ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪ್ರಾಚೀನ ಇಸ್ರಾಯೇಲಿನಲ್ಲಿ, ದೇವದರ್ಶನದ ಗುಡಾರದ ಮತ್ತು ದೇವಾಲಯದ ಅತಿ ಪರಿಶುದ್ಧ ಸ್ಥಳದಲ್ಲಿ ಕಾಣಿಸುತ್ತಿದ್ದ, ಕೆಲವೊಮ್ಮೆ ಶೆಕಿನಾ ಎಂದು ಕರೆಯಲಾಗುತ್ತಿದ್ದ, ಅದ್ಭುತಕರ ಬೆಳಕು ಏನನ್ನು ಸೂಚಿಸುತ್ತಿತ್ತು?

ಪ್ರೀತಿಯ ತಂದೆಯೂ ತನ್ನ ಜನರ ರಕ್ಷಕನೂ ಆದ ಯೆಹೋವನು ತನ್ನ ಸಾನ್ನಿಧ್ಯವನ್ನು ಇಸ್ರಾಯೇಲಿನಲ್ಲಿ ಸ್ಪಷ್ಟವಾಗಿ ತೋರ್ಪಡಿಸಿದನು. ಇದನ್ನು ಆತನು ಪೂರೈಸಿದ ಒಂದು ವಿಧಾನವು, ಆತನ ಆರಾಧನಾ ಸ್ಥಳದೊಂದಿಗೆ ನಿಕಟ ಸಂಬಂಧದಲ್ಲಿದ್ದ ಪ್ರಕಾಶಮಾನವಾದ ಮೋಡದ ಮೂಲಕವೇ ಆಗಿತ್ತು.

ಆ ಎದ್ದುಕಾಣುವ ಬೆಳಕು ಯೆಹೋವನ ಅದ್ಯಶ್ಯ ಸಾನ್ನಿಧ್ಯವನ್ನು ಸಂಕೇತಿಸುತ್ತಿತ್ತು. ಇದು, ದೇವದರ್ಶನದ ಗುಡಾರದಲ್ಲೂ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲೂ ಕಾಣಿಸುತ್ತಿತ್ತು. ಆ ಅದ್ಭುತಕರ ಬೆಳಕು, ಯೆಹೋವನು ಶಾರೀರಿಕವಾಗಿ ಅಲ್ಲಿ ಉಪಸ್ಥಿತನಿದ್ದಾನೆ ಎಂಬುದನ್ನು ಸೂಚಿಸುತ್ತಿರಲಿಲ್ಲ. ಮಾನವನಿಂದ ಕಟ್ಟಲ್ಪಟ್ಟ ಯಾವುದೇ ಕಟ್ಟಡದಲ್ಲಿ ಯೆಹೋವನು ವಾಸಿಸಲು ಸಾಧ್ಯವಿಲ್ಲ. (2 ಪೂರ್ವಕಾಲವೃತ್ತಾಂತ 6:18; ಅ. ಕೃತ್ಯಗಳು 17:24) ದೇವರ ಆಲಯದಲ್ಲಿ ಕಂಡುಬರುತ್ತಿದ್ದ ಅತಿಮಾನುಷ ಮೂಲದ ಆ ಬೆಳಕು, ಮಹಾ ಯಾಜಕನಿಗೆ ಮತ್ತು ಅವನ ಮೂಲಕ ಎಲ್ಲ ಇಸ್ರಾಯೇಲ್ಯರಿಗೆ ಯೆಹೋವನ ಸಂರಕ್ಷಣಾ ಸಾನ್ನಿಧ್ಯವು ತಮ್ಮನ್ನು ನೋಡಿಕೊಳ್ಳುತ್ತಿದೆ ಹಾಗೂ ತಮ್ಮ ಅಗತ್ಯಗಳನ್ನು ಪೂರೈಸುತ್ತಿದೆ ಎಂಬ ಭರವಸೆಯನ್ನು ನೀಡುತ್ತಿತ್ತು.

ಬೈಬಲನ್ನು ಬರೆದ ಅನಂತರದ ಸಮಯದಲ್ಲಿನ ಆರಮೇಯಿಕ್‌ ಭಾಷೆಯಲ್ಲಿ, ಆ ಬೆಳಕನ್ನು ಶೆಕಿನಾ (shekhi·nahʹ) ಎಂದು ಕರೆಯಲಾಗುತ್ತಿತ್ತು. ಅದರ ಅರ್ಥ, “ವಾಸಿಸುವಂಥದ್ದು” ಅಥವಾ “ವಾಸಸ್ಥಾನ” ಎಂದಾಗಿದೆ. ಈ ಪದವು ಬೈಬಲಿನಲ್ಲಿ ಕಂಡುಬರುವುದಿಲ್ಲ, ಬದಲಾಗಿ ಟಾರ್ಗಮ್‌ಗಳು ಎಂಬುದಾಗಿ ಕರೆಯಲ್ಪಡುವ ಹೀಬ್ರು ಶಾಸ್ತ್ರವಚನಗಳ ಆರಮೇಯಿಕ್‌ ಭಾಷಾಂತರದಲ್ಲಿ ಕಂಡುಬರುತ್ತದೆ.

ದೇವದರ್ಶನದ ಗುಡಾರವನ್ನು ಕಟ್ಟಲು ಬೇಕಾದ ಸೂಚನೆಗಳನ್ನು ನೀಡುತ್ತಿದ್ದಾಗ ಯೆಹೋವನು ಮೋಶೆಗೆ ಹೇಳಿದ್ದು: ‘ಆ ಕೃಪಾಸನವನ್ನು ಮಂಜೂಷದ ಮೇಲಿಡಬೇಕು. ನಾನು ನಿನಗೆ ಕೊಡುವ ಆಜ್ಞಾಶಾಸನಗಳನ್ನು ಆ ಮಂಜೂಷದೊಳಗೆ ಇಡಬೇಕು. ಅಲ್ಲಿಯೇ ನಾನು ನಿನಗೆ ದರ್ಶನವನ್ನು ಕೊಡುವೆನು; ಕೃಪಾಸನದ ಮೇಲೆ ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷದ ಮೇಲಣ ಎರಡು ಕೆರೂಬಿಗಳ ನಡುವೆಯೇ ನಾನು ಇದ್ದು ನಿನ್ನ ಸಂಗಡ ಮಾತಾಡುವೆನು.’ (ವಿಮೋಚನಕಾಂಡ 25:21, 22) ಇಲ್ಲಿ ತಿಳಿಸಲ್ಪಟ್ಟಿರುವ ಮಂಜೂಷವು, ಅತಿ ಪರಿಶುದ್ಧ ಸ್ಥಳದಲ್ಲಿದ್ದ ಚಿನ್ನದಿಂದ ಹೊದಿಸಲ್ಪಟ್ಟಿದ್ದ ಪೆಟ್ಟಿಗೆಯಾಗಿತ್ತು. ಮಂಜೂಷದ ಮೇಲಣ ಮುಚ್ಚಳದಲ್ಲಿ ಚಿನ್ನದ ಎರಡು ಕೆರೂಬಿಗಳು ಇದ್ದವು.

ಯೆಹೋವನು ಎಲ್ಲಿಂದ ಮಾತಾಡುತ್ತಿದ್ದನು? ಮೋಶೆಗೆ ಹೀಗೆ ಹೇಳಿದಾಗ ಆತನೇ ಇದಕ್ಕೆ ಉತ್ತರವನ್ನು ನೀಡಿದನು: ‘ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವೆನು.’ (ಯಾಜಕಕಾಂಡ 16:⁠2) ಆ ಮೇಘವು, ಪವಿತ್ರ ಮಂಜೂಷದ ಮೇಲೆ ಇದ್ದ ಚಿನ್ನದ ಎರಡು ಕೆರೂಬಿಗಳ ಮಧ್ಯೆ ತೇಲಾಡುತ್ತಿತ್ತು. ಆ ಮೇಘವು ಎಷ್ಟು ಎತ್ತರದ ವರೆಗೆ ಇತ್ತು ಅಥವಾ ಕೆರೂಬಿಗಳಿಗಿಂತ ಎಷ್ಟು ಎತ್ತರದಲ್ಲಿತ್ತು ಎಂಬ ವಿವರವನ್ನು ಬೈಬಲ್‌ ನೀಡುವುದಿಲ್ಲ.

ಈ ಪ್ರಕಾಶಮಾನವಾದ ಮೇಘವು ಅತಿ ಪರಿಶುದ್ಧ ಸ್ಥಳವನ್ನು ಬೆಳಗಿಸಿತು. ವಾಸ್ತವದಲ್ಲಿ, ಆ ಕೋಣೆಗೆ ಅದೇ ಬೆಳಕಿನ ಏಕೈಕ ಮೂಲವಾಗಿತ್ತು. ದೋಷಪರಿಹಾರಕ ದಿನದಂದು ಮಹಾ ಯಾಜಕನು ಅತಿ ಒಳಗಿನ ಅರೆಯನ್ನು ಪ್ರವೇಶಿಸಿದಾಗ ಆ ಬೆಳಕಿನಿಂದ ಪ್ರಯೋಜನವನ್ನು ಪಡೆಯುತ್ತಿದ್ದನು. ಅವನು ಯೆಹೋವನ ಸಾನ್ನಿಧ್ಯದಲ್ಲಿ ನಿಂತಿರುತ್ತಿದ್ದನು.

ಆ ಅದ್ಭುತಕರ ಬೆಳಕು ಕ್ರೈಸ್ತರಿಗೆ ಯಾವುದಾದರು ಪ್ರಮುಖತೆಯನ್ನು ಹೊಂದಿದೆಯೊ? ಅಪೊಸ್ತಲ ಯೋಹಾನನು, ‘ರಾತ್ರಿಯೇ ಅಲ್ಲಿಲ್ಲದ’ ಒಂದು ಪಟ್ಟಣದ ದರ್ಶನವನ್ನು ಕಂಡನು. ಆ ಪಟ್ಟಣವು, ಯೇಸುವಿನೊಂದಿಗೆ ಜೊತೆ ರಾಜರಾಗಿ ಆಳಲು ಪುನರುತ್ಥಾನಗೊಳಿಸಲ್ಪಟ್ಟ ಅಭಿಷಿಕ್ತ ಕ್ರೈಸ್ತರಿಂದ ಮಾಡಲ್ಪಟ್ಟಿರುವ ಹೊಸ ಯೆರೂಸಲೇಮ್‌ ಆಗಿದೆ. ಈ ಸಾಂಕೇತಿಕ ಪಟ್ಟಣಕ್ಕೆ ಬೆಳಕು ಸೂರ್ಯನಿಂದಾಗಲಿ ಚಂದ್ರನಿಂದಾಗಲಿ ದೊರಕುವುದಿಲ್ಲ. ಹೇಗೆ ಶೆಕಿನಾ ಮೇಘವು ಅತಿ ಪರಿಶುದ್ಧ ಸ್ಥಳವನ್ನು ಪ್ರಕಾಶಿಸುತ್ತಿತ್ತೊ ಹಾಗೆಯೇ ಯೆಹೋವ ದೇವರ ಮಹಿಮೆಯು ನೇರವಾಗಿ ಈ ಸಂಘಟನೆಯನ್ನು ಬೆಳಗಿಸುತ್ತದೆ. ಮಾತ್ರವಲ್ಲದೆ, ಕುರಿಯಾದಾತನಾದ ಯೇಸು ಕ್ರಿಸ್ತನು ಈ ಪಟ್ಟಣದ “ದೀಪ”ವಾಗಿದ್ದಾನೆ. ಈ ‘ಪಟ್ಟಣವು’ ತನ್ನ ಆಧ್ಯಾತ್ಮಿಕ ಬೆಳಕನ್ನು ಮತ್ತು ಕೃಪೆಯನ್ನು ಸರ್ವ ಜನಾಂಗಗಳ ಬಿಡುಗಡೆಹೊಂದಿದ ಜನರಿಗೆ ಮಾರ್ಗದರ್ಶನಕ್ಕಾಗಿ ನೀಡುತ್ತದೆ.​—⁠ಪ್ರಕಟನೆ 21:​22-25.

ಯೆಹೋವನ ಆರಾಧಕರಿಗೆ ಮೇಲಣಿಂದ ಹೇರಳವಾದ ಆಶೀರ್ವಾದಗಳು ಸುರಿಸಲ್ಪಡುವ ಕಾರಣ, ಆತನು ಅವರಿಗೆ ಸಂರಕ್ಷಕ ಕುರುಬನೂ ಕೋಮಲ ಮಮತೆಯುಳ್ಳ ತಂದೆಯೂ ಆಗಿದ್ದಾನೆ ಎಂಬುದರಲ್ಲಿ ಅವರು ದೃಢನಿಶ್ಚಯದಿಂದಿರಬಲ್ಲರು.