ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮರಣವು ನುಂಗಿಯೇ ಹೋಯಿತು”

“ಮರಣವು ನುಂಗಿಯೇ ಹೋಯಿತು”

“ಮರಣವು ನುಂಗಿಯೇ ಹೋಯಿತು”

ಆತ್ಮಹತ್ಯೆ ಮಾಡಿಕೊಂಡ ಒಬ್ಬ ಚಿಕ್ಕ ಹುಡುಗಿಯ ಕುರಿತು ಓದುವ ಬದಲು ಈ ಮೇಲಿನ ಮಾತುಗಳನ್ನು ವಾರ್ತಾಪತ್ರಿಕೆಯಲ್ಲಿ ಓದುವುದನ್ನು ಕಲ್ಪಿಸಿಕೊಳ್ಳಿ. ಇಂದಿನ ವರೆಗೆ ಯಾವುದೇ ವಾರ್ತಾಪತ್ರಿಕೆಗೆ ಈ ಮಾತುಗಳನ್ನು ತಿಳಿಸಲು ಸಾಧ್ಯವಾಗಿಲ್ಲ. ಆದರೆ ಈ ಮಾತುಗಳು, ಸಾವಿರಾರು ವರುಷಗಳ ಹಿಂದೆ ಬರೆಯಲ್ಪಟ್ಟ ಒಂದು ಪುಸ್ತಕದಲ್ಲಿ ಕಂಡುಬರುತ್ತವೆ. ಆ ಪುಸ್ತಕವು ಬೈಬಲ್‌ ಆಗಿದೆ.

ಶಾಸ್ತ್ರವಚನಗಳಲ್ಲಿ ಮರಣದ ಕುರಿತು ಸ್ಪಷ್ಟವಾಗಿ ವಿವರಿಸಲಾಗಿದೆ. ನಾವೇಕೆ ಸಾಯುತ್ತೇವೆ ಎಂಬುದನ್ನು ಮಾತ್ರವಲ್ಲ, ಸತ್ತವರ ಸ್ಥಿತಿ ಏನಾಗಿದೆ ಮತ್ತು ಮೃತರಾಗಿರುವ ನಮ್ಮ ಪ್ರಿಯ ಜನರಿಗೆ ಯಾವ ನಿರೀಕ್ಷೆಯಿದೆ ಎಂಬುದನ್ನೂ ಬೈಬಲ್‌ ತಿಳಿಸುತ್ತದೆ. ಅಷ್ಟುಮಾತ್ರವಲ್ಲದೆ, “ಮರಣವು ನುಂಗಿಯೇ ಹೋಯಿತು” ಎಂಬ ವರದಿಯನ್ನು ಕೇಳಿಸಿಕೊಳ್ಳಬಹುದಾದ ಒಂದು ಮಹತ್ವಪೂರ್ಣ ಸಮಯದ ಕುರಿತಾಗಿಯೂ ಅದು ತಿಳಿಸುತ್ತದೆ.​—⁠1 ಕೊರಿಂಥ 15:54.

ಬೈಬಲ್‌ ಮರಣವನ್ನು ರಹಸ್ಯಗರ್ಭಿತವಾದ ರೀತಿಯಲ್ಲಲ್ಲ ನಾವು ಅರ್ಥಮಾಡಿಕೊಳ್ಳಬಹುದಾದ ರೀತಿಯಲ್ಲಿ ವಿವರಿಸುತ್ತದೆ. ಉದಾಹರಣೆಗೆ, ಅದು ಪದೇ ಪದೇ ಮರಣವನ್ನು ‘ನಿದ್ರೆಗೆ’ ಹೋಲಿಸುತ್ತದೆ ಮತ್ತು ಮೃತರಾದ ಜನರನ್ನು ‘ನಿದ್ದೆಹೋಗಿರುವವರು’ ಎಂಬುದಾಗಿ ವರ್ಣಿಸುತ್ತದೆ. (ಕೀರ್ತನೆ 13:3; 1 ಥೆಸಲೋನಿಕ 4:13; ಯೋಹಾನ 11:​11-14) ಮರಣವನ್ನು ಒಂದು “ಶತ್ರು” ಎಂದು ಸಹ ಗುರುತಿಸಲಾಗಿದೆ. (1 ಕೊರಿಂಥ 15:26) ಹೆಚ್ಚು ಪ್ರಾಮುಖ್ಯವಾಗಿ, ಮರಣವು ಏಕೆ ನಿದ್ರೆಗೆ ಸಮಾನವಾಗಿದೆ, ಅದು ಏಕೆ ಮಾನವಕುಲವನ್ನು ಬಾಧಿಸುತ್ತಿದೆ ಮತ್ತು ಈ ಶತ್ರುವು ಅಂತಿಮವಾಗಿ ಹೇಗೆ ಸೋಲಿಸಲ್ಪಡುವುದು ಎಂಬುದನ್ನು ಅರ್ಥಮಾಡಿಕೊಳ್ಳಲು ಬೈಬಲ್‌ ನಮಗೆ ಸಹಾಯಮಾಡುತ್ತದೆ.

ನಾವೇಕೆ ಸಾಯುತ್ತೇವೆ?

ಪ್ರಥಮ ಮನುಷ್ಯನಾದ ಆದಾಮನನ್ನು ದೇವರು ಹೇಗೆ ಸೃಷ್ಟಿಸಿದನು ಮತ್ತು ಅವನನ್ನು ಹೇಗೆ ಒಂದು ಪರದೈಸ್‌ ಬೀಡಿನಲ್ಲಿ ಇಟ್ಟನು ಎಂಬುದನ್ನು ಬೈಬಲಿನ ಮೊದಲನೇ ಪುಸ್ತಕವು ತಿಳಿಸುತ್ತದೆ. (ಆದಿಕಾಂಡ 2:​7, 15) ಆದಾಮನ ಜೀವನವು ಆರಂಭಗೊಂಡಾಗ ಅವನಿಗೆ ಕೆಲಸದ ನೇಮಕಗಳು ಕೊಡಲ್ಪಟ್ಟವು. ಅದರೊಂದಿಗೆ ಒಂದು ಕಟ್ಟುನಿಟ್ಟಿನ ನಿಷೇಧವನ್ನು ತಿಳಿಸಲಾಯಿತು. ಏದೆನ್‌ ತೋಟದಲ್ಲಿದ್ದ ಒಂದು ನಿರ್ದಿಷ್ಟ ಮರದ ಕುರಿತು ದೇವರು ಅವನಿಗೆ ಹೇಳಿದ್ದು: “[ಆ] ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” * (ಆದಿಕಾಂಡ 2:17) ಆದುದರಿಂದ, ಮರಣವು ತಪ್ಪಿಸಲಸಾಧ್ಯವಾದ ಒಂದು ಸಂಗತಿಯಲ್ಲ ಎಂದು ಆದಾಮನಿಗೆ ತಿಳಿದಿತ್ತು. ಮರಣವು, ದೇವರ ನಿಯಮದ ಉಲ್ಲಂಘನೆಯ ಪರಿಣಾಮವಾಗಿತ್ತು.

ದುಃಖಕರವಾಗಿ, ಆದಾಮ ಮತ್ತು ಅವನ ಪತ್ನಿಯಾದ ಹವ್ವ ಅವಿಧೇಯರಾದರು. ತಮ್ಮ ಸೃಷ್ಟಿಕರ್ತನ ಚಿತ್ತವನ್ನು ಅವರು ಅಗಣ್ಯಮಾಡಲು ಆಯ್ಕೆಮಾಡಿದರು. ಇದರಿಂದಾಗಿ ಅದರ ಫಲಿತಾಂಶಗಳನ್ನು ಅವರು ಕೊಯ್ಯಬೇಕಾಯಿತು. “ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದೀ” ಎಂದು ದೇವರು ಅವರಿಗೆ ಅವರ ಪಾಪದ ಪರಿಣಾಮಗಳನ್ನು ತಿಳಿಸುವಾಗ ಹೇಳಿದನು. (ಆದಿಕಾಂಡ 3:19) ಅವರು ಗಂಭೀರವಾಗಿ ನ್ಯೂನರಾದರು​—⁠ಅಪರಿಪೂರ್ಣರಾದರು. ಅವರ ಅಪರಿಪೂರ್ಣತೆ ಅಥವಾ ಪಾಪಪೂರ್ಣತೆಯು ಮರಣಕ್ಕೆ ನಡೆಸಿತು.

ಈ ನ್ಯೂನತೆಯು ಅಂದರೆ ಪಾಪವು ಆದಾಮಹವ್ವರ ಸಂತತಿಯಾದ ಇಡೀ ಮಾನವಕುಲಕ್ಕೆ ದಾಟಿಸಲ್ಪಟ್ಟಿತು. ಅದೊಂದು ಆನುವಂಶಿಕ ರೋಗದಂತಿತ್ತು. ಆದಾಮನು ಮರಣದ ಬೇಗುದಿಯಿಂದ ಸ್ವತಂತ್ರವಾದ ಜೀವನವನ್ನು ಕಳೆದುಕೊಂಡದ್ದು ಮಾತ್ರವಲ್ಲದೆ ಅವನ ಸಂತತಿಗೂ ಅಪರಿಪೂರ್ಣತೆಯನ್ನು ದಾಟಿಸಿದನು. ಇಡೀ ಮಾನವಕುಲವೇ ಪಾಪದ ದಾಸತ್ವದೊಳಕ್ಕೆ ನೂಕಲ್ಪಟ್ಟಿತು. ಬೈಬಲ್‌ ತಿಳಿಸುವುದು: “ಈ ವಿಷಯ ಹೇಗಂದರೆ​—⁠ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.”​—⁠ರೋಮಾಪುರ 5:12.

‘ಪಾಪವು ಲೋಕದೊಳಗೆ ಸೇರಿತು’

ಈ ಆನುವಂಶಿಕ ನ್ಯೂನತೆಯನ್ನು ಅಥವಾ ಪಾಪವನ್ನು ಒಂದು ಸೂಕ್ಷ್ಮದರ್ಶಕದಿಂದ ನೋಡಸಾಧ್ಯವಿಲ್ಲ. “ಪಾಪ” ಎಂಬುದು ನೈತಿಕ ಮತ್ತು ಆಧ್ಯಾತ್ಮಿಕ ಕೊರತೆಯನ್ನು ಸೂಚಿಸುತ್ತದೆ. ಈ ಕೊರತೆಯನ್ನು ನಮ್ಮ ಮೊದಲ ಹೆತ್ತವರು ನಮಗೆ ದಾಟಿಸಿದರು ಮತ್ತು ಇದರಲ್ಲಿ ಶಾರೀರಿಕ ದುಷ್ಪರಿಣಾಮಗಳೂ ಒಳಗೂಡಿವೆ. ಹಾಗಿದ್ದರೂ, ದೇವರು ಒಂದು ಪರಿಹಾರವನ್ನು ಒದಗಿಸಿದ್ದಾನೆ ಎಂದು ಬೈಬಲ್‌ ನಮಗೆ ಪ್ರಕಟಪಡಿಸುತ್ತದೆ. ಅಪೊಸ್ತಲ ಪೌಲನು ವಿವರಿಸುವುದು: “ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ಪೌಲನು ಕೊರಿಂಥದವರಿಗೆ ಬರೆದ ತನ್ನ ಮೊದಲ ಪತ್ರದಲ್ಲಿ ಒಂದು ಆಶ್ವಾಸನೆಯನ್ನು ಸೇರಿಸಿದನು: “ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು.”​—⁠1 ಕೊರಿಂಥ 15:22.

ಸ್ಪಷ್ಟವಾಗಿ, ಪಾಪ ಮತ್ತು ಮರಣವನ್ನು ತೆಗೆದುಹಾಕುವುದರಲ್ಲಿ ಯೇಸು ಕ್ರಿಸ್ತನು ಒಂದು ಪ್ರಾಮುಖ್ಯ ಪಾತ್ರವನ್ನು ವಹಿಸುತ್ತಾನೆ. ತಾನು ಈ ಭೂಮಿಗೆ ಬಂದ ಉದ್ದೇಶವನ್ನು ತಿಳಿಸುತ್ತಾ, ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೆ’ ಬಂದಿದ್ದೇನೆ ಎಂದು ಯೇಸು ಹೇಳಿದನು. (ಮತ್ತಾಯ 20:28) ಈ ಸನ್ನಿವೇಶವು, ಒಬ್ಬ ವ್ಯಕ್ತಿಯು ಅಪಹರಿಸಲ್ಪಟ್ಟಿರುವಲ್ಲಿ, ಅವನನ್ನು ಬಿಡುಗಡೆಮಾಡಲು ಒಂದು ನಿರ್ದಿಷ್ಟ ಮೊತ್ತವನ್ನು ನೀಡುವುದಕ್ಕೆ ಸಮಾನವಾಗಿದೆ. ನಾವು ಚರ್ಚಿಸುವ ವಿಷಯದಲ್ಲಿ, ನಮ್ಮನ್ನು ಪಾಪ ಮತ್ತು ಮರಣದಿಂದ ಬಿಡುಗಡೆಗೊಳಿಸುವ ವಿಮೋಚನಾ ಮೌಲ್ಯವು ಯೇಸುವಿನ ಪರಿಪೂರ್ಣ ಮಾನವ ಜೀವವಾಗಿದೆ. *​—⁠ಅ. ಕೃತ್ಯಗಳು 10:​39-43.

ವಿಮೋಚನಾ ಮೌಲ್ಯವನ್ನು ಒದಗಿಸಲು, ಯೇಸು ತನ್ನ ಜೀವವನ್ನು ಯಜ್ಞವಾಗಿ ಅರ್ಪಿಸುವಂತೆ ದೇವರು ಅವನನ್ನು ಭೂಮಿಗೆ ಕಳುಹಿಸಿದನು. “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ . . . ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಒಂದು ಯಜ್ಞಾರ್ಪಿತ ಮರಣವನ್ನು ಅನುಭವಿಸುವ ಮುನ್ನ, ಕ್ರಿಸ್ತನು ‘ಸತ್ಯಕ್ಕಾಗಿ ಸಾಕ್ಷಿನೀಡಿದನು.’ (ಯೋಹಾನ 18:37) ಮಾತ್ರವಲ್ಲದೆ ಅವನ ಸಾರ್ವಜನಿಕ ಶುಶ್ರೂಷೆಯ ಸಮಯದಲ್ಲಿ, ಮರಣದ ಕುರಿತು ಸತ್ಯವನ್ನು ಪ್ರಕಟಪಡಿಸಲು ಕೆಲವು ನಿರ್ದಿಷ್ಟ ಘಟನೆಗಳ ಸದುಪಯೋಗವನ್ನು ಮಾಡಿಕೊಂಡನು.

“ಹುಡುಗಿ . . . ನಿದ್ದೆಮಾಡುತ್ತಾಳೆ”

ಯೇಸು ಭೂಮಿಯಲ್ಲಿದ್ದಾಗ ಅವನಿಗೆ ಮರಣದ ಕುರಿತು ತಿಳಿದಿತ್ತು. ತನ್ನ ಸುತ್ತಲಿದ್ದ ಜನರನ್ನು ಮರಣದಲ್ಲಿ ಕಳೆದುಕೊಂಡಾಗ ಅವನಿಗೆ ನೋವಾಯಿತು. ಮಾತ್ರವಲ್ಲದೆ, ತಾನು ಸಹ ಅಕಾಲಿಕವಾಗಿ ಸಾಯಲಿದ್ದೇನೆ ಎಂಬುದು ಅವನಿಗೆ ತಿಳಿದಿತ್ತು. (ಮತ್ತಾಯ 17:​22, 23) ಪ್ರಾಯಶಃ, ಯೇಸು ಕೊಲ್ಲಲ್ಪಟ್ಟ ಕೆಲವು ತಿಂಗಳುಗಳ ಮುಂಚೆ ಅವನ ಆಪ್ತ ಸ್ನೇಹಿತನಾದ ಲಾಜರನು ತೀರಿಕೊಂಡನು. ಆ ಘಟನೆಯು, ಮರಣವನ್ನು ಯೇಸು ಯಾವ ರೀತಿಯಲ್ಲಿ ವೀಕ್ಷಿಸಿದನು ಎಂಬುದರ ಕುರಿತು ಒಳನೋಟವನ್ನು ನಮಗೆ ನೀಡುತ್ತದೆ.

ಲಾಜರನ ಮರಣದ ಸುದ್ದಿಯನ್ನು ಕೇಳಿಸಿಕೊಂಡೊಡನೆ ಯೇಸು ಹೇಳಿದ್ದು: “ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಾನೆ; ನಾನು ಅವನನ್ನು ನಿದ್ರೆಯಿಂದ ಎಬ್ಬಿಸುವದಕ್ಕಾಗಿ ಹೋಗುತ್ತೇನೆ.” ಲಾಜರನು ನಿದ್ರೆಮಾಡುತ್ತಿದ್ದರೆ ಸ್ವಸ್ಥನಾಗುವನು ಎಂದು ಯೇಸುವಿನ ಶಿಷ್ಯರು ನೆನಸಿದರು. ಆದುದರಿಂದ ಯೇಸು ಅವರಿಗೆ ನೇರವಾಗಿ, “ಲಾಜರನು ಸತ್ತುಹೋದನು” ಎಂದು ಹೇಳಿದನು. (ಯೋಹಾನ 11:​11-14) ಮರಣವು ನಿದ್ರೆಗೆ ಸಮಾನವಾಗಿದೆ ಎಂದು ಯೇಸು ತಿಳಿದಿದ್ದನು. ಒಂದುವೇಳೆ ಮರಣವನ್ನು ಅರ್ಥಮಾಡಿಕೊಳ್ಳುವುದು ನಮಗೆ ಕಷ್ಟವಾಗಬಹುದಾದರೂ, ನಿದ್ರೆಯನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬಲ್ಲೆವು. ರಾತ್ರಿ ನಾವು ಆಳವಾದ ನಿದ್ರೆಯಲ್ಲಿರುವಾಗ, ಸಮಯವು ಹೇಗೆ ದಾಟಿಹೋಯಿತು ಮತ್ತು ನಮ್ಮ ಸುತ್ತಲು ಏನು ನಡೆಯಿತು ಎಂಬುದು ನಮಗೆ ತಿಳಿಯದು, ಏಕೆಂದರೆ ನಾವು ತಾತ್ಕಾಲಿಕ ಪ್ರಜ್ಞಾಹೀನ ಸ್ಥಿತಿಯಲ್ಲಿರುತ್ತೇವೆ. ಮರಣದ ಸ್ಥಿತಿಯನ್ನು ಬೈಬಲ್‌ ಹೀಗೆಯೇ ವಿವರಿಸುತ್ತದೆ. ಪ್ರಸಂಗಿ 9:5 ಹೇಳುವುದು: “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.”

ದೇವರ ಶಕ್ತಿಯ ಮೂಲಕ ಜನರನ್ನು ಮರಣದಿಂದ ಎಬ್ಬಿಸಲು ಸಾಧ್ಯವಿರುವುದೇ, ಮರಣವನ್ನು ಯೇಸು ನಿದ್ರೆಗೆ ಹೋಲಿಸಲು ಇನ್ನೊಂದು ಕಾರಣವಾಗಿದೆ. ಒಂದು ಸಂದರ್ಭದಲ್ಲಿ, ತಳಮಳಗೊಂಡಿದ್ದ ಕುಟುಂಬವೊಂದನ್ನು ಯೇಸು ಭೇಟಿಮಾಡಿದನು. ಆ ಕುಟುಂಬವು ಆಗ ತಾನೇ ತಮ್ಮ ಚಿಕ್ಕ ಹುಡುಗಿಯನ್ನು ಮರಣದಲ್ಲಿ ಕಳೆದುಕೊಂಡಿತ್ತು. “ಹುಡುಗಿ ಸತ್ತಿಲ್ಲ, ನಿದ್ದೆಮಾಡುತ್ತಾಳೆ” ಎಂದು ಯೇಸು ಹೇಳಿದನು. ಅನಂತರ ಅವನು ಸತ್ತಿದ್ದ ಹುಡುಗಿಯನ್ನು ಸಮೀಪಿಸಿ, ಅವಳ ಕೈಯನ್ನು ಹಿಡಿಯಲು ಆಕೆ “ಎದ್ದಳು.” ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅವಳು ಮರಣದಿಂದ ಎಚ್ಚೆತ್ತು ಕುಳಿತುಕೊಂಡಳು.​—⁠ಮತ್ತಾಯ 9:​24, 25.

ಇದೇ ರೀತಿಯಲ್ಲಿ, ಯೇಸು ತನ್ನ ಸ್ನೇಹಿತನಾದ ಲಾಜರನನ್ನು ಮರಣದಿಂದ ಎಬ್ಬಿಸಿದನು. ಆದರೆ ಆ ಅದ್ಭುತವನ್ನು ಮಾಡುವ ಮುನ್ನ ಅವನು ಹೀಗೆ ಹೇಳುವ ಮೂಲಕ ಮಾರ್ಥಳನ್ನು ಸಂತೈಸಿದನು: ‘ನಿನ್ನ ತಮ್ಮನು ಎದ್ದುಬರುವನು.’ ಅವಳು ಪೂರ್ಣ ಭರವಸೆಯಿಂದ ಉತ್ತರಿಸಿದ್ದು: “ಕಡೇ ದಿನದಲ್ಲಿ . . . ಅವನೂ ಎದ್ದುಬರುವನೆಂದು ನಾನು ಬಲ್ಲೆನು.” (ಯೋಹಾನ 11:​23, 24) ಮುಂದೆ ಒಂದು ಸಮಯದಲ್ಲಿ ದೇವರ ಎಲ್ಲ ಸೇವಕರು ಪುನರುತ್ಥಾನವಾಗುವರು ಎಂಬುದನ್ನು ಅವಳು ಎದುರುನೋಡುತ್ತಿದ್ದಳು ಎಂಬುದು ಸುವ್ಯಕ್ತ.

ಪುನರುತ್ಥಾನ ಎಂಬುದು ನಿಜವಾಗಿ ಏನನ್ನು ಸೂಚಿಸುತ್ತದೆ? “ಪುನರುತ್ಥಾನ” ಎಂಬುದಕ್ಕಾಗಿರುವ ಗ್ರೀಕ್‌ ಪದದ (ಆ್ಯನಸ್ಟ್ಯಾಸಿಸ್‌) ಅಕ್ಷರಾರ್ಥವು “ಎದ್ದು ನಿಲ್ಲುವುದು” ಎಂದಾಗಿದೆ. ಅದು ಸತ್ತವರಿಂದ ಏಳುವುದಕ್ಕೆ ನಿರ್ದೇಶಿಸುತ್ತದೆ. ಇದು ಕೆಲವರಿಗೆ ನಂಬಲಸಾಧ್ಯವಾಗಿ ಕಾಣಬಹುದು, ಆದರೂ ಸತ್ತವರು ತನ್ನ ಸ್ವರವನ್ನು ಕೇಳುವರು ಎಂದು ಹೇಳಿದ ನಂತರ ಯೇಸು ಹೇಳಿದ್ದು: “ಅದಕ್ಕೆ ಆಶ್ಚರ್ಯಪಡಬೇಡಿರಿ.” (ಯೋಹಾನ 5:28) ಯೇಸು ಭೂಮಿಯಲ್ಲಿದ್ದಾಗ ಮಾಡಿದ ಪುನರುತ್ಥಾನಗಳು, ದೇವರ ಜ್ಞಾಪಕದಲ್ಲಿರುವ ಸತ್ತವರು ತಮ್ಮ ದೀರ್ಘ “ನಿದ್ರೆ”ಯಿಂದ ಎಚ್ಚರವಾಗಲಿದ್ದಾರೆ ಎಂಬ ಬೈಬಲಿನ ವಾಗ್ದಾನದಲ್ಲಿ ನಾವು ಭರವಸೆಯನ್ನು ಇಡುವಂತೆ ಸಹಾಯಮಾಡುತ್ತದೆ. ಪ್ರಕಟನೆ 20:13 ಪ್ರವಾದಿಸುವುದು: “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯುವೂ ಪಾತಾಳವೂ [“ಹೇಡೀಸ್‌,” NW] (ಮಾನವಕುಲದ ಸಾಮಾನ್ಯ ಸಮಾಧಿ) ತಮ್ಮ ವಶದಲ್ಲಿದ್ದ ಸತ್ತವರನ್ನು ಒಪ್ಪಿಸಿದವು.”

ಮೃತಪಟ್ಟಿರುವ ಈ ವ್ಯಕ್ತಿಗಳು ಲಾಜರನಂತೆ ಪುನಃ ವೃದ್ಧರಾಗಿ ಸಾಯಲು ಪುನರುತ್ಥಾನಗೊಳಿಸಲ್ಪಡುತ್ತಾರೊ? ದೇವರ ಉದ್ದೇಶವು ಇದಲ್ಲ. “ಮರಣ” ಇನ್ನಿರದ ಕಾಲವು ಬರಲಿದೆ ಎಂದು ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ. ಆದುದರಿಂದ, ವೃದ್ಧರಾಗಿ ನಂತರ ಸಾಯುವುದು ಇರುವುದಿಲ್ಲ.​—⁠ಪ್ರಕಟನೆ 21:⁠4.

ಮರಣವು ಒಂದು ಶತ್ರುವಾಗಿದೆ. ಮಾನವಕುಲಕ್ಕೆ ಇನ್ನೂ ಅನೇಕ ವೈರಿಗಳಿವೆ. ಉದಾಹರಣೆಗೆ, ಅನಾರೋಗ್ಯ ಮತ್ತು ವೃದ್ಧಾಪ್ಯವು ಸಹ ಮರಣದಷ್ಟೇ ಕಷ್ಟಸಂಕಟವನ್ನು ಉಂಟುಮಾಡುತ್ತದೆ. ಈ ಎಲ್ಲ ವಿಷಯಗಳನ್ನು ತೆಗೆದುಹಾಕುತ್ತೇನೆಂದು ದೇವರು ವಾಗ್ದಾನಿಸಿದ್ದಾನೆ. ಅಂತಿಮವಾಗಿ ಮಾನವಕುಲದ ಅತಿ ದೊಡ್ಡ ವೈರಿಯನ್ನು ತೆಗೆದುಹಾಕುವನು. “ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು.”​—⁠1 ಕೊರಿಂಥ 15:26.

ಈ ವಾಗ್ದಾನವು ನೆರವೇರುವಾಗ, ಮಾನವರು ಪಾಪ ಮತ್ತು ಮರಣದಿಂದ ಮಲಿನಗೊಂಡಿರದ ಪರಿಪೂರ್ಣ ಜೀವನವನ್ನು ಅನುಭವಿಸುವರು. ಅದು ಸಂಭವಿಸುವ ತನಕ, ಮೃತರಾಗಿರುವ ನಮ್ಮ ಪ್ರಿಯ ಜನರು ನಿದ್ರಿಸುತ್ತಿದ್ದಾರೆ ಮತ್ತು ಅವರು ಒಂದುವೇಳೆ ದೇವರ ಜ್ಞಾಪಕದಲ್ಲಿ ಇರುವುದಾದರೆ, ತಕ್ಕ ಸಮಯದಲ್ಲಿ ಪುನರುತ್ಥಾನಗೊಳಿಸಲ್ಪಡುವರು ಎಂಬ ತಿಳಿವಳಿಕೆಯಿಂದ ನಾವು ಸಾಂತ್ವನವನ್ನು ಪಡೆದುಕೊಳ್ಳಬಲ್ಲೆವು.

ಮರಣವನ್ನು ಅರ್ಥಮಾಡಿಕೊಳ್ಳುವುದು ಜೀವನವನ್ನು ಅರ್ಥಭರಿತವಾಗಿ ಮಾಡುತ್ತದೆ

ಮರಣದ ಕುರಿತು ಮತ್ತು ಮೃತರಿಗಿರುವ ನಿರೀಕ್ಷೆಯ ಕುರಿತು ಸ್ಪಷ್ಟವಾದ ತಿಳಿವಳಿಕೆಯು ಜೀವನದ ಕುರಿತಾದ ನಮ್ಮ ಹೊರನೋಟವನ್ನೇ ಬದಲಾಯಿಸುತ್ತದೆ. ಹಿಂದಿನ ಲೇಖನದಲ್ಲಿ ತಿಳಿಸಲಾದ ಈಯನ್‌, 20 ವರುಷದವನಾಗಿದ್ದಾಗ ಮರಣದ ಕುರಿತಾದ ಬೈಬಲಿನ ವಿವರಣೆಯನ್ನು ಕಲಿತುಕೊಂಡನು. “ನನ್ನ ತಂದೆಯು ಎಲ್ಲಿಯೋ ಜೀವಿಸುತ್ತಿದ್ದಾರೆ ಎಂಬ ಅಸ್ಪಷ್ಟ ನಿರೀಕ್ಷೆ ನನಗಿತ್ತು. ಆದುದರಿಂದ, ಅವರು ನಿದ್ರಿಸುತ್ತಿದ್ದಾರೆ ಎಂದು ಕಲಿತಾಗ ಮೊದಲು ನಾನು ಬಹಳ ದುಃಖಿತನಾದೆ” ಎಂದು ಅವನು ಹೇಳುತ್ತಾನೆ. ಹಾಗಿದ್ದರೂ, ಮೃತರನ್ನು ಪುನರುತ್ಥಾನಗೊಳಿಸುವ ದೇವರ ವಾಗ್ದಾನದ ಬಗ್ಗೆ ಈಯನ್‌ ಕಲಿತಾಗ, ತನ್ನ ತಂದೆಯನ್ನು ತಾನು ಪುನಃ ನೋಡಬಲ್ಲೆ ಎಂದು ಅವನಿಗೆ ಬಹಳ ಸಂತೋಷವಾಯಿತು. ಅವನು ಹೇಳುವುದು: “ನನಗೆ ಮೊದಲ ಬಾರಿ ಸಮಾಧಾನದ ಅನಿಸಿಕೆಯಾಯಿತು.” ಮರಣದ ಕುರಿತಾದ ಸರಿಯಾದ ತಿಳಿವಳಿಕೆಯು ಅವನಿಗೆ ಮನಶ್ಶಾಂತಿಯನ್ನು ನೀಡಿತು.

ಹಿಂದಿನ ಲೇಖನದಲ್ಲಿ ತಿಳಿಸಿರುವಂಥ ಒಂದು ಭಯಂಕರ ಅಪಘಾತದಲ್ಲಿ ಕ್ಲೈವ್‌ ಮತ್ತು ಬ್ರೆಂಡ ತಮ್ಮ 21 ವರುಷದ ಮಗನಾದ ಸ್ಟೀವನ್‌ನನ್ನು ಕಳೆದುಕೊಂಡರು. ಮರಣದ ಕುರಿತು ಬೈಬಲ್‌ ಏನನ್ನು ತಿಳಿಸುತ್ತದೆ ಎಂಬುದು ಅವರಿಗೆ ತಿಳಿದಿದ್ದರೂ, ತಮಗೆ ಸಂಭವಿಸಿದ ನಷ್ಟದಿಂದಾಗಿ ಅವರು ಹೃದಯವಿದ್ರಾವಕ ಸ್ಥಿತಿಯನ್ನು ಅನುಭವಿಸಿದರು. ವಾಸ್ತವದಲ್ಲಿ ಮರಣವು ಒಂದು ಶತ್ರುವಾಗಿದೆ ಮತ್ತು ಅದರ ಕೊಂಡಿಯು ವೇದನಾಮಯವಾಗಿದೆ. ಮೃತರ ಸ್ಥಿತಿಯ ಕುರಿತಾದ ಅವರ ಶಾಸ್ತ್ರೀಯ ಜ್ಞಾನವು ಕ್ರಮೇಣ ಅವರ ನೋವನ್ನು ಕಡಿಮೆಗೊಳಿಸಿತು. ಬ್ರೆಂಡ ತಿಳಿಸುವುದು: “ಮರಣದ ಕುರಿತಾದ ನಮ್ಮ ತಿಳಿವಳಿಕೆಯು ನಾವು ನಮ್ಮ ಜೀವನವನ್ನು ಮುಂದೆ ಸಾಗಿಸುವಂತೆ ನಮಗೆ ಸಾಧ್ಯಗೊಳಿಸಿತು. ನಮ್ಮ ಮಗನಾದ ಸ್ಟೀವ್‌ ತನ್ನ ದೀರ್ಘ ನಿದ್ರೆಯಿಂದ ಎದ್ದೇಳುವ ದಿನದ ಕುರಿತು ನಾವು ಮಾತಾಡದ ದಿನವೇ ಇಲ್ಲ.”

“ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?”

ಮೃತರ ಸ್ಥಿತಿಯ ಕುರಿತು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಜೀವನದ ಬಗ್ಗೆ ಸಮತೂಕದ ನೋಟವನ್ನು ಹೊಂದುವಂತೆ ನಮಗೆ ಸಹಾಯಮಾಡಬಲ್ಲದು. ಮರಣವು ಒಂದು ಒಗಟಾಗಿರುವ ಅಗತ್ಯವಿಲ್ಲ. ನಮ್ಮನ್ನು ಸದಾ ಹೆದರಿಸುತ್ತಿರುವ ಈ ಶತ್ರುವಿನ ಬಗ್ಗೆ ವಿಪರೀತ ಭಯಪಡದೆ ನಾವು ಜೀವನದಲ್ಲಿ ಆನಂದಿಸಬಲ್ಲೆವು. ಮರಣವು ನಮ್ಮ ಜೀವಿತವನ್ನು ನಿತ್ಯಕ್ಕೂ ಅಳಿಸಿಬಿಡಬೇಕಾಗಿಲ್ಲ ಎಂಬ ತಿಳಿವಳಿಕೆಯು, “ಜೀವನವು ಕೇವಲ ನಾಲ್ಕು ದಿನಗಳದ್ದು” ಎಂದು ನೆನಸಿ ಭೋಗಾಸಕ್ತಿಯ ಜೀವನವನ್ನು ನಡೆಸುವ ಯಾವುದೇ ಆಸೆಗಳಿಂದ ನಮ್ಮನ್ನು ತಡೆಯುತ್ತದೆ. ದೇವರ ಜ್ಞಾಪಕದಲ್ಲಿರುವ ಮೃತರಾಗಿರುವ ನಮ್ಮ ಪ್ರಿಯ ಜನರು ಮರಣದಲ್ಲಿ ನಿದ್ರಿಸುತ್ತಿದ್ದಾರೆ ಮತ್ತು ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ತಿಳಿಯುವುದು ನಮಗೆ ಮನಶ್ಶಾಂತಿಯನ್ನು ನೀಡುತ್ತದೆ ಮತ್ತು ಜೀವನವನ್ನು ಮುಂದುವರಿಸುವ ಇಚ್ಛೆಯನ್ನೂ ಹೊತ್ತಿಸುತ್ತದೆ.

ಹೌದು, ಜೀವದಾತನಾದ ಯೆಹೋವ ದೇವರು ಮರಣವನ್ನು ನಿತ್ಯ ನಿರಂತರಕ್ಕೆ ತೆಗೆದುಹಾಕುವ ಭವಿಷ್ಯತ್ತಿಗಾಗಿ ನಾವು ಭರವಸೆಯಿಂದ ಮುನ್ನೋಡಬಲ್ಲೆವು. “ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ?” ಎಂದು ನಾವು ಧೈರ್ಯದಿಂದ ಕೇಳುವ ಸಮಯವು ಎಂಥ ಒಂದು ಆಶೀರ್ವಾದದಾಯಕ ಸಮಯವಾಗಿರುವುದು!​—⁠1 ಕೊರಿಂಥ 15:55.

[ಪಾದಟಿಪ್ಪಣಿಗಳು]

^ ಪ್ಯಾರ. 6 ಇದು ಮರಣದ ಕುರಿತಾದ ಬೈಬಲಿನ ಮೊದಲ ಉಲ್ಲೇಖವಾಗಿದೆ.

^ ಪ್ಯಾರ. 11 ವಿಮೋಚನಾ ಮೌಲ್ಯವು ಒಂದು ಪರಿಪೂರ್ಣ ಮಾನವ ಜೀವವಾಗಿದೆ, ಏಕೆಂದರೆ ಆದಾಮನು ಕಳೆದುಕೊಂಡದ್ದು ಅದನ್ನೇ. ಪಾಪವು ಇಡೀ ಮಾನವಕುಲವನ್ನು ಮಲಿನಗೊಳಿಸಿದೆ, ಈ ಕಾರಣ ಯಾವನೇ ಅಪರಿಪೂರ್ಣ ಮಾನವನು ಒಂದು ವಿಮೋಚನಾ ಮೌಲ್ಯವನ್ನು ನೀಡಲು ಅಶಕ್ತನು. ಆದುದರಿಂದ, ದೇವರು ಈ ಉದ್ದೇಶಕ್ಕಾಗಿ ತನ್ನ ಮಗನನ್ನು ಸ್ವರ್ಗದಿಂದ ಕಳುಹಿಸಿಕೊಟ್ಟನು. (ಕೀರ್ತನೆ 49:​7-9) ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 7ನೇ ಅಧ್ಯಾಯವನ್ನು ನೋಡಿರಿ.

[ಪುಟ 5ರಲ್ಲಿರುವ ಚಿತ್ರ]

ಆದಾಮಹವ್ವರ ಅವಿಧೇಯತೆಯು ಮರಣಕ್ಕೆ ನಡೆಸಿತು

[ಪುಟ 6ರಲ್ಲಿರುವ ಚಿತ್ರ]

ಯೇಸು, ಸತ್ತಿದ್ದ ಹುಡುಗಿಯ ಕೈಯನ್ನು ಹಿಡಿಯಲು ಆಕೆ ಎದ್ದಳು

[ಪುಟ 7ರಲ್ಲಿರುವ ಚಿತ್ರ]

ಲಾಜರನಂತೆ ಮೃತರಾಗಿರುವ ತಮ್ಮ ಪ್ರಿಯ ಜನರು ಮರಣದಿಂದ ಏಳುವ ಸಮಯಕ್ಕಾಗಿ ಅನೇಕರು ಕಾಯುತ್ತಿದ್ದಾರೆ