ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಲಿಲಾಯ ಸಮುದ್ರದಲ್ಲಿ

ಗಲಿಲಾಯ ಸಮುದ್ರದಲ್ಲಿ

ಗಲಿಲಾಯ ಸಮುದ್ರದಲ್ಲಿ

ಮಾರ್ಕ 4:​35-41ರಲ್ಲಿ ದಾಖಲೆಯಾಗಿರುವ ಒಂದು ವೃತ್ತಾಂತವು, ಯೇಸು ಮತ್ತು ಅವನ ಶಿಷ್ಯರು ಗಲಿಲಾಯ ಸಮುದ್ರದ ಆಚೇದಡಕ್ಕೆ ಹೋಗಲು ದೋಣಿಯಲ್ಲಿ ಪ್ರಯಾಣಿಸಿದ ವಿಷಯವನ್ನು ವರದಿಸುತ್ತದೆ. ನಾವು ಓದುವುದು: “ತರುವಾಯ ದೊಡ್ಡ ಬಿರುಗಾಳಿ ಎದ್ದು ತೆರೆಗಳು ಆ ದೋಣಿಗೆ ಬಡಿದು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವದಕ್ಕೆ ಬಂದಿತ್ತು. ಆತನು [ಯೇಸು] ದೋಣಿಯ ಹಿಂಭಾಗದಲ್ಲಿ ತಲೆಗಿಂಬನ್ನು [ಅಥವಾ, ತಲೆದಿಂಬನ್ನು] ಒರಗಿ ನಿದ್ದೆಮಾಡುತ್ತಿದ್ದನು.”

‘ತಲೆದಿಂಬು’ ಎಂಬುದಾಗಿ ಭಾಷಾಂತರವಾಗಿರುವ ಗ್ರೀಕ್‌ ಪದವು, ಬೈಬಲಿನಲ್ಲಿ ಇದೊಂದೇ ಸ್ಥಳದಲ್ಲಿ ಕಂಡುಬರುತ್ತದೆ. ಆದುದರಿಂದ, ವಿದ್ವಾಂಸರಿಗೆ ಇಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್‌ ಪದದ ಸರಿಯಾದ ಅರ್ಥ ತಿಳಿದಿಲ್ಲ. ಹೆಚ್ಚಿನ ಬೈಬಲ್‌ ಭಾಷಾಂತರಗಳು ಈ ಪದವನ್ನು ‘ತಲೆದಿಂಬು’ ಅಥವಾ “ದಿಂಬು” ಎಂಬುದಾಗಿ ಭಾಷಾಂತರಿಸಿವೆ. ಆದರೆ, ಈ ತಲೆದಿಂಬು ಅಥವಾ ದಿಂಬು ಯಾವ ರೀತಿಯದ್ದಾಗಿತ್ತು? ಮೂಲಭಾಷೆಯಲ್ಲಿ, ತಲೆದಿಂಬು ಎಂದು ಭಾಷಾಂತರವಾಗಿರುವ ಪದವನ್ನು ದೋಣಿಯ ಉಪಕರಣದ ಒಂದು ಭಾಗ ಎಂದು ಸೂಚಿಸುವ ರೀತಿಯಲ್ಲಿ ಮಾರ್ಕನು ಬರೆದಿದ್ದಾನೆ. 1986ರಲ್ಲಿ ಗಲಿಲಾಯ ಸಮುದ್ರದ ಹತ್ತಿರ ಕಂಡುಹಿಡಿಯಲ್ಪಟ್ಟ ಒಂದು ದೋಣಿಯು ಮಾರ್ಕನಿಂದ ಉಪಯೋಗಿಸಲ್ಪಟ್ಟ ಈ ಗ್ರೀಕ್‌ ಪದದ ಮೇಲೆ ಬೆಳಕನ್ನು ಚೆಲ್ಲಿತು.

ಈ ಎಂಟು ಮೀಟರ್‌ ಉದ್ದದ ದೋಣಿಯು ಹಾಯಿ ಮತ್ತು ಹುಟ್ಟುಗೋಲಿನಿಂದ ನಡೆಸಲ್ಪಡುತ್ತಿತ್ತು ಎಂಬುದನ್ನು ಸಂಶೋಧನೆಯು ತೋರಿಸಿಕೊಟ್ಟಿತು. ಮಾತ್ರವಲ್ಲದೆ, ಅಂಥ ದೋಣಿಯನ್ನು ಮೀನು ಹಿಡಿಯಲು ಉಪಯೋಗಿಸಲಾಗುತ್ತಿತ್ತು ಮತ್ತು ದೊಡ್ಡ ಗಾತ್ರದ ಹಾಗೂ ಭಾರವಾದ ಸೇನ್‌ ಬಲೆಯನ್ನು ಇಡಲು ದೋಣಿಯ ಹಿಂಭಾಗದಲ್ಲಿ ಅಟ್ಟವಿರುತ್ತಿತ್ತು ಎಂಬುದೂ ತಿಳಿಯಿತು. ದೋಣಿಯ ಅವಶೇಷಗಳು ಸಾ.ಶ.ಪೂ. 100 ಮತ್ತು ಸಾ.ಶ. 70ರ ನಡುವಣ ಸಮಯದ್ದಾಗಿತ್ತು. ಯೇಸು ಮತ್ತು ಅವನ ಶಿಷ್ಯರು ಉಪಯೋಗಿಸುತ್ತಿದ್ದ ದೋಣಿಯು ಇದರಂತೆಯೇ ಇದ್ದಿರಬಹುದು. ದೋಣಿಯನ್ನು ಕಂಡುಹಿಡಿಯುವ ತಂಡದಲ್ಲಿ ಒಬ್ಬರಾಗಿದ್ದ ಶೆಲ್‌ಈ ವಾಕ್ಸ್‌ಮಾನ್‌, ಗಲಿಲಾಯ ಸಮುದ್ರದ ದೋಣಿ​—⁠2000 ವರುಷಗಳ ಹಳೆಯ ಒಂದು ಅಸಾಧಾರಣ ಕಂಡುಹಿಡಿತ (ಇಂಗ್ಲಿಷ್‌) ಎಂಬ ಒಂದು ಪುಸ್ತಕವನ್ನು ಬರೆದರು. ಯೇಸು ಮಲಗಲು ಉಪಯೋಗಿಸಿದ ‘ತಲೆದಿಂಬು,’ ಹಡಗು ಓಲಾಡದಂತೆ ಸ್ಥಿರವಾಗಿರಿಸಲು ಉಪಯೋಗಿಸುತ್ತಿದ್ದ ಒಂದು ಮರಳುಚೀಲವಾಗಿತ್ತು ಎಂದು ಅವರು ಹೇಳಿದರು. ಸೇನ್‌ ಬಲೆಯನ್ನು ಉಪಯೋಗಿಸಿ ಮೀನು ಹಿಡಿಯುವುದರಲ್ಲಿ ಬಹಳ ಪರಿಣತನಾದ ಜಾಫದ ಅನುಭವಸ್ಥ ಬೆಸ್ತನು ಹೇಳುವುದು: “ನಾನು ಯುವಕನಾಗಿದ್ದಾಗ ಕೆಲಸಮಾಡುತ್ತಿದ್ದ ಮೆಡಿಟರೇನಿಯನ್‌ ಸಮುದ್ರದಲ್ಲಿನ ದೋಣಿಗಳಲ್ಲಿ ಯಾವಾಗಲೂ ಒಂದು ಅಥವಾ ಎರಡು ಮರಳುಚೀಲಗಳಿರುತ್ತಿದ್ದವು. . . . ದೋಣಿಯು ಓಲಾಡದಂತೆ ಸ್ಥಿರವಾಗಿರಿಸಲು ಇದನ್ನು ಉಪಯೋಗಿಸಲಾಗುತ್ತಿತ್ತು. ಆದರೆ ಅವು ಉಪಯೋಗದಲ್ಲಿಲ್ಲದಿದ್ದಾಗ, ನಾವು ಅದನ್ನು ದೋಣಿಯ ಅಟ್ಟದ ಅಡಿಯಲ್ಲಿ ಇಡುತ್ತಿದ್ದೆವು. ಒಂದುವೇಳೆ ಯಾರಿಗಾದರೂ ತೀರ ಸುಸ್ತಾಗಿದ್ದರೆ, ಅವರು ದೋಣಿಯ ಅಟ್ಟದ ಅಡಿಭಾಗಕ್ಕೆ ನುಗ್ಗಿ, ಮರಳುಚೀಲವನ್ನು ತಲೆದಿಂಬಾಗಿ ಉಪಯೋಗಿಸಿ ನಿದ್ರೆಮಾಡುತ್ತಿದ್ದರು.”

ಮಾರ್ಕನ ವರ್ಣನೆಯು ಸಹ, ಯೇಸು ಬಿರುಗಾಳಿಯ ಸಮಯದಲ್ಲಿ ದೋಣಿಯ ಅತಿ ಹೆಚ್ಚು ಸುರಕ್ಷಿತ ಭಾಗವಾದ ಅಟ್ಟದ ಅಡಿಭಾಗದಲ್ಲಿ ಮರಳುಚೀಲವನ್ನು ತನ್ನ ತಲೆಯ ಕೆಳಗಿಟ್ಟು ನಿದ್ರಿಸಿದನು ಎಂಬ ಅರ್ಥವನ್ನು ನೀಡುತ್ತದೆ ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ತಲೆದಿಂಬು ಯಾವುದೇ ರೀತಿಯದ್ದಾಗಿರಲಿ, ಹೆಚ್ಚು ಗಮನಾರ್ಹ ಸಂಗತಿಯು ಅನಂತರ ನಡೆದ ಸಂಗತಿಯೇ ಆಗಿತ್ತು. ದೇವರ ಸಹಾಯ ಮತ್ತು ಶಕ್ತಿಯಿಂದ ಯೇಸು ಆ ಬಿರುಗಾಳಿಯನ್ನು ಶಾಂತಗೊಳಿಸಿದನು. ಇದನ್ನು ನೋಡಿ ಶಿಷ್ಯರು ಸಹ ಹೀಗೆ ಕೇಳಿದರು: “ಈತನು ಯಾರಿರಬಹುದು? ಗಾಳಿಯೂ ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ.”