ಯೆಹೋವನು ತನ್ನ ಮಾರ್ಗವನ್ನು ಅನುಸರಿಸುವವರಿಗೆ ಹೇರಳವಾಗಿ ಪ್ರತಿಫಲ ನೀಡುತ್ತಾನೆ
ಜೀವನ ಕಥೆ
ಯೆಹೋವನು ತನ್ನ ಮಾರ್ಗವನ್ನು ಅನುಸರಿಸುವವರಿಗೆ ಹೇರಳವಾಗಿ ಪ್ರತಿಫಲ ನೀಡುತ್ತಾನೆ
ರಾಮ್ಯೂಆಲ್ಟ್ ಸ್ಟಾಫ್‌ಸ್ಕೀ ಅವರು ಹೇಳಿದಂತೆ
ಎರಡನೇ ಲೋಕ ಯುದ್ಧವು 1939ರ ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭಗೊಂಡಾಗ, ತೀವ್ರವಾದ ಕಾದಾಟವು ನಡೆಯುತ್ತಿದ್ದ ಸ್ಥಳವು ಉತ್ತರ ಪೋಲೆಂಡ್ ಆಗಿತ್ತು. ಒಂಬತ್ತು ವರ್ಷ ಪ್ರಾಯದ ನಾನು ಕುತೂಹಲ ಮನೋಭಾವದಿಂದ ಸಮೀಪದ ಕದನರಂಗದಲ್ಲಿ ಏನು ನಡೆಯುತ್ತಿತ್ತೋ ಅದನ್ನು ನೋಡಲಿಕ್ಕಾಗಿ ಅಲ್ಲಿಗೆ ಹೋದೆ. ಅಲ್ಲಿ ನಾನು ಏನು ನೋಡಿದೆನೋ ಅದು ವಿಪರೀತ ಭಯಂಕರವಾಗಿತ್ತು—ಅಲ್ಲಲ್ಲಿ ಹೆಣಗಳು ಬಿದ್ದಿದ್ದವು ಮತ್ತು ಉಸಿರುಗಟ್ಟಿಸುವಂಥ ಹೊಗೆಯು ಗಾಳಿಯಲ್ಲಿ ತುಂಬಿಕೊಂಡಿತ್ತು. ಸುರಕ್ಷಿತವಾಗಿ ಹೇಗೆ ಮನೆಗೆ ತಲಪುವುದು ಎಂಬುದರ ಕುರಿತು ನಾನು ಮುಖ್ಯವಾಗಿ ಆಲೋಚಿಸುತ್ತಾ ಇದ್ದೆನಾದರೂ, ಕೆಲವೊಂದು ಪ್ರಶ್ನೆಗಳು ನನ್ನ ಮನಸ್ಸಿಗೆ ಬಂದವು: “ಇಂಥ ಭೀಕರ ಸಂಗತಿಗಳು ನಡೆಯುವಂತೆ ದೇವರು ಏಕೆ ಬಿಡುತ್ತಾನೆ? ಆತನು ಯಾರ ಪಕ್ಷದಲ್ಲಿದ್ದಾನೆ?”
ಯುದ್ಧವು ಕೊನೆಗೊಳ್ಳುವ ಸ್ವಲ್ಪ ಮುಂಚೆ, ಜರ್ಮನ್ ಸರಕಾರಕ್ಕಾಗಿ ಕೆಲಸಮಾಡುವಂತೆ ಯೌವನಸ್ಥರನ್ನು ಒತ್ತಾಯಿಸಲಾಯಿತು. ಇದನ್ನು ನಿರಾಕರಿಸುವವನ ಕುತ್ತಿಗೆಗೆ “ದ್ರೋಹಿ” ಅಥವಾ “ದುಷ್ಕರ್ಮಿ” ಎಂಬ ಸೂಚನಾಫಲಕವನ್ನು ನೇತುಹಾಕಿ, ಅವನನ್ನು ಒಂದು ಮರದ ಮೇಲೆಯೊ ಸೇತುವೆಯ ಮೇಲೆಯೊ ಗಲ್ಲಿಗೇರಿಸಲಾಗುತ್ತಿತ್ತು. ಗಡಿನೀಯ ಎಂಬ ನಮ್ಮ ಊರು, ಜರ್ಮನ್ ಮತ್ತು ಸೋವಿಯತ್ ಸೈನ್ಯಗಳು ಕಾದಾಡುತ್ತಿದ್ದ ಕ್ಷೇತ್ರದ ನಡುವೆ ನೆಲೆಸಿತ್ತು. ನೀರನ್ನು ತರಲಿಕ್ಕಾಗಿ ನಾವು ಊರಿನ ಹೊರಗೆ ಹೋಗುತ್ತಿದ್ದಾಗ, ಗುಂಡುಗಳು ಮತ್ತು ಬಾಂಬ್‌ಗಳು ನಮ್ಮ ತಲೆಯ ಮೇಲಿನಿಂದ ವಿಸ್ ಎಂದು ಶಬ್ದಮಾಡುತ್ತಾ ವೇಗವಾಗಿ ಹಾರಿಹೋಗುತ್ತಿದ್ದವು, ಮತ್ತು ಇಂಥ ಒಂದು ಸಂದರ್ಭದಲ್ಲೇ ನನ್ನ ತಮ್ಮನಾದ ಹೆನ್‌ರಿಕ್ ಕೊಲ್ಲಲ್ಪಟ್ಟನು. ಈ ಭೀಕರ ಪರಿಸ್ಥಿತಿಗಳ ಕಾರಣದಿಂದ ನನ್ನ ತಾಯಿಯವರು ತಮ್ಮ ನಾಲ್ಕು ಮಂದಿ ಮಕ್ಕಳಾದ ನಮ್ಮನ್ನು ಸುರಕ್ಷೆಗಾಗಿ ಒಂದು ಕಟ್ಟಡದ ನೆಲಮಾಳಿಗೆಗೆ ಸ್ಥಳಾಂತರಿಸಿದರು. ಅಲ್ಲಿ ಎವ್‌ಗೇನ್‌ಯೂಶ್ ಎಂಬ ಹೆಸರಿನ ನನ್ನ ಎರಡು ವರ್ಷದ ತಮ್ಮನು ಗಳಚರ್ಮರೋಗ (ಡಿಪ್ತೀರಿಯ)ದಿಂದ ತೀರಿಕೊಂಡನು.
ಪುನಃ ಒಮ್ಮೆ ನಾನು, “ದೇವರು ಎಲ್ಲಿದ್ದಾನೆ? ಆತನು ಈ ಎಲ್ಲ ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?” ಎಂದು ಸ್ವತಃ ಕೇಳಿಕೊಂಡೆ. ನಾನು ಒಬ್ಬ ಹುರುಪಿನ ಕ್ಯಾಥೊಲಿಕನಾಗಿದ್ದು ಕ್ರಮವಾಗಿ ಚರ್ಚಿಗೆ ಹಾಜರಾಗುತ್ತಿದ್ದೆನಾದರೂ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಾಗಲಿಲ್ಲ.
ಬೈಬಲ್ ಸತ್ಯವನ್ನು ಅಂಗೀಕರಿಸಿದ್ದು
ನನ್ನ ಪ್ರಶ್ನೆಗಳಿಗೆ ಉತ್ತರಗಳು ಒಂದು ಅನಿರೀಕ್ಷಿತ ಮೂಲದಿಂದ ಬಂದವು. 1945ರಲ್ಲಿ ಯುದ್ಧವು ಕೊನೆಗೊಂಡಿತು, ಮತ್ತು 1947ರ ಆರಂಭದಲ್ಲಿ ಯೆಹೋವನ ಸಾಕ್ಷಿಗಳಲ್ಲೊಬ್ಬರು ಗಡಿನೀಯದಲ್ಲಿದ್ದ ನಮ್ಮ ಮನೆಗೆ ಭೇಟಿಯನ್ನಿತ್ತರು. ನನ್ನ ತಾಯಿ ಆ ಸಾಕ್ಷಿಯೊಂದಿಗೆ ಮಾತಾಡಿದರು ಮತ್ತು ಅವರು ಏನು ಹೇಳಿದರೋ ಅದರಲ್ಲಿ ಸ್ವಲ್ಪಾಂಶವನ್ನು ಮಾತ್ರ ನಾನು ಕೇಳಿಸಿಕೊಂಡೆ. ಅದು ತರ್ಕಸಮ್ಮತವಾಗಿ ತೋರಿತು, ಆದುದರಿಂದ ನಾವು ಕ್ರೈಸ್ತ ಕೂಟವೊಂದಕ್ಕೆ ಹೋಗುವ ಆಮಂತ್ರಣವನ್ನು ಸ್ವೀಕರಿಸಿದೆವು. ಬೈಬಲಿನಲ್ಲಿರುವ ಸತ್ಯವನ್ನು ನಾನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಿಲ್ಲವಾದರೂ, ಒಂದೇ ತಿಂಗಳ ಬಳಿಕ ನಾನು ಸ್ಥಳಿಕ ಸಾಕ್ಷಿಗಳ ಒಂದು ಗುಂಪಿನೊಂದಿಗೆ ಜೊತೆಗೂಡಿ, ಯುದ್ಧ ಮತ್ತು ದುಷ್ಕೃತ್ಯಗಳಿಂದ ಮುಕ್ತವಾಗಿರುವಂಥ ಒಂದು ಉತ್ತಮ ಲೋಕದ ಕುರಿತು ಇತರರಿಗೆ ಸಾರಲಾರಂಭಿಸಿದೆ. ಇದು ನನಗೆ ಅಪಾರ ಆನಂದವನ್ನು ನೀಡಿತು.
ಇಸವಿ 1947ರ ಸೆಪ್ಟೆಂಬರ್ ತಿಂಗಳಿನಲ್ಲಿ, ಸಾಪಾಟ್ ಪ್ರಾಂತದಲ್ಲಿ ನಡೆದ ಸರ್ಕಿಟ್ ಸಮ್ಮೇಳನವೊಂದರಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ಮುಂದಿನ ವರ್ಷದ ಮೇ ತಿಂಗಳಿನಲ್ಲಿ, ನನ್ನ ಹೆಚ್ಚಿನ ಸಮಯವನ್ನು ಇತರರಿಗೆ ಬೈಬಲ್ ಸಂದೇಶವನ್ನು ಸಾರುವುದರಲ್ಲಿ ವಿನಿಯೋಗಿಸುವ ಮೂಲಕ ನಾನು ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸಿದೆ. ಸ್ಥಳಿಕ ಪಾದ್ರಿಯು ನಮ್ಮ ಕೆಲಸವನ್ನು ಬಲವಾಗಿ ವಿರೋಧಿಸಿದನು ಮತ್ತು ನಮ್ಮ ವಿರುದ್ಧ ಹಿಂಸಾಚಾರವನ್ನು ಚಿತಾಯಿಸಿದನು. ಒಮ್ಮೆ ಕೋಪಗೊಂಡಿದ್ದ ಒಂದು ಗುಂಪು ನಮ್ಮ ಮೇಲೆ ಆಕ್ರಮಣ ನಡೆಸಿ, ನಮಗೆ ಕಲ್ಲೆಸೆಯಿತು ಮತ್ತು ನಮ್ಮನ್ನು ಚೆನ್ನಾಗಿ ಥಳಿಸಿತು. ಇನ್ನೊಂದು ಸಂದರ್ಭದಲ್ಲಿ, ನಮ್ಮ ಮೇಲೆ ಹಲ್ಲೆ ನಡೆಸುವಂತೆ ಸ್ಥಳಿಕ ನನ್‌ಗಳು ಮತ್ತು ಪಾದ್ರಿಗಳು ಒಂದು ಗುಂಪನ್ನು ಹುರಿದುಂಬಿಸಿದರು. ನಾವು ಒಂದು ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದುಕೊಂಡೆವು, ಆದರೆ ಆ ಗುಂಪು ಕಟ್ಟಡವನ್ನು ಸುತ್ತುವರಿದು ನಮಗೆ ಹೊಡೆಯುವ ಬೆದರಿಕೆಯನ್ನೊಡ್ಡಿತು. ಕೊನೆಗೆ, ಹೆಚ್ಚಿನ ಪೊಲೀಸ್ ಅಧಿಕಾರಿಗಳು ಬಂದು ಬಲವಾದ ಬೆಂಗಾವಲಿನೊಂದಿಗೆ ನಮ್ಮನ್ನು ಕರೆದೊಯ್ದರು.
ಆ ಸಮಯದಲ್ಲಿ ನಮ್ಮ ಕ್ಷೇತ್ರದಲ್ಲಿ ಯಾವುದೇ ಸಭೆ ಇರಲಿಲ್ಲ. ಕೆಲವೊಮ್ಮೆ ನಾವು ಇಡೀ ರಾತ್ರಿ ಕಾಡಿನಲ್ಲಿ ಉಳಿದೆವು. ಈ ಎಲ್ಲ ಪರಿಸ್ಥಿತಿಗಳ ಮಧ್ಯೆಯೂ ಸಾರುವ ಕೆಲಸವನ್ನು ಮುಂದುವರಿಸಲು ಶಕ್ತರಾದುದಕ್ಕಾಗಿ ನಮಗೆ ಸಂತೋಷವಾಯಿತು. ಇಂದು ಆ ಕ್ಷೇತ್ರದಲ್ಲಿ ಆಧ್ಯಾತ್ಮಿಕವಾಗಿ ಬಲವಾಗಿರುವ ಸಭೆಗಳಿವೆ.
ಬೆತೆಲ್ ಸೇವೆ ಮತ್ತು ಬಂಧನ
ಇಸವಿ 1949ರಲ್ಲಿ ವೂಚ್‌ನಲ್ಲಿದ್ದ ಬೆತೆಲ್ ಗೃಹಕ್ಕೆ ನನ್ನನ್ನು ಆಮಂತ್ರಿಸಲಾಯಿತು. ಇಂಥ ಸ್ಥಳದಲ್ಲಿ ಸೇವೆಮಾಡುವುದು ಎಂಥ ಒಂದು ಸುಯೋಗವಾಗಿತ್ತು! ದುಃಖಕರವಾಗಿ, ನಾನು ಅಲ್ಲಿ ಹೆಚ್ಚು ದಿನ ಉಳಿಯಲಾಗಲಿಲ್ಲ. 1950ರ ಜೂನ್ ತಿಂಗಳಿನಲ್ಲಿ, ನಮ್ಮ ಕೆಲಸವು ಅಧಿಕೃತವಾಗಿ ನಿಷೇಧಿಸಲ್ಪಡುವ ಒಂದು ತಿಂಗಳಿಗೆ ಮುಂಚೆ, ಬೆತೆಲ್‌ನಲ್ಲಿದ್ದ ಇತರ ಸಹೋದರರೊಂದಿಗೆ ನನ್ನನ್ನೂ ಬಂಧಿಸಲಾಯಿತು. ನಾನು ಸೆರೆಮನೆಗೆ ಕರೆದೊಯ್ಯಲ್ಪಟ್ಟೆ, ಇದರ ಫಲಿತಾಂಶವಾಗಿ ನಾನು ಕ್ರೂರವಾದ ವಿಚಾರಣೆಯನ್ನು ಎದುರಿಸಬೇಕಾಯಿತು.
ಕ್ರಮವಾಗಿ ನ್ಯೂ ಯಾರ್ಕ್‌ಗೆ ಹೋಗುತ್ತಿದ್ದ ಒಂದು ಹಡಗಿನಲ್ಲಿ ನನ್ನ ತಂದೆಯವರು ಕೆಲಸಮಾಡುತ್ತಿದ್ದುದರಿಂದ, ವಿಚಾರಣೆಯನ್ನು ನಡೆಸುತ್ತಿದ್ದ ಅಧಿಕಾರಿಗಳು, ತಂದೆಯವರು ಯುನೈಟೆಡ್ ಸ್ಟೇಟ್ಸ್‌ನ ಪರವಾಗಿ ಗೂಢಚಾರಿಕೆ ನಡೆಸುತ್ತಿದ್ದರೆಂದು ನಾನು ಒಪ್ಪಿಕೊಳ್ಳುವಂತೆ ಮಾಡಲು ಪ್ರಯತ್ನಿಸಿದರು. ನಾನು ನಿರ್ದಯೆಯಿಂದ ಕೂಡಿದ ವಿಚಾರಣೆಗೆ ಒಳಪಡಿಸಲ್ಪಟ್ಟೆ. ಅಷ್ಟುಮಾತ್ರವಲ್ಲ, ಆ ಸಮಯದಲ್ಲಿ ಪೋಲೆಂಡ್‌ನಲ್ಲಿ ನಮ್ಮ ಚಟುವಟಿಕೆಯ ಮೇಲ್ವಿಚಾರಣೆಮಾಡುತ್ತಿದ್ದ ಸಹೋದರ ವಿಲ್‌ಹೆಲ್ಮ್ ಶೈಡರ್‌ರ ವಿರುದ್ಧ ನಾನು ಸಾಕ್ಷಿನೀಡುವಂತೆ ಮಾಡಲು ನಾಲ್ಕು ಮಂದಿ ಆಫೀಸರರು ಏಕಕಾಲದಲ್ಲೇ ಪ್ರಯತ್ನಿಸಿದರು. ಅವರು ದಪ್ಪ ಕೋಲುಗಳಿಂದ ನನ್ನ ಹಿಮ್ಮಡಿಗಳಿಗೆ ಹೊಡೆದರು. ನನಗೆ ರಕ್ತ ಸುರಿಯುತ್ತಾ ಇದ್ದು, ಇನ್ನು ಇದನ್ನೆಲ್ಲಾ ತಡೆದುಕೊಳ್ಳುವ ಶಕ್ತಿ ನನಗಿಲ್ಲ ಎಂಬ ಅನಿಸಿಕೆಯೊಂದಿಗೆ ಬಿದ್ದಿದ್ದಾಗ, “ಯೆಹೋವನೇ ನನಗೆ ಸಹಾಯಮಾಡು!” ಎಂದು ಗಟ್ಟಿಯಾಗಿ ಕೂಗಿದೆ. ನನ್ನನ್ನು ಹಿಂಸಿಸುತ್ತಿದ್ದವರು ಆಶ್ಚರ್ಯಗೊಂಡು, ನನಗೆ ಹೊಡೆಯುವುದನ್ನು ನಿಲ್ಲಿಸಿದರು. ಕೆಲವೇ ನಿಮಿಷಗಳಲ್ಲಿ ಅವರು ನಿದ್ರೆಹೋದರು. ನನಗೆ ಸ್ವಲ್ಪ ಉಪಶಮನವಾಗಿ ನಾನು ಪುನಃ ಬಲವನ್ನು ಪಡೆದುಕೊಂಡೆ. ಇದು, ಯೆಹೋವನ ಸಮರ್ಪಿತ ಸೇವಕರು ಆತನಿಗೆ ಮೊರೆಯಿಡುವಾಗ ಆತನು ಪ್ರೀತಿಯಿಂದ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ನನಗೆ ಮನಗಾಣಿಸಿತು. ಇದು ನನ್ನ ನಂಬಿಕೆಯನ್ನು ಬಲಪಡಿಸಿತು ಮತ್ತು ದೇವರಲ್ಲಿ ನನ್ನ ಪೂರ್ಣ ಭರವಸೆಯನ್ನಿಡುವಂತೆ ನನಗೆ ಪಾಠವನ್ನು ಕಲಿಸಿತು.
ಆ ವಿಚಾರಣೆಯ ಅಂತಿಮ ವರದಿಯಲ್ಲಿ, ನನ್ನಿಂದ ಕೊಡಲ್ಪಟ್ಟದ್ದೆಂದು ಹೇಳಲಾದ ಸುಳ್ಳು ಸಾಕ್ಷ್ಯವು ಒಳಗೂಡಿತ್ತು. ನಾನು ಇದನ್ನು ಪ್ರತಿಭಟಿಸಿದಾಗ, “ಇದನ್ನು ನೀನು ಕೋರ್ಟಿನಲ್ಲೇ ವಿವರಿಸುವಿ!” ಎಂದು ಆ ಅಧಿಕಾರಿಯು ನನಗೆ ಹೇಳಿದನು. ಈ ವಿಷಯದಲ್ಲಿ ಚಿಂತಿಸದಿರುವಂತೆ ಸೆರೆಕೋಣೆಯಲ್ಲಿದ್ದ ಒಬ್ಬ ಸ್ನೇಹಪರ ವ್ಯಕ್ತಿಯು ಹೇಳಿದನು; ಏಕೆಂದರೆ ಒಬ್ಬ ಮಿಲಿಟರಿ ಪ್ರಾಸಿಕ್ಯೂಟರ್‌ನಿಂದ ಅಂತಿಮ ವರದಿ ದೃಢೀಕರಿಸಲ್ಪಡುವ ಕಾರಣ, ಸುಳ್ಳು ಸಾಕ್ಷ್ಯವನ್ನು ಅಲ್ಲಗಳೆಯಲು ನನಗಿದು ಒಂದು ಅವಕಾಶವನ್ನು ಕೊಡಲಿತ್ತು. ಅವನು ಹೇಳಿದಂತೆಯೇ ಸಂಭವಿಸಿತು.
ಸರ್ಕಿಟ್ ಕೆಲಸ ಮತ್ತು ಇನ್ನೊಮ್ಮೆ ಸೆರೆವಾಸ
ಇಸವಿ 1951ರ ಜನವರಿಯಲ್ಲಿ ನನಗೆ ಬಿಡುಗಡೆಯಾಯಿತು. ಒಂದು ತಿಂಗಳ ಬಳಿಕ ನಾನು ಸಂಚರಣ ಮೇಲ್ವಿಚಾರಕನಾಗಿ ಸೇವೆಮಾಡಲಾರಂಭಿಸಿದೆ. ನಿಷೇಧವಿದ್ದರೂ, ಸಭೆಗಳನ್ನು ಬಲಗೊಳಿಸಲಿಕ್ಕಾಗಿ ಮತ್ತು ಭದ್ರತಾ ಪೊಲೀಸರ ಚಟುವಟಿಕೆಯ ಕಾರಣ ಚದರಿಹೋಗಿದ್ದ ಜೊತೆ ಸಾಕ್ಷಿಗಳಿಗೆ ಸಹಾಯಮಾಡಲಿಕ್ಕಾಗಿ ನಾನು ಬೇರೆ ಸಹೋದರರೊಂದಿಗೆ ಕಾರ್ಯನಡಿಸಿದೆ. ಶುಶ್ರೂಷೆಯಲ್ಲಿ ಮುಂದುವರಿಯುವಂತೆ ನಾವು ಸಹೋದರರನ್ನು ಉತ್ತೇಜಿಸಿದೆವು. ತದನಂತರದ ವರ್ಷಗಳಲ್ಲಿ ಈ ಸಹೋದರರು ಧೈರ್ಯದಿಂದ ಸಂಚರಣ ಮೇಲ್ವಿಚಾರಕರಿಗೆ ಬೆಂಬಲ ನೀಡಿದರು ಮತ್ತು ಬೈಬಲ್ ಸಾಹಿತ್ಯವನ್ನು ಗುಪ್ತವಾಗಿ ಮುದ್ರಿಸುವ ಮತ್ತು ವಿತರಿಸುವ ಕೆಲಸವನ್ನು ಮುಂದುವರಿಸಿದರು.
ಇಸವಿ 1951ರ ಏಪ್ರಿಲ್ ತಿಂಗಳಲ್ಲಿ ಒಂದು ದಿನ ಕ್ರೈಸ್ತ ಕೂಟವೊಂದಕ್ಕೆ ಹಾಜರಾದ ಬಳಿಕ, ನನ್ನನ್ನು ಜಾಗರೂಕತೆಯಿಂದ ಗಮನಿಸುತ್ತಿದ್ದ ಭದ್ರತಾ ಅಧಿಕಾರಿಗಳು ಬೀದಿಯಲ್ಲೇ ಸೆರೆಹಿಡಿದರು. ನಾನು ಅವರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ್ದರಿಂದ, ಬಿಡ್‌ಗಾಸ್ಟ್‌ನಲ್ಲಿದ್ದ ಒಂದು ಸೆರೆಮನೆಗೆ ನನ್ನನ್ನು ಕರೆದೊಯ್ದರು ಮತ್ತು ಅದೇ ರಾತ್ರಿ ನನ್ನ ವಿಚಾರಣೆಯನ್ನು ಆರಂಭಿಸಿದರು. ಊಟ ಮತ್ತು ನೀರು ಇಲ್ಲದೆ, ಅಧಿಕಾರಿಗಳ ಸಿಗರೇಟ್‌ಗಳಿಂದ ಹೊರಡುವ ದಟ್ಟ ಹೊಗೆಯ ನಡುವೆ, ಆರು ದಿನ ಹಗಲೂರಾತ್ರಿ ಒಂದು ಗೋಡೆಯ ಬಳಿ ನಿಂತುಕೊಳ್ಳುವಂತೆ ಆಜ್ಞೆ ನೀಡಲಾಯಿತು. ನನಗೆ ದಪ್ಪ ದೊಣ್ಣೆಯಿಂದ ಹೊಡೆಯಲಾಯಿತು ಮತ್ತು ಸಿಗರೇಟ್‌ಗಳಿಂದ ಸುಡುಗಾಯಗಳನ್ನು ಮಾಡಲಾಯಿತು. ನಾನು ಪ್ರಜ್ಞೆತಪ್ಪಿ ಬಿದ್ದಾಗ ಅವರು ನನ್ನ ಮೇಲೆ ನೀರನ್ನು ಎರಚುತ್ತಿದ್ದರು ಮತ್ತು ವಿಚಾರಣೆಯನ್ನು ಮುಂದುವರಿಸುತ್ತಿದ್ದರು. ಇದನ್ನು ಸಹಿಸಿಕೊಳ್ಳಲಿಕ್ಕಾಗಿ ಬಲವನ್ನು ನೀಡುವಂತೆ ನಾನು ಯೆಹೋವನ ಬಳಿ ಬೇಡಿಕೊಂಡೆ ಮತ್ತು ಆತನು ನನಗೆ ಬೆಂಬಲ ನೀಡಿದನು.
ಬಿಡ್‌ಗಾಸ್ಟ್ ಸೆರೆಮನೆಯಲ್ಲಿದ್ದರಿಂದ ಪ್ರಯೋಜನಗಳೂ ದೊರೆತವು. ಅಲ್ಲಿದ್ದಾಗ ನಾನು, ಬೇರೆ ಯಾವುದೇ ರೀತಿಯಲ್ಲಿ ತಲಪಲು ಅಸಾಧ್ಯವಾಗಿದ್ದಂಥ ಜನರಿಗೆ ಬೈಬಲ್ ಸತ್ಯವನ್ನು ತಿಳಿಸಲು ಶಕ್ತನಾದೆ. ಮತ್ತು ಸಾಕ್ಷಿಯನ್ನು ನೀಡಲಿಕ್ಕಾಗಿ ಅಲ್ಲಿ ಅನೇಕ ಅವಕಾಶಗಳು ಇದ್ದವು. ಸೆರೆವಾಸಿಗಳ ಶೋಚನೀಯ, ಅನೇಕವೇಳೆ ನಿರೀಕ್ಷಾಹೀನ ಸನ್ನಿವೇಶಗಳ ಕಾರಣ ಅವರು ಸುವಾರ್ತೆಯನ್ನು ಒಳ್ಳೇ ರೀತಿಯಲ್ಲಿ ಕೇಳಿಸಿಕೊಳ್ಳುತ್ತಿದ್ದರು.
ಎರಡು ಮುಖ್ಯ ಬದಲಾವಣೆಗಳು
ಇಸವಿ 1952ರಲ್ಲಿ ನನಗೆ ಬಿಡುಗಡೆಯಾದ ಬಳಿಕ, ನೀಲಾ ಎಂಬ ಹುರುಪಿನ ಪಯನೀಯರ್ ಸಹೋದರಿಯನ್ನು ನಾನು ಭೇಟಿಯಾದೆ. ಅವಳು ಪೋಲೆಂಡ್‌ನ ದಕ್ಷಿಣಭಾಗದಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿದ್ದಳು. ಸಮಯಾನಂತರ ಅವಳು, ನಮ್ಮ ಸಾಹಿತ್ಯವು ಎಲ್ಲಿ ಮುದ್ರಿಸಲ್ಪಡುತ್ತಿತ್ತೋ ಆ “ಬೇಕರಿ” ಎಂದು ಕರೆಯಲ್ಪಡುತ್ತಿದ್ದ ಗುಪ್ತ ಸ್ಥಳದಲ್ಲಿ ಕೆಲಸಮಾಡಿದಳು. ಇದು ತುಂಬ ಕಷ್ಟಕರವಾದ ಕೆಲಸವಾಗಿದ್ದು, ಜಾಗರೂಕತೆ ಮತ್ತು ಸ್ವತ್ಯಾಗವನ್ನು ಅಗತ್ಯಪಡಿಸುವಂಥದ್ದಾಗಿತ್ತು. ನಾವು 1954ರಲ್ಲಿ ಮದುವೆಯಾದೆವು ಮತ್ತು ನಮ್ಮ ಮಗಳಾದ ಲಿಡೀಆಳು ಜನಿಸುವ ತನಕ ಪೂರ್ಣ ಸಮಯದ ಸೇವೆಯನ್ನು ಮುಂದುವರಿಸಿದೆವು. ಆಮೇಲೆ ನಾವು, ಸಂಚರಣ ಕೆಲಸವನ್ನು ನಾನು ಮುಂದುವರಿಸಲಾಗುವಂತೆ ನೀಲಾ ತನ್ನ ಪೂರ್ಣ ಸಮಯದ ಸೇವೆಯನ್ನು ನಿಲ್ಲಿಸಿ ಮನೆಯಲ್ಲಿದ್ದು ನಮ್ಮ ಮಗಳನ್ನು ನೋಡಿಕೊಳ್ಳುವ ನಿರ್ಧಾರವನ್ನು ಮಾಡಿದೆವು.
ಅದೇ ವರ್ಷ ನಾವು ಇನ್ನೊಂದು ಪ್ರಮುಖ ನಿರ್ಧಾರವನ್ನು ಎದುರಿಸಿದೆವು. ಪೋಲೆಂಡ್‌ನ ಮೂರನೇ ಒಂದು ಭಾಗವನ್ನು ಆವರಿಸಿದ್ದ ಒಂದು ಕ್ಷೇತ್ರದಲ್ಲಿ ಒಬ್ಬ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆಮಾಡುವಂತೆ ನನ್ನನ್ನು ಕೇಳಿಕೊಳ್ಳಲಾಯಿತು. ನಾವು ಈ ವಿಷಯವನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದೆವು. ನಿಷೇಧದ ಕೆಳಗಿದ್ದ ನಮ್ಮ ಸಹೋದರರನ್ನು ಬಲಪಡಿಸುವುದು ಎಷ್ಟು ಪ್ರಾಮುಖ್ಯವಾಗಿತ್ತೆಂಬುದು ನನಗೆ ತಿಳಿದಿತ್ತು. ಆ ಕಾಲಾವಧಿಯಲ್ಲಿ ಅನೇಕ ಸಹೋದರರು ಬಂಧಿಸಲ್ಪಟ್ಟಿದ್ದರು, ಆದುದರಿಂದ ಆಧ್ಯಾತ್ಮಿಕ ಉತ್ತೇಜನದ ಅಗತ್ಯವು ಅತ್ಯಧಿಕವಾಗಿತ್ತು. ನೀಲಾಳ ಬೆಂಬಲದಿಂದ ನಾನು ಆ ನೇಮಕವನ್ನು ಸ್ವೀಕರಿಸಿದೆ. ಸುಮಾರು 38 ವರ್ಷಗಳ ವರೆಗೆ ಒಬ್ಬ ಜಿಲ್ಲಾ ಮೇಲ್ವಿಚಾರಕನಾಗಿ ಸೇವೆಮಾಡುವಂತೆ ಯೆಹೋವನು ನನಗೆ ಸಹಾಯಮಾಡಿದನು.
“ಬೇಕರಿಗಳ” ಮೇಲ್ವಿಚಾರಣೆ
ಆ ದಿನಗಳಲ್ಲಿ, ಏಕಾಂತ ಸ್ಥಳಗಳಲ್ಲಿ ನೆಲೆಸಿದ್ದ “ಬೇಕರಿ”ಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾ ಮೇಲ್ವಿಚಾರಕರದ್ದಾಗಿತ್ತು. ನಮ್ಮ ಮುದ್ರಣ ಕಾರ್ಯಾಚರಣೆಯನ್ನು ಕಂಡುಹಿಡಿದು, ಅದನ್ನು ನಿಲ್ಲಿಸಲು ಪ್ರಯತ್ನಿಸುತ್ತಾ ಪೊಲೀಸರು ಎಡೆಬಿಡದೆ ನಮ್ಮನ್ನು ಹಿಂಬಾಲಿಸುತ್ತಿದ್ದರು. ಕೆಲವೊಮ್ಮೆ ಅವರು ಸಫಲರಾದರು, ಆದರೆ ನಾವೆಂದೂ ಅಗತ್ಯವಿರುವ ಆಧ್ಯಾತ್ಮಿಕ ಆಹಾರದ ಕೊರತೆಯನ್ನು ಅನುಭವಿಸಲಿಲ್ಲ. ಯೆಹೋವನು ನಮ್ಮನ್ನು ಪರಾಮರಿಸುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ವ್ಯಕ್ತವಾಗಿತ್ತು.
ಒಬ್ಬ ವ್ಯಕ್ತಿಯು ಮುದ್ರಣದ ಶ್ರಮಭರಿತ ಹಾಗೂ ಅಪಾಯಕರ ಕೆಲಸವನ್ನು ಮಾಡಲು ಆಮಂತ್ರಿಸಲ್ಪಡಬೇಕಾದರೆ, ಅವನು ನಿಷ್ಠನೂ ಎಚ್ಚರಿಕೆಯುಳ್ಳವನೂ ಸ್ವತ್ಯಾಗಮನೋಭಾವದವನೂ ವಿಧೇಯನೂ ಆಗಿರಬೇಕಿತ್ತು. ಈ ಗುಣಗಳಿಂದಾಗಿಯೇ ಒಂದು “ಬೇಕರಿ”ಯು
ಸುರಕ್ಷಿತವಾಗಿ ಕಾರ್ಯನಡಿಸುತ್ತಾ ಮುಂದುವರಿಯಸಾಧ್ಯವಿತ್ತು. ಗುಪ್ತವಾದ ಮುದ್ರಣಕ್ಕಾಗಿ ಒಳ್ಳೇ ಸ್ಥಳವನ್ನು ಕಂಡುಕೊಳ್ಳುವುದು ಸಹ ತುಂಬ ಕಷ್ಟಕರವಾಗಿತ್ತು. ಕೆಲವು ಸ್ಥಳಗಳು ಸೂಕ್ತವಾಗಿ ಕಂಡುಬಂದವಾದರೂ, ಅಲ್ಲಿನ ಸಹೋದರರು ಹೆಚ್ಚು ವಿವೇಕಭರಿತರಾಗಿರಲಿಲ್ಲ. ಬೇರೆ ಕಡೆಗಳಲ್ಲಿ ಸ್ಥಳವು ಸೂಕ್ತವಾಗಿರಲಿಲ್ಲ, ಆದರೆ ಸಹೋದರರು ವಿವೇಕಭರಿತರಾಗಿದ್ದರು. ಸಹೋದರರು ಅಸಾಮಾನ್ಯವಾದ ತ್ಯಾಗಗಳನ್ನು ಮಾಡಲು ಸಿದ್ಧರಿದ್ದರು. ಯಾರೊಂದಿಗೆ ಕೆಲಸಮಾಡುವ ಸುಯೋಗ ನನಗಿತ್ತೋ ಆ ಸಹೋದರ ಸಹೋದರಿಯರೆಲ್ಲರನ್ನು ನಾನು ನಿಜವಾಗಿಯೂ ಗಣ್ಯಮಾಡಿದೆ.ಸುವಾರ್ತೆಯನ್ನು ಸಮರ್ಥಿಸುವುದು
ಆ ಕಷ್ಟಕರ ವರ್ಷಗಳಲ್ಲಿ, ನಾವು ಕಾನೂನುಬಾಹಿರ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ಒಳಗೂಡುತ್ತಿದ್ದೇವೆ ಎಂಬ ಸತತ ಆರೋಪಕ್ಕೆ ಒಳಪಡಿಸಲ್ಪಟ್ಟೆವು ಮತ್ತು ಕೋರ್ಟಿಗೆ ಎಳೆದೊಯ್ಯಲ್ಪಟ್ಟೆವು. ಇದು ಒಂದು ಸಮಸ್ಯೆಯಾಗಿತ್ತು, ಏಕೆಂದರೆ ನಮ್ಮ ಪರವಾಗಿ ವಾದಿಸಲಿಕ್ಕಾಗಿ ನಮ್ಮ ಬಳಿ ವಕೀಲರು ಇರಲಿಲ್ಲ. ಕೆಲವು ವಕೀಲರಿಗೆ ನಮ್ಮ ಬಗ್ಗೆ ಸಹಾನುಭೂತಿಯಿತ್ತು, ಆದರೆ ಅಧಿಕಾಂಶ ವಕೀಲರು ತಾವು ಎಲ್ಲರ ದೃಷ್ಟಿಗೆ ಬೀಳುತ್ತೇವೆ ಎಂದು ಭಯಗೊಂಡಿದ್ದರು ಮತ್ತು ಅಧಿಕಾರಿಗಳನ್ನು ಅಸಂತೋಷಪಡಿಸುವ ಅಪಾಯಕ್ಕೆ ತಲೆಕೊಡಲು ಅವರು ಇಷ್ಟಪಡಲಿಲ್ಲ. ಆದರೂ, ನಮ್ಮ ಆವಶ್ಯಕತೆಗಳೇನು ಎಂಬುದು ಯೆಹೋವನಿಗೆ ಗೊತ್ತಿತ್ತು ಮತ್ತು ಸಕಾಲದಲ್ಲಿ ಆತನು ಅಗತ್ಯಕ್ಕನುಸಾರ ವಿಷಯಗಳನ್ನು ಮುನ್ನಡೆಸಿದನು.
ಕ್ರಾಕೌನಿಂದ ಬಂದ ಒಬ್ಬ ಸಂಚರಣ ಮೇಲ್ವಿಚಾರಕನಾದ ಆಲೊಯ್ಸ ಪ್ರಾಸ್ಟಾಕ್‌ನನ್ನು ವಿಚಾರಣೆಯ ಸಮಯದಲ್ಲಿ ಎಷ್ಟರ ಮಟ್ಟಿಗೆ ಮೃಗೀಯ ರೀತಿಯಲ್ಲಿ ದುರುಪಚರಿಸಲಾಯಿತೆಂದರೆ, ಅವನನ್ನು ಸೆರೆಮನೆಯ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಮಾನಸಿಕ ಹಾಗೂ ಶಾರೀರಿಕ ಚಿತ್ರಹಿಂಸೆಯ ಎದುರಿನಲ್ಲಿಯೂ ಅವನು ತೋರಿಸಿದ ದೃಢ ನಿಲುವಿನಿಂದಾಗಿ ಅವನು ಆಸ್ಪತ್ರೆಯಲ್ಲಿದ್ದ ಇತರ ಸೆರೆವಾಸಿಗಳ ಗೌರವ ಮತ್ತು ಮೆಚ್ಚುಗೆಯನ್ನು ಸಂಪಾದಿಸಿದನು. ಅವರಲ್ಲಿ ಒಬ್ಬರು ವೀಟೊಲ್ಡ್ ಲೀಸ್-ಆಲ್‌ಶೆವ್‌ಸ್ಕೀ ಎಂಬ ಹೆಸರಿನ ವಕೀಲರಾಗಿದ್ದರು ಮತ್ತು ಅವರು ಸಹೋದರ ಪ್ರಾಸ್ಟಾಕ್‌ನ ಧೈರ್ಯದಿಂದ ತುಂಬ ಪ್ರಭಾವಿತರಾದರು. ಆ ವಕೀಲರು ಈ ಸಹೋದರನೊಂದಿಗೆ ಅನೇಕ ಸಲ ಮಾತಾಡಿ, “ನನಗೆ ಬಿಡುಗಡೆಯಾಗಿ, ನನ್ನ ವಕೀಲ ವೃತ್ತಿಯನ್ನು ಪುನಃ ಆರಂಭಿಸಿದ ಕೂಡಲೆ ನಾನು ಯೆಹೋವನ ಸಾಕ್ಷಿಗಳ ಪರವಾಗಿ ವಾದಿಸಲು ಸಿದ್ಧನಾಗಿರುವೆ” ಎಂದು ವಚನವಿತ್ತರು. ಅವರು ಏನು ಹೇಳಿದರೋ ಅದನ್ನು ಮಾಡಿತೋರಿಸಿದರು.
ಶ್ರೀ. ಆಲ್‌ಶೆವ್‌ಸ್ಕೀಯವರಿಗೆ ತಮ್ಮ ಸ್ವಂತ ವಕೀಲ ತಂಡವಿತ್ತು. ನಮಗೆ ಸಹಾಯಮಾಡುವ ತಮ್ಮ ಮಾತಿಗೆ ಬಲವಾಗಿ ಅಂಟಿಕೊಳ್ಳುವ ಅವರ ದೃಢನಿರ್ಧಾರವು ನಿಜವಾಗಿಯೂ ಪ್ರಶಂಸಾರ್ಹವಾಗಿತ್ತು. ವಿರೋಧವು ಅತ್ಯಂತ ತೀವ್ರವಾಗಿದ್ದ ಕಾಲಾವಧಿಯಲ್ಲಿ, ದಿನಕ್ಕೊಂದರಂತೆ ಒಂದು ತಿಂಗಳಿಗೆ ಸುಮಾರು 30 ವಿಚಾರಣೆಗಳಲ್ಲಿ ಅವರು ಸಹೋದರರ ಪರವಾಗಿ ವಾದಿಸಿದರು! ಎಲ್ಲ ಮೊಕದ್ದಮೆಗಳ ವಿಷಯದಲ್ಲಿ ಶ್ರೀ. ಆಲ್‌ಶೆವ್‌ಸ್ಕೀಯವರು ಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿದ್ದ ಕಾರಣ, ಅವರೊಂದಿಗೆ ಮಾತುಸಂಪರ್ಕವನ್ನು ಇಟ್ಟುಕೊಳ್ಳುವಂತೆ ನನ್ನನ್ನು ನೇಮಿಸಲಾಯಿತು. ನಾನು 1960ಗಳು ಮತ್ತು 1970ಗಳಲ್ಲಿ ಸುಮಾರು ಏಳು ವರ್ಷಗಳ ವರೆಗೆ ಅವರೊಂದಿಗೆ ಕೆಲಸಮಾಡಿದೆ.
ಆ ದಿನಗಳಲ್ಲಿ ನಾನು ಕಾನೂನಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕಲಿತೆ. ಅನೇಕ ಸಲ ನಾನು ವಿಚಾರಣೆಗಳನ್ನು, ವಕೀಲರ ಸಕಾರಾತ್ಮಕ ಮತ್ತು ನಕಾರಾತ್ಮಕ ಹೇಳಿಕೆಗಳನ್ನು, ಕಾನೂನಿನ ಪರವಾಗಿ ವಾದಿಸುವ ವಿಧಾನಗಳನ್ನು ಮತ್ತು ಆರೋಪ ಹೊರಿಸಲ್ಪಟ್ಟಿದ್ದ ಜೊತೆ ವಿಶ್ವಾಸಿಗಳ ಸಾಕ್ಷ್ಯವನ್ನು ಜಾಗರೂಕತೆಯಿಂದ ಗಮನಿಸಿದೆ. ನಮ್ಮ ಸಹೋದರರಿಗೆ, ಅದರಲ್ಲೂ ವಿಶೇಷವಾಗಿ ಸಾಕ್ಷಿನೀಡಲಿಕ್ಕಾಗಿ ಕರೆಯಲ್ಪಟ್ಟವರಿಗೆ, ಕೋರ್ಟಿನಲ್ಲಿ ಏನು ಹೇಳಬೇಕು ಮತ್ತು ಯಾವಾಗ ಮೌನವಾಗಿರಬೇಕು ಎಂಬುದನ್ನು ತಿಳಿದುಕೊಳ್ಳುವಂತೆ ಸಹಾಯಮಾಡುವುದರಲ್ಲಿ ಇದೆಲ್ಲವೂ ತುಂಬ ಪ್ರಯೋಜನಾರ್ಹವಾಗಿತ್ತು.
ಒಂದು ವಿಚಾರಣೆಯು ಮುಂದುವರಿಯುತ್ತಿರುವಾಗ, ಶ್ರೀ. ಆಲ್‌ಶೆವ್‌ಸ್ಕೀ ಅನೇಕವೇಳೆ ಯೆಹೋವನ ಸಾಕ್ಷಿಗಳ ಮನೆಗಳಲ್ಲಿ ರಾತ್ರಿ ಉಳಿದುಕೊಳ್ಳುತ್ತಿದ್ದರು. ಒಂದು ಹೋಟೆಲಿನಲ್ಲಿ ಉಳಿದುಕೊಳ್ಳಲು ಬೇಕಾದಷ್ಟು ಹಣ ಅವರ ಬಳಿ ಇರಲಿಲ್ಲ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅವರೇ ಒಮ್ಮೆ ಹೇಳಿದ್ದು: “ವಿಚಾರಣೆಗೆ ಮುಂಚೆ ನಿಮ್ಮಂಥ ಮನಸ್ಥಿತಿಯನ್ನೇ ಹೊಂದಲು ಬಯಸುತ್ತೇನೆ.” ಅವರ ನೆರವಿನಿಂದಾಗಿ ಅನೇಕ ವಿಚಾರಣೆಗಳಲ್ಲಿ ನಾವೇ ಜಯಪಡೆದೆವು. ಅನೇಕಸಲ ಅವರು ನನ್ನ ಪರವಾಗಿಯೂ ವಾದಿಸಿದರು, ಮತ್ತು ಅವರು ಎಂದೂ ನನ್ನಿಂದ ಹಣವನ್ನು ಸ್ವೀಕರಿಸಲಿಲ್ಲ. ಇನ್ನೊಂದು ಸಂದರ್ಭದಲ್ಲಿ ಅವರು ಸುಮಾರು 30 ಮೊಕದ್ದಮೆಗಳಿಗೆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಏಕೆ? ಅವರು ಹೇಳಿದ್ದು: “ನಿಮ್ಮ ಕೆಲಸಕ್ಕೆ ನಾನು ಚಿಕ್ಕಪುಟ್ಟ ರೀತಿಯಲ್ಲಾದರೂ ಕಾಣಿಕೆ ನೀಡಲು ಬಯಸುತ್ತೇನೆ.” ಆದರೆ ಅದೇನೂ ಚಿಕ್ಕ ಮೊತ್ತದ ಹಣವಾಗಿರಲಿಲ್ಲ. ಶ್ರೀ. ಆಲ್‌ಶೆವ್‌ಸ್ಕೀಯವರ ತಂಡದ ಚಟುವಟಿಕೆಯು ಅಧಿಕಾರಗಳ ಗಮನಕ್ಕೆ ಬಿತ್ತಾದರೂ, ನಮಗೆ ನೆರವು ನೀಡುವುದರಿಂದ ಇದು ಅವರನ್ನು ನಿರುತ್ತೇಜಿಸಲಿಲ್ಲ.
ಆ ವಿಚಾರಣೆಯ ಕಾಲಾವಧಿಯಲ್ಲಿ ನಮ್ಮ ಸಹೋದರರು ಕೊಟ್ಟಂಥ ಅತ್ಯುತ್ತಮ ಸಾಕ್ಷಿಯನ್ನು ಮಾತಿನಲ್ಲಿ ವರ್ಣಿಸುವುದು ಕಷ್ಟ. ಅನೇಕರು ವಿಚಾರಣೆಗಳನ್ನು ನೋಡಲಿಕ್ಕಾಗಿ ಮತ್ತು ಆಪಾದಿತ ಸಹೋದರರನ್ನು ಬಲಪಡಿಸಲಿಕ್ಕಾಗಿ ಕೋರ್ಟುಗಳಿಗೆ ಬಂದರು. ವಿಚಾರಣೆಗಳು ಅತ್ಯಧಿಕ ಸಂಖ್ಯೆಯನ್ನು ತಲಪಿದ್ದ ಕಾಲಾವಧಿಯಲ್ಲಿ, ಒಂದು ವರ್ಷದಲ್ಲಿ ಸುಮಾರು 30,000ದಷ್ಟು ಹೆಚ್ಚು ಬೆಂಬಲಿಗರನ್ನು ನಾನು ಲೆಕ್ಕಿಸಿದೆ. ಅದು ಖಂಡಿತವಾಗಿಯೂ ಸಾಕ್ಷಿಗಳ ಮಹಾ ಸಮೂಹವಾಗಿತ್ತು!
ಒಂದು ಹೊಸ ನೇಮಕ
ಇಸವಿ 1989ರಷ್ಟಕ್ಕೆ ನಮ್ಮ ಕೆಲಸದ ಮೇಲಿದ್ದ ನಿಷೇಧವು ತೆಗೆದುಹಾಕಲ್ಪಟ್ಟಿತು. ಮೂರು ವರ್ಷಗಳ ಬಳಿಕ ಒಂದು ಹೊಸ ಬ್ರಾಂಚ್ ಆಫೀಸನ್ನು ಕಟ್ಟಿ ಸಮರ್ಪಣಾ ಸಮಾರಂಭವನ್ನು ನಡೆಸಲಾಯಿತು. ಅಲ್ಲಿ ಹಾಸ್ಪಿಟಲ್ ಇನ್‌ಫರ್‌ಮೇಷನ್ ಸರ್ವಿಸಸ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸಮಾಡುವಂತೆ ನನ್ನನ್ನು ಆಮಂತ್ರಿಸಲಾಯಿತು. ಆ ನೇಮಕವನ್ನು ನಾನು ಸಂತೋಷದಿಂದ ಸ್ವೀಕರಿಸಿದೆ. ಮೂವರು ವ್ಯಕ್ತಿಗಳಿಂದ ಕೂಡಿದ್ದ ಒಂದು ತಂಡವಾಗಿ ಕೆಲಸಮಾಡುತ್ತಾ, ರಕ್ತದ ವಿವಾದಂಶವನ್ನು ಎದುರಿಸುತ್ತಿದ್ದ ನಮ್ಮ ಸಹೋದರರಿಗೆ ನಾವು ಬೆಂಬಲ ನೀಡಿದೆವು ಮತ್ತು ಕ್ರೈಸ್ತ ಮನಸ್ಸಾಕ್ಷಿಯ ಮೇಲಾಧಾರಿತವಾದ ಅ. ಕೃತ್ಯಗಳು 15:28.
ಅವರ ನಿಲುವನ್ನು ಸಮರ್ಥಿಸುವಂತೆ ಅವರಿಗೆ ಸಹಾಯಮಾಡಿದೆವು.—ಸಾರ್ವಜನಿಕ ಶುಶ್ರೂಷೆಯಲ್ಲಿ ಯೆಹೋವನನ್ನು ಸೇವಿಸುವ ಸುಯೋಗಕ್ಕಾಗಿ ನಾನು ಮತ್ತು ನನ್ನ ಪತ್ನಿ ತುಂಬ ಕೃತಜ್ಞರಾಗಿದ್ದೇವೆ. ನೀಲಾ ಯಾವಾಗಲೂ ನನಗೆ ಬೆಂಬಲ ನೀಡಿದ್ದಾಳೆ ಮತ್ತು ನನ್ನನ್ನು ಉತ್ತೇಜಿಸಿದ್ದಾಳೆ. ನಾನು ದೇವಪ್ರಭುತ್ವಾತ್ಮಕ ನೇಮಕಗಳಲ್ಲಿ ಕಾರ್ಯಮಗ್ನನಾಗಿದ್ದಾಗೆಲ್ಲ ಅಥವಾ ಸೆರೆಮನೆಗೆ ಕಳುಹಿಸಲ್ಪಟ್ಟಿದ್ದಾಗೆಲ್ಲ, ಮನೆಯಲ್ಲಿ ನಾನಿಲ್ಲ ಎಂಬ ವಿಷಯದಲ್ಲಿ ಅವಳೆಂದೂ ಗುಣುಗುಟ್ಟದೆ ಇದ್ದದ್ದಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿದ್ದೇನೆ. ಕಷ್ಟಕರ ಸಮಯಗಳಲ್ಲಿ ಮಾನಸಿಕ ಅಥವಾ ಭಾವನಾತ್ಮಕ ಒತ್ತಡಕ್ಕೆ ಬಲಿಯಾಗುವುದಕ್ಕೆ ಬದಲಾಗಿ ಅವಳು ಇತರರಿಗೆ ಸಾಂತ್ವನ ನೀಡಿದ್ದಾಳೆ.
ಉದಾಹರಣೆಗೆ, 1974ರಲ್ಲಿ ಇತರ ಸಂಚರಣ ಮೇಲ್ವಿಚಾರಕರೊಂದಿಗೆ ನನ್ನನ್ನೂ ಬಂಧಿಸಲಾಯಿತು. ಇದರ ಕುರಿತು ತಿಳಿದ ಕೆಲವು ಸಹೋದರರು ಈ ವಿಷಯವನ್ನು ನಯವಾದ ರೀತಿಯಲ್ಲಿ ನನ್ನ ಪತ್ನಿಗೆ ತಿಳಿಯಪಡಿಸಲು ಬಯಸಿದರು. ಅವರು ಅವಳನ್ನು ಸಂಧಿಸಿದಾಗ, “ಸಹೋದರಿ ನೀಲಾ, ಒಂದು ಸುದ್ದಿಯನ್ನು ಕೇಳಿಸಿಕೊಳ್ಳಲು ಸಿದ್ಧರಿದ್ದೀರಾ?” ಎಂದು ಕೇಳಿದರು. ಇದನ್ನು ಕೇಳಿಸಿಕೊಂಡಾಕ್ಷಣ ಅವಳು ಭಯದಿಂದ ತಣ್ಣಗಾದಳು, ಏಕೆಂದರೆ ನಾನು ಮೃತಪಟ್ಟಿರಬಹುದೆಂದು ಅವಳು ನೆನಸಿದಳು. ನಿಜವಾಗಿಯೂ ಏನು ನಡೆದಿತ್ತೆಂಬುದು ಅವಳಿಗೆ ಗೊತ್ತಾದಾಗ, ಬಿಡುಗಡೆಯ ನಿಟ್ಟುಸಿರಿನೊಂದಿಗೆ ಅವಳಂದದ್ದು: “ಅವರು ಬದುಕಿದ್ದಾರಲ್ಲಾ! ಅವರು ಸೆರೆಗೆ ಹಾಕಲ್ಪಟ್ಟದ್ದು ಇದೇ ಮೊದಲ ಬಾರಿಯಲ್ಲ.” ಸಮಯಾನಂತರ, ಆ ಸಹೋದರರು ಅವಳ ಸಕಾರಾತ್ಮಕ ಮನೋಭಾವದಿಂದ ತಾವು ಬಹಳವಾಗಿ ಪ್ರಭಾವಿತರಾದೆವು ಎಂದು ನನಗೆ ಹೇಳಿದರು.
ಗತಸಮಯಗಳಲ್ಲಿ ನಮಗೆ ವೇದನಾಭರಿತವಾದ ಅನುಭವಗಳಾಗಿವೆಯಾದರೂ, ಯೆಹೋವನ ಮಾರ್ಗದಲ್ಲೇ ಮುನ್ನಡೆದುದಕ್ಕಾಗಿ ಆತನು ನಮ್ಮನ್ನು ಯಾವಾಗಲೂ ಹೇರಳವಾಗಿ ಆಶೀರ್ವದಿಸಿದ್ದಾನೆ. ನಮ್ಮ ಮಗಳಾದ ಲಿಡೀಆ ಮತ್ತು ಅವಳ ಗಂಡನಾದ ಆಲ್‌ಫ್ರೆಟ್ ಡೆರೂಶಾರು ಆದರ್ಶಪ್ರಾಯ ಕ್ರೈಸ್ತ ದಂಪತಿಯಾಗಿರುವುದಕ್ಕಾಗಿ ನಾವೆಷ್ಟು ಸಂತೋಷಿತರು! ಅವರು ತಮ್ಮ ಗಂಡುಮಕ್ಕಳಾದ ಕ್ರಿಸ್ಟಫರ್ ಮತ್ತು ಜಾನಥನ್‌ರನ್ನು ದೇವರ ಸಮರ್ಪಿತ ಸೇವಕರಾಗಿ ಬೆಳೆಸಿರುವುದು ಸಹ ನಮಗೆ ಹೆಚ್ಚು ಸಂತೋಷವನ್ನು ಉಂಟುಮಾಡಿದೆ. ನನ್ನ ತಮ್ಮನಾದ ರಿಶಾರ್ಡ್ ಮತ್ತು ನನ್ನ ತಂಗಿಯಾದ ಉರ್‌ಸೂಲಾರು ಸಹ ಅನೇಕ ವರ್ಷಗಳಿಂದ ನಂಬಿಗಸ್ತ ಕ್ರೈಸ್ತರಾಗಿದ್ದಾರೆ.
ಯೆಹೋವನು ಎಂದೂ ನಮ್ಮ ಕೈಬಿಟ್ಟಿಲ್ಲ, ಮತ್ತು ನಾವು ಮನಃಪೂರ್ವಕವಾಗಿ ಆತನ ಸೇವೆಯನ್ನು ಮುಂದುವರಿಸಲು ಬಯಸುತ್ತೇವೆ. ಕೀರ್ತನೆ 37:34ರ ಮಾತುಗಳ ಸತ್ಯತೆಯನ್ನು ನಾವು ವೈಯಕ್ತಿಕವಾಗಿ ಅನುಭವಿಸಿದ್ದೇವೆ. ಅದು ಹೀಗನ್ನುತ್ತದೆ: “ಯೆಹೋವನನ್ನು ನಿರೀಕ್ಷಿಸುವವನಾಗಿ ಆತನ ಮಾರ್ಗವನ್ನೇ ಅನುಸರಿಸು; ಆಗ ಆತನು ನಿನ್ನನ್ನು ಮುಂದಕ್ಕೆ ತಂದು ದೇಶವನ್ನು ಅನುಭವಿಸುವಂತೆ ಮಾಡುವನು.” ನಾವು ಪೂರ್ಣ ಹೃದಯದಿಂದ ಆ ಸಮಯಕ್ಕಾಗಿ ಎದುರುನೋಡುತ್ತೇವೆ.
[ಪುಟ 17ರಲ್ಲಿರುವ ಚಿತ್ರ]
1964ರಲ್ಲಿ ಕ್ರಾಕೌನಲ್ಲಿದ್ದ ಸಹೋದರರೊಬ್ಬರ ತೋಟದಲ್ಲಿ ನಡೆಸಲ್ಪಟ್ಟ ಒಂದು ಸಮ್ಮೇಳನದಲ್ಲಿ
[ಪುಟ 18ರಲ್ಲಿರುವ ಚಿತ್ರ]
1968ರಲ್ಲಿ ನನ್ನ ಪತ್ನಿಯಾದ ನೀಲಾ ಮತ್ತು ನಮ್ಮ ಮಗಳಾದ ಲಿಡೀಆಳೊಂದಿಗೆ
[ಪುಟ 20ರಲ್ಲಿರುವ ಚಿತ್ರ]
ಸಾಕ್ಷಿಯಾಗಿದ್ದ ಹುಡುಗನೊಬ್ಬನ ರಕ್ತರಹಿತ ಹೃದಯ ಶಸ್ತ್ರಚಿಕಿತ್ಸೆಗೆ ಮುಂಚೆ ಅವನೊಂದಿಗೆ
[ಪುಟ 20ರಲ್ಲಿರುವ ಚಿತ್ರ]
ಕಾಟಾವೀಟ್ಸೆ ಆಸ್ಪತ್ರೆಯೊಂದರಲ್ಲಿ ಮಕ್ಕಳ ರಕ್ತರಹಿತ ಶಸ್ತ್ರಚಿಕಿತ್ಸೆಯ ಮುಖ್ಯ ಸರ್ಜನ್‌ರಾದ ಡಾ. ವೈಟ್ಸ್‌ರೊಂದಿಗೆ
[ಪುಟ 20ರಲ್ಲಿರುವ ಚಿತ್ರ]
2002ರಲ್ಲಿ ನೀಲಾಳೊಂದಿಗೆ