಲದಿದ್ದರೂ, ಭಾವನೆಗಳು​—⁠ಸಕಾರಾತ್ಮಕವಾಗಿರಲಿ ನಕಾರಾತ್ಮಕವಾಗಿರಲಿ​—⁠ಒಬ್ಬ ವ್ಯಕ್ತಿಯ ಮಾನಸಿಕ ಮತ್ತು ಶಾರೀರಿಕ ಆರೋಗ್ಯದ ಮೇಲೆ ಬೀರಬಲ್ಲ ಪರಿಣಾಮದ ಕುರಿತಾಗಿ ಅದು ಹೇಳಿಕೆಗಳನ್ನು ಮಾಡುತ್ತದೆ. “ಹರ್ಷಹೃದಯವು ಒಳ್ಳೇ ಔಷಧ, ಕುಗ್ಗಿದ ಮನದಿಂದ ಒಣಮೈ” ಎಂದು ಬೈಬಲ್‌ ಹೇಳುತ್ತದೆ. ಮುಂದಕ್ಕೆ ನಾವು ಹೀಗೆ ಓದುತ್ತೇವೆ: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ [“ನಿರುತ್ತೇಜನಗೊಂಡರೆ,” NW] ನಿನ್ನ ಬಲವೂ ಇಕ್ಕಟ್ಟೇ.” (ಜ್ಞಾನೋಕ್ತಿ 17:22; 24:10) ನಿರುತ್ತೇಜನದ ಭಾವನೆಗಳು ನಮ್ಮ ಶಕ್ತಿಯನ್ನು ಹೀರಿಕೊಳ್ಳಬಲ್ಲವು, ಮತ್ತು ಬದಲಾಗಲು ಇಲ್ಲವೆ ಸಹಾಯವನ್ನು ಪಡೆಯಲು ಯಾವ ಆಸೆಯಿಲ್ಲದ ದುರ್ಬಲವಾದ ಮತ್ತು ಅಪಾಯಕರ ಸ್ಥಿತಿಯಲ್ಲಿರಿಸಬಲ್ಲವು.

ನಿರುತ್ತೇಜನವು ಒಬ್ಬ ವ್ಯಕ್ತಿಯನ್ನು ಆಧ್ಯಾತ್ಮಿಕವಾಗಿಯೂ ಬಾಧಿಸಬಲ್ಲದು. ಏಕೆಂದರೆ, ತಾವು ಯೋಗ್ಯತೆಯಿಲ್ಲದವರು ಎಂಬ ಭಾವನೆ ಯಾರಿಗಿದೆಯೊ ಅಂಥ ಜನರಿಗೆ, ದೇವರೊಂದಿಗೆ ಒಂದು ಸುಸಂಬಂಧವನ್ನು ಇಟ್ಟುಕೊಳ್ಳಲು ಮತ್ತು ಆತನಿಂದ ಆಶೀರ್ವದಿಸಲ್ಪಡಲು ತಮಗೆಂದಿಗೂ ಸಾಧ್ಯವೇ ಇಲ್ಲವೆಂದು ಅನಿಸುತ್ತದೆ. ಹಿಂದಿನ ಲೇಖನದಲ್ಲಿ ತಿಳಿಸಲ್ಪಟ್ಟಿರುವ ಸೀಮೋನಳಿಗೆ, ತಾನು “ದೇವರು ಮೆಚ್ಚುವಂಥ ರೀತಿಯ ವ್ಯಕ್ತಿಯಾಗಿದ್ದೇನೊ” ಎಂಬ ಸಂಶಯವಿತ್ತು. ಆದರೆ, ನಾವು ದೇವರ ವಾಕ್ಯವಾದ ಬೈಬಲ್‌ನಲ್ಲಿ ನೋಡುವಾಗ, ದೇವರು ತನ್ನನ್ನು ಮೆಚ್ಚಿಸಲು ಪ್ರಯತ್ನಿಸುವವರ ಬಗ್ಗೆ ಸಕಾರಾತ್ಮಕ ನೋಟವನ್ನು ಹೊಂದಿರುತ್ತಾನೆಂದು ಕಂಡುಕೊಳ್ಳುತ್ತೇವೆ.

ದೇವರು ನಿಜವಾಗಿಯೂ ಕಾಳಜಿ ವಹಿಸುತ್ತಾನೆ

“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂದು ಬೈಬಲ್‌ ನಮಗನ್ನುತ್ತದೆ. “ಪಶ್ಚಾತ್ತಾಪದಿಂದ ಜಜ್ಜಿಹೋದ ಮನಸ್ಸನ್ನು” ದೇವರು ತಿರಸ್ಕರಿಸುವದಿಲ್ಲ. ಅದರ ಬದಲು “ಜಜ್ಜಿಹೋದ ದೀನಮನದೊಂದಿಗೆ ಇದ್ದುಕೊಂಡು ದೀನನ ಆತ್ಮವನ್ನೂ ಜಜ್ಜಿಹೋದವನ ಮನಸ್ಸನ್ನೂ ಉಜ್ಜೀವಿಸು”ವೆನೆಂದು ಆತನು ವಾಗ್ದಾನಿಸುತ್ತಾನೆ.​—⁠ಕೀರ್ತನೆ 34:18; 51:17; ಯೆಶಾಯ 57:⁠15.

ಒಂದು ಸಂದರ್ಭದಲ್ಲಿ ದೇವರ ಮಗನಾದ ಯೇಸು, ತನ್ನ ಸೇವಕರಲ್ಲಿ ದೇವರು ಒಳಿತನ್ನು ನೋಡುತ್ತಾನೆ ಎಂಬ ವಾಸ್ತವಾಂಶದ ಕಡೆಗೆ ತನ್ನ ಶಿಷ್ಯರ ಗಮನವನ್ನು ಸೆಳೆಯುವ ಅಗತ್ಯವನ್ನು ಕಂಡುಕೊಂಡನು. ಒಂದು ದೃಷ್ಟಾಂತದ ಮೂಲಕ ಅವನು ಹೇಳಿದ್ದೇನೆಂದರೆ, ಹೆಚ್ಚಿನ ಮನುಷ್ಯರು ಯಾವುದನ್ನು ಮಹತ್ವದ್ದಲ್ಲವೆಂದು ನೆನಸುತ್ತಾರೊ ಆ ಒಂದು ಗುಬ್ಬಿಯು ನೆಲಕ್ಕೆ ಬೀಳುವುದನ್ನು ಸಹ ದೇವರು ಗಮನಿಸುತ್ತಾನೆ. ದೇವರಿಗೆ ಮಾನವರ ಬಗ್ಗೆ ಅತಿ ಸೂಕ್ಷ್ಮವಾದ ವಿವರವೂ, ಅವರ ತಲೆಯಲ್ಲಿರುವ ಕೂದಲುಗಳ ಸಂಖ್ಯೆಯೂ ಗೊತ್ತಿದೆಯೆಂದು ಅವನು ಎತ್ತಿತೋರಿಸಿದನು. “ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು” ಎಂದು ಹೇಳುತ್ತಾ ಯೇಸು ತನ್ನ ದೃಷ್ಟಾಂತವನ್ನು ಕೊನೆಗೊಳಿಸಿದನು. (ಮತ್ತಾಯ 10:29-31) * ಒಬ್ಬ ವ್ಯಕ್ತಿಗೆ ತನ್ನ ಬಗ್ಗೆ ಯಾವುದೇ ಭಾವನೆ ಇದ್ದರೂ, ದೇವರ ದೃಷ್ಟಿಯಲ್ಲಂತೂ ನಂಬಿಕೆಯುಳ್ಳ ಮಾನವರಿಗೆ ಖಂಡಿತವಾಗಿಯೂ ಬೆಲೆಯಿದೆಯೆಂಬುದನ್ನು ಯೇಸು ಸೂಚಿಸಿದನು. ವಾಸ್ತವದಲ್ಲಿ ಅಪೊಸ್ತಲ ಪೇತ್ರನು ನಮಗೆ ನೆನಪು ಹುಟ್ಟಿಸುವುದೇನೆಂದರೆ, “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”​—⁠ಅ. ಕೃತ್ಯಗಳು 10:34, 35.

ಸಮತೂಕದ ಪ್ರಜ್ಞೆಯನ್ನು ಕಾಪಾಡಿಕೊಳ್ಳಿರಿ

ನಮ್ಮ ಬಗ್ಗೆ ನಮಗಿರುವ ದೃಷ್ಟಿಕೋನದಲ್ಲಿ ಸಮತೂಕವನ್ನು ಬೆಳೆಸಿಕೊಳ್ಳುವಂತೆ ದೇವರ ವಾಕ್ಯವು ಪ್ರೇರೇಪಿಸುತ್ತದೆ. ಅಪೊಸ್ತಲ ಪೌಲನು ದೇವಪ್ರೇರಣೆಯಿಂದ ಬರೆದದ್ದು: “ದೇವರು ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.”​—⁠ರೋಮಾಪುರ 12:⁠3.

ನಾವು ಅಹಂಕಾರಿಗಳಾಗುವಷ್ಟರ ಮಟ್ಟಿಗೆ ನಮ್ಮ ಬಗ್ಗೆ ಸದಭಿಪ್ರಾಯವನ್ನು ಇಟ್ಟುಕೊಳ್ಳಲು ಬಯಸದಿರುವೆವು ಎಂಬುದು ನಿಶ್ಚಯ, ಆದರೆ ಅದೇ ಸಮಯದಲ್ಲಿ ನಾವೇನೂ ಪ್ರಯೋಜನವಿಲ್ಲದವರು ಎಂಬ ಇನ್ನೊಂದು ವಿಪರೀತಕ್ಕೂ ಹೋಗದಿರುವೆವು. ಅದಕ್ಕೆ ಬದಲು, ನಮ್ಮ ಬಗ್ಗೆ ನ್ಯಾಯಸಮ್ಮತವಾದ ನೋಟವನ್ನು ಬೆಳೆಸಿಕೊಳ್ಳುವುದು ನಮ್ಮ ಗುರಿಯಾಗಿರಬೇಕು. ಇದು, ನಮ್ಮ ಸಾಮರ್ಥ್ಯಗಳು ಮತ್ತು ಇತಿಮಿತಿಗಳೆರಡನ್ನೂ ಗಣನೆಗೆ ತೆಗೆದುಕೊಳ್ಳುವಂಥ ರೀತಿಯ ನೋಟವಾಗಿರಬೇಕು. ಒಬ್ಬ ಕ್ರೈಸ್ತ ಮಹಿಳೆಯು ಇದನ್ನು ಹೀಗೆ ವ್ಯಕ್ತಪಡಿಸಿದಳು: “ನಾನು ಕೆಟ್ಟವಳೂ ಅಲ್ಲ, ಅತೀ ವಿಶೇಷ ವ್ಯಕ್ತಿಯೂ ಅಲ್ಲ. ಬೇರೆಲ್ಲರಂತೆಯೇ ನನ್ನಲ್ಲಿಯೂ ಒಳ್ಳೇ ಗುಣಗಳೂ ಕೆಟ್ಟ ಗುಣಗಳೂ ಇವೆ.”

ಆದರೆ ಈ ರೀತಿಯ ಸಮತೂಕದ ದೃಷ್ಟಿಕೋನದ ಬಗ್ಗೆ ಹೇಳುವುದು ಸುಲಭ, ಹೊಂದುವುದು ಕಷ್ಟ. ಅನೇಕ ವರ್ಷಗಳಿಂದ ನಾವು ನಮ್ಮ ಕುರಿತಾಗಿಯೇ ವಿಕಸಿಸಿಕೊಂಡಿರುವ ವಿಪರೀತ ನಕಾರಾತ್ಮಕ ನೋಟವನ್ನು ತೊಡೆದುಹಾಕಲು ಬಹಳಷ್ಟು ಪ್ರಯತ್ನ ಬೇಕಾಗಬಹುದು. ಹಾಗಿದ್ದರೂ ದೇವರ ಸಹಾಯದಿಂದ, ನಮ್ಮ ವ್ಯಕ್ತಿತ್ವವನ್ನಲ್ಲದೆ ಜೀವನದ ಕುರಿತಾದ ನಮ್ಮ ಹೊರನೋಟವನ್ನೂ ಬದಲಾಯಿಸಬಲ್ಲೆವು. ವಾಸ್ತವದಲ್ಲಿ, ದೇವರ ವಾಕ್ಯವು ಇದನ್ನೇ ಮಾಡುವಂತೆ ನಮ್ಮನ್ನು ಪ್ರೇರಿಸುತ್ತದೆ. ನಾವು ಹೀಗೆ ಓದುತ್ತೇವೆ: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು. ನೀವು ನಿಮ್ಮ ಅಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.”​—⁠ಎಫೆಸ 4:22-24.

ನಮ್ಮ “ಅಂತರ್ಯ”ವನ್ನು ಅಂದರೆ, ನಮ್ಮ ಮನಸ್ಸಿನ ಪ್ರಬಲವಾದ ಪ್ರವೃತ್ತಿಯನ್ನು ಹೊಸದಾಗಿಸಲು ಪ್ರಯತ್ನವನ್ನು ಮಾಡುವ ಮೂಲಕ, ವಿಪರೀತವಾಗಿ ನಕಾರಾತ್ಮಕವಾಗಿರುವ ನಮ್ಮ ವ್ಯಕ್ತಿತ್ವವನ್ನು ಸಕಾರಾತ್ಮಕವಾದ ವ್ಯಕ್ತಿತ್ವವಾಗಿ ಬದಲಾಯಿಸಬಲ್ಲೆವು. ಹಿಂದಿನ ಲೇಖನದಲ್ಲಿ ತಿಳಿಸಲ್ಪಟ್ಟಿರುವ ಲೀನಳು, ತನ್ನನ್ನು ಯಾರೂ ಪ್ರೀತಿಸಲಾರರು ಇಲ್ಲವೆ ಸಹಾಯಮಾಡಲಾರರು ಎಂಬ ವಿಚಾರವನ್ನು ತಾನು ಒಂದುವೇಳೆ ಮನಸ್ಸಿನಿಂದ ತೆಗೆದುಹಾಕದಿದ್ದರೆ ತನ್ನ ಕುರಿತಾದ ಭಾವನೆಗಳನ್ನು ಯಾವುದೂ ಬದಲಾಯಿಸದು ಅಥವಾ ಬದಲಾಯಿಸಲಾಗದು ಎಂಬುದನ್ನು ಗ್ರಹಿಸಿದಳು. ಬೈಬಲ್‌ನಲ್ಲಿರುವ ಯಾವ ಪ್ರಾಯೋಗಿಕ ಸಲಹೆಯು ಲೀನ, ಸೀಮೋನ್‌ ಮತ್ತು ಇತರರು ಅಂಥ ಪರಿವರ್ತನೆಯನ್ನು ಮಾಡಲು ನೆರವು ನೀಡಿತು?

ಆನಂದವನ್ನು ವರ್ಧಿಸುವ ಬೈಬಲ್‌ ಮೂಲತತ್ತ್ವಗಳು

“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.” (ಕೀರ್ತನೆ 55:22) ಮೊತ್ತಮೊದಲಾಗಿ, ಪ್ರಾರ್ಥನೆಯು ನಾವು ನಿಜ ಆನಂದವನ್ನು ಪಡೆಯುವಂತೆ ನಮಗೆ ಸಹಾಯಮಾಡಬಲ್ಲದು. ಸೀಮೋನ್‌ ಹೇಳುವುದು: “ನನಗೆ ನಿರುತ್ತೇಜನವಾಗುವಾಗಲೆಲ್ಲಾ ಯೆಹೋವನ ಬಳಿ ಹೋಗಿ, ಆತನ ಸಹಾಯವನ್ನು ಕೇಳಿಕೊಳ್ಳುತ್ತೇನೆ. ಆತನ ಬಲ ಮತ್ತು ಮಾರ್ಗದರ್ಶನೆ ನನಗೆ ಸಿಗದೇ ಹೋಗಿರುವ ಸನ್ನಿವೇಶವು ಒಂದೂ ಇಲ್ಲ.” ನಾವು ನಮ್ಮ ಭಾರವನ್ನು ಯೆಹೋವನ ಮೇಲೆ ಹಾಕುವಂತೆ ಕೀರ್ತನೆಗಾರನು ಉತ್ತೇಜಿಸುವಾಗ, ಯೆಹೋವನು ನಮ್ಮ ಬಗ್ಗೆ ಕಾಳಜಿ ವಹಿಸುತ್ತಾನೆ ಮಾತ್ರವಲ್ಲ, ಆತನು ನಮ್ಮನ್ನು ಸಹಾಯ ಹಾಗೂ ಬೆಂಬಲಕ್ಕೆ ಯೋಗ್ಯರಾಗಿರುವ ವ್ಯಕ್ತಿಗಳೆಂದು ದೃಷ್ಟಿಸುತ್ತಾನೆಂದು ಅವನು ನೆನಪುಹುಟ್ಟಿಸುತ್ತಿದ್ದಾನೆ. ಸಾ.ಶ. 33ರ ಪಂಚಾಶತ್ತಮದ ರಾತ್ರಿಯಂದು, ಯೇಸು ತನ್ನ ಸನ್ನಿಹಿತವಾಗುತ್ತಿರುವ ನಿರ್ಗಮನದ ಕುರಿತಾಗಿ ಹೇಳಿದ ಮಾತುಗಳಿಂದ ಅವನ ಶಿಷ್ಯರು ದುಃಖಿತರಾಗಿದ್ದರು. ಆಗ ಯೇಸು ಅವರಿಗೆ ತಂದೆಗೆ ಪ್ರಾರ್ಥಿಸುವಂತೆ ಹೇಳಿ, ಬಳಿಕ ಕೂಡಿಸಿದ್ದು: “ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.”​—⁠ಯೋಹಾನ 16:23, 24.

“ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಇಲ್ಲವೆ ಸಂತೋಷವನ್ನು ತರುತ್ತದೆ. (ಅ. ಕೃತ್ಯಗಳು 20:35) ಯೇಸು ಕಲಿಸಿದಂತೆ, ಜೀವನದಲ್ಲಿ ನಿಜ ಆನಂದವನ್ನು ಪಡೆಯಲಿಕ್ಕಾಗಿರುವ ಒಂದು ಕೀಲಿ ಕೈ ಕೊಡುವಿಕೆ ಆಗಿದೆ. ಈ ಬೈಬಲ್‌ ಸತ್ಯವನ್ನು ಅನ್ವಯಿಸಿಕೊಳ್ಳುವುದು ನಮ್ಮ ಸ್ವಂತ ಕೊರತೆಗಳ ಬದಲಿಗೆ ಬೇರೆಯವರ ಅಗತ್ಯಗಳ ಮೇಲೆ ಗಮನವನ್ನು ಕೇಂದ್ರಿಕರಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ. ನಾವು ಬೇರೆಯವರಿಗೆ ಸಹಾಯಮಾಡುವಾಗ ಮತ್ತು ಅವರ ಕೃತಜ್ಞತಾಭರಿತ ಪ್ರತಿಕ್ರಿಯೆಯನ್ನು ನೋಡುವಾಗ, ನಮ್ಮಲ್ಲಿ ನಮ್ಮ ಬಗ್ಗೆ ತೃಪ್ತಿಯ ಭಾವನೆ ಹುಟ್ಟುತ್ತದೆ. ಲೀನಳಿಗೆ, ಬೈಬಲಿನ ಸುವಾರ್ತೆಯನ್ನು ತನ್ನ ನೆರೆಯವರೊಂದಿಗೆ ಕ್ರಮವಾಗಿ ಹಂಚಿಕೊಳ್ಳುವುದು ಎರಡು ವಿಧಗಳಲ್ಲಿ ಸಹಾಯಮಾಡುತ್ತದೆಂದು ಮನದಟ್ಟಾಗಿದೆ. ಅವಳು ಹೇಳುವುದು: “ಮೊದಲನೆಯದಾಗಿ, ಅದು ನನಗೆ ಯೇಸು ತಿಳಿಸಿದಂಥ ಸಂತೋಷ ಹಾಗೂ ತೃಪ್ತಿಯನ್ನು ಕೊಡುತ್ತದೆ. ಎರಡನೆಯದಾಗಿ, ನನಗೆ ಬೇರೆಯವರಿಂದ ತುಂಬ ಸಕಾರಾತ್ಮಕವಾದ ಪ್ರತಿಕ್ರಿಯೆ ಸಿಗುತ್ತದೆ, ಮತ್ತು ಇದು ನನಗೆ ಆನಂದವನ್ನು ತರುತ್ತದೆ.” ನಮ್ಮ ಸಮಯ ಹಾಗೂ ಶಕ್ತಿಯನ್ನು ಉದಾರವಾಗಿ ಕೊಡುವುದರ ಮೂಲಕ ನಾವು ಜ್ಞಾನೋಕ್ತಿ 11:25ರ ಸತ್ಯತೆಯನ್ನು ಅನುಭವಿಸುತ್ತೇವೆ: “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು.”

“ದೀನನ [“ಬಾಧಿತರ,” NIBV] ದಿನಗಳೆಲ್ಲಾ ದುಃಖಭರಿತ; ಹರ್ಷಹೃದಯನಿಗೆ ನಿತ್ಯವೂ ಔತಣ.” (ಜ್ಞಾನೋಕ್ತಿ 15:15) ನಮ್ಮ ಮತ್ತು ನಮ್ಮ ಪರಿಸ್ಥಿತಿಗಳ ಬಗ್ಗೆ ನಾವು ಯಾವ ದೃಷ್ಟಿಕೋನವನ್ನು ಇಟ್ಟುಕೊಳ್ಳುವೆವು ಎಂಬ ಆಯ್ಕೆ ನಮಗೆಲ್ಲರಿಗೆ ಇದೆ. ನಾವು ಒಂದುವೇಳೆ ಎಲ್ಲವನ್ನೂ ನಕಾರಾತ್ಮಕ ದೃಷ್ಟಿಕೋನದಿಂದ ನೋಡಿ ಸಂಕಟಪಡುವ ವ್ಯಕ್ತಿಯಾಗಿರಬಲ್ಲೆವು, ಇಲ್ಲವೆ ಸಕಾರಾತ್ಮಕವಾಗಿ ಯೋಚಿಸಿ “ಹರ್ಷಹೃದಯ”ದಿಂದಿರುತ್ತಾ, ನಿತ್ಯವೂ ಔತಣದಲ್ಲಿದ್ದೇವೊ ಎಂಬಷ್ಟು ಆನಂದದಿಂದ ಇರಬಲ್ಲೆವು. ಆಯ್ಕೆ ನಮ್ಮದು. ಸೀಮೋನ್‌ ಹೇಳಿದ್ದು: “ನಾನು ಸಾಧ್ಯವಿರುವಷ್ಟು ಸಕಾರಾತ್ಮಕವಾಗಿರಲು ಪ್ರಯತ್ನಿಸುತ್ತೇನೆ. ವೈಯಕ್ತಿಕ ಅಧ್ಯಯನ ಮತ್ತು ಶುಶ್ರೂಷೆಯಲ್ಲಿ ಕಾರ್ಯಮಗ್ನಳಾಗಿರುತ್ತೇನೆ, ಹಾಗೂ ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುತ್ತೇನೆ. ಬೇರೆಯವರಿಗೆ ಭಾವನಾತ್ಮಕವಾಗಿ ಆಸರೆನೀಡಲು ಮತ್ತು ಸಹಾಯಕೊಡಲೂ ಪ್ರಯತ್ನಿಸುತ್ತೇನೆ.” ಈ ರೀತಿಯ ಹೃದಯದ ಭಾವವು ನಿಜ ಆನಂದಕ್ಕೆ ನಡೆಸುತ್ತದೆ. ಬೈಬಲ್‌ ಸಹ ನಮ್ಮನ್ನು ಉತ್ತೇಜಿಸುವುದು: “ನೀತಿವಂತರೇ, ಯೆಹೋವನಲ್ಲಿ ಸಂತೋಷಿಸುತ್ತಾ ಉಲ್ಲಾಸವಾಗಿರ್ರಿ; ಯಥಾರ್ಥಚಿತ್ತರೇ, ಆತನ ವಿಷಯದಲ್ಲಿ ಉತ್ಸಾಹಧ್ವನಿಮಾಡಿರಿ.”​—⁠ಕೀರ್ತನೆ 32:⁠11.

“ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.” (ಜ್ಞಾನೋಕ್ತಿ 17:17) ಒಬ್ಬ ಪ್ರಿಯ ವ್ಯಕ್ತಿ ಇಲ್ಲವೆ ಭರವಸಾರ್ಹ ಸಲಹೆಗಾರನಲ್ಲಿ ಮನಸ್ಸನ್ನು ತೋಡಿಕೊಳ್ಳುವುದು, ನಕಾರಾತ್ಮಕ ಭಾವನೆಗಳು ನಮ್ಮನ್ನು ಮುಳುಗಿಸಿಬಿಡುವ ಮೊದಲೇ ಅವುಗಳನ್ನು ತೆಗೆದುಹಾಕಲು ಸಹಾಯಮಾಡಬಲ್ಲದು. ಬೇರೆಯವರೊಂದಿಗೆ ಮಾತಾಡುವುದರಿಂದ ನಾವು ವಿಷಯಗಳನ್ನು ಸಮತೂಕದ ಮತ್ತು ಸಕಾರಾತ್ಮಕ ದೃಷ್ಟಿಕೋನದಿಂದ ನೋಡುವಂತೆ ಸಹಾಯವಾಗುವುದು. ಸೀಮೋನಳು ಹೇಳುವುದು: “ನನ್ನ ಭಾವನೆಗಳನ್ನು ವ್ಯಕ್ತಪಡಿಸುವುದು ನನಗೆ ತುಂಬ ಸಹಾಯಮಾಡುತ್ತದೆ. ನಿಮಗೆ ಹೇಗನಿಸುತ್ತಿದೆಯೆಂದು ನೀವು ಯಾರಿಗಾದರೂ ಹೇಳಲೇಬೇಕು. ಮನಸ್ಸಿನಲ್ಲಿದ್ದದ್ದೆಲ್ಲವನ್ನೂ ಹೊರಹಾಕಿದರೆ ಅಷ್ಟೇ ಸಾಕು.” ಹೀಗೆ “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು” ಎಂಬ ಜ್ಞಾನೋಕ್ತಿಯ ಸತ್ಯತೆಯನ್ನು ಸ್ವತಃ ನೀವು ಅನುಭವಿಸಲು ಸಹಾಯಪಡೆಯುವಿರಿ.​—⁠ಜ್ಞಾನೋಕ್ತಿ 12:⁠25.

ನೀವೇನು ಮಾಡಬಲ್ಲಿರಿ?

ನಕಾರಾತ್ಮಕ ಭಾವನೆಗಳನ್ನು ಜಯಿಸಿ, ನಿಜ ಆನಂದವನ್ನು ಪಡೆಯುವಂತೆ ನಮಗೆ ಸಹಾಯಮಾಡಬಲ್ಲ ಬೈಬಲಿನ ಅದ್ಭುತಕರ ಹಾಗೂ ಪ್ರಾಯೋಗಿಕ ಮೂಲತತ್ತ್ವಗಳಲ್ಲಿ ಕೆಲವನ್ನೇ ನಾವೀಗ ಚರ್ಚಿಸಿದೆವು. ಅಸಮರ್ಥತೆಯ ಭಾವನೆಗಳೊಂದಿಗೆ ಹೋರಾಡುತ್ತಿರುವವರಲ್ಲಿ ನೀವೊಬ್ಬರಾಗಿರುವುದಾದರೆ, ದೇವರ ವಾಕ್ಯವಾದ ಬೈಬಲನ್ನು ಹೆಚ್ಚು ನಿಕಟವಾಗಿ ಪರಿಶೀಲಿಸುವಂತೆ ನಿಮ್ಮನ್ನು ಉತ್ತೇಜಿಸುತ್ತೇವೆ. ನಿಮ್ಮ ಬಗ್ಗೆ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧದ ಬಗ್ಗೆ ವಾಸ್ತವಿಕವಾದ ಮತ್ತು ಸಮತೂಕದ ಭಾವನೆಯನ್ನು ಬೆಳೆಸಿಕೊಳ್ಳಲು ಕಲಿಯಿರಿ. ದೇವರ ವಾಕ್ಯದ ಮಾರ್ಗದರ್ಶನದಿಂದ ನೀವು ಮಾಡುವಂಥದ್ದೆಲ್ಲದ್ದರಲ್ಲಿ ನೀವು ನಿಜ ಆನಂದವನ್ನು ಪಡೆಯಲು ಶಕ್ತರಾಗುವಿರಿ ಎಂಬ ಮನಃಪೂರ್ವಕ ಹಾರೈಕೆ ನಮ್ಮದು.

[ಪಾದಟಿಪ್ಪಣಿ]

^ ಪ್ಯಾರ. 6 ಶಾಸ್ತ್ರವಚನದ ಈ ಭಾಗವು, ಪುಟ 22ರಿಂದ 23ರಲ್ಲಿ ವಿವರವಾಗಿ ಚರ್ಚಿಸಲ್ಪಟ್ಟಿದೆ.

[ಪುಟ 7ರಲ್ಲಿರುವ ಚಿತ್ರ]

ಬೈಬಲ್‌ ಮೂಲತತ್ತ್ವಗಳಿಗೆ ಅನುಸಾರವಾಗಿ ಜೀವಿಸುವುದು ಆನಂದವನ್ನು ತರುತ್ತದೆ