ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಯಲ್‌ ಬೈಬಲ್‌ ಪಾಂಡಿತ್ಯದಲ್ಲಿ—ಒಂದು ಮೈಲಿಗಲ್ಲು

ರಾಯಲ್‌ ಬೈಬಲ್‌ ಪಾಂಡಿತ್ಯದಲ್ಲಿ—ಒಂದು ಮೈಲಿಗಲ್ಲು

ರಾಯಲ್‌ ಬೈಬಲ್‌ ಪಾಂಡಿತ್ಯದಲ್ಲಿ—ಒಂದು ಮೈಲಿಗಲ್ಲು

ಹದಿನಾರನೇ ಶತಮಾನದ ಆರಂಭದಲ್ಲಿ ಒಂದು ಹಡಗು ಸ್ಪೆಯಿನ್‌ನಿಂದ ಇಟ್ಯಾಲ್ಯನ್‌ ದ್ವೀಪಕಲ್ಪಕ್ಕೆ ಪ್ರಯಾಣವನ್ನು ಬೆಳೆಸಿತು. ಅದು ತನ್ನೊಂದಿಗೆ ಅಪಾರ ಮೌಲ್ಯವುಳ್ಳ ಸರಕುಗಳನ್ನು ಕೊಂಡೊಯ್ಯುತ್ತಿತ್ತು. 1514 ಮತ್ತು 1517ರ ಮಧ್ಯದಲ್ಲಿ ಮುದ್ರಿಸಲ್ಪಟ್ಟ ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲಾಟ್‌ ಬೈಬಲಿನ ಹೆಚ್ಚಿನ ಮುದ್ರಿತ ಪ್ರತಿಗಳೇ ಆ ಮೌಲ್ಯವುಳ್ಳ ಸರಕುಗಳು. ಅನಿರೀಕ್ಷಿತವಾಗಿ, ಒಂದು ವಿನಾಶಕಾರಿ ಚಂಡಮಾರುತವು ಎದ್ದಿತು. ನಾವಿಕರು ಹಡಗನ್ನು ಸಂರಕ್ಷಿಸಲು ಎಷ್ಟು ಹೆಣಗಾಡಿದರೂ, ಅವರ ಪ್ರಯತ್ನಗಳು ವಿಫಲವಾಯಿತು. ಬೆಲೆಕಟ್ಟಲಾಗದ ಸರಕುಗಳೊಂದಿಗೆ ಆ ಹಡುಗು ನೆಲಕಚ್ಚಿತು.

ಈ ವಿಪತ್ತು, ಪಾಲೀಗ್ಲಾಟ್‌ ಬೈಬಲಿನ ಹೊಸ ಮುದ್ರಣದ ಬೇಡಿಕೆಗೆ ಕಾರಣವಾಯಿತು. ಕೊನೆಗೂ, ಮುದ್ರಣ ಕೆಲಸದಲ್ಲಿ ನಿಷ್ಣಾತನಾದ ಕ್ರೀಸ್‌ಟಾಫ್‌ ಪ್ಲಾಂಟ್ಯಾನ್‌ ಈ ಕಷ್ಟಕರ ಕೆಲಸವನ್ನು ಸ್ವೀಕರಿಸಿದನು. ಆದರೆ ಈ ಮೌಲಿಕ ಕೆಲಸವನ್ನು ಆರಂಭಿಸಲು ಅವನಿಗೆ ಒಬ್ಬ ಐಶ್ವರ್ಯವಂತ ವ್ಯಕ್ತಿಯ ಆರ್ಥಿಕ ನೆರವಿನ ಅಗತ್ಯವಿತ್ತು. ಆದುದರಿಂದ ಅವನು ಸ್ಪೆಯಿನ್‌ನ ಅರಸನಾದ ಎರಡನೇ ಫಿಲಿಪನನ್ನು ಅಧಿಕೃತ ಬೆಂಬಲಿಗನಾಗಿರಲು ಕೇಳಿಕೊಂಡನು. ಅರಸನು ತನ್ನ ನಿರ್ಣಯವನ್ನು ಮಾಡುವ ಮುನ್ನ, ಸ್ಪೆಯಿನ್‌ನ ಬೇರೆ ಬೇರೆ ವಿದ್ವಾಂಸರನ್ನು ವಿಚಾರಿಸಿ ನೋಡಿದನು. ಈ ವಿದ್ವಾಂಸರಲ್ಲಿ, ಪ್ರಖ್ಯಾತ ವಿದ್ವಾಂಸನಾದ ಬೆನೀಟೋ ಆರ್ಯಾಸ್‌ ಮೋನ್ಟಾನೋ ಸಹ ಒಬ್ಬನಾಗಿದ್ದನು. ಅವನು ಅರಸನಿಗೆ ಹೇಳಿದ್ದು: “ಈ ಕೆಲಸವು ದೇವರಿಗೆ ಸಲ್ಲಿಸುವ ಸೇವೆಯಾಗಿರುವದು ಮತ್ತು ಸಾರ್ವತ್ರಿಕ ಚರ್ಚಿಗೆ ಪ್ರಯೋಜನವನ್ನು ತರುವುದು ಮಾತ್ರವಲ್ಲದೆ ಮಹಾ ಪ್ರಭುವಾದ ನಿಮ್ಮ ಭವ್ಯ ನಾಮಕ್ಕೆ ಘನತೆಯನ್ನು ತರುತ್ತದೆ ಹಾಗೂ ನಿಮ್ಮ ವೈಯಕ್ತಿಕ ಸತ್ಕೀರ್ತಿಯನ್ನು ಮೇಲಕ್ಕೇರಿಸುತ್ತದೆ.”

ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲಾಟ್‌ನ ಪರಿಷ್ಕೃತ ಮುದ್ರಣವು ಗಮನಾರ್ಹವಾದ ಒಂದು ಸಾಂಸ್ಕೃತಿಕ ಸಾಧನೆಯಾಗಿರಲಿದ್ದ ಕಾರಣ ಪ್ಲಾಂಟ್ಯಾನ್‌ನ ಯೋಜನೆಗೆ ಪೂರ್ಣಹೃದಯದ ಬೆಂಬಲವನ್ನು ಕೊಡಲು ಫಿಲಿಪನು ನಿರ್ಧರಿಸಿದನು. ಮತ್ತು ಆರ್ಯಾಸ್‌ ಮೋನ್ಟಾನೋವಿಗೆ ಪರಿಷ್ಕರಿಸುವ ದೊಡ್ಡ ಕೆಲಸವನ್ನು ನೇಮಿಸಿದನು. ಈ ಬೈಬಲೇ ಮುಂದಕ್ಕೆ ರಾಯಲ್‌ ಬೈಬಲ್‌ ಅಥವಾ ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ * ಎಂಬುದಾಗಿ ಪ್ರಸಿದ್ಧವಾಯಿತು.

ಈ ಪಾಲೀಗ್ಲಾಟ್‌ ಬೈಬಲಿನ ಪ್ರಗತಿಯಲ್ಲಿ ಫಿಲಿಪನಿಗೆ ಎಷ್ಟು ಆಸಕ್ತಿಯಿತ್ತೆಂದರೆ, ಅದರ ಪ್ರತಿಯೊಂದು ಹಾಳೆಯ ಕರಡುಪ್ರತಿಯನ್ನು ತನಗೆ ಕಳುಹಿಸುವಂತೆ ಅವನು ಕೇಳಿಕೊಂಡನು. ಆದರೆ ಪ್ರತಿಯೊಂದು ಹಾಳೆಯು ಆ್ಯಂಟ್ವರ್ಪ್‌ನಿಂದ ಸ್ಪೆಯಿನ್‌ಗೆ ಹೋಗಿ, ಅಲ್ಲಿ ಅರಸನು ಅದನ್ನು ಓದಿ, ಅಗತ್ಯವಿರುವ ತಿದ್ದುವಿಕೆಯನ್ನು ಮಾಡಿ, ಪುನಃ ಹಿಂದೆ ಕಳುಹಿಸುವ ತನಕ ಕಾಯುವುದು ಪ್ಲಾಂಟ್ಯಾನ್‌ಗೆ ಇಷ್ಟವಿರಲಿಲ್ಲ. ಹಾಗಾಗಿ, ಕೇವಲ ಮುದ್ರಣವಾದ ಮೊದಲ ಹಾಳೆ ಅಥವಾ ಕೆಲವು ಆರಂಭದ ಪುಟಗಳನ್ನು ಮಾತ್ರ ಫಿಲಿಪನಿಗೆ ಕಳುಹಿಸಲಾಯಿತು. ಈ ಮಧ್ಯೆ, ನಿಜವಾದ ಕರಡಚ್ಚು ತಿದ್ದುವಿಕೆಯನ್ನು, ಲೂವ್ಯಾನ್‌ನ ಮೂವರು ಪ್ರೊಫೆಸರರು ಮತ್ತು ಪ್ಲಾಂಟ್ಯಾನ್‌ನ ಹದಿವಯಸ್ಸಿನ ಮಗಳ ಅತ್ಯಮೂಲ್ಯ ಸಹಾಯದಿಂದ ಮೋನ್ಟಾನೋ ಮುಂದುವರಿಸಿದನು.

ದೇವರ ವಾಕ್ಯಪ್ರಿಯನು

ಆರ್ಯಾಸ್‌ ಮೋನ್ಟಾನೋ ಸ್ಪೆಯಿನ್‌ನ ವಿದ್ವಾಂಸನಾಗಿದ್ದರೂ ಅವನ ವಿಶಾಲ ಮನಸ್ಸಿನ ಕಾರಣ ಆ್ಯಂಟ್ವರ್ಪ್‌ನ ವಿದ್ವಾಂಸರೊಂದಿಗೆ ನಿರಾತಂಕವಾಗಿದ್ದನು. ಈ ಗುಣವು ಅವನನ್ನು ಪ್ಲಾಂಟ್ಯಾನ್‌ನ ಸ್ನೇಹಿತನನ್ನಾಗಿ ಮಾಡಿತು ಮತ್ತು ಅವರ ಗೆಳೆತನ ಹಾಗೂ ಸಹಕಾರವು ಜೀವನಪರ್ಯಂತ ಉಳಿಯಿತು. ಮೋನ್ಟಾನೋ ಒಬ್ಬ ಪ್ರಖ್ಯಾತ ವಿದ್ವಾಂಸನು ಮಾತ್ರವಲ್ಲ, ದೇವರ ವಾಕ್ಯದ ಕಡೆಗೆ ಬಹಳ ಪ್ರೀತಿಯುಳ್ಳವನೂ ಆಗಿದ್ದನು. * ಯುವಕನಾಗಿದ್ದಾಗ ಅವನು, ತನ್ನ ವಿದ್ಯಾಭ್ಯಾಸವನ್ನು ಮುಗಿಸಿ, ಶಾಸ್ತ್ರವಚನಗಳ ಅಧ್ಯಯನಕ್ಕೆ ತನ್ನನ್ನು ಸಂಪೂರ್ಣವಾಗಿ ನೀಡಿಕೊಳ್ಳಲು ಕಟ್ಟಾಸೆಯಿಂದಿದ್ದನು.

ಸಾಧ್ಯವಾದಷ್ಟು ಮಟ್ಟಿಗೆ ಬೈಬಲಿನ ಭಾಷಾಂತರವು ಅಕ್ಷರಶಃವಾಗಿರಬೇಕು ಎಂದು ಆರ್ಯಾಸ್‌ ಮೋನ್ಟಾನೋ ನಂಬಿದನು. ಮೂಲಭಾಷೆಯಲ್ಲಿ ಹೇಗಿತ್ತೊ ಹಾಗೆಯೇ ಭಾಷಾಂತರಿಸಲು ಅವನು ತನ್ನಿಂದಾದ ಎಲ್ಲ ಪ್ರಯತ್ನವನ್ನು ಮಾಡಿದನು. ಈ ರೀತಿಯಲ್ಲಿ ಅವನು ದೇವರ ಸತ್ಯ ವಾಕ್ಯವು ಜನರಿಗೆ ದೊರಕುವಂತೆ ಮಾಡಿದನು. ಮೋನ್ಟಾನೋ, ಇರ್ಯಾಸ್‌ಮಸ್‌ನ ಧ್ಯೇಯ ಮಂತ್ರವನ್ನು ಅನುಕರಿಸಿದನು. “ಕ್ರಿಸ್ತನ ಕುರಿತು ಮೂಲಭಾಷೆಗಳು ಏನನ್ನುತ್ತವೊ ಅವನ್ನೇ ಸಾರಿರಿ” ಎಂದು ಇರ್ಯಾಸ್‌ಮಸ್‌ ವಿದ್ವಾಂಸರನ್ನು ಉತ್ತೇಜಿಸಿದ್ದನು. ಲ್ಯಾಟಿನ್‌ ಭಾಷಾಂತರವನ್ನು ಜನರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಿರದಿದ್ದ ಕಾರಣ ಶಾಸ್ತ್ರವಚನಗಳ ಮೂಲಭಾಷೆಗಳ ಅರ್ಥವು ಶತಮಾನಗಳಿಂದ ಗುಪ್ತವಾಗಿಯೇ ಉಳಿದಿತ್ತು.

ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ನ ಮುದ್ರಣಾಕ್ಷರ ಜೋಡಣೆ

ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲಾಟ್‌ನ ಮುದ್ರಣಕ್ಕಾಗಿ ಆಲ್‌ಫಾನ್ಸೋ ಡೆ ಸಾಮೋರಾನಿಂದ ತಯಾರಿಸಲ್ಪಟ್ಟು ಪರಿಷ್ಕರಿಸಲಾದ ಎಲ್ಲ ಹಸ್ತಪ್ರತಿಗಳನ್ನು ಆರ್ಯಾಸ್‌ ಮೋನ್ಟಾನೋ ಪಡೆದುಕೊಂಡನು. ರಾಯಲ್‌ ಬೈಬಲನ್ನು ತಯಾರಿಸಲು ಅವನು ಆ ಹಸ್ತಪ್ರತಿಗಳನ್ನು ಉಪಯೋಗಿಸಿದನು. *

ಆರಂಭದಲ್ಲಿ ರಾಯಲ್‌ ಬೈಬಲನ್ನು, ಕೋಂಪ್ಲೂಟೆನ್‌ಸೀಆನ್‌ ಬೈಬಲಿನ ಎರಡನೇ ಮುದ್ರಣವಾಗಿ ಯೋಜಿಸಲಾಗಿತ್ತು, ಆದರೆ ಇದು ತಯಾರಿಸಲ್ಪಟ್ಟಾಗ ಕೋಂಪ್ಲೂಟೆನ್‌ಸೀಆನ್‌ ಬೈಬಲಿನ ಒಂದು ಸರಳ ಪರಿಷ್ಕೃತ ಮುದ್ರಣಕ್ಕಿಂತ ಎಷ್ಟೊ ಹೆಚ್ಚಿನದ್ದಾಯಿತು. ಸೆಪ್ಟುಅಜಂಟ್‌ನ ಹೀಬ್ರು ಮತ್ತು ಗ್ರೀಕ್‌ ಮೂಲಪಾಠವನ್ನು ಕೋಂಪ್ಲೂಟೆನ್‌ಸೀಆನ್‌ ಬೈಬಲಿನಿಂದ ತೆಗೆಯಲಾಯಿತು; ಅನಂತರ ಹೊಸ ಗ್ರಂಥಪಾಠವನ್ನು ಸೇರಿಸಲಾಯಿತು ಮತ್ತು ಅದರೊಂದಿಗೆ ಒಂದು ವಿಸ್ತಾರವಾದ ಪರಿಶಿಷ್ಟವನ್ನೂ ಸೇರಿಸಲಾಯಿತು. ಹೊಸ ಪಾಲೀಗ್ಲಾಟ್‌ನಲ್ಲಿ ಎಂಟು ಸಂಪುಟಗಳಿದ್ದವು. ಇದರ ಮುದ್ರಣಕ್ಕೆ ಐದು ವರುಷಗಳು ತಗಲಿದವು, ಅಂದರೆ 1568ರಿಂದ 1572ರ ತನಕ. ಈ ಕೆಲಸದ ಜಟಿಲತೆಗೆ ಹೋಲಿಸುವಾಗ ಇದು ನಿಜವಾಗಿಯೂ ಕೊಂಚ ಸಮಯವೇ ಆಗಿತ್ತು. ಕೊನೆಗೆ, 1,213 ಪ್ರತಿಗಳನ್ನು ಮುದ್ರಿಸಲಾಯಿತು.

ಇಸವಿ 1517ರ ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲಾಟ್‌ ಬೈಬಲು “ಮುದ್ರಣಕಲೆಗೆ ಒಂದು ನಿದರ್ಶನ”ವಾಗಿ ಪರಿಣಮಿಸಿತಾದರೂ, ತಾಂತ್ರಿಕ ಮೌಲ್ಯ ಮತ್ತು ಅದರಲ್ಲಿ ಅಡಕವಾಗಿರುವ ವಿಷಯಗಳಿಗೆ ಹೋಲಿಸುವಾಗ ಹೊಸ ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಅದಕ್ಕಿಂತ ಮೇಲಾಗಿತ್ತು. ಮುದ್ರಣದ ಇತಿಹಾಸದಲ್ಲಿ ಮತ್ತು ಅತಿ ಪ್ರಾಮುಖ್ಯವಾಗಿ, ಬೈಬಲಿನ ಪರಿಷ್ಕೃತ ಮೂಲಪಾಠಗಳನ್ನು ತಯಾರಿಸುವುದರಲ್ಲಿ ಇದು ಇನ್ನೊಂದು ಮೈಲಿಗಲ್ಲಾಗಿತ್ತು.

ದೇವರ ವಾಕ್ಯದ ವೈರಿಗಳಿಂದ ಆಕ್ರಮಣ

ನಿಷ್ಕೃಷ್ಟ ಬೈಬಲ್‌ ಭಾಷಾಂತರವನ್ನು ತಯಾರಿಸುವ ಈ ಕೆಲಸಕ್ಕೆ ವಿರೋಧವನ್ನು ವ್ಯಕ್ತಪಡಿಸುವ ಜನರು ಬೇಗನೆ ತೋರಿಬಂದರು ಎಂಬುದು ಆಶ್ಚರ್ಯದ ಸಂಗತಿಯೇನಲ್ಲ. ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಬೈಬಲಿನ ತಯಾರಿಕೆಗೆ ಪೋಪ್‌ನಿಂದ ಅನುಮತಿಯು ದೊರೆತಿತ್ತಾದರೂ, ಮತ್ತು ಆರ್ಯಾಸ್‌ ಮೋನ್ಟಾನೋ ಒಬ್ಬ ಗಣ್ಯ ವಿದ್ವಾಂಸನಾಗಿದ್ದನಾದರೂ, ಅವನನ್ನು ವಿಚಾರಣೆಗೆ ಒಳಪಡಿಸಲಾಯಿತು. ಅನೇಕ ಶತಮಾನಗಳ ಹಿಂದೆ ಭಾಷಾಂತರಿಸಲ್ಪಟ್ಟ ವಲ್ಗೇಟ್‌ಗಿಂತ, ಸಾನ್ಟೇಸ್‌ ಪಾನ್ಯೀನೋವಿನ ಹೊಸ ಲ್ಯಾಟಿನ್‌ ಗ್ರಂಥಪಾಠವು ಮೂಲ ಹೀಬ್ರು ಮತ್ತು ಗ್ರೀಕ್‌ ಗ್ರಂಥಪಾಠಗಳ ನಿಷ್ಕೃಷ್ಟ ಭಾಷಾಂತರವಾಗಿದೆ ಎಂದು ಅವನ ಕೃತಿಯು ತಿಳಿಸುತ್ತದೆ ಎಂಬುದಾಗಿ ವೈರಿಗಳು ಆಪಾದಿಸಿದರು. ಬೈಬಲಿನ ನಿಷ್ಕೃಷ್ಟ ಭಾಷಾಂತರವನ್ನು ಒದಗಿಸುವ ತನ್ನ ಆಸೆಯಲ್ಲಿ ಮೋನ್ಟಾನೋ ಮೂಲ ಭಾಷೆಗಳ ಸಹಾಯವನ್ನು ಪಡೆದುಕೊಂಡನು ಎಂದೂ ಅವರು ಆಪಾದಿಸಿದರು​—⁠ಈ ವಿಧಾನವನ್ನು ಪಾಷಂಡ ಎಂದು ವೀಕ್ಷಿಸಲಾಗುತ್ತಿತ್ತು.

ಅಷ್ಟುಮಾತ್ರವಲ್ಲದೆ, “ಅರಸನ ಭವ್ಯ ಹೆಸರನ್ನು ಉಪಯೋಗಿಸಲಾಯಿತಾದರೂ, ಈ ಕೆಲಸದಿಂದ ಅರಸನಿಗೆ ಯಾವುದೇ ಹೆಚ್ಚಿನ ಗೌರವವು ದೊರಕಲಿಲ್ಲ” ಎಂಬುದಾಗಿಯೂ ವಿಚಾರಣೆಯ ಸಮಯದಲ್ಲಿ ತಿಳಿಸಲಾಯಿತು. ರಾಯಲ್‌ ಬೈಬಲಿನಲ್ಲಿ ವಲ್ಗೇಟ್‌ ಅನ್ನು ಪ್ರಕಟಿಸಲು ಮೋನ್ಟಾನೋಗೆ ಸಾಕಷ್ಟು ಅಧಿಕಾರವು ನೀಡಲ್ಪಡಲಿಲ್ಲ ಎಂಬುದಾಗಿಯೂ ಆಪಾದಿಸಿದರು. ಈ ಎಲ್ಲ ಆಪಾದನೆಯ ಮಧ್ಯದಲ್ಲಿಯೂ, ಮೋನ್ಟಾನೋವನ್ನು ಇಲ್ಲವೆ ಅವನ ಪಾಲೀಗ್ಲಾಟ್‌ ಬೈಬಲನ್ನು ಖಂಡಿಸಲು ಅವರಿಗೆ ಸಾಕಷ್ಟು ಪುರಾವೆಗಳು ದೊರಕಲಿಲ್ಲ. ಅಂತ್ಯದಲ್ಲಿ, ರಾಯಲ್‌ ಬೈಬಲ್‌ ಬಹಳ ಪ್ರಸಿದ್ಧವಾಯಿತು ಮತ್ತು ಅನೇಕ ವಿಶ್ವವಿದ್ಯಾನಿಲಯದಲ್ಲಿ ಅದು ಒಂದು ಉತ್ತಮ ದರ್ಜೆಯ ಕೃತಿಯಾಗಿ ಪರಿಗಣಿಸಲ್ಪಟ್ಟಿತು.

ಬೈಬಲ್‌ ಭಾಷಾಂತರಕ್ಕೆ ಒಂದು ಉಪಯುಕ್ತ ಸಾಧನ

ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಜನಸಾಮಾನ್ಯರಿಗಾಗಿ ತಯಾರಿಸಲ್ಪಟ್ಟ ಬೈಬಲಾಗಿರದಿದ್ದರೂ, ಬೇಗನೆ ಇತರ ಬೈಬಲ್‌ ಭಾಷಾಂತರಗಳಲ್ಲಿ ಅದನ್ನು ಉಪಯೋಗಿಸಲಾಯಿತು. ಅದರ ಮುಂಚೆ ಇದ್ದ ಕೋಂಪ್ಲೂಟೆನ್‌ಸೀಆನ್‌ ಬೈಬಲಿನಂತೆಯೇ ಇದು ಸಹ ಶಾಸ್ತ್ರವಚನಗಳ ಲಭ್ಯವಿದ್ದ ಗ್ರಂಥಪಾಠಗಳನ್ನು ಪರಿಷ್ಕರಿಸುವುದರಲ್ಲಿ ಸಹಾಯಮಾಡಿತು. ಮೂಲ ಭಾಷೆಗಳನ್ನು ಭಾಷಾಂತರಗಾರರು ಅರ್ಥಮಾಡಿಕೊಳ್ಳಲು ಸಹ ಇದು ಸಹಾಯಮಾಡಿತು. ಈ ಕೃತಿಯ ಸಹಾಯದಿಂದ ಅನೇಕ ಮುಖ್ಯ ಯೂರೋಪಿಯನ್‌ ಭಾಷೆಗಳಿಗೆ ಬೈಬಲನ್ನು ಭಾಷಾಂತರಿಸಲಾಯಿತು. ಉದಾಹರಣೆಗೆ, ದ ಕೇಂಬ್ರಿಡ್ಜ್‌ ಹಿಸ್ಟರಿ ಆಫ್‌ ದ ಬೈಬಲ್‌ ವರದಿಸುವುದು, ಕಿಂಗ್‌ ಜೇಮ್ಸ್‌ ವರ್ಷನ್‌ ಅಥವಾ 1611ರ ಅಥೊರೈಸ್ಡ್‌ ವರ್ಷನ್‌ನ ಭಾಷಾಂತರಕಾರರು, ಪುರಾತನ ಭಾಷೆಗಳನ್ನು ಭಾಷಾಂತರಿಸಲು ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಅನ್ನು ಒಂದು ಅತ್ಯಮೂಲ್ಯ ಸಹಾಯಕವಾಗಿ ಉಪಯೋಗಿಸಿದರು. 17ನೇ ಶತಮಾನದಲ್ಲಿ ಪ್ರಕಟಿಸಲಾದ ಎರಡು ಪ್ರಾಮುಖ್ಯ ಪಾಲೀಗ್ಲಾಟ್‌ ಬೈಬಲ್‌ಗಳ ಮೇಲೂ ರಾಯಲ್‌ ಬೈಬಲ್‌ ಬಹಳಷ್ಟು ಪ್ರಭಾವವನ್ನು ಬೀರಿದೆ.​—⁠“ಪಾಲೀಗ್ಲಾಟ್‌ ಬೈಬಲ್‌ಗಳು” ಎಂಬ ಚೌಕವನ್ನು ನೋಡಿ.

ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಬೈಬಲಿನ ಅನೇಕ ಪ್ರಯೋಜನಗಳಲ್ಲಿ ಒಂದು, ಅದು ಮೊದಲ ಬಾರಿಗೆ ಗ್ರೀಕ್‌ ಶಾಸ್ತ್ರವಚನಗಳ ಸಿರಿಯನ್‌ ವರ್ಶನ್‌ ಅನ್ನು ಯೂರೋಪಿಯನ್‌ ವಿದ್ವಾಂಸರಿಗೆ ಲಭ್ಯಗೊಳಿಸಿತು. ಲ್ಯಾಟಿನ್‌ ಅಕ್ಷರಾರ್ಥ ಭಾಷಾಂತರದ ಬದಿಯಲ್ಲಿ ಸಿರಿಯನ್‌ ಗ್ರಂಥಪಾಠವನ್ನು ನೀಡಲಾಯಿತು. ಇದು ಒಂದು ಅತಿ ಉಪಯುಕ್ತ ಮುದ್ರಣವಾಯಿತು, ಏಕೆಂದರೆ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಅತಿ ಹಳೆಯ ಭಾಷಾಂತರಗಳಲ್ಲಿ ಸಿರಿಯನ್‌ ಒಂದಾಗಿತ್ತು. ಸಾ.ಶ. ಐದನೇ ಶತಮಾನದಷ್ಟು ಹಳೆಯ ಸಿರಿಯನ್‌ ವರ್ಶನ್‌ ಸಾ.ಶ. ಎರಡನೇ ಶತಮಾನದ ಹಸ್ತಪ್ರತಿಗಳ ಮೇಲಾಧಾರಿತವಾಗಿದೆ. ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯಕ್ಕನುಸಾರ, “ಮೂಲಗ್ರಂಥಗಳ ವಿಮರ್ಶೆಗಾಗಿ [ಸಿರಿಯಕ್‌] ಪಶೀಟವು ಎಷ್ಟು ಅಮೂಲ್ಯವಾಗಿದೆ ಎಂಬುದು ಎಲ್ಲರೂ ಒಪ್ಪುವ ಸಂಗತಿಯಾಗಿದೆ. ಪುರಾತನ ಸಂಪ್ರದಾಯಗಳ ಕುರಿತಾದ ಅತಿ ಹಳೆಯ ಮತ್ತು ಅತಿ ಪ್ರಾಮುಖ್ಯ ಮಾಹಿತಿಯ ಮೂಲವು ಅದಾಗಿದೆ.”

ಒಂದು ವಿನಾಶಕಾರಿ ಚಂಡಮಾರುತವಾಗಲಿ ಸ್ಪೆಯಿನ್‌ನ ವಿಚಾರಣೆಯ ದಾಳಿಗಳಾಗಲಿ, 1572ರಲ್ಲಿ ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲಾಟ್‌ ಬೈಬಲಿನ ಉತ್ತಮ ಮತ್ತು ದೊಡ್ಡ ಗಾತ್ರದ ಮುದ್ರಣವಾದ ರಾಯಲ್‌ ಬೈಬಲಿನ ಬಿಡುಗಡೆಯನ್ನು ತಡೆಯಶಕ್ತವಾಗಲಿಲ್ಲ. ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಬೈಬಲಿನ ಇತಿಹಾಸವು, ದೇವರ ವಾಕ್ಯವನ್ನು ಸಮರ್ಥಿಸಲು ಪ್ರಾಮಾಣಿಕ ಜನರು ಮಾಡಿದ ಪ್ರಯತ್ನಗಳ ಇನ್ನೊಂದು ಉದಾಹರಣೆಯಾಗಿದೆ.

ಈ ಸಮರ್ಪಿತ ಪುರುಷರಿಗೆ ತಿಳಿದಿತ್ತೊ ಇಲ್ಲವೊ, ಅವರ ಸ್ವತ್ಯಾಗದ ಪರಿಶ್ರಮದಿಂದ ಅವರು ಯೆಶಾಯ ಪುಸ್ತಕದಲ್ಲಿನ ಪ್ರವಾದನಾತ್ಮಕ ಮಾತುಗಳ ಸತ್ಯತೆಯನ್ನು ಪ್ರತಿಬಿಂಬಿಸಿದರು. ಮೂರು ಸಾವಿರ ವರುಷಗಳ ಹಿಂದೆ ಅವನು ಬರೆದದ್ದು: “ಹುಲ್ಲು ಒಣಗಿಹೋಗುವದು, ಹೂವು ಬಾಡಿ ಹೋಗುವದು, ನಮ್ಮ ದೇವರ ಮಾತೋ ಸದಾಕಾಲವೂ ಇರುವದು.”​—⁠ಯೆಶಾಯ 40:⁠8.

[ಪಾದಟಿಪ್ಪಣಿಗಳು]

^ ಪ್ಯಾರ. 4 ಈ ಬೈಬಲನ್ನು ಮುದ್ರಿಸಲು ಅರಸ ಫಿಲಿಪನಿಂದ ಆರ್ಥಿಕ ಸಹಾಯವು ದೊರೆತ ಕಾರಣ ಇದಕ್ಕೆ ರಾಯಲ್‌ ಬೈಬಲ್‌ ಎಂಬ ಹೆಸರು ಬಂತು. ಮಾತ್ರವಲ್ಲದೆ, ಆ ಸಮಯದಲ್ಲಿ ಸ್ಪೆಯಿನ್‌ ಸಾಮ್ರಾಜ್ಯದ ಭಾಗವಾಗಿದ್ದ ಆ್ಯಂಟ್ವರ್ಪ್‌ ನಗರದಲ್ಲಿ ಈ ಬೈಬಲ್‌ ಮುದ್ರಣವಾದ ಕಾರಣ ಇದಕ್ಕೆ ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಎಂಬ ಹೆಸರೂ ಇದೆ.

^ ಪ್ಯಾರ. 7 ಅವನು ಪಾಲೀಗ್ಲಾಟ್‌ ಬೈಬಲಿನಲ್ಲಿ ಉಪಯೋಗಿಸಲಾದ ಐದು ಮುಖ್ಯ ಭಾಷೆಗಳಾದ ಆ್ಯರಾಬಿಕ್‌, ಗ್ರೀಕ್‌, ಹೀಬ್ರು, ಲ್ಯಾಟಿನ್‌ ಮತ್ತು ಸಿರಿಯನ್‌ ಭಾಷೆಯಲ್ಲಿ ಪ್ರವೀಣನಾಗಿದ್ದನು. ಪ್ರಾಕ್ತನಶಾಸ್ತ್ರ, ವೈದ್ಯಶಾಸ್ತ್ರ, ನೈಸರ್ಗಿಕ ವಿಜ್ಞಾನ ಮತ್ತು ದೇವತಾಶಾಸ್ತ್ರದಲ್ಲಿಯೂ ಅವನು ಜ್ಞಾನಿಯಾಗಿದ್ದನು. ಈ ಎಲ್ಲ ಜ್ಞಾನವನ್ನು ಅವನು ಪಾಲೀಗ್ಲಾಟ್‌ ಬೈಬಲಿನ ಪರಿಶಿಷ್ಟವನ್ನು (ಅಪೆಂಡಿಕ್ಸ್‌) ತಯಾರಿಸುವುದರಲ್ಲಿ ಉಪಯೋಗಿಸಿದನು.

^ ಪ್ಯಾರ. 10 ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲಾಟ್‌ ಬೈಬಲಿನ ಬಗ್ಗೆ ವಿವರಣೆಯನ್ನು ಪಡೆದುಕೊಳ್ಳಲು, 2004, ಏಪ್ರಿಲ್‌ 15ರ ಕಾವಲಿನಬುರುಜು ಪತ್ರಿಕೆಯನ್ನು ನೋಡಿ.

[ಪುಟ 13ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಮ್ಮ ದೇವರ ಮಾತೋ ಸದಾಕಾಲವೂ ಇರುವದು”

[ಪುಟ 12ರಲ್ಲಿರುವ ಚೌಕ/ಚಿತ್ರಗಳು]

ಪಾಲೀಗ್ಲಾಟ್‌ ಬೈಬಲ್‌ಗಳು

“ಗ್ರಂಥಪಾಠವನ್ನು ಅನೇಕ ಭಾಷೆಗಳಲ್ಲಿ ಹೊಂದಿರುವ ಬೈಬಲೇ ಪಾಲೀಗ್ಲಾಟ್‌ ಬೈಬಲಾಗಿದೆ. ಹಾಗಿದ್ದರೂ ಸಾಂಪ್ರದಾಯಿಕವಾಗಿ ಈ ಪದವು, ಶಾಸ್ತ್ರವಚನಗಳನ್ನು ಮೂಲ ಭಾಷೆಗಳಲ್ಲಿ ಹೊಂದಿರುವ ಬೈಬಲ್‌ಗಳಿಗೆ ಸೂಚಿಸುತ್ತದೆ. ಈ ಸಂಕುಚಿತ ಅರ್ಥದಲ್ಲಿ ನೋಡಿದರೆ, ಪಾಲೀಗ್ಲಾಟ್‌ ಬೈಬಲ್‌ಗಳು ಕೇವಲ ಕೊಂಚವೇ ಇವೆ” ಎಂದು ಒಬ್ಬ ಸ್ಪೆಯಿನ್‌ನ ವಿದ್ವಾಂಸರಾದ ಫೇಡೇರೀಕೋ ಪೇರೇತ್‌ ಕ್ಯಾಸ್ಟ್ರೋ ತಿಳಿಸುತ್ತಾರೆ.

1. ಕೋಂಪ್ಲೂಟೆನ್‌ಸೀಆನ್‌ ಪಾಲೀಗ್ಲಾಟ್‌ (1514-17), ಕಾರ್ಡಿನಲ್‌ ಥೀಸ್‌ನಾರೋಸ್‌ನ ಸಹಾಯದಿಂದ ಸ್ಪೆಯಿನ್‌ನ ಆಲ್‌ಕಾಲಾ ಥೇ ಏನಾರೇಸ್‌ನಲ್ಲಿ ಮುದ್ರಿಸಲ್ಪಟ್ಟಿತು. ಅದರ ಆರು ಸಂಪುಟದಲ್ಲಿ ಬೈಬಲ್‌ ಗ್ರಂಥಪಾಠದಲ್ಲಿನ ಹೀಬ್ರು, ಗ್ರೀಕ್‌, ಆರಮೇಯಿಕ್‌ ಮತ್ತು ಲ್ಯಾಟಿನ್‌ ಎಂಬ ನಾಲ್ಕು ಭಾಷೆಗಳಿದ್ದವು. ಹೀಬ್ರು-ಆರಮೇಯಿಕ್‌ ಶಾಸ್ತ್ರಗಳ ಶ್ರೇಷ್ಠ ಗ್ರಂಥಪಾಠವನ್ನು ಅದು 16ನೇ ಶತಮಾನದ ಭಾಷಾಂತರಗಾರರಿಗೆ ಒದಗಿಸಿತು.

2. ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ (1568-72), ಬೆನೀಟೋ ಆರ್ಯಾಸ್‌ ಮೋನ್ಟಾನೋನಿಂದ ಪರಿಷ್ಕರಿಸಿದ ಬೈಬಲ್‌. ಇದು, ಕೋಂಪ್ಲೂಟೆನ್‌ಸೀಆನ್‌ ಗ್ರಂಥಪಾಠಕ್ಕೆ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಸಿರಿಯಕ್‌ ಪಶೀಟ ವರ್ಶನ್‌ ಮತ್ತು ಯೋನತಾನ್‌ನ ಆರಮೇಯಿಕ್‌ ಟಾರ್ಗಮ್‌ನ ಕೂಡಿಕೆಯಾಗಿದೆ. ಸ್ವರಬಿಂದು ಮತ್ತು ಒತ್ತು ಚಿಹ್ನೆಗಳನ್ನು ಒಳಗೊಂಡ ಇದು, ಜೆಕಬ್‌ ಬೆನ್‌ ಹಾಯೀಮ್‌ನ ಹೀಬ್ರು ಗ್ರಂಥಪಾಠಕ್ಕನುಸಾರ ಪರಿಷ್ಕರಿಸಲ್ಪಟ್ಟಿತು. ಹೀಗೆ ಇದು, ಬೈಬಲ್‌ ಭಾಷಾಂತರಗಾರರಿಗೆ ಹೀಬ್ರು ಶಾಸ್ತ್ರಗಳ ಒಂದು ಆದರ್ಶ ಗ್ರಂಥಪಾಠವಾಯಿತು.

3. ಪ್ಯಾರಿಸ್‌ ಪಾಲೀಗ್ಲಾಟ್‌ (1629-45), ಫ್ರೆಂಚ್‌ ವಕೀಲರಾದ ಗೀ ಮೀಶೆಲ್‌ ಲಿಜಿಯ ಸಹಾಯದಿಂದ ಮುದ್ರಿಸಲ್ಪಟ್ಟಿತು. ಇದು, ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಬೈಬಲಿನಿಂದ ಪ್ರೇರೇಪಿಸಲ್ಪಟ್ಟಿತು. ಆದರೂ ಇದರಲ್ಲಿ, ಕೆಲವು ಸಮ್ಯಾರಿಟನ್‌ ಮತ್ತು ಕೆಲವು ಆ್ಯರಾಬಿಕ್‌ ಗ್ರಂಥಪಾಠಗಳು ಅಡಕವಾಗಿತ್ತು.

4. ಲಂಡನ್‌ ಪಾಲೀಗ್ಲಾಟ್‌ (1655-57), ಬ್ರೈಯನ್‌ ವಾಲ್ಟನ್‌ನಿಂದ ಪರಿಷ್ಕರಿಸಲ್ಪಟ್ಟದ್ದು. ಇದು ಸಹ ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ ಬೈಬಲಿನ ಮೇಲಾಧಾರಿಸಿದೆ. ಈ ಪಾಲೀಗ್ಲಾಟ್‌ನಲ್ಲಿ ಐಥಿಯೋಪ್ಯ ಮತ್ತು ಪಾರಸೀಯ ಭಾಷೆಯ ಬೈಬಲಿನ ಪುರಾತನ ಭಾಷಾಂತರವು ಒಳಗೊಂಡಿದೆ. ಆದರೆ ಈ ವರ್ಶನ್‌ ಬೈಬಲ್‌ ಗ್ರಂಥಪಾಠದ ಅರ್ಥಕ್ಕೆ ಸ್ಪಷ್ಟತೆಯನ್ನು ಕೂಡಿಸಲಿಲ್ಲ.

[ಕೃಪೆ]

ಬ್ಯಾನರ್‌ ಮತ್ತು ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ಗಳು (ಕೆಳಗಡೆ ಇರುವ ಎರಡು): Biblioteca Histórica. Universidad Complutense de Madrid; ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ (ಮೇಲೆ): By courtesy of Museum Plantin-Moretus/Stedelijk Prentenkabinet Antwerpen; ಲಂಡನ್‌ ಪಾಲೀಗ್ಲಾಟ್‌: From the book The Walton Polyglot Bible, Vol. III, 1655-​1657

[ಪುಟ 9ರಲ್ಲಿರುವ ಚಿತ್ರ]

ಸ್ಪೆಯಿನ್‌ನ ಅರಸನಾದ ಎರಡನೇ ಫಿಲಿಪ್‌

[ಕೃಪೆ]

ಎರಡನೇ ಫಿಲಿಪ್‌: Biblioteca Nacional, Madrid

[ಪುಟ 10ರಲ್ಲಿರುವ ಚಿತ್ರ]

ಆರ್ಯಾಸ್‌ ಮೋನ್ಟಾನೋ

[ಕೃಪೆ]

ಮೋನ್ಟಾನೋ: Biblioteca Histórica. Universidad Complutense de Madrid

[ಪುಟ 10ರಲ್ಲಿರುವ ಚಿತ್ರ]

ಬೆಲ್ಜಿಯಂ ಆ್ಯಂಟ್ವರ್ಪ್‌ನಲ್ಲಿನ ಆರಂಭದ ಮುದ್ರಣ ಯಂತ್ರಗಳು

[ಕೃಪೆ]

ಮುದ್ರಣ ಯಂತ್ರ: By courtesy of Museum Plantin-Moretus/Stedelijk Prentenkabinet Antwerpen

[ಪುಟ 11ರಲ್ಲಿರುವ ಚಿತ್ರಗಳು]

ಎಡಬದಿ: ಕ್ರೀಸ್‌ಟಾಫ್‌ ಪ್ಲಾಂಟ್ಯಾನ್‌ ಮತ್ತು ಆ್ಯಂಟ್ವರ್ಪ್‌ ಪಾಲೀಗ್ಲಾಟ್‌ನ ಮುಖಪುಟ

[ಕೃಪೆ]

ಮುಖಪುಟ ಮತ್ತು ಪ್ಲಾಂಟ್ಯಾನ್‌: By courtesy of Museum Plantin-Moretus/Stedelijk Prentenkabinet Antwerpen

[ಪುಟ 11ರಲ್ಲಿರುವ ಚಿತ್ರ]

ಮೇಲೆ: ಗ್ರಂಥಪಾಠದ ನಾಲ್ಕು ಅಂಕಣಗಳಲ್ಲಿ ವಿಮೋಚನಕಾಂಡ 15ನೇ ಅಧ್ಯಾಯ

[ಪುಟ 9ರಲ್ಲಿರುವ ಚಿತ್ರ ಕೃಪೆ]

ಮುಖಪುಟ ಮತ್ತು ಪ್ಲಾಂಟ್ಯಾನ್‌: By courtesy of Museum Plantin-Moretus/Stedelijk Prentenkabinet Antwerpen

[ಪುಟ 13ರಲ್ಲಿರುವ ಚಿತ್ರ ಕೃಪೆ]

Biblioteca Histórica. Universidad Complutense de Madrid