ನಿಮ್ಮ ಭಾವನೆಗಳೊಂದಿಗೆ ಹೆಣಗಾಡುತ್ತಿದ್ದೀರೊ?
ನಿಮ್ಮ ಭಾವನೆಗಳೊಂದಿಗೆ ಹೆಣಗಾಡುತ್ತಿದ್ದೀರೊ?
ಲೀನ ತನ್ನ ಬದುಕಿನ ಬಹುತೇಕ ಸಮಯ, ತನ್ನ ಕುರಿತಾದ ನಕಾರಾತ್ಮಕ ಭಾವನೆಗಳೊಂದಿಗೆ ಹೆಣಗಾಡಿದ್ದಾಳೆ. ಅವಳು ಹೇಳಿದ್ದು: “ಬಾಲ್ಯದಲ್ಲಿ ಅನೇಕ ವರ್ಷಗಳ ವರೆಗೆ ನನ್ನ ಮೇಲೆ ನಡೆಸಲ್ಪಟ್ಟ ಲೈಂಗಿಕ ದೌರ್ಜನ್ಯವು ನನ್ನ ಆತ್ಮಗೌರವದಲ್ಲಿ ಅಧಿಕಾಂಶ ಭಾಗವನ್ನು ಜಜ್ಜಿಹಾಕಿತು. ನಾನು ಏನೂ ಪ್ರಯೋಜನವಿಲ್ಲದವಳು ಎಂದು ನನಗನಿಸುತ್ತಿತ್ತು.” ಸೀಮೋನ್ ಎಂಬವಳು ಸಹ ತನ್ನ ಯೌವನಾವಸ್ಥೆಯ ಕಡೆಗೆ ಹಿನ್ನೋಟಬೀರುತ್ತಾ ಹೇಳುವುದು: “ನನ್ನೊಳಗೇ ಒಂದು ಶೂನ್ಯಭಾವನೆಯಿತ್ತು, ಮತ್ತು ನಾನು ಯಾವುದೇ ಬೆಲೆಯಿಲ್ಲದವಳು ಎಂಬ ಅನಿಸಿಕೆ ಇತ್ತು.” ಇಂಥ ಭಾವನೆಗಳಿಂದಾಗಿ ಬರುವ ಅಗಾಧ ದುಃಖವು ಇಂದು ಸರ್ವವ್ಯಾಪಿಯಾಗಿರುವಂತೆ ತೋರುತ್ತದೆ. ಹದಿವಯಸ್ಕರಿಗೆ ಟೆಲಿಫೋನ್‌ನಲ್ಲಿ ಸಲಹೆ ನೀಡುವ ಒಂದು ಸಂಸ್ಥೆಯು, ಅದಕ್ಕೆ ಕರೆಮಾಡುವವರಲ್ಲಿ ಅರ್ಧದಷ್ಟು ಯುವಜನರು “ಕಡಿಮೆ ಆತ್ಮಗೌರವದ ಬೆಂಬಿಡದ ಭಾವನೆಗಳ” ಬಗ್ಗೆ ತಿಳಿಸಲಿಕ್ಕಾಗಿ ಕರೆಮಾಡುತ್ತಾರೆ ಎಂದು ಹೇಳುತ್ತದೆ.
ಜನರಲ್ಲಿ ಅಸಮರ್ಥತೆಯ ಭಾವನೆಗಳು ಬರಲು ಕಾರಣ, ಅವರು ಏನೂ ಪ್ರಯೋಜನವಿಲ್ಲದವರು ಎಂಬ ಭಾವನೆಯನ್ನು ಇತರರು ಅವರಲ್ಲಿ ಹುಟ್ಟಿಸುವುದೇ ಆಗಿದೆ ಎಂದು ಕೆಲವು ತಜ್ಞರು ಹೇಳುತ್ತಾರೆ. ಇಂಥ ಮನಸ್ಥಿತಿಯು, ಒಬ್ಬ ವ್ಯಕ್ತಿಯನ್ನು ಯಾವಾಗಲೂ ತೆಗಳುತ್ತಾ ಇರುವಲ್ಲಿ, ವಿಪರೀತವಾಗಿ ಮತ್ತು ಕಠೋರ ರೀತಿಯಲ್ಲಿ ಟೀಕಿಸುತ್ತಾ ಇರುವಲ್ಲಿ ಇಲ್ಲವೆ ದೌರ್ಜನ್ಯಕರ ಶೋಷಣೆಗೆ ಒಳಪಡಿಸುವಲ್ಲಿ ವಿಕಸಿಸಬಹುದು. ಕಾರಣ ಏನೇ ಆಗಿರಲಿ, ಪರಿಣಾಮಗಳು ದುರ್ಬಲಗೊಳಿಸುವಂಥದ್ದೂ
ವಿನಾಶಕಾರಿಯೂ ಆಗಿರಬಲ್ಲವು. ಇತ್ತೀಚಿನ ವೈದ್ಯಕೀಯ ಅಧ್ಯಯನವು ಪತ್ತೆಹಚ್ಚಿದ್ದೇನೆಂದರೆ, ತಮ್ಮ ಕುರಿತಾಗಿ ನಕಾರಾತ್ಮಕ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿರುವಂಥ ಒಂದು ಪ್ರವೃತ್ತಿಯು, ತಮ್ಮ ಮೇಲೆ ಮತ್ತು ಇತರರ ಮೇಲೆ ಭರವಸೆಯಿಡದಿರುವುದೇ ಆಗಿದೆ. ಇದರಿಂದಾಗಿ ಅವರು ತಮಗರಿವಿಲ್ಲದೆ ಆಪ್ತ ಸಂಬಂಧಗಳನ್ನೂ ಸ್ನೇಹವನ್ನೂ ಶಿಥಿಲಗೊಳಿಸುತ್ತಾರೆ. “ಒಂದರ್ಥದಲ್ಲಿ, ಅವರು ಯಾವ ಸನ್ನಿವೇಶಗಳ ಬಗ್ಗೆ ಭಯಪಡುತ್ತಾರೊ ಆ ಸನ್ನಿವೇಶಗಳನ್ನು ಅವರೇ ‘ರಚಿಸುತ್ತಾರೆ’” ಎಂದು ಆ ಅಧ್ಯಯನದ ಕುರಿತಾದ ವರದಿಯು ಹೇಳುತ್ತದೆ.ಈ ರೀತಿಯ ಭಾವನೆಗಳುಳ್ಳವರು ಬೈಬಲ್ ಯಾವುದನ್ನು ಅವರ ಸ್ವಂತ ‘ಚಿಂತೆಗಳು’ ಅಥವಾ ನೆಮ್ಮದಿಗೆಡಿಸುವ ಯೋಚನೆಗಳು ಎಂದು ಕರೆಯುತ್ತದೊ ಅದಕ್ಕೆ ಬಲಿಯಾಗಿದ್ದಾರೆ. (ಕೀರ್ತನೆ 94:19) ತಾವು ಏನು ಮಾಡಿದರೂ ಅದು ಸಾಕಷ್ಟು ಒಳ್ಳೇದಾಗಿಲ್ಲವೆಂದು ಅವರಿಗನಿಸುತ್ತದೆ. ಏನಾದರೂ ತಪ್ಪಾಗುವಲ್ಲಿ, ಅವರು ಸಹಜವಾಗಿ ಕೂಡಲೆ ತಮ್ಮನ್ನೇ ದೂಷಿಸಿಕೊಳ್ಳುತ್ತಾರೆ. ಅವರ ಸಾಧನೆಗಳನ್ನು ಬೇರೆಯವರು ಮೆಚ್ಚಿದರೂ, ಅವರಿಗೆ ತಮ್ಮೊಳಗೆಯೇ ತಾವು ಇಂದಲ್ಲ ನಾಳೆ ಬಯಲಿಗೆ ಬರುವ ಸೋಗುಗಾರರಾಗಿದ್ದೇವೆ ಎಂಬ ಭಾವನೆಯಿರುತ್ತದೆ. ಸಂತೋಷದಿಂದಿರಲು ತಾವು ಅರ್ಹರಲ್ಲವೆಂದು ನಂಬುತ್ತಾ, ಅನೇಕರು ಸ್ವಘಾತುಕ ನಡವಳಿಕೆಗೆ ಬಲಿಬಿದ್ದು, ಅದನ್ನು ಸರಿಪಡಿಸಲು ತಾವು ಶಕ್ತರಲ್ಲವೆಂದು ನೆನಸುತ್ತಾರೆ. ಈ ಹಿಂದೆ ತಿಳಿಸಲ್ಪಟ್ಟಿರುವ ಲೀನಳಿಗೆ, ತನ್ನಲ್ಲಿದ್ದ ಆತ್ಮಗೌರವದ ಕೊರತೆಯಿಂದಾಗಿ ಆಹಾರಸೇವನೆಗೆ ಸಂಬಂಧಿಸಿದ ಒಂದು ಗಂಭೀರವಾದ ವ್ಯಾಧಿ ಆರಂಭವಾಯಿತು ಮತ್ತು ಅವಳಿಗೆ “ನಾನೇನನ್ನೂ ಬದಲಾಯಿಸಲು ಶಕ್ತಳಲ್ಲ ಎಂದನಿಸುತ್ತಿತ್ತು” ಎಂದು ಆಕೆ ಒಪ್ಪಿಕೊಳ್ಳುತ್ತಾಳೆ.
ಇಂಥ ನೆಮ್ಮದಿಗೆಡಿಸುವ ಯೋಚನೆಗಳೊಂದಿಗೆ ಹೆಣಗಾಡುವವರು, ಜೀವನಪೂರ್ತಿ ಹೀಗೆಯೇ ಇರಬೇಕಾಗುವುದೊ? ಇಂಥ ಭಾವನೆಗಳೊಂದಿಗೆ ಹೋರಾಡಲು ಏನಾದರೂ ಮಾಡಸಾಧ್ಯವಿದೆಯೊ? ಈ ಹೋರಾಟದಲ್ಲಿ ಯಶಸ್ವಿಯಾಗಲು ಅನೇಕರಿಗೆ ಸಹಾಯಮಾಡಿರುವ ಮೂಲತತ್ತ್ವಗಳನ್ನೂ ಪ್ರಾಯೋಗಿಕ ಬುದ್ಧಿವಾದವನ್ನೂ ಬೈಬಲ್ ಕೊಡುತ್ತದೆ. ಈ ಮೂಲತತ್ತ್ವಗಳಲ್ಲಿ ಕೆಲವು ಯಾವುವು, ಮತ್ತು ತಮ್ಮ ಭಾವನೆಗಳೊಂದಿಗೆ ಹೆಣಗಾಡುತ್ತಿರುವವರು ಜೀವನದಲ್ಲಿ ಆನಂದವನ್ನು ಪಡೆಯುವಂತೆ ಅವು ಹೇಗೆ ಸಹಾಯಮಾಡಿವೆ? ಮುಂದಿನ ಲೇಖನವು ಇದನ್ನು ವಿವರಿಸುವುದು.