ಕೋಪಗೊಳ್ಳಲು ಸಾಧಾರವಿರುವುದು ಯಾವಾಗ?
ಕೋಪಗೊಳ್ಳಲು ಸಾಧಾರವಿರುವುದು ಯಾವಾಗ?
ಪ್ರಸಂಗಿ 7:9ರಲ್ಲಿ ಬೈಬಲ್ ತಿಳಿಸುವುದು: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” ಈ ವಚನವು, ಯಾರಾದರೂ ನಮಗೆ ಕೋಪವನ್ನೆಬ್ಬಿಸುವಲ್ಲಿ, ನಾವು ವಿಪರೀತವಾಗಿ ಸೂಕ್ಷ್ಮಮತಿಗಳಾಗಿರಬಾರದೆಂದು ತೋರಿಸುತ್ತದೆ; ಬದಲಾಗಿ ನಾವು ಕ್ಷಮಿಸುವವರಾಗಿರಬೇಕು.
ಆದರೆ ಪ್ರಸಂಗಿ 7:9, ನಾವು ಯಾವುದೇ ವಿಷಯದಿಂದ ಅಥವಾ ಯಾರಿಂದಲೂ ಕೋಪಗೊಳ್ಳಬಾರದೆಂದೂ, ಮಾಡಲ್ಪಟ್ಟಿರುವ ಅಪರಾಧ ಎಷ್ಟೇ ತೀಕ್ಷ್ಣವಾಗಿರಲಿ ಇಲ್ಲವೆ ಪದೇ ಪದೇ ಮಾಡಲ್ಪಟ್ಟಿರಲಿ ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ಯಾವಾಗಲೂ ಕ್ಷಮಿಸುತ್ತಾ ಇರಬೇಕೆಂದು ಹೇಳುತ್ತಿದೆಯೊ? ನಮ್ಮಿಂದಾಗಿ ಕೋಪಗೊಂಡಿರುವವರು ಹೇಗೂ ನಮ್ಮನ್ನು ಕ್ಷಮಿಸಲೇಬೇಕೆಂದು ನಮಗೆ ಗೊತ್ತಿರುವುದರಿಂದ, ನಮ್ಮ ಮಾತು ಅಥವಾ ಕ್ರಿಯೆಯ ಮೂಲಕ ಕೋಪವನ್ನೆಬ್ಬಿಸಲು ನಾವು ಕಾರಣವನ್ನು ಕೊಡುವುದರ ವಿಷಯದಲ್ಲಿ ನಿಶ್ಚಿಂತರಾಗಿರಬೇಕೊ? ಹೀಗಿರಲು ಸಾಧ್ಯವಿಲ್ಲ.
ಯೆಹೋವ ದೇವರು ಪ್ರೀತಿ, ದಯೆ, ಕ್ಷಮೆ ಮತ್ತು ದೀರ್ಘಶಾಂತಿಯ ಸಾಕಾರರೂಪ ಆಗಿದ್ದಾನೆ. ಆದರೂ, ಅವನು ಕೋಪಗೊಂಡಿರುವ ಅನೇಕ ಸಂದರ್ಭಗಳ ಕುರಿತಾಗಿ ಬೈಬಲ್ ತಿಳಿಸುತ್ತದೆ. ಅಪರಾಧವು ಗಂಭೀರವಾಗಿದ್ದಾಗ, ಆತನು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡನು. ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.
ಯೆಹೋವನ ವಿರುದ್ಧ ಮಾಡಲ್ಪಟ್ಟ ಅಪರಾಧಗಳು
ಒಂದನೇ ಅರಸುಗಳು 15:30ರಲ್ಲಿರುವ ವೃತ್ತಾಂತವು ಯಾರೊಬ್ಬಾಮನ ಪಾಪಗಳ ಕುರಿತಾಗಿ ಮಾತಾಡುತ್ತದೆ. ಅವುಗಳಿಂದ ಅವನು, ‘ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರಿಸಿ ಯೆಹೋವನನ್ನು ರೇಗಿಸಿದನು.’ 2 ಪೂರ್ವಕಾಲವೃತ್ತಾಂತ 28:25ರಲ್ಲಿ, ಬೈಬಲು ಯೆಹೂದದ ರಾಜ ಆಹಾಜನ ಕುರಿತಾಗಿ ಹೀಗೆ ಹೇಳುತ್ತದೆ: “[ಅವನು] ಅನ್ಯದೇವತೆಗಳಿಗೆ ಧೂಪಹಾಕುವದಕ್ಕಾಗಿ ಯೆಹೂದದ ಎಲ್ಲಾ ಪಟ್ಟಣಗಳಲ್ಲಿಯೂ ಪೂಜಾಸ್ಥಳಗಳನ್ನು ಏರ್ಪಡಿಸಿದನು. ಹೀಗೆ ತನ್ನ ಪಿತೃಗಳ ದೇವರಾದ ಯೆಹೋವನನ್ನು ರೇಗಿಸಿದನು.” ಇನ್ನೊಂದು ಉದಾಹರಣೆಯನ್ನು ನ್ಯಾಯಸ್ಥಾಪಕರು 2:11-14ರಲ್ಲಿ ನೋಡಬಹುದು: “ಇಸ್ರಾಯೇಲ್ಯರು ಬಾಳನ ಪ್ರತಿಮೆಗಳನ್ನು ಪೂಜಿಸಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. . . . ಅವುಗಳಿಗೆ ಅಡ್ಡಬಿದ್ದು ಯೆಹೋವನನ್ನು ರೇಗಿಸಿದರು. . . . ಯೆಹೋವನ ಕೋಪವು ಅವರ ಮೇಲೆ ಉರಿಯಹತ್ತಿತು. ಆತನು ಅವರನ್ನು ಸೂರೆಮಾಡುವವರ ಕೈಗೆ ಒಪ್ಪಿಸಲು ಅವರು ಅವರನ್ನು ಸೂರೆಮಾಡಿದರು.”
ಯೆಹೋವನನ್ನು ರೇಗಿಸಿದಂಥ ಮತ್ತು ಪ್ರಬಲವಾದ ಕ್ರಮವನ್ನು ಅವಶ್ಯಪಡಿಸಿದಂಥ ಇತರ ವಿಷಯಗಳು ಇದ್ದವು. ಉದಾಹರಣೆಗೆ ವಿಮೋಚನಕಾಂಡ 22:18-20ರಲ್ಲಿ ನಾವು ಹೀಗೆ ಓದುತ್ತೇವೆ: “ಮಾಟಗಾರ್ತಿಯನ್ನು ಬದುಕಲೀಸಬಾರದು. ಪಶುಸಂಗ ಮಾಡಿದವನಿಗೆ ಮರಣಶಿಕ್ಷೆಯಾಗಬೇಕು. ಯೆಹೋವನೊಬ್ಬನಿಗೆ ಹೊರತಾಗಿ ಬೇರೊಬ್ಬ ದೇವರಿಗೆ ಯಜ್ಞಮಾಡುವವನನ್ನು ನಾಶನಪಡಿಸಬೇಕು.”
ಪುರಾತನಕಾಲದ ಇಸ್ರಾಯೇಲ್ಯರು ಯೆಹೋವನನ್ನು ರೇಗಿಸುತ್ತಾ, ನಿಜವಾದ ಪಶ್ಚಾತ್ತಾಪವನ್ನು ತೋರಿಸದಿದ್ದಾಗ ಆತನು ಅವರ ದೊಡ್ಡ ಅಪರಾಧಗಳನ್ನು ಕ್ಷಮಿಸುತ್ತಾ ಮುಂದುವರಿಯಲಿಲ್ಲ. ನಿಜವಾದ ಪಶ್ಚಾತ್ತಾಪವನ್ನು ತೋರಿಸದಿದ್ದಾಗ ಮತ್ತು ಯೆಹೋವನಿಗೆ ವಿಧೇಯರಾಗಲು ಆತನ ಕಡೆಗೆ ತಿರುಗಿಕೊಳ್ಳುವ ಯಾವುದೇ ಸೂಚನೆ ಇಲ್ಲದಿದ್ದಾಗ, ಆತನು ಕಟ್ಟಕಡೆಗೆ ಆ ಅಪರಾಧಿಗಳನ್ನು ನಾಶನಕ್ಕೆ ಒಪ್ಪಿಸಿಬಿಟ್ಟನು. ಇದು ರಾಷ್ಟ್ರೀಯ ಮಟ್ಟದಲ್ಲಿ ಸಾ.ಶ.ಪೂ. 607ರಲ್ಲಿ ಬಾಬೆಲಿನವರ ಕೈಯಿಂದ, ಮತ್ತು ಪುನಃ ಒಮ್ಮೆ ಸಾ.ಶ. 70ರಲ್ಲಿ ರೋಮನರ ಕೈಯಿಂದ ನಡೆಯಿತು.
ಜನರು ಹೇಳುವಂಥ ಮತ್ತು ಮಾಡುವಂಥ ಅಸಹ್ಯ ವಿಷಯಗಳಿಂದ ಯೆಹೋವನು ಕೋಪಗೊಳ್ಳುತ್ತಾನೆ, ಮತ್ತು ಗಂಭೀರ ಪಾಪಗಳನ್ನು ಮಾಡಿ ಪಶ್ಚಾತ್ತಾಪಪಡದಂಥ ತಪ್ಪಿತಸ್ಥರನ್ನು ಹತಿಸುತ್ತಾನೆ ಸಹ. ಆದರೆ ಆತನು ಹೀಗೆ ಮಾಡುವುದು, ಆತನನ್ನು ಪ್ರಸಂಗಿ 7:9ರಲ್ಲಿ ತಿಳಿಸಲ್ಪಟ್ಟಿರುವವರ ವರ್ಗದಲ್ಲಿ ಸೇರಿಸುತ್ತದೊ? ಖಂಡಿತವಾಗಿಯೂ ಇಲ್ಲ. ಗಂಭೀರ ಪಾಪಗಳ ವಿಷಯದಲ್ಲಿ ಆತನು ರೇಗುವುದು ಇಲ್ಲವೆ ಕೋಪಗೊಳ್ಳುವುದು ಸಂಪೂರ್ಣವಾಗಿ ಸಮಂಜಸವಾಗಿದೆ, ಮತ್ತು ಆತನು ಯಾವಾಗಲೂ ನ್ಯಾಯದಿಂದ ತೀರ್ಪುಮಾಡುತ್ತಾನೆ. ಯೆಹೋವನ ಬಗ್ಗೆ ಬೈಬಲ್ ಹೀಗನ್ನುತ್ತದೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋಪದೇಶಕಾಂಡ 32:4.
ವ್ಯಕ್ತಿಗಳ ವಿರುದ್ಧ ಗಂಭೀರ ಅಪರಾಧಗಳು
ದೇವರು ಪ್ರಾಚೀನ ಇಸ್ರಾಯೇಲಿಗೆ ಕೊಟ್ಟ ಧರ್ಮಶಾಸ್ತ್ರಕ್ಕನುಸಾರ, ವ್ಯಕ್ತಿಗಳ ವಿರುದ್ಧ ನಡೆಸಲ್ಪಟ್ಟ ದೊಡ್ಡ ಅಪರಾಧಗಳಿಗಾಗಿ ಗಂಭೀರವಾದ ಪರಿಣಾಮಗಳು ಇದ್ದವು. ದೃಷ್ಟಾಂತಕ್ಕಾಗಿ, ಕಳ್ಳನೊಬ್ಬನು ರಾತ್ರಿ ಸಮಯದಲ್ಲಿ ಮನೆಯೊಳಗೆ ನುಗ್ಗಿದಾಗ ಮನೆಯವನು ಅವನನ್ನು ಕೊಂದುಹಾಕುವಲ್ಲಿ, ಮನೆಯವನ ಮೇಲೆ ಯಾವುದೇ ರಕ್ತಾಪರಾಧ ಬರುತ್ತಿರಲಿಲ್ಲ. ಏಕೆಂದರೆ ಅವನು ಒಂದು ದೊಡ್ಡ ಅಪರಾಧದ ಅಮಾಯಕ ಬಲಿಯಾಗಿದ್ದನು. ಆದುದರಿಂದ ನಾವು ಹೀಗೆ ಓದುತ್ತೇವೆ: “ಕಳ್ಳನು ಕನ್ನಕೊರೆಯುತ್ತಿರುವಾಗಲೇ ಕೈಗೆ ಸಿಕ್ಕಿ ಕೊಲ್ಲಲ್ಪಟ್ಟರೆ ಅದನ್ನು ನರಹತ್ಯವೆಂದು ಎಣಿಸಕೂಡದು.”—ವಿಮೋಚನಕಾಂಡ 22:2.
ಬಲಾತ್ಕಾರ ಸಂಭೋಗಕ್ಕೊಳಗಾಗಿರುವ ಒಬ್ಬ ಸ್ತ್ರೀಯು ಕೋಪಗೊಳ್ಳಲು ಅವಳಿಗೆ ಹಕ್ಕಿದೆ, ಏಕೆಂದರೆ ದೇವರ ದೃಷ್ಟಿಯಲ್ಲಿ ಅದೊಂದು ದೊಡ್ಡ ಅಪರಾಧವಾಗಿದೆ. ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಒಬ್ಬ ಸ್ತ್ರೀಯ ಮೇಲೆ ಬಲಾತ್ಕಾರ ಸಂಭೋಗ ಮಾಡಿರುವ ಪುರುಷನಿಗೆ, ‘ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವ’ ವ್ಯಕ್ತಿಯಂತೆಯೇ ಮರಣಶಿಕ್ಷೆಯಾಗಬೇಕಿತ್ತು. (ಧರ್ಮೋಪದೇಶಕಾಂಡ 22:25, 26) ನಾವೀಗ ಆ ಧರ್ಮಶಾಸ್ತ್ರಕ್ಕೆ ಅಧೀನರಾಗಿಲ್ಲದಿದ್ದರೂ, ಬಲಾತ್ಕಾರ ಸಂಭೋಗ ಎಂಬ ಘೋರ ಅಪರಾಧದ ಕುರಿತಾಗಿ ಯೆಹೋವನಿಗೆ ಹೇಗನಿಸುತ್ತದೆ ಎಂಬುದರ ಕುರಿತು ಇದು ಒಳನೋಟವನ್ನು ಕೊಡುತ್ತದೆ.
ನಮ್ಮ ಸಮಯದಲ್ಲಿಯೂ ಬಲಾತ್ಕಾರ ಸಂಭೋಗವು ಒಂದು ದೊಡ್ಡ ಅಪರಾಧವಾಗಿದ್ದು, ಅದಕ್ಕೆ ತೀಕ್ಷ್ಣ ದಂಡನೆಗಳಿವೆ. ಅದಕ್ಕೆ ಬಲಿಯಾದವಳಿಗೆ, ಪೊಲೀಸರಿಗೆ ವರದಿಮಾಡುವ ಹಕ್ಕಿದೆ. ಈ ರೀತಿಯಲ್ಲಿ ಸೂಕ್ತ ಅಧಿಕಾರಿಗಳು ಅಪರಾಧಿಯನ್ನು ಶಿಕ್ಷಿಸಬಲ್ಲರು. ಮತ್ತು ಇದಕ್ಕೆ ಬಲಿಯಾದವಳು ಅಪ್ರಾಪ್ತ ವಯಸ್ಸಿನವಳು ಆಗಿರುವಲ್ಲಿ, ಹೆತ್ತವರು ಈ ನ್ಯಾಯಕ್ರಮವನ್ನು ಕೈಗೊಳ್ಳಬೇಕು.
ಚಿಕ್ಕ ಅಪರಾಧಗಳು
ಆದರೆ ಎಲ್ಲ ಅಪರಾಧಗಳಿಗೆ ಅಧಿಕಾರಿಗಳಿಂದ ಕ್ರಮಗೈಯುವ ಅಗತ್ಯವಿರುವುದಿಲ್ಲ. ಹೀಗಿರುವುದರಿಂದ, ಇತರರು ಮಾಡುವ ಪ್ರತಿಯೊಂದು ಚಿಕ್ಕ ತಪ್ಪಿಗಾಗಿ ನಾವು ಕೋಪಗೊಳ್ಳಬಾರದು, ಬದಲಾಗಿ ಕ್ಷಮಿಸುವವರಾಗಿರಬೇಕು. ನಾವು ಎಷ್ಟು ಸಲ ಕ್ಷಮಿಸಬೇಕು? ಅಪೊಸ್ತಲ ಪೇತ್ರನು ಯೇಸುವಿಗೆ ಹೀಗೆ ಕೇಳಿದನು: ಮತ್ತಾಯ 18:21, 22.
“ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷಮಿಸಬೇಕು? ಏಳು ಸಾರಿಯೋ”? ಇದಕ್ಕೆ ಉತ್ತರವಾಗಿ ಯೇಸು ಹೇಳಿದ್ದು: “ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.”—ಇನ್ನೊಂದು ಬದಿಯಲ್ಲಿ, ನಾವು ಇತರರಿಗೆ ಕೋಪಗೊಳ್ಳಲು ಕಾರಣಕೊಡುವುದನ್ನು ಕಡಿಮೆಗೊಳಿಸಲು, ನಮ್ಮ ಕ್ರೈಸ್ತ ವ್ಯಕ್ತಿತ್ವವನ್ನು ಉತ್ತಮಗೊಳಿಸುತ್ತಾ ಇರುವ ನಿರಂತರ ಅಗತ್ಯವಿದೆ. ದೃಷ್ಟಾಂತಕ್ಕಾಗಿ ನೀವು ಇತರರೊಂದಿಗೆ ವ್ಯವಹರಿಸುವಾಗ ಕೆಲವೊಮ್ಮೆ ಚುಚ್ಚುವ ಹಾಗೆ, ಮೊಂಡಾಗಿ, ಅವಮಾನಿಸುವ ರೀತಿಯಲ್ಲಿ ಮಾತಾಡುತ್ತೀರೊ? ಇದು ಬೇರೆಯವರಿಗೆ ಕೋಪವನ್ನೆಬ್ಬಿಸಬಹುದು. ಕೋಪಗೊಂಡದಕ್ಕಾಗಿ ನಿಮ್ಮ ಮುಂದಿರುವ ವ್ಯಕ್ತಿಯದ್ದೇ ತಪ್ಪೆಂದು ದೂಷಿಸುವ ಬದಲು, ಮತ್ತು ನಮ್ಮನ್ನು ಕ್ಷಮಿಸುವ ಭಾರ ಅವನ ಮೇಲಿದೆಯೆಂದು ಭಾವಿಸುವ ಬದಲು, ತಪ್ಪುಮಾಡಿದವನು ಆ ವ್ಯಕ್ತಿಯು ಕೋಪಗೊಳ್ಳಲು ತಾನು ಕಾರಣನೆಂದು ಅರಿತುಕೊಳ್ಳಬೇಕು. ಮೊತ್ತಮೊದಲಾಗಿ ಕೋಪವನ್ನೆಬ್ಬಿಸಲು ಯಾವುದೇ ಕಾರಣಕೊಡದಂತೆ ಕೋಪವನ್ನೆಬ್ಬಿಸಿದವನು ತನ್ನ ಕೃತ್ಯಗಳನ್ನೂ ಮಾತುಗಳನ್ನೂ ನಿಯಂತ್ರಿಸುವುದಕ್ಕೆ ಪ್ರಯಾಸಪಡಬೇಕು. ಈ ಪ್ರಯತ್ನವು, ನಾವು ಇತರರ ಮನನೋಯಿಸುವ ಸಮಯಗಳನ್ನು ಕಡಿಮೆಗೊಳಿಸುವುದು. ಬೈಬಲ್ ನಮಗೆ ನೆನಪುಹುಟ್ಟಿಸುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು; ಮತಿವಂತರ ಮಾತೇ ಮದ್ದು.” (ಜ್ಞಾನೋಕ್ತಿ 12:18) ನಾವು ಬೇರೆಯವರಿಗೆ ಕೋಪವನ್ನೆಬ್ಬಿಸುವಾಗ, ಒಂದುವೇಳೆ ತಿಳಿಯದೆ ಕೋಪವನ್ನೆಬ್ಬಿಸಿದಾಗಲೂ, ವಿಷಯವನ್ನು ಇತ್ಯರ್ಥಗೊಳಿಸುವುದರಲ್ಲಿ ಕ್ಷಮೆಕೋರುವುದು ತುಂಬ ಪರಿಣಾಮಕಾರಿಯಾಗಿರುತ್ತದೆ.
“ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿ”ಕೊಳ್ಳಬೇಕೆಂದು ದೇವರ ವಾಕ್ಯವು ತೋರಿಸುತ್ತದೆ. (ರೋಮಾಪುರ 14:19) ನಾವು ಜಾಣ್ಮೆಯುಳ್ಳವರೂ ದಯಾಪರರೂ ಆಗಿರುವಾಗ ಈ ಜ್ಞಾನೋಕ್ತಿಯು ಅನ್ವಯವಾಗುತ್ತದೆ: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” (ಜ್ಞಾನೋಕ್ತಿ 25:11) ಇಂಥ ಮಾತುಗಳು, ಮನಸ್ಸಿನ ಮೇಲೆ ಎಷ್ಟು ಹಿತಕರವಾದ ಹಾಗೂ ಹರ್ಷಕರವಾದ ಅಭಿಪ್ರಾಯವನ್ನು ಮೂಡಿಸುತ್ತವೆ! ಸೌಮ್ಯವಾದ ಜಾಣ್ಮೆಭರಿತ ಮಾತುಗಳು ಇತರರ ಗಡುಸಾದ ಮನೋಭಾವನ್ನು ಸಹ ಬದಲಾಯಿಸಬಲ್ಲದು: “ಮೃದುವಚನವು ಎಲುಬನ್ನು ಮುರಿಯುವದು.”—ಜ್ಞಾನೋಕ್ತಿ 25:15.
ಹೀಗಿರುವುದರಿಂದ ದೇವರ ವಾಕ್ಯವು ನಮಗೆ ಹೀಗೆ ಸಲಹೆಕೊಡುತ್ತದೆ: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:6) ‘ರಸವತ್ತಾಗಿ’ ಮಾಡುವುದರ ಅರ್ಥ, ನಿಮ್ಮ ಮಾತುಗಳು ಇತರರಿಗೆ ರುಚಿಕರವಾಗಿರುವಂತೆ ಮಾಡಿ, ಕೋಪಗೊಳ್ಳುವಂತೆ ಕಾರಣ ಕೊಡುವ ಸಾಧ್ಯತೆಯನ್ನು ಕಡಿಮೆಗೊಳಿಸುವುದೇ ಆಗಿದೆ. ಕ್ರೈಸ್ತರು, ಮಾತು ಹಾಗೂ ಕೃತ್ಯದಲ್ಲಿ, ‘ಸಮಾಧಾನವನ್ನು ಹಾರೈಸಿ ಅದಕ್ಕೋಸ್ಕರ ಪ್ರಯತ್ನಪಡಿ’ ಎಂಬ ಬೈಬಲಿನ ಬುದ್ಧಿವಾದವನ್ನು ಅನ್ವಯಿಸಲು ಪ್ರಯತ್ನಿಸುತ್ತಾರೆ.—1 ಪೇತ್ರ 3:11.
ಹೀಗೆ ಪ್ರಸಂಗಿ 7:9ರ ಅರ್ಥವೇನೆಂದರೆ, ಬೇರೆಯವರ ಅಲ್ಪವಾದ ಪಾಪಗಳ ಕುರಿತಾಗಿ ಕೋಪಗೊಳ್ಳುವುದರಿಂದ ನಾವು ದೂರವಿರಬೇಕು. ಏಕೆಂದರೆ ಆ ಪಾಪಗಳು ಮಾನವ ಅಪರಿಪೂರ್ಣತೆಯಿಂದಾಗಿ ಇರಬಹುದು ಇಲ್ಲವೆ ಉದ್ದೇಶಪೂರ್ವಕವೂ ಆಗಿರಬಹುದು, ಆದರೆ ಗಂಭೀರವಾದ ಪಾಪಗಳಾಗಿರಲಿಕ್ಕಿಲ್ಲ. ಆದರೆ ಒಂದು ಅಪರಾಧವು ಒಂದು ಗಂಭೀರ ಪಾಪವಾಗಿರುವಾಗ, ಅದಕ್ಕೆ ಗುರಿಯಾದ ವ್ಯಕ್ತಿಗೆ ಕೋಪಬಂದು, ಅವನು ಸರಿಯಾದ ಕ್ರಮವನ್ನು ಕೈಗೊಳ್ಳಲು ಆಯ್ಕೆಮಾಡುವನೆಂಬುದು ಅರ್ಥಮಾಡಿಕೊಳ್ಳಬಹುದಾದ ಸಂಗತಿಯಾಗಿದೆ.—ಮತ್ತಾಯ 18:15-17.
[ಪುಟ 14ರಲ್ಲಿರುವ ಚಿತ್ರ]
ಸಾ.ಶ. 70ರಲ್ಲಿ ಯೆಹೋವನು ಪಶ್ಚಾತ್ತಾಪರಹಿತ ಇಸ್ರಾಯೇಲನ್ನು ನಾಶನಕ್ಕೆ ಒಪ್ಪಿಸಿದನು
[ಪುಟ 15ರಲ್ಲಿರುವ ಚಿತ್ರ]
“ಸಮಯೋಚಿತವಾದ ಮಾತುಗಳು . . . ಬಂಗಾರದ ಹಣ್ಣುಗಳಿಗೆ ಸಮಾನ”