ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮರಣದ ಧ್ವಂಸಕಾರಿ ಪ್ರಭಾವ

ಮರಣದ ಧ್ವಂಸಕಾರಿ ಪ್ರಭಾವ

ಮರಣದ ಧ್ವಂಸಕಾರಿ ಪ್ರಭಾವ

“ಆರು ವರುಷದ ಹುಡುಗಿಯ ಆತ್ಮಹತ್ಯೆ.” ದಿಗ್ಭ್ರಮೆಗೊಳಿಸುವ ಈ ವಾರ್ತಾ ಮೇಲ್ಭರಹವು, ಜ್ಯಾಕೀ ಎಂಬ ಒಬ್ಬ ಚಿಕ್ಕ ಹುಡುಗಿಯ ವಿಪತ್ಕಾರಕ ಮರಣವನ್ನು ಸೂಚಿಸಿತು. ಅವಳ ತಾಯಿಯು ಒಂದು ಮಾರಕ ರೋಗದಿಂದ ಇತ್ತೀಚೆಗೆ ತೀರಿಕೊಂಡಿದ್ದಳು. ಆತ್ಮಹತ್ಯೆ ಮಾಡಿಕೊಳ್ಳಲಿಕ್ಕಾಗಿ ಚಲಿಸುತ್ತಿರುವ ರೈಲಿನ ಮುಂದೆ ಹೋಗುವ ಮುನ್ನ ಜ್ಯಾಕೀ ತನ್ನ ಒಡಹುಟ್ಟಿದವರಿಗೆ, ತಾನು ‘ಒಬ್ಬ ದೇವದೂತಳಾಗಿ ತನ್ನ ತಾಯಿಯೊಂದಿಗಿರಲು’ ಬಯಸುತ್ತೇನೆ ಎಂದು ಹೇಳಿದ್ದಳು.

ಈಯನ್‌ ಎಂಬ 18 ವರುಷದ ಹುಡುಗನು, ತನ್ನ ತಂದೆ ಏಕೆ ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ಸತ್ತರು ಎಂದು ವಿವರಿಸುವಂತೆ ಅವನ ಪಾದ್ರಿಯನ್ನು ಬೇಡಿಕೊಂಡನು. ಈಯನ್‌ನ ತಂದೆಯು ಒಬ್ಬ ಒಳ್ಳೇ ಮನುಷ್ಯನಾಗಿದ್ದ ಕಾರಣ ದೇವರು ಅವನನ್ನು ತನ್ನೊಂದಿಗೆ ಜೀವಿಸಲು ಸ್ವರ್ಗಕ್ಕೆ ಕರೆದೊಯ್ದನು ಎಂದು ಪಾದ್ರಿಯು ತಿಳಿಸಿದರು. ಈ ವಿವರಣೆಯನ್ನು ಕೇಳಿದ ಈಯನ್‌, ದೇವರು ಕ್ರೂರಿಯಾಗಿದ್ದಾನೆ ಮತ್ತು ಅಂಥವನನ್ನು ತಿಳಿದುಕೊಳ್ಳಲು ತಾನು ಬಯಸುವುದಿಲ್ಲ ಎಂಬ ನಿರ್ಣಯಕ್ಕೆ ಬಂದನು. ಈಯನ್‌ಗೆ ಜೀವಿತವು ಅರ್ಥಶೂನ್ಯವಾಗಿ ತೋರಿದ್ದರಿಂದ, ಭೋಗಾಸಕ್ತಿಯ ಜೀವನವನ್ನು ಬೆನ್ನಟ್ಟಲು ಅವನು ನಿರ್ಧರಿಸಿದನು. ಈ ಕಾರಣ ಅವನು ಮದ್ಯ, ಅಮಲೌಷಧ ಮತ್ತು ಅನೈತಿಕ ಜೀವನದ ಗುಲಾಮನಾದನು. ಅವನ ಜೀವನವು ಯಾವುದೇ ನಿಯಂತ್ರಣವಿಲ್ಲದೆ ಸುತ್ತುತ್ತಿತ್ತು.

‘ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟು’

ದುಃಖಕರವಾದ ಈ ಎರಡು ಘಟನೆಗಳು, ಮರಣವು​—⁠ಮುಖ್ಯವಾಗಿ ಅದು ಆಕಸ್ಮಿಕವಾಗಿ ಸಂಭವಿಸುವಾಗ​—⁠ಜನರ ಜೀವಿತಗಳನ್ನು ಯಾವ ರೀತಿಯಲ್ಲಿ ನುಚ್ಚುನೂರುಗೊಳಿಸಬಲ್ಲದು ಎಂಬುದನ್ನು ದೃಷ್ಟಾಂತಿಸುತ್ತವೆ. ‘ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟು’ ಎಂದು ಬೈಬಲಿನಲ್ಲಿ ತಿಳಿಸಿರುವ ವಾಸ್ತವಾಂಶವು ಎಲ್ಲರಿಗೂ ತಿಳಿದಿದೆ ಎಂಬುದು ನಿಜ. (ಪ್ರಸಂಗಿ 9:⁠5) ಆದರೆ ಅನೇಕರು ಈ ಕ್ರೂರ ನಿಜತ್ವವನ್ನು ಅಲಕ್ಷ್ಯಮಾಡಲು ಬಯಸುತ್ತಾರೆ. ನಿಮ್ಮ ಕುರಿತಾಗಿ ಏನು? ಜೀವನವು ನಮ್ಮ ಸಮಯ ಮತ್ತು ಗಮನವನ್ನು ಎಷ್ಟು ಕೇಳಿಕೊಳ್ಳುತ್ತದೆಂದರೆ ಭವಿಷ್ಯತ್ತಿನಲ್ಲಿ ಸಂಭವಿಸಬಹುದಾದ ನಮ್ಮ ಮರಣದ ಕುರಿತು ನಮಗೆ ಆಲೋಚಿಸಲು ಸಹ ಸಮಯವಿಲ್ಲದಿರಬಹುದು.

“ಹೆಚ್ಚಿನ ಜನರು ಮರಣಕ್ಕೆ ಭಯಪಡುತ್ತಾರೆ ಮತ್ತು ಅದರ ಕುರಿತು ಆಲೋಚಿಸಲೂ ಬಯಸುವುದಿಲ್ಲ” ಎಂಬುದಾಗಿ ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯಾ ತಿಳಿಸುತ್ತದೆ. ಹಾಗಿದ್ದರೂ, ಒಂದು ಗಂಭೀರವಾದ ಅಪಘಾತ ಇಲ್ಲವೆ ಮಾರಕ ರೋಗವು, ಮರಣವನ್ನು ರುಚಿಸಿ ನೋಡುವಂತೆ ನಮ್ಮನ್ನು ಒತ್ತಾಯಿಸಬಹುದು. ಅಥವಾ ಒಬ್ಬ ಸ್ನೇಹಿತನ ಇಲ್ಲವೆ ಸಂಬಂಧಿಕನ ಮರಣವು, ಇಡೀ ಮಾನವಕುಲವು ಕೊನೆಗೆ ಅನುಭವಿಸಲಿರುವ ಕ್ರೂರ ಸಂಗತಿಯನ್ನು ನಮ್ಮ ನೆನಪಿಗೆ ತರಬಹುದು.

ಆದರೂ, ದುಃಖಿಸುವವರು ಶವ ಸಂಸ್ಕಾರಗಳಲ್ಲಿ ಅನೇಕವೇಳೆ ಈ ರೀತಿಯಾಗಿ ಹೇಳುವುದನ್ನು ನಾವು ಕೇಳಿಸಿಕೊಳ್ಳುತ್ತೇವೆ, “ಜೀವನವು ಹೇಗಿದ್ದರೂ ಸಾಗಲೇ ಬೇಕು.” ಮತ್ತು ಇದು ಸತ್ಯವಾಗಿದೆ. ವಾಸ್ತವದಲ್ಲಿ, ಜೀವನವು ಎಷ್ಟು ವೇಗವಾಗಿ ಸಾಗುತ್ತದೆಂದರೆ, ಅತಿ ಬೇಗನೆ ನಾವು ವೃದ್ಧಾಪ್ಯದ ಸಮಸ್ಯೆಗಳನ್ನು ಎದುರಿಸುತ್ತೇವೆ. ಆ ಸಮಯದಲ್ಲಿ, ಮರಣವು ದೂರದ ಒಂದು ಸಂಗತಿಯಂತೆ ತೋರುವುದಿಲ್ಲ. ಆ ಸಮಯದಲ್ಲಿ ನಮಗೆ ಅನೇಕ ಶವ ಸಂಸ್ಕಾರಗಳನ್ನು ಹಾಜರಾಗಲಿಕ್ಕಿರುತ್ತದೆ, ದೀರ್ಘಕಾಲದ ಅನೇಕ ಸ್ನೇಹಿತರ ಕಳೆದುಕೊಳ್ಳುವಿಕೆಯನ್ನು ಸಹಿಸಿಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಅನೇಕ ವೃದ್ಧರ ಮನಸ್ಸಿನಲ್ಲಿ ಆಗಾಗ ಏಳುವ ಕ್ಷೋಭೆಗೊಳಿಸುವ ಪ್ರಶ್ನೆಯು, “ನನ್ನ ಸರದಿಯು ಯಾವಾಗ ಬರುತ್ತದೆ?” ಎಂದಾಗಿದೆ.

ದೊಡ್ಡ ಪ್ರಶ್ನಾರ್ಥಕ ಚಿಹ್ನೆ

ಮರಣವು ಖಂಡಿತ ಬಂದೇ ಬರುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲವಾದರೂ, ಮರಣದ ಅನಂತರ ಏನು ಸಂಭವಿಸುತ್ತದೆ ಎಂಬುದು ಇನ್ನೂ ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದಿದೆ. ಅನೇಕಾನೇಕ ವ್ಯತ್ಯಾಸವಾದ ವಿವರಣೆಗಳ ಕಾರಣ, ತಿಳಿಯದ ಈ ವಿಷಯದ ಕುರಿತು ಚರ್ಚಿಸುವುದೇ ವ್ಯರ್ಥ ಎಂದು ಸಂದೇಹವಾದಿಗಳು ನೆನಸುವಂತೆ ಮಾಡಬಹುದು. “ನಾವು ಕೇವಲ ಒಮ್ಮೆಯೇ ಜೀವಿಸುವ ಕಾರಣ” ಜೀವನದಲ್ಲಿ ಸಿಗುವ ಎಲ್ಲ ಉತ್ತಮ ವಿಷಯಗಳನ್ನು ಆನಂದಿಸಬೇಕು ಎಂದು ಕೆಲವು ವ್ಯಾವಹಾರಿಕ ಪ್ರವೃತ್ತಿಯುಳ್ಳ ವ್ಯಕ್ತಿಗಳು ನೆನಸಬಹುದು.

ಇದಕ್ಕೆ ವ್ಯತಿರಿಕ್ತವಾಗಿ, ಇತರರು ಮರಣವು ಜೀವನದ ಅಂತ್ಯವಲ್ಲ ಎಂದು ನಂಬುತ್ತಾರೆ. ಆದರೆ, ಮರಣದ ನಂತರ ಏನು ಸಂಭವಿಸುತ್ತದೆ ಎಂದು ಅವರಿಗೂ ತಿಳಿದಿಲ್ಲ. ಸತ್ತ ನಂತರ ಸ್ವರ್ಗದಲ್ಲಿ ನಾವು ನಿತ್ಯನಿರಂತರವಾಗಿ ಜೀವಿಸುತ್ತೇವೆ ಎಂದು ಕೆಲವರು ನೆನಸುತ್ತಾರೆ. ಇನ್ನಿತರರು, ಸತ್ತ ಮೇಲೆ ಭವಿಷ್ಯತ್ತಿನಲ್ಲಿ ಇನ್ನೊಬ್ಬ ವ್ಯಕ್ತಿಯಾಗಿ ನಾವು ಹುಟ್ಟುತ್ತೇವೆ ಎಂದು ಭಾವಿಸುತ್ತಾರೆ.

ಮರಣದಲ್ಲಿ ತಮ್ಮ ಪ್ರಿಯರನ್ನು ಕಳೆದುಕೊಂಡ ಜನರು, “ಸತ್ತವರು ಎಲ್ಲಿದ್ದಾರೆ?” ಎಂದು ಸ್ವತಃ ಕೇಳಿಕೊಳ್ಳುತ್ತಾರೆ. ಹಲವಾರು ವರುಷಗಳ ಹಿಂದೆ, ಫುಟ್‌ಬಾಲ್‌ ಕ್ಲಬ್ಬಿನ ಸದಸ್ಯರು ಕ್ರೀಡಾ ಸಮಾರಂಭ ನಡೆಯುವ ಸ್ಥಳಕ್ಕೆ ಪ್ರಯಾಣಿಸುತ್ತಿದ್ದಾಗ ಆಕಸ್ಮಿಕವಾಗಿ ಒಂದು ಟ್ರಕ್‌ ಅವರ ಮಿನಿ ಬಸ್ಸಿಗೆ ಡಿಕ್ಕಿ ಹೊಡೆದು ಬಸ್ಸನ್ನು ರಸ್ತೆಯಿಂದ ಕೆಳಕ್ಕೆ ಉರುಳಿಸಿತು. ತಂಡದ ಐದು ಸದಸ್ಯರು ಮೃತಪಟ್ಟರು. ಆ ಅಪಘಾತದಲ್ಲಿ ತನ್ನ ಮಗನು ಮೃತಪಟ್ಟ ದಿನದಿಂದ ಒಬ್ಬ ತಾಯಿಯ ಜೀವನವು ಹೆಚ್ಚುಕಡಿಮೆ ಸ್ಥಗಿತಗೊಂಡಿದೆ. ತನ್ನ ಮಗನು ಈಗ ಎಲ್ಲಿದ್ದಾನೆ ಎಂಬುದನ್ನು ತಿಳಿಯಲು ಅವಳು ಹೆಣಗಾಡುತ್ತಾಳೆ. ಅವಳು ಕ್ರಮವಾಗಿ ಅವನ ಸಮಾಧಿಗೆ ಭೇಟಿನೀಡಿ ಅವನೊಂದಿಗೆ ಗಟ್ಟಿಯಾಗಿ ಮಾತಾಡುತ್ತಾಳೆ. ಅವಳು ದುಃಖಿಸುತ್ತಾ ಹೇಳುವುದು: “ಮರಣದ ಅನಂತರ ಜೀವನವೇ ಇಲ್ಲ ಎಂಬುದನ್ನು ನಾನು ನಂಬಲಾರೆ. ಆದರೆ ನನಗೆ ಅದರ ಕುರಿತು ಖಚಿತವಾಗಿ ತಿಳಿದಿಲ್ಲ.”

ಮರಣದ ಬಗ್ಗೆ ನಮಗಿರುವ ಮನೋಭಾವವು ಈಗ ನಮ್ಮ ಜೀವನದ ಮೇಲೆ ಪರಿಣಾಮಬೀರಬಲ್ಲದು. ಮರಣವೆಂಬ ಭೀಕರ ಸಂಗತಿಯ ಕಡೆಗೆ ಜನರು ತೋರಿಸುವ ಪ್ರತಿಕ್ರಿಯೆಗಳು ಅನೇಕ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಒಂದುವೇಳೆ ಆ ಪ್ರಶ್ನೆಗಳಿಗೆ ನೀವು ಹೇಗೆ ಪ್ರತಿವರ್ತಿಸುತ್ತಿದ್ದೀರೆಂದು ಯೋಚಿಸಿರಿ. ನಾವು ಮರಣದ ಬಗ್ಗೆ ಏನೂ ಆಲೋಚಿಸದೆ, ಜೀವಿಸುತ್ತಾ ಇರಬೇಕೊ? ಮರಣದ ಭಯಾನಕ ಅಸ್ತಿತ್ವವು ನಮ್ಮ ಜೀವನವನ್ನು ಹಾಳುಮಾಡುವಂತೆ ನಾವು ಬಿಡಬೇಕೊ? ಮರಣದಲ್ಲಿ ತನ್ನ ಪ್ರಿಯ ವ್ಯಕ್ತಿಯನ್ನು ಕಳೆದುಕೊಂಡ ಒಬ್ಬನು, ಆ ಪ್ರಿಯನು ಈಗ ಎಲ್ಲಿದ್ದಾನೆ ಎಂಬ ಪ್ರಶ್ನೆಯನ್ನು ಚಿಂತಿಸುತ್ತಾ ಇರುವಂತೆ ಬಿಟ್ಟುಬಿಡಬೇಕೊ? ಮರಣವು ಒಂದು ಒಗಟಾಗಿಯೇ ಉಳಿಯಬೇಕೊ?