ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ‘ನಿಮ್ಮ ತಲೇಕೂದಲುಗಳನ್ನು ಸಹ’ ಎಣಿಸಿದ್ದಾನೆ

ಯೆಹೋವನು ‘ನಿಮ್ಮ ತಲೇಕೂದಲುಗಳನ್ನು ಸಹ’ ಎಣಿಸಿದ್ದಾನೆ

ಯೆಹೋವನು ‘ನಿಮ್ಮ ತಲೇಕೂದಲುಗಳನ್ನು ಸಹ’ ಎಣಿಸಿದ್ದಾನೆ

“ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ [ಗುಬ್ಬಿಯು] ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.”​—⁠ಮತ್ತಾಯ 10:29, 30.

“ದೇವರೇ, ನಿನಗೆ ಮೊರೆಯಿಡುತ್ತೇನೆ, ಆದರೆ ನೀನು ಎಂದೂ ಉತ್ತರ ಕೊಡುವುದಿಲ್ಲ; ಮತ್ತು ನಾನು ಪ್ರಾರ್ಥಿಸುವಾಗ, ನೀನು ಕಿವಿಗೊಡುವುದಿಲ್ಲ. ನೀನು ನನ್ನನ್ನು ಕ್ರೂರ ರೀತಿಯಲ್ಲಿ ಉಪಚರಿಸುತ್ತೀ; ನಿನ್ನ ಸರ್ವ ಶಕ್ತಿಯಿಂದ ನನ್ನನ್ನು ಹಿಂಸಿಸುತ್ತೀ.” ಈ ಮಾತುಗಳನ್ನು ನುಡಿದಂಥ ಮನುಷ್ಯನು ಕಡುಸಂಕಟದಲ್ಲಿದ್ದನು ಮತ್ತು ಅವನು ಕಡುಸಂಕಟದಲ್ಲಿದ್ದದ್ದು ಆಶ್ಚರ್ಯಕರವೇನಲ್ಲ! ಏಕೆಂದರೆ ಅವನು ತನ್ನ ಜೀವನೋಪಾಯವನ್ನು ಕಳೆದುಕೊಂಡಿದ್ದನು, ವಿಲಕ್ಷಣವಾದ ಒಂದು ವಿಪತ್ತು ಅವನ ಮಕ್ಕಳ ಜೀವಗಳನ್ನು ಬಲಿತೆಗೆದುಕೊಂಡಿತ್ತು ಮತ್ತು ಅವನು ಶಕ್ತಿಗುಂದಿಸುವಂಥ ಒಂದು ಅಸ್ವಸ್ಥತೆಯಿಂದ ಬಾಧಿಸಲ್ಪಟ್ಟಿದ್ದನು. ಈ ಮನುಷ್ಯನ ಹೆಸರು ಯೋಬ ಎಂದಾಗಿದ್ದು, ವಿಪರೀತ ಕ್ಷೋಭೆಯನ್ನು ತಂದೊಡ್ಡಿದ ಇವನ ಉಗ್ರ ಪರೀಕ್ಷೆಯು ನಮ್ಮ ಪ್ರಯೋಜನಕ್ಕಾಗಿ ಬೈಬಲಿನಲ್ಲಿ ದಾಖಲಿಸಲ್ಪಟ್ಟಿದೆ.​—⁠ಯೋಬ 30:​20, 21, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

2 ಯೋಬನ ಅಭಿವ್ಯಕ್ತಿಗಳು, ಅವನು ದೇವರನ್ನು ವಿರೋಧಿಸುವವನಾಗಿ ಪರಿಣಮಿಸಿದನು ಎಂದು ತೋರುವಂತೆ ಮಾಡಬಹುದು, ಆದರೆ ವಿಷಯವು ಹಾಗಿರಲಿಲ್ಲ. ತನ್ನ ಹೃದಯದಲ್ಲಿ ಅನುಭವಿಸಿದ ಕಡುವೇದನೆಯನ್ನು ಯೋಬನು ಮಾತುಗಳಲ್ಲಿ ವ್ಯಕ್ತಪಡಿಸಿದನಷ್ಟೆ. (ಯೋಬ 6:2, 3) ತನ್ನ ಪರೀಕ್ಷೆಗಳಿಗೆ ಸೈತಾನನು ಕಾರಣನೆಂಬುದು ಅವನಿಗೆ ತಿಳಿದಿರಲಿಲ್ಲ, ಆದುದರಿಂದ ಅವನು ದೇವರು ತನ್ನನ್ನು ತೊರೆದಿದ್ದಾನೆ ಎಂಬ ತಪ್ಪು ನಿರ್ಣಯಕ್ಕೆ ಬಂದಿದ್ದನು. ಒಂದು ಹಂತದಲ್ಲಿ ಯೋಬನು ಹೀಗೂ ಹೇಳಿದನು: “ಏಕೆ ನಿನ್ನ ಮುಖವನ್ನು ಮರೆಮಾಡುತ್ತೀ? ನನ್ನನ್ನು ನಿನ್ನ ಶತ್ರು ಎಂದು ಏಕೆ ಎಣಿಸುತ್ತೀ?” *​—⁠ಯೋಬ 13:⁠24, NIBV.

3 ಇಂದು ಯುದ್ಧಗಳು, ರಾಜಕೀಯ ಅಥವಾ ಸಾಮಾಜಿಕ ಏಳುಬೀಳುಗಳು, ನೈಸರ್ಗಿಕ ವಿಪತ್ತುಗಳು, ವೃದ್ಧಾಪ್ಯ, ಅನಾರೋಗ್ಯ, ಕಡುಬಡತನ ಮತ್ತು ಸರಕಾರದ ನಿಷೇಧಗಳಂಥ ಕಾರಣಗಳಿಂದಾಗಿ ಯೆಹೋವನ ಜನರಲ್ಲಿ ಅನೇಕರು ಸತತವಾಗಿ ಕಷ್ಟತೊಂದರೆಗಳನ್ನು ಅನುಭವಿಸುತ್ತಾರೆ. ನೀವು ಸಹ ಒಂದಲ್ಲ ಒಂದು ರೀತಿಯ ಪರೀಕ್ಷೆಗಳನ್ನು ಎದುರಿಸುತ್ತಿರಬಹುದು. ಕೆಲವೊಮ್ಮೆ, ಯೆಹೋವನು ನಿಮ್ಮಿಂದ ತನ್ನ ಮುಖವನ್ನು ಮರೆಮಾಡುತ್ತಿದ್ದಾನೆ ಎಂದು ನೀವು ನೆನಸಬಹುದು. ನಿಮಗೆ ಯೋಹಾನ 3:16ರ ಮಾತುಗಳು ತುಂಬ ಚೆನ್ನಾಗಿ ತಿಳಿದಿವೆ: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು.” ಆದರೂ, ಬಿಡುಗಡೆಯ ಯಾವುದೇ ಸೂಚನೆಯಿಲ್ಲದೆ ನೀವು ಕಷ್ಟಾನುಭವಿಸುತ್ತಿರುವಾಗ ಹೀಗೆ ಆಲೋಚಿಸಬಹುದು: ‘ದೇವರು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತಾನೊ? ನಾನು ಏನನ್ನು ಅನುಭವಿಸುತ್ತಾ ಇದ್ದೇನೊ ಅದನ್ನು ಆತನು ಗಮನಿಸುತ್ತಾನೊ? ವ್ಯಕ್ತಿಗತವಾಗಿ ಆತನು ನನ್ನ ಕುರಿತು ಕಾಳಜಿ ವಹಿಸುತ್ತಾನೊ?’

4 ಅಪೊಸ್ತಲ ಪೌಲನಿಗೆ ಏನಾಯಿತೆಂಬುದನ್ನು ಪರಿಗಣಿಸಿರಿ. ಅವನು ಬರೆದುದು: “ಒಂದು ಶೂಲ ನನ್ನ ಶರೀರದಲ್ಲಿ ನಾಟಿದೆಯೋ ಎಂಬಂತೆ ನನ್ನನ್ನು ಗುದ್ದುವದಕ್ಕೆ ಸೈತಾನನ ದೂತರಲ್ಲಿ ಒಬ್ಬನು ನನ್ನ ಬಳಿಗೆ ಕಳುಹಿಸಲ್ಪಟ್ಟನು.” ಅವನು ಕೂಡಿಸುತ್ತಾ ಹೇಳಿದ್ದು: “ಈ ಪೀಡೆಯ ವಿಷಯದಲ್ಲಿ ಅದು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.” ಯೆಹೋವನು ಅವನ ಬೇಡಿಕೆಗಳನ್ನು ಕೇಳಿದನು. ಹಾಗಿದ್ದರೂ, ಅದ್ಭುತಕರವಾದ ಪರಿಹಾರವನ್ನು ಒದಗಿಸುವ ಮೂಲಕ ತಾನು ಮಧ್ಯೆಪ್ರವೇಶಿಸುವುದಿಲ್ಲ ಎಂದು ಆತನು ಪೌಲನಿಗೆ ಸೂಚಿಸಿದನು. ಅದಕ್ಕೆ ಬದಲಾಗಿ, ಪೌಲನು ‘ಶರೀರದಲ್ಲಿ ನಾಟಿರುವ ತನ್ನ ಶೂಲವನ್ನು’ ತಾಳಿಕೊಳ್ಳಲು ಬೇಕಾದ ಸಹಾಯಕ್ಕಾಗಿ ದೇವರ ಶಕ್ತಿಯ ಮೇಲೆ ಅವಲಂಬಿಸಬೇಕಾಗಿತ್ತು. * (2 ಕೊರಿಂಥ 12:7-9) ಪೌಲನಂತೆ ನೀವು ಸಹ ಸತತವಾಗಿ ಮುಂದುವರಿಯುತ್ತಿರುವ ನಿರ್ದಿಷ್ಟವಾದ ಒಂದು ಸಮಸ್ಯೆಯನ್ನು ಅನುಭವಿಸುತ್ತಿರಬಹುದು. ‘ನನ್ನ ಸಮಸ್ಯೆಯ ವಿಷಯದಲ್ಲಿ ಯೆಹೋವನು ಯಾವುದೇ ಕ್ರಮವನ್ನು ಕೈಕೊಳ್ಳದಿರುವಂತೆ ತೋರುವ ವಾಸ್ತವಾಂಶವು, ಆತನಿಗೆ ನನ್ನ ಸನ್ನಿವೇಶದ ಅರಿವಿಲ್ಲ ಅಥವಾ ಆತನು ನನ್ನ ವಿಷಯದಲ್ಲಿ ಕಾಳಜಿ ವಹಿಸುವುದಿಲ್ಲ ಎಂಬರ್ಥವನ್ನು ಕೊಡುತ್ತದೊ?’ ಎಂದು ಪ್ರಾಯಶಃ ನೀವು ನೆನಸಬಹುದು. ಇದಕ್ಕೆ ಉತ್ತರವು ಖಡಾಖಂಡಿತವಾಗಿ ಇಲ್ಲ ಎಂದಾಗಿದೆ! ತನ್ನ ನಂಬಿಗಸ್ತ ಸೇವಕರಲ್ಲಿ ಪ್ರತಿಯೊಬ್ಬರ ಬಗ್ಗೆ ಯೆಹೋವನಿಗಿರುವ ತೀವ್ರವಾದ ಕಾಳಜಿಯು, ಯೇಸು ತನ್ನ ಅಪೊಸ್ತಲರನ್ನು ಆಯ್ಕೆಮಾಡಿದ ಸ್ವಲ್ಪ ಸಮಯಾನಂತರ ಅವರಿಗೆ ಏನು ತಿಳಿಸಿದನೋ ಅದರಿಂದ ಒತ್ತಿಹೇಳಲ್ಪಟ್ಟಿದೆ. ಅವನ ಮಾತುಗಳು ಇಂದು ನಮ್ಮನ್ನು ಹೇಗೆ ಉತ್ತೇಜಿಸುತ್ತವೆ ಎಂಬುದನ್ನು ನಾವೀಗ ಪರಿಗಣಿಸೋಣ.

“ಹೆದರಬೇಡಿರಿ”​—⁠ಏಕೆ?

5 ಯೇಸು ಅಪೊಸ್ತಲರಿಗೆ, ‘ದೆವ್ವಗಳನ್ನು ಬಿಡಿಸುವದಕ್ಕೂ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುವದಕ್ಕೂ ಅಧಿಕಾರ’ ಕೊಡುವುದರೊಂದಿಗೆ ಅಸಾಮಾನ್ಯವಾದ ಶಕ್ತಿಯನ್ನು ನೀಡಿದನು. ಆದರೂ, ಅವರೆಂದಿಗೂ ಕಠಿನ ಪರಿಸ್ಥಿತಿಗಳನ್ನು ಮತ್ತು ಕಷ್ಟತೊಂದರೆಗಳನ್ನು ಅನುಭವಿಸುವುದಿಲ್ಲ ಎಂಬುದು ಇದರ ಅರ್ಥವಾಗಿರಲಿಲ್ಲ. ಅದಕ್ಕೆ ಬದಲಾಗಿ, ಅವರು ಎದುರಿಸಲಿದ್ದ ಕೆಲವು ಸಂಗತಿಗಳನ್ನು ಯೇಸು ಸವಿವರವಾಗಿ ವರ್ಣಿಸಿದನು. ಮತ್ತು ಅವನು ಅವರನ್ನು ಈ ಮಾತುಗಳಿಂದ ಹುರಿದುಂಬಿಸಿದನು: “ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ನರಕ [“ಗಿಹೆನ,” NW]ದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.”​—⁠ಮತ್ತಾಯ 10:1, 16-22, 28.

6 ತನ್ನ ಅಪೊಸ್ತಲರು ಏಕೆ ಹೆದರುವ ಅಗತ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಲಿಕ್ಕಾಗಿ ಯೇಸು ಎರಡು ದೃಷ್ಟಾಂತಗಳನ್ನು ಕೊಟ್ಟನು. ಅವನು ಅವರಿಗಂದದ್ದು: “ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಮತ್ತಾಯ 10:29-31) ಕಷ್ಟಸಂಕಟವನ್ನು ಎದುರಿಸುತ್ತಿರುವಾಗ ನಾವು ಹೆದರದೆ ಇರುವುದನ್ನು, ಯೆಹೋವನು ನಮ್ಮಲ್ಲಿ ಪ್ರತಿಯೊಬ್ಬರ ಕುರಿತು ವೈಯಕ್ತಿಕವಾಗಿ ಕಾಳಜಿ ವಹಿಸುತ್ತಾನೆ ಎಂಬ ದೃಢಭರವಸೆಯಿಂದ ಇರುವುದಕ್ಕೆ ಯೇಸು ಸಂಬಂಧಿಸಿದನು ಎಂಬುದನ್ನು ಗಮನಿಸಿರಿ. ಅಪೊಸ್ತಲ ಪೌಲನಿಗೆ ಇಂಥ ದೃಢಭರವಸೆ ಇತ್ತು ಎಂಬುದು ಸುವ್ಯಕ್ತ. ಅವನು ಬರೆದುದು: “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನಲ್ಲಾ; ಮಗನನ್ನು ಕೊಟ್ಟ ಮೇಲೆ ಸಮಸ್ತವನ್ನೂ ನಮಗೆ ದಯಪಾಲಿಸದೆ ಇರುವನೇ?” (ರೋಮಾಪುರ 8:31, 32) ನೀವು ಯಾವುದೇ ಪಂಥಾಹ್ವಾನಗಳನ್ನು ಎದುರಿಸಲಿ, ಯೆಹೋವನಿಗೆ ನಿಷ್ಠರಾಗಿ ಉಳಿಯುವ ತನಕ ಆತನು ನಿಮ್ಮನ್ನು ವೈಯಕ್ತಿಕವಾಗಿ ಪರಾಮರಿಸುತ್ತಾನೆ ಎಂಬ ವಿಷಯದಲ್ಲಿ ನೀವೂ ದೃಢನಿಶ್ಚಿತರಾಗಿರಸಾಧ್ಯವಿದೆ. ಯೇಸು ತನ್ನ ಅಪೊಸ್ತಲರಿಗೆ ಹೇಳಿದ ಬುದ್ಧಿವಾದವನ್ನು ನಾವು ನಿಕಟವಾಗಿ ಗಮನಿಸುವಾಗ ಇದು ಇನ್ನಷ್ಟು ಹೆಚ್ಚು ವ್ಯಕ್ತವಾಗುತ್ತದೆ.

ಒಂದು ಗುಬ್ಬಿಯ ಮೌಲ್ಯ

7 ಯೇಸುವಿನ ದೃಷ್ಟಾಂತಗಳು ಯೆಹೋವನಿಗೆ ತನ್ನ ಸೇವಕರಲ್ಲಿ ಪ್ರತಿಯೊಬ್ಬರ ಕಡೆಗಿರುವ ಕಾಳಜಿಯನ್ನು ಪರಿಣಾಮಕಾರಿಯಾಗಿ ವರ್ಣಿಸುತ್ತವೆ. ಮೊದಲಾಗಿ ಗುಬ್ಬಿಗಳ ವಿಷಯವನ್ನು ತೆಗೆದುಕೊಳ್ಳಿ. ಯೇಸುವಿನ ದಿನದಲ್ಲಿ ಗುಬ್ಬಿಗಳನ್ನು ಆಹಾರಕ್ಕಾಗಿ ಉಪಯೋಗಿಸಲಾಗುತ್ತಿತ್ತು, ಆದರೆ ಅವು ಬೆಳೆಗಳಿಗೆ ಹಾನಿಯನ್ನು ಉಂಟುಮಾಡುತ್ತಿದ್ದುದರಿಂದ ಅವುಗಳನ್ನು ಹೆಚ್ಚಾಗಿ ಉಪದ್ರವಕಾರಿ ಪಕ್ಷಿಗಳಾಗಿ ಪರಿಗಣಿಸಲಾಗುತ್ತಿತ್ತು. ಗುಬ್ಬಿಗಳು ಎಷ್ಟು ಯಥೇಷ್ಟವಾಗಿದ್ದವು ಮತ್ತು ಕಡಿಮೆ ಬೆಲೆಗೆ ಸಿಗುತ್ತಿದ್ದವೆಂದರೆ, ಆಧುನಿಕ ಮೌಲ್ಯಗಳಲ್ಲಿ ಎರಡು ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಗೆ ಎರಡು ಗುಬ್ಬಿಗಳನ್ನು ಖರೀದಿಸಬಹುದಿತ್ತು. ಇದಕ್ಕೆ ಎರಡರಷ್ಟು ಹಣವನ್ನು ಕೊಟ್ಟರೆ ನಾಲ್ಕು ಗುಬ್ಬಿಗಳನ್ನಲ್ಲ ಐದು ಗುಬ್ಬಿಗಳನ್ನು ಖರೀದಿಸಸಾಧ್ಯವಿತ್ತು​—⁠ಒಂದು ಪಕ್ಷಿಯನ್ನು ಹೆಚ್ಚಾಗಿ ಕೊಡಲಾಗುತ್ತಿತ್ತು. ಮತ್ತು ಹೆಚ್ಚಾಗಿ ಕೊಡುವ ಗುಬ್ಬಿಗೆ ಬೆಲೆಯೇ ಇಲ್ಲವೇನೋ ಎಂಬಂತಿತ್ತು!​—⁠ಲೂಕ 12:⁠6.

8 ಸರ್ವಸಾಮಾನ್ಯವಾಗಿರುವ ಈ ಪಕ್ಷಿಯ ಗಾತ್ರದ ಕುರಿತಾಗಿಯೂ ಆಲೋಚಿಸಿರಿ. ಬೇರೆ ಪಕ್ಷಿಗಳಿಗೆ ಹೋಲಿಸುವಾಗ, ಪೂರ್ಣವಾಗಿ ಬೆಳೆದ ಒಂದು ಗುಬ್ಬಿಯು ಸಹ ತೀರ ಚಿಕ್ಕ ಗಾತ್ರದ್ದಾಗಿರುತ್ತದೆ. ಆದರೂ, ಮತ್ತಾಯ 10:29ರಲ್ಲಿ “ಗುಬ್ಬಿಗಳು” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು ನಿರ್ದಿಷ್ಟವಾಗಿ ಚಿಕ್ಕ ಗುಬ್ಬಿಗಳಿಗೆ ಸೂಚಿತವಾಗಿದೆ. ತನ್ನ ಅಪೊಸ್ತಲರು ತೀರ ಚಿಕ್ಕದಾದ ಮತ್ತು ಅಮುಖ್ಯವಾದ ಒಂದು ಪಕ್ಷಿಯನ್ನು ಊಹಿಸಿಕೊಳ್ಳುವಂತೆ ಯೇಸು ಬಯಸಿದನು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

9 ಗುಬ್ಬಿಗಳ ದೃಷ್ಟಾಂತವು ಒಂದು ಪ್ರಮುಖ ಅಂಶವನ್ನು ತಿಳಿಯಪಡಿಸುತ್ತದೆ. ಅದೇನೆಂದರೆ ಮಾನವರ ದೃಷ್ಟಿಯಲ್ಲಿ ಯಾವುದು ಬೆಲೆಯಿಲ್ಲದ್ದಾಗಿ ಕಾಣಲ್ಪಡುತ್ತದೋ ಅದು ಯೆಹೋವ ದೇವರಿಗೆ ಪ್ರಾಮುಖ್ಯವಾದದ್ದಾಗಿದೆ. ಯೇಸು ಈ ಸತ್ಯವನ್ನು, ಯೆಹೋವನ ಗಮನಕ್ಕೆ ಬಾರದೆ ಒಂದು ಚಿಕ್ಕ ಗುಬ್ಬಿಯು ಸಹ “ನೆಲಕ್ಕೆ ಬೀಳದು” ಎಂಬುದನ್ನು ಕೂಡಿಸಿ ಹೇಳುವ ಮೂಲಕ ಇನ್ನಷ್ಟು ಒತ್ತಿಹೇಳಿದನು. * ಇದರ ಪಾಠವೇನೆಂಬುದು ಸ್ಪಷ್ಟವಾಗಿದೆ. ಯೆಹೋವ ದೇವರು ಅತಿ ಚಿಕ್ಕದಾದ ಮತ್ತು ತೀರ ಅಮುಖ್ಯವಾಗಿರುವ ಪಕ್ಷಿಯನ್ನು ಗಮನಿಸುತ್ತಾನಾದಲ್ಲಿ, ಆತನ ಸೇವೆಮಾಡಲು ಆಯ್ಕೆಮಾಡಿರುವಂಥ ಒಬ್ಬ ವ್ಯಕ್ತಿಯ ಸನ್ನಿವೇಶದ ಕುರಿತು ಆತನು ಇನ್ನೆಷ್ಟು ಹೆಚ್ಚು ಚಿಂತೆವಹಿಸುವನು!

10 ಗುಬ್ಬಿಗಳ ಕುರಿತಾದ ತನ್ನ ದೃಷ್ಟಾಂತಕ್ಕೆ ಕೂಡಿಸಿ ಯೇಸು ಹೇಳಿದ್ದು: “ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.” (ಮತ್ತಾಯ 10:30) ಚುಟುಕಾದರೂ ಗಹನವಾದ ಈ ಹೇಳಿಕೆಯು, ಗುಬ್ಬಿಗಳ ಕುರಿತಾದ ಯೇಸುವಿನ ದೃಷ್ಟಾಂತದ ಅಂಶದ ಮಹತ್ವವನ್ನು ಒತ್ತಿಹೇಳುತ್ತದೆ. ಇದನ್ನು ಪರಿಗಣಿಸಿರಿ: ಸರಾಸರಿ ಮಾನವರ ತಲೆಯಲ್ಲಿ ಸುಮಾರು 1,00,000 ಕೂದಲ ಎಳೆಗಳಿರುತ್ತವೆ. ಬಹುತೇಕವಾಗಿ ಒಂದು ಕೂದಲು ನಿಖರವಾಗಿ ಇನ್ನೊಂದು ಕೂದಲಿನ ಹಾಗೆಯೇ ಇರುವಂತೆ ತೋರುತ್ತದೆ ಮತ್ತು ಯಾವುದೇ ಕೂದಲು ನಮ್ಮ ನಿರ್ದಿಷ್ಟ ಗಮನಕ್ಕೆ ಅರ್ಹವಾಗಿರುವಂತೆ ಕಂಡುಬರುವುದಿಲ್ಲ. ಆದರೂ, ಪ್ರತಿಯೊಂದು ಕೂದಲನ್ನು ಯೆಹೋವ ದೇವರು ಗಮನಿಸುತ್ತಾನೆ ಮತ್ತು ಎಣಿಸಿದ್ದಾನೆ. ವಿಷಯವು ಹೀಗಿರುವುದರಿಂದ, ನಮ್ಮ ಜೀವನದ ಬಗ್ಗೆ ಯೆಹೋವನಿಗೆ ಗೊತ್ತಿಲ್ಲದಿರುವಂಥ ಯಾವುದೇ ವಿವರವಾದರೂ ಇದೆಯೊ? ಖಂಡಿತವಾಗಿಯೂ ಯೆಹೋವನು ತನ್ನ ಸೇವಕರಲ್ಲಿ ಪ್ರತಿಯೊಬ್ಬರ ಅಪೂರ್ವ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ವಾಸ್ತವದಲ್ಲಿ, ಆತನು ‘ಹೃದಯವನ್ನು ನೋಡುವವನಾಗಿದ್ದಾನೆ.’​—⁠1 ಸಮುವೇಲ 16:⁠7.

11 ಸಾಕಷ್ಟು ಕಷ್ಟವನ್ನು ಅನುಭವಿಸಿದಂಥ ದಾವೀದನು, ಯೆಹೋವನು ತನ್ನನ್ನು ಗಮನಿಸುತ್ತಾನೆ ಎಂಬ ವಿಷಯದಲ್ಲಿ ದೃಢಭರವಸೆಯುಳ್ಳವನಾಗಿದ್ದನು. ಅವನು ಬರೆದುದು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ.” (ಕೀರ್ತನೆ 139:1, 2) ಯೆಹೋವನು ವೈಯಕ್ತಿಕವಾಗಿ ನಿಮ್ಮನ್ನು ಬಲ್ಲನು ಎಂಬ ದೃಢನಿಶ್ಚಯ ನಿಮಗಿರಸಾಧ್ಯವಿದೆ. (ಯೆರೆಮೀಯ 17:10) ಸರ್ವವನ್ನೂ ಗಮನಿಸುವಂಥ ಯೆಹೋವನ ದೃಷ್ಟಿಗೆ ಬೀಳಲು ತಾವು ತೀರ ಅಮುಖ್ಯರಾಗಿದ್ದೇವೆ ಎಂದು ಭಾವಿಸಲು ಎಂದೂ ತ್ವರೆಪಡದಿರಿ!

‘ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ತುಂಬಿಸು’

12 ತನ್ನ ಒಬ್ಬೊಬ್ಬ ಸೇವಕರನ್ನೂ ಯೆಹೋವನು ಚೆನ್ನಾಗಿ ಅರಿತವನಾಗಿದ್ದಾನೆ ಮಾತ್ರವಲ್ಲ ಪ್ರತಿಯೊಬ್ಬರು ಅನುಭವಿಸುವ ಕಷ್ಟಸಂಕಟವನ್ನೂ ಚೆನ್ನಾಗಿ ಬಲ್ಲಾತನಾಗಿದ್ದಾನೆ. ಉದಾಹರಣೆಗೆ, ಇಸ್ರಾಯೇಲ್ಯರು ಗುಲಾಮರಾಗಿ ದಬ್ಬಾಳಿಕೆಗೆ ತುತ್ತಾಗಿದ್ದಾಗ ಯೆಹೋವನು ಮೋಶೆಗೆ ಹೇಳಿದ್ದು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” (ವಿಮೋಚನಕಾಂಡ 3:7) ನಾವು ಒಂದು ಪರೀಕ್ಷೆಯನ್ನು ತಾಳಿಕೊಳ್ಳುತ್ತಿರುವಾಗ, ಏನು ನಡೆಯುತ್ತಿದೆ ಎಂಬುದನ್ನು ಯೆಹೋವನು ನೋಡುತ್ತಾನೆ ಮತ್ತು ನಮ್ಮ ಮೊರೆಯನ್ನು ಕೇಳಿಸಿಕೊಳ್ಳುತ್ತಾನೆ ಎಂಬುದನ್ನು ಗ್ರಹಿಸುವುದು ಎಷ್ಟು ಸಾಂತ್ವನದಾಯಕವಾಗಿರುವುದು! ಖಂಡಿತವಾಗಿಯೂ ಆತನು ನಮ್ಮ ಕಷ್ಟಾನುಭವಕ್ಕೆ ಅಲಕ್ಷ್ಯವನ್ನು ತೋರಿಸುವುದಿಲ್ಲ.

13 ಯೆಹೋವನೊಂದಿಗೆ ಒಂದು ಸಂಬಂಧವನ್ನು ಸ್ಥಾಪಿಸಿಕೊಂಡಿರುವವರ ಕಡೆಗೆ ಆತನು ತೋರಿಸುವ ಕಾಳಜಿಯು, ಇಸ್ರಾಯೇಲ್ಯರ ಕಡೆಗಿದ್ದ ಆತನ ಅನಿಸಿಕೆಗಳಲ್ಲಿ ಇನ್ನಷ್ಟು ವ್ಯಕ್ತವಾಗುತ್ತದೆ. ಅನೇಕವೇಳೆ ಅವರ ಕಷ್ಟಾನುಭವವು ಅವರ ಸ್ವಂತ ಮೊಂಡುತನದ ಪರಿಣಾಮವಾಗಿಯೇ ಆಗಿತ್ತಾದರೂ, ಯೆಹೋವನ ಕುರಿತು ಯೆಶಾಯನು ಬರೆದುದು: “ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು.” (ಯೆಶಾಯ 63:​9) ಹೀಗಿರುವುದರಿಂದ, ಯೆಹೋವನ ಒಬ್ಬ ನಂಬಿಗಸ್ತ ಸೇವಕರಾಗಿರುವ ನೀವು ನೋವಿನಲ್ಲಿರುವಾಗ ಯೆಹೋವನಿಗೂ ನೋವಾಗುತ್ತದೆ ಎಂಬ ವಿಷಯದಲ್ಲಿ ಖಾತ್ರಿಯಿಂದಿರಸಾಧ್ಯವಿದೆ. ಇದು, ಕಷ್ಟತೊಂದರೆಯನ್ನು ನಿರ್ಭೀತಿಯಿಂದ ಎದುರಿಸುವಂತೆ ಮತ್ತು ಆತನ ಸೇವೆಮಾಡಲಿಕ್ಕಾಗಿ ನಿಮ್ಮಿಂದಾದುದೆಲ್ಲವನ್ನೂ ಮಾಡುತ್ತಾ ಹೋಗುವಂತೆ ನಿಮ್ಮನ್ನು ಪ್ರಚೋದಿಸುವುದಿಲ್ಲವೆ?​—⁠1 ಪೇತ್ರ 5:6, 7.

14 ಯೆಹೋವನು ತನ್ನ ಕುರಿತು ಕಾಳಜಿ ವಹಿಸುತ್ತಾನೆ ಮತ್ತು ತನಗೋಸ್ಕರ ಮರುಗುತ್ತಾನೆ ಎಂಬ ವಿಷಯದಲ್ಲಿ ರಾಜ ದಾವೀದನಿಗಿದ್ದ ನಿಶ್ಚಿತಾಭಿಪ್ರಾಯವು ಕೀರ್ತನೆ 56ರಲ್ಲಿ ಸ್ಪಷ್ಟಪಡಿಸಲ್ಪಟ್ಟಿದೆ. ಹಂತಕನಾಗಿದ್ದ ರಾಜ ಸೌಲನಿಂದ ಪಲಾಯನಗೈಯುತ್ತಿರುವಾಗ ದಾವೀದನು ಈ ಕೀರ್ತನೆಯನ್ನು ರಚಿಸಿದನು. ದಾವೀದನು ಗತ್‌ ಊರಿಗೆ ಓಡಿಹೋದನು, ಆದರೆ ಫಿಲಿಷ್ಟಿಯರಿಂದ ಗುರುತಿಸಲ್ಪಟ್ಟಾಗ ಅವರು ತನ್ನನ್ನು ಸೆರೆಹಿಡಿಯಬಹುದೆಂದು ಭಯಪಟ್ಟನು. ಅವನು ಬರೆದುದು: “ಹೊಂಚುಹಾಕಿ ನನ್ನನ್ನು ನುಂಗಿಬಿಡಬೇಕೆಂದು ಯಾವಾಗಲೂ ಬಾಯ್ದೆರೆದಿದ್ದಾರೆ; ಸೊಕ್ಕಿನಿಂದ ನನ್ನ ಮೇಲೆ ಯುದ್ಧಕ್ಕೆ ನಿಂತವರು ಎಷ್ಟೋ ಮಂದಿ.” ತನ್ನ ಅಪಾಯಕರ ಸನ್ನಿವೇಶದ ಕಾರಣದಿಂದ ದಾವೀದನು ಯೆಹೋವನಿಗೆ ಮೊರೆಯಿಟ್ಟನು. ಅವನಂದದ್ದು: “ಹಗಲೆಲ್ಲಾ ನನ್ನ ಮಾತುಗಳಿಗೆ ಅಪಾರ್ಥಮಾಡುತ್ತಾರೆ; ಅವರು ಬಗೆಯುವದೆಲ್ಲ ನನಗೆ ಕೇಡೇ.”​—⁠ಕೀರ್ತನೆ 56:2, 5.

15ಕೀರ್ತನೆ 56:8 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ದಾವೀದನು ಈ ಆಸಕ್ತಿಕರ ಹೇಳಿಕೆಗಳನ್ನು ಮಾಡುತ್ತಾನೆ: “ನಾನು ದೇಶಭ್ರಷ್ಟನಾಗಿ ಅಲೆದಾಡಿದ್ದನ್ನು ನೀನೇ ಬಲ್ಲೆ. ನನ್ನ ಕಣ್ಣೀರು ನಿನ್ನ ಬುದ್ದಲಿಯಲ್ಲಿ ತುಂಬಿದೆ; ಅದರ ವಿಷಯ ನಿನ್ನ ಪುಸ್ತಕದಲ್ಲಿ ಬರದದೆಯಲ್ಲಾ.” ಯೆಹೋವನ ಕೋಮಲವಾದ ಕಾಳಜಿಯ ಬಗ್ಗೆ ಇದೆಂಥ ಹೃದಯಸ್ಪರ್ಶಿ ವರ್ಣನೆ! ನಾವು ಉದ್ವೇಗಕ್ಕೆ ಒಳಗಾಗಿರುವಾಗ ಕಣ್ಣೀರನ್ನು ಸುರಿಸುತ್ತಾ ಯೆಹೋವನಿಗೆ ಮೊರೆಯಿಡಬಹುದು. ಪರಿಪೂರ್ಣ ಮನುಷ್ಯನಾಗಿದ್ದ ಯೇಸು ಸಹ ಹೀಗೆ ಮಾಡಿದನು. (ಇಬ್ರಿಯ 5:7) ಯೆಹೋವನು ತನ್ನನ್ನು ಗಮನಿಸುತ್ತಾನೆ ಮತ್ತು ತನ್ನ ಮನೋವೇದನೆಯನ್ನು ಜ್ಞಾಪಿಸಿಕೊಳ್ಳುತ್ತಾನೆ ಎಂಬ ವಿಷಯದಲ್ಲಿ ದಾವೀದನು ದೃಢನಿಶ್ಚಿತನಾಗಿದ್ದನು. ಇದು, ಅವನ ಕಣ್ಣೀರನ್ನು ಒಂದು ಚರ್ಮದ ಬುದ್ದಲಿಯಲ್ಲಿ ಜೋಪಾನಗೊಳಿಸುತ್ತಾನೋ ಅಥವಾ ಒಂದು ಪುಸ್ತಕದಲ್ಲಿ ಅದನ್ನು ಬರೆಯುತ್ತಾನೋ ಎಂಬಂತಿತ್ತು. * ನಿಮ್ಮ ಕಣ್ಣೀರು ಆ ಚರ್ಮದ ಬುದ್ದಲಿಯಲ್ಲಿ ಹೆಚ್ಚಿನಾಂಶ ತುಂಬಿರಸಾಧ್ಯವಿದೆ ಅಥವಾ ಅಂಥ ಒಂದು ಪುಸ್ತಕದ ಅನೇಕ ಪುಟಗಳನ್ನು ಆವರಿಸಿರಸಾಧ್ಯವಿದೆ ಎಂದು ನಿಮಗನಿಸಬಹುದು. ವಿಷಯವು ಹೀಗಿರುವಲ್ಲಿ, ನೀವು ಸಾಂತ್ವನವನ್ನು ಪಡೆದುಕೊಳ್ಳಸಾಧ್ಯವಿದೆ. ಬೈಬಲು ನಮಗೆ ಹೀಗೆ ಆಶ್ವಾಸನೆ ನೀಡುತ್ತದೆ: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತನೆ 34:18.

ದೇವರ ಆಪ್ತ ಸಂಗಡಿಗರಾಗುವುದು

16 ಯೆಹೋವನು ‘ನಮ್ಮ ತಲೇಕೂದಲುಗಳನ್ನು ಸಹ ಎಣಿಸಿದ್ದಾನೆ’ ಎಂಬ ವಾಸ್ತವಾಂಶವು, ನಾವು ಯಾರನ್ನು ಆರಾಧಿಸುವ ಸುಯೋಗವುಳ್ಳವರಾಗಿದ್ದೇವೋ ಆ ದೇವರು ಎಷ್ಟು ಜಾಗರೂಕವಾಗಿ ಗಮನಿಸುವವನು ಮತ್ತು ಕಾಳಜಿ ವಹಿಸುವವನು ಆಗಿದ್ದಾನೆ ಎಂಬುದನ್ನು ಕಲ್ಪಿಸಿಕೊಳ್ಳಲು ಸಹಾಯಕರವಾಗಿದೆ. ಎಲ್ಲ ರೀತಿಯ ನೋವು ಮತ್ತು ಕಷ್ಟಾನುಭವವು ಇಲ್ಲದೇ ಹೋಗಲು ನಾವು ವಾಗ್ದತ್ತ ಹೊಸ ಲೋಕದ ತನಕ ಕಾಯಬೇಕಾಗಿರುವುದಾದರೂ, ಈಗ ಯೆಹೋವನು ತನ್ನ ಜನರಿಗಾಗಿ ಅದ್ಭುತಕರವಾದದ್ದೇನನ್ನೋ ಮಾಡುತ್ತಿದ್ದಾನೆ. ದಾವೀದನು ಬರೆದುದು: “ಯೆಹೋವನು ತನ್ನ ಸದ್ಭಕ್ತರಿಗೆ ಆಪ್ತಮಿತ್ರನಂತಿರುವನು; ಅವರಿಗೇ ತನ್ನ ಒಡಂಬಡಿಕೆಯ ಅನುಭವವನ್ನು ದಯಪಾಲಿಸುವನು.”​—⁠ಕೀರ್ತನೆ 25:14.

17 ‘ಯೆಹೋವನೊಂದಿಗೆ ಆಪ್ತತೆ.’ ಅಪರಿಪೂರ್ಣ ಮಾನವರಿಗೆ ಈ ವಿಚಾರವು ಅಸಾಧ್ಯವಾಗಿ ತೋರಬಹುದು! ಆದರೂ, ತನಗೆ ಭಯಪಡುವಂಥ ಜನರಿಗೆ ಯೆಹೋವನು ತನ್ನ ಗುಡಾರದಲ್ಲಿ ಇಳುಕೊಳ್ಳುವಂತೆ ಆಮಂತ್ರಿಸುತ್ತಾನೆ. (ಕೀರ್ತನೆ 15:1-5) ಮತ್ತು ತನ್ನ ಅತಿಥಿಗಳಿಗಾಗಿ ಯೆಹೋವನು ಏನು ಮಾಡುತ್ತಾನೆ? ದಾವೀದನಿಗನುಸಾರ, ಆತನು ತನ್ನ ಒಡಂಬಡಿಕೆಯನ್ನು ಅವರಿಗೆ ದಯಪಾಲಿಸುತ್ತಾನೆ. ಯೆಹೋವನು ಅವರಲ್ಲಿ ಭರವಸೆಯಿಡುತ್ತಾನೆ, ಮತ್ತು ತನ್ನ ಉದ್ದೇಶಗಳೇನು ಹಾಗೂ ಅವುಗಳಿಗೆ ಹೊಂದಿಕೆಯಲ್ಲಿ ಜೀವಿಸಲಿಕ್ಕಾಗಿ ಏನು ಮಾಡಬೇಕು ಎಂಬುದನ್ನು ಅವರು ತಿಳಿಯಸಾಧ್ಯವಾಗುವಂತೆ, ಪ್ರವಾದಿಗಳಿಗೆ ತನ್ನ “ರಹಸ್ಯವನ್ನು” ಪ್ರಕಟಪಡಿಸುತ್ತಾನೆ.​—⁠ಆಮೋಸ 3:⁠7.

18 ನಿಜವಾಗಿಯೂ, ಅಪರಿಪೂರ್ಣ ಮಾನವರಾಗಿರುವ ನಾವು ಸರ್ವೋನ್ನತನಾಗಿರುವ ಯೆಹೋವ ದೇವರ ಆಪ್ತ ಸಂಗಡಿಗರಾಗಸಾಧ್ಯವಿದೆ ಎಂದು ತಿಳಿಯುವುದು ಹೃದಯೋತ್ತೇಜಕವಾದದ್ದಾಗಿದೆ. ವಾಸ್ತವದಲ್ಲಿ, ಇದನ್ನೇ ಮಾಡುವಂತೆ ಆತನು ನಮ್ಮನ್ನು ಉತ್ತೇಜಿಸುತ್ತಾನೆ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಬೈಬಲ್‌ ಹೇಳುತ್ತದೆ. (ಯಾಕೋಬ 4:8) ನಾವು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವಂತೆ ಆತನು ಬಯಸುತ್ತಾನೆ. ವಾಸ್ತವದಲ್ಲಿ, ಇಂಥ ಸಂಬಂಧವನ್ನು ಸಾಧ್ಯಗೊಳಿಸಲಿಕ್ಕಾಗಿ ಆತನು ಈಗಾಗಲೇ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಾನೆ. ಯೇಸುವಿನ ವಿಮೋಚನಾ ಮೌಲ್ಯದ ಯಜ್ಞವು, ನಾವು ಸರ್ವಶಕ್ತ ದೇವರೊಂದಿಗೆ ಸ್ನೇಹಸಂಬಂಧವನ್ನು ಪಡೆಯುವಂತೆ ಸಾಧ್ಯಗೊಳಿಸಿದೆ. ಬೈಬಲ್‌ ತಿಳಿಸುವುದು: “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.”​—⁠1 ಯೋಹಾನ 4:⁠19.

19 ನಾವು ಪ್ರತಿಕೂಲ ಸನ್ನಿವೇಶಗಳ ಕೆಳಗೆ ತಾಳಿಕೊಳ್ಳುವಾಗ, ಆ ಆಪ್ತ ಸಂಬಂಧವು ಬಲಗೊಳಿಸಲ್ಪಡುತ್ತದೆ. ಶಿಷ್ಯನಾದ ಯಾಕೋಬನು ಬರೆದುದು: “ಆ ತಾಳ್ಮೆಯು ಸಿದ್ಧಿಗೆ ಬರಲಿ [“ತನ್ನ ಕೆಲಸವನ್ನು ಪೂರ್ಣಗೊಳಿಸಲಿ,” NW]; ಆಗ ನೀವು ಶಿಕ್ಷಿತರೂ ಸರ್ವಸುಗುಣವುಳ್ಳವರೂ ಏನೂ ಕಡಿಮೆಯಿಲ್ಲದವರೂ ಆಗಿರುವಿರಿ.” (ಯಾಕೋಬ 1:4) ಕಷ್ಟವನ್ನು ತಾಳಿಕೊಳ್ಳುವ ಮೂಲಕ ಯಾವ ‘ಕೆಲಸವು’ ಸಾಧಿಸಲ್ಪಡುತ್ತದೆ? ಪೌಲನ ‘ಶರೀರದಲ್ಲಿ ನಾಟಿದ್ದ ಶೂಲ’ವನ್ನು ಜ್ಞಾಪಿಸಿಕೊಳ್ಳಿರಿ. ಅವನ ವಿಷಯದಲ್ಲಿ ತಾಳ್ಮೆಯು ಏನನ್ನು ಸಾಧಿಸಿತು? ತನ್ನ ಕಷ್ಟಗಳ ಕುರಿತು ಪೌಲನು ಹೀಗೆ ಹೇಳಿದನು: “ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. ಆದದರಿಂದ ಕ್ರಿಸ್ತನ ನಿಮಿತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ.” (2 ಕೊರಿಂಥ 12:9, 10) ತಾನು ತಾಳಿಕೊಳ್ಳಲು ಶಕ್ತನಾಗುವಂತೆ ಅಗತ್ಯವಿರುವ ಬಲವನ್ನು, ಆವಶ್ಯಕತೆಯಿರುವಲ್ಲಿ ‘ಬಲಾಧಿಕ್ಯವನ್ನು’ ಯೆಹೋವನು ಒದಗಿಸುತ್ತಾನೆಂಬುದು ಪೌಲನ ಅನುಭವವಾಗಿತ್ತು. ಇದು ಅವನನ್ನು ಕ್ರಿಸ್ತನ ಮತ್ತು ಯೆಹೋವ ದೇವರ ಹೆಚ್ಚು ಸಮೀಪಕ್ಕೆ ಸೆಳೆಯಿತು.​—⁠2 ಕೊರಿಂಥ 4:7; ಫಿಲಿಪ್ಪಿ 4:11-13.

20 ಯೆಹೋವನು ನಿಮ್ಮ ಕಷ್ಟಗಳು ಮುಂದುವರಿಯುವಂತೆ ಅನುಮತಿಸಿರಬಹುದು. ಹಾಗಿರುವಲ್ಲಿ, ಯಾರು ಆತನಿಗೆ ಭಯಪಡುತ್ತಾರೋ ಅವರಿಗೆ ಆತನು ಮಾಡಿರುವ ವಾಗ್ದಾನವನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಅದೇನೆಂದರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5) ನೀವು ಇಂಥ ಬೆಂಬಲ ಮತ್ತು ಸಾಂತ್ವನವನ್ನು ಅನುಭವಿಸಸಾಧ್ಯವಿದೆ. ಯೆಹೋವನು ನಿಮ್ಮ ‘ತಲೇಕೂದಲುಗಳನ್ನು ಸಹ ಎಣಿಸಿದ್ದಾನೆ.’ ಆತನು ನಿಮ್ಮ ತಾಳ್ಮೆಯನ್ನು ನೋಡುತ್ತಾನೆ. ನಿಮ್ಮ ನೋವಿನ ಅನಿಸಿಕೆ ಆತನಿಗೂ ಆಗುತ್ತದೆ. ಆತನು ನಿಜವಾಗಿಯೂ ನಿಮ್ಮ ಕುರಿತು ಕಾಳಜಿ ವಹಿಸುತ್ತಾನೆ. ಮತ್ತು ದೇವರೆಂದೂ ‘ನಿಮ್ಮ ಕೆಲಸವನ್ನೂ ನೀವು ಆತನ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಮರೆಯುವುದಿಲ್ಲ.’​—⁠ಇಬ್ರಿಯ 6:⁠10.

[ಪಾದಟಿಪ್ಪಣಿಗಳು]

^ ಪ್ಯಾರ. 4 ತದ್ರೀತಿಯ ಹೇಳಿಕೆಗಳನ್ನು ನೀತಿವಂತನಾದ ದಾವೀದನು ಮತ್ತು ಕೋರಹನ ನಂಬಿಗಸ್ತ ಪುತ್ರರು ನುಡಿದರು.​—⁠ಕೀರ್ತನೆ 10:1; 44:⁠24.

^ ಪ್ಯಾರ. 6 ಪೌಲನ ‘ಶರೀರದಲ್ಲಿ ನಾಟಿದ್ದ ಶೂಲವು’ ಏನಾಗಿತ್ತೆಂಬುದನ್ನು ಬೈಬಲು ನಿರ್ದಿಷ್ಟವಾಗಿ ತಿಳಿಸುವುದಿಲ್ಲ. ಅದು ದೃಷ್ಟಿಯ ಕೊರತೆಯಂಥ ಶಾರೀರಿಕ ಅಸೌಖ್ಯವಾಗಿರಬಹುದು. ಅಥವಾ ‘ಶರೀರದಲ್ಲಿ ನಾಟಿದ್ದ ಶೂಲ’ ಎಂಬ ಅಭಿವ್ಯಕ್ತಿಯು, ಪೌಲನ ಅಪೊಸ್ತಲತನಕ್ಕೆ ಹಾಗೂ ಶುಶ್ರೂಷೆಗೆ ಸವಾಲೊಡ್ಡಿದಂಥ ಸುಳ್ಳು ಅಪೊಸ್ತಲರಿಗೆ ಮತ್ತು ಇತರರಿಗೆ ಸೂಚಿತವಾಗಿರಲೂಬಹುದು.​—⁠2 ಕೊರಿಂಥ 11:6, 13-15; ಗಲಾತ್ಯ 4:15; 6:11.

^ ಪ್ಯಾರ. 13 ಗುಬ್ಬಿಯು ನೆಲಕ್ಕೆ ಬೀಳುವುದು, ಅದು ಸಾಯುವುದಕ್ಕೆ ಮಾತ್ರ ಸೂಚಿತವಾಗಿಲ್ಲ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಮೂಲ ಭಾಷೆಯ ವಾಕ್ಸರಣಿಯು, ಒಂದು ಪಕ್ಷಿಯು ಆಹಾರಕ್ಕಾಗಿ ನೆಲದ ಮೇಲೆ ಬರುವುದನ್ನು ಸೂಚಿಸಬಹುದು ಎಂದು ಅವರು ತಿಳಿಸುತ್ತಾರೆ. ವಿಷಯವು ಹೀಗಿರುವಲ್ಲಿ, ಒಂದು ಪಕ್ಷಿಯು ಸಾಯುವಾಗ ಮಾತ್ರವಲ್ಲ, ಅದರ ದೈನಂದಿನ ಚಟುವಟಿಕೆಗಳ ಸಮಯದಲ್ಲೂ ದೇವರು ಗಮನಿಸುತ್ತಾನೆ ಮತ್ತು ಅದರ ಕಾಳಜಿ ವಹಿಸುತ್ತಾನೆ ಎಂಬುದು ಇದರ ಅರ್ಥವಾಗಿದೆ.​—⁠ಮತ್ತಾಯ 6:⁠26.

^ ಪ್ಯಾರ. 20 ಪುರಾತನ ಸಮಯಗಳಲ್ಲಿ ಕುರಿಗಳು, ಆಡುಗಳು ಮತ್ತು ದನಕರುಗಳ ಹದಮಾಡಲ್ಪಟ್ಟ ಚರ್ಮದಿಂದ ಬುದ್ದಲಿಗಳನ್ನು ಮಾಡಲಾಗುತ್ತಿತ್ತು. ಇಂಥ ಬುದ್ದಲಿಗಳನ್ನು ಹಾಲು, ಬೆಣ್ಣೆ, ಚೀಸ್‌ ಅಥವಾ ನೀರನ್ನು ಶೇಖರಿಸಲಿಕ್ಕಾಗಿ ಉಪಯೋಗಿಸಲಾಗುತ್ತಿತ್ತು. ತುಂಬ ಹೆಚ್ಚು ಹದಮಾಡಲ್ಪಟ್ಟ ಬುದ್ದಲಿಗಳಲ್ಲಿ ಎಣ್ಣೆ ಅಥವಾ ದ್ರಾಕ್ಷಾರಸವನ್ನು ಇಡಸಾಧ್ಯವಿತ್ತು.

ನಿಮಗೆ ನೆನಪಿದೆಯೆ?

• ಯಾವ ಅಂಶಗಳು, ದೇವರು ತನ್ನ ಕೈಬಿಟ್ಟಿದ್ದಾನೆ ಎಂದು ಒಬ್ಬ ವ್ಯಕ್ತಿಯು ಆಲೋಚಿಸುವಂತೆ ಮಾಡಬಲ್ಲವು?

• ಗುಬ್ಬಿಗಳು ಮತ್ತು ನಮ್ಮ ತಲೇಕೂದಲುಗಳ ಎಣಿಕೆಯ ಕುರಿತಾದ ಯೇಸುವಿನ ದೃಷ್ಟಾಂತಗಳಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

• ಒಬ್ಬನ ಕಣ್ಣೀರನ್ನು ಯೆಹೋವನು ‘ಬುದ್ದಲಿಯಲ್ಲಿ’ ತುಂಬಿಸುವುದು ಅಥವಾ ಆತನ ‘ಪುಸ್ತಕದಲ್ಲಿ’ ಬರೆದಿಡುವುದರ ಅರ್ಥವೇನು?

• ‘ಯೆಹೋವನೊಂದಿಗೆ ಆಪ್ತತೆಯನ್ನು’ ನಾವು ಹೇಗೆ ಪಡೆಯಸಾಧ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1, 2. (ಎ) ದೇವರು ತನ್ನನ್ನು ತೊರೆದಿದ್ದಾನೆ ಎಂದು ಯೋಬನಿಗೆ ಅನಿಸಿದ್ದೇಕೆ? (ಬಿ) ಯೋಬನ ಅಭಿವ್ಯಕ್ತಿಗಳು, ಅವನು ದೇವರನ್ನು ವಿರೋಧಿಸುವವನಾಗಿ ಪರಿಣಮಿಸಿದನು ಎಂಬರ್ಥವನ್ನು ಕೊಡುತ್ತವೋ? ವಿವರಿಸಿ.

3. ಕಷ್ಟಸಂಕಟಗಳು ಬಂದೆರಗುವಾಗ ನಮ್ಮ ಮನಸ್ಸಿಗೆ ಯಾವ ಆಲೋಚನೆ ಬರಬಹುದು?

4. ಪೌಲನು ಯಾವ ಸನ್ನಿವೇಶವನ್ನು ಸತತವಾಗಿ ತಾಳಿಕೊಳ್ಳಬೇಕಾಗಿತ್ತು, ಮತ್ತು ಯಾವ ವಿಧಗಳಲ್ಲಿ ಇಂಥ ಒಂದು ಸನ್ನಿವೇಶವು ನಮ್ಮ ಮೇಲೆ ಪರಿಣಾಮ ಬೀರಬಹುದು?

5, 6. (ಎ) ಮುಂದೆ ಏನು ಸಂಭವಿಸಲಿಕ್ಕಿತ್ತೋ ಅದರ ವಿಷಯದಲ್ಲಿ ಅಪೊಸ್ತಲರು ಹೆದರದಿರಲು ಯೇಸು ಅವರಿಗೆ ಹೇಗೆ ಸಹಾಯಮಾಡಿದನು? (ಬಿ) ತನ್ನ ವಿಷಯದಲ್ಲಿ ಯೆಹೋವನಿಗಿರುವ ಕಾಳಜಿಯಲ್ಲಿ ಪೌಲನು ಹೇಗೆ ದೃಢಭರವಸೆಯನ್ನು ತೋರಿಸಿದನು?

7, 8. (ಎ) ಯೇಸುವಿನ ದಿನದಲ್ಲಿ ಗುಬ್ಬಿಗಳನ್ನು ಹೇಗೆ ಪರಿಗಣಿಸಲಾಗುತ್ತಿತ್ತು? (ಬಿ) ಮತ್ತಾಯ 10:29ನೆಯ ವಚನವು, “ಗುಬ್ಬಿಗಳು” ಎಂಬ ಗ್ರೀಕ್‌ ಪದದ “ಚಿಕ್ಕ ಗುಬ್ಬಿಗಳು” ಎಂಬರ್ಥವನ್ನು ಕೊಡುವ ಒಂದು ರೂಪವನ್ನು ಉಪಯೋಗಿಸುತ್ತದೇಕೆ?

9. ಗುಬ್ಬಿಗಳ ಕುರಿತಾದ ಯೇಸುವಿನ ದೃಷ್ಟಾಂತದಲ್ಲಿ ಯಾವ ಪ್ರಮುಖ ಅಂಶವು ತಿಳಿಸಲ್ಪಟ್ಟಿದೆ?

10. “ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ” ಎಂಬ ಹೇಳಿಕೆಯ ವಿಶೇಷತೆ ಏನು?

11. ವೈಯಕ್ತಿಕವಾಗಿ ತನ್ನ ಕಡೆಗಿರುವ ಯೆಹೋವನ ಹಿತಾಸಕ್ತಿಯಲ್ಲಿ ದಾವೀದನು ಹೇಗೆ ದೃಢಭರವಸೆಯನ್ನು ವ್ಯಕ್ತಪಡಿಸಿದನು?

12. ತನ್ನ ಜನರು ಅನುಭವಿಸುವ ಕಷ್ಟಸಂಕಟವನ್ನು ಯೆಹೋವನು ಚೆನ್ನಾಗಿ ಬಲ್ಲಾತನಾಗಿದ್ದಾನೆ ಎಂಬುದು ನಮಗೆ ಹೇಗೆ ಗೊತ್ತು?

13. ಯೆಹೋವನು ತನ್ನ ಸೇವಕರ ವಿಷಯದಲ್ಲಿ ನಿಜವಾಗಿಯೂ ಮರುಗುತ್ತಾನೆ ಎಂಬುದನ್ನು ಯಾವುದು ತೋರಿಸುತ್ತದೆ?

14. ಯಾವ ಸನ್ನಿವೇಶಗಳ ಕೆಳಗೆ 56ನೇ ಕೀರ್ತನೆಯು ರಚಿಸಲ್ಪಟ್ಟಿತು?

15. (ಎ) ತನ್ನ ಕಣ್ಣೀರನ್ನು ಬುದ್ದಲಿಯಲ್ಲಿ ತುಂಬಿಸುವಂತೆ ಅಥವಾ ಒಂದು ಪುಸ್ತಕದಲ್ಲಿ ಬರೆಯುವಂತೆ ದಾವೀದನು ಯೆಹೋವನಿಗೆ ಕೇಳಿಕೊಂಡಾಗ ಅದರ ಅರ್ಥವೇನಾಗಿತ್ತು? (ಬಿ) ನಾವು ನಂಬಿಕೆಯ ಪರೀಕ್ಷೆಯೊಂದನ್ನು ತಾಳಿಕೊಳ್ಳುತ್ತಿರುವಾಗ ಯಾವ ವಿಷಯದಲ್ಲಿ ಖಾತ್ರಿಯಿಂದಿರಸಾಧ್ಯವಿದೆ?

16, 17. (ಎ) ತನ್ನ ಜನರು ಎದುರಿಸುವ ಸಮಸ್ಯೆಗಳ ಬಗ್ಗೆ ಯೆಹೋವನು ಉದಾಸೀನತೆ ತೋರಿಸುವುದಿಲ್ಲ ಎಂಬುದು ನಮಗೆ ಹೇಗೆ ಗೊತ್ತು? (ಬಿ) ಜನರು ತನ್ನೊಂದಿಗೆ ಆಪ್ತ ಸಂಬಂಧವನ್ನು ಹೊಂದಲಿಕ್ಕಾಗಿ ಯೆಹೋವನು ಏನು ಮಾಡಿದ್ದಾನೆ?

18. ನಾವು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಇಟ್ಟುಕೊಳ್ಳುವಂತೆ ಆತನು ಬಯಸುತ್ತಾನೆ ಎಂಬುದು ನಮಗೆ ಹೇಗೆ ಗೊತ್ತು?

19. ತಾಳ್ಮೆಯು ಯೆಹೋವನೊಂದಿಗಿನ ನಮ್ಮ ಸಂಬಂಧವನ್ನು ಹೇಗೆ ಬಲಗೊಳಿಸುತ್ತದೆ?

20. ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುವಾಗ ಯೆಹೋವನು ನಮಗೆ ಬೆಂಬಲ ಮತ್ತು ಸಾಂತ್ವನವನ್ನು ನೀಡುವನು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ ಹೇಗೆ?

[ಪುಟ 22ರಲ್ಲಿರುವ ಚಿತ್ರ]

ಪೌಲನ ‘ಶರೀರದಲ್ಲಿ ನಾಟಿದ್ದ ಶೂಲವನ್ನು’ ಯೆಹೋವನು ಏಕೆ ತೆಗೆದುಹಾಕಲಿಲ್ಲ?

[ಪುಟ 23ರಲ್ಲಿರುವ ಚಿತ್ರ]

ಗುಬ್ಬಿಗಳ ಕುರಿತಾದ ಯೇಸುವಿನ ದೃಷ್ಟಾಂತದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?

[ಕೃಪೆ]

© J. Heidecker/VIREO

[ಪುಟ 25ರಲ್ಲಿರುವ ಚಿತ್ರ]

ನಾವು ಬೈಬಲನ್ನು ಕ್ರಮವಾಗಿ ಓದುವ ಮೂಲಕ ದೇವರು ವ್ಯಕ್ತಿಗತವಾಗಿ ನಮ್ಮ ಕುರಿತು ಕಾಳಜಿ ವಹಿಸುತ್ತಾನೆ ಎಂಬ ಆಶ್ವಾಸನೆಯನ್ನು ಪಡೆದುಕೊಳ್ಳಸಾಧ್ಯವಿದೆ